ಲಾರ್ಡ್ಸ್ ಮೈದಾನ ‘ಕ್ರಿಕೆಟ್ ಕಾಶಿ' ಏಕೆ? (ಭಾಗ ೧)
ಕ್ರಿಕೆಟ್ ಆಡುವ ಪ್ರತಿಯೊಬ್ಬ ಆಟಗಾರನಿಗೂ ‘ಕ್ರಿಕೆಟ್ ಕಾಶಿ' ಲಾರ್ಡ್ಸ್ ಮೈದಾನದಲ್ಲಿ ಆಡಬೇಕು ಮತ್ತು ಶತಕ ಬಾರಿಸಬೇಕು ಎನ್ನುವುದು ಮಹದಾಸೆ. ಆದರೆ ನಿಮಗೆ ಗೊತ್ತಿದೆಯೋ ಇಲ್ಲವೋ ‘ಕ್ರಿಕೆಟ್ ದೇವರು' ಎಂದು ಅಭಿಮಾನಿಗಳಿಂದ ಕರೆಯಿಸಲ್ಪಟ್ಟ ಸಚಿನ್ ತೆಂಡೂಲ್ಕರ್ ಗೆ ಮಾತ್ರ ‘ಕ್ರಿಕೆಟ್ ಕಾಶಿ'ಯಲ್ಲಿ ಶತಕ ಬಾರಿಸಲು ಆಗಲೇ ಇಲ್ಲ. ಜಗತ್ತಿನ ಬಹುತೇಕ ಕ್ರೀಡಾಂಗಣಗಳಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ನಲ್ಲಿ ಸರ್ವಾಧಿಕ ೫೧ ಶತಕಗಳನ್ನು ಬಾರಿಸಿದ ಸಚಿನ್ ಗೆ ಲಾರ್ಡ್ಸ್ ಒಲಿಯಲೇ ಇಲ್ಲ. ಕನಿಷ್ಟ ಅರ್ಧ ಶತಕವನ್ನೂ ಗಳಿಸಲಾಗಲಿಲ್ಲ. ಲಾರ್ಡ್ಸ್ ಅಂಗಳದಲ್ಲಿ ಟೆಸ್ಟ್ ನಲ್ಲಿ ಅವರ ಗರಿಷ್ಟ ರನ್ ೩೭. ಇದೇ ಕ್ರಿಕೆಟ್ ಜಗತ್ತಿನ ಸ್ವಾರಸ್ಯ. ಈ ನೋವು ಸಚಿನ್ ಗೆ ತಮ್ಮ ಜೀವನವಿಡೀ ಕಾಡುವುದು ಸಹಜ.
೧೯೮೩ರ ಏಕದಿನ ವಿಶ್ವಕಪ್ ಫೈನಲ್ ಲಾರ್ಡ್ಸ್ ಮೈದಾನದಲ್ಲೇ ನಡೆದಿತ್ತು. ಎರಡು ಬಾರಿಯ ಚಾಂಪಿಯನ್ ತಂಡವಾದ ವೆಸ್ಟ್ ಇಂಡೀನ್ ಅನ್ನು ಕಪಿಲ್ ದೇವ್ ನಾಯಕತ್ವದ ತಂಡ ರೋಚಕ ಹಣಾಹಣಿಯಲ್ಲಿ ಸೋಲಿಸಿದ್ದು ಈಗ ಇತಿಹಾಸದ ಪುಟಗಳಿಗೆ ಸೇರಿದೆ. ಆ ಸಮಯದಲ್ಲಿ ಭಾರತ ತಂಡಕ್ಕೆ ನೀಡಿದ ಫ್ರುಡೆನ್ಸಿಯಲ್ ಕಪ್ ಈಗ ಭಾರತದಲ್ಲೇ ಇಲ್ಲ. ಅದು ಇರುವುದು ಲಂಡನ್ ನ ಲಾರ್ಡ್ಸ್ ಕ್ರಿಕೆಟ್ ವಸ್ತು ಸಂಗ್ರಹಾಲಯದಲ್ಲಿ. ಆಶ್ಚರ್ಯವಾಯಿತೇ? ಹೌದು, ನಮ್ಮ ಬಿಸಿಸಿಐ ಕಚೇರಿಯಲ್ಲಿರುವುದು ಆ ಕಪ್ ನ ಪ್ರತಿಕೃತಿಯೇ ಹೊರತು ನೈಜವಾದ ಕಪ್ ಅಲ್ಲ. ಅಂದಿನ ಸಮಯದ ನೀತಿ ನಿಯಮಗಳೇ ಹಾಗಿದ್ದವು. ವಿಜೇತ ತಂಡ ತಮ್ಮ ದೇಶಕ್ಕೆ ತಮ್ಮೊಂದಿಗೆ ಕಪ್ ಅನ್ನು ಕೊಂಡು ಹೋಗಬಹುದಿತ್ತು. ಆದರೆ ನಂತರ ಅದನ್ನು ಐಸಿಸಿಗೆ ಹಿಂದಿರುಗಿಸಬೇಕಿತ್ತು. ಆಗ ಅವರು ಆ ವಿಶ್ವಕಪ್ ನ ಪ್ರತಿಕೃತಿಯನ್ನು ಕೊಡುತ್ತಿದ್ದರು. ಇಂತಹ ಹಲವಾರು ಅಮೂಲ್ಯ ವಸ್ತುಗಳು ಲಾರ್ಡ್ಸ್ ಮ್ಯೂಜಿಯಂ ನಲ್ಲಿವೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯುವ ಆಷಸ್ ನ ಮೂಲ ಕಪ್ ಕೂಡಾ ಲಾರ್ಡ್ಸ್ ನಲ್ಲೇ ಇದೆ!
ಕ್ರಿಕೆಟ್ ಮತ್ತು ಲಾರ್ಡ್ಸ್ ಮೈದಾನಕ್ಕೆ ಅವಿನಾಭಾವ ಸಂಬಂಧವೆಂದರೆ ತಪ್ಪಾಗಲಾರದು. ಕ್ರಿಕೆಟ್ ಆಡುವ ಪ್ರತಿಯೊಬ್ಬರಿಗೂ ಇದೊಂದು ಪವಿತ್ರ ಸ್ಥಳ. ಚಾರಣಿಗನೊಬ್ಬನಿಗೆ ಜೀವಮಾನದಲ್ಲೊಮ್ಮೆ ಮೌಂಟ್ ಎವರೆಸ್ಟ್ ಏರಬೇಕೆನ್ನುವ ಕನಸು ಹೇಗೆ ಇರುತ್ತದೆಯೋ, ಕ್ರೀಡಾ ಪಟುವಿಗೆ ಒಮ್ಮೆಯಾದರೂ ಒಲಂಪಿಕ್ ಪದಕ ಗೆಲ್ಲುವ ತವಕ ಹೇಗೆ ಇರುತ್ತದೆಯೋ ಹಾಗೆಯೇ ಕ್ರಿಕೆಟ್ ಆಡುವವರಿಗೆ ಲಾರ್ಡ್ಸ್ ಮೈದಾನದಲ್ಲಿ ಆಟವಾಡಬೇಕು, ಶತಕ ದಾಖಲಿಸಬೇಕು ಎನ್ನುವ ಕನಸು ಇದ್ದೇ ಇರುತ್ತದೆ.
ಹಾಗೆ ನೋಡ ಹೋದರೆ ಲಾರ್ಡ್ಸ್ ಮೈದಾನ ವಿಶ್ವದ ಅತ್ಯಂತ ದೊಡ್ದ ಕ್ರಿಕೆಟ್ ಸ್ಟೇಡಿಯಂ ಅಂತೇನೂ ಅಲ್ಲ. ಅಲ್ಲಿ ಕೇವಲ ೩೧ ಸಾವಿರ ಜನರಿಗೆ ಮಾತ್ರ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಅದೇ ಭಾರತದ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ೧.೨೫ ಲಕ್ಷ ಜನರು ಕುಳಿತುಕೊಳ್ಳುವ ವ್ಯವಸ್ಥೆ ಇರುವ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ. ಆಸ್ಟ್ರೇಲಿಯಾದ ಮೆಲ್ಬಾರ್ನ್ (೧ ಲಕ್ಷ), ಕೊಲ್ಕತ್ತಾದ ಈಡನ್ ಗಾರ್ಡನ್ (೭೦ ಸಾವಿರ) ಸಾಮರ್ಥ್ಯದ ಎದುರು ಲಾರ್ಡ್ಸ್ ಬಹಳ ಹಿಂದಿದೆ. ಆದರೆ ಲಾರ್ಡ್ಸ್ ಗಿರುವ ವಿಶೇಷತೆ ಉಳಿದ ಯಾವುದೇ ಕ್ರೀಡಾಂಗಣಕ್ಕೆ ಇಲ್ಲದಿರುವುದೇ ಇದರ ವಿಶೇಷ. ಒಂದು ಸ್ಥಳಕ್ಕೆ ಘನತೆ, ಹೆಸರು ಬರುವುದು ಅದರ ಇತಿಹಾಸ ಮತ್ತು ವಿಶೇಷತೆಗಳಿಂದಾಗಿ. ಇಂಗ್ಲೆಂಡ್ ನಲ್ಲಿರುವ ಈ ಲಾರ್ಡ್ಸ್ ಕ್ರೀಡಾಂಗಣದ ಹಿಂದಿನ ಕಥೆಯೂ ಬಹಳ ಸ್ವಾರಸ್ಯಕರವಾಗಿದೆ.
ಲಾರ್ಡ್ಸ್ ಮೈದಾನಕ್ಕೆ ಆ ಹೆಸರು ಬರಲು ಕಾರಣ ಥಾಮಸ್ ಲಾರ್ಡ್ಸ್ ಎನ್ನುವ ಮಹಾನುಭಾವರಿಂದ. ೧೭೫೫ರಲ್ಲಿ ಜನಿಸಿದ ಥಾಮಸ್ ಒಬ್ಬ ಕಾರ್ಮಿಕನ ಮಗ. ತನ್ನ ಬಾಲ್ಯವನ್ನೆಲ್ಲಾ ಹುಟ್ಟೂರಾದ ಯಾರ್ಕ್ ಶಯರ್ ನಲ್ಲಿ ಕಳೆದ ಈತ ಉದ್ಯೋಗ ಹುಡುಕಿಕೊಂಡು ತಲುಪಿದ್ದು ಇಂಗ್ಲೆಂಡ್ ಗೆ. ಕ್ರಿಕೆಟ್ ನಲ್ಲಿ ಆಸಕ್ತಿ ಇದ್ದ ಥಾಮಸ್ ವೈಟ್ ಕಾಂಡುಯೆಟ್ ಎನ್ನುವ ಕ್ಲಬ್ ಗೆ ಸಾಮಾನ್ಯ ಅಟೆಂಡರ್ ಆಗಿ ಕೆಲಸಕ್ಕೆ ಸೇರಿದ. ಆ ಕ್ಲಬ್ ಗೆ ಕ್ರಿಕೆಟ್ ಆಡಲು ಬರುವ ಆಟಗಾರರು ಬ್ಯಾಟಿಂಗ್ ಮಾಡುವಾಗ ಬಾಲ್ ಎಸೆಯುವುದಷ್ಟೇ ಈತನ ಕೆಲಸ. ಈ ಕೆಲಸದಲ್ಲಿ ಆತ ತೋರಿದ ನಿಷ್ಟೆಯು ಮುಂದಿನ ದಿನಗಳಲ್ಲಿ ಆತನನ್ನು ಮಿಡಲ್ ಸೆಕ್ಸ್ ಮತ್ತು ಎಂಸಿಸಿ ತಂಡಗಳ ಪರವಾಗಿ ಆಡುವಂತೆ ಮಾಡಿತು. ೧೭೮೭ ರಿಂದ ೧೮೦೨ರ ತನಕ ನಂತರ ೧೮೧೫ರಲ್ಲಿ ಮತ್ತೆ ೧ ವರ್ಷ ಒಟ್ಟು ೧೬ ವರ್ಷಗಳ ಕಾಲ ಕ್ರಿಕೆಟ್ ಆಡಿದ.
ಥಾಮಸ್ ಲಾರ್ಡ್ಸ್ ಎಂದೂ ಮಹಾನ್ ಆಟಗಾರನಾಗಿರಲಿಲ್ಲ. ಆತನ ಸಾಧನೆ ಸಾಮಾನ್ಯ ಆಟಗಾರನದ್ದಾಗಿತ್ತು. ಆಡಿದ್ದು ಕೇವಲ ೬೦ ಪ್ರಥಮ ದರ್ಜೆ ಪಂದ್ಯಗಳು. ಗಳಿಸಿದ ರನ್ ಬರೇ ೮೯೯. ಆತನ ಬ್ಯಾಟ್ ನಿಂದ ಒಂದೇ ಒಂದು ಶತಕ ಬರಲಿಲ್ಲ. ಸರಾಸರಿ ಶೇ.೧೦ಕ್ಕೂ ಕಡಿಮೆ. ಬೌಲರ್ ಆಗಿದ್ದರೂ ಪಡೆದ ವಿಕೆಟ್ ಸಂಖ್ಯೆ ೧೫೦ಕ್ಕಿಂತ ಕಡಿಮೆ. ಆತ ಆಡಿದ್ದು ದುರ್ಬಲ ತಂಡಗಳ ವಿರುದ್ಧ ಮಾತ್ರ ಎಂಬ ಅಪವಾದವೂ ಇದೆ. ಆತ ಒಂದೇ ಒಂದು ಟೆಸ್ಟ್ ಪಂದ್ಯವನ್ನಾಡಲಿಲ್ಲ. ಆ ಸಮಯದಲ್ಲಿ ಇನ್ನೂ ಏಕದಿನ ಮತ್ತು ಟಿ-೨೦ ಪಂದ್ಯಗಳು ಪ್ರಾರಂಭವಾಗದೇ ಇದ್ದುದರಿಂದ ಅದನ್ನಾಡುವ ಪ್ರಶ್ನೆಯೇ ಇಲ್ಲ. ಥಾಮಸ್ ಲಾರ್ಡ್ಸ್ ನ ಮಗ ಥಾಮಸ್ ಲಾರ್ಡ್ಸ್ ಜ್ಯೂನಿಯರ್ ಕೂಡಾ ಕ್ರಿಕೆಟ್ ಆಟಗಾರನಾದರೂ ಆತ ಅಪ್ಪನಿಗಿಂತ ಕಳಪೆ ಆಟಗಾರ ! ಆತ ಆಡಿದ್ದು ಐದು ಪಂದ್ಯಗಳು ಮಾತ್ರ. ಗಳಿಸಿದ ರನ್ ೧೮, ಪಡೆದ ವಿಕೆಟ್ ೧ ಮಾತ್ರ. ಆಟದಲ್ಲಿ ಒಮ್ಮೆ ಕೂಡಾ ಆತ ಎರಡಂಕಿ ತಲುಪಲಿಲ್ಲ. ಆದರೂ ಈ ಕ್ರೀಡಾಂಗಣಕ್ಕೆ ‘ಲಾರ್ಡ್ಸ್’ ಎನ್ನುವ ಹೆಸರು ಹೇಗೆ ಬಂತು?
ಆಟಗಾರನಾಗಿ ಥಾಮಸ್ ಲಾರ್ಡ್ಸ್ ಹೆಸರು ಗಳಿಸದೇ ಇದ್ದರೇನಂತೆ? ಆತ ಮಾಡಿದ ಒಂದು ಮಹಾನ್ ಕಾರ್ಯ ಇತಿಹಾಸದಲ್ಲಿ ಆತನ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿತು. ಅದೇನೆಂದರೆ, ಮೂರು ಆಟದ ಮೈದಾನಗಳನ್ನು ನಿರ್ಮಾಣ ಮಾಡಿದ್ದು. ಆತ ನಿರ್ಮಿಸಿದ ಮೂರನೇ ಮೈದಾನವೇ ಈ ನಮ್ಮ ‘ಲಾರ್ಡ್ಸ್'. ಈ ಮೈದಾನ ನಿರ್ಮಿಸಲು ಕಾರಣ ಏನು ಗೊತ್ತೇ? ಥಾಮಸ್ ಲಾರ್ಡ್ಸ್ ವೈಟ್ ಕಾಂಡುಯೆಟ್ ಕ್ಲಬ್ ನಲ್ಲಿ ಕೆಲಸ ಮಾಡುತ್ತಿದ್ದಾಗ ರಾಜ ಮನೆತನದೊಂದಿಗೆ ಸಂಬಂಧವಿರಿಸಿಕೊಂಡಿದ್ದ ಜಾರ್ಜ್ ಫಿಂಚ್ ಮತ್ತು ಚಾರ್ಲ್ಸ್ ಲೆನಾಕ್ಸ್ ಎಂಬ ಇಬ್ಬರು ವ್ಯಕ್ತಿಗಳು ಆಟವಾಡಲು ಬರುತ್ತಿದ್ದರು. ಅವರಿಗೆ ತಾವು ಆಟವಾಡುವ ಮೈದಾನ ರಸ್ತೆಯ ಬದಿಯಲ್ಲಿರದೇ ಖಾಸಗಿಯಾಗಿರಬೇಕು ಎಂದು ಅನಿಸಿತು. ಅದಕ್ಕಾಗಿ ಅವರು ಥಾಮಸ್ ಬಳಿ ತಮಗೆ ಖಾಸಗಿಯಾಗಿ ಆಟವಾಡಲು ಒಂದು ಮೈದಾನವನ್ನು ನಿರ್ಮಿಸಿ ಕೊಡಬೇಕೆಂದೂ, ಅದಕ್ಕೆ ತಗಲುವ ವೆಚ್ಚವನ್ನು ಅವರು ಭರಿಸುತ್ತಾರೆಂದೂ ಹೇಳಿದರು.
(ಇನ್ನೂ ಇದೆ)
(ಮಾಹಿತಿ ಕೃಪೆ: ಶ್ರೀ ಕಿರಣ್ ಉಪಾಧ್ಯಾಯ ಅವರ ಅಂಕಣ ಬರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ