ಲಾಕ್ ಡೌನ್ ತೆರವಾದ ನಂತರ...

ಲಾಕ್ ಡೌನ್ ತೆರವಾದ ನಂತರ...

ಸಹಜವಾಗುತ್ತಿರುವ ಕೊರೋನಾ ಆತಂಕ, ಅಸಹಜವಾಗುತ್ತಿರುವ ಬದುಕಿನ ಪಯಣ. ಸಂಪೂರ್ಣ ವ್ಯಾಪಾರ ವಹಿವಾಟುಗಳು ಮುಕ್ತವಾದ ಬೆನ್ನಲ್ಲೇ ನಿಧಾನವಾಗಿ ಆರ್ಥಿಕ ಸಂಕಷ್ಟಗಳು ಭುಗಿಲೇಳುತ್ತಿವೆ. ಲಾಕ್ ಡೌನ್ ಇದ್ದ ಕಾರಣದಿಂದಾಗಿ ಅಷ್ಟಾಗಿ ಕಾಡದಿದ್ದ ಸಮಸ್ಯೆಗಳು ಈಗ ಮುನ್ನಲೆಗೆ ಬರುತ್ತಿದೆ.

ಸುಮಾರು 15 ತಿಂಗಳ ಕೋವಿಡ್ 19 ನಿಂದ ಪ್ರಾರಂಭದಲ್ಲಿ ರೈತರು ಹೆಚ್ಚು ಸಂಕಷ್ಟಕ್ಕೆ ಗುರಿಯಾದರು, ನಂತರ ವಲಸೆ ಕಾರ್ಮಿಕರು ಪಡಬಾರದ ಕಷ್ಟ ಪಟ್ಟರು. ಈಗ ಬಹುತೇಕ ಮಧ್ಯಮ ವರ್ಗದ ಜನ ನಿಧಾನವಾಗಿ ಕುಸಿಯುತ್ತಿದ್ದಾರೆ. ಸಾಲಗಳು ಇಲ್ಲದ ಶಿಸ್ತುಬದ್ಧ ಜೀವನ ಶೈಲಿಯ ಕುಟುಂಬ ಮತ್ತು ವ್ಯವಹಾರ ಮಾಡುತ್ತಿರುವವರಿಗೆ ಪರಿಸ್ಥಿತಿ ಅಷ್ಟೊಂದು ಹದಗೆಡುವುದಿಲ್ಲ. ಆದರೆ ಸಹಜ ಸ್ಥಿತಿಯಲ್ಲಿ ಮುಂದಿನ ದಿನಗಳ ಭರವಸೆ ಮತ್ತು ಮಹತ್ವಾಕಾಂಕ್ಷೆಯಿಂದ ಸಾಲದ ಕಂತುಗಳು ಮತ್ತು ಬಡ್ಡಿಗಳ ಮೇಲೆ ಜೀವನ ರೂಪಿಸಿಕೊಂಡಿರುವವರಿಗೆ ನರಕಯಾತನೆ ಪ್ರಾರಂಭವಾಗಿದೆ. ಉದ್ಯೋಗ ಕಳೆದುಕೊಂಡ ಕಾರಣದಿಂದಾಗಿ ದಿಕ್ಕೇ ತೋಚದಾಗಿದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಸಾಮಾನ್ಯವಾಗಿ ಖರ್ಚುಗಳು ಹೆಚ್ಚು ಕಡಿಮೆ ಅಷ್ಟೇ ಇರುತ್ತದೆ. ಬಾಡಿಗೆ, ಬಡ್ಡಿ, ವಿದ್ಯುತ್, ನೀರಿನ ಬಿಲ್, ಅವಶ್ಯಕ ವಸ್ತುಗಳು, ಶಾಲಾ ಶುಲ್ಕ, ಪೆಟ್ರೋಲ್, ಡೀಸೆಲ್, ಸಾರಿಗೆ, ವೈದ್ಯಕೀಯ, ಮೊಬೈಲ್ ಬಿಲ್ ಎಲ್ಲವೂ ಏರು ಮುಖವಾಗಿಯೇ ಇರುತ್ತದೆ. ಆದರೆ ಆದಾಯ ಮಾತ್ರ ಕಡಿಮೆಯಾಗತೊಡಗಿದೆ. ಎಲ್ಲವೂ ಸರಿ ಇದ್ದಾಗಲೇ ಬದುಕನ್ನು ಸರಿದೂಗಿಸುವುದು ಕಷ್ಟವಾಗಿತ್ತು. ಇನ್ನು ಕೆಲವು  ದಿನಗಳ ಗೃಹ ಬಂಧನದಿಂದ  ಸ್ವಲ್ಪ ಸ್ವಲ್ಪವೇ ಹೊರಬರುತ್ತಿರುವಾಗ ಎದುರಿಸಬೇಕಾದ ಸಮಸ್ಯೆಗಳ ಅಗಾಧತೆ ನೆನಪಾದರೆ ಭಯವಾಗುತ್ತದೆ.

ಈ ಆರ್ಥಿಕ ಮುಗ್ಗಟ್ಟು ಅನೇಕ ಸಂಬಂಧಗಳನ್ನು ಮುರಿದು ಹಾಕುವುದು, ಗಲಾಟೆ ಹೊಡೆದಾಟಗಳನ್ನು ಹುಟ್ಟುಹಾಕುವುದು ನಿಶ್ಚಿತ. ಮುಖ್ಯವಾಗಿ ಮನೆ ಮತ್ತು ಅಂಗಡಿಗಳ ಬಾಡಿಗೆ ಹಾಗು ಕೈ ಸಾಲ ಅತ್ಯಂತ ಕೆಟ್ಟ ಪರಿಸ್ಥಿತಿ ಉಂಟುಮಾಡುತ್ತದೆ. ಹೇಗೋ ಸಂಸಾರ ಸಾಗಿಸುತ್ತಿದ್ದ ಅನೇಕ ಕುಟುಂಬಗಳ ಹುಳುಕುಗಳು ಈಗ ಹೊರ ಬರುತ್ತಿದೆ.ಇದು ಪ್ರಾರಂಭಿಕ ಹಂತ ಮಾತ್ರ. ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಬರಲು ಸಾಕಷ್ಟು ಸಮಯ ಬೇಕಾಗುತ್ತದೆ. ಮುಂದೆ ಇನ್ನಷ್ಟು ಹಾನಿ ಖಚಿತ.

ಯಾರು ಉಳಿಯುವರೋ, ಯಾರು ಅಳಿಯುವರೋ ಹೇಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರಿಗೆ ಇದನ್ನು ಅರ್ಥಮಾಡಿಕೊಂಡು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಹಲವರಿಗೆ ಇದು ಅರ್ಥವಾಗುವುದಿಲ್ಲ ಅಥವಾ ಬೇಗ ಸರಿ ಹೋಗುವುದು ಎಂಬ ನಂಬಿಕೆ ಅಥವಾ ಅರ್ಥವಾದರು ಏನೂ ಮಾಡಲಾಗದ ಅಸಹಾಯಕತೆ. ದಿಢೀರನೇ ಬಂದಿರುವ ಈ ಪರಿಸ್ಥಿತಿ ಒಂದು ಅನುಭವ ನೀಡುತ್ತದೆ ನಿಜ. ಆದರೆ ಸದ್ಯ ಇದನ್ನು ಎದುರಿಸುವುದ ಹೇಗೆ?

ಎಲ್ಲಕ್ಕಿಂತ ಮುಖ್ಯ ನಮ್ಮ ಮುಂದಿನ ಬದುಕು ಹಿಂದಿನಂತೆ ಇರುವುದಿಲ್ಲ. ಈಗ ನಾವು ಕೆಳಕ್ಕೆ ಜಾರಿದ್ದೇವೆ. ಬದುಕನ್ನು ಹೊಸದಾಗಿ ಕಟ್ಟಬೇಕಾಗಿದೆ. ಈ ಸಮಯದಲ್ಲಿ ಸಾಕಷ್ಟು ಮಾನಸಿಕ ಹಿಂಸೆ ನಿಶ್ಚಿತ. ಅನೇಕ ನಿಂದನೆಗಳನ್ನು ಕೇಳಬೇಕಾಗಿ ಬರುತ್ತದೆ. ಅವಮಾನ ಸಹಿಸಬೇಕಾಗುತ್ತದೆ. ಇದು ಎರಡು ಮೂರು ವರ್ಷಗಳಷ್ಟು ದೀರ್ಘಕಾಲ ಇರಬಹುದು ಎಂದು ಮನಸ್ಸಿಗೆ ಒಪ್ಪಿಸಬೇಕು.  ಇದು ಕೇವಲ ನನ್ನೊಬ್ಬನದು ಮಾತ್ರವಲ್ಲ ಅಥವಾ ನನ್ನ ತಪ್ಪು ನಿರ್ಧಾರಗಳಿಂದ ಇದು‌ ಸಂಭವಿಸಿಲ್ಲ. ಇಡೀ‌ ದೇಶಕ್ಕೇ ಕಷ್ಟ ಕಾಲ. ಆದ್ದರಿಂದ ಇದು ಒಂದು ಪ್ರಾಕೃತಿಕ ವಿಕೋಪ. ಏನೂ ಮಾಡಲು ‌ಆಗುವುದಿಲ್ಲ ಎಂದು ನಮಗೆ ನಾವೇ ಸಮಾಧಾನ ಮಾಡಿಕೊಳ್ಳಬೇಕು.

ಜೀವನದಲ್ಲಿ ಮೊದಲ ಬಾರಿ ಬೇರೆಯವರ ಸಹಾಯ ಕೇಳಬೇಕಾಗಿ ಬರಬಹುದು, ಮೊದಲ ಬಾರಿ ಬೇರೆಯವರ ನಿಂದನೆಗೆ ಗುರಿಯಾಗಬಹುದು, ಮೊದಲ ಬಾರಿ ಪೋಲೀಸ್ ಮತ್ತು ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾದ ಸಂದರ್ಭ ಬರಬಹುದು, ಮೊದಲ ಬಾರಿ ನಾವು ಊಹಿಸದ ಕೆಳ ಹಂತದ ಕೆಲಸ ಮಾಡಬೇಕಾಗಿ ಬರಬಹುದು. ಇದು ಯಾವುದಕ್ಕೂ ವಿಚಲಿತರಾಗಬಾರದು. ಮೊದಲೇ ಇದಕ್ಕೆ ಸಿದ್ದರಾಗಬೇಕು.

ಇಂಗ್ಲೀಷ್ ಗಾದೆಯೊಂದು ನೆನಪಾಗುತ್ತಿದೆ. " ಕಷ್ಟಗಳನ್ನು ಸಹಿಸುವುದು ಅಭ್ಯಾಸ ಮಾಡಿಕೊಂಡರೆ ಕಷ್ಟಗಳು ಕಷ್ಟಗಳಾಗಿ ಉಳಿಯುವುದಿಲ್ಲ "  ನೋವಿನಲ್ಲಿ ನಲಿವು ಅಡಗಿರುತ್ತದೆ. ಅದನ್ನು ಹುಡುಕುವ ಅನಿವಾರ್ಯತೆ ಕೆಲವರಿಗೆ ಬಂದಿದೆ. ಮೇಲ್ನೋಟಕ್ಕೆ ಇದು ಗೋಚರಿಸುವುದಿಲ್ಲ.

ಮನೆಯ ಜವಾಬ್ದಾರಿ ಹೊತ್ತಿರುವವರಿಗೆ ಒಳ ಮನಸ್ಸಿನ ಆತಂಕ ತೊಳಲಾಟ ಒತ್ತಡ ಒಳಗೊಳಗೆ ಕೊರೆಯುತ್ತಿರುತ್ತದೆ. ಅವರ ಅವಲಂಬಿತರು ಇದನ್ನು ಅರ್ಥಮಾಡಿಕೊಂಡು ಸಹಕರಿಸಿದರೆ ಬದುಕು ಒಂದಷ್ಟು ಸಹನೀಯವಾಗುತ್ತದೆ. ಆ ಅದೃಷ್ಟ ಎಲ್ಲರಿಗೂ ಇರುವುದಿಲ್ಲ.

ಏನೇ ಆಗಲಿ ಈಗ ನಮ್ಮ ಕೆಲವರ ಜೀವನದ ಮೇಲೆ ಕಪ್ಪನೆಯ ದಟ್ಟ ಮೋಡ ಆವರಿಸಿದೆ. ಇದು ಚದುರಲೇ ಬೇಕು. ಅಲ್ಲಿಯವರೆಗೂ ತಾಳ್ಮೆಯಿಂದ, ದೃಢ ಮನಸ್ಸಿನಿಂದ, ಹೆಚ್ಚು ಯೋಚಿಸುವ, ಪರ್ಯಾಯ ಮಾರ್ಗಗಳನ್ನು ಹುಡುಕುವ, ಬಹಳ ಶ್ರಮ ಪಡುವ ಕಾಯಕದಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ. ಬಂದದ್ದೆಲ್ಲಾ ಬರಲಿ ಒಂದು ಕೈ ನೋಡೇ ಬಿಡೋಣ. ಕಷ್ಟಗಳನ್ನೇ ಹೆದರಿಸೋಣ ಮತ್ತು ಎದುರಿಸೋಣ.....

  • ಜ್ಞಾನ ಭಿಕ್ಷಾ ಪಾದಯಾತ್ರೆಯ 236 ನೆಯ ದಿನ ಚಿತ್ರದುರ್ಗ ಜಿಲ್ಲೆಯ ಸಾಣೇಕೆರೆ ಗ್ರಾಮದಿಂದ ಸುಮಾರು 28 ಕಿಲೋಮೀಟರ್ ದೂರದ ಹಿರಿಯೂರು ತಾಲ್ಲೂಕು ತಲುಪಿ ಅಲ್ಲಿ ವಾಸ್ತವ್ಯ ಹೂಡಿದ ಸಂದರ್ಭದಲ್ಲಿ ಬರೆದ ಲೇಖನ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ