ಲೋಲ

ಲೋಲ

ಪುಸ್ತಕದ ಲೇಖಕ/ಕವಿಯ ಹೆಸರು
ಗುರುಪ್ರಸಾದ ಕಾಗಿನೆಲೆ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ.೧೫೦.೦೦, ಮುದ್ರಣ: ೨೦೨೧

‘ಲೋಲ' ಎಂಬುವುದು ಗುರುಪ್ರಸಾದ ಕಾಗಿನೆಲೆ ಅವರ ಕಥಾ ಸಂಕಲನ. ಪುಸ್ತಕದ ಬೆನ್ನುಡಿಯಲ್ಲಿರುವ ಮಾತುಗಳು “ವ್ಯಥೆಗಳೇ ಕತೆಗಳಾಗುವುದು ಅನ್ನುವುದಾದರೆ ಆಸ್ಪತ್ರೆಯೊಂದು ಕಥಾಸರಿತ್ಸಾಗರ. ಲಿಕ್ಕಾಚಾರದ ಬದುಕಿನಲ್ಲಿ ಮೈಮರೆತ ನಮ್ಮನ್ನು ಆಗಾಗ್ಗೆ ನಿಲ್ಲಿಸಿ ವಿಶಾಲ ದೃಷ್ಟಿಯನ್ನು ದಯಪಾಲಿಸಿ ಹುಷಾರಾಗಿಸುವುದು ಆಸ್ಪತ್ರೆ. ಈ ಹೊಸ ನೋಟ ಅಥವಾ ಹೊಸ ಪಾಠವನ್ನು ಅದು ಕೊಡುವುದು ಕಥೆಗಳ ರೂಪದಲ್ಲಿ. ಜನರಲ್ ವಾರ್ಡಿನ ಕಬ್ಬಿಣದ ಮಂಚದ ತುದಿಗೆ ಕೂತ ಇಬ್ಬರು ಹಂಚಿಕೊಳ್ಳುವ ವಿವರಗಳೆಲ್ಲವೂ ಕತೆಗಳೇ. ಇಲ್ಲಿನ ಕತೆಗಾರ ಡಾಕ್ಟರೂ ಆಗಿರುವುದರಿಂದ ಬಹುತೇಕ ಕತೆಗಳ ಪರಿಸರ ಆಸ್ಪತ್ರೆಯೇ ಆಗಿದೆ ಮತ್ತು ಈ ಡಾಕ್ಟರು ಒಳ್ಳೆಯ ಕತೆಗಾರರೂ ಆಗಿರುವುದರಿಂದ ಇದರ ತುಂಬೆಲ್ಲಾ ಮುರಿದ ಮನಸ್ಸುಗಳ ಎಕ್ಸ್ ರೇ ಚಿತ್ರಗಳಿವೆ. ಆಸ್ಪತ್ರೆಯೊಳಗಿನ ಔಷಧದ ವಾಸನೆ, ಕಿಟಕಿಯಿಂದ ಕಾಣುವ ರಸ್ತೆಯ ಇತರ ವಾಸನೆಗಳೊಂದಿಗೆ ಕಲೆತು ಒಂದು ವಿಚಿತ್ರ ಪರಿಮಳದ ಬೇರೆ ಜಗತ್ತು ಈ ಕತೆಗಳಲ್ಲಿ ತೆರೆದುಕೊಂಡಿದೆ.

ಕನ್ನಡದೂರಿನ ಚಿಕ್ಕಾಸ್ಪತ್ರೆಯಿಂದ ಅಮೇರಿಕಾದ ದೊಡ್ಡಾಸ್ಪತ್ರೆಯವರೆಗೂ ಹಬ್ಬಿರುವ ಈ ಜಗತ್ತು, ಹೊಸ ಕಾಲದ ಹೊಸ ಕಾಯಿಲೆಗಳನ್ನು ಪತ್ತೆ ಮಾಡಲೂ ಯತ್ನಿಸುತ್ತಿದೆ. ಕಲೆಯ ಉದ್ದೇಶವೂ ಲೋಕವನ್ನು ವಾಸಿ ಮಾಡುವುದೇ ಅನ್ನುವುದಾದರೆ, ಈ ಕತೆಗಳಲ್ಲಿ ಬದುಕಿನ ರುಜಿನಗಳನ್ನು ಸರಿಪಡಿಸುವ ‘ಗುಣ' ಖಂಡಿತಾ ಇದೆ. ದಿನಾ ರಾತ್ರಿ ಊಟದ ನಂತರ ಒಂದೊಂದು ಕತೆ ಸೇವಿಸಿದರೆ ನಿಮ್ಮೆಲ್ಲಾ ನೋವುಗಳು ವಾಸಿಯಾಗುತ್ತವೆ ಎಂಬುವುದಕ್ಕೆ ‘ಸೆಕೆಂಡ್ ಓಪೀನಿಯನ್ನಿ'ನ ಅಗತ್ಯ ಖಂಡಿತಾ ಇಲ್ಲ!”