ಲಹರಿ ಹಚ್ಚಿದ ಕನ್ನಡದ ದೀಪ

ಲಹರಿ ಹಚ್ಚಿದ ಕನ್ನಡದ ದೀಪ

ಬೆಳಗಾವಿಯಲ್ಲಿ ಈ ಬಾರಿ ನಡೆಯುತ್ತಿರುವ ಎರಡನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಲಹರಿ ರೆಕಾರ್ಡಿಂಗ್ ಸಂಸ್ಥೆ ಕನ್ನಡದ ದೀಪ ಹಚ್ಚಲಿದೆ. ಹಾಗೆಂದು ಒಮ್ಮೆ ಹಚ್ಚಿ ಆರಿ ಹೋಗುವ ದೀಪವಲ್ಲ ಇದು, ಉರಿಯುತ್ತಲೇ ಇರುವ ದೀಪ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಲಹರಿ ಸಂಸ್ಥೆ ಈ ಬಾರಿ ‘ಹಚ್ಚೇವು ಕನ್ನಡದ ದೀಪ’ ಎಂಬ 3000 ಹಾಡುಗಳ ಬೃಹತ್ ಗೀತಗುಚ್ಚವನ್ನೇ ಹೊರತಂದಿದೆ.

ಇದರಲ್ಲಿ ಪ್ರಸಿಧ್ದ ಕವಿಗಳಾದ ಕುವೆಂಪು, ದ.ರಾ.ಬೇಂದ್ರೆ, ಡಿ.ವಿ.ಜಿ., ಪು.ತಿ.ನ, ಜಿ.ಪಿ.ರಾಜರತ್ನಂ, ಎಂ.ಗೋಪಾಲಕೃಷ್ಣ ಅಡಿಗ, ಕೆ.ಎಸ್.ನರಸಿಂಹಸ್ವಾಮಿ, ಕೆ.ಎಸ್.ನಿಸಾರ್ ಅಹಮದ್, ಜಿ.ಎಸ್.ಶಿವರುದ್ರಪ್ಪ, ಚೆನ್ನವೀರ ಕಣವಿ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ಡಾ.ಸಿದ್ಧಲಿಂಗಯ್ಯ, ದೊಡ್ಡರಂಗೇಗೌಡ ಮುಂತಾದವರ ಗೀತೆಗಳಿವೆ. ಜತೆಗೆ ದಾಸ ಸಾಹಿತ್ಯ, ವಚನ ಸಾಹಿತ್ಯ, ಭಾವಗೀತೆಗಳು, ರಂಗಗೀತೆಗಳು, ಮಂಕುತಿಮ್ಮನ ಕಗ್ಗ, ಜಾನಪದ ಗೀತೆಗಳು, ಕನ್ನಡ ಜನಪ್ರಿಯ ಚಿತ್ರಗೀತೆಗಳು ಮತ್ತು ಕನ್ನಡ ಸಾಹಿತ್ಯ ಚರಿತ್ರೆ ಸೇರಿದಂತೆ ಒಟ್ಟೂ 3000 ಹಾಡುಗಳಿವೆ.

ಇವುಗಳನ್ನು ಜನಪ್ರಿಯ ಗಾಯಕ-ಗಾಯಕಿಯರಾದ ಪಿ.ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಡಾ.ರಾಜ್‌ಕುಮಾರ್, ಪಂ.ಬಸವರಾಜ ರಾಜಗುರು, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಶಿವಮೊಗ್ಗ ಸುಬ್ಬಣ್ಣ, ಸಿ.ಅಶ್ವತ್ಥ್, ವೈ.ಕೆ.ಮುದ್ದುಕೃಷ್ಣ, ರತ್ನಮಾಲ ಪ್ರಕಾಶ್, ಬಿ.ಕೆ.ಸುಮಿತ್ರ, ಮಂಜುಳಾ ಗುರುರಾಜ್, ಬಿ.ಆರ್.ಛಾಯಾ, ಅರ್ಚನಾ ಉಡುಪ, ಅಪ್ಪಗೆರೆ ತಿಮ್ಮರಾಜು, ಪಿಚ್ಚಳ್ಳಿ ಶ್ರೀನಿವಾಸ್, ಮುಂತಾದವರು ಹಾಡಿದ್ದಾರೆ.

ಹೊಸ ಕಲಾವಿದರಿಗೆ ಪ್ರೋತ್ಸಾಹ ನೀಡುವುದರಲ್ಲಿ ಲಹರಿ ರೆಕಾರ್ಡಿಂಗ್ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ. ಈ ಬೃಹತ್ ಗೀತಗುಚ್ಚ ಕೂಡಾ ಅದಕ್ಕೆ ಹೊರತಲ್ಲ. ಉದಾಹರಣೆಗೆ ‘ಹಚ್ಚೇವು ಕನ್ನಡದ ದೀಪ’ ಸರಣಿಯ 20 ನೆ ಸಿ.ಡಿ. ದಾಸರ ಪದಗಳದ್ದು. ಇದರಲ್ಲಿ ರತ್ನಮಾಲ ಪ್ರಕಾಶ್, ಟಿ.ಎಸ್.ಸತ್ಯವತಿ, ಬಿ.ಕೆ.ಸುಮಿತ್ರ, ಉಸ್ತಾದ್ ಫಯಾಜ್ ಖಾನ್, ಪಂ.ನಾಗರಾಜ್ ಹವಾಲ್ದಾರ್, ಶ್ರೀಕಾಂತ್ ಕುಲಕರ್ಣಿ, ಮಂಜುಳಾ ಗುರುರಾಜ್, ಅರ್ಚನಾ ಉಡುಪ, ಎಂ.ಡಿ.ಪಲ್ಲವಿ, ಪುತ್ತೂರು ನರಸಿಂಹ ನಾಯಕ್, ಯಶವಂತ ಹಳಿಬಂಡಿ, ವೈ.ಕೆ.ಮುದ್ದುಕೃಷ್ಣ, ಮುದ್ದುಮೋಹನ್, ಶಂಕರ್ ಶಾನುಭಾಗ್ ಹೀಗೆ ಘಟಾನುಘಟಿಗಳ ಜೊತೆಗೆ ಶ್ರುತಿ, ಸಹನಾ, ನಂದಿನಿ, ಶಶಿಧರ್, ರಾಮಾ, ದಾಕ್ಷಾಯಿಣಿ ಹೀಗೆ ಹಲವಾರು ಹೊಸ ಕಂಠಗಳಿಗೆ ಇಲ್ಲಿ ಹಾಡುವ ಅವಕಾಶ ದೊರೆತಿದೆ.

50 ಸಿ.ಡಿ.ಗಳಲ್ಲಿ ಹರಡಿಕೊಂಡಿರುವ 3000 ಹಾಡುಗಳ ಈ ಬೃಹತ್ ಗೀತಗುಚ್ಚದ ಬೆಲೆ 2999 ರೂಪಾಯಿ. ಅಂದರೆ ಒಂದು ಹಾಡಿಗೆ 1 ರೂಪಾಯಿ ಕೊಟ್ಟಂತೆ. ಸಂಗೀತ ಮತ್ತು ಸಾಹಿತ್ಯ ಪ್ರಿಯರಿಗೆ ವಿಶ್ವ ಕನ್ನಡ ಸಮ್ಮೇಳನದ ಪ್ರಯುಕ್ತ ನೀಡುತ್ತಿರುವ ವಿಶೇಷ ಕಾಣಿಕೆ ಎಂಬುದು ಲಹರಿ ವೇಲು ಅವರ ಅಭಿಮತ. ಇವು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಲಭ್ಯ.

ಇದರ ಜೊತೆಗೆ ಲಹರಿಯ ಮತ್ತೊಂದು ಹೊಸ ಹೆಜ್ಜೆ ಆಡಿಯೋ ಪುಸ್ತಕಗಳು. ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ‘ಸುಬ್ಬಣ್ಣ ಮತ್ತು ಆಯ್ದ ಸಣ್ಣಕಥೆಗಳು’, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ, ಚಿಂತಕಡಾ.ಯು.ಆರ್.ಅನಂತಮೂರ್ತಿ ಅವರ ಪ್ರಸಿದ್ಧ ಕಾದಂಬರಿ ‘ಸಂಸ್ಕಾರ’, ಕನ್ನಡದ ಇನ್ನೊಬ್ಬ ಖ್ಯಾತ ಕಾದಂಬರಿಕಾರಡಾ.ಎಸ್.ಎಲ್.ಭೈರಪ್ಪ ಅವರ ‘ಧರ್ಮಶ್ರೀ’, ಜನಪದ ಸೊಗಡಿನ ಕವಿ, ನಾಟಕಕಾರ, ಕಾದಂಬರಿಕಾರ ಡಾ.ಚಂದ್ರಶೇಖರ ಕಂಬಾರ ಅವರ ‘ಸಿಂಗಾರೆವ್ವ ಮತ್ತು ಅರಮನೆ’, ಸುಧಾಮೂರ್ತಿ ಅವರ ‘ಮನದ ಮಾತು’ ಇವನ್ನು ಲಹರಿ ರೆಕಾರ್ಡಿಂಗ್ ಸಂಸ್ಥೆ ಆಡಿಯೋ ರೂಪದಲ್ಲಿ ಹೊರತಂದಿದೆ. ಇದನ್ನು ಖ್ಯಾತ ಚಿತ್ರನಟ, ರಂಗಕರ್ಮಿ ಸಿ.ಆರ್.ಸಿಂಹ, ಋತ್ವಿಕ್ ಸಿಂಹ, ಲಕ್ಷ್ಮಿ ಚಂದ್ರಶೇಖರ್ ಹಾಗೂ ಇತರ ಪ್ರಸಿದ್ಧ ಕಲಾವಿದರು ತಮ್ಮ ವಿಶಿಷ್ಟ ಧ್ವನಿಯಲ್ಲಿ ವಾಚಿಸಿದ್ದಾರೆ. ಪ್ರತಿ ಆಡಿಯೋ ಪುಸ್ತಕದ ಬೆಲೆ 125 ರೂಪಾಯಿ. ಓದಲು ಆಸಕ್ತಿಯುಳ್ಳ, ಆದರೆ ಓದಲು ಸಮಯವಿರದವರು ಈ ‘ಕೇಳು ಪುಸ್ತಕ’ ಕೊಂಡು ತಾವು ಹೋದೆಡೆಯಲ್ಲೆಲ್ಲ ಕೇಳಬಹುದು.

ಬೆಂಗಳೂರಿನಲ್ಲಿನ ಆಸಕ್ತರಿಗೆ ಈ ಗೀತಗುಚ್ಚ ಹಾಗೂ ಆಡಿಯೋ ಪುಸ್ತಕಗಳು ಬೇಕಾದಲ್ಲಿ ಸಂಪರ್ಕ: 22241044 , 22241306 , ಇನ್ನಷ್ಟು ಮಾಹಿತಿಗಳು ಬೇಕಿದ್ದಲ್ಲಿ ಖುದ್ದಾಗಿ ಸಂಪರ್ಕಿಸಿ: ಲಹರಿ ವೇಲು 94482 90122