ಲವಂಗದ ನೀರಿನ ಬಹು ಉಪಯೋಗಗಳು

ಕಳೆದ ವಾರ ನಾವು ದಾಲ್ಚಿನ್ನಿ ನೀರಿನ ಉಪಯೋಗದ ಬಗ್ಗೆ ಹಾಗೂ ಅದನ್ನು ತಯಾರಿಸುವ ವಿಧಾನವನ್ನು ಕಂಡುಕೊಂಡೆವು. ಈ ವಾರ ಮತ್ತೊಂದು ಬಹು ಉಪಕಾರಿ ಸಾಂಬಾರ ಪದಾರ್ಥವಾದ ಲವಂಗದ ನೀರು ತಯಾರಿಸುವ ಬಗ್ಗೆ ಹಾಗೂ ಅದರ ಬಹು ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ. ಮೊದಲಿಗೆ ಲವಂಗದ ನೀರನ್ನು ಹೇಗೆ ತಯಾರಿಸುವುದು ಎಂದು ನೋಡೋಣ.
ಸಾಮಾಗ್ರಿಗಳು : ಲವಂಗ ೧ ಚಮಚ, ನೀರು - ೧ ಲೋಟ, ನಿಂಬೆಕಾಯಿ ೧, ಜೇನುತುಪ್ಪ ೧ ಚಮಚ
ತಯಾರಿಕೆ: ಮೊದಲು ಒಂದು ಕಪ್ ನೀರನ್ನು ಕುದಿಸಬೇಕು. ನಂತರ ಅದಕ್ಕೆ ಲವಂಗವನ್ನು ಸೇರಿಸಿ ೧೦ ರಿಂದ ೧೫ ನಿಮಿಷ ನೆನೆಯಲು ಬಿಡಿ. ಬಳಿಕ ಲವಂಗದ ನೀರನ್ನು ಸೋಸಿಕೊಳ್ಳಿ. ನಂತರ ನೀರನ್ನು ಆರಲು ಬಿಡಿ. ಹೆಚ್ಚಿನ ರುಚಿಗಾಗಿ ಅದಕ್ಕೆ ಒಂದು ತುಂಡು ಲಿಂಬೆಯ ರಸ ಮತ್ತು ಒಂದು ಚಮಚ ಜೇನು ತುಪ್ಪ ಸೇರಿಸಿ. ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಲವಂಗದ ನೀರನ್ನು ಕುಡಿಯುವುದರಿಂದ ಬಹಳ ಪ್ರಯೋಜನವಿದೆ.
ಲವಂಗದ ನೀರು ಉತ್ಕರ್ಷಣ ನಿರೋಧಕಗಳು, ಉರಿಯೂತ ನಿವಾರಕ ಗುಣಗಳು ಹಾಗೂ ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದರಿಂದ ಇದನ್ನು ಬೆಳಿಗ್ಗೆ ಸಮಯದಲ್ಲಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಸಕ್ಕರೆಯ ಅಂಶ ನಿಯಂತ್ರಣದಲ್ಲಿರುತ್ತದೆ. ಇದರ ಜೊತೆಗೆ ಚರ್ಮ ಮತ್ತು ಕೂದಲಿನ ಬೆಳವಣಿಗೆಗೆ ಈ ಲವಂಗದ ನೀರು ಅತ್ಯಂತ ಪ್ರಯೋಜನಕಾರಿಯಾಗಿದೆ. ನೈಸರ್ಗಿಕವಾಗಿ ಲವಂಗವನ್ನು ಉತ್ಕರ್ಷಣ ನಿರೋಧಕ ಶಕ್ತಿಗಳ ಕೇಂದ್ರ ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಹಾಗೂ ತೂಕ ನಿರ್ವಹಣೆಗೆ ಬಹಳ ಸಹಾಯ ಮಾಡುತ್ತದೆ.
* ಲವಂಗದ ನೀರನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಹೊಟ್ಟೆ ಉಬ್ಬರ, ವಾಯು ಸಮಸ್ಯೆ ಹಾಗೂ ಅಜೀರ್ಣತೆ ನಿಯಂತ್ರಣಕ್ಕೆ ಬರುತ್ತದೆ. ಲವಂಗದ ನೀರು ಆಗಾಗ ಬರುವ ತೇಗು ಮತ್ತು ವಾಯು ಸಮಸ್ಯೆಗೆ ರಾಮಬಾಣ.
* ಲವಂಗದ ನೀರು ನಿಮ್ಮ ಜೀರ್ಣಕ್ರಿಯೆಯ ಸುಧಾರಣೆಗೆ ಅಗತ್ಯವಾದ ರಸಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ದೇಹದಲ್ಲಿ ಕೊಬ್ಬಿನ ಪ್ರಮಾಣ ಕಡಿಮೆಯಾಗಿ ತೂಕದ ಮಟ್ಟ ನಿಯಂತ್ರಣದಲ್ಲಿರುತ್ತದೆ.
* ನಿಮ್ಮ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನೈಸರ್ಗಿಕವಾಗಿ ಹತೋಟಿಯಲ್ಲಿಡಲು ಲವಂಗದ ನೀರು ಸಹಕರಿಸುತ್ತದೆ. ಲವಂಗದಲ್ಲಿರುವ ಯುಜೆನಾಲ್ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಿ ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ.
* ಲವಂಗ ಬ್ಯಾಕ್ಟೀರಿಯಾ ನಿಯಂತ್ರಕವಾಗಿರುವುದರಿಂದ ನಿಮ್ಮ ಹಲ್ಲುಗಳ ತೊಂದರೆಗಳ ನಿವಾರಣೆಗೆ ಉತ್ತಮ ಮದ್ದು. ಇದು ಬಾಯಿಯ ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಲ್ಲುಗಳ ಮತ್ತು ಒಸಡುಗಳ ಸಮಸ್ಯೆ ನಿವಾರಣೆಗೆ ಲವಂಗದ ನೀರಿನಿಂದ ಬಾಯಿಯನ್ನು ಮುಕ್ಕಳಿಸಬಹುದು. ಇದರಿಂದ ಹಲ್ಲುಗಳು ಶುದ್ಧವಾಗಿ ಬಾಯಿಯೂ ದುರ್ವಾಸನೆಯಿಂದ ಮುಕ್ತವಾಗಿರುತ್ತದೆ.
* ನಿಮ್ಮ ಮುಖದ ಸೌಂದರ್ಯವನ್ನು ಹಾಳುಗೆಡವುವ ಮೊಡವೆಗಳನ್ನು ನಿವಾರಿಸಲು ಲವಂಗದ ನೀರು ಸಹಾಯ ಮಾಡುತ್ತದೆ. ಮೊಡವೆಯನ್ನು ಹುಟ್ಟಿಸುವ ಬ್ಯಾಕ್ಟ್ರೀಯಾಗಳನ್ನು ನಿಯಂತ್ರಿಸಿ ಮತ್ತು ಚರ್ಮವು ಕೆಂಪಾಗದಂತೆ ತಡೆಗಟ್ಟುತ್ತದೆ. ಚರ್ಮದ ಶುದ್ಧೀಕರಣಕ್ಕೂ ಲವಂಗದ ನೀರು ಸಹಕಾರಿ.
* ಲವಂಗದ ನೀರಿನಲ್ಲಿರುವ ಉತ್ಕರ್ಷಣಾ ನಿರೋಧಕಗಳು ಚರ್ಮವನ್ನು ಮಂದವಾಗಿಸುವ ಮತ್ತು ಅಕಾಲಿಕ ವೃದ್ಧಾಪ್ಯವನ್ನು ಉಂಟು ಮಾಡುವ ಸ್ವತಂತ್ರ ರಾಡಿಕಲ್ ಗಳ ವಿರುದ್ಧ ಹೋರಾಡುತ್ತವೆ. ಚರ್ಮದಲ್ಲಿ ಕಾಣಿಸುವ ಕಿರಿಕಿರಿಗಳನ್ನು (ತುರಿಕೆ ಇತ್ಯಾದಿ) ಕಡಿಮೆ ಮಾಡುತ್ತದೆ.
* ಲವಂಗದ ನೀರು ಕುಡಿಯುವುದರಿಂದ ಕೂದಲುಗಳು ಉದುರುವುದು ಕಡಿಮೆಯಾಗುತ್ತದೆ. ಕೂದಲಿನ ತ್ವಚೆಯನ್ನು ಸುಧಾರಿಸುವುದರ ಜೊತೆಗೆ ಅದರ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ತಲೆಯಲ್ಲಿರುವ ಹೊಟ್ಟು ನಿವಾರಣೆಗೂ ಈ ಲವಂಗ ಸಹಕಾರಿ. ಇದರಿಂದ ನಿಮ್ಮ ಕೂದಲು ಹೊಳೆಯುವುದರ ಜೊತೆಗೆ ನೈಸರ್ಗಿಕವಾಗಿ ಚೈತನ್ಯಯುತವಾಗುತ್ತದೆ.
ಲವಂಗದ ನೀರು ಆರೋಗ್ಯಕ್ಕೆ ಉತ್ತಮವೇ ಆದರೂ ಅದನ್ನು ನಿಗದಿತ ಪ್ರಮಾಣದಲ್ಲಿ ಸೇವಿಸುವುದು ಅಗತ್ಯ. ವೈದ್ಯಕೀಯ ಸಮಸ್ಯೆ ಇರುವವರು, ಗರ್ಭಿಣಿಯರು ಲವಂಗದ ನೀರನ್ನು ಸೇವಿಸುವ ಮೊದಲು ತಜ್ಞ ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ