ಲೋಕದ ಮನಗೆದ್ದ ಸುನಿತಾ

೯ ತಿಂಗಳು, ೧೧ ದಿನ, ಜಗತ್ತೆಲ್ಲ ತಲೆಕೆಡಿಸಿಕೊಂಡಿದ್ದ ಮಹಾನ್ ಪ್ರಶ್ನೆಗೆ ಅಮೇರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹಾಗೂ ಸ್ಪೇಸ್ ಎಕ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಕಡೆಗೂ ಉತ್ತರ ಕಂಡುಕೊಂಡಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ಭಾರತೀಯ ಮೂಲಕ ಸುನೀತಾ ವಿಲಿಯಮ್ಸ್ ಹಾಗೂ ಅಮೇರಿಕದ ನೌಕಾ ಪರೀಕ್ಷಾ ಪೈಲೆಟ್ ಬುಚ್ ವಿಲ್ಮೋರ್ ಅವರನ್ನು ಸುರಕ್ಷಿತವಾಗಿ ಧರೆಗೆ ಕರೆತರುವಲ್ಲಿ ಬಾಹ್ಯಾಕಾಶ ತಂತ್ರಜ್ಞರು ಸಫಲವಾಗಿರುವುದು ನಿಜಕ್ಕೂ ಐತಿಹಾಸಿಕ ಗೆಲುವು.
ಮುಂದಿನ ಕ್ಷಣವೇನು? ನಾಳೆಯೇನು? ಭೂ ಪರಿಸರದಲ್ಲಿ ಈ ಪ್ರಶ್ನೆಗಳಿಗೆ ತಕ್ಕಮಟ್ಟಿಗೆ ನಿರೀಕ್ಷಿತ ಉತ್ತರ ಕಂಡುಕೊಳ್ಳಬಹುದು. ಆದರೆ, ಬಾಹ್ಯಾಕಾಶದ ಸವಾಲುಗಳ ಪರಿಸರದಲ್ಲಿ ಎಲ್ಲವೂ ಅನಿರೀಕ್ಷಿತ ಎಂಬುದು ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ ಸಾಕಷ್ಟು ಬಾರಿ ಪಾಠಗಳನ್ನು ಕಲಿಸಿತ್ತು. ಆದರೆ, ಸುನೀತಾ ಬಾಹ್ಯಾಕಾಶ ಆಪರೇಶನ್ ಪ್ರಕರಣದಲ್ಲಿ ತಾಂತ್ರಿಕ ಸವಾಲುಗಳೂ ಸುತ್ತುವರಿದಿದ್ದರಿಂದ, ಮರೆಯಲಾಗದ ಪಾಠವನ್ನೇ ಬಾಹ್ಯಾಕಾಶ ನಿಲ್ದಾಣ ಕಲಿಸಿದೆ.
ಭೂಮಿ ಮೇಲಿನ ಪ್ರಬಲ ರಾಷ್ಟ್ರಗಳ ಪೈಪೋಟಿ ಬಾಹ್ಯಾಕಾಶಕ್ಕೂ ವಿಸ್ತಾರಗೊಂಡು ದಶಕಗಳೇ ಆದರೂ, ಸ್ಪೇಸ್ ಸ್ಟೇಷನ್ ಕಾರ್ಯಾಚರಣೆಗಳಲ್ಲಿ ಅಮೇರಿಕ, ರಷ್ಯಾಗಳದ್ದೇ ಕಾರುಬಾರು ಎನ್ನುವ ವಾತಾವರಣ ಈಗಿಲ್ಲ. ಈಗಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಿವೃತ್ತಿಯ ಅಂಚಿನಲ್ಲಿದ್ದು, ಈ ಎರಡು ಪ್ರಬಲ ರಾಷ್ಟ್ರಗಳ ಅವಲಂಬನೆಯಿಂದ ಹೊರಬರಲು ಮಿಕ್ಕ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಅದರ ಭಾಗವಾಗಿಯೇ, ಚೀನಾ ಈಗಾಗಲೇ ಟಯಾನ್ ಗಾಂಗ್ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯೂ ಪರ್ಯಾಯ ನಿಲ್ದಾಣದ ಬಗ್ಗೆ ಯೋಚಿಸುತ್ತಿದೆ. ಭಾರತವು ೨೦೩೫ರ ವೇಳೆಗೆ ಆತ್ಮನಿರ್ಭರ ಪರಿಕಲ್ಪನೆಯಲ್ಲಿ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಲಿದೆ. ಈ ನಿಟ್ಟಿನಲ್ಲಿ ಈ ಯೋಜನೆ ಅಂಬೆಗಾಲನ್ನಿಡುತ್ತಿದೆ. ಡಾಕಿಂಗ್, ಆನ್ ಡಾಕಿಂಗ್ ಒಗಟುಗಳಿಗೆ ಉತ್ತರ ಕಂಡುಕೊಳ್ಳಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪರೀಕ್ಷೆಗಳನ್ನು ನಡೆಸುತ್ತಲೇ ಇದೆ. ಇವರೆಲ್ಲರಿಗೂ ಸುನಿತಾ ನಡೆಸಿದ ಸಂಶೋಧನೆಗಳಿಂದ ಮಾರ್ಗದರ್ಶನ ಸಿಗುವುದೇ? ಇದು ಸದ್ಯದ ಪ್ರಶ್ನೆ.
ಈ ೯ ತಿಂಗಳಲ್ಲಿ ೯೦೦ ಗಂಟೆಗಳಿಗಿಂತ ಹೆಚ್ಚಿನ ಸಮಯವನ್ನು ಬಾಹ್ಯಾಕಾಶದಲ್ಲಿ ಕಳೆದ ಸುನಿತಾ ಅವರು ವಿಲ್ಮೋರ್ ಜತೆಗೂಡಿ ೧೫೦ಕ್ಕೂ ಅಧಿಕ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದಾರೆ. ಇವುಗಳಲ್ಲಿ ಬಯೋಮೆಡಿಕಲ್ ಸಂಶೋಧನೆ, ಬಾಹ್ಯಾಕಾಶ ಪರಿಸರ ಅಧ್ಯಯನ, ಹೊಸ ತಂತ್ರಜ್ಞಾನಗಳ ಪರೀಕ್ಷೆ ಬಹುಮುಖ್ಯವಾದವು. ಸುನಿತಾ ಅವರ ಅನುಭವಗಳ ಪಾಠ ಹೀರಿಕೊಳ್ಳುವ ತವಕದಲ್ಲಿರುವ ಭಾರತ, ಅಮೇರಿಕಾದ ಜತೆ ಉತ್ತಮ ಬಾಹ್ಯಾಕಾಶ ಸಂಬಂಧಗಳನ್ನು ಕಾಯ್ದುಕೊಳ್ಳುವ ಅನಿವಾರ್ಯತೆಯಲ್ಲಿಯೂ ಇದೆ. ಸುನಿತಾ ವಾಪಸಾತಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದಿಸುವಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೋ ಅಧ್ಯಕ್ಷ ಡಾ. ವಿ.ನಾರಾಯಣನ್ ಅವರು ನೀಡಿರುವ ಹೇಳಿಕೆಗಳು ಈ ನಿಟ್ಟಿನಲ್ಲಿ ಬಹುದೊಡ್ಡ ಮುನ್ಸೂಚನೆಗಳು, ಭಾರತದ ಭವಿಷ್ಯದ ಬಾಹ್ಯಾಕಾಶ ನಿಲ್ದಾಣದ ಸಾಹಸಕ್ಕೆ ನಾಸಾ ನೀಡುವ ಸಲಹೆ, ಸಹಕಾರ ಅತಿಮುಖ್ಯವೇ ಆಗಲಿವೆ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೦-೦೩-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ