ಲೋಹಿಯಾ ನೆನಪಿನಲ್ಲಿ

ಲೋಹಿಯಾ ನೆನಪಿನಲ್ಲಿ

ಬರಹ

ಲೋಹಿಯಾ ನೆನಪಿನಲ್ಲಿ:

ಗಾಂಧಿ ಮತ್ತು ಸಮಾಜವಾದಿಗಳು*

ಇಂದಿಗೆ ಡಾ||ರಾಮಮನೋಹರ ಲೋಹಿಯಾ ನಿಧನರಾಗಿ 41 ವರ್ಷಗಳು ತುಂಬುತ್ತಿವೆ. ಅವರು ಹೇಗೆ ಮತ್ತು ಏಕೆ ನಿಧನರಾದರು ಎಂಬುದು ನಿಮಗೆಲ್ಲ ಗೊತ್ತೇ ಇದೆ. ಬ್ರಿಟಿಷ್ ಪ್ರಭುತ್ವದ ವಿರುದ್ಧ ತಮ್ಮದೇ ರೀತಿಯಲ್ಲಿ ದಿಟ್ಟವಾಗಿ - ಧೀರರಾಗಿ ಹೋರಾಡಿ ಹಿಂಸೆ ಅನುಭವಿಸಿದ ಅವರು, ಸ್ವತಂತ್ರ ಭಾರತದಲ್ಲಿ ಅದಕ್ಕಿಂತ ಹೆಚ್ಚು ಹಿಂಸೆ ಅನುಭವಿಸಿದರು. ಬ್ರಿಟಿಷ್ ಪ್ರಭುತ್ವದ ವಿರುದ್ಧ ಯಾವ ಉದ್ದೇಶಗಳಿಂದ ತಾವು ಹೋರಾಡಿದ್ದರೋ ಅವುಗಳಿಗೆ ತದ್ವಿರುದ್ಧ ತತ್ವಗಳ ಆಧಾರದ ಮೇಲೆ ಸ್ವತಂತ್ರ ಭಾರತವನ್ನು ಕಟ್ಟುತ್ತಿರುವುದರ ಬಗ್ಗೆ ದನಿ ಎತ್ತಿದ್ದಕ್ಕಾಗಿ, ಪ್ರತಿಭಟಿಸಿದ್ದಕ್ಕಾಗಿ ಅವರು ಯಾವ ರಾಜಕೀಯ ನಾಯಕನೂ ಹೋಗದಿದ್ದಷ್ಟು ಬಾರಿ ಸೆರೆಮನೆಗೆ ಹೋಗಬೇಕಾಯಿತು. ಅವರಷ್ಟು ಮಹತ್ವದ ಸ್ವಾತಂತ್ರ್ಯ ಹೋರಾಟಗಾರನಾರೂ ಎದುರಿಸದಂತಹ ರಾಜಕೀಯ ಮತ್ತು ಪೋಲೀಸ್ ದುರ್ವರ್ತನೆಯನ್ನು ಅವರು ಎದುರಿಸಬೇಕಾಯಿತು. ಅದರ ಪರಿಣಾಮವಾಗಿ ಅವರ ಇಡೀ ದೇಹ ಮತ್ತು ಅದರೊಳಗಿನ ಚೈತನ್ಯ ಘಾಸಿಗೊಂಡಿತ್ತು. ಈ ಸ್ಥಿತಿಯಲ್ಲಿ ಅವರು ರೂಪಿಸಿದ 'ಕಾಂಗ್ರೇಸ್ಸೇತರವಾದ' ಬಿಜೆಪಿಯನ್ನು ಇಂದು ಭಾರತದ ರಾಜಕಾರಣದ ಮುನ್ನೆಲೆಗೆ ತಂದು ನಿಲ್ಲಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ! ಲೋಹಿಯಾ ತಮ್ಮ 57ನೇ ವಯಸ್ಸಿನಲ್ಲಿ ಅವರು ತಾವು ನಂಬಿದ್ದ ಸಮಾಜವಾದಿ ರಾಜಕಾರಣಕ್ಕೆ ತಕ್ಕಂತೆ, ಭಾರತದ ಶ್ರೀಸಾಮಾನ್ಯನಿಗೆ ದಕ್ಕದ ಯಾವುದೇ ವಿಶೇಷ ವೈದ್ಯೋಪಚಾರ ತಮಗೂ ಬೇಡವೆಂದು ಹಠ ಮಾಡಿ ಸರ್ಕಾರಿ ಆಸ್ಪತ್ರೆ ಸೇರಿದರು. ಅಲ್ಲಿನ ವೈದ್ಯೋಪಾಚರದ ಮಿತಿಗಳಿಂದಾಗಿ ಅವರು ಅಕ್ಟೋಬರ್ 12ರಂದು ಅಸು ನೀಗಿದರು.

ಲೋಹಿಯಾ ಅಸು ನೀಗಿದ ನಂತರದ ಈ ನಾಲ್ಕು ದಶಕಗಳಲ್ಲಿ ಸಾರ್ವಜನಿಕ ಜೀವನದ ದಿಕ್ಕು ದೆಸೆಗಳೇ ಬದಲಾಗಿವೆ. ಅವರು ಪ್ರತಿಪಾದಿಸಿದ ರಾಜಕೀಯ ತಾತ್ವಿಕತೆ ಮತ್ತು ಕಾರ್ಯಾಚರಣೆಯ ರೀತಿ ನೀತಿಗಳೇ ಅಪ್ರಸ್ತುತವೆನ್ನಿಸತೊಡಗಿವೆ. ಆದರೂ ಲೋಹಿಯಾ ಎಂದೊಡನೆ ಕಿವಿ ಅರಳಿಸುವ ಸಾಕಷ್ಟು ಜನ ನಮ್ಮಲ್ಲಿ ಈಗಲೂ ಇದ್ದಾರೆ. ಅವರಲ್ಲಿ ಎಲ್ಲರೂ ಲೋಹಿಯಾ ರಾಜಕಾರಣವನ್ನು ಈಗಲೂ ನಂಬಿರುವವರೇನಲ್ಲ. ಅವರಲ್ಲಿ ಅರ್ಧ ಜನ ಇಂದಿನ ಜಾಗತೀಕರಣ ಸೃಷ್ಟಿಸುತ್ತಿರುವ ಸಂದಿಗ್ಧಗಳಿಗೆ ಲೋಹಿಯಾ ಚಿಂತನೆಯಲ್ಲಿ ಏನಾದರೂ ಪರಿಹಾರದ ಬೀಜಗಳಿರಬಹುದೇ ಎಂಬ ನಿರೀಕ್ಷೆ ಇರುವವರೂ, ಇನ್ನರ್ಧ ಜನ ತಾವು ಲೋಹಿಯಾ ರಾಜಕಾರಣದಿಂದ ದೂರ ಸರಿದಿದ್ದರಿಂದಾಗಿಯೇ ಈ ಸಂದಿಗ್ಧತೆಗಳು ಉಂಟಾಗಿವೆಯೇನೋ ಎಂಬ ಅನುಮಾನದಲ್ಲಿ ಪಾಪ ಪರಿಹಾರಾರ್ಥವಾಗಿ ಲೋಹಿಯಾ ಹೆಸರು ಜಪಿಸುತ್ತಿರುವವರು. ಲೋಹಿಯಾ ತಮ್ಮ ಕಾಲದಲ್ಲೇ ಭಾರತದ ಅತ್ಯುತ್ತಮ ಮನಸ್ಸುಗಳನ್ನು ತಮ್ಮೆಡೆಗೆ ಆಕರ್ಷಿಸಿದ್ದರು. ಅವರ ಕಾಫಿ ಹೌಸ್ ಬೈಠಕ್‌ಗಳಲ್ಲಿ ಭಾಗವಹಿಸದ ಲೇಖಕ, ಕಲಾವಿದ, ಬುದ್ಧಿಜೀವಿಗಳೇ ಇರಲಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಲೋಹಿಯಾ ತಮ್ಮ ರಾಜಕಾರಣದಲ್ಲಿ ಗೆದ್ದರೆ ಎಂದು ಕೇಳಿದರೆ, ಹೌದು ಎಂದು ಹೇಳುವುದು ಕಷ್ಟವಾಗುತ್ತದೆ.

ಲೋಹಿಯಾರನ್ನು ಇಂದು ನೆನಪಿಸಿಕೊಳ್ಳುವುದೆಂದರೆ, ಈ ಪ್ರಶ್ನೆಯನ್ನು ಪದೇ ಪದೇ ಕೇಳೀಕೊಳ್ಳುವುದೇ ಆಗಿದೆ. ಗಾಂಧಿ ನಂತರ ಅತ್ಯುತ್ತಮ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳನ್ನು ಪ್ರತಿಪಾದಿಸಿ, ಅತ್ಯುತ್ತಮ ಮನಸ್ಸುಗಳನ್ನು ಆಕರ್ಷಿಸಿ, ಭಾರತದ ಅತ್ಯುತ್ತಮ ರಾಜಕೀಯ ಹೋರಾಟಗಳನ್ನು ಮಾಡಿದ ಲೋಹಿಯಾ ಅತ್ಯುತ್ತಮ ರಾಜಕೀಯ ಪರ್ಯಾಯವನ್ನೇಕೆ ಸೃಷ್ಟಿಸಲಾಗಲಿಲ್ಲ? ಅವರು ತಮ್ಮ ರಾಜಕೀಯ ಜೀವನದ ಅತ್ಯುತ್ತಮ ದಿನಗಳನ್ನು ತಲುಪಲಾರಂಭಿಸಿದ ಘಟ್ಟದಲ್ಲಿ ನಿಧನರಾದದ್ದೇ ಇದಕ್ಕೆ ಕಾರಣ ಎನ್ನುವುದು ಬಹು ಸುಲಭದ ಉತ್ತರ. ಆಗ ಅವರು ಅತ್ಯುತ್ತಮ ರಾಜಕೀಯ ವಾರಸುದಾರಿಕೆಯನ್ನು ನಿರ್ಮಿಸದೇ ಹೋದ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ! ಇಂದು ಸಮಾಜವಾದ ಅಥವಾ ಸಮಾಜವಾದಿಗಳೆಂದರೆ, ಜನ ಸಾಮಾನ್ಯರು ವಿಚಿತ್ರ ಜಿಗುಪ್ಸೆಯಿಂದ ನೋಡುವುದು ಇಂತಹ ವಾರಸುದಾರಿಕೆಯ ಲೋಪದಿಂದಲೇ ಎಂದರೆ ತಪ್ಪಾಗಲಾರದು.

ಆದರೂ ನಮ್ಮಂತಹವರು 'ಮರಳಿ ಬರಲಿದೆ ಸಮಾಜವಾದ!' ಎಂದು ಹಲವರ ಕಿಚಾವಣೆ ಮತ್ತು ವ್ಯಂಗ್ಯಗಳ ನಡುವೆಯೂ ಧೈರ್ಯವಾಗಿ ಘೋಷಿಸಲು ನಮ್ಮದೇ ಆದ ಕಾರಣಗಳಿವೆ. ಏಕೆಂದರೆ, ಸಮಾಜವಾದವೆಂಬುದು ಕೇವಲ ಒಂದು ರಾಜಕೀಯ ಸಿದ್ಧಾಂತವಾಗಿರದೆ, ಅದೊಂದು ಜೀವನ ದೃಷ್ಟಿಯೂ ಆಗಿದೆ ಎಂಬುದು ನಮ್ಮ ತಿಳುವಳಿಕೆಯಾಗಿದೆ. ದೀರ್ಘಕಾಲಿಕವಾದ ಈ ತಿಳುವಳಿಕೆಯಿಲ್ಲದೆ, ಸಮಾಜವಾದದ ಹೆಸರು ಹೇಳಿಕೊಂಡು ಅಲ್ಪಕಾಲಿಕವಾದ ಮತ್ತೇನನ್ನೋ ಮಾಡಿದ ಕೆಲವರ ರಾಜಕಾರಣದಿಂದಾಗಿ ಅದಕ್ಕೆ ಕೆಟ್ಟ ಹೆಸರು ಬಂದುದರಿಂದ, ಅದರ ಕಾಲ ಮುಗಿಯಿತೆಂದು ಘೋಷಿಸಿದವರೇ ಇಂದು ಬಂಡವಾಳಷಾಹಿ ರಾಜಕಾರಣ ಸಮಾಜವಾದಿ ರಾಜಕಾರಣದಿಂದ ಕೆಲವು ಪಾಠಗಳನ್ನಾದರೂ ಕಲಿಯಬೇಕಾಗಿದೆ ಎಂದು ಹೇಳುವಂತಾಗಿದೆ. ಅಮೆರಿಕಾ ಮತ್ತದರ ಮಿತ್ರ ದೇಶಗಳು ಇಂದು ಕಾಣುತ್ತಿರುವ ಭಯಂಕರ ಆರ್ಥಿಕ ಕುಸಿತದ ಸಂದರ್ಭದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಕ್ತ ಮಾರುಕಟ್ಟೆವಾದಿ ಅರ್ಥಶಾಸ್ತ್ರಜ್ಞ ಸ್ಟಿಗ್ಲಿಟ್ಜ್ ಅವರ ಬಾಯಿಂದಲೇ ಈ ಮಾತು ಹೊರಬಂದಿದೆ! ಅಷ್ಟೇ ಅಲ್ಲ, ಈ ವರ್ಷದ ನೊಬಲ್ ಪ್ರಶಸ್ಸತ ಪುರಸ್ಕೃತ ಅರ್ಥಶಾಸ್ತ್ರಜ್ಞ ಪಾಲ್ ಕ್ರುಗಮನ್ ಕೂಡಾ ಈ ಮತನ್ನು ಪುನರುಚ್ಚರಿಸುತ್ತಿದ್ದಾರೆ. ಇದು ಸಮಾಜವಾದ ಮರಳಿ ಬರಲಿರುವುದರ ಮುನ್ಸೂಚನೆ ಎಂದೇ ನಾನು ಭಾವಿಸಿದ್ದೇನೆ.

ಹಾಗೆ ನೋಡಿದರೆ, ಸಮಾಜವಾದ ಭಾರತದ ಮಟ್ಟಿಗಾದರೂ ಇನ್ನೂ ಜೀವಂತವಿದೆ ಎಂದು ನಂಬಿದವನು ನಾನು. ಮನಮೋಹನ ಸಿಂಗ್ ಮತ್ತು ಮೊಂಟೆಕ್ ಸಿಂಗ ಅಹ್ಲೂವಾಲಿಯಾರಂತಹ ಅಪ್ಪಟ ಮುಕ್ತ ಮಾರುಕಟ್ಟೆವಾದಿಗಳೂ 'ಆವೃತ' ಅಭಿವೃದ್ಧಿಯ ಮಾತನಾಡಿಯೇ ತಮ್ಮ ರಾಜಕಾರಣವನ್ನು ಮುಂದುವರೆಸಿಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದರೆ ಇನ್ನೇನರ್ಥ? ನಿರ್ದಿಷ್ಟ ರೂಪದ - ಸೂತ್ರಗಳ - ಕಾರ್ಯಕ್ರಮಗಳ ಸಮಾಜವಾದ ಅಪ್ರಸ್ತುತಗೊಂಡಿರಬಹುದು. ಆದರೆ ಭಾರತದಂತಹ ಅತೀವ ಅಸಮಾನತೆಗಳ ರಾಷ್ಟ್ರದಲ್ಲಿ ಸಮಾಜವಾದ ಒಂದು ಭಾವನೆಯಾಗಿ, ಆದರ್ಶವಾಗಿ, ಹುರುಪಾಗಿ, ಕಣ್ಮರೆಯಾಗಲು ಸದ್ಯಕ್ಕಂತೂ ಕಾರಣಗಳೇ ಇಲ್ಲ. ಇದರ ಮೂಲಕ ನಾನು ಏನು ಹೇಳುತ್ತಿದ್ದೇನೆಂದರೆ, ಸಮಾಜವಾದವನ್ನು ನಮ್ಮ ಕಾಲಕ್ಕೆ ನಾವೇ ಪುನರನ್ವೇಷಿಸಿಕೊಳ್ಳಬೇಕಾಗಿದೆ. ಇದನ್ನು ಮಾಡಲಾಗದ ಸಮಾಜವಾದಿಗಳು ಇಂದು ಅವಶೇಷಗಳ ರೂಪದಲ್ಲಿ, ವ್ಯಂಗ್ಯಚಿತ್ರಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವುದು ಆಶ್ಚರ್ಯವೇನಲ್ಲ.

ಇಂತಹ ಪುನರನ್ವೇಷಣೆಯ ಸಣ್ಣ ಪ್ರಯತ್ನವನ್ನು ನಾನು ನನ್ನ ಮಿತಿಯಲ್ಲೇ ಮಾಡುತ್ತಾ ಬರುತ್ತಿದ್ದೇನೆ. ಅದಕ್ಕಾಗಿ, ದಿವಾಳಿಯೆದ್ದಿರುವ ಸಮಾಜವಾದಿ ಸಾಮ್ರಾಜ್ಯದ ಯಜಮಾನರುಗಳಿಂದ ಟೀಕೆಗೊಳಪಡುತ್ತಲೇ ಬಂದಿದ್ದೇನೆ. ಆದರೂ, ಇಂದು ಬಿಡುಗಡೆಯಾದ 'ರೈತಭಾರತ:ಅವಸಾನದ ಅಂಚಿನಲ್ಲಿ' ಮತ್ತು 'ಆ ಗಣರಾಜ್ಯ - ಈ ಕರ್ನಾಟಕ' ಪುಸ್ತಕಗಳಲ್ಲಿ ನಾನು ಇದನ್ನು ಮುಂದುವರಿಸಿದ್ದರೆ ಅದಕ್ಕೆ ಕಾರಣ, ಸಮಾಜವಾದವನ್ನು ಜೀವಂತವಾಗಿಡುವ ರೀತಿಯೇ ಇದು ಎಂಬ ನನ್ನ ದೃಢ ನಂಬಿಕೆ. 'ರೈತ ಭಾರತ: ಅವಸಾನದ ಅಂಚಿನಲ್ಲಿ' ಕಿರುಪುಸ್ತಕದಲ್ಲಿ, ಜಾಗತೀಕರಣ ಒಂದು ಜೀವನ ಕ್ರಮದ ನಾಶದ ಪ್ರಕ್ರಿಯೆಯಾಗಿ ಒಂದು ರಾಷ್ಟ್ರದ ನಾಶಕ್ಕೆ ಹೇಗೆ ಕಾರಣವಾಗಬಲ್ಲುದು ಎಂಬುದರ ವಿಷದೀಕರಣವಿದ್ದರೆ, 'ಈ ಗಣರಾಜ್ಯ - ಆ ಕರ್ನಾಟಕ' ಕೃತಿಯು ಭಾಷಾ ರಾಷ್ಟ್ರೀಯತೆಗಳನ್ನು ಹತ್ತಿಕ್ಕುವ ನಮ್ಮ ಆಧುನಿಕ ರಾಷ್ಟ್ರೀಯತೆಯ ಪರಿಕಲ್ಪನೆ ಹೇಗೆ ಇಂದು ಇಂತಹ ಜಾಗತೀಕರಣಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಸೂಚಿಸುವ ಪ್ರಯತ್ನ ಮಾಡುತ್ತದೆ. ಜೊತೆಗೆ ಐವ್ವತ್ತು ವರ್ಷಗಳ ಕರ್ನಾಟಕದಲ್ಲಿ ಕನ್ನಡ ಭಾಷಾ ರಾಷ್ಟ್ರೀಯತೆ ತನ್ನ ಈ ಪರಿಮಿತಿಗಳಲ್ಲೇ ತನ್ನನ್ನು ತಾನು ಹೇಗೆ ಅಭಿವ್ಯಕ್ತಿಸಿಕೊಳ್ಳುವ ಪ್ರಯತ್ನ ಮಾಡಿದೆ ಎಂಬುದರ ಒಂದು ಸ್ಥೂಲ ಚಿತ್ರವನ್ನೂ ಕೊಡುತ್ತದೆ. ಈ ದೃಷ್ಟಿಯಿಂದ ಇವೆರಡೂ ಸಮಾಜವಾದಿ ಕೃತಿಗಳೇ! ಮತ್ತು ಇವು ಈ 'ಲೋಹಿಯಾ ನೆನಪು' ಕಾರ್ಯಕ್ರಮದ ಭಾಗವಾಗಿ ಬಿಡುಗಡೆಯಾಗಿದ್ದು ಉಚಿತವೇ ಆಗಿದೆ ಎಂದು ನಾನು ಭಾವಿಸಿದ್ದೇನೆ

ಸಮಾಜವಾದ, ನಿರ್ದಿಷ್ಟವಾಗಿ ಲೋಹಿಯಾ ಪ್ರತಿಪಾದಿಸಿದ ಸಮಾಜವಾದ, ಏಕೆ ನಮ್ಮ ರಾಜಕಾರಣವನ್ನು ಅದರ ವಿಚಾರಗಳ ಮತ್ತು ಹೋರಾಟಗಳ ತೀವ್ರತೆಯ ಲೆಕ್ಕದಲ್ಲಿ, ಆಳವಾಗಿ ಪ್ರಭಾವಿಸಲಿಲ್ಲ ಎಂಬ ಪ್ರಶ್ನೆಯನ್ನು ಆರಂಭದಲ್ಲಿ ಎತ್ತಿದ್ದೆ. ಇಲ್ಲ, ಅದು ನಮ್ಮ ರಾಜಕಾರಣವನ್ನು ಆಳವಾಗಿ ಪ್ರಭಾವಿಸಿದೆ ಎಂದು ವಾದಿಸುವವರೂ ಇದ್ದಾರೆ ಎಂಬ ಅರಿವಿನಲ್ಲೇ ನಾನು ಈ ಪ್ರಶ್ನೆಯನ್ನು ಎತ್ತಿದ್ದೇನೆ. ಇಂದು, ಬಿಜೆಪಿ, ಕಮ್ಯುನಿಸ್ಟ್ ಪಕ್ಷಗಳೂ ಸೇರಿದಂತೆ ರಾಷ್ಟ್ರದ ಸರಿಸುಮಾರು ಎಲ್ಲ ಪಕ್ಷಗಳಲ್ಲೂ ಸಮಾಜವಾದಿಗಳು ಹರಡಿಕೊಂಡಿದ್ದಾರೆ ಎಂಬುದು, ಹೀಗೆ ವಾದಿಸುವವರು ತಮ್ಮ ವಾದಕ್ಕೆ ನೀಡುವ ಸಮರ್ಥನೆ. ಆದರೆ ಈ ಸಮರ್ಥನೆಯೇ ನನ್ನ ಈ ಮೇಲಿನ ಪ್ರಶ್ನೆಯ ಹುಟ್ಟಿಗೆ ಕಾರಣವೂ ಆಗಿದೆಯಲ್ಲವೆ? ಏಕೆಂದರೆ, ಇವರು ಹೀಗೆ ಏಕೆ ಹರಡಿ ಹೋಗುವಂತಾಯಿತು ಹಾಗೆ ಹರಡಿ ಹೋದವರು ಏಕೆ ಅವುಗಳಲ್ಲೇ ಲೀನವಾಗಿ ಹೋಗುವಂತಾಯಿತು ಎಂಬುದು ಸಮಾಜವಾದಿ ಚಳುವಳಿಯ ಇತಿಹಾಸವನ್ನು ಗಮನಿಸಿದವರಿಗೆ ಎದುರಾಗುವ ಮುಖ್ಯ ಪ್ರಶ್ನೆ. ಈ ಪ್ರಶ್ನೆಗೆ ಸಮಗ್ರವಾಗಿ ಉತ್ತರ ಕೊಡಬಹುದಾದ್ದೆಂದು, ಕಳೆದ ಹತ್ತು ವರ್ಷಗಳಲ್ಲಿ ಈ ಬಗ್ಗೆ ಯೋಚಿಸುತ್ತಿರುವ, ಅಧ್ಯಯನ ಮಾಡುತ್ತಿರುವ ಮತ್ತು ಅಳಿದುಳಿದ ಸಮಾಜವಾದಿ ಗೆಳೆಯರ ನಡಾವಳಿಯನ್ನು ಗಮನಿಸುತ್ತಿರುವ ನನಗೆ ತೋಚಿರುವ ಸಂಗತಿ ಎಂದರೆ, ಅದು ತಾನು ರೂಪುಗೊಂಡ ಮೂಸೆಯ ನೆನಪನ್ನೇ ಕ್ರಮೇಣ ಅಳಿಸಿಕೊಳ್ಳುವಂತಹ ರಾಜಕಾರಣ ಮಾಡುತ್ತಾ ಹೋದದ್ದು.

ಸಮಾಜವಾದದ ಪರಿಕಲ್ಪನೆಯ ಹುಟ್ಟು ಎಲ್ಲೇ ಆಗಿರಲಿ, ಭಾರತೀಯ ಸಮಾಜವಾದ ತನ್ನ ಚೈತನ್ಯವನ್ನು ಪಡೆದುಕೊಂಡದ್ದು ಗಾಂಧಿ ರಾಜಕಾರಣದ ಮೂಸೆಯಲ್ಲಿ. ಆರಂಭದಲ್ಲಿ ಭಾರತೀಯ ಸಮಾಜವಾದ ಮಾರ್‍ಕ್ಸವಾದಿ ತಾತ್ವಿಕತೆಯನ್ನು ನಂಬಿ ಬೆಳೆಯಿತಾದರೂ, ಅದೊಂದು ಚಳುವಳಿಯಾಗಿ, ಕಾಂಗ್ರೆಸ್ನ ಅಡಿಯಲ್ಲಿಯೇ ಅದರ ಒಂದು ಒಳ ಪಕ್ಷವಾಗಿ ರೂಪುಗೊಂಡುದು ಗಾಂಧೀಜಿಯ ಪ್ರಭಾವದಲ್ಲಿಯೇ. ಭಾರತದ ಸಮಾಜವಾದಿಗಳು, ಮುಖ್ಯವಾಗಿ ಜೆಪಿ, ಲೋಹಿಯಾ, ಆಚಾರ್ಯ ನರೇಂದ್ರದೇವ, ಅಚ್ಯುತ ಪಟವರ್ಧನ್, ಅಶೋಕ ಮೆಹ್ತಾ, ಕಮಲಾದೇವಿ ಚಟ್ಟೋಪಾಧ್ಯಾಯ ಮುಂತಾದವರು ಗಾಂಧೀಜಿಯೊಂದಿಗೆ 'ಜಗಳ' ಮಾಡಿಕೊಂಡೇ ತಮ್ಮ ಸಮಾಜವಾದಿ ಪಾಠಗಳನ್ನು ಕಲಿಯುತ್ತಾ ಹೋದದ್ದು ಮತ್ತು ತಮ್ಮ ಸಮಾಜವಾದಿ ಚಟುವಟಿಕೆಗಳನ್ನು ರೂಪಿಸಿಕೊಳ್ಳುತ್ತ ಹೋದದ್ದು! ಕೊನೆಗೆ ಗಾಂಧಿ ಹತ್ಯೆಯ ನಂತರ ಕಾಂಗ್ರೆಸ್, ಇವರ ಭಿನ್ನಾಭಿಪ್ರಾಯಗಳ 'ಗಲಾಟೆ' ತಾಳಲಾರದೆ ಇವರು ಹೊರ ಹೋಗಿ ಸ್ವತಂತ್ರವಾದ ತಮ್ಮದೇ ಸಮಾಜವಾದಿ ಪಕ್ಷ ಸ್ಥಾಪಿಸಿಕೊಳ್ಳುವಂತಹ ಪರಿಸ್ಥಿತಿಯನ್ನುಂಟು ಮಾಡಿದಾಗ, ಅದು ತನ್ನ ತಾತ್ವಿಕ ಸ್ಫೂರ್ತಿಯೆಂದು ಒಪ್ಪಿಕೊಂಡದ್ದು ಗಾಂಧಿವಾದವನ್ನೇ. ಮೊದಲ ಸಾರ್ವತ್ರಿಕ ಚುನವಣೆಗಳ ಭಾರಿ ಸೋಲೂ ಇಲ್ಲಿ ಕೆಲಸ ಮಾಡಿರಲೂಬಹುದು! ಅದೇನೇ ಇರಲಿ, ಇದನ್ನವರು ತಮ್ಮನ್ನು ಬಂಡಾಯ ಗಾಂಧಿವಾದಿಗಳೆಂದು ಕರೆದುಕೊಂಡು ಸಮರ್ಥಿಸಿಕೊಂಡರು. ತಮ್ಮ ಮೂಲ ವಂಶಸ್ಥರಾದ ಕಾಂಗ್ರೆಸ್ಸಿಗರನ್ನು ಸರ್ಕಾರಿ ಗಾಂಧಿವಾದಿಗಳೆಂದೂ, ಅವರೊಂದಿಗೆ ಅನುಸಂಧಾನದಲ್ಲಿದ್ದ ಸರ್ವೊದಯ ಕಾರ್ಯಕರ್ತರನ್ನು ಮಠೀಯ ಗಾಂಧಿವಾದಿಗಳೆಂದು ಕರೆದು ತಮ್ಮ ವಿಶಿಷ್ಠತೆಯನ್ನು ಮೆರೆದುಕೊಂಡರು!

ಅದಕ್ಕೆ ತಕ್ಕ ಹಾಗೇ, ಸಮಾಜವಾದಿಗಳು ಗಾಂಧಿ ಸಿದ್ಧಾಂತವನ್ನು ವಿಮರ್ಶೆಗೆ ಒಳಪಡಿಸಿದರು. ಅದರ ಮೂಲ ಭಾವನೆಯನ್ನುಳಿಸಿಕೊಂಡೇ ಅದರ ಕಾರ್ಯಕ್ರಮಗಳನ್ನು ಆಧುನಿಕ ಸಂದರ್ಭಕ್ಕೆ ಅಳವಡಿಸುವ ಪ್ರಯತ್ನ ಮಾಡಿದರು. ಸ್ವಯಂ ಸಂಕಷ್ಟದ ಮತ್ತು ಶುದ್ಧೀಕರಣದ ಅಹಿಂಸಾ ತತ್ವವನ್ನಾಧರಿಸಿದ ಸತ್ಯಾಗ್ರಹಕ್ಕೆ, ಸಾತ್ವಿಕ ಕ್ರೋಧಧ ಹೆಸರಿನಲ್ಲಿ ಪ್ರತಿಭಟನೆಯ ರೂಪ ನೀಡಿದರು. ಚರಕಾ ಪ್ರತಿನಿಧಿಸುವ ಅತಿ ವೈಯುಕ್ತಿಕ ಸ್ತರದ ದೈಹಿಕ ದುಡಿಮೆಯ ಸಂಸ್ಕೃತಿಯನ್ನು ವಿಸ್ತರಿಸಿ, ವಿದ್ಯುತ್ ಮತ್ತು ಇತರೆ ನೈಸರ್ಗಿಕ ಇಂಧನಗಳಿಂದ ಚಾಲಿತವಾಗುವ ಸಣ್ಣ ಪ್ರಮಾಣದ ಸ್ಥಳೀಯ ಯಂತ್ರ ಸಂಸ್ಕೃತಿಯನ್ನು ಪ್ರತಿಪಾದಿಸಿದರು. ಆದರೆ ಹೀಗೆ ಪ್ರತಿಪಾದಿಸುವಾಗ, ಆ ಪ್ರತಿಪಾದನೆಯ ಸರ್ವಶ್ರೇಷ್ಠತೆಯ ಹಮ್ಮಿನಲ್ಲಿ ತಮ್ಮನ್ನು ತಾವೇ ಕಳೆದುಕೊಂಡರು. ಹಾಗೇ, ತಮ್ಮ ಪ್ರಜ್ಞೆಯ ಗಾಂಧಿ ಕೇಂದ್ರವನ್ನೂ. ಇದು ಅವರು ತಮಗೆ ತಾವೇ ವಿಧಿಸಿಕೊಂಡ ಆಧುನಿಕತೆಯ ಶಾಪ. ಇದು ಆಧುನಿಕ ಜ್ಞಾನದಲ್ಲೇ ಅಂತರ್ಗತವಾಗಿರುವ ಹಮ್ಮಿನ ಪರಿಣಾಮ. ಗಾಂಧಿ ದೇವರಲ್ಲಿನ ತಮ್ಮ ನಂಬಿಕೆಯ ಮೂಲಕ ರಕ್ಷಣೆ ಪಡೆಯಲೆತ್ನಿಸಿದ್ದು ಇಂತಹ ಪರಿಣಾಮಗಳ ವಿರುದ್ಧವೇ. ಈ ರಕ್ಷಣೆಗಾಗಿ ಅವರು ರೂಪಿಸಿಕೊಂಡ ನಿಯಮಗಳನ್ನೇ ಅವರು ಧರ್ಮ ಎಂದು ಕರೆದದ್ದು. ಆಧುನಿಕತೆಯ ವೈಚಾರಿಕ ಶಿಶುಗಳಾದ ಫ್ಯಾಸಿಸ್ಟರಿಗೆ ಮತ್ತು ಕಮ್ಯುನಿಸ್ಟರಿಗೆ ಉತ್ತರವಾಗಹೋದ ಸಮಾಜವಾದಿಗಳೂ ಈ ಶಿಶುತ್ವಕ್ಕ್ಕೆ ಬಲಿಯಾದದ್ದೊಂದು ವಿಪರ್ಯಾಸ!

ಆದರೆ ಸಮಾಜವಾದಿಗಳು ಗಾಂಧೀಜಿಯ ಈ ದೇವರನ್ನೂ, ಧರ್ಮವನ್ನೂ ನಂಬದೇ ಹೋದರು. ಇವುಗಳ ಬಗ್ಗೆ ಅವರ ಔದಾಸೀನ್ಯ ಎಷ್ಟಿತ್ತೆಂದರೆ, ಈ ದೇವರು ಮತ್ತು ಧರ್ಮಗಳನ್ನು ಸಮಾಜವಾದಿ ರಾಜಕಾರಣಕ್ಕೆ ತಮ್ಮದೇ ರೀತಿಯಲ್ಲಿ ಅಳವಡಿಸಿಕೊಳ್ಳುವ ಎಚ್ಚರವನ್ನೂ ವಹಿಸದೇ ಹೋದರು. ಇದು ಗಾಂಧಿ ಕಂಡುಕೊಂಡಿದ್ದ, ರಾಜಕಾರಣಕ್ಕೆ ಅಗತ್ಯವಾದ ಅಧ್ಯಾತ್ಮಿಕತೆಯ ನಾಶವೇ ಆಗಿತ್ತು. ಈ ಬಗ್ಗೆ ಗಾಂಧಿ ಸಮಾಜವಾದಿಗಳಿಗೆ ವೈಯುಕ್ತಿಕವಾಗಿ ಮತ್ತು ಸಾಮಾಜಿಕವಾಗಿ 'ಬುದ್ಧಿ' ಹೇಳುತ್ತಲೇ ಇದ್ದರೂ, ಅವರು ತಾವು ಬೆಳೆಸಿಕೊಂಡಿದ್ದ ಕಾಂಗ್ರೆಸ್ ವೈರದ ಅಂಧತೆಯಲ್ಲೋ, ತಮ್ಮ ತಾತ್ವಿಕ ವಿಶಿಷ್ಟತೆಯ ಹುರುಪಿನಲ್ಲೋ ಅದನ್ನು ಆಳದಲ್ಲಿ ಅರ್ಥ ಮಾಡಿಕೊಳ್ಳದೇ ಹೋದರು. ಉದಾಹರಣೆಗೆ, ಗಾಂಧಿ - ಲೋಹಿಯಾರ ಮೊದಲ ವೈಚಾರಿಕ ಮುಖಾಮುಖಿಯಲ್ಲೇ ಸಮಾಜವಾದಿಗಳಿಗೆ ಒಂದು ದೊಡ್ಡ ಪಾಠವಿತ್ತು. 1935ರಲ್ಲಿ ಲೋಹಿಯಾ ತಾವು ಕಾಂಗ್ರೆಸ್ ಸೋಶಲಿಸ್ಟ್ ಪಕ್ಷಕ್ಕಾಗಿ ಸಂಪಾದಿಸುತ್ತಿದ್ದ ಅದೇ ಹೆಸರಿನ ಪತ್ರಿಕೆಯಲ್ಲಿ, ಗಾಂಧಿ ಆಗ ತಮ್ಮ ಚಳುವಳಿಗೆ ಆಗಿದ್ದ ಹಿನ್ನಡೆಯನ್ನು ತುಂಬಿಕೊಳ್ಳಲು ಬಲವಾಗಿ ಪ್ರತಿಪಾದಿಸುತ್ತಿದ್ದ ಖಾದಿ ಮತ್ತು ಗ್ರಾಮೋದ್ಯೋಗ ಕಾರ್ಯಕ್ರಮವನ್ನು ಕಟುವಾಗಿ ಟೀಕಿಸಿ ಬರೆದ ಲೇಖನದ ಪ್ರತಿಯೊಂದನ್ನು ಗಾಂಧೀಜಿಗೆ ಕಳಿಸಿ ಅವರ ಪ್ರತಿಕ್ರಿಯೆಯನ್ನು ಕೋರಿದ್ದರು. ಆದರೆ ಗಾಂಧಿ ಉತ್ತರಿಸಲಿಲ್ಲ. ಗಾಬರಿಯಾದ ಲೋಹಿಯಾ ಏಕೆಂದು ವಿಚಾರಿಸಿದಾಗ ಗಾಂಧಿ ಪ್ರತಿಕ್ರಿಯಿಸಿದ್ದು ಹೀಗೆ: 'ಎದುರು ಪಕ್ಷದ ವಾದವನ್ನು ಆಲಿಸುವ ತಾಳ್ಮೆ ಇಲ್ಲದವರೊಂದಿಗೆ ನನ್ನಂಥವರಿಗೆ ಸಂವಾದ ಅಸಾಧ್ಯ'.

ಲೋಹಿಯಾ ತಮ್ಮ ಲೇಖನದಲ್ಲಿ ಬಳಸಿದ್ದ ಒರಟು ಭಾಷೆಗಾಗಿ ವಿಷಾದ ವ್ಯಕ್ತಪಡಿಸಿ ನಂತರದ ದಿನಗಳಲ್ಲಿ ಗಾಂಧೀಜಿಯ ಆಪ್ತ ಶಿಷ್ಯರಾದರು. ಇದಷ್ಟೇ ಅಲ್ಲ, 'ಕಾಂಗ್ರೆಸ್ ಸೋಶಲಿಸ್ಟ್' ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ತಮ್ಮ ಲೇಖನಗಳನ್ನು ಗಾಂಧೀಜಿ ತಮ್ಮ 'ಹರಿಜನ' ಪತ್ರಿಕೆಯಲ್ಲಿ ಪುರ್ನಮುದ್ರಿಸತೊಡಗಿದಾಗ ಲೋಹಿಯಾ ವ್ಯಕ್ತಪಡಿಸಿದ ಸಂತೋಷ ಮತ್ತು ಆಶ್ಚರ್ಯಗಳಿಗೆ ಗಾಂಧಿ ಪ್ರತಿಕ್ರಿಯಿಸಿದ್ದು ಹೀಗೆ: 'ಕಲಿಯಬೇಕಾದ್ದು ರಾವಣನಲ್ಲೂ ಸಾಕಷ್ಟಿದೆ. ಎಷ್ಟಾದರೂ ರಾವಣ ಮಹಾ ವಿದ್ಯಾವಂತ!' ಲೋಹಿಯಾ ಇದರಿಂದ ಸ್ವಲ್ಪ ಮುಜುಗರಕ್ಕೊಳಗಾದರೂ, ಗಾಂಧಿಯಿಂದ ವಿದ್ಯಾವಂತನೆಂದೆನಿಸಿಕೊಂಡ ಹೆಮ್ಮೆಯಲ್ಲಿಯೇ ಮುಳುಗಿ ಹೋದರೆಂದು ಕಾಣಿಸುತ್ತದೆ. ಏಕೆಂದರೆ ಸಮಾಜವಾದಿಗಳಲ್ಲಿ - ವಿಶೇಷವಾಗಿ ಲೋಹಿಯಾ ಶಿಷ್ಯರಲ್ಲಿ - ಈ ತಾಳ್ಮೆಗೇಡಿತನ ಸುಧಾರಿಸಲೇ ಇಲ್ಲ.

ಸ್ವಾತಂತ್ರ್ಯಪೂರ್ವದಲ್ಲೇ ನೆಹರೂ ನೇತೃತ್ವದ ಕಾಂಗ್ರೆಸ್ ಉಸ್ತುವಾರಿ ಸರ್ಕಾರ ಕೋಮು ಹಿಂಸಾಚಾರವನ್ನು ಹತ್ತಿಕ್ಕುವಲ್ಲಿ ಮತ್ತು ಸಾಮಾನ್ಯ ಆಡಳಿತದಲ್ಲಿ ಅನುಸರಿಸತೊಡಗಿದ್ದ ನೀತಿಗಳನ್ನು ಕಂಡು ಗಾಂಧೀಜಿ ವಿಚಲಿತರಾಗಿದ್ದರು. ಆ ಸಂದರ್ಭದಲ್ಲಿ ಅವರ ಬಳಿ ಹೋದ ಸಮಾಜವಾದಿಗಳ ನಿಯೋಗವೊಂದು, ತಮ್ಮ ನೇತೃತ್ವವನ್ನು ಅವರು ವಹಿಸಿಕೊಳ್ಳುವಂತೆ ಕೋರಿತ್ತು. ನಿಜ, ಕಾಂಗ್ರೆಸ್ಸಿಗರ ಬಗ್ಗೆ ನಂಬಿಕೆ ಕಳೆದುಕೊಳ್ಳಲಾರಂಭಿಸಿದ್ದ ಗಾಂಧಿ ಆಗ ಸಮಾಜವಾದಿಗಳೊಂದಿಗೆ ಹಲವು ನೆಲೆಗಳಲ್ಲಿ ಮಾತುಕತೆ ಆರಂಭಿಸಿದ್ದರು. ಆದರೆ ಈ ಸಂದರ್ಭದಲ್ಲಿ ಅವರು ಸಮಾಜವಾದಿಗಳಿಗೆ ಹೇಳಿದ್ದು:' ನಾನು ಹುಟ್ಟಾ ಸಮಾಜವಾದಿ. 1942ರಲ್ಲಿ 'ಭಾರತ ಬಿಟ್ಟು ತೊಲಗಿ' ಚಳುವಳಿಯಲ್ಲಿ ನೀವು ತೋರಿದ ಧೀರತೆಯನ್ನು ಮೆಚ್ಚುವೆನಾದರೂ, ನೀವು ತಲೆಮರೆಸಿಕೊಂಡು ನಡೆಸಿದ ವಿಧ್ವಂಸಕ ಕೃತ್ಯಗಳ ಮೂಲಕ ಹಿಂಸೆಗೆ ನೀಡಿದ ಮಾನ್ಯತೆಯೇ ಇಂದು ಕೋಮು ಹಿಂಸಾಚಾರಕ್ಕೆ ಅವಕಾಶ ನೀಡಿರುವುದು ಎಂಬುದು ನನ್ನ ಖಚಿತ ನಂಬಿಕೆ. ಇದನ್ನರ್ಥ ಮಾಡಿಕೊಂಡು ನೀವು ಅಹಿಂಸೆಗೆ ಬದ್ಧರಾಗಿ, ದೇವರಲ್ಲಿ ನಂಬಿಕೆಯಿಟ್ಟು ಹಳ್ಳಿಗಳಿಗೆ ತೆರಳಿ. ಅಸ್ಪೃಶ್ಯರು ಮತ್ತು ಮಹಿಳೆಯರ ನಡುವೆ ಕೆಲಸ ಮಾಡಲಾರಂಭಿಸಿ. ಅಂದೇ ನಾನು ನಿಮ್ಮ ಪಕ್ಷದ ಅಧ್ಯಕ್ಷನಾಗುವೆ'

ಆಗಲೂ, ತಮ್ಮನ್ನು ಸಮಾಜವಾದಿ ಎಂದು ಕರೆದುಕೊಳ್ಳುವಷ್ಟು ಬದಲಾಗಿದ್ದ ಗಾಂಧಿ ಏನು ಹೇಳುತ್ತಿದ್ದಾರೆಂದು ಸಮಾಜವಾದಿಗಳು ತಾಳ್ಮೆಯಿಂದ ಕೇಳುವ ಮತ್ತು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ. ಅವರಿಗೆ ಇವೆಲ್ಲ ತಮ್ಮ 'ವಿಶಿಷ್ಟತೆ'ಯನ್ನು ಹಾಳು ಮಾಡುವ ಸನಾತನಿ ಮುದುಕನೊಬ್ಬನ ಅರಳು ಮರುಳು ಮಾತುಗಳಾಗಷ್ಟೆ ಕೇಳಿಸಿರಬೇಕು. ನಂತರವೂ ಅಷ್ಟೆ, ತಮ್ಮ ಅಂತಿಮ ದಿನಗಳ ನೌಖಾಲಿ ಯಾತ್ರೆಯ ಹೊತ್ತಿಗೆ ಗಾಂಧಿ ಲೋಹಿಯಾರೊಂದಿಗೆ ನಡೆಸಿದ ಖಾಸಗಿ ಮಾತುಕತೆಗಳೂ, ಸಮಾಜವಾದಿಗಳು ಗಾಂಧೀಜಿಯ ಅಧ್ಯಾತ್ಮಿಕತೆಯನ್ನು ಅನುಮಾನದಿಂದಲೇ ನೋಡುತ್ತಿದ್ದರು ಎಂಬುದನ್ನು ಸೂಚಿಸುತ್ತದೆ. ಗಾಂಧಿ ಲೋಹಿಯಾರಲ್ಲಿ ದೊಡ್ಡ ಜನನಾಯಕನಾಗುವ ಲಕ್ಷಣಗಳನ್ನು ಗುರುತಿಸಿ, ಅದಕ್ಕಾಗಿ ದೇವರಲ್ಲಿ ನಂಬಿಕೆ ಇರಬೇಕು, ಸಿಗರೇಟ್ - ಚಹಾ - ಕಾಫಿ ಸೇವನೆಯನ್ನು ಬಿಡಬೇಕು ಎಂದು ಈ ಮಾತುಕತೆಯಲ್ಲಿ ಅವರಿಗೆ ಸೂಚಿಸಿದ್ದರು. ಸಮಾಜವಾದಿಯೊಬ್ಬ ಜನರೊಂದಿಗೆ ಗುರುತಿಸಿಕೊಳ್ಳಲು ಇವೆಲ್ಲ ಅಗತ್ಯವೆಂದು ಗಾಂಧಿ ಭಾವಿಸಿದ್ದರು. ಲೋಹಿಯಾಗೆ ಗಾಂಧಿ ದೇವರೆಂದು ನಂಬಿದ್ದುದು ಏನನ್ನು ಮತ್ತು ಸಿಗರೇಟ್ ಇತ್ಯಾದಿಗಳ ಸೇವನೆಯ ತ್ಯಾಗದ ಸೂಚನೆಯ ಹಿಂದಿನ ಸಂದೇಶವೇನು ಎಂಬುದೂ ಗೊತ್ತಿತ್ತು. ಅದರೂ ಅಸ್ತಿತ್ವವಾದಿ ದ್ವಂದ್ವಕ್ಕೆ ಸಿಕ್ಕ ಅವರು ಈ ವಿಷಯವಾಗಿ ಗಾಂಧಿಗೆ ಉತ್ತರ ಕೊಡಲು ಮೂರು ದಿನಗಳ ಕಾಲಾವಕಾಶ ಕೇಳಿದರು. ಆದರೆ ಆ ಮೂರು ದಿನಗಳಲ್ಲಿ ಗಾಂಧೀಜಿಯ ಕೊಲೆಯಾಗಿತ್ತು...

ಗಾಂಧೀಜಿಯೇ ಇಲ್ಲವಾದ ನಂತರ, ಈ ವಿಷಯಗಳ ಬಗೆಗೆಲ್ಲ ಯಾರಿಗಾಗಿ ಯೋಚಿಸಬೇಕು ಎಂಬ ಹತಾಶೆಯಲ್ಲಿ ಲೋಹಿಯಾ 'ನನ್ನಂತೆ ನಾನು' ಎಂಬ ಅಸ್ತಿತ್ವವಾದಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದರು! ಅದನ್ನು ತಮ್ಮ ಸಮಾಜವಾದಿ ಚಳುವಳಿಯ ಒಂದು ಭಾಗವಾಗಿ ಅಳವಡಿಸಿ, ಮನುಷ್ಯನ ಖಾಸಗಿತನದ ರಕ್ಷಣೆಯನ್ನು ಒಂದು ಆಧುನಿಕ ಮೌಲ್ಯವಾಗಿ ಪ್ರತಿಪಾದಿಸಿದರು. ಗಾಂಧೀಜಿಯೂ ಮನುಷ್ಯನ ಖಾಸಗಿತನವನ್ನು ಗೌರವಿಸುತ್ತಿದ್ದರು. ಆದರೆ ಅವರು ಈ ಸ್ವಾತಂತ್ರ್ಯವನ್ನು ತಮ್ಮ 'ಸ್ವರಾಜ್ಯ' ಕಲ್ಪನೆಯ ಭಾಗವನ್ನಾಗಿ ನಿರೂಪಿಸಿದ್ದರು: ಮನುಷ್ಯ ತನ್ನ ಸಾಮಾಜಿಕ ಧರ್ಮವನ್ನು ಅನುಸರಿಸುವ ಕರ್ತವ್ಯದ ಭಾಗವಾಗಿಯೇ ಇಂತಹ ವೈಯುಕ್ತಿಕ ಹಕ್ಕುಗಳನ್ನು ಕಂಡುಕೊಂಡು ಆನಂದಿಸಬೇಕು ಎಂದವರು ನಂಬಿದ್ದರು.

ಸಮಾಜವಾದಿಗಳಿಗೆ ಇದು ಅರ್ಥವಾದಂತೆ ತೋರಲಿಲ್ಲ. ಹಾಗಾಗಿಯೇ ಅವರು ಕೆಟ್ಟದ್ದನ್ನು ಕೆಡವಲು ಯತ್ನಿಸಿದರೇ ಹೊರತು, ಒಳ್ಳೆಯದನ್ನು ಕಟ್ಟುವುದರ ಭಾಗವಾಗಿಯೇ ಕೆಟ್ಟದ್ದನ್ನು ಕೆಡವಬೇಕೆಂಬ ಎಂಬ ಅರಿವು ಅವರಲ್ಲಿ ಮೂಡಲಿಲ್ಲ. ನಮಗಾದರೂ ಇದು ಅರ್ಥವಾಗುತ್ತಿರುವುದು ಇಷ್ಟು ವರ್ಷಗಳ ನಂತರ: ಗಾಂಧಿ ಇದನ್ನು ತಮ್ಮ 'ಹಿಂದ್ ಸ್ವರಾಜ್'ನಲ್ಲಿ ಹೇಳಿದ ನೂರು ವರ್ಷಗಳ ನಂತರ! ನಮ್ಮ ಒಟ್ಟು ಬದುಕು, ಈ ಜಾಗತೀಕರಣದ ಹಲವು ಸುಖಗಳ ಮಧ್ಯೆಯೂ ಮೂಲತಃ ದುಃಖಮಯವೇ ಆಗಿದೆ ಏಕೆ ಎಂಬ ಪ್ರಶ್ನೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ.

ಹಾಗಾಗಿ ಅಳಿದುಳಿದಿರುವ ಸಮಾಜವಾದಿಗಳು ಇಂದು ತಮ್ಮಲ್ಲಿ ಅಳಿದುಳಿದಿರುವ ಸಮಾಜವಾದಿ ನಂಬಿಕೆಯನ್ನು ಪುರ್ನಸಂಘಟಿಸಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಗಾಂಧಿಯನ್ನು ಇಂದಿನ ಸಂದರ್ಭಕ್ಕೆ ಪುನರನ್ವೇಷಿಸಿಕೊಳ್ಳುವುದೇ ಆಗಿದೆ.
_________________________________________________________________

*ಇದೇ ಅಕ್ಟೋಬರ್ 12ರಂದು ಮೈಸೂರಿನಲ್ಲಿ ನಡೆದ 'ಲೋಹಿಯಾ ನೆನಪು' ಮತ್ತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಡಿದ ಮಾತುಗಳು.