ಲೈಫ್ ಚುಟುಕಗಳು - ೪ - ಭರಮಣ್ಣನ ಆರೋಗ್ಯದ ರಹಸ್ಯ
ಸ್ಪೆಶಲ್ ಆಫೀಸರ್ ಭರಮಪ್ಪ ಆರೋಗ್ಯದಲ್ಲಿ ತುಂಬಾ ಗಟ್ಟಿ ಎಂದು ಎಲ್ಲರಿಗೂ ತಿಳಿದಿದ್ದ ವಿಷಯ. ನಾನು ಅವರ ಆಫೀಸಿಗೆ ಹೋದಾಗಲೆಲ್ಲ ಕ್ಯಾಂಟೀನಿಗೆ ಕರೆದುಕೊಂಡು ಹೋಗಿ ಮುದ್ದೆ ಕೊಡಿಸುತ್ತಿದ್ದರು. ಒಮ್ಮೆ ಕ್ಯಾಂಟೀನು ಬಂದ್ ಆಗಿದ್ದಾಗ ಅವರ ಕಾಲೇಜಿನ ಕ್ಯಾಂಪಸ್ ಹೊರಗೆ ಇದ್ದ ಗಾಡಿಯೊಂದಕ್ಕೆ ಲಗ್ಗೆ ಇಟ್ಟರು ಭರಮಣ್ಣ. ರಸ್ತೆ ಬದಿ ತಿನ್ನಲು ನಾನು ಸ್ವಲ್ಪ ಹಿಂದೇಟು ಹಾಕಿದ್ದೆ.
ಅದಕ್ಕೆ ಭರಮಣ್ಣ,
“ನಾವೆಲ್ಲ ಎಲ್ಲ ಕಡೆ ತಿರುಗುತ್ತೇವೆ, ಎಲ್ಲ ತಿನ್ನುತ್ತೇವೆ. ಅದಕ್ಕೇ ನಮ್ಮ ಆರೋಗ್ಯ ಹದಗೆಡುವುದಿಲ್ಲ. ನಾಲ್ಕು ವರ್ಷಗಳಾದ್ವು - ಒಂದು ಸಾರೀನೂ ಜ್ವರ ಬಂದಿಲ್ಲ” ಎಂದರು.
ನನಗೂ ಅದು ಸರಿ ಎನಿಸಿತು. “ಇಮ್ಯೂನಿಟಿ ಬೆಳೆಯೋದೇ ಹೊರಗೆ ತಿಂದರೆ” ಎಂಬ ಭರಮಪ್ಪನವರ ಮಾತು ಕೇಳುತ್ತ ನಾನೂ ಅವತ್ತು ಗಾಡಿಯಲ್ಲಿ ಸಿಕ್ಕ ತಟ್ಟೆ ಇಡ್ಲೀನೇ ತಿಂದುಬಿಟ್ಟೆ.
ಪುಣ್ಯಕ್ಕೆ ನನಗೇನೂ ಜ್ವರ ಬರಲಿಲ್ಲ.
ಆದರೆ ಅದಾದ ಒಂದು ವಾರಕ್ಕೆ ಭರಮಣ್ಣ ಫೋನಿನಲ್ಲಿ “ಹುಷಾರಿಲ್ಲ ಸಾರ್. ಜ್ವರ ಬಂದುಬಿಟ್ಟಿದೆ” ಎಂದು ಕೀರಲು ದನಿಯಲ್ಲಿ ಹೇಳಿದರು.
“ಇದೇನು ಭರಮಣ್ಣ, ಎಲ್ಲ ಕಡೆ ತಿಂತೀವಿ. ನಮಗೆ ಜ್ವರ ಎಲ್ಲ ಬರೋದಿಲ್ಲ ಎಂದವರು ನೀವು. ನಿಮಗೇ ಜ್ವರ ಬಂದುಬಿಟ್ಟಿದೆಯಲ್ಲ” ಎಂದೆ.
“ಏನು ಮಾಡೋದು ಸಾರ್. ಕಳೆದ ವಾರ ನನಗೆ ಪ್ರಮೋಶನ್ ಆಯ್ತಲ್ಲ. ಹೊಸ ಸಾಹೇಬ್ರು. ತುಂಬ ಕಟ್ನಿಟ್ಟು. ಒಂಚೂರೂ ಪುರ್ಸೊತ್ತಿಲ್ಲ. ಬೆಳಿಗ್ಗೆ ಬೇಗ ಹೋಗ್ತಿದೀನಿ. ರಾತ್ರಿ ಲೇಟಾಗಿ ಮಲ್ಕೊಳ್ತಿದೀನಿ. ತುಂಬಾ ಟೆನ್ಶನ್ನು ಸಾರ್” ಎಂದು ಅವರ ಅನಾ(ಆ)ರೋಗ್ಯದ ಹಿಂದಿನ ರಹಸ್ಯವನ್ನು ಬಿಡಿಸಿದರು.
Comments
ಉ: ಲೈಫ್ ಚುಟುಕಗಳು - ೪ - ಭರಮಣ್ಣನ ಆರೋಗ್ಯದ ರಹಸ್ಯ
:-)
ಮೊನ್ನೆ ವಾಟ್ಸ್ ಆಪ್ ನಲ್ಲಿ ಬಂದಿತ್ತು ...
ಯಾವುದೋ ಕಾರ್ಪೊರೇಟ್ ಕಂಪನಿಯಲ್ಲಿ ವಾರ್ಷಿಕ ಆರೋಗ್ಯ ತಪಾಸಣೆ ನಡೆಯಿತಂತೆ. ಎಲ್ಲರಿಗೂ ಹೈ ಬೀಪಿ, ಶುಗರ್ ಆದ್ರೆ ನಮ್ಮ ಶೀಮನಿಗೆ ಮಾತ್ರ ಬೀಪಿಯೂ ನಾರ್ಮಲ್, ಶುಗರ್ರೂ ನಾರ್ಮಲ್, ಸಾಲದ್ದಕ್ಕೆ ಕೊಲೆಸ್ಟರಾಲ್ ನಾರ್ಮಲ್, ಬಿಎಂಐ ನಾರ್ಮಲ್!
ಇಲ್ಲಿ ಹೆಣ ಬೀಳೋವಷ್ಟು ಕೆಲಸ ಇರೋವಾಗ ಅದು ಹೇಗ್ರೀ ಎಲ್ಲಾ ನಾರ್ಮಲ್? ನಾಳೆಯಿಂದ ನೀವು ಕೆಲಸಕ್ಕೆ ಬರೋದು ಬೇಡ ಅಂದರಂತೆ ಪಾಪ!