ಲಾಜಿಕ್ ಬಾಕ್ಸ್

ಲಾಜಿಕ್ ಬಾಕ್ಸ್

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀಧರ ಬನವಾಸಿ
ಪ್ರಕಾಶಕರು
ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್, ಭುವನೇಶ್ವರಿ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ: ೨೩೦.೦೦, ಮುದ್ರಣ: ೨೦೨೨

ಶ್ರೀಧರ ಬನವಾಸಿ ಇವರು ಸುದ್ದಿ ಹಾಗೂ ಮನರಂಜನಾ ಮಾಧ್ಯಮವಾಗಿ ಬೆಳೆದಿದ್ದ ಟೀವಿ ಉದ್ಯಮದ ಕುರಿತಾದ ಲೇಖನಗಳನ್ನು ಬೇರೆ ಬೇರೆ ಪತ್ರಿಕೆಗಳಿಗೆ ಬರೆದಿದ್ದಾರೆ. ಒಟ್ಟಾರೆಯಾಗಿ 2007ರಿಂದ 2013ರವರೆಗೆ ಮಾಧ್ಯಮ ಕ್ಷೇತ್ರದಲ್ಲಿ ನೇರ ಹಾಗೂ ಪರೋಕ್ಷವಾಗಿ ದುಡಿಯುತ್ತಿದ್ದ ಸಮಯದಲ್ಲಿ ಬರೆದ ಅಂಕಣಗಳು, ಲೇಖನಗಳಲ್ಲಿ ಇಂದಿನ ಪ್ರಸ್ತುತ ಜಾಯಮಾನದ ಓದುಗರಿಗೆ, ಈ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಬರಹಗಳನ್ನು ಆಯ್ದು “ಲಾಜಿಕ್ ಬಾಕ್ಸ್” ಎಂಬ ಕೃತಿಯ ರೂಪದಲ್ಲಿ ಹೊರತಂದಿದ್ದಾರೆ. ಈ ಕೃತಿಯಲ್ಲಿ ಲೇಖಕರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡದ್ದು ಹೀಗೆ...

“ನಾನು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದಕ್ಕಿಂತ ಮುನ್ನ ಮಾಧ್ಯಮ ಕ್ಷೇತ್ರದಲ್ಲಿ ಆರೇಳು ವರ್ಷ ಕಾಲ ಸಕ್ರಿಯವಾಗಿ ದುಡಿಯುವ ಅವಕಾಶ ನನ್ನ ಪಾಲಿಗಾಗಿತ್ತು, ಹದಿನಾರು ವರ್ಷಗಳ ಹಿಂದೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡು ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಾಗ ನನ್ನನ್ನು ಅತೀವವಾಗಿ ಸೆಳೆದದ್ದು ಆ ಸಮಯದಲ್ಲಿ ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿದ್ದ, ಕೇಬಲ್ ಹಾಗೂ ಬ್ರಾಡ್ ಕ್ಯಾಸ್ಟಿಂಗ್ ಉದ್ಯಮ. ಹೀಗೆ ನನ್ನ ವೃತ್ತಿ ಬದುಕು ಕೇಬಲ್ ಟೀವಿ ಉದ್ಯಮದಿಂದಲೇ ಪ್ರಾರಂಭವಾಯಿತು. ಈ ಕ್ಷೇತ್ರದಲ್ಲಿ ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದು ನಂತರದ ದಿನಗಳಲ್ಲಿ ಒಂದಿಷ್ಟು ಜ್ಞಾನ, ಅನುಭವವನ್ನು ದಕ್ಕಿಸಿತು. ನನ್ನೀ ಸೆಳೆತವು ಕೇವಲ ಹೊಟ್ಟೆಪಾಡಿನ ವೃತ್ತಿಯನ್ನಾಗಿಸದೇ ಆ ಕ್ಷೇತ್ರದ ಆಸಕ್ತ ವಿದ್ಯಾರ್ಥಿಯನ್ನಾಗಿಸಿತು. ನಾನು ಓದಿಕೊಂಡಿದ್ದ ಎಂಜಿನಿಯರಿಂಗ್ ಜ್ಞಾನವು ಇದಕ್ಕೆ ಪೂರಕವಾಗಿ ಈ ಕ್ಷೇತ್ರವನ್ನು ಇನ್ನಷ್ಟು ತಾಂತ್ರಿಕವಾಗಿ ಅಧ್ಯಯನ ಮಾಡುವಂತೆ ಪ್ರೇರಣೆ ನೀಡಿತು. ಆ ಸಮಯದಲ್ಲಿ ಉದ್ಯಮಕ್ಕೆ ಪೂರಕವಾಗಿದ್ದ 'ಕೇಬಲ್ ವಾರ್ತೆ’ ಪತ್ರಿಕೆಯಲ್ಲಿ ಸಹಸಂಪಾದಕನಾಗಿ ಕೆಲಸ ಮಾಡುವಂತಾಯಿತು. ಹೀಗೆ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಆರೇಳು ವರ್ಷಗಳ ಕಾಲ ಹಲವು ವಿಭಾಗಗಳಲ್ಲಿ ದುಡಿಯಲು ಅವಕಾಶವಾಯಿತು. ಈ ಕ್ಷೇತ್ರದಲ್ಲಿ ದುಡಿಯುತ್ತಲೇ ನಾನು ಆಸಕ್ತಿಯಿಂದ ಪತ್ರಿಕೋದ್ಯಮ ಹಾಗೂ ಮಾಸ್ ಕಮ್ಯುನಿಕೇಷನ್‌ನಲ್ಲಿ ಡಿಪ್ಲೊಮೊ ಮಾಡಿಕೊಂಡಿದ್ದು ಒಂದಿಷ್ಟು ಧೈರ್ಯವನ್ನು ಕೂಡ ತುಂಬಿತ್ತು.

ಇಂದು ಟೀವಿ ಮನರಂಜನಾ ಮಾಧ್ಯಮವು ಎಷ್ಟೇ ದೈತ್ಯವಾಗಿ ಬೆಳೆದಿದ್ದರೂ ಅದರ ಮೂಲ ಅಸ್ತಿತ್ವ ಕೇಬಲ್ ಟೀವಿಯಿಂದಲೇ ಪ್ರಾರಂಭವಾಗಿದ್ದು ಎಂಬುದನ್ನು ಎಂದಿಗೂ ತಳ್ಳಿಹಾಕಲಾಗದು, ಬ್ರಾಡ್ ಕ್ಯಾಸ್ಟಿಂಗ್ ಉದ್ಯಮಕ್ಕೆ ಪೂರಕವಾಗಿ ಬೆಳೆದ ಕೇಬಲ್ ಟೀವಿ, ಉದ್ಯಮದ ಹಿನ್ನೆಲೆಯು ರೋಚಕ ಕಥನವನ್ನು ಹೊಂದಿದೆ ಎಂಬುದು ಮಾಧ್ಯಮ ವಿಶ್ಲೇಷಕರ ಅಭಿಪ್ರಾಯವಾಗಿದೆ. ಹೀಗೆ ಕೇಬಲ್ ಟೀವಿ, ಬಾಡ್‌ ಕ್ಯಾಸ್ಟಿಂಗ್ ಹಾಗೂ ಮಾಧ್ಯಮ ಲೋಕದಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ಜಾಗತಿಕ ಉದ್ಯಮದ ಆಗುಹೋಗುಗಳು, ತಂತ್ರಜ್ಞಾನದ ಬೆಳವಣಿಗೆ, ನೂತನ ಆವಿಷ್ಕಾರಗಳ ಕುರಿತು ಆಸಕ್ತಿಯಿಂದ ಅಧ್ಯಯನ ಮಾಡಿ 'ಲಾಜಿಕ್ ಬಾಕ್ಸ್', 'ಮ್ಯಾನ್ ವೆಸೆಸ್ ಟೆಕ್ನಾಲಜಿ' ಎಂಬ ಹೆಸರಿನಲ್ಲಿ ಅಂಕಣವನ್ನು ಬರೆಯುತ್ತಿದ್ದೆ, ಸುದ್ದಿ ಹಾಗೂ ಮನರಂಜನಾ ಮಾಧ್ಯಮವಾಗಿ ಬೆಳೆದಿದ್ದ ಟೀವಿ ಉದ್ಯಮದ ಕುರಿತಾಗಿಯೂ ಲೇಖನಗಳನ್ನು ಬೇರೆ ಬೇರೆ ಪತ್ರಿಕೆಗಳಿಗೆ ಬರೆಯುತ್ತಿದ್ದ. ಒಟ್ಟಾರೆಯಾಗಿ 2007ರಿಂದ 2013ರವರೆಗೆ ಮಾಧ್ಯಮ ಕ್ಷೇತ್ರದಲ್ಲಿ ನೇರ ಹಾಗೂ ಪರೋಕ್ಷವಾಗಿ ದುಡಿಯುತ್ತಿದ್ದ ಸಮಯದಲ್ಲಿ ಬರೆದ ಅಂಕಣಗಳು, ಲೇಖನಗಳಲ್ಲಿ ಇಂದಿನ ಪ್ರಸ್ತುತ ಜಾಯಮಾನದ ಓದುಗರಿಗೆ, ಈ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಬರೆಹಗಳನ್ನು ಆಯ್ದು ಕೃತಿಯ ಮೂಲಕ ನೀಡುವ ಆಸೆ ನನ್ನದಾಗಿತ್ತು, ನನ್ನಾಸೆಯು ಈ ಕೃತಿಯ ಮೂಲಕ ಸಾಧ್ಯವಾಗಿದ್ದಕ್ಕೆ ಅತೀವ ಖುಷಿಯನ್ನು ತಂದಿದೆ.

ಪತ್ರಿಕೋದ್ಯಮ, ಟೀವಿ ಮಾಧ್ಯಮಗಳಲ್ಲಿ ಹೊಸದಾಗಿ ಕೆಲಸ ಮಾಡುವ ವಿದ್ಯಾರ್ಥಿಗಳಿಗೆ ಈ ಕೃಷಿಯಲ್ಲಿನ ಲೇಖನಗಳು ಅವರ ಆಸಕ್ತಿಯ ಅಧ್ಯಯನಕ್ಕೆ ಸ್ವಲ್ಪ ಮಾಹಿತಿಯನ್ನು ನೀಡಬಲ್ಲದು ಎಂಬ ನಂಬಿಕೆಯಲ್ಲಿ ಈ ಹೊತ್ತಗೆಯನ್ನು ಓದುಗರ ಮುಂದಿಡುತ್ತಿದ್ದೇನೆ. ಕೃತಿಯ ಬಹಳಷ್ಟು ಲೇಖನಗಳು ನಾನು ಸಹ ಸಂಪಾದಕನಾಗಿ ಕೆಲಸಮಾಡುತ್ತಿದ್ದ ಕೇಬಲ್ ವಾರ್ತೆ, ಕರ್ನಾಟಕ ಟೀವಿ ಲೋಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವಂತಹವು, ಉಳಿದಂತೆ ಕೆಲವು ಲೇಖನಗಳು ಹೊಸ ದಿಗಂತ, ಕನ್ನಡಪ್ರಭ, ವಿಜಯ ಕರ್ನಾಟಕಗಳಲ್ಲಿ ಪ್ರಕಟಗೊಂಡಿವೆ. ತನ್ಮೂಲಕ ಈ ಎಲ್ಲ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಈ ಕೃತಿ ಪ್ರಕಟಗೊಳ್ಳುತ್ತಿರುವ ಸಂದರ್ಭದಲ್ಲಿ 'ಕೇಬಲ್‌ ವಾರ್ತೆ' ಪತ್ರಿಕೆಯ ಮುಖ್ಯಸ್ಥರು. ಕೇಬಲ್ ಉದ್ಯಮಿಗಳು ಆಗಿದ್ದ ದಿ.ಎ. ಜಗದೀಶ್ ಅವರ ಪ್ರೋತ್ಸಾಹವನ್ನು ಸ್ಮರಿಸುವೆ, ಉಳಿದಂತೆ ನನ್ನ ವೃತ್ತಿ ಬದುಕಿಗೆ ಪ್ರೋತ್ಸಾಹಿಸಿದ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಹಿರಿಯರು ಹಾಗೂ ಸನ್ಮಿತ್ರರ ಸಹಕಾರವನ್ನು ಈ ಕ್ಷಣ ವಿನಮ್ರನಾಗಿ ಸ್ಮರಿಸುವೆ.” ಎಂದಿದ್ದಾರೆ. ೧೯೬ ಪುಟಗಳ ಈ ಪುಸ್ತಕವು ದೂರದರ್ಶನ ಎಂಬ ‘ಲಾಜಿಕ್ ಬಾಕ್ಸ್’ ನ ಮರ್ಮವನ್ನು ಬೇಧಿಸುವಲ್ಲಿ ಬಹು ಮಟ್ಟಿಗೆ ಸಫಲವಾಗಿದೆ.