ಲಯಾಧಿಕಾರಿ ಜಗದ್ರಕ್ಷಕ ಪರಶಿವನಿಗೆ ನಮೋ ನಮಃ

ಲಯಾಧಿಕಾರಿ ಜಗದ್ರಕ್ಷಕ ಪರಶಿವನಿಗೆ ನಮೋ ನಮಃ

‘ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ’ . ಶಿವನಾಮ ಅಷ್ಟೂ ಮಹತ್ವವಾದದ್ದು. ಮನಸ್ಸಿಗೇನೋ ನೆಮ್ಮದಿ. ಸ್ಮಶಾನವಾಸಿ, ಭಸ್ಮ ಲೇಪಿತ, ಗಜಚರ್ಮಾಂಬರ, ಜಟಾಧರ, ಸರ್ಪವಿಭೂಷಣ, ಪಾರ್ವತಿರಮಣ, ನೀಲಕಂಠ, ಪರಮಶಿವ, ಕಾಲಭೈರವ, ಮಹಾಶಿವ, ಗೌರೀವಲ್ಲಭ, ಶಂಭೋಶಂಕರ, ಕೈಲಾಸದೊಡೆಯನ ಬಗ್ಗೆ ಹೇಳಲು ಇರುವ ನಾಲಿಗೆಯೊಂದೇ ಸಾಲದು. ಶಿವ ಎಂದರೆ ಮಂಗಳಮಯ ಮತ್ತು ಮಂಗಳಕರ. ಸನ್ಮಂಗಲವುಂಟು ಮಾಡುವವ. ಆತ ಕಲ್ಪತರು. ಮಹಿಮಾತೀತ, ತ್ರಿಗುಣಾತೀತ, ಪರಮಾನಂದ ಪಾವನಕರ ದೇವ.

*ಬಹುಲ ರಜಸೇ ವಿಶ್ವೋತ್ಪತ್ತೈ ಭವಾಯ ನಮ:*

*ಪ್ರಬಲ ತಮಸೇ ತತ್ ಸಂಹಾರೆ ಹರಾಯ ನಮೋ ನಮ:*

*ಜನ ಸುಖ ಕೃತೇ ಸತ್ರ್ಪೋದಿಕ್ತೌ ಮೃಢಾಯ ನಮೋ ನಮ:*

*ಪ್ರಮಹಸಿ ಪಡೆ ನಿಸ್ತ್ರೈಗುಣೈ ಶಿವಾಯ ನಮೋ ನಮ:*

ತನ್ನ ರಜೋಗುಣದಿಂದ ಪೂರ್ಣ ಪ್ರಪಂಚವನ್ನು ಸೃಷ್ಟಿಸಿದ ಮಹಾಮಹಿಮನೀತ. ತಮವೆಂಬ ತನ್ನ ಗುಣಸ್ವಭಾವದಿಂದ ಪ್ರಳಯವನ್ನೇ ಮಾಡಿಯಾನು. ವಿಶ್ವವನ್ನು ರಕ್ಷಿಸಬಲ್ಲ ಸಾಮರ್ಥ್ಯವುಳ್ಳವನೂ ಹೌದು. ಈ ರೀತಿ ತ್ರಿಗುಣ ಸಂಪನ್ನನಾದ ಪರಶಿವನಿಗೆ ನಮಸ್ಕಾರಗಳು.

‘ಶಿ’ ಎಂದರೆ ಸರ್ವಕಡೆಯೂ ವ್ಯಾಪಿಸಿದವ,ಎಲ್ಲವನ್ನೂ ಅರಿತು ಒಳಗೊಂಡವ. ‘ವ’ ಎಂದರೆ ಕೃಪೆಯ ಮೂರುತಿ, ಮೂರ್ತಸ್ವರೂಪಿ, ಮೂರ್ತರೂಪ ಎಂದರ್ಥ. ಮಾಘ ಮಾಸ ಬಹುಳ ಕೃಷ್ಣಪಕ್ಷ ಚತುರ್ದಶಿ ದಿನ ಬರುವ ‘ಶಿವರಾತ್ರಿ’ ಹಬ್ಬ ಬಹಳ ಪವಿತ್ರವಾದ್ದು. ಮನಸ್ಸು ಮಾಡಿದರೆ ಪ್ರಳಯಾಂತಕನೂ ಹೌದು, ಲಯಾಧಿಕಾರಿಯೂ ಹೌದು. ಬದುಕನ್ನು ಸರಿದೂಗಿಸುವವನೂ ಹೌದು.

ಶಿವದೇವರಿಗೆ ಅತ್ಯಂತ ಪ್ರಿಯ ‘ಬಿಲ್ವಪತ್ರೆ’ ಮತ್ತು ತುಳಸಿ. ಏನೂ ಇಲ್ಲದ ಬಡವ, ಎಲ್ಲಾ ಇರುವ ಶ್ರೀಮಂತ ಶಿವನಾಮ ಸ್ಮರಣೆಯೊಂದಿಗೆ ಶ್ರದ್ಧಾಭಕ್ತಿಯಿಂದ ‘ಒಂದೇ ಒಂದು ಬಿಲ್ವಪತ್ರ’ ಅರ್ಪಿಸಿದರೆ ಸಾಕಂತೆ.

ಗರುಡಪುರಾಣ, ಅಗ್ನಿಪುರಾಣಗಳಲ್ಲಿ ಬರುವ ಬೇಡ ಸುಂದಸೇನ ಎಂಬುವನೋರ್ವ ಬೇಟೆಯಾಡಲು ಹೋಗಿ ಏನೂ ಸಿಕ್ಕದೆ ಬಳಲಿ ಬೆಂಡಾದನಂತೆ. ಅಷ್ಟರಲ್ಲಿ ಕ್ರೂರ ಮೃಗಗಳು ಅವನನ್ನು ಮುತ್ತಿದ ಕಾರಣ ಹತ್ತಿರವೇ ಇದ್ದ ಮರಕ್ಕೆ ಹತ್ತಿದನಂತೆ. ಅದರಲ್ಲಿದ್ದ ಒಂದೊಂದೇ ಎಲೆಗಳನ್ನು ಕಿತ್ತು ಕೆಳಗೆ ಎಸೆದನಂತೆ. ಮರದಡಿಯಲ್ಲಿದ್ದ ಶಿವಲಿಂಗಕ್ಕೆ ಆ ಎಲೆಗಳೆಲ್ಲ ಬಿದ್ದುವಂತೆ. ಅವ ಏರಿದ ಮರ ಮುಳ್ಳುಗಳಿಂದ ಕೂಡಿದ ಬಿಲ್ವವೃಕ್ಷವಾಗಿತ್ತು. ಹೆದರಿಕೆಯಲ್ಲಿ ಮುಳ್ಳಿನ ಭಯವೇ ಇರಲಿಲ್ಲ. ಅದು ಶಿವರಾತ್ರಿಯ ದಿನ. ಶಿವನು ಮೆಚ್ಚಿ ಒಲಿದು ಹರಸಿದನಂತೆ. ಮುಂದೆ ಅದೇ ಬೇಡನು ಶಿವಕೃಪೆಯಿಂದ  ಚಿತ್ರಬಾನು ಎಂಬ ಹೆಸರಿನಿಂದ ಮಹಾರಾಜನಾಗಿ ಮೆರೆದನಂತೆ.

ಶಿವನೆಂದರೆ ‘ಪಾಪಗಳನ್ನು ಕಳೆಯುವವ, ಲಯಾಧಿಕಾರಿ’ .’ತ್ರಿದಳಂ ತ್ರಿಗುಣಾಕಾರಂ’ ‘ತ್ರಿನೇಂತ್ರಚ್ಚ ತ್ರಿಯಾಯುಧಂ’ ‘ತ್ರಿಜನ್ಮ ಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ’ ನಿರಾಕಾರ, ನಿರ್ಗುಣ, ಅಹಮಿಕೆಯಿಲ್ಲದ ಭಗವಂತನನ್ನು ಭಕ್ತಿಯಿಂದ ನೆನೆದು ಒಂದು ಬಿಲ್ವಪತ್ರ ದಳವನ್ನು ನೀಡಿ ಪೂಜಿಸಿ ಕೈಮುಗಿದರೂ ಜನ್ಮಾಂತರದ ಸಕಲ ಪಾಪಗಳೂ ಪರಿಹಾರವಾಗುತ್ತದೆ ಎಂಬ ನಂಬಿಕೆ.ಓಂ ನಮ:ಶಿವಾಯ ಶಿವ ಮಂತ್ರ ಸದಾ ಜಪಿಸಿದರೆ ಆರೋಗ್ಯ,ಆಯುಷ್ಯ ವೃದ್ಧಿ.

*ಪಂಚಾಕ್ಷರಮಿದಂ ಯ: ಪಠೇತ್ ಶಿವಸನ್ನಿಧೌ/*

*ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ//*

ಮೋಕ್ಷಕ್ಕೆ ದಾರಿಯಾದ ಶಿವನನ್ನು ಭಜಿಸಿ,ಸ್ಮರಿಸಿ ಕೃತಾರ್ಥರಾಗಬೇಕು.

*ಕ್ಲೇಶಕರ್ಮವಿಪಾಕೈ ರಪಾರಮೃಷ್ಟ: ಪುರುಷ ವಿಶೇಷ: ಈಶ್ವರ://*

ಕ್ಲೇಶ,ಕರ್ಮ,ಅವುಗಳ ಫಲ ಮತ್ತು ಸಂಸ್ಕಾರ ಇವುಗಳ ಸಂಪರ್ಕವಿಲ್ಲದ ವಿಶಷ್ಟ ಪುರುಷ,ಮಹಾ ಮಹಿಮ ಲಿಂಗ ಸ್ವರೂಪಿ ಈಶ್ವರ.

ವಿಶ್ವವನ್ನು ನಿಯಂತ್ರಿಸುವ ನಿಯಂತ್ರಕ ಸ್ವಾಮಿಯೇ ಪರಮೇಶ. ಮಾಯೆಯೇ ತನ್ನ ಶಕ್ತಿಯಾಗಿರುವವನೇ ಶಿವನು.

ಶಿವನಿಗೆ ಆಭರಣ, ಅಲಂಕಾರ, ಐಷಾರಾಮಿ ವ್ಯವಸ್ಥೆ ಶಿವದೇವರಿಗೆ ಬೇಡವಂತೆ. ಕೇವಲ ನಿಷ್ಕಲ್ಮಷ ಭಕ್ತಿ ಪ್ರೀತಿ, ಛಲ ಬಿಡದ ಸಾಧಕ ಸಾಧನೆಯ ಧ್ಯೋತಕನಾಗಿ ಒಂದೇ ಒಂದು ಬಿಲ್ವ ಪತ್ರೆಯನ್ನು ಅರ್ಪಿಸಿದರೆ ಸಾಕು. ಒಲಿದು ಹರಸುವನಂತೆ.

ಬಿಲ್ವಗಿಡಕ್ಕೆ ಪೌರಾಣಿಕ ಹಿನ್ನೆಲೆಯೊಂದಿದೆ. ದೇವ ದಾನವರ ಸಮುದ್ರಮಥನ ಕಾಲದಲ್ಲಿ ಮಹಾಲಕ್ಷ್ಮೀ ಮಾತೆ ಉದಿಸಿ ಬಂದಾಗ ಅವಳ ಸೌಂದರ್ಯಕ್ಕೆ ಮಾರುಹೋದ ಸುರಾಸುರರು ಅವಳಿಗಾಗಿ ಆಸೆ ಪಟ್ಟಾಗ, ಆ ಮಾತೆ ಬಿಲ್ವವೃಕ್ಷವಾಗಿ ತನ್ನ ಮಾನ ಕಾಪಾಡಿಕೊಂಡಳಂತೆ. ಅಂತಹ ಪರಮಪವಿತ್ರ ಬಿಲ್ವಪತ್ರೆ ಓಂಕಾರೇಶ್ವರನಾದ ಪರಶಿವನಿಗೆ ಅರ್ಪಿಸಿದಾಗ ಜನ್ಮಾಂತರದ ಸಕಲ ಪಾಪಗಳೂ ಪರಿಹಾರವಂತೆ. ಬಿಲ್ವ ಎಲೆಯಲ್ಲಿ ಮೂರು ದಳಗಳಿರಬೇಕು. ಒಂದು ದಳದಲ್ಲಿ ಪರಮಾತ್ಮನನ್ನು ಅರ್ಚಿಸಬಾರದಂತೆ. ಭಸ್ಮಾಲಂಕಾರ ಪ್ರಿಯ ಶಿವ. ಯಾರು ತ್ರಿಪುಂಡ್ರವನ್ನು ಧರಿಸಿ ಧ್ಯಾನಿಸುವರೋ ಅವರ ಸಕಲವನ್ನೂ ಭಗವಂತ ನೆರವೇರಿಸುತ್ತಾನೆಂಬ ನಂಬಿಕೆ.

‘ಕಾಯಕದಲ್ಲಿಯೇ ಕೈಲಾಸವನ್ನು ಕಾಣಿರಿ ಅಣ್ಣ ಬಸವಣ್ಣನವರ ನುಡಿ’. ನಾವು ಮಾಡುವ ಕೆಲಸವೇ ಕೈಲಾಸ. ‘ಶಿವ’ ಎನ್ನುವುದು ನಾಲ್ಕು ವೇದಗಳ ಸಾರ. ‘ಶ್+ಇ---ಶಿ,ವ್+ಅ--ವ’ ಇಲ್ಲಿ ಎರಡು ಸ್ವರ, ಎರಡು ವ್ಯಂಜನಗಳನ್ನು ಕಾಣಬಹುದು. ಈ ಶಿವ ಪದದಲ್ಲಿ ವೇದ-ವೇದಾಂಗಗಳೆಲ್ಲವೂ ಮಿಳಿತವಾಗಿದೆ. ಶಿವನನ್ನು ಅರ್ಥಮಾಡಿಕೊಂಡವರು ವೇದವನ್ನೇ ಅರಿತಂತೆ.

ಬಿಲ್ವಪತ್ರೆ ಅರ್ಪಿಸಿ ಮೂರು ಜನ್ಮಗಳ ಪಾಪವನ್ನು ಪರಿಹರಿಸಿಕೊಳ್ಳೋಣ. 

*ಬಿಲ್ವಪತ್ರ್ಯೆರಖಂಡೈಶ್ಚ ಯೋ ಲಿಂಗಂ ಪೂಜಯೇತ್ ಸಕೃತ್* 

*ಸರ್ವ ಪಾಪೈರ್ವಿನಿರ್ಮುಕ್ತ: ಶಿವಲೋಕಂ ಮಹೀಯತ*

ಅಖಂಡವಾದ ಬಿಲ್ವಪತ್ರೆಯಿಂದ ಲಿಂಗರೂಪಿ ಶಿವನನ್ನು ಭಜಿಸಿ ಪೂಜಿಸಿದರೆ ಮರುಜನ್ಮವಿಲ್ಲದ ಶಿವಸಾಯುಜ್ಯ ದೊರೆಯುವುದು. ನಿಷ್ಕಾಮ ಭಕ್ತಿ ಪ್ರಿಯ. ಸತ್ ಚಿಂತನೆಯ ಜಾಗರಣೆ, ಲೋಕಕ್ಕೇ ಒಳಿತಾಗಲಿ. ಭಗವಂತ ಸತ್ಯ, ಆದರೆ ಆತ ಅಗೋಚರ, ನಾವು ಒಪ್ಪಿಕೊಳ್ಳಬೇಕಾದ ಸತ್ಯ. ಉಪವಾಸ ವ್ರತ ಶಿವರಾತ್ರಿಯಲ್ಲಿ ಅತ್ಯಂತ ಶ್ರೇಷ್ಠ. ಉಪವಾಸದಿಂದ ಜೀರ್ಣ ಕ್ರಿಯೆಯ ಸಮತೋಲನವೂ ಆಗಬಹುದು. ರಾತ್ರಿ ಇಡೀ ಜಾಗರಣೆ ಮಾಡುವುದು ವಿಶೇಷ. ಅವಕಾಶವಿದ್ದವರು ಹತ್ತಿರದ ದೇವಾಲಯಗಳಿಗೆ ಭೇಟಿ ನೀಡಿ ಭಗವಂತನ ಸೇವೆ ಮಾಡುತ್ತಾರೆ. ಶಿವನಿಗೆ ಸಿಹಿಯಾಳ ಸೇವೆ ಪ್ರಿಯವಂತೆ. ಕೆಲವೆಡೆ ರುದ್ರಪಾರಾಯಣ ಸಹ ಮಾಡುತ್ತಾರೆ. ಈ ಮಹಾಶಿವರಾತ್ರಿ ದಿನದಂದು ಶಿವನಾಮ ಸ್ಮರಣೆ ಮಾಡುತ್ತಾ ಹುಟ್ಟು, ಸಾರ್ಥಕತೆ (ಬದುಕ) ಮೋಕ್ಷ ಮೂರರಲ್ಲೂ ನೆಮ್ಮದಿ ಸಿಗಲೆಂದು ಒಟ್ಟಾಗಿ ಸೇರಿ ಪ್ರಾರ್ಥಿಸೋಣ.

-ರತ್ನಾ ಕೆ.ಭಟ್,ತಲಂಜೇರಿ

(ಆಕರ: ಶಿವ ಪುರಾಣ)

ಚಿತ್ರ ಕೃಪೆ: ಇಂಟರ್ನೆಟ್ ತಾಣ