ಲೋಳೆಸರ
ಸಸ್ಯ ಸಂಪದ ಮಾಲಿಕೆಯಲ್ಲಿ ಪ್ರಕಟವಾದ ೭ನೇ ಪುಸ್ತಕವೇ ಲೋಳೆಸರ. ಸಸ್ಯ ಸಂಪದ ಎಂಬ ಪರಿಕಲ್ಪನೆಯಲ್ಲಿ ೧೦೦ ಬಹು ಉಪಯೋಗಿ ಸಸ್ಯಗಳ ಸವಿವರಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಮುನಿಯಾಲ್ ಗಣೇಶ್ ಶೆಣೈ ಅವರ ಸಾಹಸ ಮೆಚ್ಚತಕ್ಕದ್ದು. ಈಗಾಗಲೇ ೭೦ ಸಸ್ಯಗಳ (ಹಣ್ಣು, ತರಕಾರಿ) ಬಗ್ಗೆ ಮಾಹಿತಿ ನೀಡುವ ಪುಸ್ತಕಗಳು ಹೊರಬಂದಿವೆ. ಬೇಗದಲ್ಲೇ ಈ ಸಂಖ್ಯೆ ನೂರು ತಲುಪಲಿದೆ.
ಲೋಳೆಸರ ಎನ್ನುವುದು ಬಹು ಆರೋಗ್ಯಕರ ಸಸ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಲೆವೋರಾ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಈ ಸಸ್ಯವು ಸೌಂದರ್ಯಕ್ಕೂ-ಆರೋಗ್ಯಕ್ಕೂ ಸೈ ಎನ್ನಿಸುವಂತಹ ಗಿಡ. “ಈಗ ಜಗತ್ತಿನಾದ್ಯಂತ ಲೋಳೆ ಸರಕ್ಕೆ ಬೇಡಿಕೆ ಏರುತ್ತಿದೆ. ಹಲವಾರು ಬಗೆಯ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಈ ಗಿಡದಲ್ಲಿದೆ. ಎಚ್ ಐ ವಿ ಬಾಧಿತರಿಗೂ ಸಹ ಈ ಗಿಡ ನೆರವಾಗುವುದು ಗೊತ್ತಾಗಿದೆ. ಸೌಂದರ್ಯವರ್ಧಕವಾಗಿಯೂ ಲೋಳೆಸರ ಬಳಕೆಯಲ್ಲಿದೆ. ಅನೇಕ ಬಗೆಯ ಸೌಂದರ್ಯ ಸಾಧನಗಳಲ್ಲಿ ಲೋಳೆಸರವನ್ನು ಬಳಸುತ್ತಾರೆ.” ಎನ್ನುವುದು ಬೆನ್ನುಡಿಯಲ್ಲಿ ಕಂಡ ಬರಹ.
ಲೇಖಕರಾದ ಮುನಿಯಾಲ್ ಗಣೇಶ್ ಶೆಣೈ ಅವರು ‘ಸಸ್ಯ ಸಂಪದ' ಪರಿಕಲ್ಪನೆಯ ಬಗ್ಗೆ ಹೇಳುವುದು ಹೀಗೆ..." ಕಳೆದ ಮೂರು ದಶಕಗಳಿಂದ ನಾನು ಗಿಡಮರಗಳ ಕುರಿತು ಆಸಕ್ತಿ ತಾಳಿದ್ದೇನೆ. ನಮ್ಮ ಸುತ್ತಲೂ ಇರುವ ಸಾವಿರಾರು ಬಗೆಯ ಗಿಡಮರ ಬಳ್ಳಿಗಳು ಒಂದೊಂದು ಹೊಸ ಜಗತ್ತನ್ನು ತೆರೆದಿಟ್ಟಿವೆ. ನಮ್ಮ ದೇಶದ ಒಂದೊಂದು ಪ್ರದೇಶದಲ್ಲೂ ನೂರಾರು ವರ್ಷಗಳಿಂದ ಬೆಳೆದು ಬಂದಿರುವ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಹಲವಾರು ಗಿಡಗಳನ್ನು ಬಳಸುತ್ತ ಬಂದಿದ್ದಾರೆ. ಈಗಲೂ ಆಧುನಿಕ ವೈದ್ಯಕೀಯ ಭರಾಟೆಯ ನಡುವೆಯೂ ಹಳ್ಳಿ ಮದ್ದುಗಳು ಅಪಾರ ಜನಪ್ರಿಯತೆಯನ್ನು ಗಳಿಸಿರಲು ಗಿಡಮರಗಳ ಕೊಡುಗೆ ಅನನ್ಯವಾದುದು.
ಒಂದೊಂದು ಗಿಡವೂ ಅಪಾರ ಸಾಧ್ಯತೆಗಳನ್ನು ನಮ್ಮೆದುರು ತೆರೆದಿಡುತ್ತವೆ. ಈ ಸಸ್ಯಗಳ ಕುರಿತು ಇರುವ ಸಸ್ಯ ವೈಜ್ಞಾನಿಕ ಮಾಹಿತಿ, ಅವುಗಳ ಕೃಷಿ ವಿಧಾನ, ಆರ್ಥಿಕವಾಗಿ ಅವುಗಳ ಮಹತ್ವ, ಔಷಧವಾಗಿ ಅವುಗಳ ಬಳಕೆ, ಆಯುರ್ವೇದದಲ್ಲಿ ಇಂತಹ ಗಿಡಗಳ ಮಹತ್ವ, ಆಧುನಿಕ ಸಂಶೋಧಕರ ದೃಷ್ಟಿಯಲ್ಲಿ ಈ ಸಸ್ಯಗಳ ಪಾತ್ರ - ಇಂತಹ ಸಂಗತಿಗಳ ಬಗೆಗೆ ಅಧ್ಯಯನವನ್ನು ಮಾಡುತ್ತ ಬಂದಿರುವ ನಾನು ಇವನ್ನೆಲ್ಲ ಪುಸ್ತಕಗಳ ರೂಪದಲ್ಲಿ ನಿಮ್ಮ ಕೈಗಿಡುವ ಪ್ರಯತ್ನ ಮಾಡುತ್ತಿದ್ದೇನೆ.”
ಲೋಳೆಸರ ಅಥವಾ ಅಲೆವೋರಾ ಎಂಬ ಸಸ್ಯದ ಪರಿಚಯ, ಇತಿಹಾಸ, ಸಸ್ಯ ಪರಿಚಯ ಮತ್ತು ಕೃಷಿ, ಸಾವಯವ ಕೃಷಿಕರ ನೆರವಿಗೆ ಲೋಳೆಸರ, ಔಷಧವಾಗಿ ಲೋಳೆಸರ, ಆಧುನಿಕ ಸಂಶೋಧನೆಯ ಬೆಳಕಿನಲ್ಲಿ, ಆಯುರ್ವೇದದಲ್ಲಿ ಲೋಳೆಸರ, ಸೌಂದರ್ಯಕ್ಕಾಗಿ ಲೋಳೆಸರ, ದೈಹಿಕ ಸಮಸ್ಯೆಗಳಿಗೆ ಲೋಳೆಸರ, ಪಶುಗಳಿಗೆ ಲೋಳೆಸರ, ಲೋಳೆಸರದ ಇತರ ಬಳಕೆಗಳು ಮೊದಲಾದ ಅಧ್ಯಾಯಗಳು ಲೋಳೆಸರದ ಬಗ್ಗೆ ಸಮಗ್ರ ವಿವರಗಳನ್ನು ನೀಡುತ್ತವೆ. ಒಟ್ಟಿನಲ್ಲಿ ಸುಮಾರು ೭೦ ಪುಟಗಳ ಈ ಪುಟ್ಟ ಕೃತಿ ಮಾಹಿತಿ ಪೂರ್ಣವಾಗಿದೆ.