ಲೆಕ್ಕ ಪರಿಶೋಧನೆ (ಆಡಿಟ್ಟು)
ಯಾವುದೆ ಸಂಸ್ಥೆಯಾಗಲಿ, ಅದರಲ್ಲೂ ಜಾಗತಿಕ ಹಾಗೂ ದೊಡ್ಡ ಸಂಸ್ಥೆಯಾಗಿದ್ದರಂತೂ 'ಆಡಿಟ್ಟು' ಎಂಬ ಪದ ಕೇಳುತ್ತಿದ್ದಂತೆ ಒಂದು ರೀತಿಯ ಕಂಪನ, ತಳಮಳ, ಆತಂಕ, ಭೀತಿ ಕಾಣಿಸತೊಡಗುತ್ತದೆ. ಎಲ್ಲಿ ಯಾವುದು ದಾರಿ ತಪ್ಪಿದೆಯೊ, ಯಾವ್ಯಾವ ಹುಳುಕುಗಳೆಲ್ಲ ಹೊರಬೀಳಲಿದೆಯೊ, ಯಾರೇನನ್ನು ಹಿಡಿದು ಪಾಡು ಪಡಿಸುವರೊ ಎಂದೆಲ್ಲಾ ಪರಿಪರಿ ಕಾಡುವ ಸ್ಥಿತಿ ಇಲ್ಲಿ ಕೆಲಸ ಮಾಡುವವರೆಲ್ಲರಿಗೂ ಪರಿಚಿತ. ಆಡಿಟ್ಟಿನ ಮೂಲೋದ್ದೇಶ ಒಳ್ಳೆಯದಿದ್ದರೂ, ಹುಳುಕನ್ಹಿಡಿಯುವ ಹುಮ್ಮಸ್ಸಿನಲ್ಲಿ ಇಡಿ ಸಮೂಹವೆ ಸನ್ನಿ ಬಡೆದಂತೆ ತೊಳಲಾಡುವಾಗ - ಇಂಥಹ ಆಳ ಶೋಧನೆ ವರವೊ, ಶಾಪವೊ , ಇಂತಹ ಅಗತ್ಯ ನಿಜಕ್ಕೂ ಇದೆಯೆ ಎಂಬ ಅನುಮಾನವೂ ಬಾರದಿರದು. ಅಂತಹ ಅನಿಸಿಕೆಗಳ ಒಟ್ಟುಗೂಡಿಸಿದ ಸಂಕಲಿತ ಭಾವ ಈ ಕವನ. ತಪ್ಪು ಒಪ್ಪುಗಳೇನೆ ಇದ್ದರೂ ಇದು ಅನಿವಾರ್ಯ ಪೀಡೆಯೆ ಎಂಬ ಶಂಕೆಯೂ ಇಲ್ಲಿ ಅಂತರ್ಗತ.
ಲೆಕ್ಕ ಪರಿಶೋಧನೆ (ಆಡಿಟ್ಟು)
____________________________
ಈಗೆಲ್ಲ ಸಂಸ್ಥೆಗಳ ದಿನ ದಿನ ವೇದನೆ
ಬಂದ್ಹೋಗುವ ಪರಿ ಲೆಕ್ಕ ಪರಿಶೋಧನೆ |
ಬೇಡದ ಅತಿಥಿ ತರ ಬಂದಾ ನರಕಾಸುರ
ಬರುವನೆಂದಾ ತಡ ಎಲ್ಲಿಲ್ಲದ ಅವಸರ ||
ದುರ್ಬೀನು ಹಾಕುತ ಹುಡುಕೊ ಒಳಪದರ
ಆಳದಾಳಕೆ ದೃಷ್ಟಿಸಿ ಹಿಡಿಯಲೆ ತಕರಾರ |
ಹಿಂದೇ ವರ್ಷಕೊಮ್ಮೆ ಒಂದೇ ಸಲ ಕಾಡೆಮ್ಮೆ
ಈಗ ಬಾ ಹಲವೊಮ್ಮೆ ಕೈಲಿ ಹಿಡಿದೆ ದೊಣ್ಣೆ ||
ಒಳಗಿನ ಶೋಧನೆಗೆ ಕಾರ್ಯಸೂಚೀ ನೊಗ
ಅದಕೆಂದೇ ವಿಭಾಗಾ ಕಟ್ಟುವ ಹೊಸ ಭೋಗ |
ಥರ ಥರ ನಡುಕ ಸ್ವರ ಹೊರ ಆಡಿಟ್ಟಿನ ಜ್ವರ
ಬಂದು ಹೋಗೊ ಕಾಲ ಬೇರೆಲ್ಲಕು ಬರಗಾಲ ||
ಸೋಜಿಗ ಸಿದ್ದತೆ ತರ ಶೋಧನೆಗೆ ಸರ ಸರ
ತನ್ನಂತಾನೆ ಸರಿಯಿರೆ ಬೇಕೇಕೆ ಕಡೆ ಅವಸರ |
ಮೂಲ ಕಾರಣ ತತ್ವ ಕಾರ್ಯ ತಂತ್ರ ನಿತ್ಯ
ಇರಲಿ ಬಿಡಲಿ ಶೋಧ ಓಡಿ ಸ್ವಯಂಯೋಧ ||
ಒಮ್ಮೊಮೆ ಕಳವಳ ಸರಳಕು ತಳಮಳ ಬಗೆ
ಸರಿಯೊ ತಪ್ಪೋ ಶಂಕೆಗೆ ದಿನಗೆಲಸವು ಬೇಗೆ |
ಮೇಯೋ ಜನರುಂಟು ಮೇಯಿಸೆ ಒಳಗುಂಟು
ಆಡಿಟ್ಟು ಭಯದ ಗುಟ್ಟು, ಸರಿ ಮಾಡುವ ಒಗಟು ||
-------------------------------------------------------------------
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Sent from http://bit.ly/hsR0cS
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com
Comments
ಉ: ಲೆಕ್ಕ ಪರಿಶೋಧನೆ (ಆಡಿಟ್ಟು)
ನಾಗೇಶ ಮೈಸೂರುರವರಿಗೆ ವಂದನೆಗಳು
ಲೆಖ್ಖ ಪರಿಶೋಧನೆ ವರ್ತಮಾನದ ವಸ್ತು ಸ್ತಿತಿಯ ಪ್ರಾತಿನಿಧಿಕ ಕವನ. ಲೆಖ್ಖ ಪರಿಶೋಧನೆ ಎನ್ನುವುದು ಬರಿ ವೃತ್ತಿರಂಗಗಳಲ್ಲಿ ಮಾತ್ರವೆ ಅಲ್ಲ ನಮ್ಮ ದೈನಂದಿನ ಬದುಕಿನ ರೀತಿ ನೀತಿಗಳ ಪರಿಶೋದನೆಯಾಗಬೇಕು ಅಂದಾಗ ಮಾತ್ರ ಅಡಿಟ್ಟು ಎಂಬ ಶಬ್ದ ಕೇಳಿದಾಗ ಕಂಪನ, ತಳಮಳ, ಬೀತಿಗಳಿಂದ ನಾವು ಮುಕ್ತಿ ಹೊಂದಲು ಸಾದ್ಯ, ಕವನ ಮೇಲ್ನೋಟಕ್ಕೆ ಸರಳ ವೆನಿಸಿದರೂ ಅದರ ಅರ್ಥಪೂರ್ಣತೆ ವ್ಯಾಪಕ ಮತ್ತು ಸಾರ್ವಕಾಲಿಕವಾಗಿದೆ, ಧನ್ಯವಾದಗಳು.
In reply to ಉ: ಲೆಕ್ಕ ಪರಿಶೋಧನೆ (ಆಡಿಟ್ಟು) by H A Patil
ಉ: ಲೆಕ್ಕ ಪರಿಶೋಧನೆ (ಆಡಿಟ್ಟು)
ಪಾಟೀಲರಿಗೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಈ ಲೆಕ್ಕ ಪರಿಶೋಧನೆ ಎನ್ನುವುದು ಕೇವಲ ಎಲ್ಲಾ ಸರಿಯಾಗಿದೆಯೆ ಇಲ್ಲವೆ ಎಂದು ತಾಳೆ ನೋಡುವ ಚಟುವಟಿಕೆಯಷ್ಟೆ. ನೈಜದಲ್ಲಿ ಎಲ್ಲವು ಸರಿಯಾಗಿ ನಿಯಮಾನುಸಾರ ನಡೆದುಕೊಂಡು ಹೋಗುತ್ತಿದ್ದರೆ, ಆತಂಕ ಪಡುವ ಕಾರಣವಿರುವುದಿಲ್ಲ. ಆದರೆ ಸಾಮಾನ್ಯವಾಗಿ ನಡೆಯುವುದೇನೆಂದರೆ ಬರಿ ಆಡಿಟ್ಟು ಹತ್ತಿರ ಬರುತ್ತಿದೆ ಎನ್ನುವಾಗ ಎಲ್ಲಾ ಸರಿಯಾಗಿ ಆಗಿದೆಯೆ ಇಲ್ಲವೆ ಎಂದು ನೋಡುವ ಪ್ರವೃತ್ತಿ. ಹೀಗಾಗಿ ಕೆಲವೊಮ್ಮೆ ಅಚ್ಚರಿ ಹಾಗು ಅನಪೇಕ್ಷಿತಬೆಳವಣಿಗೆಗಳು ಘಟಿಸಲು ಕಾರಣವಾಗುತ್ತದೆ. ಸರಳ ಮತ್ತು ಸುಲಭ ನಿಯಮಗಳನ್ನು ರೂಪಿಸಿ ಅದರಂತೆ ಪಾಲಿಸಿಕೊಂಡು ಹೋಗುವುದು ಉಚಿತ ವಿಧಾನ. ಆದರೆ ದೊಡ್ಡ ಸಂಸ್ಥೆಗಳ ಸಂಕೀರ್ಣ ವ್ಯವಸ್ಥೆಯಲ್ಲಿ ಇದು ಸುಲಭ ಸಾಧ್ಯವಲ್ಲ. ನೀವಂದಂತೆ ಕನಿಷ್ಠ ವೈಯಕ್ತಿಕ ಜೀವನದಲ್ಲಿ ಇದನ್ನು ಪರಿಪಾಲಿಸಲು ಸಾಧ್ಯವಾದರೆ ದೈನಂದಿನ ಬದುಕು ಎಷ್ಟೊ ಹಗುರಾದೀತು..!
ಉ: ಲೆಕ್ಕ ಪರಿಶೋಧನೆ (ಆಡಿಟ್ಟು)
ಮ್ಯಾಚ್ ಫಿಕ್ಸಿಂಗೂ ಉಂಟು, ತಿಂದು ತೇಗಿದವರು ಬದುಕಿ ಉಳಿಯುವರು, ತಿನ್ನದವರ ಮುಖಕೆ ಲೇಪವ ಹಚ್ಚುವರು! 'ಕೋಲ್ಬೇಡವೂ ಮನಮೋಹನಾ' ಎಂದು ಹಾಡುತ್ತಿರುವುದು ಕೇಳಿಸುತ್ತಿಲ್ಲವೇ? ಸರ್ಕಾರಿ ಆಡಿಟ್ಟುಗಳ ಪರಿಯೇ ಬೇರೆ! ಒಳ್ಳೆಯ ತಳಮಳದ ಅನಾವರಣ ಮಾಡಿರುವಿರಿ, ನಾಗೇಶರೇ.
In reply to ಉ: ಲೆಕ್ಕ ಪರಿಶೋಧನೆ (ಆಡಿಟ್ಟು) by kavinagaraj
ಉ: ಲೆಕ್ಕ ಪರಿಶೋಧನೆ (ಆಡಿಟ್ಟು)
ಕವಿಗಳೆ ನಮಸ್ಕಾರ. ಆಡಿಟ್ಟಿನ ತಳಮಳದ ಕವನಕ್ಕೆ ತಮ್ಮ ಅನುಭವಾಮೃತದ ಸರ್ಕಾರಿ ಆಡಿಟ್ಟುಗಳ ಪರಿ, ಮ್ಯಾಚು ಫಿಕ್ಸಿಂಗುಗಳಂತಹ ಆಯಾಮಗಳನ್ನು ವಿವರಿಸಿ ಕವನದ ತೂಕ ಹೆಚ್ಚಿಸಿದ್ದಕ್ಕೆ ಅನಂತಾನಂತ ವಂದನೆಗಳು. :-)