ಲೋಕಾ ದಾಳಿ ಜತೆಗೆ ಭ್ರಷ್ಟರ ಶಿಕ್ಷೆಯ ಪ್ರಮಾಣವೂ ಹೆಚ್ಚಲಿ

ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಇರುವ ೧೫ ನೌಕರರಿಗೆ ಸೇರಿದ ೫೭ ಸ್ಥಳಗಳ ಮೇಲೆ ಲೋಕಾಯುಕ್ತ ಪೋಲೀಸರು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಅಧಿಕಾರಿಯೊಬ್ಬರ ಮನೆಯಲ್ಲಿ ೩.೫ ಕೆಜಿ ಚಿನ್ನ, ೨೪ ಕೆಜಿ ಬೆಳ್ಳಿ, ೩೦೦ ಜೊತೆ ಶೂಗಳು ಸಿಕ್ಕಿವೆ. ವಿವಿಧ ಅಧಿಕಾರಿಗಳ ಬಳಿ ಹೇರಳ ಸಂಪತ್ತು ಪತ್ತೆಯಾಗಿದೆ ಎಂದು ವರದಿಯಾಗಿದೆ. ಅಧಿಕಾರಿಗಳು ತಮ್ಮ ಎಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚು ಆಸ್ತಿಯನ್ನು ಸಂಪಾದಿಸಿದ್ದರೆ, ಅದು ಅಕ್ರಮ ಆಸ್ತಿ ಎಂಬ ಸಂದೇಹ ನಿಶ್ಚಿತವಾಗಿಯೂ ಬರುತ್ತದೆ. ಅಂತಹ ಸಂದರ್ಭದಲ್ಲಿ ಲೋಕಾಯುಕ್ತರಿಗೆ ಮಾಹಿತಿ/ ದೂರು ಲಭಿಸಿ, ಅದನ್ನು ಖಚಿತಪಡಿಸಿಕೊಂಡು ದಾಳಿ ಮಾಡಲಾಗುತ್ತದೆ. ಇಂತಹ ದಾಳಿಗಳು ಕಾಲಕಾಲಕ್ಕೆ ಆಗುತ್ತಲೇ ಇರುತ್ತದೆ. ಎಪ್ರಿಲ್ ನಲ್ಲಿ ಕೂಡ ೭ ಅಧಿಕಾರಿಗಳಿಗೆ ಸೇರಿದ ೩೫ ಸ್ಥಳಗಳ ಮೇಲೆ ೬ ಜಿಲ್ಲೆಗಳಲ್ಲಿ ಲೋಕಾಯುಕ್ತ ಪೋಲೀಸರು ದಾಳಿ ನಡೆಸಿ ಆಸ್ತಿಗಳನ್ನು ಜಾಲಾಡಿದ್ದರು. ಭ್ರಷ್ಟಾಚಾರವನ್ನು ಸಹಿಸಬಾರದು. ಅದನ್ನು ಬೇರು ಸಹಿತ ಕಿತ್ತೊಗೆಯಬೇಕು ನಿಜ. ಆ ದೃಷ್ಟಿಯಲ್ಲಿ ನೋಡಿದರೆ ಲೋಕಾಯುಕ್ತ ದಾಳಿಯನ್ನು ಭ್ರಷ್ಟರನ್ನು ಹೊರತು ಪಡಿಸಿ ಇನ್ಯಾರು ವಿರೋಧಿಸುವುದಿಲ್ಲ. ಆದರೆ ಇಂತಹ ದಾಳಿಗಳಿಂದ ತಕ್ಕ ಫಲಿತಾಂಶವೂ ಸಿಕ್ಕರೆ ಭ್ರಷ್ಟರಿಗೆ ಅಕ್ರಮ ಆಸ್ತಿ ಮಾಡಲು ಹೆದರಿಕೆ ಮೂಡಬಹುದು.
ಲೋಕಾಯುಕ್ತ ಪೋಲೀಸರು ಅಮೂಲ್ಯ ಮಾಹಿತಿ/ದೂರು ಆಧರಿಸಿ, ಬೇಕಾದ ಮಾಹಿತಿ ಕಲೆ ಹಾಕಿ ದಾಳಿ ನಡೆಸಿದರೂ ಭ್ರಷ್ಟಾಚಾರಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುತ್ತಿಲ್ಲ. ರಾಜ್ಯ ಅಷ್ಟೇ ಏಕೆ ದೇಶದಲ್ಲೇ ಭ್ರಷ್ಟರಿಗೆ ಶಿಕ್ಷೆಯಾಗುವ ಪ್ರಮಾಣ ಶೇ. ೩೦ ರಷ್ಟೂ ಇಲ್ಲ. ಹೀಗಾದರೆ, ಇಂತಹ ದಾಳಿಗಳಿಂದ ಭ್ರಷ್ತರ ಸಂಪತ್ತಿನ ಪ್ರದರ್ಶನವಾಗಿ, ಅವರಿಗೆ ಸಮಾಜದಲ್ಲಿ ಇನ್ನಷ್ಟು ‘ಬೆಲೆ' ಸಿಗುವಂತಾಗಿದೆ ಎಂಬ ಮಾತುಗಳು ಇವೆ. ಶ್ರಮಪಟ್ಟು ದಾಳಿ ನಡೆಸುವ ಲೋಕಾಯುಕ್ತ, ಭ್ರಷ್ಟರಿಗೆ ಶಿಕ್ಷೆ ಕೊಡಿಸುವುದಕ್ಕೆ ಹಾಗೂ ಶಿಕ್ಷೆಗೆ ಒಳಗಾಗುವವರ ಪ್ರಮಾಣವನ್ನು ಹೆಚ್ಚಳ ಮಾಡುವುದಕ್ಕೆ ಗಂಭೀರವಾಗಿ ಗಮನಹರಿಸಬೇಕಾದ ಅಗತ್ಯವಿದೆ. ದಾಳಿಗೆ ಒಳಗಾದರೂ ಶಿಕ್ಷೆಯೇ ಆಗುತ್ತಿಲ್ಲವೆಂದಾದರೆ, ಭ್ರಷ್ಟರು ಲೋಕಾಯುಕ್ತ ಬಗ್ಗೆಯೇ ದಪ್ಪ ಚರ್ಮ ಬೆಳೆಸಿಕೊಂಡಾರು. ಲೋಕಾಯುಕ್ತರು ದಾಳಿ ಮಾತ್ರ ಮಾಡುತ್ತಾರೆ, ಮುಂದೇನೂ ಆಗುವುದಿಲ್ಲ ಎಂಬ ಹುಂಬತನಕ್ಕೆ ಬಿದ್ದರೆ ಭ್ರಷ್ಟಾಚಾರ ಕಡಿಮೆಯಾಗುವುದಿರಲಿ, ಮತ್ತಷ್ಟು ಹೆಚ್ಚಾದೀತು. ಭ್ರಷ್ಟಾಚಾರದಿಂದಾಗಿ ಜನರಿಗೆ ಸಮಸ್ಯೆಯಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಅದನ್ನು ಹತ್ತಿಕ್ಕಲು ಮತ್ತಷ್ಟು ಗಂಭೀರ ಕ್ರಮಗಳು ಬೇಕಾಗುತ್ತವೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡ ಲೋಕಾಯುಕ್ತರಿಗೆ ಅಗತ್ಯ ನೆರವು ನೀಡಬೇಕಾಗುತ್ತದೆ. ಇಲ್ಲದೆ ಹೋದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಎಂಬುದು ಬರೀ ಹೇಳಿಕೆಗಷ್ಟೇ ಸೀಮಿತವಾಗುತ್ತದೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೨-೦೬-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ