ಲೋಕಾಯುಕ್ತದಲ್ಲೂ ಭ್ರಷ್ಟಾಚಾರವೇ? (ಭಾಗ 1)

ತಾಯ ಎದೆ ಹಾಲೆ ವಿಷವಾದರೆ, ಬೇಲಿಯೇ ಎದ್ದು ಹೊಲ ಮೇಯ್ದರೆ, ರಕ್ಷಕರೇ ಭಕ್ಷಕರಾದರೇ, ಕಾಯುವವರೇ ಕೊಲ್ಲುವವರಾದರೇ, ಲೋಕಾಯುಕ್ತವೇ ಭ್ರಷ್ಠವಾದರೆ, ಶಿವ ಶಿವ ಶಿವಾ. ಭ್ರಷ್ಟಾಚಾರವೆಂಬುದು ಎಷ್ಟು ವ್ಯಾಪಕವಾಗಿದೆ ಎಂದರೆ ಮನುಷ್ಯನ ದೇಹದ ನರ ನಾಡಿಗಳಲ್ಲೂ ಭ್ರಷ್ಟಾಚಾರದ ವಿಷ ತುಂಬಿಕೊಂಡಿರುವಂತಿದೆ. ಅಂದರೆ ಕೆಟ್ಟ, ಭ್ರಷ್ಟ ಹಣದ ಪ್ರಭಾವ ಇಡೀ ಸಮಾಜವನ್ನು ಆವರಿಸಿಕೊಂಡಿದೆ. ಹಣ ಹೇಗಾದರೂ ಇರಲಿ, ಹೇಗಾದರೂ ಬರಲಿ ಹಣದಿಂದ ಎಲ್ಲವನ್ನೂ ಪಡೆಯಬಹುದು ಎನ್ನುವ ಮನೋಭಾವನೆಯ ವಾತಾವರಣ ಎಲ್ಲರಲ್ಲೂ ನಿರ್ಮಾಣವಾಗಿದೆ.
ಈ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತ್ರ ಮಾತನಾಡುವುದು ಮೂರ್ಖತನವಾಗುತ್ತದೆ. ಬಹುತೇಕ ಪ್ರತಿಯೊಬ್ಬರು ಹಣದ ಹಿಂದೆಯೇ ಬಿದ್ದಿದ್ದಾರೆ. ಶಿಕ್ಷಣಕ್ಕೆ ಹಣ, ಆರೋಗ್ಯಕ್ಕೆ ಹಣ, ಊಟಕ್ಕೆ ಹಣ, ಪ್ರವಾಸಕ್ಕೆ ಹಣ, ಬಟ್ಟೆಗೆ ಹಣ, ವಸತಿಗೆ ಹಣ, ಮನೆಯ ಗೃಹೋಪಯೋಗಿ ವಸ್ತುಗಳಿಗೆ ಹಣ, ಸಂಪರ್ಕ ಸಾಧನಗಳಿಗೆ ಹಣ, ಮದುವೆಗೆ ಹಣ, ನಾಮಕರಣಕ್ಕೆ ಹಣ, ಹುಟ್ಟುಹಬ್ಬಕ್ಕೆ ಹಣ, ವಾರ್ಷಿಕೋತ್ಸವಕ್ಕೆ ಹಣ, ಜೀವ ವಿಮೆಗೆ ಹಣ, ವಿದ್ಯುತ್ ಬಿಲ್ಲಿಗೆ ಹಣ, ನೀರಿನ ಬಾಡಿಗೆಗೆ ಹಣ, ತೆರಿಗೆಗೆ ಹಣ ಹೀಗೆ ಪ್ರತಿಯೊಂದು ಹಣ ಹಣ.
ಹಾಗಾದರೆ ಈ ಹಣವನ್ನು ಶ್ರಮದಿಂದ, ಪ್ರಾಮಾಣಿಕತೆಯಿಂದ ಪಡೆಯೋಣವೆಂದರೆ ಶ್ರಮಕ್ಕೆ ತಕ್ಕ ಫಲ ಸಿಗುವುದು ತುಂಬಾ ಅಪರೂಪ ಅಥವಾ ಈಗಿನ ದುಬಾರಿ ದುನಿಯಾದಲ್ಲಿ ಶ್ರಮದ ಹಣಕ್ಕೆ ಮತ್ತು ಶ್ರಮದ ಹಣದಿಂದ ನಮ್ಮ ಸಹಜ ಬೇಡಿಕೆಗಳನ್ನು ಪೂರೈಸಿಕೊಳ್ಳುವುದು ತುಂಬಾ ಕಷ್ಟ. ಪ್ರಾಮಾಣಿಕತೆಯಿಂದ ಆತ್ಮತೃಪ್ತಿ ಸಿಗುತ್ತದೆ, ಆದರೆ ಕುಟುಂಬ ನಿರ್ವಹಣೆ ಸುಲಭವಲ್ಲ.
ಹೌದು, ಬದುಕು ಸರಳವಾಗಿರಬೇಕು, ಸಹಜವಾಗಿರಬೇಕು, ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಬಾರದು, ಹಾಸಿಗೆ ಇದ್ದಷ್ಟು ಕಾಲು ಚಾಚ ಬೇಕು, ನಮ್ಮಲ್ಲಿ ಎಷ್ಟಿದೆಯೋ ಅಷ್ಟೇ ಮಿತಿಯಲ್ಲಿರಬೇಕು, ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಸ್ವೀಕರಿಸಬೇಕು ಮುಂತಾದ ಮಾತುಗಳು ಈಗಿನ ಕಾಲದಲ್ಲಿ ತೀರಾ ತೀರಾ ಬಾಲಿಶ ಮತ್ತು ವಾಸ್ತವದಿಂದ ದೂರವಾಗಿದೆ.
ಒಂದು ವೇಳೆ ಈ ಮನೋಭಾವದಲ್ಲಿ ಸರಳವಾಗಿ ಬದುಕುವುದಾದರೆ ಆ ವ್ಯಕ್ತಿ ಅಥವಾ ಕುಟುಂಬ ಒಂದು ರೀತಿ ವ್ಯವಸ್ಥೆಯಿಂದ ಪ್ರತ್ಯೇಕವಾಗಿ ಇರಬೇಕಾಗುತ್ತದೆ. ಸಮಾಜದ ಮಧ್ಯಮ ವರ್ಗದ ಕುಟುಂಬಗಳಲ್ಲಿ, ಸಂಬಂಧಗಳಲ್ಲಿ ಅಂತಹವರು ಬದುಕುವುದು ತುಂಬಾ ಕಷ್ಟವಾಗುತ್ತದೆ. ಸನ್ಯಾಸಾಶ್ರಮದಲ್ಲಿ ಮಾತ್ರ ಹಾಗೆ ಬದುಕಬಹುದೇನೋ ? ಇಂತಹ ಸನ್ನಿವೇಶದಲ್ಲಿ ಕಳ್ಳರ್ಯಾರೋ, ಸುಳ್ಳರ್ಯಾರೋ, ವಂಚಕರ್ಯಾರೋ, ಭ್ರಷ್ಟಾಚಾರಿಗಳ್ಯಾರೋ, ಮುಖವಾಡದವರು ಯಾರೋ ಗುರುತಿಸುವುದೇ ಕಷ್ಟವಾಗಿದೆ. ಎಡಿಜಿಪಿ ರ್ಯಾಂಕ್ ನ ಅಧಿಕಾರಿಯೊಬ್ಬರು ಪೋಲೀಸ್ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನೇ ಮೊಬೈಲಿನಲ್ಲಿ ಫೋಟೋ ತೆಗೆದುಕೊಂಡು ವಂಚಿಸುತ್ತಾರೆಂದರೆ ವ್ಯವಸ್ಥೆ ಹೇಗಿರಬಹುದು ಯೋಚಿಸಿ, ಮಂತ್ರಿಯೊಬ್ಬರು ಬ್ಯಾಂಕಿನಿಂದ ಸರ್ಕಾರದ ಹಣವನ್ನೇ ದೋಚುತ್ತಾರೆಂದರೆ ಹೇಗಿರಬಹುದು, ಎಷ್ಟೋ ವಂಚಕರು ಹನಿಟ್ಯಾಪ್ ದಂಧೆಯಲ್ಲಿ ತೊಡಗಿದ್ದಾರೆ ಎಂದರೆ ಯೋಚಿಸಿ ನೋಡಿ, ಎಷ್ಟೋ ಶಾಸಕರು, ಮಂತ್ರಿಗಳು, ಅಧಿಕಾರಿಗಳ ಮೇಲೆ E D ದಾಳಿಯಾಗುತ್ತದೆ ಎಂದರೆ ಊಹಿಸಿ ನೋಡಿ, ಮಾದಕ ದ್ರವ್ಯಗಳು, ಗಾಂಜಾ ಪಾರ್ಟಿಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂದರೆ ಕೆಟ್ಟ ಹಣದ ಪ್ರಭಾವ ಎಷ್ಟಿರಬಹುದು ಯೋಚಿಸಿ.
ಮೇಲ್ವಿಚಾರಣೆ ಎಂಬುದು ಒಂದು ಕಣ್ಣೊರೆಸುವ ನಾಟಕ ಮಾತ್ರ. ಸಿಸಿ ಟಿವಿಗಳು ಎಷ್ಟೊಂದು ಹೆಚ್ಚಾಗಿದ್ದರೂ ಅಪರಾಧಗಳು ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅದರಿಂದ ಕಳ್ಳರ ಪತ್ತೆ ಸುಲಭವಾಗಿರಬಹುದೇನೋ , ಕಳ್ಳರಂತು ಕಡಿಮೆಯಾಗಲಿಲ್ಲ. ಆಸ್ಪತ್ರೆಗಳು, ಲ್ಯಾಬ್ ಗಳ ಸಂಖ್ಯೆ ಹೆಚ್ಚಾದಷ್ಟು ರೋಗಿಗಳು ಹೆಚ್ಚಾಗುತ್ತಿದ್ದಾರೆ ಎಂದರೆ ಅದರಿಂದ ಆದ ಪ್ರಯೋಜನವಾದರು ಏನು, ಪ್ರತಿಯೊಬ್ಬರೂ ಶಿಕ್ಷಣ ಪಡೆಯುತ್ತಿದ್ದಾರೆ, ಆದರೆ ಭ್ರಷ್ಟಾಚಾರಿಗಳು, ಮೂರ್ಖರು ಹೆಚ್ಚಾಗುತ್ತಿದ್ದಾರೆ ಎಂದರೆ ಶಿಕ್ಷಣ ಕಲಿಸುತ್ತಿರುವುದಾದರೂ ಏನು. ಒಂದಕ್ಕೊಂದು ಸಂಬಂಧವೇ ಇಲ್ಲ. ಪರಿಸರ ಜಾಗೃತಿ ಹೆಚ್ಚಾಗುತ್ತಿದ್ದರು ಪರಿಸರ ನಾಶ ಅದಕ್ಕಿಂತ ವೇಗವಾಗಿ ಆಗುತ್ತಿದೆ ಎಂದರೆ ನಾವು ಹೋಗುತ್ತಿರುವ ದಿಕ್ಕಾದರೂ ಯಾವುದು? ಭ್ರಷ್ಟ ಆಚಾರ ಎಂಬ ನಂಜು ದೇಹ - ಮನಸ್ಸು - ಸಮಾಜ - ಸರ್ಕಾರವನ್ನು ಸಂಪೂರ್ಣ ವ್ಯಾಪಿಸುವ ಮುನ್ನ....
ಭೂ ಪ್ರದೇಶದಲ್ಲಿ ಏಳನೆಯ ಸ್ಥಾನ, ಜನಸಂಖ್ಯೆಯಲ್ಲಿ ಮೊದಲನೆಯ ಸ್ಥಾನ, ಪ್ರಜಾಪ್ರಭುತ್ವ ದೇಶಗಳಲ್ಲಿ ಮೊದಲನೇ ಸ್ಥಾನ, ಅತ್ಯಂತ ದೊಡ್ಡ ಸಂವಿಧಾನ, ಬೃಹತ್ ಮತ್ತು ವೈವಿಧ್ಯಮಯ ಜನ, ಸಂಸ್ಕೃತಿ ಹೀಗೆ ಇಲ್ಲಿನ ಸಾಮಾಜಿಕ ರಚನೆಯೇ ಅತ್ಯಂತ ವರ್ಣಮಯ. ಜೊತೆಗೆ ಜಾತಿ ಧರ್ಮ ಭಾಷೆ ಆಹಾರ ಉಡುಪು ಮನೋಭಾವ ಎಲ್ಲದರಲ್ಲೂ ಭಿನ್ನತೆ ಇದೆ. ಆದರೆ ಭ್ರಷ್ಟಾಚಾರ ಮಾತ್ರ ಬಹುಶಃ ಇಡೀ ದೇಶದಲ್ಲಿ ಏಕ ಪ್ರಕಾರವಾಗಿ ಚಲಾವಣೆಯಲ್ಲಿದೆ.
ಬಹಳ ವರ್ಷಗಳ ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಎಚ್.ಎಲ್. ಕೇಶವ ಮೂರ್ತಿ ಅವರ ಒಂದು ಸಣ್ಣ ಕಥೆ ಭ್ರಷ್ಟಾಚಾರದ ನಂಜು ಎಷ್ಟು ಆಳವಾಗಿದೆ ಎಂಬುದನ್ನು ವಿಡಂಬನಾತ್ಮಕವಾಗಿ ಸೂಚಿಸುತ್ತದೆ.
ಒಂದು ಊರಿನಲ್ಲಿ ವಿಪರೀತ ಭ್ರಷ್ಟಾಚಾರ ನಡೆಯುತ್ತಿರುತ್ತದೆ. ಪ್ರತಿಯೊಂದಕ್ಕೂ ಲಂಚ ಕೊಡಲೇ ಬೇಕಾಗಿರುತ್ತದೆ. ಇದರಿಂದ ರೋಸಿ ಹೋದ ಊರಿನ ಜನರೆಲ್ಲಾ ಸೇರಿ ಒಂದು ಸಭೆಯನ್ನು ಮಾಡಿ ತೀರ್ಮಾನಕ್ಕೆ ಬರುತ್ತಾರೆ. ಅದರ ಪ್ರಕಾರ ಹೇಗಿದ್ದರೂ ಲಂಚ ಎಂಬುದು ಬಹಿರಂಗ ಸತ್ಯ. ಅದನ್ನು ಒಪ್ಪಿಕೊಳ್ಳಲು ಸಂಕೋಚ ಏಕೆ. ಆದ್ದರಿಂದ ಇನ್ನು ಮುಂದೆ ಈ ಊರಿನಲ್ಲಿ ಯಾವುದೇ ಸರ್ಕಾರಿ ಕೆಲಸ ಆಗಬೇಕಾದರೆ ಸರ್ಕಾರ ನಿಗದಿಪಡಿಸಿದ ಅಧೀಕೃತ ಶುಲ್ಕದ ಜೊತೆಗೆ ಅನಧಿಕೃತ ಲಂಚದ ಹಣವನ್ನು ಇಂತಿಷ್ಟು ಎಂದು ನಿಗದಿ ಮಾಡಿ ಎಲ್ಲಾ ಕಚೇರಿಗಳಲ್ಲು ಒಂದು ದರ ಪಟ್ಟಿಯನ್ನು ಅಧಿಕೃತವಾಗಿಯೇ ತೂಗು ಹಾಕಲಾಗುತ್ತದೆ. ಆಗ ಎಲ್ಲರೂ ಸರ್ಕಾರ ನಿಗದಿ ಮಾಡಿದ ಹಣ ಮತ್ತು ಲಂಚ ಎರಡನ್ನೂ ಕೊಟ್ಟು ಕೆಲಸ ಮಾಡಿಸಿಕೊಂಡು ಹೋಗುತ್ತಿರುತ್ತಾರೆ. ಉದಾಹರಣೆಗೆ ಖಾತಾ ಮಾಡಿಸಲು 1000 ಹಣ ಅಧೀಕೃತವಾದರೆ ಲಂಚ 5000 ಅಂದರೆ ಒಟ್ಟು 6000 ಹಣ ಕೊಡುವುದು. ಇಲ್ಲಿ ಯಾವುದೇ ಚೌಕಾಸಿ ಇರುವುದಿಲ್ಲ.
ಹೀಗೆ ಕೆಲವು ವರ್ಷ ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗಿ ನಡೆದುಕೊಂಡು ಹೋಗುತ್ತದೆ. ಕೆಲವು ವರ್ಷಗಳ ನಂತರ ಒಬ್ಬ ವ್ಯಕ್ತಿ ಅಧಿಕೃತ ಮತ್ತು ಅನಧಿಕೃತ ಎರಡೂ ಹಣ ಪಾವತಿಸಿದ ಅನಂತರವೂ ಕೆಲಸ ಆಗುವುದಿಲ್ಲ. ಮತ್ತೆ ಎಂದಿನಂತೆ ಬಹಳ ದಿನ ಅಲೆದಾಡಿಸುತ್ತಾರೆ. ಆಗ ಆ ವ್ಯಕ್ತಿ ಅಧಿಕಾರಿಯನ್ನು ನೇರವಾಗಿ ಕೇಳುತ್ತಾರೆ " ಸ್ವಾಮಿ ಸರ್ಕಾರದ ಫೀಜು ಮತ್ತು ಲಂಚ ಎರಡೂ ಕೊಟ್ಟ ನಂತರವೂ ನೀವು ಏಕೆ ನಮ್ಮ ಕೆಲಸ ಮಾಡಿಕೊಡುತ್ತಿಲ್ಲ " ಅದಕ್ಕೆ ಅಧಿಕಾರಿಯ ಉತ್ತರ " ಅಷ್ಟು ಮಾತ್ರ ಕೊಟ್ಟರೆ ಸಾಕೆ. ಅದರ ಮೇಲೆ ಇನ್ನೊಂದಿಷ್ಟು ಲಂಚ ಕೊಡಬೇಕು " ಅಂದರೆ ಲಂಚವೂ ಸಹಜವಾಗಿ, ಸಾಮಾನ್ಯವಾಗಿ ಮತ್ತಷ್ಟು ಬೇಡಿಕೆ ಇಡಲಾಗುತ್ತದೆ. ಭ್ರಷ್ಟಾಚಾರ ಎಂಬುದು ಒಂದು ನಂಜು ಇದ್ದಂತೆ. ಅದು ನಿಧಾನವಾಗಿ ಹೆಚ್ಚಾಗುತ್ತಾ ಇಡೀ ದೇಹ ಆಕ್ರಮಿಸಿ ಕೊಳೆಯುವಂತೆ ಮಾಡುತ್ತದೆ. ಈಗ ಇದೇ ಭ್ರಷ್ಟಾಚಾರ ಇಡೀ ಭಾರತೀಯ ಸಮಾಜವೇ ಕೊಳೆಯುವಂತೆ ಮಾಡಿದೆ.
(ಇನ್ನೂ ಇದೆ)
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ