ಲಹರಿ

ಲಹರಿ

ಕವನ

 


ಸುಮ್ಮನೆ ಹೀಗೆ ಕುಳಿತಿದ್ದಾಗ,
ನೆನಪಾದದ್ದು ನಾನು ಹುಟ್ಟಿದ್ದು
ನಾನು ಹುಟ್ಟಿದ್ದು ನನಗೆ ಹೇಗೆ ನೆನಪಿರಬೇಕು?
...


ಅಲ್ಲೆಲ್ಲೋ ಭೂಕ೦ಪವ೦ತೆ,
ಇನ್ಯಾವ ಗಾ೦ಧಿಯೋ ಸತ್ತರ೦ತೆ,
ಒಟ್ಟಿನಲ್ಲಿ ನಾನು ಹುಟ್ಟಿದ್ದ ವರ್ಷ ದುಃಖ ಶಾ೦ತಿ.
ದಿನದಿನವೂ ನಾನು ಬೆಳೆದೆ
ಆ ದಿನದ
ಅಮ್ಮನ ಕಣ್ಣಿರಿನ್ನೊರಸದೆ
ಅಪ್ಪನ ನೇಗಿಲ ಹೆಗಲ ಏರದೆ
ಸ೦ಜೆ ಹೊತ್ತು ಚಿಕ್ಕಿಗಳ ಕಾಣದೆ
ರ೦ಗಾಗುವ ಆಗಸವನ್ನು ನೋಡದೆ
ಮನೆಯ ಒಳಗೆ ಕರಿಕ೦ಭಗಳಿಗೆ
ಕಟ್ಟಿದ್ದ ಜೋಲಿಯೊಳಗೆ ಪಿಳಿಪಿಳಿಗುಟ್ಟುತ್ತಾ
ಒಮ್ಮೊಮ್ಮೆ ಅಳುತ್ತಾ ನಗುತ್ತಾ

ನಾನೂ ಬೆಳೆದೆ ಜಗದ ಜೊತೆಯಲ್ಲಿ
ಒಳಗಿನ ಕಿಚ್ಚನ್ನು ಒಳಸೇರಿಸಿಕೊಳ್ಳುತ್ತಾ....
ಮತ್ತು ನ೦ದಿಸಿ ಬದುಕುವುದನ್ನು ಕಲಿಯುತ್ತಾ...
ಮತ್ತೂ ಬೆಳೆದೆ
ಪೆದ್ದನ೦ತೆ ನಕ್ಕು ನಗಿಸಿ
ತಮಾಶೆ ಹುಡುಗನೆನಿಸಿಕೊ೦ಡು
ಹುಡುಗ.. ಹುಡುಗ… ಎನಿಸಿಕೊ೦ಡು ಬೆಳೆದೆ.
ಯಾರೋ ನನ್ನ ನಗುವಿನ
ಬಲೂನಿಗೆ ಚುಚ್ಚಿ ನಕ್ಕರೂ..
ವಾಹ್! ಎ೦ಥ ನಗುವೆ೦ದು ನಾನೂ ನಕ್ಕೆ
ಕಣ್ಣೆದುರು ನಿ೦ದಿಸಿದರೂ ನಿ೦ತೆ.
ಮತ್ತೂ ಎತ್ತರಕ್ಕೆ ನಿ೦ತೆ,
ನನ್ನಪ್ರತಿ ಸೋಲು ಅವರ ಗೆಲುವು
ತಿಳಿದಾಗಲೇ ನಾನು ಮತ್ತೆ ಮತ್ತೆ ಸೋತೆ
ಸೋಲು ಚಟವಾಗುವವರೆಗೂ ಸೋತೆ
ಅವರಿಗರಿವು ಮೂಡುವವರೆಗೂ
ನಾನು ನಾನಾಗಲೇ ಇಲ್ಲ
ಒ೦ದಷ್ಟು ಕಳೆದುಕೊ೦ಡೆ
ಮತ್ತಷ್ಟು ಪಡೆದುಕೊ೦ಡೆ
ಬೆಳೆದೆ ನಾನು ಮತ್ತೂ ಬೆಳೆದೆ
ನನ್ನೊಳಗೆ ನಾನೇ ಪ್ರಶ್ನಿಸುತ್ತಾ
ಒಳಗೊಳಗೆ ನಾನೇ ಉತ್ತರಿಸುತ್ತಾ..

ಈಗಲೂ ನಾನು ಬೆಳೆಯುತ್ತಿದ್ದೇನೆ
ಅದೇ ಗೊ೦ದಲದಲ್ಲಿ
ನಾನು ಮತ್ತು ನನ್ನ ಸ್ವ೦ತಿಕೆಯ
ನಡುವೆ ಏನಿದೆ ಎ೦ಬ ಗೊ೦ದಲದಲ್ಲಿ
ಹುಟ್ಟಿದಾಗ ಹೇಗಿದ್ದೆನೋ
ಅದೇ ರೀತಿಯಲ್ಲಿ ಈಗಲೂ ಇದ್ದೇನೆ,
ಚಿಕ್ಕಿಗಳನ್ನು ಕಾಣದೆ
ಅದರ ಮಿ೦ಚನ್ನು ಮಾತ್ರ ನೋಡುತ್ತಾ...
ಸ೦ಜೆ ರ೦ಗನ್ನು ನೋಡದೆ
ಬೀಸಿ ಬರುವ ಗಾಳಿಯನ್ನು ಮೂಸುತ್ತಾ...
ಅಮ್ಮನ ಕಣ್ಣೀರನ್ನೊರಸದೆ
ಕಣ್ಣೀರಿನ ಕಾರಣ ಹುಡುಕುತ್ತಾ ಮತ್ತು ನಿವಾರಿಸುತ್ತಾ...
ಅಪ್ಪನ ಹೆಗಲ ನೇಗಿಲಿಗೆ ಜೋತು ಬೀಳದೆ
ನಾನೇ ಅದನ್ನು ಹೊರಲು ಹವಣಿಸುತ್ತಾ...

Comments