ಲಲಿತಾಂಬಿಕಾ ದೇವಸ್ಥಾನ

ತಮಿಳುನಾಡು ರಾಜ್ಯದ ತಿರುವನೂರು ಜಿಲ್ಲೆಯ ತಿರುಮೇಯಚೂರು ಎಂಬ ಊರಿನಲ್ಲಿರುವ ಈ ಲಲಿತಾಂಬಿಕಾ ದೇಗುಲವನ್ನು ಲಲಿತಾಂಬಿಗೈ ದೇವಸ್ಥಾನವೆಂದೂ ಕರೆಯುತ್ತಾರೆ. ಇದರ ವಿಶೇಷತೆಯೆಂದರೆ ಈ ಚಿತ್ರದಲ್ಲಿರುವ ಶಿಲ್ಪ. ಇದೊಂದು ಅಪರೂಪದ ಶಿಲ್ಪ ಕಲೆಗೆ ಸಾಕ್ಷಿ ಎನ್ನಬಹುದು.
ಸ್ವರ್ಗದಿಂದ ಗಂಗೆಯನ್ನು ಭೂಲೋಕಕ್ಕೆ ತರಲು ಭಗೀರಥನು ಮಾಡಿದ ಸಾಹಸ ಕಥೆಗಳನ್ನು ನೀವು ಈಗಾಗಲೇ ಓದಿರುತ್ತೀರಿ. ಸ್ವರ್ಗದಿಂದ ವೇಗವಾಗಿ ಭೂಮಿಗೆ ಗಂಗೆ ಬಂದರೆ ಅದರ ರಭಸವನ್ನು ಭೂಮಿಯು ತಾಳಲಾರದು. ಇಡೀ ಭೂಮಿ ಕೊಚ್ಚಿಕೊಂಡು ಹೋಗಬಹುದು ಎಂಬ ಭಯ ಭಗೀರಥನಿಗೆ ಕಾಡತೊಡಗಿತು. ಅದಕ್ಕಾಗಿ ಅವನು ಈಶ್ವರನನ್ನು ಒಲಿಸಿ, ಗಂಗೆ ಭೂಮಿಯತ್ತ ಬರುವಾಗ ಅವಳನ್ನು ತನ್ನ ಜಟೆಯಲ್ಲಿ ತಡೆದು ಭೂಮಿಗೆ ಬಿಡಲು ಮನವಿ ಮಾಡಿಕೊಂಡ. ಲೋಕ ಕಲ್ಯಾಣಕೋಸ್ಕರ ಭಗೀರಥನು ಈ ಕೆಲಸ ಮಾಡುವಾಗ ತಾನೂ ಸಹಕಾರ ನೀಡುವೆ ಎಂದು ಶಿವನು ಒಪ್ಪುತ್ತಾನೆ. ನಂತರ ಗಂಗೆಯು ಸ್ವರ್ಗದಿಂದ ವೇಗವಾಗಿ ಭೂಮಿಯತ್ತ ಬರುವಾಗ ಶಿವನು ಅವಳನ್ನು ತನ್ನ ನೀಳ ಕೇಶರಾಶಿಯಲ್ಲಿ ಧರಿಸುತ್ತಾನೆ. ಇದರಿಂದ ಭೂಮಿಗೆ ತೊಂದರೆಯಾಗುವುದಿಲ್ಲ. ನಂತರ ಶಿವನು ಗಂಗೆಗೆ ತನ್ನ ತಲೆಯ ಮೇಲೆ ಸ್ಥಾನ ನೀಡುತ್ತಾನೆ.
ಇದರಿಂದ ಶಿವ ಪತ್ನಿಯಾದ ಪಾರ್ವತಿಯು ಮುನಿಸಿಕೊಳ್ಳುತ್ತಾಳೆ. ಆ ಸಮಯದ ಪಾರ್ವತಿಯ ಮುನಿಸನ್ನು ಈ ಶಿಲ್ಪದಲ್ಲಿ ಕಲಾವಿದನು ಬಹಳ ಸೊಗಸಾಗಿ ಹಿಡಿದಿಟ್ಟಿರುವನು.
ಈಶ್ವರನು ಗಂಗೆಗೆ ತಲೆಯ ಮೇಲೆ ಸ್ಥಾನ ಕೊಟ್ಟಿದ್ದಕ್ಕೆ ಮುನಿಸಿಕೊಂಡಿರುವ ಪಾರ್ವತಿಯನ್ನು ರಮಿಸುತ್ತಿರುವ ಅದ್ಭುತವಾದ ಶಿಲ್ಪವಿದು. ಇದಕ್ಕಾಗಿ ಶಿಲ್ಪಿಯು ಆರಿಸಿಕೊಂಡ, ಕಂಬದ ಸಂದಿಯ ಏಕಾಂತ ಸ್ಥಳ, ಮುನಿಸಿನ ಭಾವವು ಪಾರ್ವತಿಯ ಮುಖದಲ್ಲಿ ಕಾಣುವಂತೆ ಮಾಡಿದ ಕೆತ್ತನೆಯು ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಅಜ್ಞಾತ ಶಿಲ್ಪಿಯ ಕಲೆಯ ಭಾವವನ್ನು ಮೆಚ್ಚಲೇ ಬೇಕು. ಪಾರ್ವತಿಯ ಮುಖದಲ್ಲಿ ಕಾಣುವ ಭಾವನೆಗಳು ಅತ್ಯಂತ ನೈಜವಾಗಿವೆ. ತುಸು ಮುನಿಸು, ತುಸು ಬೇಸರ, ತುಸು ಮತ್ಸರ ಎಲ್ಲವೂ ಈ ಭಾವದಲ್ಲಿ ಅಡಕವಾಗಿದೆ.
ನೀವು ಎಂದಾದರೂ ಈ ತಿರುಮೇಯಚೂರು ಇಲಂಕೋವಿಲ್ ಸಕಲಾಭುವನೇಶ್ವರ ದೇಗುಲಕ್ಕೆ ಭೇಟಿ ನೀಡಿದರೆ ಈ ಶಿಲ್ಪಕಲೆಯ ನೈಜ ಸೌಂದರ್ಯವನ್ನು ವೀಕ್ಷಿಸಲು ಮರೆಯದಿರಿ. ನಮ್ಮ ಕರ್ನಾಟಕ ರಾಜ್ಯವೂ ಅಪಾರವಾದ ಶಿಲ್ಪ ಕಲೆಯ ತವರೂರಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಶಿಲ್ಪಕಲೆಗಳ ವಿಶೇಷತೆಯ ಪರಿಚಯವನ್ನೂ ಮಾಡಿಕೊಳ್ಳುವ.