ಲಿನಕ್ಸ್ ಬಳಸಿ, ಹಸಿರು ಉಳಿಸಿ
"ನಿಧಾನವಾಗಿ ಚಲಿಸಿ, ಇಂದನ ಉಳಿಸಿ " ಈ ಘೋಷ ವಾಕ್ಯ ಕೂಡ ಇತ್ತೀಚೆಗೆ ವಾಹನಗಳ ಹಿಂಬದಿಯಿಂದ ಮಾಯ ಆಗ್ತಿದೆ ಅಲ್ವೇ?. ಇನ್ಮುಂದೆ ನಿಮ್ಮ ಕಂಪ್ಯೂಟರ್ ಗಳೂ ತಮ್ಮ ಹಿಂಬದಿಯಲ್ಲಿ "ಪರಿಸರ ಸ್ನೇಹಿ" ಪಟ್ಟಿ ಹಚ್ಚಿ ಕೊಂಡರೆ ಆಶ್ಛರ್ಯ ಪಡಬೇಕಿಲ್ಲ. ವಿದ್ಯುತ್ ಉಳಿತಾಯ ಮಾಡೋದು ಅಂದ್ರೆ ಇಂದಿನ ಐ.ಟಿ ಜಗತ್ತಿನಲ್ಲಿ ಅತಿ ದೊಡ್ಡ ಚರ್ಚೆಯ ವಿಷಯ. ಜಗತ್ತಿನ ವಿಷಯ ಇರಲಿ, ನಿಮ್ಮ ಕೈನಲ್ಲಿರೋ ಮೊಬೈಲು, ಲ್ಯಾಪ್ಟಾಪ್, ಪಿ.ಡಿ.ಎ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳ ಬ್ಯಾಟರಿಗಳೂ ಸಹ ಇಂದು ಅವುಗಳ ಖರೀದಿಗೂ ಮೊದಲೇ ಗ್ರಾಹಕ ನಿಂದ ಚರ್ಚೆಗೊಳಪಡುವ ವಿಷಯ. ನಮ್ಮ ಮನೆಯ ವಿದ್ಯುತ್ ಬಿಲ್ಲು ಗಳೇ ನಮಗೆ ಕೆಲವು ಸಲ ಬೆಚ್ಚಿ ಬೀಳಿಸುತ್ತವೆ. ದಿನ ಬೆಳಗಾದರೆ ವಿದ್ಯುತ್ ಬಿಲ್ ಪಾವತಿಯನ್ನ ಸರ್ಕಾರವೇ ಮಾಡದಿರುವುದನ್ನ ನಾವೇ ಪತ್ರಿಕೆಗಳಲ್ಲಿ ಓದಿದ್ದೇವೆ. ಇನ್ನು ನಿಮಗೆ ಸಂಪದ ಮತ್ತಿತರ ವೆಬ್ ಸೈಟ್ಗಳನ್ನ ದಿನದ ೨೪ ಘಂಟೆಗಳೂ ಲಭ್ಯವಿರುವಂತೆ ನೋಡಿ ಕೊಳ್ಳುತ್ತಿರುವ ಕಂಪೆನಿಯ "ಡಾಟಾ ಸೆಂಟರ್ (Data Center)" ಹತ್ತಾರು ಸಾವಿರ ಕಂಪ್ಯೂಟರ್ ಗಳನ್ನ್ನ ತನ್ನ ಮಡಿಲಲ್ಲಿಟ್ಟು ಕೊಂಡು, ಜನರೇಟರ್ , ಯು.ಪಿ.ಎಸ್ ಮುಂತಾದ ಮೂಲಗಳಿಂದ ವಿದ್ಯುತ್ ಪಡೆದು ಕಾರ್ಯ ನೆಡೆಸ ಬೇಕಿದೆ. ಅದಕ್ಕೆ ಎಷ್ಟು ವಿದ್ಯುತ್ ಬೇಕು ಅನ್ನೋದನ್ನ ನಿಮಗೆ ಲೆಕ್ಕ ಹಾಕ್ಲಿಕ್ಕೆ ಸಾಧ್ಯಾನ? ಅವರೂ ನಮ್ಮಂತೆ ವಿದ್ಯುತ್ ಬಿಲ್ ಬಗ್ಗೆ ಯೋಚಿಸುವುದಿಲ್ಲವೇ?
ಏಕಿಲ್ಲ? ಇಂಟೆಲ್ ಆಗಲೇ Lesswatts.org ಅನ್ನೋ ಪ್ರಾಜೆಕ್ಟ್ ಪ್ರಾರಂಭಿಸಿ ವರುಷವೇ ಉರುಳಿದೆ. ವಿದ್ಯುತ್ ಉಳಿಸಿ, ಹಣ ಉಳಿಸಿ, ಹೆಚ್ಚು ಹೊತ್ತು ಹರ್ಶ ಚಿತ್ತರಾಗಿರ ಬೇಕು ಅನ್ನೋದು ಮಾತ್ರ ಅಲ್ಲ ಅದರೊಂದಿಗೆ ನಮ್ಮ ಸುಂದರ ಪ್ರಪಂಚ ಕಂಪ್ಯೂಟರೀಕರಣದಿಂದ ತೊಂದರೆಗಿಡಾಗದಂತೆ ಮಾಡುವುದು ಇದರ ಮೂಲ ಉದ್ದೇಶ. ಲಿನಕ್ಸ್ ಬಳಸುತ್ತಿರುವ ನಿಮ್ಮ ಕಂಪ್ಯೂಟರ್ / ಕಂಪ್ಯೂಟರ್ ಗಳು ಹೇಗೆ ವಿದ್ಯುತ್ ವ್ಯಾಟ್ ಗಳನ್ನ ನಿಮಗೆ ಉಳಿಸಿ ಕೊಡಲಿಕ್ಕೆ ಸಾಧ್ಯ ಅಂತ ಅಳೆದು, ಸುರಿದು ನೋಡಲಿಕ್ಕೆ ಹೊರಟಿರುವ ಲೆಸ್ ವ್ಯಾಟ್ ವಾಣಿಜ್ಯ ಉದ್ದೇಶಕ್ಕೆ ಪ್ರಾರಂಭಿಸಿದ ಯೋಜನೆಯಲ್ಲ. ಲಿನಕ್ಸ್ ಕಮ್ಯುನಿಟಿಯ ಬಳಕೆದಾರರು, ತಂತ್ರಜ್ಞರು ಮತ್ತಿತರರ ಅನುಭವಗಳನ್ನ ತಿಳಿದು ಅವರಿಂದಲೇ ಲಿನಕ್ಸ್ ಕಂಪ್ಯೂಟರ್ ಜಗತ್ತನ್ನ ಹಸಿರನ್ನಾಗಿಸ ಹೊರಟಿರುವ ಯೋಜನೆ. ನೀವೂ ಒಮ್ಮೆ ಇತ್ತ ಕಣ್ಣಾಯಿಸಿ, ಸಾಧ್ಯವಾದರೆ ನಿಮ್ಮ ಕಾಣಿಕೆಯನ್ನೂ ನೀಡಿ.
ಈಗ ನಿಮ್ಮ ಮುಂದೆ ಲಿನಕ್ಸ್ ನಲ್ಲಿ ಉಪಯೋಗಿಸ ಬಹುದಾದ ಒಂದು ಸಣ್ಣ ತಂತ್ರಾಂಶವನ್ನ ಮುಂದಿಡುತ್ತಿದ್ದೇನೆ. ಲಿನಕ್ಸ್ ನ ಕನ್ಸೋಲಿನಲ್ಲಿ ಉಪಯೋಗಿಸ ಬೇಕಾದ ಈ ತಂತ್ರಾಂಶ ನಿಮ್ಮ ಲ್ಯಾಪ್ಟಾಪ್ ನ ಅಥವಾ ಕಂಪ್ಯೂಟರ್ ನ ವಿದ್ಯುತ್ ಉಪಯೋಗವನ್ನ ಕಡಿಮೆ ಮಾಡುವಲ್ಲಿ ಬಹಳ ಸಹಾಯಮಾಡ್ತದೆ. ಬನ್ನಿ ನೋಡುವ.
PowerTop - ಇಂಟೆಲ್ ಮತ್ತು ಲಿನಕ್ಸ್ ನ ಕೂಸು.
ನೀವು ಉಪಯೋಗಿಸುವ ಕಂಪ್ಯೂಟರ್ ಪ್ರೋಗ್ರಾಮ್ ಗಳು ನಿಮ್ಮ ವಿದ್ಯುತ್ ಬಿಲ್ಲನ್ನು ನಿರ್ಧರಿಸ ಬಲ್ಲವು. ವ್ಯರ್ಥವಾಗಿ ವಿದ್ಯುತ್ ಪೋಲು ಮಾಡುವ, ಕಂಪ್ಯೂಟರ್ ಕಾರ್ಯನಿರತವಗಿಲ್ಲದಿದ್ದರೂ ಪ್ರಾಸೆಸರ್ ಉಪಯೋಗಿಸುವ ಪ್ರೋಗ್ರಾಮುಗಳನ್ನ ಹಿಡಿಯಲಿಕ್ಕೆ ನೀವು ನಿಮ್ಮ ಲಿನಕ್ಸ್ ನಲ್ಲಿ "ಪವರ್ ಟಾಪ್" ಇನ್ಸ್ಟಾಲ್ ಮಾಡಿ ನೋಡಿ. ಬಹಳಷ್ಟು ಕಾಲ ಲಿನಕ್ಸ್ ನ ಹೃದಯ ಭಾಗವಾದ ಕರ್ನೆಲ್ ಈ ರೀತಿ ಹುಚ್ಚುಚ್ಚಾಗಿ ಆಡುವುದನ್ನ ಕೂಡ ಈ ಪ್ರೋಗ್ರಾಮ್ ತೋರಿಸ ಬಲ್ಲದು (ವಿಂಡೋಸ್ ವಿಸ್ತಾಗೆ ಉಪಯೋಗಿಸ ಬೇಕಿದ್ದರೆ ಇಂತಹ ಟೂಲ್ ಕೂಡ ಉಪಯೋಗಿಸಲಿಕ್ಕಾಗದಷ್ಟು ತಲೇ ನೋವು ಮೊದಲೇ ಇರತ್ತೆ ). ಅಂದರೆ ಅತಿ ಸೂಕ್ಷ್ಮ, ಬಳಕೆದಾರನ ಅರಿವಿಗೇ ಬಾರದ ವಿದ್ಯುತ್ ಪೋಲನ್ನ PowerTop ಕಂಡು ಹಿಡಿಯಬಲ್ಲದು. ಲಿನಕ್ಸ್ ಕರ್ನೆಲ್ ನ ಆವೃತ್ತಿ ೨.೬.೨೧ ನಲ್ಲಿ ಇರುವ ೧೦೦೦Hz ಟೈಮರ್ ನ ಬಗ್ (ತೊಂದರೆ )ಕೂಡ ಈ ತಂತ್ರಾಂಶ ಕಂಡು ಹಿಡಿದಿದೆ. ಇದರ ಫಲಿತಾಂಶಗಳಿಂದ, ಕಂಪ್ಯೂಟರಿನ ಸಿ.ಪಿ.ಯು ಕಾರ್ಯನಿರತವಲ್ಲ ದ ಸಮಯದಲ್ಲಿ ಕನಿಷ್ಟ ವಿದ್ಯುತ್ ವ್ಯಯ ಮಾಡುವಂತೆ ಮಾಡಲಿಕ್ಕೆ ಸಾಧ್ಯವಾಗಿದೆ. (ಅದ್ಭುತ ಅಂತ ನೀವೇ ಹೇಳ್ತೀರ ಸ್ವಲ್ಪ ದಿನ ನೀವೇ ಇದನ್ನ ಉಪಯೋಗಿಸಿದ್ರೆ. ನನ್ನ ಲ್ಯಾಪ್ಟಾಪ್ ಬ್ಯಾಟರಿ ಮತ್ತೊಂದು ಘಂಟೆ ಹೆಚ್ಚು ಕೆಲಸ ಮಾಡುವಂತೆ ಈ ಟೂಲ್ ಮಾಡಿದೆ. ಮತ್ತೂ ಹೆಚ್ಚಿನ ದನ್ನ ಸಾಧಿಸ ಬೇಕು ಅನ್ನೋದು ನನ್ನ ಗುರಿ.)
ಇದೊಂದೇ ಅಲ್ಲದೆ ನಿಮ್ಮ ಹಾರ್ಡ್ವೇರ್ , ನೀವು ಉಪಯೋಗಿಸುವ theme ಗಳು, ಫೈರ್ ಫಾಕ್ಸ್ ನ ಕೆಲವು ಪ್ಲಗ್ಗಿನ್ ಗಳು ಇತರೆ ಕೂಡ ನಿಮ್ಮ ಬ್ಯಾಟರಿಯ ವಿದ್ಯುತ್ ಹೀರ ಬಲ್ಲವು. PowerTop ಇಂತಹ ಎಲ್ಲ ಮೂಲಗಳನ್ನ ನಿಮ್ಮ ಕರ್ನೆಲ್ ಮೂಲಕ ಹಿಡಿದು ತಂದು ನಿಮ್ಮ ಕನ್ಸೋಲಿನಲ್ಲಿ ತೋರಿಸುವ ಕೆಲಸ ಮಾಡುತ್ತದೆ. ಆಷ್ಟೇ ಅಲ್ಲ, ನೀವು ಆ ಸಮಸ್ಯೆಯನ್ನ ಹೇಗೆ ನಿವಾರಿಸ ಬಹುದು ಅನ್ನೋದನ್ನ ಕೂಡ ತಿಳಿಸ್ತದೆ. ನಿಮ್ಮ ಕಂಪ್ಯೂಟರ್ ಕಾರ್ಯಕ್ಷಮತೆಯನ್ನ ಅಳಿಯೋದಕ್ಕೆ ಕೂಡ ಸಹಾಯ ಮಾಡತ್ತೆ.
PowerTop ನ ನಾಲ್ಕು ಮುಖ್ಯ ಗುರಿಗಳು :-
* ವಿದ್ಯುತ್ ಉಳಿತಾಯಕ್ಕೆಂದು ಲಿನಕ್ಸ್ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನ ನಿಮ್ಮ ಸಿಸ್ಟಂ ಉಪಯೋಗಿಸುತ್ತಿದೆಯೇ ಎಂದು ನೋಡುವುದು.
* ಸರಿಯಾಗಿ ಕಾರ್ಯ ನಿರ್ವಹಿಸದ, ವಿದ್ಯುತ್ ಉಳಿತಾಯ ತಂತ್ರಗಳನ್ನ ಬಳಸದ ತಂತ್ರಾಂಶಗಳನ್ನ ಎತ್ತಿ ತೋರಿಸುವುದು.
* ಲಿನಕ್ಸ್ ತಂತ್ರಜ್ಞರಿಗೆ ಅವರು ಬರೆದ ತಂತ್ರಾಂಶಗಳು ಅತೀವ ಕಾರ್ಯಕ್ಷಮತೆಯನ್ನ ತಮ್ಮದಾಗಿಸಿಕೊಂಡು ದಕ್ಷತೆಯಿಂದ ಕಾರ್ಯನಿರ್ವಹಿಸ್ತಿವೆಯೇ ಎಂದು ನೋಡಲು ಸಹಾಯ ಮಾಡುವುದು.
* ಕಡಿಮೆ ವಿದ್ಯುತ್ ಬಳಸುವಂತೆ ಮಾಡಲು ಬೇಕಿರುವ ಕೆಲವು ಸಲಹೆ ಸೂಚನೆಗಳನ್ನ ಎಲ್ಲರಿಗೆ ನೀಡುವುದೆ.
LessWatts.org ಈ ರೀತಿಯ ಕೆಲವು ತಂತ್ರಾಂಶಗಳನ್ನ ತನ್ನಲ್ಲಿರಿಸಿ ಕೊಂಡಿದೆ, ಇವನ್ನ ಉಪಯೋಗಿಸಿ ಹಸಿರನ್ನ ಉಳಿಸಲು ನಿಮ್ಮ ಅಳಿಲು ಸೇವೆ ಮಾಡಿ.
ಉಬುಂಟು ಅಥವಾ ಡೆಬಿಯನ್ ಉಪಯೋಗಿಸುತಿದ್ದೀರ? ಕೆಳಗಿನ ಸಾಲನ್ನ ಕನ್ಸೋಲಿನಲ್ಲಿ ಉಪಯೋಗಿಸಿ powertop ಇನ್ಸ್ಟಾಲ್ ಮಾಡ್ಕೊಳ್ಳಿ.
sudo aptitude install powertop
PowerTop ನ ಒಂದು ನೋಟ.