ಲಾರ್ಡ್ಸ್ ಮೈದಾನ ‘ಕ್ರಿಕೆಟ್ ಕಾಶಿ' ಏಕೆ? (ಭಾಗ ೨)
೧೭೮೭ರಲ್ಲಿ ಈಗಿನ ಡಾರ್ಸೆಟ್ ಸ್ಕ್ವೇರ್ ಬಳಿ ಥಾಮಸ್ ೭ ಎಕರೆ ಜಾಗವನ್ನು ಕರಾರಿನ ಮೂಲಕ ಪಡೆದುಕೊಂಡ. ಹಗಲು ರಾತ್ರಿಯೆನ್ನದೇ ಮೈದಾನ, ಪಿಚ್, ಗಡಿ ಎಲ್ಲವನ್ನೂ ನಿರ್ಮಾಣ ಮಾಡಿದ. ಇದು ಲಾರ್ಡ್ಸ್ ಮಾಡಿದ ಮೊದಲ ಮೈದಾನ. ಅದೇ ವರ್ಷ ಎಂಸಿಸಿ (ಮೆರಿಲ್ಬೋನ್ ಕ್ರಿಕೆಟ್ ಕ್ಲಬ್) ಸ್ಥಾಪನೆಯಾಗಿ ವೈಟ್ ಕಾಂಡುಯೆಟ್ ಕ್ಲಬ್ ಅದರಲ್ಲಿ ವಿಲೀನವಾಯಿತು. ೧೮೧೦ರಲ್ಲಿ ಈ ಜಾಗದ ಕರಾರು ಮುಗಿದ ಕಾರಣ ಥಾಮಸ್ ಲಾರ್ಡ್ಸ್ ಬೇರೆ ಸ್ಥಳವನ್ನು ಹುಡುಕಬೇಕಾದ ಅನಿವಾರ್ಯತೆ ಬಂತು. ಅದಕ್ಕಾಗಿ ಆತ ಲೆಸನ್ ಗ್ರೋವ್ ಎಂಬಾತನ ಬಳಿ ೮೦ ವರ್ಷದ ಕರಾರು ಮಾಡಿ ಲಾರ್ಡ್ಸ್ ಮಿಡಲ್ ಗ್ರೌಂಡ್ ನಿರ್ಮಾಣ ಮಾಡಿದ. ಥಾಮಸ್ ನ ದುರಾದೃಷ್ಣವೋ ಏನೋ ಈ ಮೈದಾನ ನಿರ್ಮಾಣವಾದ ಮೂರು ವರ್ಷಗಳ ಬಳಿಕ ಸರಕಾರ ಆ ಜಾಗದಲ್ಲಿ ಕಾಲುವೆ ತೋಡಲು ಯೋಜನೆಯನ್ನು ಹಾಕಿಕೊಂಡಿತು. ಈ ಕಾಲುವೆ ಈತನ ಮೈದಾನದ ನಡುಭಾಗದಿಂದ ಹಾದುಹೋಗುವ ಕಾರಣದಿಂದ ಮೈದಾನ ತೆರವುಗೊಳಿಸುವುದು ಅನಿವಾರ್ಯವಾಯಿತು. ಜಾಗದ ಮಾಲೀಕರ ಜೊತೆ ಕರಾರು ಇದ್ದ ಕಾರಣ ಅವರು ಆತನಿಗೆ ಬದಲಿ ಸ್ಥಳವನ್ನು ನೀಡುವುದಾಗಿ ವಾಗ್ದಾನ ಮಾಡಿದರು. ಆದರೆ ಅವರು ನೀಡಿದ ಜಾಗ ಸಣ್ಣ ಗುಡ್ಡದ ಮೇಲೆ ಇದ್ದ ಕೊಳದ ಪ್ರದೇಶ. ಕೊಳವನ್ನೇ ಮೈದಾನ ಮಾಡುವ ಸಂಕಷ್ಟಕ್ಕೆ ಬಿದ್ದ ಥಾಮಸ್ ಹಠ ಬಿಡಲಿಲ್ಲ.
ತಕ್ಷಣವೇ ಥಾಮಸ್ ಕೊಳಕ್ಕೆ ಮಣ್ಣು ತುಂಬಿಸುವ ಕೆಲಸ ಪ್ರಾರಂಭ ಮಾಡಿದ. ರಾತ್ರೋರಾತ್ರಿ ಮಿಡಲ್ ಗ್ರೌಂಡ್ ನಿಂದ ಟರ್ಫ್ ಅನ್ನು ಹೊತ್ತು ತಂದ. ಮೊದಲಿಗೆ ಆತನ ಸಹಾಯಕ್ಕೆ ಬಂದವರು ಕೊನೆಕೊನೆಗೆ ಕೈಕೊಟ್ಟರು. ಎಲ್ಲಾ ಕೆಲಸವನ್ನು ಆತನೊಬ್ಬನೇ ಮಾಡಬೇಕಾಗಿತ್ತು. ಆದರೆ ಆತ ಧೃತಿಗೆಡಲಿಲ್ಲ. ಒಂದು ವರ್ಷದ ಅವಧಿಯಲ್ಲಿ ಎಲ್ಲವನ್ನೂ ಮುಗಿಸಿ ಈಗಿನ ಲಾರ್ಡ್ಸ್ ಮೈದಾನವನ್ನು ನಿರ್ಮಾಣ ಮಾಡಿಯೇ ಬಿಟ್ಟ. ಆದರೆ ಮೈದಾನ ತಯಾರಾಗುವ ಹೊತ್ತಿಗೆ ಆತನಲ್ಲಿದ್ದ ಹಣವೆಲ್ಲಾ ಮುಗಿದು, ಸಾಲ ಮಾಡಿ, ದಿವಾಳಿಯಾಗಿದ್ದ. ಮೈದಾನದ ಒಂದು ಅಂಚಿನಲ್ಲಿ ತನಗೋಸ್ಕರ ಒಂದು ಮನೆ ಕಟ್ಟಬೇಕೆಂದು ಆತನ ಯೋಚನೆಯಾಗಿತ್ತು. ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಅದು ಕಾರ್ಯರೂಪಕ್ಕೆ ಬರಲಿಲ್ಲ. ಬಂದಿದ್ದರೆ ಲಾರ್ಡ್ಸ್ ಮೈದಾನ ಉಳಿದುಕೊಳ್ಳುತ್ತಿರಲಿಲ್ಲವೇನೋ?
ಈತನ ಕಷ್ಟವನ್ನು ಗಮನಿಸಿದ ಎಂಸಿಸಿ ತಂಡದಲ್ಲಿ ಉತ್ತಮ ಬ್ಯಾಟ್ಸ್ ಮ್ಯಾನ್ ಆಗಿದ್ದ ವಿಲಿಯಂ ವಾರ್ಡ್ ಸಹಕಾರ ನೀಡಲು ಮನಸ್ಸು ಮಾಡಿದನು. ಆತ ಬ್ಯಾಂಕ್ ಆಫ್ ಇಂಗ್ಲೆಂಡ್ ನ ನಿರ್ದೇಶಕರಾಗಿದ್ದುದರಿಂದ ೫,೦೦೦ ಪೌಂಡ್ ಹಣಕಾಸಿನ ನೆರವು ನೀಡಿ ಮೈದಾನವನ್ನು ಖರೀದಿಸಿದ. ಆದರೆ ಆತ ದೊಡ್ಡ ಮನಸ್ಸು ಮಾಡಿ ಆ ಮೈದಾನದ ಹೆಸರು ಬದಲಾಯಿಸಲು ಹೋಗದೇ ಲಾರ್ಡ್ಸ್ ಎಂಬ ಹೆಸರನ್ನೇ ಉಳಿಸಿಕೊಂಡ. ಸುಮಾರು ೨೦೦ ವರ್ಷಗಳ ಹಿಂದೆ ಅಷ್ಟೊಂದು ಹಣಕಾಸಿನ ನೆರವಿಲ್ಲದೇ ಮೂರು ಮೈದಾನಗಳನ್ನು ನಿರ್ಮಾಣ ಮಾಡಿದ ಥಾಮಸ್ ಲಾರ್ಡ್ಸ್ ಅವರನ್ನು ಈ ಕಾರಣಕ್ಕಾಗಿಯಾದರೂ ಅಭಿನಂದಿಸಲೇ ಬೇಕು.
ಲಾರ್ಡ್ಸ್ ಮೈದಾನದ ಕಥೆ ಹೀಗಾದರೆ ಎಂಸಿಸಿಯೂ ತನ್ನ ಘನತೆಯನ್ನು ಶತಮಾನಗಳಿಂದ ಉಳಿಸಿಕೊಂಡು ಬಂದಿದೆ. ಕ್ರಿಕೆಟ್ ಗೆ ಸಂಬಂಧಿಸಿದ ಬಹುತೇಕ ನೀತಿ, ನಿಯಮ, ನಿಯಂತ್ರಣ, ನಿರ್ಬಂಧಗಳು ನಿರ್ಣಯವಾಗುವುದು ಎಂಸಿಸಿಯಲ್ಲೇ. ೨ ವಿಕೆಟ್ ನಡುವಿನ ಅಂತರ, ಪಿಚ್ ನಿಂದ ಬೌಂಡರಿಯ ದೂರ, ಬಾಲ್ ನ ಅಳತೆ, ಗಾತ್ರ, ಬಣ್ಣದವರೆಗೆ ಎಲ್ಲವೂ ಎಂಸಿಸಿಯೇ ನಿರ್ಧಾರ ಮಾಡುತ್ತದೆ. ಇದನ್ನು ಇಂದಿಗೂ ಎಲ್ಲರೂ ಕ್ರಿಕೆಟ್ ಆಟದ ಪಾಲಕ ಸಂಸ್ಥೆ ಎಂದೇ ಕರೆಯುತ್ತಾರೆ. ಎಂಸಿಸಿಯ ಅನುಮತಿ ಇಲ್ಲದೆ ಪ್ರಥಮ ದರ್ಜೆಯ ಕ್ರಿಕೆಟ್ ನಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಈ ಎಂಸಿಸಿ ಕಚೇರಿ ಇರುವುದು ಲಾರ್ಡ್ಸ್ ಮೈದಾನದಲ್ಲೇ.
ಎರಡನೇ ಮಹಾ ಯುದ್ಧ ನಡೆಯುತ್ತಿರುವಾಗಲೂ ಲಾರ್ಡ್ಸ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಆ ಸಮಯದಲ್ಲಿ ನಡೆದ ಬಾಂಬ್ ದಾಳಿಯಿಂದ ಫೆವಿಲಿಯನ್ ಭಾಗಕ್ಕೆ ಸ್ವಲ್ಪ ಹಾನಿಯಾದರೂ ಆ ದಿನದ ಆಟ ನಿಂತಿರಲಿಲ್ಲ. ಲಾರ್ಡ್ಸ್ ಮೈದಾನದಲ್ಲಿ ಕ್ರಿಕೆಟ್ ಹೊರತು ಪಡಿಸಿ ಟೆನಿಸ್, ಬೇಸ್ ಬಾಲ್, ಬಿಲ್ಲುಗಾರಿಕೆ ಮುಂತಾದ ಆಟಗಳಿಗೂ ಜಾಗವಿದೆ. ಲಾರ್ಡ್ಸ್ ನ ಮೈದಾನದ ಜೊತೆಗೆ ಡ್ರೆಸ್ಸಿಂಗ್ ರೂಮ್ ಕೂಡಾ ವಿಶೇಷತೆಯಿಂದ ಕೂಡಿದೆ. ಡ್ರೆಸ್ಸಿಂಗ್ ರೂಮ್ ನಲ್ಲಿರುವ ಫಲಕದಲ್ಲಿ ಶತಕ ಬಾರಿಸಿದವರ ಹೆಸರು, ಒಂದು ಇನ್ನಿಂಗ್ಸ್ ನಲ್ಲಿ ಐದು ವಿಕೆಟ್, ಪಂದ್ಯದಲ್ಲಿ ಹತ್ತು ವಿಕೆಟ್ ಪಡೆದ ಬೌಲರ್ ಹೆಸರು, ಕಾರಿಡಾರ್ ನಲ್ಲಿ ಮಹಾನ್ ಕ್ರಿಕೆಟ್ ಆಟಗಾರರ ಭಾವಚಿತ್ರ ಎಲ್ಲವೂ ಇದೆ. ಇದರ ಜೊತೆಗೆ ಲಾರ್ಡ್ಸ್ ನಲ್ಲಿ ಒಂದು ಪುಟ್ಟ ವಸ್ತು ಸಂಗ್ರಹಾಲಯವೂ ಇದೆ. ಅಲ್ಲಿರುವ ಪ್ರತಿಯೊಂದು ವಸ್ತುವೂ ಒಂದೊಂದು ಸ್ವಾರಸ್ಯಕರವಾದ ಕಥೆಯನ್ನು ಹೇಳುತ್ತದೆ. ಅದಕ್ಕಾಗಿಯೇ ಎಲ್ಲಾ ಕ್ರಿಕೆಟ್ ಆಟಗಾರರು ಲಾರ್ಡ್ಸ್ ಮೈದಾನದಲ್ಲಿ ಆಟವಾಡಲು ಬಯಸುವುದು. ಆಟ ಆಡಲು ಸಾಧ್ಯವಾಗದೇ ಹೋದರೂ ಕನಿಷ್ಟ ಅಲ್ಲಿನ ಮೈದಾನದ ಹುಲ್ಲುಹಾಸಿನಲ್ಲಿ ಕೈಯಾಡಿಸುವುದೇ ದೊಡ್ಡ ಅದೃಷ್ಟ ಎಂದು ನಂಬಿರುವ ಆಟಗಾರರು ಹಲವರಿದ್ದಾರೆ.
ನಿಮಗೆ ಗೊತ್ತಿರಲಿ, ಎಂಸಿಸಿಯ ಸದಸ್ಯತ್ವ ಪಡೆದುಕೊಳ್ಳಬೇಕಾದರೆ ಬರೋಬರಿ ೨೭ ವರ್ಷ ಕಾಯಬೇಕು. ಶತಮಾನಗಳಿಂದಲೂ ಕಾಪಾಡಿಕೊಂಡು ಬಂದಿರುವ ಆಯತಾಕಾರದ ಮೈದಾನ, ಅದರ ಸುತ್ತಲೂ ಬಿಳಿ ಬಣ್ಣದ ೩೧ ಸಾವಿರ ಆಸನಗಳು, ಮಾಧ್ಯಮ ಗ್ಯಾಲರಿ, ಒಂದು ಪೌಂಡ್ ಕೊಟ್ಟರೆ ಸಿಗುವ ಸ್ಕೋರ್ ಕಾರ್ಡ್ ಎಲ್ಲವೂ ಇಲ್ಲಿಗೆ ಭೇಟಿ ನೀಡಿದವರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಇಂತಹ ಒಂದು ಮೈದಾನವನ್ನು ನಿರ್ಮಾಣ ಮಾಡಿದ ಥಾಮಸ್ ಲಾರ್ಡ್ಸ್ ಅವರಿಗೆ ನಾವು ‘ಥ್ಯಾಂಕ್ಸ್’ ಅನ್ನಲೇ ಬೇಕು.
(ಮುಗಿಯಿತು)
(ಮಾಹಿತಿ ಕೃಪೆ: ಶ್ರೀ ಕಿರಣ್ ಉಪಾಧ್ಯಾಯ ಅವರ ಅಂಕಣ ಬರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ