ಲೋಕಾಯುಕ್ತ ದಾಳಿ ನಡೆದರೆ ಸಾಲದು, ಶಿಕ್ಷೆಯಾಗಬೇಕು

ಲೋಕಾಯುಕ್ತ ದಾಳಿ ನಡೆದರೆ ಸಾಲದು, ಶಿಕ್ಷೆಯಾಗಬೇಕು

ಲೋಕಾಯುಕ್ತ ಅಧಿಕಾರಿಗಳು ಗುರುವಾರ (ಆಗಸ್ಟ್ ೧೭) ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಹಲವು ಸರಕಾರಿ ನೌಕರರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ವಿವಿಧ ಇಲಾಖೆ ಅಧಿಕಾರಿಗಳ ಮನೆಯಲ್ಲಿ ಕೋಟಿಗಟ್ಟಲೇ ಹಣ, ಕೆಜಿಗಟ್ಟಲೆ ಬಂಗಾರ ಪತ್ತೆ ಮಾಡಿದ್ದಾರೆ. ಆ ಮೂಲಕ ಸರಕಾರಿ ಅಧಿಕಾರಿಗಳ ಭ್ರಷ್ಟಲೋಕವನ್ನು ಮತ್ತೊಮ್ಮೆ ಬಟಾಬಯಲು ಮಾಡಿದ್ದಾರೆ. ಸರಕಾರಿ ವ್ಯವಸ್ಥೆಯಲ್ಲಿ ದಿನೇದಿನೆ ಭ್ರಷ್ಟಾಚಾರ ಮಿತಿ ಮೀರುತ್ತಿರುವುದಕ್ಕೆ ಇತ್ತೀಚೆಗೆ ನಡೆಯುತ್ತಿರುವ ಸಾಲು ಸಾಲು ಲೋಕಾಯುಕ್ತ ದಾಳಿಗಳೇ ಸಾಕ್ಷಿ. ಹಿಂದಿನ ಸರಕಾರದಲ್ಲಿ ಕಳೆದುಕೊಂಡಿದ್ದ ತನ್ನ ಅಧಿಕಾರವನ್ನು ಮರಳಿ ಪಡೆದುಕೊಂಡ ಬಳಿಕ ಲೋಕಾಯುಕ್ತ ಸಾಕಷ್ಟು ಚುರುಕಾಗಿದೆ ಎನ್ನಲು ಈ ದಾಳಿಗಳು ಸಾಕ್ಷಿಗಳಾಗಿವೆ. ಲೋಕಾಯುಕ್ತ ದಾಳಿಗಳನ್ನೇನೋ ನಡೆಸುತ್ತಿದೆ. ಆದರೆ ಶಿಕ್ಷೆಯ ಪ್ರಮಾಣ ಅದೇ ಪ್ರಮಾಣದಲ್ಲಿ ಆಗುವುದಿಲ್ಲ. ಬಲೆಗೆ ಬಿದ್ದು ಅಮಾನತ್ತುಗೊಂಡ ಅಧಿಕಾರಿಗಳು ಕೆಲವೇ ತಿಂಗಳುಗಳಲ್ಲಿ ಮತ್ತೆ ನೇಮಕವಾಗಿ ಪ್ರಮೋಷನ್ ಪಡೆದು ಮೆರೆಯುತ್ತಾರೆ. ಲೋಕಾಯುಕ್ತವು ಮುಖ್ಯಮಂತ್ರಿ, ಯಾವುದೇ ಸಚಿವ ಅಥವಾ ಕಾರ್ಯದರ್ಶಿ, ರಾಜ್ಯ ಶಾಸಕಾಂಗದ ಸದಸ್ಯ ಅಥವಾ ಯಾವುದೇ ಇತರ ಸಾರ್ವಜನಿಕ ಸೇವಕರ ಮೇಲಿನ ಭ್ರಷ್ಟಾಚಾರದ ಆರೋಪವನ್ನು ತನಿಖೆ ಮಾಡಬಲ್ಲ ಅಧಿಕಾರವನ್ನು ಹೊಂದಿದೆ. ತಪ್ಪಿತಸ್ಥರೆಂದು ಕಂಡುಬಂದರೆ ಅಂಥವರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಬಹುದು. ಅಗತ್ಯವಿದ್ದರೆ ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಉಲ್ಲೇಖಿಸಬಹುದು. ಆದರೆ ಇವರು ಶಿಕ್ಷೆಯನ್ನು ಘೋಷಿಸುವ ಅಧಿಕಾರವನ್ನು ಹೊಂದಿಲ್ಲ. ಶಿಕ್ಷೆಯಾಗದೇ ಹೋದರೆ ದಾಳಿಗಳನ್ನು ನಡೆಸಿಯೂ ಪ್ರಯೋಜನವಿಲ್ಲ. ಹೀಗಾಗಿ ಲೋಕಾಯುಕ್ತ ನಿರಂತರವಾಗಿ ದಾಳಿ ನಡೆಸಿ ಲಂಚಕೋರ ಅಧಿಕಾರಿಗಳನ್ನು ಬಲೆಗೆ ಹಾಕಬೇಕು. ಧೃಢವಾದ ಸಾಕ್ಷಿಗಳನ್ನು ಕಲೆ ಹಾಕಿ, ಪ್ರಕರಣದ ಬೆನ್ನುಹತ್ತಿ ಶಿಕ್ಷೆ ಕೊಡಿಸುವುದು ಲೋಕಾಯುಕ್ತಕ್ಕೆ ಸಾಧ್ಯವಾಗಬೇಕು. ಭ್ರಷ್ಟ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಆದರೆ ಮಾತ್ರ ಸರಕಾರಿ ವ್ಯವಸ್ಥೆ ಮುಂದೆ ಭ್ರಷ್ಟಾಚಾರ ನಡೆಸಲು ಹೆದರುತ್ತದೆ. ಹೀಗಾದರೆ ಮಾತ್ರ ಭ್ರಷ್ಟಾಚಾರದ ಬಗ್ಗೆ ದೂರು ನೀಡುವವರು, ಮಾಹಿತಿ ಕೊಡುವವರು ಕೂಡ ಚುರುಕಾಗುತ್ತಾರೆ. ಯಾರ ಭಯವಿಲ್ಲದೆ ಮಾಹಿತಿ ಕೊಡುತ್ತಾರೆ. ಜನಸಾಮಾನ್ಯರು ಕೂಡ ಭ್ರಷ್ಟತೆಯನ್ನು ಪ್ರಶ್ನಿಸಲು, ದೂರು ಕೊಡಲು ಮುಂದೆ ಬರುತ್ತಾರೆ. ಹೀಗಾದರೆ ಬದಲಾವಣೆ ಸಾಧ್ಯವಿದೆ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೮-೦೮-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ