ಲೋಕ ತಿಳಿಯದ ಏಸುವಿನ ಮತ್ತೊಂದು ರೂಪ

ಲೋಕ ತಿಳಿಯದ ಏಸುವಿನ ಮತ್ತೊಂದು ರೂಪ

ಪುಸ್ತಕದ ಲೇಖಕ/ಕವಿಯ ಹೆಸರು
ತೆಲುಗು ಮೂಲ: ಕರುಣಾಕರ್ ಸುಗ್ಗುನ, ಕನ್ನಡಕ್ಕೆ: ಎಸ್. ಅಶ್ವತ್ಥ ನಾರಾಯಣ
ಪ್ರಕಾಶಕರು
ಧರ್ಮಪ್ರಸಾರ ವಿಭಾಗ, ವಿಶ್ವ ಹಿಂದೂ ಪರಿಷದ್, ಬೆಂಗಳೂರು
ಪುಸ್ತಕದ ಬೆಲೆ
ರೂ: ೭೫.೦೦, ಮುದ್ರಣ: ೨೦೨೨

ತೆಲುಗು ಭಾಷೆಯಲ್ಲಿ ಕರುಣಾಕರ್ ಸುಗ್ಗುನ ಬರೆದಿರುವ 'ಲೋಕ ಮೆರುಗನಿ ಏಸು ಮರೋರೂಪಂ' (Other side of Jesus) ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ ಬೆಂಗಳೂರಿನ ಎಸ್. ಅಶ್ವತ್ಥ ನಾರಾಯಣ ಇವರು. ವಿಶ್ವ ಹಿಂದು ಪರಿಷದ್ ಇದರ ಧರ್ಮ ಪ್ರಸಾರ ವಿಭಾಗದ ಕೃಷ್ಣಮೂರ್ತಿ ಇವರು ಪುಸ್ತಕದ ಮೊದಲ ಮಾತು ಬರೆದಿದ್ದಾರೆ. ಅದರಲ್ಲಿ ಅವರು "ಕ್ರೈಸ್ತ ಮತ ವಿಚಾರಗಳಲ್ಲಿನ ಅಸಂಬದ್ಧತೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದವರು ಕರುಣಾಕರ ಸುಗ್ಗುನರವರು. ತೆಲುಗು ಭಾಷೆಯ ಓದುಗರಿಗೆ ಅವರು ಪರಿಚಿತರು, ಅಷ್ಟೇ ಅಲ್ಲ ಅತ್ಯಂತ ಜನಪ್ರಿಯರು ಕೂಡಾ. ಅವರ ಪುಸ್ತಕಗಳು ಲಕ್ಷಾವಧಿ ಸಂಖ್ಯೆಯಲ್ಲಿ ಪುನರ್ಮುದ್ರಣಗೊಳ್ಳುತ್ತಿರುವುದೇ ಅದಕ್ಕೆ ಸಾಕ್ಷಿ. ಅಷ್ಟಾಗಿ ಅವರು ಹುಟ್ಟಿದ್ದು ಮತಾಂತರಿತ ಕ್ರೈಸ್ತ ಕುಟುಂಬದಲ್ಲಿ. ಬಾಲ್ಯದ ಮುಗ್ಧ ದೈವಭಕ್ತಿಯ ನಡುವೆಯೂ ಅವರಲ್ಲಿ ಬೈಬಲ್ಲಿನ ಆದೇಶಗಳ ಬಗ್ಗೆಯೂ ಏಸುವಿನ ಜನನ, ಜೀವನ ಮತ್ತು ಬೋಧನೆಗಳ ಕುರಿತೂ ಸಂದೇಹಗಳು ಏಳುತ್ತಿದ್ದುದು ವಿಶೇಷವೆನ್ನಬೇಕು. ಮುಂದಿನ ಅವರ ಅಧ್ಯಯನ, ಚರ್ಚೆ, ಸಂವಾದಗಳು ಮತ್ತು ಅನುಭವಗಳ ಫಲಿತಾಂಶದಂತಿವೆ. ಕನ್ನಡದ ಓದುಗರಿಗೆ ಕ್ರೈಸ್ತ ಮತದ ಕುರಿತ ಇಂತಹ ವೈಚಾರಿಕ ಕೃತಿಗಳು ಅಪರಿಚಿತವೆನ್ನಬಹುದು." ಎಂದಿದ್ದಾರೆ.

ಮೂಲ ಲೇಖಕರಾದ ಕರುಣಾಕರ್ ಸುಗ್ಗುನ ಅವರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ "ನಮ್ಮ ಊರು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಹತ್ತಿರವಿರುವ ಒಂದು ಸಣ್ಣ ಹಳ್ಳಿ. ನಮ್ಮ ಪೂರ್ವಿಕರು ಹಿಂದುಗಳೇ ಆಗಿದ್ದರೂ ನನ್ನ ತಂದೆ ತಾಯಿಯರು ಮತಾಂತರ ಆಗಿದ್ದರಿಂದ ನಾನು ಚಿಕ್ಕಂದಿನಿಂದಲೂ ಚರ್ಚಿಗೆ ಹೋಗುತ್ತಿದ್ದೆನು. ನನ್ನ ನಾಮಕರಣವೂ ಸಹ ಪಾಸ್ಟರ್ ರವರ ಮುಂದಾಳತ್ವದಲ್ಲಿಯೇ ನಡೆಯಿತು.

ಸಹಜವಾಗಿಯೇ ನನ್ನಲ್ಲಿ ಚಿಕ್ಕಂದಿನಿಂದಲೂ ದೈವಚಿಂತನೆಯು ಹೆಚ್ಚಾಗಿತ್ತು. ಬೈಬಲ್ಲನ್ನು ಓದುತ್ತಿದ್ದಾಗ ಆಗ ನನಗೆ ಇದ್ದ ಸಾಮಾನ್ಯ ಜ್ಞಾನಕ್ಕೆ ತೋರಿದಂತೆ ಕೆಲವು ವಿಷಯಗಳನ್ನು ಗಮನಿಸಿದೆನು. ಅವುಗಳ ಬಗ್ಗೆ ಸಂದೇಹಪಟ್ಟು ಜೊತೆಯಲ್ಲಿದ್ದ ಕ್ರೈಸ್ತರನ್ನು ಪ್ರಶ್ನಿಸುತ್ತಿದ್ದೆನು. ಯಾರೂ ಸಹ ಸರಿಯಾದ ಸಮಾಧಾನವನ್ನು ಹೇಳಲಿಲ್ಲ. ಬದಲಾಗಿ ನಾನೇ ತಪ್ಪಾಗಿ ಆಲೋಚನೆ ಮಾಡುತ್ತಿರುವೆನು ಎಂಬಂತೆ ಮಾತನಾಡಿದರು. ಅವರು ಹೇಳುವ ವಿಷಯಗಳನ್ನು ನಾನು ಕುರುಡಾಗಿ ನಂಬದೆ ಪ್ರಶ್ನಿಸಿದ್ದೇ ಒಂದು ದೊಡ್ಡ ಅಪರಾಧ ಎಂಬಂತೆಯೂ, ಅದು ನನಗೆ ಸೈತಾನನ ಪ್ರೇರಣೆಯಿಂದ ಆಗಿದೆಯೆಂದೂ ಪರಿಗಣಿಸುತ್ತಿದ್ದರು. ಹಾಗಾಗಿ ಬೈಬಲ್ ಕುರಿತು ಸತ್ಯಾಸತ್ಯತೆಗಳನ್ನು ಮತ್ತಷ್ಟು ಆಳಕ್ಕಿಳಿದು ಅಧ್ಯಯನ ಮಾಡಿ ಪರಿಶೋಧಿಸುವ ಕಾರ್ಯದಲ್ಲಿ ತೊಡಗಿದೆನು. ಆಗ ಯಾರೂ ಕೂಡ, ಬೈಬಲ್ಲಿನಲ್ಲಿ ಇರುವುದನ್ನು ಇರುವ ಹಾಗೆ ಹೇಳುತ್ತಿಲ್ಲ ಎಂದು ಅರ್ಥವಾಯಿತು." ಎಂದು ಹೇಳುತ್ತಾರೆ. 

ಪುಸ್ತಕಕ್ಕೆ ಮುನ್ನುಡಿ ಬರೆದ ಸುರೇಂದ್ರ ಇವರು ಒಂದೆಡೆ ಬರೆಯುತ್ತಾರೆ "ನಮ್ಮ ಕಣ್ಣಿಗೆ ಕಂಡಂತೆ ಇದರಲ್ಲಿ ಬೈಬಲ್ಲಿನ ವಚನಗಳಿಗೆ ವಿರುದ್ಧವಾದ ವಿವರಣೆಗಳು ಯಾವುದೂ ಇಲ್ಲ. ಇರುವುದನ್ನು ಇಲ್ಲದ್ದನ್ನು ಬೆರೆಸಿ ಯಾವುದೋ ಮಸಿ ಬಳಿದು ವಿರೂಪ ಮಾಡಬೇಕೆಂದು ನಾವು ಅಂದುಕೊಂಡಿಲ್ಲ. ಆದರೂ ಮಾನವ ಸಹಜ ತಪ್ಪುಗಳು ಉಂಟಾಗುವ ಅವಕಾಶಗಳು ಇಲ್ಲವೆಂದು ಹೇಳಬಾರದು. ಆದ್ದರಿಂದ ನಮ್ಮ ಮೊದಲ ಪುಸ್ತಕದಲ್ಲಿ ವ್ಯಕ್ತಪಡಿಸಿದ ಭಾವವನ್ನೇ ಇಲ್ಲಿಯೂ ಹೇಳುತ್ತಿದ್ದೇವೆ. ಇದರಲ್ಲಿ ಎಲ್ಲಿಯಾದರೂ ಬೈಬಲ್ಲಿನ ವಾಕ್ಯಗಳಿಗೆ ವಿರುದ್ಧವಾದ ವಿವರಗಳು ಇವೆಯೆಂದು ನಿಮಗೆ ಅನ್ನಿಸಿದರೆ ಅವುಗಳನ್ನು ನಮ ಗಮನಕ್ಕೆ ತನ್ನಿರಿ. ನೀವು ಕೊಡುವ ಸಂಗತಿಗಳ ಆಧಾರದ ಮೇಲೆ, ನಾವು ಸ್ವತಃ ನಿಮ್ಮ ಜೊತೆ ಚರ್ಚಿಸಿ ಅಥವಾ ಅವುಗಳನ್ನು ಮತ್ತೊಮ್ಮೆ ಪರಿಶೀಲಿಸಿ, ನಿಜವಾಗಿಯೂ ಅಂತಹ ಪ್ರಮಾದಗಳು ನಡೆದಿದ್ದರೆ, ಅದರ ಬಗ್ಗೆ ಕೂಡಲೇ ಒಂದು ತಿದ್ದುಪಡಿಯ ಪ್ರಕಟಣೆ ಮಾಡುತ್ತೇವೆ. ಅಲ್ಲದೆ ಅಂತಹವುಗಳನ್ನು ತೆಗೆದುಹಾಕುತ್ತೇವೆ. " 

ಪುಸ್ತಕದ ವಿಷಯ ಸೂಚಿಕೆಯಲ್ಲಿ ಲೇಖಕರ ಪರಿಚಯ, ಮುನ್ನುಡಿ, ಏಸುವಿನ ಮತ್ತೊಂದು ರೂಪ, ಇಸ್ರೇಲಿಯರ ಪ್ರಯಾಣ, ಬಾಲ ಏಸು, ಹೊಂದಾಣಿಕೆಯಿಲ್ಲದ ತಂದೆ ಮತ್ತು ಮಗನ ವಿಚಾರ, ತಂದೆ ಯಾರು?, ಬೇತಾಳ ಪ್ರಶ್ನೆ, ಏಲಿಯಾ ಪುನರ್ಜನ್ಮ, ಅಪರಿಚಿತ ಮುಂತಾದ ವಿಷಯಗಳಿರುವ ೧೯ ಅಧ್ಯಾಯಗಳಿವೆ. ಈ ಕೃತಿಯಲ್ಲಿ ಸುಮಾರು ೧೪೦ ಪುಟಗಳಿವೆ.