ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಪುಣ್ಯಸ್ಮರಣೆ

ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಪುಣ್ಯಸ್ಮರಣೆ

ನಮ್ಮ ದೇಶ ಭಾರತ ಬಹಳ ವಿಶಾಲವಾದ್ದು ಮತ್ತು ವಿಶಿಷ್ಟವಾದ್ದು. ಇಂದು ಭಾರತದ ಸ್ವಾತಂತ್ರ್ಯಾ ನಂತರದ ಎರಡನೇ ಪ್ರಧಾನಿಯಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ೫೪ನೆಯ ಪುಣ್ಯ ತಿಥಿ.

ಬಹುಷಃ ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ನಿಧನರಾದ ಭಾರತದ ಏಕೈಕ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರೇ ಇರಬಹುದು. ಮೊದಲನೆಯವರೂ ಹಾಗೂ ಕೊನೆಯವರೂ ಅವರೇ ಆಗಿರುತ್ತಾರೆ. ಉತ್ತರ ಪ್ರದೇಶದ ಮೊಘಲ್ ಸರಾಯಿ ಎಂಬಲ್ಲಿ ೧೯೦೪, ಅಕ್ಟೋಬರ್ ೨ರಂದು ಜನಿಸಿದರು. ಇವರ ತಂದೆ ಶಾರದಾ ಪ್ರಸಾದ್, ತಾಯಿ ರಾಮ್ ದುಲಾರಿ. ಬಾಲ್ಯದಲ್ಲೇ ತಮ್ಮ ತಂದೆಯವರನ್ನು ಕಳೆದುಕೊಂಡ ಶಾಸ್ತ್ರೀಜಿಯವರು ತಮ್ಮ ತಾಯಿಯವರ ಪ್ರೀತಿಯಲ್ಲೇ ಬೆಳೆದರು. ಬಾಲ್ಯದ ಬಡತನದ ಅನುಭವ ಶಾಸ್ತ್ರೀಜಿಯವರನ್ನು ಬಹಳಷ್ಟು ಗಟ್ಟಿಗೊಳಿಸಿತು. ಇವರ ಹೆಸರಿನಲ್ಲಿರುವ ‘ಶಾಸ್ತ್ರಿ' ಎಂಬ ಪದನಾಮವು ಇವರಿಗೆ ಕಾಶಿ ವಿದ್ಯಾಪೀಠವು ನೀಡಿದ ಬಿರುದು.  

‌ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ, ದೇಶದ ಆಗುಹೋಗುಗಳ ಪರಿಚಯವಿದ್ದ, ಸರಳತೆಯ ಸಾಕಾರ ಮೂರ್ತಿ  ಶಾಸ್ತ್ರೀಜಿಯವರನ್ನು ದೇಶದ ಜನತೆ *ಪ್ರಧಾನಿ* ಯಾಗಿ ಆರಿಸಿತು. ಪ್ರಾಮಾಣಿಕತೆ, ಸತ್ಯ ಸಂಧತೆ, ನಿಷ್ಠೆ, ಅಹಂ ಇಲ್ಲದಿರುವಿಕೆ, ತನಗಾಗಿ ಏನನ್ನೂ ಮಾಡದ ಓರ್ವ ಸಜ್ಜನರು ಇವರು. ಆದರೆ ಯಾವತ್ತೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾತ್ರ ಹಿಂಜರಿಯಲಿಲ್ಲ. ಇವರೇನೂ ಶ್ರೀಮಂತಿಕೆಯ ಹಿನ್ನೆಲೆ ಇದ್ದವರಲ್ಲ. ಬಹಳಷ್ಟು ಆರ್ಥಿಕ ಸಮಸ್ಯೆಗಳು, ಇನ್ನಿತರ ತೊಂದರೆಗಳನ್ನು ದೇಶ ಎದುರಿಸುತ್ತಿದ್ದ ಸಮಯ ಅದಾಗಿತ್ತು. ಬರಗಾಲ ತಾಂಡವವಾಡುತ್ತಿತ್ತು. ಇವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಭಾರತ ದೇಶದ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಿತ್ತು. ಇನ್ನೊಂದೆಡೆ ಪಾಕಿಸ್ತಾನದ ಆಕ್ರಮಣ. ಶಾಸ್ತ್ರೀಜಿಯವರ ದಕ್ಷ ಹಾಗೂ ಪ್ರಾಮಾಣಿಕ ಮುತ್ಸದ್ದಿ ತನದಲ್ಲಿ ಎಲ್ಲವೂ ನಿಭಾಯಿಸಲ್ಪಟ್ಟಿತು.

ಶಾಸ್ತ್ರೀಜಿಯವರು ತ್ರಿಭಾಷಾ ಸೂತ್ರವನ್ನು ಜಾರಿಗೆ ತಂದರು. ಯುದ್ಧದಲ್ಲಿ ಪಾಕಿಸ್ತಾನ ಹೀನಾಯ ಸೋಲನ್ನು ಅನುಭವಿಸಿತು. ಆ ಸಂದರ್ಭದಲ್ಲಿ ಅವರು ಕರೆ ಕೊಟ್ಟ ಘೋಷ ವಾಕ್ಯ*ಜೈ ಜವಾನ್, ಜೈ ಕಿಸಾನ್* ಈಗಲೂ ಸೈನಿಕರ, ರೈತಾಪಿ ಜನರ, ನಮ್ಮ ಮಕ್ಕಳ, ನಮ್ಮಗಳೆಲ್ಲರ ಮನದಲಿ ಇದೆ.

ರಷ್ಯಾ ದೇಶದ ತಾಷ್ಕೆಂಟ್ ನಲ್ಲಿ ೧೦--೦೧--೧೯೬೬ರಂದು ಶಾಂತಿ ಒಪ್ಪಂದಕ್ಕೆ ಸಹಿ ಮಾಡಲೆಂದು ಭಾರತದ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಪಾಕಿಸ್ತಾನದ ಪ್ರಧಾನಿ ಆಯೂಬ್ ಖಾನ್ ರವರು ಸೇರಿದರು. ಇದರ ಉಸ್ತುವಾರಿ ವಹಿಸಿದ್ದು ರಷ್ಯಾದ ಅಧ್ಯಕ್ಷರಾದ ಅಲೆಕ್ಸಿ ಕೊಸಿಗಿನ್. ಇದನ್ನೇ ತಾಷ್ಕೆಂಟ್ ಒಪ್ಪಂದ ಎಂದು ಕರೆಯಲಾಗುತ್ತದೆ. ಸಹಿ ಹಾಕಿದ ರಾತ್ರಿಯೇ (ಮರಣ: ಜನವರಿ ೧೧, ೧೯೬೬) ಶಾಸ್ತ್ರೀಜಿಯವರು *ಹೃದಯಾಘಾತ* ದಿಂದ ಅಸು ನೀಗಿದರು. ಈ ವಿಷಯಗಳಲ್ಲಿ ಹಲವಾರು ಗೊಂದಲ ಮತ್ತು ಸಂಶಯಗಳಿದ್ದರೂ ಯಾವುದೂ ಸಾಬೀತಾಗಿಲ್ಲ. ದೇಶದ ಪ್ರಧಾನಿಯೊಬ್ಬರ ನಿಧನ ಹೀಗೆ ಗೊಂದಲಮಯವಾಗಿ ಆದದ್ದು ಮಾತ್ರ ಬಹಳ ಬೇಸರದ ಸಂಗತಿ.

ಶಾಸ್ತ್ರೀಜಿಯವರು ತಮ್ಮ ಮಗನಿಗೆ ಶಿಫಾರಸು ಮಾಡಬೇಕೆಂದು ಹೇಳಿದಾಗ ಹೇಳಿದ ಮಾತು*ಅರ್ಹತೆ ಮತ್ತು ಪ್ರತಿಭೆ ಇದ್ದರೆ ತಾನಾಗಿಯೇ ಉದ್ಯೋಗ ಸಿಗುತ್ತದೆ*  ಎಂಬುದಾಗಿ. ತಾವು ಮರಣಿಸಿದ ಕಾಲಕ್ಕೆ ಬ್ಯಾಂಕ್ ಲೋನ್ ಮಾಡಿ ಕಾರು ಖರೀದಿಸಿದ( ತನ್ನ ಸ್ವಂತಕ್ಕೆ) ಕಂತುಗಳು ಬಾಕಿ ಇತ್ತು. ಶಾಸ್ತ್ರೀಜಿಯವರಿಗೆ ಮರಣೋತ್ತರವಾಗಿ ೧೯೬೬ರಲ್ಲಿ*ಭಾರತರತ್ನ* ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೈ ಜವಾನ್ ,ಜೈ ಕಿಸಾನ್ ರುವಾರಿ, ಸರಳ, ಪ್ರಾಮಾಣಿಕತೆಯ ವ್ಯಕ್ತಿತ್ವ, ತಿಲಕರ ಹೋರಾಟದ ಕೆಚ್ಚು ಮೈಗೂಡಿಸಿಕೊಂಡ *ಈ ಮಹಾನ್ ಚೇತನ*  ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು ಒಂದು ಕ್ಷಣ ನಮ್ಮ ಮನದಾಳದ ನುಡಿಗಳಲ್ಲಿ ನೆನಪಿಸೋಣ.

    ಜೈ ಭಾರತ್

ಮಾಹಿತಿ ಸಂಗ್ರಹ:ರತ್ನಾ ಭಟ್ ತಲಂಜೇರಿ.