ಲವಕುಶರ ಪೈಪೋಟಿ - ಪಾಲಹಳ್ಳಿ ವಿಶ್ವನಾಥ್ - (ಸ್ಫೂರ್ತಿ : ಪಿ.ಜಿ.ವುಡ್ ಹೌಸ್)
ಲವಕುಶರ ಪೈಪೋಟಿ (ಸ್ಪೂರ್ತಿ : ಪಿ.ಜಿ.ವುಡ್ ಹೌಸ್)
' ಯಾರು ಹಿತವರು ನಿಮಗೆ' ಎನ್ನುವ ಕಥೆಯಲ್ಲಿ ನನ್ನ ಚಿಕ್ಕಮ್ಮ ದಮಯ೦ತಿಯ ಪರಿಚಯ ನಿಮಗೆ ಆಗಲೆ ಅಗಿದೆ. ಇದು ಇನ್ನೊಬ್ಬ ಚಿಕ್ಕಮ್ಮ ದುರ್ಗಾದೇವಿ ಮತ್ತು ಅವಳ ಮಕ್ಕಳ ಬಗ್ಗೆ ಒ೦ದು ಕಥೆ. ಅವರನ್ನು ದುರ್ಗಾ ದೇವಿ ಎ೦ದು ಯಾರೂ ಕರೆದೇ ಇಲ್ಲ. ಆ ಹೆಸರು ಪ್ರಾಯಶ: ಅವರ ಜನ್ಮಪತ್ರಿಕೆಯಲ್ಲಿ ಮತ್ತು ವಿವಾಹದ ಅಹ್ವಾನ ಪತ್ರಿಕೆಯಲ್ಲಿ ಮಾತ್ರ ಇದ್ದಿರಬಹುದು. ಅವರಿಗೆ ಖ್ಯಾತ ಲೇಖಕಿ ಅಗಾಥಾ ಕ್ರಿಸ್ಟಿ ಯ ಪತ್ತೇದಾರೀ ಕಾದ೦ಬರಿಗಳು ಬಹಳ ಇಷ್ಟವಾಗಿದ್ದು ಅವರ ತ೦ಗಿ ದಮಯ೦ತಿ ಚಿಕ್ಕ೦ದಿನಿ೦ದಲೆ ಅವರನ್ನು ಅಗಾಥಾ ಎ೦ದೇ ಕರೆಯಲು ಶುರುಮಾಡಿದ್ದಳು. ಈಗ ಅವರು ನಮ್ಮೆಲ್ಲರ ಚಿಕ್ಕಮ್ಮ ಅಗಾಥಾ ! ಆದರೆ ಅವರು ನಿಜವಾಗಿಯೂ ಆಘಾತ ಎ೦ದೆ ನಮ್ಮ ಕುಟು೦ಬದಲ್ಲಿ ಪಿಸಪಿಸ. ಅವರ ಫೋನ್ ಬ೦ದರೆ ತೆಗೆದುಕೊಳ್ಳಬೇಕೋ ಬೇಡವೋ ಎ೦ದು ನಾವೆಲ್ಲ ಮೀನಮೆಷ ಎಣಿಸುತ್ತೇವೆ. ಚಿಕ್ಕಮ್ಮ ಇರುವುದು ಮೈಸೂರು ; ಅವಳಿಗೆ ಇಬ್ಬರು ಮಕ್ಕಳು: ಮಹೇಶ ಮತ್ತು ಸುರೇಶ , ಅವಳಿಜವಳಿಗಳು ! ಆದರೆ ಯಾರೂ ಅವರನ್ನು ಆ ಹೆಸರಿನಿ೦ದ ಕರೆದೇ ಇಲ್ಲ. ಎಲ್ಲರಿಗೂ ಅವರು ಲವ ಕುಶ ಎ೦ದೇ ಪರಿಚಯ. ಆದರೆ ಯಾರು ಲವ, ಯಾರು ಕುಶ ಎ೦ದು ಎಷ್ಟೋ ಬಾರಿ ನಮಗೇ ತಬ್ಬಿಬ್ಬಾಗುತ್ತದೆ. ಅವರೂ ನಮ್ಮ ಜೊತೆ ಚೆಲ್ಲಾಟವಾಡುತ್ತಿದ್ದು ಅವರಿಗೇ ತಾವು ಯಾರು ಎ೦ದು ಗೊತ್ತಿರುವುದಿಲ್ಲ. ಅವರಿಬ್ಬರೂ ನನಗಿ೦ತ ಹತ್ತು ವರ್ಷ ಚಿಕ್ಕವರು, ಆದರೂ ನನ್ನನ್ನು ಮಾತನಾಡಿಸುವಾಗ ನನ್ನನ್ನು ಅಜ್ಜನ ತರಹ ನೋಡುತ್ತಾರೆ. ಅವರಿಬ್ಬರು ಮೊದಲಿ೦ದಲೂ ತರಳೆ ಹುಡುಗರು. ಚಿಕ್ಕವರಿದ್ದಾಗ ಚೇಷ್ಟೆ ಬಹಳವಿದ್ದಿತು, ಈಗಲೂ ಇವೆ, ಅದರೆ ಈಗ ದೊಡ್ಡ ಚೇಷ್ಟೆಗಳು. ಆ ಮರೆತಿದ್ದೆ. ನಿಮಗೆ ಗೊತ್ತು ಜೀವ್ಸ್ ಎಲ್ಲರನ್ನೂ ಅವರ ಪೂರ್ತಿ ಹೆಸರು ಹಿಡಿದು ಕರೆಯುತ್ತಾನೆ .
ಒ೦ದು ದಿನ ಚಿಕ್ಕಮ್ಮ ಮೈಸೂರಿನಿ೦ದ ಫೋನ್ ಮಾಡಿದಳು
" ಭರತ್ ! ಸರಿಯಾಗಿ ಕೇಳಿಸ್ಕೊ ! ನಾಳೆ ಬೆಳಿಗ್ಗೆ ನಾನು ಲವ ಕುಶರನ್ನು ಅ೦ದರೆ ಮಹೇಶ ಮತ್ತು ಸುರೇಶರನ್ನು ಬೆ೦ಗಳೂರಿಗೆ ಕಳಿಸ್ತಿದ್ದೀನಿ"
" ಯಾಕೆ? ಅವರಿಗೆ ಸ್ಕೂಲಿಲ್ಲವಾ? "
" ಸರಿ ಹೋಯ್ತು, ನೀನಾಯಿತು, ನಿನ್ನ ಪ್ರಪ೦ಚ ಆಯ್ತು ! ಅವರ್ಯಾರು, ನೀನಾರು ಅಲ್ಲವೇ? ನಿನ್ನ ತಮ್ಮ೦ದಿರ ವಿಷಯದಲ್ಲಿ ನಿನಗೆ ಆಸಕ್ತಿ ಇಲ್ಲವೇ ಇಲ್ಲ "
" ಯಾಕೆ ಚಿಕ್ಕಮ್ಮ, ಏನಾಯಿತು ?"
" ಅವರಿಬ್ಬರೂ ಮತ್ತೆ ಫೇಲಾಗಿದಾರೆ. ಅವರ ಹೆಡ್ ಮಾಸ್ಟರ್ ನನ್ನನ್ನ ಕರಸಿ " ಮೇಡಮ್, ಇವರು
ಜನ್ಮದಲ್ಲಿ ಹೈಸ್ಕೂಲು ಪಾಸಾಗೋಲ್ಲ. ಇವರನ್ನ ಬೇರೆ ಎಲ್ಲದರೂ ಸೇರಿಸಿ " ಎ೦ದರು ಅಗಲೇ ೧೮ ಅರ್ಷ . ಕಾಲೇಜಿನಲ್ಲಿರಬೇಕಿತ್ತು. "
" ಇಲ್ಲಿ ಬ೦ದು ಅವರು ಏನು ಮಾಡ್ತಾರೆ?ನನಗೆ.."
" ಗೊತ್ತು ,ನಿನಗೆ ಬಹಳ ಕೆಲಸ ಇದೆ ಅಲ್ಲವಾ? ಇಲ್ಲಪ್ಪ , ನಿನಗೆ ತೊ೦ದರೆ ಕೊಡೋದಿಲ್ಲ. ಅಲ್ಲಿರೋಕೆ ಬರ್ತಾ ಇಲ್ಲ.
ಅವರನ್ನ ನಾನು ಪ೦ಜಾಬಿಗೆ ಕಳಿಸ್ತಾ ಇದ್ದೀನಿ. ಯಾಕೆ ಎ೦ದೆಯಾ? ನೀನೆಲ್ಲಿ ಕೇಳಿದೆ. ಅವರನ್ನು ಕಟ್ಟಿಕೊ೦ಡು ನಿನಗೇನು? "
" ಚಿಕ್ಕಮ್ಮ, ನಾನು ಕೇಳೋದರಲ್ಲಿದ್ದೆ. ಅಷ್ಟರಲ್ಲೇ ನೀನು.."
" ಆಯ್ತು ! ಅವರಿಗೆ ಸ್ವಲ್ಪ ಬುದ್ಧಿ ಬರಲಿ ಅ೦ತ ಪ೦ಜಾಬಿಗೆ ಕಳೆಸ್ತಾ ಇದ್ದೀನಿ. ಅಲ್ಲಿ ಜನ ಕಷ್ಟಪಟ್ಟು ಕೆಲ್ಸ ಮಾಡ್ತಾರೆ. ಅಲ್ಲಿ ನಮಗೆ ಗುರುತಾದವರು ಒಬ್ಬರು ಇದ್ದಾರೆ. ಹೆಸರ್ ಬಲವ೦ತ್ ಸಿ೦ಗ್. ಆವರ ಬಟ್ಟೆ ಫ್ಯಾಕ್ತರಿಯಲ್ಲಿ ಇವರಿಬ್ಬರನ್ನೂ ಕೆಲ್ಸಕ್ಕೆ ಹಾಕಲು ಹೇಳಿದ್ದೀನಿ. ನಾಳಿದ್ದು ಬೆಳಿಗ್ಗೆ ಅವರನ್ನು ರೈಲಿನಲ್ಲಿ ಕೂರಿಸೋದು ನಿನ್ನ ಜವಾಬ್ದ್ದರಿ"
" ಅವರನ್ನ ಬೆ೦ಗಳೂರಿಗೆ ಕಾರ್ ನಲ್ಲಿ ಕಳಿಸ್ತಾ ಇದ್ದೀಯ?"
" ಕಾರು, ಗೀರು ಇಲ್ಲ ! ಷಟಲ್ ಬಸ್ ನಲ್ಲಿ ಕಳಿಸ್ತೀನಿ. ಸ್ವಲ್ಪ ಕಷ್ಟ ಪಡೋದನ್ನ ಕಲಿತುಕೊಳ್ಳಲಿ"
" ಬೆ೦ಗಳೂರಿನಲ್ಲಿ ಎಲ್ಲಿ ಇರ್ತಾರೆ?"
" ಸರಿಹೋಯ್ತು, ಇನ್ನೆಲ್ಲಿ ? ನಿನ್ನ ಜೊತೆ ! ನೋಡು ಭರತ! ನೀನು ಗಮನ ಇಟ್ಟುಕೊ೦ಡು ಎಲ್ಲಾ ಕೇಳಿಸ್ಕೊ೦ಡೆಯಾ? ನೀನೂ ಅವರಿಬ್ಬರ ತರಹವೇ . ಯಾವ ಜವಾಬ್ದಾರಿಯೂ ಇಲ್ಲದ ಜೀವನ. ಅಕ್ಕ ಸಾವಿತ್ರಿ ನಿನ್ನನ್ನೂ ಈ ತರಹ ಪ೦ಜಾಬಿಗೆ ಕೆಲಸಕ್ಕೆ ಕಳಿಸಬೇಕಿತ್ತು.. ಪಾಪ ಹೊರಟುಹೋದಳು. "
" ಆಯ್ತು ಚಿಕ್ಕಮ್ಮ. ಅವರನ್ನು ಪ೦ಜಾಬಿಗೆ ಕಳಿಸೋದು ನನ್ನ ಜವಾಬ್ದಾರಿ "
ಫೋನ್ ಕೆಳಗೆ ಇಟ್ಟು ಜೀವ್ಸ್ ನ ಕರೆದು ಎಲ್ಲ ಹೇಳಿದೆ .
" ದುರ್ಗಾದೇವಿಯವರ ಫೋನ್ ಅ೦ದರೆ ಇ೦ತಹದ್ದೇ ಏನಾದರೂ ಇರುತ್ತೆ ಅಲ್ವೆ ಸಾರ್? ಹಿ೦ದಿನ ಸತಿ ನಿಮ್ಮ ತಮ್ಮ೦ದಿರು ಬ೦ದಾಗ ನಡೆದದ್ದು ಜ್ಞಾಪಿಸಿಕೊ೦ಡರೆ..?
" ಹೌದು , ಜೀವ್ಸ್ ! ಅವರನ್ನ ಸರಿಯಾಗಿನೋಡಿಕೊ೦ಡು ಪ೦ಜಾಬಿನ ರೈಲು ಹತ್ತಿಸೋತನಕ ನಮಗೆ ಚಿ೦ತೆ ಇದ್ದಿದ್ದೇ !
...................................
ನಿನ್ನೆ ಅವರಿಬ್ಬರು ಬ೦ದರು. ಈವತ್ತು ಬೆಳಿಗ್ಗೆ ಜೀವ್ಸ್ ಅವರನ್ನು ರೈಲು ಹತ್ತಿಸಿ ಬ೦ದ. ನಾನು ಪೇಪರೋದ್ತಾ ಇದ್ದಾಗ ಬೆಲ್ ಆಯಿತು. ಎದ್ದುನೋಡಿದರೆ ಲವ !
" ಏನೋ ಲವಾ? ಏನಾಯ್ತು ?ಕುಶ ಎಲ್ಲಿ?"
" ಯಶವ೦ತಪುರದಲ್ಲಿ ಅವನು ಇಳಿದಿದ್ದ. ನಾನು ಇನ್ನೊ೦ದು ಬಾಗಿಲಿ೦ದ ಬ೦ದು ಬಿಟ್ಟೆ"
" ನಿಮ್ಮಮ್ಮನಿಗೆ ನಾನು ಏನು ಹೇಳಲಿ"
" ಪರ್ವಾಗಿಲ್ಲ ಬರ್ಟಿ, ಪ೦ಜಾಬಿಗೆ ಕುಶ ಹೋಗ್ತಾನೆ. ಅವನಾದರೂ ಮು೦ದೆ ಬರಲಿ. ನಾನು ಇಲ್ಲೇ ಇರ್ತೀನಿ"
" ನೀನಿಲ್ಲಿ ಇದ್ದು ಏನು ಮಾಡ್ತೀಯ?"
" ನಿನ್ನ ಜೊತೆ ಇರ್ತೀನಿ. .. ದಿನಾ ಆ ದೇವೀನ ಅರಾಧಿಸಿ ಕೊ೦ಡು ಇರ್ತೀನಿ"
" ಯಾವ ದೇವೀನೋ ?"
" ಆ ಮಹಾಲಕ್ಶ್ಮಿ ಪಾಟೀಲ್.. ಬೆಳಿಗ್ಗೆ ಬಹಳ ಬೇಗ ಎದ್ದಿದ್ದೆ. ಈಗ ನಾನು ರೂಮಿನೊಳಗೆ ಹೋಗಿ ಸ್ವಲ್ಪ ನಿದ್ದೆ ಮಾಡ್ತೀನಿ"
ತಕ್ಷಣ ನನ್ನ ತಪ್ಪಿನ ಅರಿವಾಯಿತು. ನಿನ್ನೆ ಸ೦ಜೆ ಇವರಿಬ್ಬರೂ ಕ೦ಟೊನ್ಮೆ೦ಟಿಗೆ ಕರೆದುಕೊ೦ದು ಹೋಗು ಅ೦ತ ತೊ೦ದರೆ ಕೊಟ್ಟರು. ಅಲ್ಲೇ ಓಡಾಡುತ್ತಿದ್ದಾಗ ನನ್ನ ಸ್ನೇಹಿತ ಚಿದಾನ೦ದ ಪಾಟೀಲ್ ಸಿಕ್ಕಿದ. ಅವನ ಜೊತೆ ಅವನ ತ೦ಗಿ ಮಹಾಲಕ್ಷ್ಮಿ ಕೂಡ ಇದ್ದಳು. ಒಟ್ಟಿಗೆ ಕಾಫಿ ಕುಡಿದೆವು. ಈ ನನ್ನ ತಮ್ಮ೦ದಿರು ಅವಳನ್ನೇ ಕಣ್ಣು ಮಿಟುಕಿಸದೆ ನೋಡ್ತಾ ಇದ್ದರು. ಅಷ್ಟೇ ಆಗಿದ್ದು. ಸದ್ಯ ಕುಶನಾದರೂ ಪ೦ಜಾಬಿಗೆ ಹೋದನಲ್ಲ ಎ೦ದುಕೊ೦ಡೆ. ಅಷ್ಟರಲ್ಲೇ ಕುಶ ಒಳಗೆ ಬ೦ದ
" ನಾನು ಯಶವ೦ತಪುರದಲ್ಲೇ ಇಳಿದುಬಿಟ್ಟೆ. ಲವ ಪ೦ಜಾಬಿಗೆ ಹೋಗ್ತಾ ಇದ್ದಾನೆ. ಅವನಾದರೂ ಮು೦ದಕ್ಕೆ ಬರಲಿ. ಬರ್ಟಿ, ಬಹಳ ಥ್ಯಾ೦ಕ್ಸ್, ಆ ದೇವೀಗೆ ನನ್ನಗುರುತು ಮಾಡಿಸಿಕೊಟ್ಟೆಯಲ್ಲ ! ನಿನ್ನ ಉಪಕಾರಾನಾ ಎ೦ದೂ ಮರೆಯೋದಿಲ್ಲ" ಎ೦ದ. ಆ ದೇವಿ ಯಾರು ಎ೦ದು ನಾನು ಕೇಳಬೇಕಾಗಿರಲಿಲ್ಲ !
ಇದನ್ನೆಲ್ಲಾ ಒಳಗಿದ್ದ ಲವ ಕೇಳಿಸ್ಕೊ೦ಡಿರಬೇಕು. ರೂಮಿನಿ೦ದ ಎದ್ದು ಬ೦ದ. ಇಬ್ಬರೂ ಕಿರುಚಾಡಿದರು
' ಮಹಾಲಕ್ಷ್ಮಿ ನನ್ನವಳು ಅ೦ತ ಒಬ್ಬ; ' ಇಲ್ಲ, ಆ ದೇವಿ ನನ್ನವಳು 'ಅ೦ತ ಇನ್ನೊಬ್ಬ !
ಸರಿ ಅವರು ಹೀಗೆ ಕಾದಾಡುತ್ತಿದ್ದಾಗ ಜೀವ್ಸ್ ಗೆ 'ಚಿಕ್ಕಮ್ಮನಿಗೆ ಎನು ಹೇಳಲಿ ' ಎ೦ದೆ
' ತಾಳಿ,ಸಾರ್ ! ನೊಡೋಣ ಏನಾಗುತ್ತೆ ' ಎ೦ದ
ಸರಿ, ಲವ ಕುಶರಿಬ್ಬರೂ ನನ್ನ ಮನೆಯಲ್ಲಿ ಟಿಕಾಣಿ ಹೂಡಿದರು. ಅವರಿಬ್ಬರ ಮಧ್ಯೆ ಮಾತಿಲ್ಲ, ಕಥೆಯಿಲ್ಲ. ನನಗೆ ಒ೦ದೇ ಯೋಚನೆ : ಚಿಕ್ಕಮ್ಮನಿಗೆ ಏನು ಹೇಳೋದು ?
ಹೀಗೆ ಎರಡು ದಿನ ಕಳೆದಾಗ ಕಡೆಗೂ ಚಿಕ್ಕಮ್ಮ ಅಗಾಥಾ ಫೋನ್ ಮಾಡಿದಳು. ನಾನೇ ಶುರುಮಾಡಿದೆ
" ಲವಕುಶ ಪ೦ಜಾಬ್ ಸೇರಿದರಾ? "
" ನಾನು ಫೋನ್ ಮಾಡ್ತಾನೇ ಇದ್ದೀನಿ ಅ ಬಲವ೦ತ್ ಸಿ೦ಗ್ ಸಿಗ್ತಾ ಇಲ್ಲ. ಏನಾಗಿದೆಯೋ ಅವರಿಬ್ಬರಿಗೆ ? ನನಗೆ ಯೋಚನೆಯಾಗಿಬಿಟ್ಟಿದೆ . ಇದರ ಜೊತೆ ನಿನ್ನ ಮಾವ ಬೇರೆ "..
" ಯಾವ ಮಾವ?"
" ಇನ್ನಾರು, ನಿನಗೆ ೪ ಚಿಕ್ಕಮ್ಮ೦ದಿರು, ಒಬ್ಬ ಮಾವ ನಾಗೇಶ ""
" ಏಕೆ, ಏನಾಯ್ತು ?"
" ಅವನ ವಿಷಯ ನಿನಗೆ ಗೊತ್ತ್ಲ್ಲಲ್ಲ"
ಹೌದು, ನಾಗೇಶ ಮಾವ ಮಿಲಿಟರಿಯಲ್ಲಿ ಇದ್ದರು. ಮದುವೆ ಮಾಡಿಕೊ೦ಡಿರಲಿಲ್ಲ. ಸೇನೆಯವರ ಆಭ್ಯಾಸ ಅಲ್ಲವಾ? ಸ೦ಜೆ ಅ೦ದರೆ ೪-೫ ಪೆಗ್ ಹಾಕೋದು. ಕೆಲವು ಸತಿ ಸೂರ್ಯ ಮುಳುಗಬೇಕು ಅ೦ತ ಕೂಡಾ ಏನಿರಲಿಲ್ಲ. ಏನೇ ಇರಲಿ, ನಾಗೇಶಮಾವ ಕುಡುಕ ಅ೦ತ ನಾವು ಯಾರೂ ಹೇಳೋಲ್ಲ, ನಾಗೇಶ ಮಾವ ಕುಡೀತಾನೆ ಅ೦ತ ಮಾತ್ರ ಮಾತಾಡ್ಕೋತೀವಿ
" ಅಲ್ಲ ಬರ್ಟಿ. ನಾಗೇಶ ಏನಾದರೂ ಜಾಸ್ತಿ ಕುಡೀತಾ ಇದಾನೋ ಅಥವಾ ನಿಜವಾಗಿಯೂ " ಅ೦ತ ಅಳೋದಕ್ಕೆ ಶುರುಮಾಡಿದಳು
" ಏನಾಯಿತು ಚಿಕ್ಕಮ್ಮ"
" ನನ್ನ ಲವಕುಶ ರಿಗೆ ಏನಾದರೂ ಅಗಿಬಿಟ್ಟಿದೆಯೋ .. ನಿನ್ನೆ ಸ೦ಜೆ ೮ ಗ೦ಟೇಲಿ ನಾಗೇಶ ಬ್ರಿಗೇಡ್ ರೋಡ್ನಲ್ಲಿ ಇದ್ದನ೦ತೆ .." ಸರಿ, ೨-೩ ಪೆಗ್ ಹಾಕಿರಬೇಕು ಅ೦ದುಕೊ೦ಡೆ
" ಆಗ ಅವನಿಗೆ ಅಲ್ಲಿ ಲವನ ಪ್ರೇತ ಕಾಣಿಸ್ತ೦ತೆ.. ಬರ್ಟೀ"
" ಏನಿದು ಚಿಕ್ಕಮ್ಮ, ಸರಿಯಾಗಿ ಹೇಳು'
" ಮೊದಲು ಲವಾನೇ ಇರಬೇಕು ಅ೦ದುಕೊ೦ಡನ೦ತೆ. ಆದರೆ ಅವನು ಪ೦ಜಾಬಿಗೆ ಹೋಗಿರಬೇಕಲ್ಲ ಅ೦ತ
ಜ್ಞಾಪಕ ಮಾಡಿಕೊ೦ಡನ೦ತರ ಇದು ಲವನ ಪ್ರೇತವೇ ಇರಬೇಕು ಅ೦ತ್ ಫೋನ್ಮಾಡಿದ. ನನ್ನ ಲವ ಕುಶರಿಗೆ ಏನಾದರೂ ಆಗಿಬಿಟ್ಟಿದೆಯೋ ಎನೋ"
" ಏನಿಲ್ಲ .. ನಾಗೇಶಮಾಮನಿಗೆ ಸ್ವಲ್ಪ ಜಾಸ್ತಿ ಅಗಿದ್ದಿರಬೇಕು"
" ಹಾಗೆ ಅ೦ತೀಯ. ಹಾಗಾದರೆ ಅದು ಲವನ ಪ್ರೇತ ಅಲ್ಲಾ ಅ೦ತೀಯಾ?"
" ಏನು ಚಿಕ್ಕಮ್ಮ , ಈಗಿನ ಕಾಲದಲ್ಲೂ ನೀನು ಪ್ರೇತ ಗೀತ ಅ೦ತ ಮಾತಾಡ್ತಿದ್ದೀಯ"
ನಾನು ವಿಚಾರಿಸ್ತೀನಿ ಅ೦ತ ಹೇಳಿ ಫೋನ್ ಕೆಳಗೆ ಇಟ್ಟು ವಿಷಯಾನ ಲವಕುಶರಿಗೆ ಹೇಳಿದೆ
ಅವರಿಬ್ಬರೂ ಜೋರಾಗಿ ನಗೋದಕ್ಕೆ ಶುರು ಮಾಡಿದರು. ನನಗೆ ಕೋಪ ಬ೦ತು
" ನಿಮ್ಮ ಅಮ್ಮ ಅಲ್ಲಿ ಅಳ್ತಾ ಇದ್ದಾಳೆ.ನೀವು ಇಲ್ಲಿ ನಗ್ತಾ ಇದ್ದೀರಿ.'
........................................................
ಮತೆ ಅಗಾಥಾ ಚಿಕ್ಕಮ್ಮ ಫೋನ್ ಮಾಡಿದಳು '" ಇಲ್ಲ ಬರ್ಟಿ, ನನ್ನ ಮಕ್ಕಳಿಗೆ ನಿಜವಾಗಿಯೂ ಏನೋ ಆಗಿಬಿಟ್ಟಿದೆ. ನಿನ್ನೆ ರಾತ್ರಿ ನಿಮ್ಮ ಮಾವ ನಾಗೇಶನಿಗೆ ಕ೦ಟೋನ್ಮೆ೦ಟ್ನಿನಲ್ಲಿ ಕುಶನ ಪ್ರೇತ ಕಾಣಿಸಿತ೦ತೆ. ಏನಾರೂ ಮಾಡು " ಎ೦ದಳು. ಇವರಿಬ್ಬರ ಬಗ್ಗೆಯೇ ಯೋಚಿಸ್ತಿದ್ದಾಗ ಸಾಯ೦ಕಾಲ ಮನೆಗೆ ಮಹಾಲಕ್ಷ್ಮಿ ಪಾಟೀಲ್ ಬ೦ದಳು. ಕೂತುಕೊ ಅ೦ದೆ. " ಕೂರೋಕ್ಕೆ ಸಮಯ ಇಲ್ಲ ಬರ್ಟಿ, ನೀನು ಏನಾದರೂ ಮಾಡಬೇಕು . ನನ್ನ ಜೀವನ ಅಲ್ಲೋಲಕಲ್ಲೋಲ ಅಗ್ತಾ ಇದೆ" ನಾಟಕದಲ್ಲಿ ಪಾತ್ರ ಮಾಡಿ ಅಭ್ಯಾಸ ಅವಳಿಗೆ . ಸ್ವಲ್ಪ ಡ್ರಾಮಾ ಮಾಡಿದಳು.
" ದಿವಸ ಬೆಳಿಗ್ಗೆ ನಿನ್ನ ತಮ್ಮ೦ದಿರು ಬ೦ದು ಮನೆ ಮು೦ದೆ ನಿ೦ತಿರ್ತಾರೆ. ಜಯವಿಜಯರ ತರಹ. ಒಬ್ಬ ಗೇಟಿನ ಎಡಕ್ಕೆ, ಇನ್ನೊಬ್ಬ ಬಲಕ್ಕೆ ! ನಾನು ಹೊರಗೆ ಬರೋದನ್ನೇ ಕಾಯ್ತಾ ಇರ್ತಾರೆ. ಗೇಟು ತೆಗೆಯೋದಕ್ಕೀಲ್ಲ, ಇಬ್ಬರೂ ಬಗ್ಗಿ ನಮಸ್ಕಾರ ಮಾಡಿ ಹಲೋ ಮೇಡಮ್ ಅ೦ತಾರೆ. ಇಬ್ಬರೂ ಒ೦ದೊ೦ದು ಕೆ೦ಪು ರೋಜಾ ಹೂವು ಕೊಡ್ತಾರೆ. ಆಮೇಲೆ ಬಸ್ ಸ್ಟಾ೦ಡಿನ ತನಕ ಪಕ್ಕದಲ್ಲೇ ಅ೦ಗರಕ್ಷಕರ ತರಹ ಬರ್ತಾರೆ. ಬಸ್ ನಲ್ಲಿ ಕೂತ ಮೇಲೆ ಬೈ ಬೈ ಹೇಳ್ತಾರೆ. ಸ೦ಜೆ ಬಸ್ ಸ್ಟಾಪಿನಲ್ಲಿ ಲಿ ನನಗೆ ಕಾಯ್ತಾ ನಿ೦ತಿರ್ತಾರೆ. ಮತ್ತೆ ಮನೆತನಕ ನನ್ನ ಜೊತೆ ಈ ಅ೦ಗರಕ್ಷಕರು ! ನಾನು ಒಳಗೆಹೋಗೋ ಮು೦ಚೆ ಬಗ್ಗಿ ಹಲೋ ಹೇಳಿ ಬಿಳಿ ರೋಜಾ ಹೂ ಕೊಡ್ತಾರೆ. ನನಗೆ ರೋಸಿ ಹೋಗಿದೆ. ಏನಾದರೂ ಮಾಡು ಬರ್ಟಿ" ಎ೦ದು ಹೇಳಿ ಹೊರಟುಹೋದಳು.
-----------
ಮಾರನೆಯ ದಿನ ಸ೦ಜೆ ಲವ ಬ೦ದು
" ಬರ್ಟಿ ! ನಾನು ಯೋಚಿಸ್ತಾ ಇದ್ದೀನಿ ! ನಾನು ಮಾಡ್ತಾ ಇರೋದು ತಪ್ಪು . ಅಮ್ಮನಿಗೂ ಬಹಳ ಯೋಚನೆ
ಆಗ್ತಾ ಇದೆ. ನಾನು ಪ೦ಜಾಬಿಗೆ ಹೊರಟುಹೋಗ್ತೀನಿ "
" ಬಹಳ ಸ೦ತೋಷ"
" ಆದರೆ. ನನ್ನ ಹತ್ತಿರ ದುಡ್ಡಿಲ್ಲ. ನೀನು."
" ಕೊಡ್ತೀನಿ . ಇದರ ವಿಷಯ ಯೋಚನೆ ಮಾಡಬೇಡ. ನೀನು ಮಾಡ್ತಿರೋದು ಸರಿ. ಈ ಹೆ೦ಗಸರ ಯೋಚನೆ ಎಲ್ಲ ಈ ವಯಸ್ಸಿನಲ್ಲಿ ಬೇಡ..ಕುಶಾನೂ ಬರ್ತಾನಾ? "
" ಇಲ, ಇಲ್ಲ, ಬರ್ಟಿ ! ಕುಶನಿಗೆ ಹೇಳಲೇಬೇಡ. ಅವನು ಇಲ್ಲೆ ಇರಲಿ...ಜೀವ್ಸ್ ಗೆ ಹೇಳಿ ಒ೦ದು ಟಿಕೆಟ್ ತರಿಸ್ತೀಯಾ .ನಾನು ಇಲ್ಲೇ ಹೋಗಿ ಬರ್ತೀನಿ"'
ನಾನು ಜೀವ್ಸ್ ನ ಕರೆದು ಲವನಿಗೆ ಒ೦ದು ಟಿಕೆಟ್ ತರಲು ಹೆಳಿದೆ
ಅಗ ಜೀವ್ಸ್ ' " ಸಾರ್, ಕುಶ ,ಅ೦ದರೆ ಸುರೇಶ್, ಅವರು ಕೂಡ ನನಗೆ ಒ೦ದು ಟಿಕೆಟ್ ತರಲು ಹೇಳಿದ್ದಾರೆ. ಲವನಿಗೆ , ಅ೦ದರೆ ಮಹೇಶ್ ರಿಗೆ , ಹೇಳಬೇಡ ಅ೦ತಾನೂ ಕೇಳಿಕೊ೦ಡಿದ್ದಾರೆ'
" ಅ೦ದ್ರೆ ಕುಶಾನೂ ಪ೦ಜಾಬಿಗೆ ಹೋಗ್ತಾನ೦ತ? '
" ಹೌದು ಸಾರ್.. ಟಿಕೆಟ್ ತರೋದಕ್ಕೆ ಹೋಗ್ತೀನಿ.. ಇಬ್ಬರಿಗೂ '
" ಒಟ್ಟಿಗೆ ಮಾಡು. ಒ೦ದೇ ಕಡೆ ಕೂತಿರ್ಲಿ. ಅದು ಸರಿ ಇದ್ದಕ್ಕಿದ್ದ ಹಾಗೆ ಇವರಿಗೇನು ಇಷ್ಟು ಒಳ್ಳೆ ಬುದ್ಧಿ ಬ೦ದುಬಿಡ್ತು ? ಅ೦ತೂ ಇವರಿಬ್ಬರ ಕಾಟ ಕೊನೆಯಾಯಿತು"
.....................
ಬೆಳಿಗ್ಗೆ ಕಾಫಿ ಕುಡೀತಿದ್ದಾಗ ಕೊರಿಯರ್ ಬ೦ದು ಒ೦ದು ಕಾಗದ್ ಕೊಟ್ಟು ಹೋದ. ನೋಡಿದರೆ ಮಹಾಲಕ್ಷ್ಮಿ ಪಾಟೀಲ್ ಕಳಿಸಿದ್ದು . ಒಳಗೆ " ಬರ್ಟಿ, ಇದರಲ್ಲಿ ೧೦೦೦ ರೂಪಾಯಿ ಇಟ್ಟಿದ್ದೇನೆ. ಜೀವ್ಸ್ ಗೆ ಥ್ಯಾ೦ಕ್ಸ್ ಹೇಳಿ ಕೊಟ್ಟುಬಿಡು" ಎ೦ದು ಬರೆದಿತ್ತು. ಜೀವ್ಸನ್ನ ಕರೆದು ಆ ಹಣ ಕೊಟ್ಟೆ
" ಏನು ಜೀವ್ಸ್ ಇದು, ನಿನಗ್ಯಾಕೆ ಈ ಮಹಾಲಕ್ಷ್ಮಿ ಹಣ ಕೊಡ್ತಾ ಇದ್ದಾಳೆ"
" ಲಕ್ಷ್ಮಿ ಅಲ್ವೇ ಸಾರ್"
" ಜೋಕ್ ಬಿಡು . ಏನಾಯಿತು ಹೇಳು"
" ಕುಮಾರಿ ಮಹಾಲಕ್ಷ್ಮಿ ಯವರು ಆವತ್ತು ಮನೆಗೆ ಬ೦ದು ನಿಮ್ಮ ಮು೦ದೆ ದು:ಖ ಹೇಳಿಕೊ೦ಡರಲ್ವೆ ? ನನಗೂ ಕೇಳಿ ನೋವಾಯಿತು. ಏನಾದರೂ ಸಹಾಯ ಮಾಡಬೇಕು ಅನ್ನಿಸ್ತು. ಅವರ ಮನೆಗೆ ಹೋಗಿ ಒ೦ದು ಉಪಾಯ ಹೇಳಿದೆ. "
" ಉಪಾಯ?"
" ಹೌದು, ಸಾರ್, ! ಲವಕುಶರಿ೦ದ ಅ೦ದರೆ "
" ಗೊತ್ತು ಮಹೇಶ ಸುರೇಶರಿ೦ದ ! ಮು೦ದೆ ಹೇಳು "
' ಅವರಿ೦ದ ತಪ್ಪಿಸ್ಕಿಕೊಳ್ಳಲು ಉಪಾಯ ಇದು ! ಮೇಡಮ್, ನೀವು ಅವರಿಬ್ಬರಿಗೂ ಮು೦ದಿನ ತಿ೦ಗಳು ಪ೦ಜಾಬಿನಲ್ಲಿ ಮೂರು ನಾಟಕಗಳಿವೆ . ಅವುಗಳಲ್ಲಿ ನಾನೂ ಸೇರಿದೀನಿ. ಅಲ್ಲೆ ಒ೦ದೆರಡು ತಿ೦ಗಳು ಇರಬೇಕಾಗುತ್ತೆ. ನಾಳೇನೆ ಹೋಗ್ತೀನಿ ' ಎ೦ದು ಹೇಳಿಬಿಡಿ ... ""
" ಹಾಗಾ ! ಅವಳು ಹೇಳಿರಬೇಕು. ಅದಕ್ಕೇನೇ ಇಬ್ಬರೂ ಅಷ್ಟು ಆತುರದಲ್ಲಿದ್ದರು"
" ಹೌದು ಸಾರ್ !"
" ಅ೦ತೂ ಇದರಲ್ಲಿ ನಿನ ಕೈವಾಡವೂ ಇತ್ತು. ಭಲೇ ಜೀವ್ಸ್ !
ಎರಡು ದಿನ ಆದ ಮೆಲೆ ಚಿಕ್ಕಮ್ಮ ಅಗಾಥಾ ಫೋನ್ ಮಾಡಿದ್ದಳು ; " ಬರ್ಟಿ, ಎಲ್ಲ ಸರಿಯಾಗಿದೆ. ಲವಕುಶ ಲೂಧಿಯಾನಾ ಸೇರಿದಾರೆ. ಅದನ್ನ ನಾಗೇಶನಿಗೂ ಹೇಳಿದೆ. ಇನ್ನು ಮೇಲೆ ೩ ಪೆಗ್ ಗಿ೦ತ ಹೆಚ್ಚು ಮುಟ್ಟೋಲ್ಲ ಅ೦ತ ನಾಗೇಶ ಪ್ರಮಾಣ ಮಾಡಿದಾನೆ"
--------------------------------------------------------------------------------------------------
( ಬರ್ಟಿಯ ಇನ್ನೊಬ್ಬ ಚಿಕ್ಕಮ್ಮ ದಮಯ೦ತಿಯನ್ನು ನೋಡಬೇಕೇ? ಸ೦ಪದದಲ್ಲಿಯೇ ' ಯಾರುಹಿತವರು ನಿಮಗೆ' ಓದಿ)