ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು ನೆನಪಿಸಿಕೊಳ್ಳುತ್ತಾ...
ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. " ಜೈ ಜವಾನ್ ಜೈ ಕಿಸಾನ್ " ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಬಲವಾದ ಬುನಾದಿಯನ್ನು ಮುಂದುವರಿಸಿದ ರಾಜಕೀಯ ಆದರ್ಶ ವ್ಯಕ್ತಿ ಶಾಸ್ತ್ರಿಯವರು. ಗಾಂಧಿ ಯುಗದ ಮುಂದುವರಿದ ಭಾಗ ಇವರು. ಬಹುಶಃ ರಷ್ಯಾದ ತಾಷ್ಕೆಂಟ್ ನಲ್ಲಿ ಪಾಕಿಸ್ತಾನದ ಜೊತೆ ಒಪ್ಪಂದದ ಸಮಯದಲ್ಲಿ ತೀವ್ರ ಚಳಿಯಿಂದ ಹೃದಯಾಘಾತ ಸಂಭವಿಸದೇ ಮತ್ತಷ್ಟು ವರ್ಷ ಆಡಳಿತ ನಡೆಸಿದ್ದರೆ ಭಾರತದ ಅಭಿವೃದ್ಧಿಯ ವೇಗ ಮತ್ತಷ್ಟು ತೀವ್ರವಾಗಿರುತ್ತಿತ್ತು ಎಂದು ಖಚಿತವಾಗಿ ಹೇಳುವಷ್ಟು ದಕ್ಷ ಆಡಳಿತಗಾರರಾಗಿದ್ದರು ಲಾಲ್ ಬಹಾದ್ದೂರ್ ಶಾಸ್ತ್ರಿ. ಇಂದಿನ ರಾಜಕಾರಣಿಗಳು ಅವರ ಜೀವನಶೈಲಿಯಿಂದ ಕನಿಷ್ಠ ಪ್ರಮಾಣದ ಸ್ಪೂರ್ತಿ ಮತ್ತು ಪ್ರಾಮಾಣಿಕತೆಯನ್ನಾದರು ಕೇಳಿ ತಿಳಿದುಕೊಂಡು ಹಾಗೆ ನಡೆಯಲಿ ಎಂದು ಆಶಿಸುತ್ತಾ...
ಆಗಿನ ಸಮಯದಲ್ಲಿ ನೆಹರು ನಂತರ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಆಯ್ಕೆಯಾದ ಪರಿಸ್ಥಿತಿ ಮತ್ತು ಅಂದಿನ ಮೌಲ್ಯಯುತ ರಾಜಕೀಯ ವ್ಯವಸ್ಥೆಯ ಬಗ್ಗೆ ಆಶ್ಚರ್ಯ ಮತ್ತು ಪ್ರಶಂಸೆ ವ್ಯಕ್ತಪಡಿಸುತ್ತಾ… ಮತ್ತೆ ಮಹಾತ್ಮನ ಬಗ್ಗೆ ಎರಡು ಮಾತು.
" ಗಾಂಧಿಯ ಉಪವಾಸದಿಂದ ಗ್ಯಾಸ್ಟ್ರಿಕ್ ಬಂತೆ ಹೊರತು ಸ್ವಾತಂತ್ರ್ಯ ಬರಲಿಲ್ಲ "ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಒಂದು ಪೋಸ್ಟ್ ನೋಡಿದೆ. ಅದನ್ನು ಸಾಕಷ್ಟು ಜನ ಬೆಂಬಲಿಸಿದರು ಸಹ. ಎಲ್ಲಿಗೆ ಇಳಿಯಿತು ನೋಡಿ ಗಾಂಧಿಯ ಅವಹೇಳನ. ಬೇಡ ಗಾಂಧಿ ಬೇಡ, ನೀನಿನ್ನು ಹೊರಡು ಗಾಂಧಿ ಬುದ್ದನಂತೆ ಬೇರೆ ದೇಶಗಳಲ್ಲಿ ಸಂಚರಿಸುತ್ತಾ, ಜಪಾನ್ ವಿಯೆಟ್ನಾಂ ಕೊರಿಯಾ ಚೀನಾ ಭೂತಾನ್ ದಾಟಿ ಮತ್ತೆ ದಕ್ಷಿಣ ಆಫ್ರಿಕಾದತ್ತಾ… ನಿನಗಿನ್ನು ಇಲ್ಲಿ ಜಾಗವಿಲ್ಲ. ಭಾರತ ಬದಲಾಗುತ್ತಿದೆ.
ದೇಶ ಹಾಳಾದರೂ ಬಲಪಂಥ ಉಳಿಯಬೇಕು, ಜನ ಹಾಳಾದರೂ ಎಡಪಂಥ ಬೆಳೆಯಬೇಕು.ಮಾನವೀಯ ಪಂಥ ಯಾರಿಗೂ ಬೇಕಾಗಿಲ್ಲ. ಅವರನ್ನು ಇವರು ಇವರನ್ನು ಅವರು ಒಬ್ಬರಿಗೊಬ್ಬರು ದ್ವೇಷಿಸುತ್ತಾ ನಾವು ಜೀವಪರ ನಾವು ದೇಶಪರ ಎಂದು ಕಚ್ಚಾಡುತ್ತಾ ಜನ ಮತ್ತು ದೇಶ ಎರಡನ್ನೂ ವಿನಾಶದ ಅಂಚಿನಲ್ಲಿ ನಿಲ್ಲಿಸಿದ್ದಾರೆ. ಗಾಂಧಿ ನೀನು ಎಡಪಂಥವೋ ಬಲಪಂಥವೋ?
ಗಾಂಧಿ ನಿನ್ನ ನೈತಿಕತೆಯನ್ನು ಹಣ ಅಧಿಕಾರ ಪ್ರಚಾರ ನುಂಗಿ ಹಾಕಿದೆ. ಜನರ ಬುದ್ಧಿಶಕ್ತಿಗೆ ಮಂಕು ಕವಿದಿದೆ. ಯೋಚನಾ ಶಕ್ತಿ ಸಂಕುಚಿತಗೊಂಡಿದೆ. ಜಾತಿ ಧರ್ಮ ಪಂಥಗಳ ಅಮಲು ಆವರಿಸಿಕೊಂಡಿದೆ. ಸ್ವಾತಂತ್ರ್ಯದ 75 ವರ್ಷಗಳ ನಂತರ ಇದು ಸಹಜವೇ ಇರಬೇಕು. ಯಾರಿಗೆ ಬೇಕಿದೆ ಗಾಂಧಿ ನಿನ್ನ ನೈತಿಕತೆ. ನೋಡು ಒಮ್ಮೆ ಈಗ ಬರುತ್ತಿರುವ ಧಾರವಾಹಿಗಳನ್ನು ಅವರಿಗೆ ಅನೈತಿಕತೆಯೇ ನೈತಿಕವಾಗಿದೆ, ನೋಡು ಒಮ್ಮೆ ಶಾಲೆ ಆಸ್ಪತ್ರೆಗಳನ್ನು ಅವರಿಗೆ ಹಣವೇ ನೈತಿಕವಾಗಿದೆ, ನೋಡು ಒಮ್ಮೆ ಸಾಹಿತಿಗಳು ಸಮಾಜ ಸೇವಕರನ್ನು ಅವರಿಗೆ ಪ್ರಶಸ್ತಿಗಳೇ ನೈತಿಕವಾಗಿದೆ, ನೋಡು ಒಮ್ಮೆ ರಾಜಕಾರಣಿ ಅಧಿಕಾರಿಗಳನ್ನು ಅವರಿಗೆ ಲಂಚವೇ ನೈತಿಕವಾಗಿದೆ. ನೋಡು ಒಮ್ಮೆ ಆಧ್ಯಾತ್ಮಿಕ ಗುರುಗಳನ್ನು ಅವರಿಗೆ, ಆಡಂಬರದ ಪ್ರದರ್ಶನವೇ ನೈತಿಕವಾಗಿದೆ. ನೋಡು ಒಮ್ಮೆ ನಮ್ಮ ಯುವಕರನ್ನು ಅವರಿಗೆ ಮೋಜು ಮಸ್ತಿಯೇ ನೈತಿಕವಾಗಿದೆ.
ಬಹುತೇಕ ಎಲ್ಲರೂ ಹೇಳುತ್ತಾರೆ, ಈಗಿನ ಪರಿಸ್ಥಿತಿಯಲ್ಲಿ ಎಷ್ಟೇ ಗಾಂಧಿ ಬಂದರು ಪರಿಸ್ಥಿತಿ ಬದಲಾಗುವುದಿಲ್ಲ ಎಂದು. ಇಷ್ಟೇ ಗಾಂಧಿ ನಿನ್ನೆ ನೈತಿಕತೆ ನಿನ್ನೆ ಪ್ರಾಮಾಣಿಕತೆ ನಿನ್ನ ದೂರದೃಷ್ಟಿ ಈ ಜನರಿಗೆ ಅರ್ಥವಾಗಿರುವುದು. ಎಲ್ಲಿದ್ದಾರೆ ಈಗ ಆ ಸತ್ಯ ನಿಷ್ಠ ವ್ಯಕ್ತಿ, ಎಲ್ಲಿದ್ದಾರೆ ಈಗ ಆ ಪಾರದರ್ಶಕ ವ್ಯಕ್ತಿ, ಎಲ್ಲಿದ್ದಾರೆ ಈಗ ನಿಷ್ಕಲ್ಮಶ ಹೃದಯದ ವ್ಯಕ್ತಿ, ಎಲ್ಲಿದ್ದಾರೆ ಈಗ ಆ ದೂರದೃಷ್ಟಿಯ ವ್ಯಕ್ತಿ, ನನ್ನ ಬದುಕೇ ನನ್ನ ಸಂದೇಶ ಎಂದು ಸಾರುವ ಧೈರ್ಯ ಈಗ ಯಾರಿಗಿದೆ? ಹೊರಟು ಹೋಗು ಗಾಂಧಿ ಈ ದೇಶ ಬಿಟ್ಟು. ಈ ದೇಶದಲ್ಲಿ ಸದ್ಯಕ್ಕೆ ನೀನಿರಲು ಅರ್ಹನಲ್ಲ.
ಸರಳತೆಯ ವ್ಯಾಖ್ಯಾನವೇ ಬದಲಾಗಿದೆ, ಸತ್ಯದ ವ್ಯಾಖ್ಯಾನವೇ ಬದಲಾಗಿದೆ, ಅಹಿಂಸೆಯ ವ್ಯಾಖ್ಯಾನವೇ ಬದಲಾಗಿದೆ, ಹೋರಾಟ ಉಪವಾಸ ಚಳವಳಿಗಳ ವ್ಯಾಖ್ಯಾನವೇ ಬದಲಾಗಿದೆ. ಎಲ್ಲವೂ ಹಣ ಕೇಂದ್ರಿತ, ಎಲ್ಲವೂ ಅಧಿಕಾರ ಕೇಂದ್ರಿತ, ಎಲ್ಲವೂ ಪ್ರಚಾರ ಕೇಂದ್ರಿತ, ಎಲ್ಲವೂ ಅಹಂಕಾರ ಕೇಂದ್ರಿತ. ಇರಬಹುದು ಗಾಂಧಿ ನೀನು ಸಹ ಪರಿಪೂರ್ಣ ಅಲ್ಲ, ಒಂದಷ್ಟು ಗೊಂದಲ ಮತ್ತೊಂದಿಷ್ಟು ತಪ್ಪು ನಿರ್ಧಾರಗಳು ಆಗಿರಬಹುದು. ಅದು ಮಾನವ ಸಹಜ ಗುಣ. ಆದರೆ ನಿನ್ನ ಪಾರದರ್ಶಕತೆ - ನಿನ್ನ ನೈತಿಕತೆಗೆ ನೀನೇ ಸಾಟಿ.
ಏನೇ ಆಗಲಿ ಮೋಹನ್ ದಾಸ್ ಕರಮಚಂದ್ ಗಾಂಧಿಯನ್ನು ಹಿನ್ನೆಲೆಗೆ ಸರಿಸಿದ ದೇಶ ಮೇಲ್ನೋಟಕ್ಕೆ ಅಭಿವೃದ್ಧಿ ಹೊಂದುತ್ತಿರುವಂತೆ ಕಂಡರೂ ಒಳಗೊಳಗೆ ತನಗರಿವಿಲ್ಲದಂತೆ ಕುಸಿಯುತ್ತಿರುತ್ತದೆ. ಒಂದು ದೇಶದ ನಿಜವಾದ ಆತ್ಮಶಕ್ತಿಯನ್ನೇ ಮರೆಮಾಚಿ ಮತ್ತೇನೋ ಸ್ವಾರ್ಥದ ಪರಿಧಿಯೊಳಗೆ ದೇಶ ಕಟ್ಟುವ ಕನಸನ್ನು ಜನರಲ್ಲಿ ಬಿತ್ತಿ ದೇಶವನ್ನು ಆಂತರ್ಯದಲ್ಲಿ ಕುಸಿಯುವಂತೆ ಮಾಡುತ್ತಿರುವ ಶಕ್ತಿಗಳ ಬಗ್ಗೆ ಎಚ್ಚರಿಸುತ್ತಾ...
-ವಿವೇಕಾನಂದ ಎಚ್ ಕೆ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ