ಲಲಿತ ರಗಳೆ- ವೃದ್ಧೆಯ ಶೃಣಿ
ಶೃಣಿಯೂರಿ ವೃದ್ಧೆಯೂ ಹಾದಿಯಲಿ ಬರುತಿಹಳು
ಮಣಭಾರ ಕಾಷ್ಟವನು ಬೆನ್ನಲ್ಲೆ ಹೊತ್ತಿರಲು|
ಕಷ್ಟದಲಿ ನೊಂದಿಹಳು ನೋಡುವವರಿಲ್ಲದೆಯೆ
ನಷ್ಟದಲಿ ಜೀವನವು ತುಷ್ಠಿಗುಣವಿಲ್ಲದಯೆ||
ಬದುಕೊಂದು ಚದುರಂಗ ಕಷ್ಟಸುಖದಂಗಳವು
ಮುದುಕಿಯದು ಗೋಳಿನ ಕಥೆವ್ಯಥೆ ದಾರುಣವು|
ನೆರವಿಲ್ಲ ಸೂರಿಲ್ಲ ಸೊರಗುತಿಹ ಜೀವವಿದು
ಮರುಗುತಿದೆ ಕೂಳಿಲ್ಲ ನಿತ್ರಾಣ ಭಾವವಿದು||
ಉರಿಬಿಸಿಲ ಮಧ್ಯಾಹ್ನ ದಾಹದಲಿ ಕೊರುಗುತಿದೆ
ಸರಿದಾರಿ ಕಾಣದೆಯೆ ಕಂಗೆಟ್ಟು ನಲುಗುತಿದೆ|
ಹೆತ್ತುಹೊತ್ತು ಬೆಳೆಸಿದ ಮಕ್ಕಳೇ ಮರೆತಿರಲು
ಗೊತ್ತಿಲ್ಲದ ದಾರಿಯಲಿ ದಿಕ್ಕಿಲ್ಲದೆ ಹೊರಟಿರಲು||
ಮುಗ್ಧತೆಯ ರೂಪವದು ವಯಸಾದ ದೇಹದಲಿ
ದುಗ್ಧೆಯದು ಮನೆಮಾಡಿ ನೊಂದಿದೆ ಕಾಯದಲಿ|
ಹೊತ್ತೊತಿಗೆ ತುತ್ತಿಲ್ಲ ನೆಮ್ಮದಿಗೆ ಮನೆಯಿಲ್ಲ
ಬಿತ್ತಿರಲು ಕನಸುಗಳು ಛಲದಲ್ಲಿ ಸೋಲಿಲ್ಲ||
ಶೋಷಣೆ ಲೋಕದಲಿ ನಿತ್ಯವೂ ನಡೆಯುತಿದೆ
ಭಾಷಣದಿ ಮಂಡಿಸುತ ಧಾರ್ಷ್ಟ್ಯತೆಯು ಮೆರೆಯುತಿದೆ|
ಗೋಳಿನಲಿ ಬಾಳುತಿಹ ಮಂದಿಯನು ಗಮನಿಸದೆ
ಕೀಳಾಗಿ ನೋಡುತಿಹ ಜನಮನ ಸ್ಪಂದಿಸದೆ||
ದೈನ್ಯತೆಯ ಭಾವವಿದು ಕಿಂಕಿಲದಿ ಮರುಗಿಹುದು
ಮಾನ್ಯತೆಯು ಸಿಕ್ಕಿಲ್ಲ ಹಿರಿಜೀವ ಬತ್ತಿಹುದು|
ಕಾಯಕವೆ ಕೈಲಾಸ ದಣಿಯುತಲಿ ಬದುಕುತಿದೆ
ಬೇಯುತಿಹೆ ನೋವಲ್ಲು ತಥ್ಯದೊಳು ಸಾಗುತಿದೆ||
-ಅಭಿಜ್ಞಾ ಪಿ ಎಮ್ ಗೌಡ