ಲಾಕ್ ಡೌನ್ ಬದಲು ದೀರ್ಘಕಾಲೀನ ಪರಿಣಾಮಕಾರಿ ಶಿಸ್ತು ಇಂದಿನ ಅಗತ್ಯ

ಲಾಕ್ ಡೌನ್ ಬದಲು ದೀರ್ಘಕಾಲೀನ ಪರಿಣಾಮಕಾರಿ ಶಿಸ್ತು ಇಂದಿನ ಅಗತ್ಯ

ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ತಡೆಯುವ ನಿಟ್ಟಿನಲ್ಲಿ ಸಾಕಷ್ಟು ಸರ್ಕಸ್ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ. ದೇಸಿ ವಿಜ್ಞಾನಿಗಳ ಪರಿಶ್ರಮದ ಫಲವಾಗಿ ಲಸಿಕೆಗಳೂ ಸಿಕ್ಕು ದೇಶದ ಒಟ್ಟು ಜನಸಂಖ್ಯೆಯ ಶೇ.೯೦ ರಷ್ಟು ಅದನ್ನು ನೀಡಿದ್ದೂ ಆಗಿದೆ. ವಿಶ್ವ ಮಟ್ಟದಲ್ಲಿ ಇದು ಸಾಧನೆ. ಜನರ ಆರೋಗ್ಯವೃದ್ಧಿಯೊಂದಿಗೆ, ಜೀವ ರಕ್ಷಣೆಯ ಇಂಥ ಕ್ರಮಗಳು ಸಾರ್ವಕಾಲಿಕ ಶ್ರೇಷ್ಟ. ಈಗಾಗಲೆ ಬೃಹತ್ ಲಸಿಕಾ ಅಭಿಯಾನವು ಕೊನೆ ಹಂತಕ್ಕೆ ತಲುಪಿದ್ದು, ಸದ್ಯ ೧೫ ರಿಂದ ೧೮ರ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಜನರು ಇನ್ನು ಭಯವಿಲ್ಲ ಎಂದು ನಿಟ್ಟುಸಿರು ಬಿಟ್ಟು ನೆಮ್ಮದಿಯ ಬದುಕು ಕಟ್ಟಿಕೊಳ್ಳುವತ್ತ ಹೊರಟಿದ್ದಾಗಲೇ ಸಾಂಕ್ರಾಮಿಕದ ಮೂರನೇ ಅಲೆಯ ಭೀತಿ ಎಲ್ಲೆಡೆ ಮನೆ ಮಾಡಿದೆ. ಕೊರೊನಾಕ್ಕಿಂತಲೂ, ಸಂತಸದ ಬದುಕಿಗೆ ಕಂಟಕದ ಮಗ್ಗಲು ಮುಳ್ಳಾಗಿ ಕಾಡುತ್ತಿರುವುದು ಲಾಕ್ ಡೌನ್ ಎಂಬ ಗುಮ್ಮ. ಈ ಹಿನ್ನಲೆಯಲ್ಲಿ ಜನ ಲಸಿಕೆ ಅಭಿಯಾನದ ಮೇಲೂ ನಂಬಿಕೆ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾದಲ್ಲಿ ಒಂದಿಡೀ ದೇಶದ ಎರಡು ವರ್ಷಗಳ ಪರಿಶ್ರಮ ನೀರು ಪಾಲಾಗುವ ಅಪಾಯಗಳಿವೆ. ಸಾಂಕ್ರಾಮಿಕಕ್ಕಿಂತ ಜೀವನ ನಿರ್ವಹಣೆಗೆ ಎದುರಾಗಿರುವ ಸವಾಲು, ಸಾಮಾನ್ಯ ಬದುಕಿಗೆ ಕಂಟಕವಾಗುತ್ತಿರುವ ನಿರ್ಭಂಧ, ನೈಟ್ ಕರ್ಫ್ಯೂ, ಮಿನಿ ಲಾಕ್ ಡೌನ್, ಲಾಕ್ ಡೌನ್ ಇತ್ಯಾದಿಗಳು ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ಎಲ್ಲೋ ಒಂದು ಕಡೆ ಸರಕಾರ ಸೇರಿದಂತೆ ಎಲ್ಲರೂ ವಿನಾಶಕಾರಿ ವೈರಸ್ ನ ನಿಯಂತ್ರಣ ಹಾಗೂ ಪರಿಸ್ಥಿತಿ ನಿರ್ವಹಣೆಯಲ್ಲಿ ಎಡವಿದ್ದು ಸ್ಪಷ್ಟ. ಯಾರೊಬ್ಬರಿಗೂ ವೈರಸ್ ನ ಗುಣ ಸ್ವಭಾವಗಳ ಸ್ಪಷ್ಟತೆ ಇಲ್ಲದ್ದು ಬಹುತೇಕ ಸನ್ನಿವೇಷಕ್ಕೆ ಕಾರಣವಾಗುತ್ತಿದೆ. ಜನರಂತೆ ಸರಕಾರವೂ ದೀರ್ಘಕಾಲೀನ ಶಿಸ್ತು, ಮಾರ್ಗಸೂಚಿ ಪಾಲನೆಯಲ್ಲಿ ಅಶಿಸ್ತು, ಬೇಜವಾಬ್ದಾರಿ ಮೆರೆಯುತ್ತಿರುವುದನ್ನು ಒಪ್ಪಿಕೊಳ್ಳಲೇ ಬೇಕು. ಮತ್ತೆ ಮತ್ತೆ ಸಾಂಕ್ರಾಮಿಕ ದಿನದಿಂದ ದಿನಕ್ಕೆ ಹೆಚ್ಚಾಗಿ ಸಮುದಾಯಕ್ಕೆ ಹರಡುತ್ತಿರುವುದು ಕಳವಳಕಾರಿ. ಈಗೆಲ್ಲ ಕಠಿಣ ನಿರ್ಬಂಧಗಳ ಮಾತನಾಡುವ ಸರಕಾರ ಸೋಂಕು ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿದ್ದಂತೆ ವರಸೆ ಬದಲಾಯಿಸುತ್ತಿರುವುದು ಏಕೆ? ಈವರೆಗೆ ಯಾವ ಸಾಂಕ್ರಾಮಿಕ ಹರಡುವಿಕೆಯನ್ನು ತಡೆದಿಲ್ಲವೇ? ಸಾಮಾಜಿಕ ಜಾಗೃತಿಯ ಬಗ್ಗೆ ಸ್ಪಷ್ಟವಾದ ಚಿಂತನೆ, ಯೋಚನೆ ಇಲ್ಲದಿರುವುದು ವಿಪರ್ಯಾಸವೇ ಸರಿ. ಮತ್ತೆ ಲಾಕ್ ಡೌನ್, ಕರ್ಫ್ಯೂಗಳಂತಹ ತಾತ್ಕಾಲಿಕ ಕ್ರಮಗಳ ಬದಲಿಗೆ ಶಾಶ್ವತ, ಪರಿಣಾಮಕಾರಿ ಕ್ರಮಗಳ ಬಗ್ಗೆ ತಜ್ಞರ ಜತೆ ಸಮಾಲೋಚಿಸಲು ಮುಂದಾಗಬೇಕಿದೆ. ಕ್ಷಣಕ್ಕೊಂದು, ದಿನಕ್ಕೊಂದು ಮಾರ್ಗ ಸೂಚಿ, ನೀತಿಗಳ ಬದಲು ದೀರ್ಘಕಾಲೀನ ಶಿಸ್ತು ಮೂಡುವಂತಾಗಬೇಕು.

ಕೃಪೆ:ವಿಶ್ವವಾಣಿ ಪತ್ರಿಕೆಯ ಸಂಪಾದಕೀಯ ದಿನಾಂಕ: ಜನವರಿ ೭, ೨೦೨೨ 

ಚಿತ್ರ ಕೃಪೆ: ಇಂಟರ್ನೆಟ್ ತಾಣ