ಲೆಂಕನೆಂತಾಗುವೆನು ಕನ್ನಡಕೆ ನಾನು

ಲೆಂಕನೆಂತಾಗುವೆನು ಕನ್ನಡಕೆ ನಾನು

ಬರಹ

( ದಾಸನೆಂತಾಗುವೆನು ಧರೆಯೊಳಗೆ ನಾನು ಎಂಬಂತೆ)

ಲೆಂಕನೆಂತಾಗುವೆನು ಕನ್ನಡಕೆ ನಾನು
ಮಂಕುಮತಿ ನಾನು ಲೇಶ ಯೋಗ್ಯತೆ ಕಾಣೆ

ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ
ಕನ್ನಡದ ಕಲ್ಲೆನಗೆ ದೇವ ಸಾಲಿಗ್ರಾಮ
ಕನ್ನಡದ ನೀರೆನಗೆ ಪಾಪನಾಶಿನಿ ಗಂಗೆ
ಕನ್ನಡದ ನುಡಿಯೆನಗೆ ಗಾಯತ್ರಿ ಮಂತ್ರ

ಹಳೆಗನ್ನಡವ ನಾನು ಕುಳಿತು ಓದಿದ್ದಿಲ್ಲ
ಹಳ್ಳಿಗರೊಡನಾಡಿ ಬೆಳೆದದ್ದೂ ಇಲ್ಲ
ಬಲ್ಲೆ ಸ್ವಲ್ಪ ದಾಸರ ನುಡಿಯ
ಪಂಪ ರನ್ನ ಕುಮಾರವ್ಯಾಸರನು ಅರಿಯೆ

ದೇಶವನು ತಿರುಗಿಲ್ಲ ಕೋಶವನು ಓದಿಲ್ಲ
ಗುಂಪು ಸೇರಿಸಲಾರೆ ರಂಪ ಮಾಡಿಸಲಾರೆ
ಒಂದು ಸಾಧನ ಕಾಣೆ ಕಂನುಡಿಯ ಸೇವೆಯಲಿ
ಜನುಮ ಸಾರ್ಥಕ ಎಂತು ನಾನು ಮಾಳ್ಪೆ?