ಲಾಟೀನು ಹೊತ್ತ ಕುರುಡ
ವೃದ್ಧನಾದ ಗುರುವೊಬ್ಬ, ಶೃದ್ಧೆ ಸಾಲದ ತನ್ನ ಶಿಷ್ಯರಿಗೆ ಈ ಕೆಳಗಿನ ಕಥೆ ಹೇಳುತ್ತಿದ್ದನಂತೆ-
ಒಂದು ದಿನ ಒಬ್ಬ ಕುರುಡ ತನ್ನ ಸ್ನೇಹಿತನ ಮನೆಗೆ ಹೋಗಿದ್ದ. ಅಲ್ಲಿಂದ ತಿರುಗಿ ಮನೆಗೆ ಹೊರಟಾಗ ರಾತ್ರಿಯಾಗಿ ಹೋಗಿತ್ತು. ಕುರುಡ ತನ್ನ ಮಿತ್ರನಿಗೆ ಹೇಳಿದ - ‘ಅಪ್ಪಾ ಮಿತ್ರಾ, ರಾತ್ರಿ ಕತ್ತಲು, ನಿನ್ನ ಲಾಟೀನು ಕೊಡು, ಒಯ್ಯುತ್ತೇನೆ.’ ಎಂದ.
‘ಸರಿ ಕೊಡುತ್ತೇನೆ. ಆದರೆ, ನಿನಗೆ ಕಣ್ಣು ಕಾಣಿಸದಿರುವಾಗ ಈ ಲಾಟೀನ್ ನಿಂದ ಏನು ಪ್ರಯೋಜನ?’ ಎಂದ ಸ್ನೇಹಿತ.
ಕುರುಡ ಹೇಳಿದ ‘ನನಗೆ ಕಾಣುವುದಿಲ್ಲ, ನಿಜ ಆದರೆ, ಲಾಟೀನು ಹಿಡಿದಿರುವುದರಿಂದ ಬೇರೆಯವರಿಗೆ ನಾನು ಸ್ಪಷ್ಟವಾಗಿ ಕಾಣುತ್ತೇನಲ್ಲ. ಬೇರೆಯವರಾದರೂ ಕಾಣದೇ ನನ್ನ ಮೇಲೆ ಬಂದು ಬೀಳುವುದನ್ನು ತಪ್ಪಿಸಬಹುದಲ್ವಾ?
ಸ್ನೇಹಿತ ಲಾಟೀನು ಕೊಟ್ಟ, ಬಿದಿರು ಕಡ್ಡಿಗಳಿಂದ ಮಾಡಿದ ಲಾಟೀನು ಅದು. ಒಳಗೆ ಒಂದು ಮೇಣದ ಬತ್ತಿ ಇಟ್ಟು ಕಾಗದ ಹೊದಿಸಿದ್ದು.
ಕುರುಡ, ಲಾಟೀನು ಹಿಡಿದು ಹೊರಟ. ದಾರಿಯಲ್ಲಿ ಸ್ವಲ್ಪ ದೂರ ಹೋಗಿದ್ದನಷ್ಟೇ. ಅಷ್ಟರಲ್ಲಿ, ಯಾವನೋ ಒಬ್ಬ ಬಂದು ನೇರವಾಗಿ ಢಿಕ್ಕಿ ಹೊಡೆದೇ ಬಿಟ್ಟ. ಕುರುಡನಿಗೆ ಸಿಟ್ಟು ನೆತ್ತಿಗೇರಿತು. 'ಯಾರಪ್ಪಾ ಅದು, ನಿನಗೆ ನಾನು ಹಿಡಿದ ಲಾಟೀನು ಕಾಣಿಸಲಿಲ್ಲವೇ? ಎಂದು ಬೊಬ್ಬೆ ಹಾಕಿದ.
ಎದುರಿನವ ಹೇಳಿದ ‘ ಲಾಟೀನು ಹಿಡಿದ್ದೀಯಾ ಸರಿ, ಆದರೆ ಒಳಗಿನ ಮೇಣದ ಬತ್ತಿಯನ್ನು ಹಚ್ಚಿ ಕೊಳ್ಳಬಾರದೇ?
ಇದು ನಮ್ಮೆಲ್ಲರ ಪರಿಸ್ಥಿತಿ. ನಾವು ಬೇರೆಯವರ ತಪ್ಪುಗಳನ್ನೇ ಗುರಿಯಾಗಿಸಿಕೊಳ್ಳುತ್ತೇವೆ ವಿನಹ, ನಮ್ಮ ತಪ್ಪನ್ನು ಗುರುತಿಸುವುದೇ ಇಲ್ಲ. ಕುರುಡನಂತೆಯೇ ವರ್ತಿಸುತ್ತೇವೆ. ಇನ್ನಾದರೂ ನಾವು ಬದಲಾಗಬೇಕಾಗಿದೆ ಅಲ್ಲವೇ?
(ಆಧಾರ)