ಲೋಕ ರಾವಣ

'ಲೋಕ ರಾವಣ' ಲಂಕಾಧಿಪತಿಯಾದ ದಶಕಂಠ ರಾವಣನನ್ನು ಕುರಿತ ಕಾದಂಬರಿ. ಲೋಕ ಲೋಕಗಳನ್ನು ನಡುಗಿಸಿದ. ಪರಸ್ತ್ರೀ ಅಪಹಾರಕನಾದ ದುಷ್ಟನೆಂದು ರಾಮಾಯಣದಲ್ಲಿ ಚಿತ್ರಣಗೊಂಡಿರುವ ಪಾತ್ರ ಅದು. ಹುಟ್ಟಿನಿಂದ ಮಹಾ ತಪಸ್ವಿಯಾದ ವಿಶ್ರವಸ್ಸಿನ ಮಗ, ವೇದಾದಿಗಳನ್ನು ಓದಿದವನು. ಬ್ರಹ್ಮ, ಪರಮೇಶ್ವರರ ಅನುಗ್ರಹಕ್ಕೆ ಪಾತ್ರನಾದವನು. ಶಿವಭಕ್ತ. ಇಷ್ಟಿದ್ದೂ ರಾವಣನಂತಹ ಮೇಧಾವಿ ಯಾಕೆ ದುಷ್ಟನಾದ? ಲೋಕಪೀಡಕನಾದ ಅದಕ್ಕೆ ಕಾರಣವಾದುದು ಅವನ ಹುಟ್ಟಿ? ಸಂಸ್ಕಾರವೆ? ಅವನಿಗಾದ ಕಹಿ ಅನುಭವಗಳೆ? ಅಥವಾ ಅವನ ವ್ಯಕ್ತಿತ್ವವೇ ಆ ರೀತಿಯೆ? ಅವನ ಅಂತರಂಗವನ್ನು ಪ್ರವೇಶಿಸದೆ ಉತ್ತರ ದೊರೆಯಲಾರದು. ರಾವಣನ ಅಂತರಂಗವನ್ನು ಬಗೆಯುವ ಅಂತಹ ಒಂದು ಪ್ರಯತ್ನವೇ ಈ ಕಾದಂಬರಿ.. 'ಲೋಕ ರಾವಣ'
ರಾಧಾಕೃಷ್ಣ ಕಲ್ಚಾರ್ ಅವರ ಹದಿಮೂರನೆಯ ಕೃತಿ ‘ಲೋಕ ರಾವಣ’ ಒಂದು ಅನನ್ಯ ಕಾದಂಬರಿಯಾಗಿದೆ. ಈ ಕೃತಿಯ ಶೀರ್ಷಿಕೆಯೇ ಸೂಚಿಸುವಂತೆ, ಇದು ಒಂದು ಕಾಲದಲ್ಲಿ ಲೋಕವನ್ನೇ ತನ್ನ ಶಕ್ತಿಯಿಂದ ನಡುಗಿಸಿದ ರಾವಣನ ಕಥೆಯನ್ನು ವಿಶಿಷ್ಟವಾಗಿ ಬಿಂಬಿಸುತ್ತದೆ. ೧೫ ಅಧ್ಯಾಯಗಳಲ್ಲಿ ರಾವಣನ ಆಂತರಿಕ ಜಗತ್ತನ್ನು ತೆರೆದಿಟ್ಟಿರುವ ಲೇಖಕರು, ಆತನ ಜೀವನದ ಕೊನೆಯ ದಿನದವರೆಗಿನ ರಾಮಾಯಣದ ಘಟನೆಗಳನ್ನು ಆತನ ದೃಷ್ಟಿಕೋನದಿಂದ ಚಿತ್ರಿಸಿದ್ದಾರೆ. ಈ ಕಾದಂಬರಿಯು ಮೂಲ ರಾಮಾಯಣಕ್ಕೆ ಯಾವುದೇ ರೀತಿಯ ಧಕ್ಕೆ ತರುವುದಿಲ್ಲ, ಬದಲಿಗೆ ರಾವಣನ ವ್ಯಕ್ತಿತ್ವವನ್ನು ಆತನ ಯೋಚನೆಗಳ ಮೂಲಕ ಸೂಕ್ಷ್ಮವಾಗಿ ಅನಾವರಣಗೊಳಿಸುತ್ತದೆ. ಇದು ರಾವಣನ ಉದ್ಧಟತನವನ್ನು ಸಮರ್ಥಿಸುವ ಕೃತಿಯಲ್ಲ, ಮಾನವೀಯ, ಸಾಮಾಜಿಕ ಹಾಗೂ ರಾಜಕೀಯ ಕಾರಣಗಳಿಂದ ಆತನ ವ್ಯಕ್ತಿತ್ವ ಹೇಗೆ ರೂಪುಗೊಂಡಿತು ಎಂಬುದನ್ನು ತಿಳಿಯಪಡಿಸುತ್ತದೆ. ಇಂತಹ ಅಂಶಗಳನ್ನು ಇಂದಿನ ಆಧುನಿಕ ಸಮಾಜದಲ್ಲೂ ಕಾಣಬಹುದು.
ಕಾದಂಬರಿಯ ಮೊದಲ ಅಧ್ಯಾಯ ‘ಆರೋಹಣ’ ರಾವಣನ ಭೌತಿಕ ಮತ್ತು ಆಂತರಿಕ ಶಕ್ತಿಯನ್ನು ಸಾರುವಂತೆ ಆರಂಭವಾಗುತ್ತದೆ: “ತ್ರಿಕೂಟಾಚಲದ ಶಿಖರದ ಮೇಲೆ ನಾನು ನಿಂತಿದ್ದೇನೆ.” ಈ ವಾಕ್ಯವೇ ಆತನ ವೈಭವ ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಲಂಕೆಯು ರಾವಣನ ಕನಸು, ಆಕಾಂಕ್ಷೆ ಮತ್ತು ಸಾಧನೆಯ ಸಂಕೇತವಾಗಿದೆ. ಆತ ತನ್ನ ಜನರಿಗಾಗಿ, ಸಮಾಜದಿಂದ ತಿರಸ್ಕೃತರಾದವರಿಗಾಗಿ ಈ ಸುವರ್ಣ ಲಂಕೆಯನ್ನು ಕಟ್ಟಿದ್ದಾನೆ. ಆದರೆ, ಅಧಿಕಾರದ ಆಕರ್ಷಣೆ ಅಹಂಕಾರವಾಗಿ ಮಾರ್ಪಾಡಾದಾಗ ಉಂಟಾಗುವ ಪರಿಣಾಮಗಳ ಬಗ್ಗೆ ಈ ಕೃತಿಯು ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ.
ಕಾದಂಬರಿಯಲ್ಲಿ ಮುಂದೆ, ಖರ ಮತ್ತು ದೂಷಣರ ಸಾವಿನ ಸುದ್ದಿಯು ರಾವಣನನ್ನು ಕೆರಳಿಸಿದರೆ, ಮಾರೀಚನ ಮಾತುಗಳು ಆತನನ್ನು ಶಾಂತಗೊಳಿಸುತ್ತವೆ. ಆದರೆ ಶೂರ್ಪಣಖಿಯ ದುರವಸ್ಥೆಯನ್ನು ಕಂಡಾಗ ರಾವಣನ ಮನಸ್ಸಿನಲ್ಲಿ ಆಕ್ರೋಶದ ಕಿಡಿಯೊಂದು ಜ್ವಲಿಸುತ್ತದೆ. ಇದು ಆತನನ್ನು ಸೀತೆಯನ್ನು ಅಪಹರಿಸಿ ರಾಮನನ್ನು ದುರ್ಬಲಗೊಳಿಸಬೇಕೆಂಬ ತೀರ್ಮಾನಕ್ಕೆ ಕೊಂಡೊಯ್ಯುತ್ತದೆ. ಈ ನಿರ್ಧಾರವನ್ನು ಮಾರೀಚನಿಗೆ ಆದೇಶದ ರೂಪದಲ್ಲಿ ಒತ್ತಾಯಿಸುತ್ತಾನೆ.
ಸೀತಾಪಹರಣ, ರಾಮನ ಬಗ್ಗೆ ರಾವಣನಿಗೆ ತಿಳಿಯುವ ವಿಷಯಗಳು, ಆತನ ದಿಗ್ವಿಜಯದ ಆಕಾಂಕ್ಷೆ, ಕಾಮವಾಂಛೆ, ವೇದಾವತಿಯೊಂದಿಗಿನ ಸಾಮ್ಯತೆ, ಅನರಣ್ಯನ ಶಾಪ, ಹನುಮಂತನ ವೀರಗಾಥೆ, ಮೇಘನಾದನ ಇಂದ್ರಜಿತ್ ಆಗಿ ರಾವಣನ ಬೆನ್ನೆಲುಬಾಗಿದ್ದು, ಯುದ್ಧದಲ್ಲಿ ಆತನ ಸಾವು—ಇವೆಲ್ಲವೂ ರಾವಣನ ದೃಷ್ಟಿಕೋನದಿಂದ ಓದುಗರ ಹೃದಯವನ್ನು ಮುಟ್ಟುವಂತೆ ಚಿತ್ರಿತವಾಗಿವೆ.
ರಾವಣನ ಸೈನ್ಯದ ಬಲಿಷ್ಠ ರಾಕ್ಷಸರು, ಆತನ ಮಕ್ಕಳು ಮತ್ತು ಬಂಧುಗಳು ರಾಮನ ಶಕ್ತಿಯ ಎದುರು ಹತರಾದಾಗ, ರಾವಣನಿಗೆ ಯಾಕೆ ತಾನು ತಪ್ಪು ಮಾಡಿದೆ ಎಂಬ ಯೋಚನೆ ಬರಲಿಲ್ಲವೆಂದು ಓದುಗರಿಗೆ ಅನಿಸದಿರದು. ಕೊನೆಯ ಅಧ್ಯಾಯದಲ್ಲಿ, ರಾಮನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವಾಗ ರಾವಣ ತನ್ನ ಕಣ್ಣುಗಳನ್ನು ಮುಚ್ಚಿಕೊಂಡು, “ನನ್ನ ಮುಚ್ಚಿದ ಕಣ್ಣುಗಳ ಎದುರು ತೆರೆದಿರುವ ಆರು ಕಣ್ಣುಗಳು ನನ್ನನ್ನೇ ದಿಟ್ಟಿಸಿದವು” ಎಂದು ಯೋಚಿಸುತ್ತಾನೆ. ಈ ಆರು ಕಣ್ಣುಗಳು ಆತನ ತಪ್ಪುಗಳ ಸಂಕೇತವಾಗಿ ಓದುಗರಿಗೆ ಕಾಣಿಸುತ್ತವೆ. ಇದು ಆತ ಒಪ್ಪಿಕೊಳ್ಳದ ಸತ್ಯಗಳೊಂದಿಗಿನ ಆಂತರಿಕ ಸಂಘರ್ಷವನ್ನು ಚಿತ್ರಿಸುತ್ತದೆ. ರಾವಣನ ಕೊನೆಯ ಕ್ಷಣಗಳು ಓದುಗರ ಮನಸ್ಸಿನಲ್ಲಿ ‘ಲೋಕ ರಾವಣ’ ಎಂಬ ಭಾವನೆಯನ್ನು ಉಂಟುಮಾಡುತ್ತವೆ.
ಒಟ್ಟಿನಲ್ಲಿ, ಈ ಕೃತಿಯು ರಾವಣನ ಕಥೆಯನ್ನು ಸರಳವಾಗಿ, ಆದರೆ ಗಾಢವಾದ ಅರ್ಥಗಳೊಂದಿಗೆ, ಅಲಂಕಾರವಿಲ್ಲದೆ, ವಿಶಿಷ್ಟ ಶೈಲಿಯಲ್ಲಿ ಮನಮುಟ್ಟುವಂತೆ ಬಿಂಬಿಸಿದೆ. ಈ ಅಪೂರ್ವ ಕಾದಂಬರಿಯನ್ನು ಪ್ರತಿಯೊಬ್ಬರೂ ಓದಲೇಬೇಕು.