ಲೈಫ್ ನಲ್ಲೊಂದು ಯೂ ಟರ್ನ್

ಲೈಫ್ ನಲ್ಲೊಂದು ಯೂ ಟರ್ನ್

ಪುಸ್ತಕದ ಲೇಖಕ/ಕವಿಯ ಹೆಸರು
ಮೇಘನಾ ಕಾನೇಟ್ಕರ್
ಪ್ರಕಾಶಕರು
ಹರಿವು ಬುಕ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ.೧೫೦.೦೦, ಮುದ್ರಣ: ೨೦೨೩

ಉದಯೋನ್ಮುಖ ಕತೆಗಾರ್ತಿ ಮೇಘನಾ ಕಾನೇಟ್ಕರ್ ಅವರ ನೂತನ ಕಥಾ ಸಂಕಲನ ‘ಲೈಫ್ ನಲ್ಲೊಂದು ಯೂ ಟರ್ನ್'. ಈ ಕಥಾ ಸಂಕಲನಕ್ಕೆ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಖ್ಯಾತ ಕಾದಂಬರಿಕಾರ, ಅಂಕಣಕಾರರಾದ ಸಂತೋಷಕುಮಾರ್ ಮೆಹೆಂದಳೆ ಇವರು. ಇವರು ತಮ್ಮ ಬೆನ್ನುಡಿಯಲ್ಲಿ “ ಕನ್ನಡ ಕಥೆಗಳ ಸುಗ್ಗಿ ಕಾಲದಲ್ಲಿ ಅನಿರೀಕ್ಷಿತಗಳ ಹೂರಣ, ವಾಸ್ತವವನ್ನು ಮುಖಕ್ಕೆ ರಾಚುವಂತೆ ತೆರೆದಿಡುತ್ತಾ, ಭಾವಾನುಭೂತಿಗಳ ಹಿಂದೆ ಅಡಗಿರಬಹುದಾದ ಕಹಿಸತ್ಯಗಳನ್ನು ನಮಗೆ ಅನುಸಂಧಾನ ಮಾಡಿಸುತ್ತಾ ಸಾಗುವ ಕತೆಗಳ ಲೇಖಕಿ ಮೇಘನಾ ಕಾನೇಟ್ಕರ್ ಕನ್ನಡದ ಸುಲಲೀತ ಬಳಕೆಯಲ್ಲಿ ಗೆದ್ದಿದ್ದರೆ, ನಮ್ಮೊಂದಿಗೆ ಸಾಗುತ್ತಲೇ ಇರುವ ನೈಜ ಘಟನಾವಳಿಗಳನ್ನು ಕತೆಯ ರೂಪಕ್ಕೆ ತಿರುಗಿಸುತ್ತಾ ಓದುಗರನ್ನು ಹಿಡಿದಿಡುವ ತಂತ್ರ ಇಲ್ಲಿನ ಹೆಚ್ಚುಗಾರಿಕೆ.

ಕಥನ ಪ್ರಕಾರದಲ್ಲಿ ಕಥನ ಶೈಲಿ ಮತ್ತು ವಸ್ತು ಪ್ರಮುಖ ಪಾತ್ರವಹಿಸುವಾಗ ಅವನ್ನೆಲ್ಲ ತಕ್ಕಷ್ಟೇ ಗಣಿಸುತ್ತಲೇ ಸಾಂದರ್ಭಿಕವಾಗಿ ಕತೆ ಹೆಣೆಯುವ ಲೇಖಕಿ, ಎಲ್ಲೋ ಮಸ್ತಿಷ್ಕದಲ್ಲಿದ್ದ ಪಾತ್ರವೊಂದಕ್ಕೆ ಚಕ್ಕನೆ ಜೀವ ತುಂಬಿ ನಿಲ್ಲಿಸುವ ಪರಿ ವಿಭಿನ್ನ. ಶೈಲಿ ಮತ್ತು ವಸ್ತುವನ್ನು ಬಳಸಿಕೊಳ್ಳುವುದರ ಜತೆಗೆ ಫ್ಯಾಂಟಸ್ಸಿಯನ್ನು ಬೆರೆಸುವ ಕಥನಗಾರಿಕೆ ಕನ್ನಡದಲ್ಲಿ ಆಗೀಗ ಸದ್ದು ಮಾಡಿದೆಯಾದರೂ ಆದನ್ನು ತಾಂತ್ರಿಕವಾಗಿ ದುಡಿಸಿಕೊಂಡವರು ಕಡಿಮೆ. ಬರೆಯುತ್ತಲೇ ಅಂಥದ್ದೊಂದು ಸಾಧ್ಯತೆಯತ್ತ ಪ್ರಯತ್ನ ನಡೆಸಿದ ಪ್ರಾಯೋಗಿಕ ಅಂಶ ಎದ್ದು ಕಾಣುತ್ತದೆ.” ಎಂದಿದ್ದಾರೆ.

ಲೇಖಕಿ ಮೇಘನಾ ಕಾನೇಟ್ಕರ್ ಅವರು ತಮ್ಮ ಮುನ್ನುಡಿಯಲ್ಲಿ “ಓದು-ಬರಹ ನನಗೆಂದಿಗೂ ವ್ಯಸನವೇ. ಅನಕೃ, ತರಾಸು, ಕಾರಂತರು, ವಾಣಿ, ಎಂ.ಕೆ.ಇಂದಿರಾ, ತ್ರಿವೇಣಿ ಯರಾದಿಯಾಗಿ ಇದುವರೆಗೂ ಸಮಕಾಲೀನ ಸಾಹಿತಿಗಳು, ಉದಯೋನ್ಮುಖ ಕಥೆಗಾರರ ಬಹುತೇಕ ಕೃತಿಗಳನ್ನು ಓದುತ್ತ ಬಂದಿರುವ ನನಗೆ ಬರಹವು ಸೆಳೆದಿದ್ದು ಆಶ್ಚರ್ಯವೇನಲ್ಲ.

ಮೊದಮೊದಲು ಕಚ್ಚಾಪಟ್ಟಿಯ (ರಫ್‌ ನೋಟ್‌ ಬುಕ್) ಕೊನೆ ಪುಟಗಳಲ್ಲಿ ಬರೆದಿಡುತ್ತಿದ್ದ ಕವಿತೆಗಳು ಪ್ರಮೋಷನ್‌ ಪಡೆದು ಡೈರಿಗಳಲ್ಲಿ ಸ್ಥಾನ ಪಡೆದವು. ಕ್ರಮೇಣ ಅದರೊಂದಿಗೆ ಸಣ್ಣ ಕತೆಗಳು ಸೇರಿಕೊಂಡವು. ಆದರೆ ಹೀಗೆ ಬರೆದು ಬರೆದು ಇಡುತ್ತಿದ್ದರೆ ಅವನ್ನೆಲ್ಲ ಓದುವರಾರು? ವಿಮರ್ಶಿಸುವರಾರು? ಮೆಚ್ಚುವರಾರು? ಎನ್ನುವ ಪ್ರಶ್ನೆ ಬಂದಾಗ ಅದಕ್ಕೆ ಉತ್ತರವಾಗಿ ಸಿಕ್ಕಿದ್ದೇ ಪ್ರತಿಲಿಪಿ ಎಂಬ ವೇದಿಕೆ. ಅಲ್ಲಿ ನನ್ನೆಲ್ಲ ಬರಹಗಳನ್ನು ಪ್ರಕಟಿಸುತ್ತಾ ಬಂದೆ. ಓದುಗರಷ್ಟೆ ಅಲ್ಲದೆ ಕನ್ನಡ ಸಾರಸ್ವತಲೋಕದ ಹಿರಿಯ ಲೇಖಕರು ಸಹ ನನ್ನ ಬರಹಗಳನ್ನು ಓದಿ ವಿಮರ್ಶಿಸಿದರು. ಮೆಚ್ಚುಗೆಯನ್ನೂ ವ್ಯಕ್ತ ಪಡಿಸಿ ಹೀಗೆಯೇ ಮುಂದುವರಿಯುವಂತೆ ಪ್ರೋತ್ಸಾಹಿಸಿದರು.

ಚಿಕ್ಕಂದಿನಿಂದಲೂ ಸಾಹಿತ್ಯದ ನಂಟು ಹೊಂದಿರುವ ನಾನು ಪರೀಕ್ಷೆ ಇದ್ದಾಗ ಅಭ್ಯಾಸ ಮಾಡಿದ್ದಕ್ಕಿಂತ ಹೆಚ್ಚಾಗಿ ಪಠ್ಯಪುಸ್ತಕ ಹಾಗು ಪಕ್ಕಾ ಪಟ್ಟಿಯ(ಫೇರ್‌ ನೋಟ್‌ ಬುಕ್) ನಡುವೆ ಕಳ್ಳತನದಿಂದ ವಾರಪತ್ರಿಕೆಗಳನ್ನಿಟ್ಟು ಓದುತ್ತಿದ್ದೆ. ಹೀಗೆ ಮಾಡುವಾಗ ಅಮ್ಮನ ಕೈಯಲ್ಲಿ ಸಿಕ್ಕಿಹಾಕಿಕೊಂಡು ಒದೆ ತಿಂದಿರುವ, ಮಾರ್ಕ್ಸ್‌ ಕಾರ್ಡ್‌ ಗೆ ಸಹಿ ಹಾಕುವಾಗ ಅಪ್ಪ ಬೈದಿರುವ ದಾಖಲೆಗಳಿವೆ. ಇಷ್ಟೆಲ್ಲಾ ಆಗಿಯೂ ಈ ಚಟ ಮಾತ್ರ ನನ್ನನ್ನು ಬಿಟ್ಟು ಹೋಗಿಲ್ಲ ಬದಲಿಗೆ ವ್ಯಾಪಕವಾಗಿ ಆವರಿಸಿಕೊಂಡಿದೆ. ಅದು ಎಷ್ಟರಮಟ್ಟಿಗೆ ಎಂದರೆ ಈಗಲೂ ಕಚೇರಿ ಕೆಲಸದ ಮಧ್ಯೆ ಆಗಾಗ ಡೆಸ್ಕ್‌ ಕೆಳಗೆ ಕಾದಂಬರಿ ಪುಸ್ತಕವಿಟ್ಟು ಓದುತ್ತಿರುತ್ತೇನೆ. ಏನಾದರೂ ಹೊಳೆಯಿತೆಂದು ಬರೆಯಬೇಕೆಂದಾಗ ನನ್ನ ಲ್ಯಾಪ್‌ ಟಾಪ್‌ ನಲ್ಲಿ ವರ್ಡ್‌ ಡಾಕ್ಯುಮೆಂಟ್‌ ಸದಾ ತೆರೆದಿಟ್ಟುಕೊಂಡಿರುತ್ತೇನೆ. ದೇವರ ದಯೆಯಿಂದ ಮ್ಯಾನೇಜರ್‌ ಕಣ್ಣಿಗೆ ಬೀಳದಂತೆ ವಿಂಡೋ ಸ್ವ್ಯಾಪ್‌ ಮಾಡುವ ಜಾಣತನವಂತೂ ಕೈ ಕೊಟ್ಟಿಲ್ಲ!

ಮೊದಮೊದಲು ಪ್ರತಿಲಿಪಿಯಲ್ಲಿ ಬರೆದು ದಾಖಲಿಸುತ್ತಿದ್ದ ನನ್ನೆಲ್ಲ ಕತೆ, ಕವಿತೆ ಹಾಗು ಲೇಖನಗಳು ಅಲ್ಲೇ ನಡೆಸುವ ಸಣ್ಣಪುಟ್ಟ ಸ್ಪರ್ಧೆಗಳಲ್ಲಿ ಪೈಪೋಟಿಗಿಳಿದವು. ಆನಂತರ ಬೇರೆಬೇರೆ ಅಂತರ್ಜಾಲ ಪತ್ರಿಕೆ (ಬ್ಲಾಗ್) ಗಳಲ್ಲಿ ಪ್ರಕಟಿಸತೊಡಗಿದೆ. ವಿಮರ್ಶೆ, ಮೆಚ್ಚುಗೆಗಳು ಬರತೊಡಗಿದಾಗ ಮುದ್ರಣ ಮಾಧ್ಯಮಗಳಿಗೆ ಸಹ ನನ್ನ ಬರಹಗಳನ್ನು ಕಳಿಸುವ ಧೈರ್ಯ ಬಂತು. ಪ್ರಕಟವಾದಾಗ ನನಗಿಂತಲೂ ಹೆಚ್ಚು ಖುಶಿ ಪಟ್ಟಿದ್ದು ನನ್ನ ಪ್ರೀತಿಸುವ, ಪ್ರೋತ್ಸಾಹಿಸುವ ಜೀವಗಳು. ಹೀಗೆ ಪ್ರಕಟವಾದ ನನ್ನ ಬರಹಗಳನ್ನು ಗಮನಿಸಿದ ಕೆಲವು ಸಂಪಾದಕರು ವಿಶೇಷಾಂಕಗಳಿಗೆ ಬರೆಯಲು ಆಹ್ವಾನವಿತ್ತರು. ಅದೇ ಧೈರ್ಯದ ಮೇಲೆ ಒಂದೆರಡು ಸ್ಪರ್ಧೆಗಳಿಗೆ ನನ್ನ ಕತೆಗಳನ್ನು ಕಳಿಸಿದಾಗ ಸಮಾಧಾನಕರ ಹಾಗು ತೀರ್ಪುಗಾರರ ಮೆಚ್ಚುಗೆಯ ಬಹುಮಾನಗಳು ಅರಸಿ ಬಂದವು. ಕೆಲವು ಕತೆಗಳು ಮೈಲ್ಯಾಂಗ್‌ ಆಡಿಯೋ ದಲ್ಲಿ ಆಡಿಯೋ ಕತೆಗಳಾಗಿ ಪ್ರಕಟಗೊಂಡು ಕೇಳುಗರ ಮೆಚ್ಚುಗೆ ಗಳಿಸಿದವು.

ಇದೀಗ ನಾನು ಬರೆದ ಒಟ್ಟು ಕತೆಗಳಲ್ಲಿ ನನಗೆ ಉತ್ತಮವೆನಿಸಿದ, ಮನಸ್ಸಿಗೆ ತೃಪ್ತಿಕೊಟ್ಟ, ವಿಶೇಷಾಂಕದಲ್ಲಿ ಪ್ರಕಟಗೊಂಡಿರುವ ಹಾಗು ಸಹೃದಯಿ ಸಾಹಿತಿ ಮಿತ್ರರೆಲ್ಲ ಓದಿ ವಿಮರ್ಶಿಸಿ ಮೆಚ್ಚಿಕೊಂಡ ಕೆಲವು ಕತೆಗಳನ್ನು ಒಟ್ಟುಗೂಡಿಸಿ ಸಂಕಲನವನ್ನಾಗಿ ಹೊರ ತರುವ ಅಭಿಲಾಷೆ ಹೊಂದಿದ್ದೇನೆ. ಇದರಲ್ಲಿ 80-90 ರ ದಶಕದ ಕತೆಗಳೊಂದಿಗೆ ಪ್ರಸ್ತುತ ಕಾಲದ ಕತೆಗಳೂ ಇವೆ. ಮಲೆನಾಡು, ಬಯಲುಸೀಮೆ ಹಾಗು ಮೆಟ್ರೋ ನಗರಗಳ ಭಾಷಾ ಸೊಗಡು ಮತ್ತು ಜೀವನ ಶೈಲಿಯನ್ನೊಳಗೊಂಡ ಕೌಟುಂಬಿಕ ಹಾಗು ಸಾಮಾಜಿಕ ಕತೆಗಳ ರಸದೌತಣ ನಿಮ್ಮ ಓದಿಗೆ ಕಾದಿದೆ.” ಎಂದಿದ್ದಾರೆ.