ಲಸಿಕೆಗಳು ಬೇಕೆ?

ಲಸಿಕೆಗಳು ಬೇಕೆ?

Comments

ಬರಹ

ಮಕ್ಕಳಿಗೆ ಲಸಿಕೆ ಹಾಕಬೇಕೇ ಬೇಡವೇ ಎಂಬ ಬಗ್ಗೆ ಬಹಳಷ್ಟು ಚರ್ಚೆ ಸಂಪದದಲ್ಲಿ ನಡೆದಿದೆ. ಇದರಿಂದ ಸಾಮಾನ್ಯರಿಗೆ ಗೊಂದಲವುಂಟಾಗುವುದು ಸಹಜವೇ. ಆಧುನಿಕ ವೈದ್ಯ ವಿಜ್ಞಾನದ ಬಗ್ಗೆ ಹಾಗೂ ಅದನ್ನು ಪಾಲಿಸುವ ವೈದ್ಯರ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ಬೇಸರ ಹಾಗೂ ಸಂಶಯಗಳಿರುವುದು ಕೂಡಾ ಈ ಚರ್ಚೆಯಲ್ಲಿ ವ್ಯಕ್ತವಾಗಿದೆ. ಅದನ್ನು ಅಲೋಪತಿ ತಜ್ಞರೆಂದು ಕರೆಯಿಸಿಕೊಳ್ಳುತ್ತಿರುವ ನಾವೆಲ್ಲರೂ ತೆರೆದ ಮನಸ್ಸಿನಿಂದ ಪರಿಗಣಿಸಬೇಕಾಗಿದೆ. ಆಧುನಿಕ ವೈದ್ಯ ವಿಜ್ಞಾನದಲ್ಲಿ ಎಲ್ಲವೂ ಸಂಪೂರ್ಣವಾಗಿ ಸರಿಯಿದೆ ಎನ್ನಲಾಗದು ಹಾಗೂ ಸಾಕಷ್ಟು ಪಾರದರ್ಶಕತೆಯಿದೆಯೆಂದೂ ಹೇಳಲಾಗದು.

ಲಭ್ಯವಿರುವ ಎಲ್ಲಾ ಲಸಿಕೆಗಳನ್ನೂ ಕಡ್ಡಾಯವಾಗಿ ಹಾಕಿಸಿಕೊಳ್ಳಲೇ ಬೇಕು ಅಥವಾ ಯಾವ ಲಸಿಕೆಗಳನ್ನೂ ಹಾಕಿಸಿಕೊಳ್ಳಲೇ ಬಾರದು ಎನ್ನುವುದೆರಡೂ ಅತಿರೇಕವೆನಿಸುತ್ತದೆ. ಅದಾಗಲೇ ಹಲವರು ಹೇಳಿರುವಂತೆ, ಲಸಿಕೆಗಳು ವ್ಯಾಪಾರದ ಸರಕುಗಳಾದ ಬಳಿಕ ಅವುಗಳ ಬಗ್ಗೆ ಪಾರದರ್ಶಕವಾದ ಸತ್ಯವು ಹೊರಬೀಳುವುದು ಕಷ್ಟವೇ ಆಗಿಬಿಟ್ಟಿದ್ದು, ತಜ್ಞರೊಳಗೇ ಹಲವಾರು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿವೆ. ಅಂತಹ ಸನ್ನಿವೇಶದಲ್ಲಿ ಜನಸಾಮಾನ್ಯರಲ್ಲಿ ಗೊಂದಲ ಹಾಗೂ ಆತಂಕಗಳು ಸಹಜವಾಗಿಯೇ ಹುಟ್ಟುತ್ತವೆ; ದಬಾಯಿಸಿ ಸುಮ್ಮನಾಗಿಸುವುದರಿಂದ ಅವು ಇನ್ನಷ್ಟು ಹೆಚ್ಚುತ್ತವೆಯೇ ವಿನಃ ಬೇರೇನೂ ಆಗುವುದಿಲ್ಲ. ಹಾಗಾದರೆ, ತಜ್ಞರೊಳಗೇ ಇರುವ ಪರಸ್ಪರ ಭಿನ್ನವಾದ ಅಭಿಪ್ರಾಯಗಳಲ್ಲಿ ಸಾಮಾನ್ಯರು ಯಾವುದನ್ನು ಹೇಗೆ ಮತ್ತು ಏಕೆ ಆಯ್ದುಕೊಳ್ಳಬೇಕೆಂದು ಯಾರಾದರೂ ಕೇಳಿದರೆ, ಅದಕ್ಕೆ ಉತ್ತರಿಸುವುದು ಸ್ವಲ್ಪ ಕಷ್ಟವೇ. ಖಾಸಗೀಕರಣದಿಂದಾಗಿ ಸಂಪೂರ್ಣವಾಗಿ ವಾಣಿಜ್ಯೀಕರಣಗೊಂಡಿರುವ ವೈದ್ಯ ಶಿಕ್ಷಣ ಹಾಗೂ ವೈದ್ಯ ವೃತ್ತಿಗಳ ಇಂದಿನ ಪರಿಸ್ಥಿತಿಯಲ್ಲಿ ಇಂತಹಾ ಹಲವಾರು ಸಮಸ್ಯೆಗಳು ಇನ್ನಷ್ಟು ಜಟಿಲಗೊಳ್ಳಲಿರುವುದಂತೂ ದಿಟ.

ಲಸಿಕೆಗಳು ಮನುಕುಲಕ್ಕೆ ಯಾವ ಪ್ರಯೋಜನವನ್ನೂ ಮಾಡಿಲ್ಲ, ಅವುಗಳಿಂದಾಗಿ ಕೇವಲ ಹಾನಿಯಷ್ಟೇ ಆಗಿದೆ, ಅವುಗಳ ಸಂಶೋಧನೆಯಲ್ಲಿ ಕ್ರೌರ್ಯವೇ ತುಂಬಿದೆ ಎನ್ನುವ ಹೇಳಿಕೆಗಳು ಅಷ್ಟೊಂದು ಸಮಂಜಸವಲ್ಲ. (ಸಂಶೋಧನೆಯಲ್ಲಿ ನಡೆಸಲಾಗಿರುವ ಕ್ರೌರ್ಯವನ್ನು ಪರಿಗಣಿಸುವುದಾದರೆ ಯಾವ ರೋಗಕ್ಕೂ ಯಾವ ಔಷ್ಧವನ್ನೂ ತೆಗೆದುಕೊಳ್ಳುವಂತಿಲ್ಲ; ಗಿಡ ಮೂಲಿಕೆಗಳನ್ನು ಕೀಳುವುದೂ ಕ್ರೌರ್ಯವಲ್ಲವೆ?) ಸಿಡುಬು, ಪೋಲಿಯೋ, ನಾಯಿಕೆಮ್ಮು, ಡಿಫ್ತೀರಿಯಾ ಹಾಗೂ ಧನುರ್ವಾತ (ಟೆಟನಸ್)ಗಳ ವಿರುದ್ಧ ಜಯ ಸಾಧಿಸುವಲ್ಲಿ ಅವುಗಳ ವಿರುದ್ಧ ನೀಡಲಾಗುವ ಲಸಿಕೆಗಳ ಪಾತ್ರವು ಗಣನೀಯವಾದುದೆಂಬುದು ನಿಸ್ಸಂದೇಹವಾಗಿದೆ.[1-4] ಈ ಎಲ್ಲಾ ರೋಗಗಳು ಗಂಭೀರ ಸಮಸ್ಯೆಗಳಿಗೂ, ಪ್ರಾಣಹಾನಿಗೂ ಕಾರಣವಾಗಬಲ್ಲವು ಮಾತ್ರವಲ್ಲ, ಅವುಗಳ ಚಿಕಿತ್ಸೆಯು ಕಷ್ಟಕರ ಹಾಗೂ ಅತಿ ವೆಚ್ಚದಾಯಕವೂ ಹೌದು. ಆದ್ದರಿಂದ ನವಜಾತ ಶಿಶುಗಳಿಗೆ ಈ ನಾಲ್ಕು ರೋಗಗಳ (ಪೋಲಿಯೋ, ನಾಯಿಕೆಮ್ಮು, ಡಿಫ್ತೀರಿಯಾ ಹಾಗೂ ಧನುರ್ವಾತ) ವಿರುದ್ಧ ಲಸಿಕೆಗಳನ್ನು ಹಾಕಿಸುವುದೇ ಒಳ್ಳೆಯದು, ಇಲ್ಲದಿದ್ದರೆ ಅನಗತ್ಯವಾದ ಅಪಾಯವನ್ನು ಆಹ್ವಾನಿಸಿದಂತೆ ಆಗುತ್ತದೆ.

ಅದೇ ರೀತಿ, ಹುಚ್ಚುನಾಯಿ ಕಡಿತಕ್ಕೊಳಗಾದವರಿಗೆ ತಗಲುವ ಮಾರಣಾಂತಿಕವಾದ ರೇಬೀಸ್ ರೋಗದಿಂದ ಬದುಕಿ ಉಳಿಯುವುದು ಅತ್ಯಪರೂಪವಾಗಿದ್ದು, ಅದನ್ನು ತಡೆಯಲಿಕ್ಕೆ ಲಸಿಕೆಯೊಂದೇ ದಾರಿಯಾಗಿದೆ. ಇವಲ್ಲದೆ, ಕೆಲವೊಂದು ಭೂಪ್ರದೇಶಗಳಲ್ಲಿ ಮಾತ್ರ ಕಾಣ ಸಿಗುವ ಹಳದಿ ಜ್ವರ (Yellow Fever), ಜಾಪನೀಸ್ ಎನ್ಸೆಫಲೈಟಿಸ್, ಮಂಗನ ಕಾಹಿಲೆ ಇತ್ಯಾದಿಗಳ ವಿರುದ್ಧವೂ ಲಸಿಕೆಗಳಿಂದ ಪ್ರಯೋಜನಗಳಾಗಿವೆ.

ಇನ್ನುಳಿದ ಲಸಿಕೆಗಳ ಪ್ರಯೋಜನಗಳ ಬಗ್ಗೆ ಹಾಗೂ ನಮ್ಮ ದೇಶದಲ್ಲಿ ಅವುಗಳ ಅಗತ್ಯದ ನನಗೂ ಸಂದೇಹಗಳಿವೆ.

ಹೆಪಟೈಟಿಸ್ ಬಿ ಸೋಂಕು ರಕ್ತದ ಸಂಪರ್ಕದಿಂದಷ್ಟೇ ಹರಡುವುದಿದ್ದು, ಸರಳ ಸಂಪರ್ಕದಿಂದ ಸುಲಭವಾಗಿ ಹರಡುವುದಿಲ್ಲ.[5,6] (ಈ ಬಗ್ಗೆ ಲಸಿಕೆ ತಯಾರಕರ ವ್ಯತಿರಿಕ್ತವಾದ ಮಾಹಿತಿ ಇಲ್ಲಿದೆ [7]) ನಮ್ಮ ದೇಶದಲ್ಲಿ ಶೇ. ೨.೪ ರಷ್ಟು ಜನ ಹೆಪಟೈಟಿಸ್ ಬಿ ಉಳ್ಳವರಾಗಿದ್ದು,[8] ಅವರ ಜೊತೆ ರಕ್ತ ಸಂಪರ್ಕಕ್ಕೆ (ಚುಚ್ಚು ಸೂಜಿಗಳು, ಲೈಂಗಿಕ, ತಾಯಿಯಿಂದ ಮಗುವಿಗೆ) ಬರುವವರಿಗೆ ಅದು ಹರಡಬಹುದು. ಸಾಕಷ್ಟು ಮುನ್ನೆಚ್ಚರಿಕೆಯಿಂದ ಇದನ್ನೂ ತಡೆಯಲು ಸಾಧ್ಯವಿದೆ. ಒಂದು ವೇಳೆ ಹೆಪಟೈಟಿಸ್ ಬಿ ತಗಲಿದರೂ, ಶೇ. ೯೦ರಷ್ಟು ರೋಗಿಗಳು ತಂತಾನೇ ಗುಣ ಹೊಂದುತ್ತಾರೆ, ಇನ್ನುಳಿದವರಲ್ಲಿ ಸ್ವಲ್ಪಾಂಶ ರೋಗಿಗಳು ಕಾಲ ಕ್ರಮೇಣ ಯಕೃತ್ತಿನ ವೈಫಲ್ಯ ಯಾ ಕ್ಯಾನ್ಸರ್ ಗೆ ತುತ್ತಾಗಬಹುದು; ಇವರಲ್ಲೂ ಶೀಘ್ರ ರೋಗನಿದಾನದಿಂದ ಸೂಕ್ತ ಚಿಕಿತ್ಸೆಯನ್ನು ನೀಡಿದರೆ ಈ ಸಮಸ್ಯೆಗಳನ್ನು ತಡೆಯಬಹುದು. ಆದ್ದರಿಂದ, ಕುಟುಂಬದ ಸದಸ್ಯರಿಗೆ ಹೆಪಟೈಟಿಸ್ ಬಿ ಇದ್ದರೆ, ಅಥವಾ ಹೆಚ್ಚಾಗಿ ರಕ್ತದ ಸಂಪರ್ಕಕ್ಕೆ ಬರುವ ಸಾಧ್ಯತೆಗಳಿದ್ದರೆ (ವೈದ್ಯರು, ದಾದಿಯರು, ರಕ್ತನಿಧಿಯ ಸಿಬ್ಬಂದಿ, ಆಗಾಗ ರಕ್ತವನ್ನು ಪಡೆಯಬೇಕಾದ ಕಾಹಿಲೆಗಳಿರುವವರು, ಡಯಾಲಿಸಿಸ್ ಗೆ ಒಳಗಾಗುವವರು ಇತ್ಯಾದಿ) ಹೆಪಟೈಟಿಸ್ ಬಿ ಲಸಿಕೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಕೆಪ್ಪಟೆ (Mumps), ದಡಾರ (Measles) ಮತ್ತು ಅಂತಹದೇ ಆದ ರುಬೆಲ್ಲಾ ಸೋಂಕುಗಳು ತನ್ನಿಂತಾನಾಗಿ ವಾರದೊಳಗೆ ಗುಣ ಹೊಂದುತ್ತವೆಯಾದ್ದರಿಂದ ಅವುಗಳ ವಿರುದ್ಧ ಲಸಿಕೆಯನ್ನು ಹಾಕಿಕೊಳ್ಳದಿದ್ದರೆ ಮಾರಣಾಂತಿಕವಾದ ಸಮಸ್ಯೆಗಳೇನೂ ಉಂಟಾಗವು. ಇವುಗಳ ವಿರುದ್ಧದ MMR ಲಸಿಕೆಯ ಬಗ್ಗೆಯೇ ಅತಿ ಹೆಚ್ಚು ವಿವಾದಗಳೂ ಎದ್ದಿವೆ.

ಇನ್ನು ಕೋಟಲೆ (Chicken pox), ಹೆಪಟೈಟಿಸ್ ಎ ಇತ್ಯಾದಿ ಲಸಿಕೆಗಳು ವ್ಯಾಪಾರದ ಸರಕುಗಳಷ್ಟೆ ಎನ್ನಬಹುದು.

ಕೆಲವು ಆಕರಗಳು

  1. http://www.phac-aspc.gc.ca/publicat/cig-gci/p01-02-eng.php 
  2. http://www.registerguard.com/csp/cms/sites/web/opinion/7335697-47/story.csp
  3. http://www.icddrb.org/pub/publication.jsp?classificationID=3&pubID=6526
  4. http://www.who.int/vaccine_safety/reports/june_2002/en/index.html
  5. http://www.hepb.org/hepb/transmission.htm
  6. http://www.cdc.gov/hepatitis/
  7. http://www.immunize.org/catg.d/p2100nrs.pdf
  8. http://medind.nic.in/ibv/t07/i9/ibvt07i9p663.pdf
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet