ಲೋಹಿಯಾ ವಿಚಾರಗಳ ಒಂದು ವಿಮರ್ಶೆ

ಲೋಹಿಯಾ ವಿಚಾರಗಳ ಒಂದು ವಿಮರ್ಶೆ

ಪುಸ್ತಕದ ಲೇಖಕ/ಕವಿಯ ಹೆಸರು
ಯಡೂರ ಮಹಾಬಲ
ಪ್ರಕಾಶಕರು
ಚಿಂತನ ಚಿಲುಮೆ ಪ್ರಕಾಶನ, ಬೆಂಗಳೂರು - ೫೬೦೦೧೮
ಪುಸ್ತಕದ ಬೆಲೆ
ರೂ. 200.00

ಮೇಲುವರ್ಗದ ಜನರ ಹೃದಯ ಪರಿವರ್ತನೆಯ ' ಲೋಹಿಯಾ ಸಮಾಜವಾದ ' , ಮಧ್ಯಮ ವರ್ಗದ ಆದರ್ಶ , ಆಶಯಗಳ ಹೊಸನಾಗರೀಕತೆ , ಗುರಿ ತಲುಪಲು ಹಿಂಸೆ ಅನಿವಾರ್ಯವೇ , ಎನ್ನುವುದರ ಕುರಿತು - ' ಹಿಂಸೆ ಮತ್ತು ಅಹಿಂಸೆಯ ಪ್ರಶ್ನೆ ' , ವರ್ಗ ಸಂಘರ್ಷದ ಭಾಗವಾಗಿ ನಡೆಯಬೇಕಾದ ಜಾತಿ ವಿನಾಶದ ಕುರಿತಾದ - ' ಭಾರತದ ಜಾತಿ ಸಮಸ್ಯೆ ' , ' ಭಾರತ - ಚೀನಾ ಗಡಿವಿವಾದ ' ಹಾಗೂ ' ಭಾರತದ ಸೋಷಲಿಸ್ಟ್ ರಾಜಕೀಯ ' ಕುರಿತು ಪುಸ್ತಕದ ವಿಷಯ ವ್ಯಾಪ್ತಿ ಹರಡಿದೆ . ಜಾತಿ ಮತ್ತು ವರ್ಗಗಳ ಸ್ವರೂಪ ಮತ್ತು ಚಲನೆಗಳನ್ನು ಲೋಹಿಯಾ ಪರಿಗ್ರಹಿಸಿರುವ ರೀತಿ ಏಕೆ ಸರಿಯಾದ ಕ್ರಮವಲ್ಲ ಮತ್ತು ವೈಜ್ಞಾನಿಕ ನಿಷ್ಕರ್ಷೆಗೆ ಒಳಪಡಿಸಿದಾಗ ಸತ್ಯಕ್ಕೆ ಪೂರಕವಾಗುವುದಿಲ್ಲವೆಂಬುದನ್ನು ಲೇಖಕರಾದ ಯಡೂರು ಮಹಾಬಲ ಸವಿಸ್ತಾರವಾಗಿ ಚರ್ಚಿಸಿದ್ದಾರೆ . ಮಾರ್ಕ್ಸನ ಅರ್ಥಶಾಸ್ತ್ರದ ಕುರಿತಾಗಿ ಲೋಹಿಯಾ ತಳೆದಿರುವ ನಿಲುವುಗಳು ತಲೆಬುಡರಹಿತ ಎನ್ನುವುದರ ಜೊತೆಯಲ್ಲಿ ಅವರು ಲೋಹಿಯಾರವರ ವರ್ಗ ಎಂದರೆ ಚಲನಸಾಮರ್ಥ್ಯವುಳ್ಳ ಜಾತಿ ಎಂದು ಹೇಳುವುದನ್ನು ಸಾಧಾರವಾಗಿ ತಳ್ಳಿಹಾಕಿದ್ದಾರೆ . ಇತಿಹಾಸದ ಚಲನೆಯ ಕುರಿತಾಗಿ ಹಾಗೂ ರಾಜಕೀಯ ಸಮಾನತೆಯ ಕುರಿತಾಗಿ ' ಲೋಹಿಯಾ ಇತಿಹಾಸ ದೃಷ್ಟಿ ' ಹಾಗೂ ' ಲೋಹಿಯಾ ಸಮಾಜವಾದ ' ಅಧ್ಯಾಯಗಳಲ್ಲಿ ಸಾದ್ಯಂತವಾಗಿ ಚರ್ಚಿಸಿ ಬರಿಯ ಆದರ್ಶಗಳಿಂದ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ ಎನ್ನುವ ಸಕಾರಣ ವಾದ ಮಂಡಿಸಿದ್ದಾರೆ . ಸೈದ್ಧಾಂತಿಕವಾಗಿ ಆರೋಗ್ಯಪೂರ್ಣ ಚರ್ಚೆ ನಡೆಸುವುದು , ಚಳುವಳಿಗಳನ್ನು ಹಾಗೂ ಜನಪರ ಸಂಘಟನೆಯನ್ನು ರೂಪಿಸಲು ಅತ್ಯಗತ್ಯ . ಈ ದಿಸೆಯಲ್ಲಿ ಯಡೂರ ಮಹಾಬಲರವರ ಈ ಪುಸ್ತಕ ತುಂಬಾ ಪ್ರಸ್ತುತ .