ಲಾಲಿ ಪಾಪ್ ಮತ್ತು ಇತರ ಕಥೆಗಳು
ಹರಿಕಿರಣ್ ಹೆಚ್. ಉದಯೋನ್ಮುಖ ಕಥೆಗಾರರು. ‘ಲಾಲಿ ಪಾಪ್ ಮತ್ತು ಇತರ ಕಥೆಗಳು' ಇವರ ಚೊಚ್ಚಲ ಕಥಾ ಸಂಕಲನ. ಈ ಸಂಕಲನದಲ್ಲಿ ೧೦ ಕಥೆಗಳಿವೆ. ಕಥೆಗಳು ಪುಟ್ಟದಾಗಿದ್ದು ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಅದರಲ್ಲೂ ಕೆಲವೊಂದು ಕಥೆಗಳು ನಿಜಕ್ಕೂ ಬಹಳ ಚೆನ್ನಾಗಿದೆ. ಈ ಸಂಕಲನದಲ್ಲಿ ನಿರ್ಭಯ, ಮೊಬೈಲ್ ಮತ್ತು ನಾನು, ಕಷ್ಟಮರ್ ದೇವೋಭವ, ಪರೀಕ್ಷೆ, ಉರುಳು, ಕ್ಷಣಿಕ, ಬಾಟ್ಲಿ, ಭಯ, ಕಾಫಿ ಬೈಟ್, ಲಾಲಿ ಪಾಪ್ ಮೊದಲಾದ ಹೆಸರಿನ ಹತ್ತು ಕಥೆಗಳಿವೆ.
ಕಥೆಗಾರ ಹರಿಕಿರಣ್ ಅವರು ತನ್ನ ನನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ನನಗೆ ಚಿಕ್ಕಂದಿನಿಂದಲೂ ಓದುವ ಹುಚ್ಚಿತ್ತು. ಬಾಲ ಸಾಹಿತ್ಯಗಳಾದ ನಿಯತಕಾಲಿಕಗಳಿಂದ ಶುರುವಾದ ಈ ಗೀಳು ಮುಂದೆ ಕತೆ ಕಾದಂಬರಿಗಳತ್ತ ನನ್ನ ಅಭಿರುಚಿ ಬೆಳೆಯಲು ಸಹಾಯ ಮಾಡಿತ್ತು. ಶಾಲೆಯಲ್ಲಿ ಇರುವಾಗಲೇ ಕೆಲವೊಂದು ಕಥಾ ಸ್ಪರ್ಧೆ, ಪ್ರಬಂಧ ರಚನೆ ಇತ್ಯಾದಿಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಇದರಲ್ಲಿರುವ ಐದು ಕತೆಗಳು ತುಷಾರ, ಮಂಗಳ, ಉದಯವಾಣಿಗಳಲ್ಲಿ ಪ್ರಕಟವಾದರೆ ಉಳಿದವುಗಳು ಅಂತರ್ಜಾಲ ಮಾಧ್ಯಮಗಳಾದ ಪ್ರತಿಲಿಪಿ ಕನ್ನಡ ಇತ್ಯಾದಿಗಳಲ್ಲಿ ಲಭ್ಯವಿದೆ. ಪ್ರತಿಯೊಂದು ಕತೆಯೂ ಬೇರೆ ಬೇರೆ ಪ್ರಕಾರಗಳಾಗಿದ್ದು ನಿಮ್ಮ ಮನಸ್ಸನ್ನು ರಂಜಿಸುತ್ತದೆಂದು ನಂಬಿದ್ದೇನೆ.”
ಮೊದಲ ಕಥೆಯಾದ 'ನಿರ್ಭಯ' ಶೀರ್ಷಿಕೆಯನ್ನು ಓದುವಾಗ ದೆಹಲಿಯ ನಿರ್ಭಯ ಅತ್ಯಾಚಾರ ಘಟನೆಯ ನೆನಪಾಗುತ್ತದೆ. ಅದೇ ಎಳೆಯಲ್ಲಿ ಈ ಶೀರ್ಷಿಕೆಯನ್ನು ಲೇಖಕರು ನೀಡಿದರೂ, ಕಥೆಯನ್ನು ಹೆಚ್ಚು ಎಳೆಯಲು ಹೋಗದೇ ಕಿರುಕಥೆಯಾಗಿಯೇ ಮುಗಿಸಿದ್ದಾರೆ. ಲೇಖಕರು ಬೈಕಿನಲ್ಲಿ ಮನೆಯ ಕಡೆ ಹೋಗುವಾಗ ನಿರ್ಜನವಾದ ಪ್ರದೇಶದಲ್ಲಿದ್ದ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಸುಂದರ ಹುಡುಗಿಯನ್ನು ಇವರ ಎದುರೇ ಮೂವರು ದುರುಳರು ಬಲವಂತವಾಗಿ ಅಪಹರಿಸಿದಾಗ ಲೇಖಕರು ಏನು ಮಾಡಿದರು, ಏನಿದರ ಅಂತ್ಯ ಎಂಬುವುದನ್ನು ಕಥೆ ಓದಿಯೇ ತಿಳಿಯಬೇಕು.
ಎರಡನೇ ಕಥೆಯಾದ ‘ಮೊಬೈಲ್ ಮತ್ತು ನಾನು’ ಇದು ಕೇವಲ ಕಥೆಗಾರರ ಕಥೆಯಷ್ಟೇ ಅಲ್ಲ, ನಮ್ಮ ನಿಮ್ಮೆಲ್ಲರ ಕಥೆಯೂ ಹೌದು. ಮೊಬೈಲ್ ಎಂಬ ವಸ್ತುವಿಗೆ ದಾಸರಾದ ಬಳಿಕ ನಮ್ಮ ಸ್ಥಿತಿಯೂ ಈ ಕಥಾ ನಾಯಕನ ರೀತಿಯೇ ಆಗಿದೆ. ಹಾಳಾದ ಮೊಬೈಲ್ ಅನ್ನು ಸರಿ ಪಡಿಸಲು ಮೊಬೈಲ್ ಸರ್ವಿಸ್ ಅಂಗಡಿಗೆ ತೆರಳಿದಾಗ, ಸರಿಪಡಿಸುವಾತ ನಾಳೆ ಬನ್ನಿ ಎನ್ನುತ್ತಾನೆ. ನಮ್ಮ ಕಥಾ ನಾಯಕ ಮನೆಗೆ ಬಂದ ಬಳಿಕ ಮೊಬೈಲ್ ಇಲ್ಲದೇ ಚಡಪಡಿಸುತ್ತಿರುವುದನ್ನು ಕಂಡಾಗ ಇಂದಿನ ನಮ್ಮೆಲ್ಲರ ಸ್ಥಿತಿ ಜ್ಞಾಪಕಕ್ಕೆ ಬರುತ್ತದೆ. ಮರು ದಿನ ಮೊಬೈಲ್ ಸರ್ವಿಸ್ ಅಂಗಡಿಗೆ ಹೋಗುವಾಗ ಸರಿಯಾಗಲು ಒಂದು ವಾರ ಆಗುತ್ತದೆ ಎನ್ನುತ್ತಾರೆ. ಮೊಬೈಲ್ ಇಲ್ಲದೇ ಒಂದು ವಾರ ಕಳೆದ ಬಳಿಕ ಮೊಬೈಲ್ ನ ಅಗತ್ಯ ಲೇಖಕರಿಗೆ ಇದೆಯೇ? ಎನ್ನುವ ಸಂಶಯ ತಲೆದೋರುತ್ತದೆ. ಯಾವುದಕ್ಕೂ ಕಥೆಯನ್ನು ಓದಿ ಇದನ್ನು ಅರಿಯಬೇಕು.
ಈ ಕಥಾ ಸಂಕಲನದಲ್ಲಿ ನನಗಿಷ್ಟವಾದ ಕಥೆಯೆಂದರೆ ‘ಕಷ್ಟಮರ್ ದೇವೋಭವ' ಈ ಕಥೆಯಲ್ಲಿ ಹಾಸ್ಯವೂ ಇದೆ, ಉತ್ತಮ ಸಂದೇಶವೂ ಇದೆ. ಒಬ್ಬ ಮನುಷ್ಯನನ್ನು ನೋಡಿ ಈತ ಹೀಗೇ ವರ್ತಿಸುತ್ತಾನೆ ಎನ್ನುವಂತಿಲ್ಲ. ಅದೇ ರೀತಿಯ ಸಂದೇಶ ಸಾರುವ ಉತ್ತಮ ಕಥೆಯಿದು. ಲಕ್ಷ್ಮೀ ನಾರಾಯಣ ಭಟ್ಟರವರು ಕಂಪ್ಯೂಟರ್ ಖರೀದಿಸಲು ಈ ಕಥೆಗಾರನ ಅಂಗಡಿಗೆ ಬರುತ್ತಾರೆ. ಹಲವಾರು ಚರ್ಚೆಗಳ ಬಳಿಕ ಒಂದು ಕಂಪ್ಯೂಟರ್ ಅನ್ನು ಆಯ್ಕೆ ಮಾಡುವ ಭಟ್ಟರು, ತಮ್ಮ ಮನೆಗೇ ಬಂದು ಜೋಡಿಸಿಕೊಡಬೇಕೆಂಬ ಶರತ್ತು ವಿಧಿಸುತ್ತಾರೆ. ಭಟ್ಟರ ಮನೆಗೆ ಹೋಗೋದೇ ಒಂದು ಸಾಹಸಮಯ ಕಾರ್ಯ. ಹಾಗೂ ಹೀಗೂ ಹೋಗಿ, ಕಂಪ್ಯೂಟರ್ ಜೋಡಿಸಿ ಇಂಟರ್ ನೆಟ್ ಸಂಪರ್ಕ ನೀಡಿ, ಮರಳುವಾಗ ದಾರಿ ಮರೆತು ಪಜೀತಿಗೊಳಗಾಗುತ್ತಾರೆ ಕಥೆಗಾರ.
ಮದುದಿನದಿಂದಲೇ ಭಟ್ಟರಿಂದ ಪದೇ ಪದೇ ಬರುವ ಫೋನುಗಳು ಹಾಗೂ ಸಮಸ್ಯೆಗಳಿಂದ ಕಥೆಗಾರ ಹೈರಾಣಾಗಿ ಹೋಗುತ್ತಾನೆ. ಕಡೆಗೆ ಭಟ್ಟರಿಂದ ಬರುವ ಫೋನ್ ಕರೆ ಸ್ವೀಕರಿಸದೇ ಇರಲು ನಿರ್ಧಾರ ಮಾಡುತ್ತಾನೆ. ಆದರೆ ಅದೇ ಸಮಯ ಒಂದು ದೊಡ್ದ ತಿರುವು ಈ ಕಥೆಗಾರನ ಬದುಕಿನಲ್ಲಿ ಬರುತ್ತದೆ. ಅದಕ್ಕೆ ಭಟ್ಟರೇ ಕಾರಣ ಎಂದು ತಿಳಿದಾಗ ಏನಾಗುತ್ತೆ? ಎಂಬುವುದನ್ನು ನೀವು ಈ ಕಥೆಯನ್ನು ಓದಿಯೇ ಆಸ್ವಾದಿಸಬೇಕು. ಕಥೆಯಲ್ಲಿ ಬಹಳ ಸೊಗಸಾದ ಸಂಭಾಷಣೆಯನ್ನು ಚಿತ್ರಿಸಿದ್ದಾರೆ. ಓದಲು ಬಹಳ ಮಜ ಕೊಡುತ್ತದೆ.
ನಂತರದ ಕಥೆಯಾದ ‘ಪರೀಕ್ಷೆ’ಯಲ್ಲಿ ಚೀಟಿಗಳ ಮೂಲಕ ನಕಲು ಮಾಡುವ ಸಂಗತಿ, ‘ಉರುಳು’ ಕಥೆಯಲ್ಲಿ ಸಾಲಗಾರ ಕಿರುಕುಳಕ್ಕೆ ಹೆದರಿ ಆತ್ಮಹತ್ಯೆ ಮಾಡುವ ಸಂಗತಿ, ಹೀಗೆ ಉಳಿದ ಕಥೆಗಳೂ ಚೆನ್ನಾಗಿವೆ. ಕೆಲವೊಂದು ಕಥೆಗಳು ಅನಿರೀಕ್ಷಿತವಾಗಿ ನಾಟಕೀಯ ರೂಪದಲ್ಲಿ ತಿರುವುಗಳನ್ನು ತೆಗೆದುಕೊಂಡರೂ, ಕಥೆಯ ಸುಖಾಂತ್ಯಕ್ಕೆ ಅದು ಅನಿವಾರ್ಯವೆನಿಸುತ್ತದೆ. ಪುಸ್ತಕದಲ್ಲಿರುವ ಕೊನೆಯ ಕಥೆಯಾದ ‘ಲಾಲಿ ಪಾಪ್' ಮಾನವೀಯ ಗುಣಕ್ಕೆ ಸಂಬಂಧಿಸಿದ್ದಾಗಿದೆ.
ಈ ಸಂಕಲನದಲ್ಲಿ ಬಹಳಷ್ಟು ಆಂಗ್ಲ ಭಾಷಾ ಪದಗಳಿವೆ. ಓದುವ ವೇಗಕ್ಕೆ ಇದು ತುಂಬಾ ಅಡ್ಡಿ ಬಾರದೇ ಇದ್ದರೂ ಕನ್ನಡ ಪುಸ್ತಕದಲ್ಲಿ ಅಗತ್ಯಕ್ಕಿಂತ ಆಂಗ್ಲ ಭಾಷಾ ಪದಗಳು ಸ್ವಲ್ಪ ಮುಜುಗರ ತರುತ್ತವೆ. ಉದಾಹರಣೆಗೆ ಲಾಲಿ ಪಾಪ್ ಕಥೆಯ ಕೊನೆಯ ಒಂದು ಪ್ಯಾರಾದಲ್ಲಿ ಇನ್ಸೆನ್ಸಿಟಿವ್, ಅಟ್ಲೀಸ್ಟ್, ಲಿಫ್ಟ್ ಆಪರೇಟರ್, ಟ್ರಾಫಿಕ್ ಹೀಗೆ ಹಲವಾರು ಪದಗಳು ಕಂಡು ಬರುತ್ತವೆ. ಇವೆಲ್ಲವನ್ನು ಬದಿಗಿಟ್ಟು ನೋಡಿದರೆ ಹರಿಕಿರಣ್ ಅವರು ಉತ್ತಮ ಕಥೆಗಾರರಾಗುವ ಭರವಸೆಯನ್ನು ಮೂಡಿಸುತ್ತಾರೆ. ಬೋರ್ ಹೊಡೆಸದಂತೆ ಕಥೆಯನ್ನು ಹೆಣೆಯುವ ಕಲೆ ಅವರಿಗೆ ಸಿದ್ಧಿಸಿದೆ ಎಂದು ಖಂಡಿತವಾಗಿಯೂ ಹೇಳಬಹುದು. ಏಕೆಂದರೆ ೯೦ ಪುಟಗಳ ಈ ಪುಸ್ತಕದ ಹತ್ತೂ ಕತೆಗಳನ್ನು ನಾನು ಒಂದೇ ಗಂಟೆಯ ಓದಿನಲ್ಲಿ ಮುಗಿಸಿದ್ದೇನೆ. ಈ ಸಂಕಲನವನ್ನು ಹರಿಕಿರಣ ಅವರು ಅಗಲಿದ ತಮ್ಮ ಸಹೋದರ ಪ್ರವೀಣನಿಗೆ ಅರ್ಪಣೆ ಮಾಡಿದ್ದಾರೆ.