ಲೋಕವೇ ತಾನಾದ ಬಳಿಕ
ಡಾ. ಮುಮ್ತಾಜ್ ಬೇಗಂ ಅವರು ತಮ್ಮ ಲೇಖನಗಳ ಸಂಕಲನವನ್ನು ‘ಲೋಕವೇ ತಾನಾದ ಬಳಿಕ' ಎಂಬ ಹೆಸರಿನಲ್ಲಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಹೆಣ್ಣು ತನ್ನ ಬದುಕಿನ ಹಲವು ಮಜಲುಗಳಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾ ಎಲ್ಲರೊಳಗಿದ್ದು ತಾನಾಗ ಬಯಸುವುದಿದೆಯಲ್ಲ ಅದು ನಿಜವಾದ ಲೋಕವಾಗುವುದು ಎಂದರ್ಥ. ಲೋಕದ ಸೃಷ್ಟಿಗೆ ಗಂಡಿನಷ್ಟೇ ಹೆಣ್ಣು ಕಾರಣಳಾಗಿದ್ದರೂ ಆಕೆಯನ್ನು ಅರ್ಥೈಯಿಸುವ ಕ್ರಮ ಇನ್ನೂ ಬದಲಾಗಿಲ್ಲ ಎನ್ನುತ್ತಾರೆ ಲೇಖಕಿ ಮುಮ್ತಾಜ್ ಬೇಗಂ. ಇವರು ತಮ್ಮ ‘ಲೋಕವೇ ತಾನಾದ ಬಳಿಕ' ಪುಸ್ತಕದಲ್ಲಿ ʻಲೋಕಾಂತ ಮತ್ತು ಏಕಾಂತದೊಳಗೊಂದು ಸುತ್ತ...!ʼ ಶೀರ್ಷಿಕೆಯಡಿ ಬರೆದ ಮಾತುಗಳು ನಿಮ್ಮ ಓದಿಗಾಗಿ...
“ʻಲೋಕವೇ ತಾನಾದ ಬಳಿಕ’ ಕೃತಿಯು ಮಹಿಳಾ ಪರವಾದ ಧ್ವನಿಯನ್ನು, ಭಿನ್ನ ಆಯಾಮಗಳಲ್ಲಿ ಅನಾವರಣಗೊಂಡಿರುವ ಲೇಖನಗಳ ಸಂಕಲನವಾಗಿದೆ. ಬೇರೆ ಬೇರೆ ಸಂದರ್ಭದಲ್ಲಿ ಬರೆದ ಲೇಖನಗಳು, ಅಲ್ಲದೇ ಮಹಿಳಾ ಪರ ಅಧ್ಯಯನ ಕೈಗೊಳ್ಳುವವರಿಗೆ ಆಕರವನ್ನು ಒದಗಿಸಬಹುದೆಂದು ನಂಬಿಕೆಯೊಂದಿಗೆ ಒಟ್ಟು ಲೇಖನಗಳನ್ನು ಸಂಕಲಿಸಿ ಕೊಡುತ್ತಿರುವೆ.
ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯ ? ಎಂದು ಪ್ರಶ್ನಿಸಿದ ಶರಣೆ ಅಕ್ಕಮಾದೇವಿಯ ವಚನದ ಸಾಲುಗಳು ತುಂಬಾ ಪ್ರಸ್ತುತವೆನ್ನುವ ಕಾರಣಕ್ಕೆ ಕೃತಿಗೆ ಶೀರ್ಷಿಕೆಯಾಗಿ ವಚನದ ಸಾಲನ್ನು ಇಡಲಾಗಿದೆ. ಉಸಿರಿಗೆ ಪರಿಮಳವಿಲ್ಲದ ಕಾರಣ ಕುಸುಮದ ವಾಸನೆಯನ್ನು ಬಯಸುತ್ತೇವೆ. ಉಸಿರೇ ಕುಸುಮದ ಪರಿಮಳವಾದರೇ? ಅದು ಅಘಟಿತವಾಗುತ್ತದೆ. ನಿಷ್ಕಲ್ಮಷ ಮನುಷ್ಯನ ಉಸಿರು ಪರಿಮಳದಂತೆ ಎಂದು ಅನುಭಾವಿಗಳು ಭಾವಿಸುತ್ತಾರೆ. ಆದ್ದರಿಂದ ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯ ಎನ್ನುವ ಅಕ್ಕ ಇಂದಿಗೂ ಪ್ರಸ್ತುತಳಾಗುತ್ತಾಳೆ. ಒಟ್ಟು ಸ್ತ್ರೀ ಬದುಕಿನ ಕಾಳಜಿಯ ಕಾರಣಕ್ಕೆ ಮಹತ್ವಪೂರ್ಣವೆನಿಸುತ್ತವೆ. ಉಸಿರು ಪರಿಮಳವಾಗುವುದು, ಕ್ಷಮ ದಮ(ಇಂದ್ರಿಯ ನಿಗ್ರಹ) ಶಾಂತಿ ಮತ್ತು ಸ್ಮರಣೆಯಿಂದ ಇರುವುದು, ಲೋಕವೇ ತಾನಾಗುವುದು ಇವು ಸಂಸಾರಿಯಾಗಿಯೂ ಸಾಧಿಸಬಹುದೆಂದು ಅಕ್ಕ ಹೇಳಿರುವ ಮಾತು ತುಂಬಾ ಮಾರ್ಮಿಕವಾಗಿವೆ.
ಹೆಣ್ಣು ತನ್ನ ಬದುಕಿನ ಹಲವು ಮಜಲುಗಳಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾ ಎಲ್ಲರೊಳಗಿದ್ದು ತಾನಾಗ ಬಯಸುವುದಿದೆಯಲ್ಲ ಅದು ನಿಜವಾದ ಲೋಕವಾಗುವುದು ಎಂದರ್ಥ. ಲೋಕದ ಸೃಷ್ಟಿಗೆ ಗಂಡಿನಷ್ಟೇ ಹೆಣ್ಣು ಕಾರಣಳಾಗಿದ್ದರೂ ಆಕೆಯನ್ನು ಅರ್ಥೈಯಿಸುವ ಕ್ರಮ ಇನ್ನೂ ಬದಲಾಗಿಲ್ಲ. ಆದ್ದರಿಂದಲೇ ಹೆಣ್ಣು ತನ್ನನ್ನು ತಾನು ಕಂಡುಕೊಳ್ಳುವ ತನ್ನ ಅಸ್ಮಿತೆಯ ಹುಡುಕಾಟದ ಹಾದಿಯನ್ನು ಹಿಡಿದಿದ್ದಾಳೆ. ಹೆಣ್ಣನ್ನು ದೇವತಾ ಸ್ಥಾನದಲ್ಲಿ ಇಟ್ಟು ನೋಡುವ ಸಮಾಜವೇ ಆಕೆಯನ್ನು ರಾಕ್ಷಸಿಯಾಗಿ ನೋಡಿರುವುದಿದೆ. ಆದ್ದರಿಂದ ಹೆಣ್ಣು ಲೋಕವೇ ತಾನಾಗುವ ಪ್ರಕ್ರಿಯೆ ಶತ ಶತಮಾನಗಳಿಂದ ನಡೆದರೂ ಆಕೆಯ ಅಸ್ತಿತ್ವವನ್ನು ಗೌಣವಾಗಿಸಿದ್ದು ಪುರುಷ ಯಾಜಮಾನಿಕೆಯ ಪ್ರಾಬಲ್ಯದ ಸಾಮಾಜಿಕ ವ್ಯವಸ್ಥೆ.
ಇಪ್ಪತ್ತೊಂದನೆ ಶತಮಾನ ಬಂದರೂ ಬದಲಾಗದ ಮಹಿಳೆಯ ಬಗೆಗಿನ ಅಭಿಪ್ರಾಯಗಳು, ಜೀವದಾಯಿತ್ವದ ಹೆಣ್ಣಿನ ಸಂಗೋಪನಾ ಶಕ್ತಿಯು ಜಾಗತಿಕರಣದ ಸಂಪಾದನಾ ಶಕ್ತಿಯ ಪ್ರಾಬಲ್ಯದಲ್ಲಿ ಅಲಕ್ಷಕ್ಕೆ ಒಳಗಾಗುತ್ತಿದೆ. ಇಂದು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೆಣ್ಣಿನ ಪಾಲುದಾರಿಕೆಯಿದೆ ಆದರೆ ಹೆಣ್ಣಿನ ಸಂವೇದನೆಯ ಚಹರೆ ಕಾಣುವುದಿಲ್ಲ. ದಿನನಿತ್ಯದ ಸಾಮಾಜಿಕ, ರಾಜಕೀಯ, ಧಾರ್ಮಿಕ ಘಟನೆಗಳಿಗೆ ಹೆಣ್ಣು ಮಕ್ಕಳು ಪ್ರತಿಕ್ರಿಯಿಸುವ ವಿಧಾನದಲ್ಲಿ ಸ್ವಪ್ರಜ್ಞೆಯ ಬೆಳಕು ಕಾಣುತ್ತಿಲ್ಲ. ಮಹಿಳೆಯ ಬಗೆಗಿನ ತಾರತಮ್ಯ ತಾರಕಕ್ಕೇರಿದ ಇಂದಿನ ದಿನದಲ್ಲಿ ಕುಟುಂಬ ತನ್ನ ಹೊಣೆ ಎಂದು ಭಾವಿಸಿ ಹೆಣಗಾಡುತ್ತಿದ್ದಾಳೆ. ಕುಟುಂಬಗಳಲ್ಲಿ ಸಾಮಾಜೀಕರಣವು ಲಿಂಗ ತಾರತಮ್ಯದಿಂದ ಕೂಡಿದೆ. ಲಿಂಗತಾರತಮ್ಯವೆಂದರೆ ಮಹಿಳೆಗೆ ಸಂಬಂಧಿಸಿದ್ದು ಎಂದು ಭಾವಿಸುವುದು ಮತ್ತು ಅದು ಖಾಸಗಿತನಕ್ಕೆ ಒಳಮಾಡುವುದು ಅದನ್ನು ಶಾಸನಬದ್ಧತೆಯಿಂದ ಸರಿಪಡಿಸಲು ಸಾಧ್ಯವಿಲ್ಲ ಎಂಬ ಭಾವನೆ ವ್ಯಾಪಕವಾಗಿದೆ. ಮಹಿಳೆಯರು ಅನುಭವಿಸುತ್ತಿರುವ ದೌರ್ಜನ್ಯ, ಹಿಂಸೆ, ಮಾನಭಂಗ, ಪ್ರತ್ಯೇಕೀಕರಣ, ಶೋಷಣೆಗಳ ಹಿಂದೆ ಲಿಂಗತಾರತಮ್ಯದ ಪಾತ್ರವಿದೆ. ಮಹಿಳೆಯರ ಕಾರ್ಯಕ್ಷೇತ್ರವೆನಿದ್ದರೂ ಕುಟುಂಬಕ್ಕೆ ಮಾತ್ರ ಸೀಮಿತವೆಂದು ಭಾವಿಸಲಾಗಿದೆ. ಜ್ಞಾನಶಿಸ್ತುಗಳು ಮತ್ತು ಸರ್ಕಾರಗಳು ಮಹಿಳೆಯ ದುಡಿಮೆಯನ್ನು ರಾಷ್ಟ್ರೀಯ ಆರ್ಥಿಕತೆಗೆ ಸೇರಿಸಲು ಸಾಧ್ಯವಾಗಿಲ್ಲ. ಹೀಗೆ ಹಲವು ಕಾರಣಗಳಿಂದಾಗಿ ಲಿಂಗತಾರತಮ್ಯ ಆಳವಾಗಿ ಬೇರೂರಿ ಬಿಟ್ಟಿದೆ.
ವರ್ತಮಾನದ ಸಂಘರ್ಷದಲ್ಲಿ ಮಹಿಳೆಗೆ ಇರಬಹುದಾದ ವ್ಯಾಪ್ತಿ ಮತ್ತು ಮಿತಿಗಳನ್ನು ಇಲ್ಲಿನ ಲೇಖನಗಳು ಅಭಿವ್ಯಕ್ತಿಸುತ್ತವೆ. ಹೆಣ್ಣಿನ ಬಹುಮುಖಿ ಅಸ್ತಿತ್ವದ ಅಸ್ಮಿತೆಯ ಹುಡುಕಾಟ ನಿರಂತರವಾಗಿದೆ. ಆ ಚಲನಶೀಲತ್ವವನ್ನು ಸದಾ ಜಾಗೃತಿಯಾಗಿಟ್ಟುಕೊಂಡು ಮಹಿಳಾ ಸಂವೇದನೆ ರೂಪಗೊಳ್ಳುತ್ತಿರುತ್ತದೆ.
ಸಾಮಾಜಿಕ ವ್ಯವಸ್ಥೆಯಲ್ಲಿ ಪುರುಷ ಯಾಜಮಾನ್ಯದ ಪ್ರತಿನಿಧಿಯಾಗಿರುತ್ತಾನೆ. ಸಮಾಜ ಮತ್ತು ಹೆಣ್ಣಿನ ಮೇಲೆ ಹಿಡಿತವನ್ನು ಗಟ್ಟಿಗೊಳಿಸಿಕೊಳ್ಳಲು ರಾಜಕೀಯ, ಆರ್ಥಿಕ ಯಜಮಾನಿಕೆಗಿಂತ ಹೆಚ್ಚಾಗಿ ಸಾಂಸ್ಕೃತಿಕ ಯಾಜಮಾನ್ಯವನ್ನು ಅವಲಂಭಿಸಿದ್ದಾನೆ. ಧರ್ಮ, ಶಿಕ್ಷಣ, ಕುಟುಂಬ ಒಟ್ಟು ಮನುಷ್ಯ ನೆಲೆಯಲ್ಲಿ ದ್ವಿಮುಖ ಮೌಲ್ಯ ವ್ಯವಸ್ಥೆಯನ್ನು ಪ್ರತಿಪಾದಿಸುತ್ತಲೇ ಇರುತ್ತಾನೆ. ಹೆಣ್ಣಿನ ರಕ್ಷಕ ರೂಪದಲ್ಲಿ ಆಕೆಯ ಮೇಲಿನ ಹಕ್ಕನ್ನು ಬಲಪಡಿಸಿಕೊಳ್ಳುತ್ತಾನೆ. ಇದರಿಂದ ಅಧಿಕಾರ ಮತ್ತು ಅಧೀನತೆಯ ನೆಲೆಗಳು ಸೃಷ್ಟಿಗೊಳ್ಳುತ್ತಾ ಬಂದಿವೆ. ಪ್ರಭುತ್ವದ ಹಿಡಿತದಿಂದ ಬಿಡುಗಡೆಗೊಳ್ಳಬೇಕೆಂಬ ತೀವ್ರ ಆಸೆ ಗಂಡಿನಷ್ಟೇ ಹೆಣ್ಣಿಗೂ ಇರುತ್ತದೆ. ಹತ್ತಿಕ್ಕುವ ಶಕ್ತಿಗಳ ವಿರುದ್ದ ಪ್ರತಿರೋಧಿಸಲು ಹೆಣ್ಣಿನ ಜೀವವೂ ತಹತಹಿಸುತ್ತದೆ. ಹೋರಾಟವು ವಿಫಲವಾದಾಗ ಬದುಕಿನ ಅರ್ಥಹೀನತೆಯ ತೀಕ್ಷ್ಯಪ್ರಜ್ಞೆ ತೀವ್ರಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಜನಪದ ಹೆಣ್ಣುಮಗಳು ವೈಧವ್ಯವನ್ನು ನಿರಾಕರಿಸುವ ತೀವ್ರ ಪ್ರತಿರೋಧದ ನೆಲೆಗಳನ್ನು ಗುರುತಿಸಲಾಗಿದೆ. ಕೌಟುಂಬಿಕ ಹಿಂಸೆ ಎನ್ನುವುದು ಪುರುಷಾಧಿಕಾರದ ನೆಲೆಯಲ್ಲಿ ಸಂಭವಿಸಿದರೂ ಅದಕ್ಕೆ ಪೂರಕವಾಗಿ ಸಾಮಾಜಿಕ, ಧಾರ್ಮಿಕ ಅಘೋಷಿತ ನಿಯಮಗಳು, ಆರ್ಥಿಕ ಸಂಕಷ್ಟಗಳು ಆಕೆಯನ್ನು ಸಂಕಟಗಳಿಗೆ ಒಳಪಡಿಸುತ್ತವೆ.
ಶಿಷ್ಟ, ಮೌಖಿಕ ಸಾಹಿತ್ಯ ಅಷ್ಟೇ ಅಲ್ಲದೇ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಇಲ್ಲದ ಮಹಿಳೆಯರ ಕೊಡುಗೆಯನ್ನು ಇಲ್ಲಿ ಸ್ಮರಿಸಲಾಗಿದೆ. ಸಿನಿಮಾ ಕ್ಷೇತ್ರದಲ್ಲೂ ಮಹಿಳೆಯ ಸಂವೇದನೆಯನ್ನು ಗುರುತಿಸುವ ಪ್ರಯತ್ನವಿದೆ.”
ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ಡಾ. ಮಲ್ಲಿಕಾರ್ಜುನ. ಎಂ ರವರು. ಇವರು ತಮ್ಮ ಮಾತುಗಳಲ್ಲಿ ಹೀಗೆ ಅಭಿಪ್ರಾಯ ಪಡುತ್ತಾರೆ-
“ಸ್ವಾರ್ಥವೇ ತುಂಬಿ ತುಳುಕುತ್ತಿರುವ ಈ ಬದುಕಿನಲ್ಲಿ 'ಲೋಕವೇ ತಾನಾದ ಬಳಿಕ' ಎಂಬ ಭಾವವೇ ವಿಸ್ಮಯವನ್ನುಂಟು ಮಾಡುತ್ತದೆ. ಕೃತಿಯನ್ನು ಓದಿದಾಗ ತಿಳಿಯುವ ಒಂದು ಸಂಗತಿ ಎಂದರೆ ಇಲ್ಲಿನ ಒಟ್ಟು ಬರಹಗಳ ಕೇಂದ್ರಬಿಂದು ಮಹಿಳೆಯೇ ಆಗಿದ್ದಾಳೆ. ಸ್ತ್ರೀವಾದದ ಬಗೆಗಿನ ಅಪಾರ ಆಸಕ್ತಿ ಹೊಂದಿರುವ ಲೇಖಕಿ ಡಾ. ಮುಮ್ರಾಜ್ ಬೇಗಂ ಅವರು ಈ ಕೃತಿಯ ಮುಖೇನ ಮಹಿಳಾಲೋಕವನ್ನು ಆವರಿಸಿರುವ ಪರಿಯನ್ನು ವಿವಿಧ ಆಯಾಮಗಳಲ್ಲಿ ಚಿತ್ರಿಸುವ ಕೆಲಸವನ್ನು ಮಾಡಿದ್ದಾರೆ. ಅದು ಭೂತವಿರಲಿ, ವರ್ತಮಾನವಿರಲಿ ಮಹಿಳೆಯನ್ನು ಅನಾಧಾರದಿಂದ ಕಾಣುವ ಪುರುಷಪ್ರಧಾನ ವ್ಯವಸ್ಥೆಯ ಅಹಮಿಕೆ, ಶೋಷಣೆಗಳನ್ನು ಸಹಿಸಿಕೊಳ್ಳಲು ಮಹಿಳಾ ಜಗತ್ತಿಗೆ ಇರಬಹುದಾದ ಬಹಳ ಮುಖ್ಯವಾದ ಕಾರಣ ಅದು ಲೋಕವೇ ತಾನಾಗಿರುವುದು. ಹೆಣ್ಣಿನ ಎಲ್ಲ ಪ್ರತಿರೋಧಗಳು ಬದುಕನ್ನು ಬಿಟ್ಟು ಕೊಡದ, ಲೋಕವನ್ನು ಪ್ರೀತಿಸುವ ಚಿಂತನೆಯ ಅಂತಃಕರಣದ ಹಿನ್ನೆಲೆಯಲ್ಲಿ ರೂಪುಗೊಂಡವುಗಳಾಗಿವೆ, ವಿನಾ ಲೋಕ ವಿರೋಧಿ ಅಂಶಗಳಿಂದಲ್ಲ ಎಂಬ ಸಂಗತಿ ಮಹಿಳಾಲೋಕದ ಹಿರಿಮೆಯೇ ಆಗಿದೆ. ಮಹಿಳೆ ಲೋಕದಿಂದ ದೂರ ಉಳಿದರೆ ಸಾಮಾಜಿಕ ವಿಷಮತೆ ಹೆಚ್ಚಾಗಿ ಲೋಕದ ಅವನತಿಗೆ ಕಾರಣವಾಗಬಹುದು. ಅದಕ್ಕೆ ಅವಕಾಶ ಕೊಡದ ಮಹಿಳೆ, ಕೌಟುಂಬಿಕವಾಗಿ ತಾಯಿ, ತಂಗಿ, ಅಕ್ಕ, ಅತ್ತಿಗೆ, ಅತ್ತೆ, ಮಗಳು ಹೀಗೆ ಇನ್ನೂ ಹತ್ತು ಹಲವು ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿದ್ದಾಳೆ. ಸಾಮಾಜಿಕವಾಗಿ ಹೋರಾಟಗಾರ್ತಿಯಾಗಿ, ಸಾಂಸ್ಕೃತಿಕ ಚಿಂತಕಿ, ಬರಹಗಾರ್ತಿಯಾಗಿ, ಸಂಸ್ಕೃತಿಯ ಆಚಾರ-ವಿಚಾರಗಳ ಸಾಂಸ್ಕೃತಿಕ ರಾಯಭಾರಿಯಾಗಿ, ಎದೆಯಾಳದ ಜೀವವಾಗಿ, ಭಾವವಾಗಿ ಕೊನೆಗೆ ಲೋಕವೇ ತಾನಾಗಿ ಜಗದ ನಿರಂತರ ಸೃಷ್ಟಿ ಕ್ರಿಯೆಗೆ ಪ್ರೇರಕಶಕ್ತಿಯಾಗಿ ಚಾಲಕಶಕ್ತಿಯಾಗಿ ದುಡಿಯುತ್ತಿದ್ದಾಳೆ. ಇಲ್ಲಿನ ಮಾತುಗಳಿಗೆ ಲೇಖಕಿ ಡಾ. ಮುಮ್ರಾಜ್ ಬೇಗಂ ಅವರು ಹೊರತಾಗಿಲ್ಲ ಎಂಬುದು ವಿಶೇಷವಾಗಿದೆ. ಮಹಿಳಾ ಸಂವೇದನೆಯ ಹಲವು ಆಯಾಮಗಳನ್ನು ಲೇಖನಗಳು ಒಳಗೊಂಡಿದ್ದು, 'ಲೋಕವೇ ತಾನಾದ ಬಳಿಕ' ಈ ಮೌಲಿಕ ಕೃತಿಯನ್ನು ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ನೀಡುತ್ತಿರುವ ಡಾ. ಮುಮ್ರಾಜ್ ಬೇಗಂ ಅವರಿಗೆ ಒಳಿತಾಗಲಿ ಎಂದು ಆಶಿಸುವೆ.” ೧೩೦ ಪುಟಗಳ ಈ ಪುಟ್ಟ ಪುಸ್ತಕವನ್ನು ಸರಾಗವಾಗಿ ಓದಿಕೊಳ್ಳಬಹುದಾಗಿದೆ.