ಲಾಂದ್ರಿಯಡಿಯ ಕಗ್ಗತ್ತಲಿನಲ್ಲಿ...! (ಭಾಗ 2)
ಭಾರಿ ಮಳೆಯ ನಡುವೆಯೂ ಅಷ್ವಗುಡ್ಡ ಏರಿದ್ದ ಗಂಡಸರೂ, ಅಂಕುಡೊಂಕು ದಾರಿಯಿಂದ ಗುಡ್ಡಯಿಳಿದು ಬಂದು ಊರು ಸೇರಿದರು. ಕೆಲವರ ಕೈ ದೀವಿಗೆಗಳು ಮಳೆಯಿಂದ ಆರಿದು ಹೋಗಿತ್ತು. ತಮ್ಮ ತಮ್ಮ ಮನೆಗಳಲ್ಲಿ ಹೆಂಗಸರು ಸುಮ್ಮನೆ ಮಬ್ಬಾದ ಬೆಳಕಿನಲ್ಲಿ ಆಕಳಿಸುತ್ತ, ಗಂಡಸರ ಆಗಮನವನ್ನು ಕಾಯುತ್ತ ಸಮಯ ಕಳೆದರು. ಮಕ್ಕಳು ಮತ್ತು ವೃದ್ಧರು ತಮ್ಮ ತಮ್ಮ ಕೋಣೆಯೊಳಗೆ ತಲೆಯವರೆಗೆ ಕಂಬಳಿಯೆಳೆದು ಗಾಢನಿದ್ದೆ ಮಲಗಿದರು. ಗಂಡಸರೆಲ್ಲರು ಅವಸರದಿಂದ ಒಂದೆಡೆ ಸೇರಿ ಸಂಕ್ಷಿಪ್ತವಾಗಿ ಮಾತುಕತೆ ನಡೆಸಿ, ಊರಿಗೆ ಗಸ್ತು ತಿರುಗಲು ತೀರ್ಮಾನಿಸಿದರು. ಯಾರಾದರೂ ಮದ್ಯ ಸೇವಿಸುವುದನ್ನು, ಜೂಜಾಟ ಆಡುವುದನ್ನು ಇತ್ಯಾದಿ ಪಾಪಗಳು ಮಾಡುವುದನ್ನು ಕಂಡರೆ ಅವನನ್ನು ಶಿಕ್ಷಿಸುವುದೆಂದು ನಿರ್ಧರಿಸಿದರು. ಆ ಪಾಪಿಷ್ಟನ ಪಾತಿತ್ಯದಿಂದ ಸೃಷ್ಟಿಕರ್ತನಿಂದ ಕೃಪೆಯಾಗಿ ವರ್ಷಿಸುವ ವೃಷ್ಟಿಯೂ ಶಾಪವಾಗಿ ಇಡೀ ಹಳ್ಳಿಯನ್ನೇ ಜಲಸಮಾಧಿ ಮಾಡುತ್ತಿತ್ತು.
* * * * *
"...ಈ ಕಿರುಕುಳಗಳಿಗೆ ಕೊನೆ ಎಲ್ಲಿ? ಪ್ರತಿದಿನ ನನ್ನ ಸಹೋದರಿಯರು ತಮ್ಮ ಮೇಲೆ ನಡೆಯುತ್ತಿರುವ ಅಮಾನುಷ್ಯ ದೌರ್ಜನ್ಯಗಳನ್ನು ಅಸಹಾಯಕರಾಗಿ ಕಣ್ಣೀರಿಡುತ್ತ ಸಹಿಸಿಕೊಳ್ಳುತ್ತಿರುವುದನ್ನು ನಾನು ಕಟುವಾಗಿ ಖಂಡಿಸುತ್ತೇನೆ.
ಎದ್ದೇಳಿ ಸಹೋದರಿಯರೇ...! ಇದು ಇಪ್ಪತ್ತೊಂದನೆಯ ಶತಮಾನ! ಹೆಣ್ಣು ಜಗದ ಕಣ್ಣೆಂದು ಅರಿಯುವ ಕಾಲ... ಯಾವ ಸಮಾಜದಲ್ಲಿ ಮಹಿಳೆಯರಿಗೆ ಸುರಕ್ಷತೆ ಇರುವುದಿಲ್ಲ, ಆ ಸಮಾಜ ಭಯಾನಕ ದುರ್ದೆಶೆಗಳ ಸಾಕ್ಷಿಯಾಗುತ್ತೆ. ಸಫಲತೆಯನ್ನು ಅರಸುವವನು ಮಹಿಳೆಯರನ್ನು ಸರ್ವದಾ ಗೌರವಿಸಲೇ ಬೇಕು ಎಂದು ಮನುಸ್ಮ್ರಿತಿಯ ಮೂರನೇ ಅಧ್ಯಾಯನದ ಐವತ್ತೊಂಬತ್ತನೆಯ ಶ್ಲೋಕದಲ್ಲಿ ಉಪದೇಶಿಸಲಾಗಿದೆ. ಹಾಗಾಗಿ, ಇಂದು ನಾನು ನಿಮ್ಮೆಲ್ಲರ ಬೆಂಬಲದೊಂದಿಗೆ ಮಹಿಳಾ ಸುರಕ್ಷತೆಗಾಗಿ-ಅಭಿವೃದ್ಧಿಗಾಗಿ ಒಂದು ಕ್ರಾಂತಿಕಾರಿ ಸಂಘಟನೆಗೆ ನಾಂದಿ ಹಾಡುತ್ತೇನೆ. ಈ ದೇಶದ ತಾಯಿಯರ ಆಶೀರ್ವಾದಗಳೊಂದಿಗೆ National Women's Brigadier ಅನ್ನು ಮುಂದುವರಿಸುತ್ತೇನೆ" ಎಂದು, ವೇದಿಕೆಯ ಉನ್ನತಪೀಠದ ಮೇಲೆ ನಿಂತು ಸಂಘಟನೆಯ ಪತಾಕೆಯನ್ನು ಬೀಸಿ, ಶೇಷಾದ್ರಿ ಸಂಘವನ್ನು ಸ್ಥಾಪಿಸಿದನು. ಸಮಾವೇಶಕ್ಕಾಗಿ ನೆರೆದಿದ್ದ ಜನಸ್ತೋಮ, ಒಮ್ಮೆಗೆ, "ಅಧ್ಯಕ್ಷ ಶೇಷಾದ್ರಿಗೆ ಜಯವಾಗಲಿ!" ಎಂದು, ಪರ್ವತಗಳೆರಡು ರಭಸದಿಂದ ಅಪ್ಪಳಿಸಿದಂತೆ ಗಟ್ಟಿ ಸ್ವರದಲ್ಲಿ ಜೈಕಾರ ಕೂಗಿದರು.
ನಂತರ ಕೆಲವು ಸ್ತ್ರೀವಾದ ಸಿದ್ಧಾಂತವನ್ನು ಪ್ರತಿಪಾದಿಸುವವರು ಸಾಲಾಗಿ ಒಬ್ಬರ ನಂತರ ಇನ್ನೊಬರು ಬಂದು ಸಭೆಯನ್ನುದ್ದೇಶಿಸಿ ಕ್ರಾಂತಿಕಾರಕ ಭಾಷಣಗಳನ್ನು ಆಡಿ ಸಮಾವೇಶಕ್ಕಾಗಿ ನೆರೆದಿದ್ದ ಜನಸಾಗರದ ರಕ್ತವನ್ನು ಕುದಿಸಿದರು. ದೂರದ ಊರಿನಿಂದ ಬಂದ ಕವಿಯೊಬ್ಬರು, ಮಹಿಳಾ ಸಬಲೀಕರಣವನ್ನು ಎತ್ತಿ ಹಿಡಿಯುವ ವಿಚಾರ ಸಾಲುಗಳನ್ನು ಕಾವ್ಯಾತ್ಮಕವಾಗಿ ಹಾಡಿ ಜನಸ್ತೋಮವನ್ನು ಮಂತ್ರಮುಗ್ಧಗೊಳಿಸಿದರು.
ಒಟ್ಟಾರೆ, ಪ್ರತಿ ಭಾಷಣದಲ್ಲಿ ಕೇಳಲು ಸಿಕ್ಕಿದ ಒಂದೇ ಅಂಶ; ದೌರ್ಜನ್ಯವೆಸಗುವವರ ನಿಂದನೆ, ಸಂತ್ರಸ್ತರ ಸ್ಪಂದನೆ ಹಾಗು ಶೇಷಾದ್ರಿ ಪುಣ್ಯಾತ್ಮನ ಶ್ಲಾಘನೆ! ಸಮಾವೇಶದ ಸಮಾರೋಪಕ್ಕೆ ನೆರೆದ ಜನಸಾಗರ ಸ್ಥಾಪಕಾಧ್ಯಕ್ಷನ ಅಜ್ಞೆಯಂತೆ, ಎದೆಯ ಮೇಲೆ ಕೈಯಿಟ್ಟು ದೇವರ ಸಾಕ್ಷಿಗೆ ಮಣಿದು, ಅಧ್ಯಕ್ಷ ಉದ್ಗರಿಸಿದ ಮಾತುಗಳನ್ನು ಪುನರುಚ್ಚರಿಸಿ, ತಾವು ದೌರ್ಜನ್ಯಗಳ ವಿರುದ್ಧ ನಿಸ್ವಾರ್ಥ ಭಾವದಿಂದ ಸಂವಿಧಾನ್ಮಕ ಹೋರಾಟ ನಡೆಸುವೆವು ಹಾಗು ಮಹಿಳೆಯರನ್ನು ತಾಯಿ- ಸಹೋದರಿಯರಂತೆ ಗೌರವಿಸುವೆವು ಎಂದು ಪ್ರತಿಜ್ಞೆಗೈದರು.
ಅಂದಿನಿಂದ ಒಂದು ಕ್ರಾಂತಿಕಾರಿ ಸಂಘಟನೆಯಾದ ನ್ಯಾಷನಲ್ ವಿಮೆನ್ಸ್ ಬ್ರಿಗೇಡಿಯರ್ ಹೊಸ ಚೈತನ್ಯದೊಂದಿಗೆ ಕಾರ್ಯಶೀಲವಾಯಿತು. ಮಹಿಳಾ ಸಬಲೀಕರಣದ ಆಶಾಕಿರಣವಾಗಿ ರೂಪುಗೊಂಡಿದ್ದ ಸಂಘದ ಸ್ಥಾಪಕಾಧ್ಯಕ್ಷರಾದ ಶೇಷಾದ್ರಿ ಸಂಘವನ್ನು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸುವ ಕುರಿತು ಚಿಂತಿಸುತ್ತಿದ್ದರು. ವಿಧವೆಯರಲ್ಲಿ ಹೊಲಿಗೆ ಯಂತ್ರ ವಿಸ್ತರಿಸುವುದು, ಪ್ರಾಯಕ್ಕೆ ಬಂದ ಯುವತಿಯರಿಗೆ ಕಂಕಣ ಭಾಗ್ಯ ಒದಗಿಸುವುದು, ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸುವುದು, ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವುದು, ಅಪರಾಧಿಗಳ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸುವುದು, ಸಂಘದ ಸ್ವಯಂಸೇವಕಿಯರಿಗೆ ಆತ್ಮರಕ್ಷಣಾ ಕಲೆಯನ್ನು ಕಲಿಸುವುದು ಇತ್ಯಾದಿ ಸ್ತುತ್ಯ ಕಾರ್ಯಗಳಿಂದ ಸಂಘ ಜನಮೆಚ್ಚುಗೆಗೆ ಪಾತ್ರವಾಯಿತು. ಬೆಂಗಳೂರನ್ನು ಕೇಂದ್ರೀಕರಿಸಿ ರಾಜ್ಯಾದ್ಯಂತ ಕಾರ್ಯಯೋಜನೆಯನ್ನು ರೂಪಿಸಿ ತೊಡಗಿತು. ವರ್ಷದೊಳಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸಂಘದ ಘಟಕವನ್ನು ಉದ್ಘಾಟಿಸಲು ಪ್ರಾರಂಭಿಸಿದರು.
* * * * *
ಗಂಡಸರು ಹಳ್ಳಿಯಲ್ಲಿ ಗಸ್ತು ತಿರುಗುತ್ತಿರುವಾಗ ಮಧ್ಯ ವಯಸ್ಸಿನ ಬೃಹದ್ದೇಹಿ ಭೀಮಣ್ಣ, ಅಬು ಬ್ಯಾರಿಯವರ ಹೋಟೆಲಿನ ಜಗುಲಿಯ ಮೇಲೆ ತರುಣಿಯೊಬ್ಬಳು, ಮೈ ಮೇಲೆ ಕಂಬಳಿ ಎಳೆದು ಬಿಕ್ಕಿ ಬಿಕ್ಕಿ ಅಳುತ್ತ ಕುಳಿತಿರುವುದನ್ನು ಕಂಡು ಹೌಹಾರಿದನು. ಅಮವಾಸ್ಯೆಯ ರಾತ್ರಿಗಳಲ್ಲಿ ಯಕ್ಷಿಣಿಯೊಬ್ಬಳು ಅರಣ್ಯದಿಂದ ಹೊರ ಬಂದು ಊರಿನ ಸುತ್ತ ಅಳುತ್ತ ತಿರುಗುವುದರಲ್ಲಿ ಅಸಹಜವೇನಿರಲಿಲ್ಲ. ಹಿಂದೆ ಕೆಲವರು ಆ ಯಕ್ಷಿಣಿಯನ್ನು ಕಂಡು ವರ್ಷಗಟ್ಟಲೆ ಅದರ ದೋಷದಿಂದ ನರಳಿದ ಘಟನೆಗಳನ್ನು ನೆನಪಿಸಿ, ಭೀಮಣ್ಣ ಬೇಗ ಬೇಗ ತನ್ನ ಮನೆಯತ್ತ ಹೆಜ್ಜೆಯಿಟ್ಟನು. ದಾರಿಯಲ್ಲಿ ರಾಜೇಶನನ್ನು ಕಂಡು,
"ಎಲ್ಲಿಗೆ ಪಯಣ ಬೆಳೆಸಿದೆ ನಾವುಕ? ಮುಂದಿರುವುದು ದಡವಲ್ಲ, ಮೃತ್ಯುಗುಂಡಿ!" ಎಂದು ಭೀಮಣ್ಣ ರಾಜೇಶನಿಗೆ ಎಚ್ಚರಿಸಿದನು.
"ಶೇಷಾದ್ರಿಯಣ್ಣನಿಗೆ ಸಹಿಸಲಾಗದ ತಲೆನೋವು ಶುರು ಆಯ್ತಂತ ಔಷಧಿ ತರಲು ನಾಟಿ ವೈದ್ಯ ಆಚಾರ್ಯರಲ್ಲಿ ಹೋಗಿದ್ದೆ"
"ಶೇಷಾದ್ರಿಯಣ್ಣ ಊರಿಗೆ ಬಂದಿದ್ದಾನೆಯೇ?"
"ಹೌದು. ನಾಳೆಯ ಕಾರ್ಯಕ್ರಮಕ್ಕಾಗಿ ನಿನ್ನೆ ಬಂದು ನಮ್ಮ ಮನೆಯಲ್ಲಿ ತಂಗಿದ್ದನು. ಗಾಢ ನಿದ್ರಾವಶನಾದವನು ತೀಕ್ಷ್ಣ ತಲೆನೋವಿನಿಂದ ಥಟ್ಟನೆ ನಿದ್ರೆಯಿಂದ ಎದ್ದು ನರಳಾರಂಭಿಸಿದನು. ಅಣ್ಣನ ನರಳು ನೋಡಲಾಗದೆ, ಆಚಾರ್ಯರ ಮನೆಗೆ ಹೋಗಿದ್ದೆ"
"ಆಯ್ತು. ಬೇಗ ಮನೆಗೆ ಹೋಗು. ಆಗ ಕಿರ‍್ರೆರ‍್ರೆಂದು ಕಿರುಚಾಡಿದ ಹೆಣ್ಣಿನ ಕೂಗನ್ನು ಕೇಳಿದ್ದೀಯಾ?"
"ಹೌದು. ಏನದು?"
"ಅದು ಯಕ್ಷಿಣಿಯ ಕೂಗು! ಇಂದು ಕೆಡುಕಿನ ಮೌನಿ ಅಮಾವಾಸ್ಯೆ ಅಲ್ವ? ಕಾಡಿನಿಂದ ಯಕ್ಷಿಣಿ ಬಂದಿದ್ದಾಳೆ. ಅವಳನ್ನು ಈಗಷ್ಟೇ ನಾನು ಅಬು ಬ್ಯಾರಿಯವರ ಹೋಟೆಲಿನ ಜಗುಲಿಯ ಮೇಲೆ ನೋಡಿದ್ದೆ. ನಂತರ, ಅವಳು ಅಲ್ಲಿಂದ ಎದ್ದು ಹೋಗಿ ಸಮುದ್ರದಲ್ಲಿ ಹಾರಿದಳು" ಎನ್ನುತ್ತಿರುವಾಗ ಭೀಮಣ್ಣನ ದಷ್ಟಪುಷ್ಟ ಮೈ ದಿಗಿಲುಗೊಂಡಿದ್ದರಿಂದ ಕಂಪಿಸಲಾರಂಭಿಸಿತು.
"ಹೌದಾ??"
"ದೇವರಾಣೆ! ಬೇಗ ಮನೆಗೆ ಹೋಗು. ಇಲ್ಲದಿದ್ದರೆ ಫಜೀತಿಯಾಗಬಹುದು" ಎಂದು, ಭೀಮಣ್ಣ ಉಳಿದವರಲ್ಲಿ ಹೇಳಲು ಹೋದನು. ರಾಜೇಶ ತನ್ನ ಮನೆಯತ್ತ ಓಡಿದನು.
ಊರಿಗೆ ಯಕ್ಷಿಣಿಯ ಆಗಮನದ ಕುರಿತು ಭೀಮಣ್ಣನಿಂದ ಕೇಳಿ ಗಂಡಸರೆಲ್ಲರು ತಲ್ಲಣಗೊಂಡು ಲಗುಬಗೆಯಿಂದ ತಮ್ಮ ಮನೆಗಳತ್ತ ಓಡಿದರು. ಕೆಲವೇ ಕ್ಷಣದಲ್ಲಿ ಊರಿನಲ್ಲಿ ಶ್ಮಶಾನ ಮೌನ ಆವರಿಸಿತು. ಮಳೆಗಾಲದ ಕ್ರಿಮಿ-ಕೀಟಗಳು ನೀರವತೆಯನ್ನು ತನ್ನದಾಗಿಸಿದರು. ಕಡಲಿನ ಅಲೆಗಳೂ ಶಾಂತಿ ವಹಿಸಿ, ನಿಶ್ಶಬ್ಧತೆಯನ್ನು ಕಾಪಾಡಿತು.
(ಮುಂದುವರೆಯಲಿದೆ)
-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು