ಲಿಂಬೆ ಮತ್ತು ಗಜಲಿಂಬೆ ಬೇಸಾಯ (ಭಾಗ ೧)

ಲಿಂಬೆ ಮತ್ತು ಗಜಲಿಂಬೆ ಬೇಸಾಯ (ಭಾಗ ೧)

ಬೇಸಿಗೆಯ ದಿನಗಳು ಬಂತೆದರೆ ಸಾಕು ಲಿಂಬೆ ಹಣ್ಣಿಗೆ ಭಾರೀ ಬೇಡಿಕೆ. ಲಿಂಬೆ ಹಣ್ಣು ಬಹು ಬಳಕೆಯ ವಸ್ತುವಾದುದರಿಂದ ಇದಕ್ಕೆ ಬೇಡಿಕೆ ಕಡಿಮೆಯಾಗುವುದೇ ಇಲ್ಲ. ಉತ್ತಮ ತಳಿಗಳನ್ನು ಆರಿಸಿ, ಯಾವ ಕಾಲದಲ್ಲಿ ಹಣ್ಣು ದೊರೆಯಬೇಕು ಎಂಬುದನ್ನು ಅಂದಾಜು ಮಾಡಿಕೊಂಡು ಅದಕ್ಕನುಗುಣವಾಗಿ ಲಿಂಬೆ ಬೆಳೆದರೆ ಲಾಭದಾಯಕ.  

ಲಿಂಬೆ ಮತ್ತು ಗಜಲಿಂಬೆ ಪ್ರಮುಖ ಆಮ್ಲಯುಕ್ತ ಲಿಂಬೆ ಜಾತಿಯ ಹಣ್ಣುಗಳಾಗಿದ್ದು, ಇವುಗಳನ್ನು ಪಾನೀಯಗಳು, ಉಪ್ಪಿನಕಾಯಿ, ಸಿಟ್ರಿಕ್ ಆಮ್ಲ ಮತ್ತು ಸೌಂದರ್ಯ ವರ್ಧಕಗಳ ತಯಾರಿಕೆ ಹಾಗೂ ಅಡುಗೆಯಲ್ಲಿ ಉಪಯೋಗಿಸುತ್ತಾರೆ. ಈ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ `ಸಿ’ ಜೀವಸತ್ವವನ್ನು ಒಳಗೊಂಡಿವೆ. ಇದನ್ನು ಮಳೆ ಕಡಿಮೆ ಇರುವ ಕಡೆ ಮುಖ್ಯ ಬೆಳೆಯಾಗಿಯೂ ಮಳೆ ಅಧಿಕ ಇರುವ ಕಡೆ ಮಿಶ್ರ ಬೆಳೆಯಾಗಿಯೂ ಬೆಳೆಸಬಹುದು. ಮಳೆ ಹೆಚ್ಚು ಇರುವ ಕರಾವಳಿ, ಮಲೆನಾಡಿನಲ್ಲಿ ಗಜಲಿಂಬೆ ಅಥವಾ ಇಟಾಲಿಯನ್ ಲಿಂಬೆಯನ್ನು ಬೆಳೆಸುವುದು ಲಾಭದಾಯಕ.

ಲಿಂಬೆ ಬೆಳೆಗೆ ಚೆನ್ನಾಗಿ ನೀರು ಬಸಿದು ಹೋಗುವಂತ ಮಣ್ಣು ಉಳ್ಳ ಪ್ರದೇಶಗಳು ಹೆಚ್ಚು ಸೂಕ್ತ. ನೀರು ನಿಲ್ಲುವಂತಹ ಪ್ರದೇಶ ಮತ್ತು ಜೌಗು ಭೂಮಿ ಈ ಬೆಳೆಗೆ ಯೋಗ್ಯವಲ್ಲ. ಕಾಯಿ ಬಿಡುವ ಅವಧಿಯುದ್ದಕ್ಕೂ  ನೀರಾವರಿಯ ಅವಶ್ಯವಾಗಿದ್ದು, ಗುಲ್ಬರ್ಗಾ, ಬಿಜಾಪುರ, ಬಾಗಲಕೊಟೆ, ಬಳ್ಳಾರಿ, ಕೊಪ್ಪಳ ಚಿತ್ರದುರ್ಗ ಹಾಗೂ ಗದಗ ಜಿಲ್ಲೆ ಈ ಬೆಳೆಗಳನ್ನು ಬೆಳೆಯಲು ಅತೀ ಯೋಗ್ಯವಾಗಿವೆ. ರಾತ್ರೆಯ ತಂಪು ಹಾವಾಮಾನ, ಹಗಲಿನ ಬಿಸಿಲು ಈ ಬೆಳೆಗೆ ಸೂಕ್ತ ವಾತಾವರಣವಾಗಿರುತ್ತದೆ.

ಗಜಲಿಂಬೆಯನ್ನು ಸಹ ನೀರು ಬಸಿದು ಹೋಗುವ ಜಾಗದಲ್ಲಿ ಯಾವುದೇ ತರಹದ ಮಣ್ಣಿನಲ್ಲೂ ಬೆಳೆಸಬಹುದು. ಕರಾವಳಿ, ಮಲೆನಾಡು ಭಾಗಕ್ಕೆ ಇದು ಅತೀ ಸೂಕ್ತವಾದ ನಿಂಬೆ ತಳಿ. ಬದುಗಳಲ್ಲಿ, ಮಣ್ಣು ಏರಿ ಹಾಕಿದಲ್ಲಿ ನೆಟ್ಟು ಬೆಳೆಸಿದರೆ ಬೇಲಿಯಾಗಿಯೂ, ಬೆಳೆಯಾಗಿಯೂ ಲಾಭದಾಯಕ. ಚೆನ್ನಾಗಿ ನೀರು ಬಾಸಿದು ಹೋಗುವ ವ್ಯವಸ್ಥೆಗಳನ್ನು ಮಾಡಿಕೊಂಡು ಮಳೆಯ ಸಮಯದಲ್ಲಿ ರೋಗ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಬೆಳೆಸಿದರೆ ಕರಾವಳಿ ಮಲೆನಾಡಿನಲ್ಲೂ ರಸ ಲಿಂಬೆಯನ್ನು ಬೆಳೆಸಬಹುದು. 

ತಳಿಗಳು: ಕಾಗಜಿ ಲಿಂಬೆ, ಬೀಜ ರಹಿತ ಲಿಂಬೆ, ಬಾಲಾಜಿ, ಪ್ರಮಾಲಿನಿ, ವಿಕ್ರಮ, ಸಾಯಿಸರಬತಿ ಇವು ಚಾಲ್ತಿಯಲ್ಲಿರುವ ರಸ ನಿಂಬೆ ತಳಿಗಳು. ಇಟಾಲಿಯನ್ ಗಜನಿಂಬೆ, ಲಿಸ್ಬನ್ ಗಜನಿಂಬೆ, ಸೆವೆಲ್ಲೆ ಗಜನಿಂಬೆ, ಯುರೇಕಾ. ಸೀಡ್ಲೆಸ್‌ ನಿಂಬೆ ಚಾಲ್ತಿಯಲ್ಲಿರುವ ಗಜಲಿಂಬೆ ತಳಿಗಳು.

ತಳಿ ಆಯ್ಕೆ: ಲಿಂಬೆಯ ಬೇಸಾಯ ಮಾಡುವವರು ಸ್ಥಳೀಯವಾಗಿ ಉತ್ತಮ ಇಳುವರಿ ಕೊಡಬಲ್ಲ ತಳಿಯನ್ನು ಆಯ್ಕೆ ಮಾಡಬೇಕು. ಸಾಂಪ್ರದಾಯಿಕ ಲಿಂಬೆ ಬೆಳೆಸುವ ಪ್ರದೇಶಗಳಿಗೆ ಆ ಪ್ರದೇಶಗಳಿಗೆ ಹೊಂದುವ ತಳಿಯೇ ಆಗಬೇಕು. ಕರಾವಳಿ ಮಲೆನಾಡಿನಲ್ಲಿ ಕೆಲವು ರಸ ನಿಂಬೆ ತಳಿಗಳು ಉತ್ತಮ ಇಳುವರಿ ಕೊಡುವಂತದ್ದನ್ನು ಗುರುತಿಸಿ ಆದನ್ನು ಸಸ್ಯಾಭಿವೃದ್ಧಿ ಮಾಡಿ ಬೆಳೆಸುವುದರಿಂದ ಅದರಲ್ಲಿ ಉತ್ತಮ ಇಳುವರಿ ಪಡೆಯಬಹುದು. ಕೆಲವು ನರ್ಸರಿಗಳವರು ಇದನ್ನು ಗುರುತಿಸಿದ್ದುಂಟು.

ಸಸ್ಯಾಭಿವೃದ್ದಿ: ಲಿಂಬೆ ಬೀಜದಿಂದ ಹುಟ್ಟಿ ಸಸಿಯಾಗುವಂತದ್ದಾದರೂ ವಾಣಿಜ್ಯ ಬೇಸಾಯಕ್ಕೆ ಮತ್ತು ಇಳುವರಿ ಖಾತ್ರಿಗೆ ಈ ವಿಧಾನ ಸೂಕ್ತವಲ್ಲ. ಉತ್ತಮ ಇಳುವರಿ ಕೊಡಬಲ್ಲ ತಳಿಯ ನಿರ್ಲಿಂಗ ರೀತಿಯ ಸಸ್ಯಾಭಿವೃದ್ದಿ ಮಾಡುವುದರಿಂದ ಅದರಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯ. ಬೀಜದಿಂದ ವೃದ್ಧಿಪಡಿಸಿದ ಸಸಿಗಳಲ್ಲಿ ಮಾತೃಗುಣ ಯಥಾವತ್ ಇರುವುದಿಲ್ಲ. ಕಣ್ಣು ಕಸಿ ಮಾಡಿದ ಸಸಿಗಳು ಉತ್ತಮ ಸಸಿಗಳು. ಇದು ಬೇಗ ಮತ್ತು ನಿಖರ ಇಳುವರಿ ನೀಡಬಲ್ಲವು.

ಗೂಟಿ ಮಾಡಿದ ಸಸಿಗಳು ಸಹ ಉತ್ತಮ ಇಳುವರಿ ನೀಡಬಲ್ಲವಾದರೂ ಬೇರು ಸಧೃಢವಾಗಿರದ ಕಾರಣ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು.

ಬೇರು ತುಂಡುಗಳಿಂದಲೂ ಸಸ್ಯಾಭಿವೃದ್ದಿ ಮಾಡಬಹುದು. ಇದರಲ್ಲೂ ಇಳುವರಿ ನಿಖರತೆ ಇರುತ್ತದೆ. ಉತ್ತಮವಾಗಿ  ಬೆಳೆಯುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸಸ್ಯ ಮೂಲ ಬೇಕಾದಾಗ ಈ ವಿಧಾನ ಸೂಕ್ತವಲ್ಲ. ಗಜಲಿಂಬೆ ಜಾತಿಗಳನ್ನು  ಬೇರು ತುಂಡುಗಳ ಮೊಳಕೆಗಳನ್ನು ನೆಟ್ಟು ಸಸ್ಯಾಭಿವೃದ್ದಿ ಮಾಡಬಹುದು. ಲಿಂಬೆ ಜಾತಿಯ ಸಸ್ಯಗಳು ಬೇರುಗಳು ನೆಲದ ಮೇಲೆ ಬಂದಾಗ ಅಲ್ಲಿ ಮೊಳಕೆಯೊಡೆಯುತ್ತವೆ. ಅದನ್ನು ಬೇರಿನಿಂದ ಪ್ರತ್ಯೇಕಿಸಿ ಸಸ್ಯವಾಗಿ ಮಾಡಬಹುದು. 

ಕೊಟ್ಟಿಗೆ ಗೊಬ್ಬರ (ಕಾಂಪೋಸ್ಟ್)   ಪ್ರತಿ ಗಿಡಕ್ಕೆ             

ನಾಟಿಗೆ ಮುಂಚೆ                    ೧೫    ಕಿಲೋ

ನಾಟಿ ನಂತರ

ಮೊದಲನೇ ವರ್ಷ                   ೫     

ಎರಡನೇ ವರ್ಷ                    ೧೦ 

ಮೂರನೇ ವರ್ಷ                   ೧೫   

ನಾಲ್ಕನೇ ವರ್ಷ                    ೨೦    

ಐದನೇ ವರ್ಷ                     ೨೫  

ಆರನೇ ವರ್ಷ ಹಾಗೂ ನಂತರ        ೩೦ ಕಿಲೋ ಪ್ರಮಾಣದಲ್ಲಿ ಕೊಡಬೇಕು.    

ರಾಸಾಯನಿಕ ಗೊಬ್ಬರಗಳು

                           ಪ್ರತಿ ಗಿಡಕ್ಕೆ (ಗ್ರಾಂ.)      

ಮೊದಲನೇ ವರ್ಷ

                       ಸಾರಜನಕ   ೧೦೦   

                        ರಂಜಕ      ೬೦   

                       ಪೊಟ್ಯಾಷ್   ೧೦೦   

ಎರಡನೇ ವರ್ಷ

                        ಸಾರಜನಕ   ೨೦೦   

                          ರಂಜಕ      ೧೨೦   

                         ಪೊಟ್ಯಾಷ್   ೨೦೦   

ಮೂರನೇ ವರ್ಷ

                         ಸಾರಜನಕ   ೩೦೦   

                          ರಂಜಕ      ೧೦೦   

                          ಪೊಟ್ಯಾಷ್   ೩೦೦   

ನಾಲ್ಕನೇ ವರ್ಷ

ಸಾರಜನಕ   ೪೦೦ ಗ್ರಾಂ   ರಂಜಕ      ೨೪೦ ಗ್ರಾಂ   ಪೊಟ್ಯಾಷ್   ೪೦೦ ಗ್ರಾಂ.   

ಐದನೇ ವರ್ಷ

ಸಾರಜನಕ   ೫೦೦   ರಂಜಕ     ೩೦೦   ಪೊಟ್ಯಾಷ್   ೫೦೦  ಗ್ರಾಂ.  

ಬೇಸಾಯ ಕ್ರಮಗಳು : ಲಿಂಬೆ ಸಸಿಯವನ್ನು ಒಟ್ಟಾರೆಯಾಗಿ ಖರೀದಿ ಮಾಡಿ ನಾಟಿ ಮಾಡಬಾರದು. ಲಿಂಬೆಗೆ ಒಂದು ರೀತಿಯ ಟ್ರಸ್ಟೇಜಾ ಎಂಬ ವೈರಸ್ ರೋಗ ಇರುತ್ತದೆ. ಇದರಿಂದ ಸಸ್ಯಗಳು ಬೆಳವಣಿಗೆ ಆಗುವುದಿಲ್ಲ. ಇಳುವರಿಯನ್ನೂ ಕೊಡುವುದಿಲ್ಲ. ಶುದ್ಧ ಮೂಲದಲ್ಲಿ ಸಸ್ಯೋತ್ಪಾದನೆ ಮಾಡಿದ ಸಸಿಗಳನ್ನು  ಮಾತ್ರವೇ ಆಯ್ಕೆ ಮಾಡಬೇಕು. ನಾಟಿ ಮಾಡಿದ ಸಸಿಗಳು ಏಳಿಗೆಯಾಗದೇ, ಎಷ್ಟೇ ಗೊಬ್ಬರ ಪೂರೈಕೆ ಮಾಡಿದಾಗಲೂ ಅದಕ್ಕೆ ಸ್ಪಂದಿಸದೇ ಇದ್ದರೆ ಆದಕ್ಕೆ ಈ ವೈರಾಣು ರೋಗ ಬಾಧಿಸಿರಬಹುದು.

ನಿಂಬೆ ಸಸ್ಯವನ್ನು ಕಣ್ಣು ಕಸಿ ಮಾಡಲು ಅಥವಾ ಮೃದು ಕಾಂಡ ಕಸಿಮಾಡಲು ಬಳಕೆ ಮಾಡುವ ರೂಟ್ ಸ್ಟಾಕ್, ರಂಗಾಪುರಿ ಕಾಡು ಲಿಂಬೆ. ಈ ತಳಿಗೆ ರೋಗ ಇರುವುದಿಲ್ಲ. ಈ ಸಸಿಯನ್ನು ಖರೀದಿ ಮಾಡಿ ಅಥವಾ ರಂಗಾಪುರಿ ಲಿಂಬೆಯ ಬೀಜವನ್ನು ಬಿತ್ತಿ ಸಸಿ ಮಾಡಿ ಅದಕ್ಕೆ ಆರೋಗ್ಯವಂತ ಲಿಂಬೆಯ ಕಣ್ಣು ಕಸಿ ಮಾಡಬೇಕು.

ಸ್ಥಳೀಯ ಲಿಂಬೆಯ ಬೀಜದಿಂದ ಉತ್ಪಾದಿಸಲಾದ ಸಸ್ಯಕ್ಕೂ ಕಣ್ಣು ಕಸಿ ಮಾಡಬಹುದು. ಆದರೆ ಅದಕ್ಕೆ ಯಾವುದೇ ರೋಗ ತಗುಲಿರಬಾರದು. ಇಷ್ಟಕ್ಕೂ ಈ ರೋಗ ಬಹುತೇಕ ಎಲ್ಲಾ ಲಿಂಬೆ, ಮುಸಂಬಿ, ಕಿತ್ತಳೆಗಳಿಗೂ ಇದೆ ಎನ್ನಲಾಗುತ್ತಿದೆ. ಗಜಲಿಂಬೆಗೆ ಅಂಥಹ ರೋಗದ ಹಾವಳಿ ಇಲ್ಲದ ಕಾರಣ ಬೇರು ಮೊಳಕೆ ಸಸ್ಯಗಳನ್ನು ಅಥವಾ ಗೂಟಿ ಸಸ್ಯಗಳನ್ನು  ನೆಡಬಹುದು. ಗಜಲಿಂಬೆಯ ಗೆಲ್ಲುಗಳನ್ನು ನೆಲಕ್ಕೆ ತಾಗುವಂತೆ ಮಾಡಿ ಅಲ್ಲಿಗೆ ಮಣ್ಣು ಅಥವಾ ಕಂಪೋಸ್ಟು ಹಾಕಿ ಬೇರು ಬರಲು ಅನುಕೂಲಮಾಡಿಕೊಟ್ಟರೆ ಅಲ್ಲಿಯೂ ಸಸಿ ಮಾಡಿಕೊಳ್ಳಬಹುದು.

ನಾಟಿ ಮಾಡುವುದು : ಬೆಳೆ ಪ್ರದೇಶವನ್ನು ಗಿಡ ಗಂಟಿಗಳಿಲ್ಲದಂತೆ ತೆಗೆದು ಒಮ್ಮೆ ಅಗೆತ ಮಾಡಿದರೆ ಮಣ್ಣು ಸಡಿಲವಾಗುತ್ತದೆ. ಇದು ಸಸ್ಯ ಬೆಳವಣಿಗೆಗೆ ಉತ್ತಮ. ೭೫ x ೭೪೫ x ೭೫ ಸೆಂ.ಮೀ. ಗಾತ್ರದ ಗುಣಿಗಳನ್ನು ತೆಗೆದು ಅವುಗಳಲ್ಲಿ ಮೇಲ್ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರ ಮಿಶ್ರಣ ಹಾಕಿ ತುಂಬಬೇಕು. ನಂತರ ಸಸಿಗಳನ್ನು ಗುಣಿಯ ಮಧ್ಯದಲ್ಲಿ ನಾಟಿ ಮಾಡಬೇಕು. ಕಣ್ಣು ಕಸಿ ಗಿಡ ನಾಟಿ ಮಾಡುವಾಗ ಕಣ್ಣು ಹಾಕಿದ ಭಾಗ ಭೂಮಿಯ ಮಟ್ಟದಿಂದ ಮೇಲಿರುವಂತೆ ನಾಟಿ ಮಾಡಬೇಕು.

ನಾಟಿ ಮಾಡಿದ ಕೂಡಲೇ ಸಸಿಗಳಿಗೆ ಕೋಲಿನ ಆಸರೆ ಕೊಟ್ಟು ಕಟ್ಟಬೇಕು. ಗಿಡ ೦.೬ ಮೀಟರ್ ಎತ್ತರ ಬೆಳೆಯುವವರೆಗೂ ಪಕ್ಕದಲ್ಲಿ ಬರುವ ಕವಲುಗಳನ್ನು ತೆಗೆಯುತ್ತಿರಬೇಕು. ಜೊತೆಗೆ ನೇರವಾಗಿ ಬೆಳೆದ ಕವಲು ಇರಲಾರದ ಮತ್ತು ಒಣಗಿದ ಕವಲುಗಳನ್ನು ಕತ್ತರಿಸಿ ಹಾಕಿ ಗಿಡದ ಸುತ್ತಲೂ ಮಣ್ಣನ್ನು ಸಡಿಲಗೊಳಿಸಿ ಪಾತಿಗಳಲ್ಲಿ ಹೊದಿಕೆ ಹಾಗಿ ನಿಯಮಿತವಾಗಿ ಪಾತಿಗಳಲ್ಲಿನ ಕಳೆ ನಿಯಂತ್ರಿಸುತ್ತಿರಬೇಕು. ಮಣ್ಣು ಮತ್ತು ಹವಾಗುಣಕ್ಕನುಸರಿಸಿ ೭-೧೦ ದಿನಗಳಿಗೊಮ್ಮೆ ನೀರು ಹಾಯಿಸಬೇಕು.

ಜೂನ್ ತಿಂಗಳಲ್ಲಿ ಶಿಫಾರಸ್ಸು ಮಾಡಿದ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಒದಗಿಸಬೇಕು. ರಸಗೊಬ್ಬರಗಳನ್ನು ಮೂರು ಸಮ ಕಂತುಗಳಲ್ಲಿ ಹೊಸ ಬೆಳವಣಿಗೆಯ ಸಮಯದಲ್ಲಿ ಅಂದರೆ ಮಾರ್ಚ್-ಎಪ್ರಿಲ್, ಜೂನ್-ಜುಲೈ ಮತ್ತು ಸಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಒದಗಿಸಬೇಕು. ಹನಿ ನೀರಾವರಿ ಪದ್ಧತಿಯಲ್ಲಿ ಪ್ರತಿ ಗಿಡಕ್ಕೆ ದಿನಕ್ಕೆ ೨೦ರಿಂದ ೩೦ ಲೀ. ನೀರು ಒದಗಿಸಿದರೆ ಉತ್ತಮ ಇಳುವರಿ ಬರುತ್ತದೆ.

(ಇನ್ನೂ ಇದೆ)

ಮಾಹಿತಿ: ರಾಧಾಕೃಷ್ಣ ಹೊಳ್ಳ

ಚಿತ್ರ ಕೃಪೆ: ಅಂತರ್ಜಾಲ ತಾಣ