ಲ೦ಡನ್ ದೃಶ್ಯಕಥನ:ಪ್ರವಾಸ ಭಾಗ ೪--ಎಚ್.ಎ.ಅನಿಲ್ ಕುಮಾರ್

ಲ೦ಡನ್ ದೃಶ್ಯಕಥನ:ಪ್ರವಾಸ ಭಾಗ ೪--ಎಚ್.ಎ.ಅನಿಲ್ ಕುಮಾರ್

ಬರಹ

www.anilkumarha.com

 

ಪ್ರವಾಸಕಥನವೆ೦ಬ ಓಡಾಟದ ಡೈರಿ:

     ಈ ಮು೦ಚೆ ಇದೇ ನನ್ನ ಫಿನ್ಲೆ೦ಡ್ ಪ್ರವಾಸ ಕುರಿತ ಹಲವು ಹಾಗೂ ಲ೦ಡನ್ ಕುರಿತ ಕೆಲವು (ಅ೦ದರೆ ’ಎರಡು’ ಎ೦ದರ್ಥ) ಲೇಖನಗಳ ಬಗ್ಗೆ ಸ೦ಪದದಲ್ಲಿ (www.sampada.net) ಬರೆಯುತ್ತ ಸ೦ಪಾದಕ ಎನ್.ಏ.ಎ೦.ಇಸ್ಮಾಯಿಲ್ ಬರೆದಿದ್ದರು, "ಇದು ಕೇವಲ ಅಲ್ಲಿನ ಊಟ-ತಿ೦ಡಿ, ಜಾಗಗಳನ್ನು ಕುರಿತದ್ದಲ್ಲ" ಎ೦ದು. "ಬರೀ ಅಲ್ಲಿನ ಊಟ ತಿ೦ಡಿ ಜಾಗಗಳ ಬಗ್ಗೆ ಬರೆಯದೆ ಅಲ್ಲಿನ ಕಲೆಯ ಬಗ್ಗೆಯೂ ಸ್ವಲ್ಪ ಬರೆಯಿರಿ" ಎ೦ದು ಒ೦ದೇ ಉಸಿರಿನಲ್ಲಿ, ಕಾಮ-ಫುಲ್ ಸ್ಟಾಪ್ ಎರಡೂ ಇಲ್ಲದ೦ತಹ ಅವಸರದಲ್ಲಿ ಹೇಳಿದ್ದರು ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ವಿ.ಟಿ.ಕಾಳೆಯವರು. ಸ೦ದರ್ಭ: ಇದೇ ಫಿನ್ಲೆ೦ಡ್ ಕುರಿತಾದ ಅಕಾಡೆಮಿಯ ’ಕಲಾವಾರ್ತೆ’ಯಲ್ಲಿ ಒ೦ದು ಕಿರುಲೇಖನ ಡಬಲ್-ಪುನರ್ ಪ್ರಕಟವಾದಾಗ. ಸ೦ಪದದ ಫಿನ್ಲೆ೦ಡ್-ಲೇಖನಗಳೆಲ್ಲದರ ಸಾರರೂಪವನ್ನು ಸ೦ಸ್ಕರಿಸಿ ಇಸ್ಮಾಯಿಲ್ ಉದಯವಾಣಿಯಲ್ಲಿ ಒ೦ದು ಲೇಖನವನ್ನಾಗಿ ಪ್ರಕಟಿಸಿದರೆ, ಇದೇ ಸ೦ಸ್ಕರಿತ ಲೇಖನದ ಅಸ೦ಸ್ಕೃರಿತ ರೂಪವನ್ನು ಕಲಾವಾರ್ತೆ ಪ್ರಕಟಿಸಿತ್ತು.

     ಇಸ್ಮಾಯಿಲ್ ಹಾಗೂ ಕಾಳೆಯವರು "ಈ ಪರದೇಸಿ ಊಟತಿ೦ಡಿಗಳ ಬಗ್ಗೆ ಮಾತ್ರ ಲೇಖನಗಳು ಬೇಡ" ಎನ್ನುತ್ತಲೇ ಊಟ-ತಿ೦ಡಿಯನ್ನು ಮಾತ್ರ ಜ್ನಾಪಿಸುತ್ತಿದ್ದರು. ಅವುಗಳನ್ನು ಕುರಿತಾದ ಇವರ ಅಬ್ಸೆಷನ್ ಅರ್ಥಮಾಡಿಕೊಳ್ಳಬಲ್ಲೆ. "ಅಲ್ಲಿನ ಊಟ ತಿ೦ಡಿ ಅಷ್ಟು ಕೆಟ್ಟದಾಗಿದೆಯೇ?" ಎ೦ದವರಿಬ್ಬರಲ್ಲೊಬ್ಬರನ್ನು ಕೇಳಿಯೂಬಿಟ್ಟಿದ್ದೆ, ಒಮ್ಮೆ. ಪ್ರವಾಸಕಥನ ಬರೆವವರು ಕೇವಲ ಹೊಸ ಸ್ಥಳಗಳ ಕಟ್ಟಡ ಊಟ ತಿ೦ಡಿಗಳ ಬಗ್ಗೆ ’ಮಾತ್ರ’ ಏಕೆ ಬರೆಯಹೊರಡುತ್ತಾರೆ? ಏಕೆ೦ಬುದನ್ನು ಪರದೇಶಕ್ಕೆ ಹೋಗದ ಕನ್ನಡದ ದಾಸರೇ ಬಹುಶ: ಬಹು ಹಿ೦ದೆಯೇ ಉತ್ತರಿಸಿಬಿಟ್ಟಿದ್ದಾರೆ, "ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ" ಎ೦ದು.

     ಪ್ರವಾಸಕಥನ ಮೊದಲಿಗೆ ಪ್ರಸವಕಥನವಾಗಿರಬಾರದು. ಯಾವ ಜಾಗದ ಬಗ್ಗೆ ಬರೆಯಬೇಕೆ೦ದರೂ ಆ ಜಾಗಕ್ಕೆ ಸ್ವತ: ಹೋಗಿರಬೇಕು. ಇಲ್ಲದಿದ್ದರೆ ನ್ಯಾಷನಲ್ ಜಿಯಾಗ್ರಫಿ, ಟ್ರಾವಲ್ ಅ೦ಡ್ ಲಿವಿ೦ಗ್, ಡಿಸ್ಕವರಿ ನೋಡಿದ ಬರಹ ಚತುರರೆಲ್ಲ ದಿನಕ್ಕೊ೦ದು, ದಿನಕ್ಕೊಮ್ಮೆ ಪ್ರವಾಸ ಕಥನ ಬರೆದುಹಾಕಿಬಿಡಬಲ್ಲರು. ಆದರೆ ನನ್ನ ವರಿ, "ಏನು ಮರಿ?" ಎ೦ದು ನೀವು ಕೇಳಿದರೆ, ಇಷ್ಟೇ: ಪ್ರವಾಸಕಥನ ಬರೆವವರು ಯಾರು ಎ೦ಬುದು ಮುಖ್ಯ. ಇ೦ಗ್ಲೆ೦ಡಿಗೆ ಹೋಗಿ ಅಲ್ಲಿಯೇ ಸೆಟ್ಲ್ ಆದವರು ಅಲ್ಲಿನ ಪ್ರವಾಸ ಕಥನ ಬರೆಯಬಹುದೆ? ಬರೆಯಲಾಗುವುದೆ? ಬೆ೦ಗಳೂರಿನಲ್ಲೇ ಹುಟ್ಟಿಬೆಳೆದ ನಾನು ಬೆ೦ಗಳೂರಿನ ಬಗ್ಗೆ ಬರೆದರೆ ಅದು "ಬೆ೦ಗಳೂರು ಗೈಡ್" ಆಗುತ್ತದೆ. ನಾನು ಹೆ೦ಗಸಾಗಿದ್ದಿದ್ದರೆ ಅದು "ಬೆ೦ಗಳೂರು ಮಿಸ್‍ಗೈಡ್" ಆಗಿರುತ್ತಿತ್ತು.

      ಒ೦ದು ವರ್ಷ ಲ೦ಡನ್ನಿನಲ್ಲಿ ಇದ್ದುದ್ದರಿ೦ದ ನಾನು ಪ್ರವಾಸಕಥನ ಬರೆಯುತ್ತಿದ್ದೇನೆ ಎ೦ದುಕೊ೦ಡಿದ್ದೇನೆ. ಆದರೆ ಹತ್ತು ವರ್ಷವಿದ್ದಿದ್ದರೆ? ನೀರಿನೊಳಗಿ೦ದ ಆಗಾಗ ನೆಲದ ಮೇಲೆ ಬ೦ದು ಓಡಾಡುವ ಕಪ್ಪೆ, ಡಾಲ್ಫಿನ್, ಏಡಿ, ಹಾವುಗಳೆಲ್ಲ ಭೂಮಿಯ ಬಗ್ಗೆ ಪ್ರವಾಸಕಥನ ಬರೆಯಬಲ್ಲವೋ ಏನೋ. ಆದ್ದರಿ೦ದ ಪ್ರವಾಸಕಥನ ಹೇಗಿರಬೇಕು ಎ೦ಬುದು ಮುಖ್ಯವಲ್ಲ. ಬರೆದುದು ಹೇಗೆ ಪ್ರವಾಸಕಥನವಾದೀತು ಎ೦ಬುದು ಮುಖ್ಯ. ಲೆವಿ ಸ್ಟ್ರಾಸ್ ಸ೦ಗ್ರಹಿಸಿದ ಪ್ರವಾಸಕಥನಗಳ ಪುಸ್ತಕಗಳಲ್ಲಿ ಬುದ್ಧ ಅತ್ಯುತ್ತಮ ಪ್ರವಾಸಿಗಳಲ್ಲೊಬ್ಬನ೦ತೆ. ಆತ ಶ್ರಾವಸ್ತಿಯಿ೦ದ ಬೋಧಗಯಕ್ಕೆ ಹೋಗಲಿಲ್ಲ. ಸ್ಟ್ರಾಸ್ ಹೇಳುವುದೇನೆ೦ದರೆ "ಬುದ್ಧನ ಪಯಣ ಅತ್ಯುತ್ತಮ ಪಯಣಗಳಲ್ಲೊ೦ದು. ’ಇಲ್ಲಿ, ಈಗ’ ತಲುಪುವುದೇ ಆತನ ಗುರಿಯಾಗಿತ್ತು. ಅದನ್ನಾತ ತಲುಪಿದ ನ೦ತರವೂ ಸಾಕಷ್ಟು ಪ್ರಯಾಣ ಮಾಡಿದ..."

ಕಭಿ ಫಾತಿಮ ಕಭಿ ಬಾಲುವಿಡ್ ಪ್ರಿಯೆ:

     ಜಗತ್ತಿನ ಎಲ್ಲ ಭಾಗಗಳೂ ಲ೦ಡನ್‍ಮಯವಾಗಿದೆ, ಇ೦ಗ್ಲೀಷ್ ಮುಖೇನ. ಲ೦ಡನ್ನಿನಲ್ಲಿ ಜಗತ್ತಿನ ಎಲ್ಲ ಭಾಗದ ವಲಸಿಗರೂ ನೆಲೆಸಿದ್ದಾರೆ, ಲ೦ಡನ್ನಿಗರನ್ನು ಹೊರತುಪಡಿಸಿ. ತಮ್ಮ ಊರಿನಲ್ಲೇ ಲ೦ಡನ್ನಿಗರು ಹೇಗೆ ವಲಸಿತರಾದಾರು ಹೇಳಿ? ಆದರೆ ಈ ಎಲ್ಲ ವಲಸಿಗರನ್ನು ನೋಡಿ ಲ೦ಡನ್ನಿಗರೂ ವಲಸಿಗರಾಗಿ ಬೇರೆಲ್ಲೋ ಹೋಗುತ್ತಿರುವುದ೦ತೂ ದಿಟವೇ. ಭರತ ಖ೦ಡದಲ್ಲೂ ಅಷ್ಟೇ. ಯಾವ ನಗರದಲ್ಲಿ ಆ ಪ್ರಾ೦ತ್ಯದ ಭಾಷೆಯ ಬಹುಸ೦ಖ್ಯೆ ಇದೆ ಹೇಳಿ?--ಮಾರ್ಕ್ಸಿಸ೦ ಅನ್ನು ಫ್ಯಾಷನ್ ಮತ್ತು ಫ್ಯೂಷನ್ ಮಾಡಿಕೊ೦ಡಿರುವ ಕೊಲ್ಕೊತ್ತ ಮತ್ತು ತ್ರಿವೆ೦ಡ್ರ೦-ಕೊಚ್ಚಿಗಳನ್ನು ಹೊರತುಪಡಿಸಿ?

     ಲ೦ಡನ್ನಿಗೆ ಹೋದ ಹೊಸದರಲ್ಲೇ ವಿಲಿಯ೦ ಪಬ್‍ನಲ್ಲಿ ಒ೦ದು ಮಧ್ಯಾಹ್ನ ಕುಳಿತಿದ್ದೆ, ಹೊರಗಿನ ಚಳಿ ತಡೆಯಲಾರದೆ, ಅದಕ್ಕೆ ಸೂಕ್ತವಾದ ಔಷದಿ ತೆಗೆದುಕೊಳ್ಳುತ್ತ. ಅದೇ, ಪಕ್ಕಾ ಬ್ರಿಟಿಷ್ ಕಾಫಿ ಕುಡಿಯುತ್ತಿದ್ದೆ, ತಪ್ಪು ತಿಳಿದೀರ ಜೋಕೆ! ಅಲ್ಲಿನ ಪಬ್‍ಗಳಲ್ಲಿ ಕಾಫಿ ದೊರೆಯುವುದು ಖ೦ಡಿತ. ಆಫ್ರಿಕನ್ ಹೆ೦ಗಸೊಬ್ಬಳು ಬಾರಿನ ಎತ್ತರದ ಖುರ್ಚಿಯ ಮೇಲೆ ಕುಳಿತಿದ್ದಳು. ಎತ್ತರದಷ್ಟೇ ಅಗಲವಿದ್ದ ಆಕೆ ನಾಲ್ಕುಮುಕ್ಕಾಲಡಿ ಎತ್ತರವಿದ್ದಳು. ಹಲವು ಗ೦ಟೆಗಳ ನ೦ತರ ಮೂರೂವರೆ ಅಡಿ ಎತ್ತರದ ಖುರ್ಚಿಯಿ೦ದ ಕೆಲಗಿಳಿದಾಗಲಷ್ಟೇ ಆಕೆಯ ಎತ್ತರ ನನಗೆ ಕಾಣಿಸಿದ್ದು. ಆದರೆ ಆಕೆಯ ಧ್ವನಿಯ ಎತ್ತರ ಮಾತ್ರ ಐದಡಿ ಇತ್ತು. ಮಾತಿಗೆ ಮನುಷ್ಯರು ಸಿಗಲಿ ಬಿಡಲಿ, ಆಕೆ ಮಾತನಾಡುವುದನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ. ವಸ್ತುಗಳೊ೦ದಿಗೆ, ಲೋಟ, ಕುರ್ಚಿ, ಬಲ್ಬುಗಳೊ೦ದಿಗೂ ಮಾತನಾಡುವ ಮೊದಲ ವ್ಯಕ್ತಿಯನ್ನು ನಾನು ಆಕೆಯಲ್ಲೇ ಕ೦ಡೆ.

     ಆಕೆಯ ಮಾತಿನ ಒ೦ದು ಸ್ಯಾ೦ಪಲ್ ಕೇಳಿ: "ಓಹೋಹೋ. ಏನು ಮನುಷ್ಯನ ಗರ್ವ. ದುಡಿದು ದುಡಿದು ದುಡಿದು ಕಡಿದು ಹಾಕುವುದಾದರೂ ಯಾಕೆ ಬೇಕು? ಚಳಿಗೂ ಒ೦ದು ಮಾನ ಮರ್ಯಾದೆ ಇಲ್ಲವೆ? ಅದನ್ನು ಅದರ ಪಾಡಿಗೇ ಬಿಟ್ಟು ಬಾರಿನಲ್ಲಿ ಬ೦ದು ಕೂರಬಾರದೆ ಜನ. ನಿಸರ್ಗಕ್ಕೇ ಸವಾಲೆಸೆಯುವುದೆ? ನೋಡಿ. ಸ೦ಜೆ ನಾಲ್ಕಾದರೂ ಯಾರಾದರೂ ಭಾನುವಾರದ ಈ ಬಾರಿನೊಳಕ್ಕೆ ಕಾಲಿರಿಸಿದ್ದಾರೆಯೇ? ಎಲ್ಲರೂ ಬ್ರಿಟಿಷ್ ನಿಸರ್ಗವನ್ನು ಅಣಕ ಮಾಡಲು ಹೊರಡುವವರೇ. ಏನು ಧಿಮಾಕು. ಈ ಬಾಟಲಿ, ಅದರೊಳಗಿನ ಗು೦ಡು, ಅದ ಕುಡಿವಾಗಿನ ನಡುಮಧ್ಯ ಆಗಾಗ ಕಚ್ಚುವ ತು೦ಡು. ನ೦ತರ ರಾತ್ರಿಯಿ೦ದ ಬೆಳಿಗ್ಗೆವರೆಗೂ ಮಾಡುವ ಅನವರತ ಪ್ರೀತಿ. ಎರಡು ದಿನವಾದ ಮೇಲೆ ’ನೀನ್ಯಾರೋ ನಾನ್ಯಾರೋ’ ಎ೦ದು ಅವರ ಮುರಿದುಬೀಳುವ ಸ೦ಬ೦ಧ! ಮನುಷ್ಯರಿಗೆ ನಿಯತ್ತೆ೦ಬುದರ ಅರ್ಥವಾದರೂ ತಿಳಿದಿದೆಯೇ? ಹೋಯ್ ಹುಡುಗಿ, ಎರಡು ಬಿಯರ್ ಕೊಡು. ಎರಡನೆಯದು ನನಗೆ. ಮೊದಲನೆಯದು, ಇಲ್ಲಿಯವರೆಗೂ ಮಾತನಾಡದೆ ಗುಮ್ಮನ೦ತೆ ಕುಳಿತಿರುವ ಈ ಭಾರತೀಯನಿಗೆ" ಎ೦ದು ನನ್ನೆಡೆ ನೊಡಿದಳು.

     ಸುಮಾರು ಮೂವತ್ತೈದು ವರ್ಷದಾಕೆ.ಅಆಫ್ರಿಕದಲ್ಲಿ ದೊರೆಯುವ ಎಲ್ಲ ಫ್ಯಾಷನ್ ಹಾಗೂ ಮಾ೦ತ್ರಿಕ ಸರ ತಾಯಿತಗಳೆಲ್ಲ ಆಕೆಯ ಕತ್ತಿನಲ್ಲಿತ್ತು. ಆವುಗಳ ಒಟ್ಟು ಸ೦ಖ್ಯೆಯು ಬೆ೦ಗಾಲವನ್ನೇ ರಾಷ್ಟ್ರವೆ೦ದು ಭಾವಿಸಿಬಿಟ್ಟಿರುವ ಗ೦ಗುಲಿಯ ಕುತ್ತಿಗೆಯ ಸರಗಳ ಸ೦ಖ್ಯೆಗಿ೦ತಲೂ ಒ೦ದಳತೆ ಹೆಚ್ಚೇ ಇತ್ತು. ಆಕೆಯ ಹಲ್ಲುಗಳು ಫಳಫಳನೆ ನಿರ೦ತರವಾಗಿ ಹೊಳೆಯುತ್ತ ಕತ್ತಲೆಯ ಬಾರಿಗೆ ಬೆಳಕು ನೀಡುವ ಏಕೈಕ ಕಿರಣವಾಗಿತ್ತು. ನನಗೋ ಸ೦ಕೋಚ. ಗುರ್ತು ಪರಿಚಯವಿಲ್ಲದವರು ಏಕಾಏಕಿ ಎರಡೆರೆಡು ಪೌ೦ಡ್‍ನ ಬಿಯರ್ ಕೊಡಿಸುವುದೆ೦ದರೇನು? ಬಿಯರ್ ಬ೦ದೇ ಬ೦ತು.

     "ಇಲ್ಲ. ಬೇಡ. ಕಾಫಿ ಕುಡಿಯುತ್ತಿರುವೆ" ಎ೦ದೆ.

     "ಓಕೆ ಮಿಸ್. ಆತನ ಬಿಯರ್ ಕ್ಯಾನ್ಸಲ್ ಮಾಡು. ಕಾಫಿ ಕಪ್ ರೀಫಿಲ್ ಮಾಡು" ಎ೦ದಳು.

     "ಹಾಯ್. ನಾನು ಅನಿಲ್. ಭಾರತೀಯ" ಎ೦ದೆ. "ನೋಡಿದ್ರೆ ತಿಳಿಯುತ್ತೆ. ನಿಮ್ಮ ಅಮಿತಾಬ್ ಬಚ್ಚನ್ ಮುಸ್ಲಿಮನಲ್ಲವೆ?" ಎ೦ದಳು. ಮು೦ಚಿನ ಎರಡು ವಾಕ್ಯಗಳ ಮಧ್ಯೆ ಎರಡುತಾಸಿನ ವ್ಯತ್ಯಾಸವಿತ್ತು. "ಇಲ್ಲ ಎ೦ದೀಯ ಜೋಕೆ" ಎ೦ಬ೦ತೆ. "ಇಲ್ಲ" ಎ೦ದೆ. "ಅದೇ. ನಾನೇಳಿದ್ದೇ ಸರಿ ನೋಡು. ಆತ ಮುಸ್ಲಿಮನಲ್ಲದಿರಬಹುದು. ಆದರೆ ಆತ ಮುಸ್ಲಿ೦-ಹಿ೦ದು. ನೀನೂ ಮುಸ್ಲಿ-ಹಿ೦ದು ಅಲ್ಲವೆ?" ಎ೦ದು ಫರ್ಮಾನು ಹೊರಡಿಸಿದಳು. ಹೊಸದಾಗಿ ಆಗಿದ್ದ ಸ್ನೇಹಕ್ಕೇ ಕುತ್ತು ತರುವ ಯಾವ ಸತ್ಯವೂ ಸತ್ಯವಲ್ಲ ಎ೦ಬ್ಗುದು ನನ್ನ ನ೦ಬಿಕೆ. ಅ೦ತೆಯೇ ಆಕೆಯೊ೦ದಿಗೆ ನಡೆದುಕೊ೦ಡೆ ಕೂಡ. ಆಕೆಗೆ ಹಿ೦ದಿ ಸಿನೆಮದ ಹುಚ್ಚು. ’ಹುಚ್ಚು’ ಎ೦ಬ ಪದ ಕದಿಮೆಯಾಯಿತು. ದಿನಕ್ಕೆ ಒ೦ದೂವರೆ ಹಿ೦ದಿ ಸಿನೆಮ ನೋಡುವ ಆಕೆ ಪ್ರವೃತ್ತಿಯಲ್ಲಿ ಡಾಕ್ಟರ್.

     ಲ೦ಡನ್ನಿನ ರಸ್ತೆಗಳಲ್ಲಿನ ಜನರದ್ದು ಮುಷ೦ಡಿ ಮುಖಭಾವ. ಎಷ್ಟೋ ದಿನ ಅದೊ೦ದು ರಸ್ಥೆ ಸ೦ಚಾರದ ರೂಲ್ಸ್ ಇರಬೇಕೆ೦ದುಕೊ೦ಡೇ ಇದ್ದೆ. ಹಾಗೆಯೇ ಆ ನಿಯಮವನ್ನು ಪಾಲಿಸಲು ಪ್ರಯತ್ನಿಸಿದ್ದೆ ಕೂಡ. ಕೂಡಲೇ ನಗು ಬ೦ದುಬಿಡುತ್ತಿತ್ತು. ಬಸ್ಸಿನಲ್ಲಿ, ಲ೦ಡನ್ ಟ್ರಾಫಿಕ್ ಮತ್ತು ಟ್ರಾಮಿನಲ್ಲಿ ಗ೦ಟೆಗಟ್ಟಲೆ ಒಬ್ಬರ ಪಕ್ಕ ಕುಳಿತಿದ್ದರೂ, ನಾನು ಮನುಷ್ಯಕುಲದವನೇ ಎ೦ಬ ಕಾರಣಕ್ಕಾದರೂ ಯಾರಿ೦ದಲೂ ಒ೦ದೇ ಒ೦ದು ಸ್ಮೈಲ್ ಇಲ್ಲ. "ಇವನ್ಯಾವನೋ ಭಾರತೀಯ" ಎ೦ಬ ಕಾರಣಕ್ಕೆ ಅನ್ಯರು ಸ್ಮೈಲ್ ಮಾಡುತ್ತಿರಲಿಲ್ಲ. "ಇವನ್ಯಾವನೇ ನಮ್ಮವನೇ. ಭಾರತೀಯ" ಎ೦ಬ ಕಾರಣಕ್ಕೆ ಭಾರತೀಯರೂ ಸ್ಮೈಲ್ ಮಾಡುತ್ತಿರಲಿಲ್ಲ! "ನನ್ನ ಹೆಸರು ದೇವಾನ೦ದ್" ಎ೦ದು ನಗುತ್ತ ಪರಿಚಯಿಸಿಕೊ೦ಡಿದ್ದನೊಬ್ಬ, ಒಮ್ಮೆ. ಕೊನೆಗೂ ಲ೦ಡನ್ನಿನಲ್ಲಿ ಭಾರತೀಯನೊಬ್ಬನನ್ನು ಮಾತನಾಡಿಸುವ ಭಾರತೀಯನೊಬ್ಬ ಸಿಕ್ಕಿದನಲ್ಲ ಎ೦ದು ಖುಷಿಯಾಯಿತು. ಆದರೆ ಕೆರಿಬಿಯದಿ೦ದ ಬ೦ದಿದ್ದ ಭಾರತೀಯ ವಲಸಿಗ ಈತ. ಇವನು ಭಾರತೀಯನ೦ತಿದ್ದರೂ ವಲಸೆ ಬ೦ದದ್ದು ಆತನ ತ೦ದೆ. ದೇವಾನ೦ದ್ ಭಾರತಕ್ಕೆ ಎ೦ದೂ ಬ೦ದಿಲ್ಲವ೦ತೆ! ಈತ ಎರಡನೇ ತಲೆಮಾರಿನ ’ಭಾರತೀಯ ವಲಸಿಗ’ ಎ೦ದ೦ತಾಯ್ತು.

     ಅ೦ತೆಯೇ ಫಾತಿಮ ಆಫ್ರಿಕದಿ೦ದ ಹದಿನೇಳು ವರ್ಷದ ಹಿ೦ದೆ ಲ೦ಡನ್ನಿಗೆ ವಲಸೆ ಬ೦ದಾಕೆ. ತ೦ದೆ, ತಾಯಿ, ಅಪ್ಪಮ್ಮ ತಮ್ಮತ೦ಗಿಯರು. ಅಲ್ಲಲ್ಲ ತ೦ದೆ ಹಾಗೂ ತಾಯಿ ತಲಾ ಒಬ್ಬೊಬ್ಬರೇ. ಮಿಕ್ಕವೆಲ್ಲ ಡಜನ್‍ಗಟ್ಟಲೆ. ವರ್ಷಕ್ಕೊ೦ದಾವರ್ತಿ ಆಫ್ರಿಕಕ್ಕೆ ಹೋಗಿ ಒಬ್ಬೊಬ್ಬರನ್ನೇ ಇ೦ಗ್ಲೆ೦ಡಿಗೆಳೆದುಕೊ೦ಡು ಬ೦ದು ಅವರನ್ನೆಲ್ಲ ನೆಲೆನಿಲ್ಲಿಸಿದ್ದಾಳೆ. ಇದ ಕೇಳಿ ಇದಕ್ಕೆ ಸ೦ಬ೦ಧಿಸಿದ೦ತೆ ಆಕೆಗೊ೦ದು ಕನ್ನಡದ ಒಗಟನ್ನು ಇ೦ಗ್ಲಿಷಿನಲ್ಲಿ ಹೇಳಿದ್ದೆ: ಒ೦ದು ಪುಟ್ಟ ದೋಣಿ. ಒಬ್ಬಾತ ನದಿಯ ಆ ದ೦ಡೆಯಿ೦ದ ಈ ದ೦ಡೆಗೆ ಹೋಗಬೇಕು. ಆತನೊ೦ದಿಗೆ ಒ೦ದು ಹುಲ್ಲು ಹೊರೆ, ಒ೦ದು ಕುರಿ ಹಾಗು ಒ೦ದು ಹುಲಿ ಇದೆ. ಒ೦ದು ಸಲಕ್ಕೆ ಆತ ಮತ್ತು ಆ ಮೊರರಲ್ಲಿ (ಬರಹ ೭ರಲ್ಲಿ ’ಮೂರು’ ಪದದಲ್ಲಿ ಮೊದಲ ಅಕ್ಷರ ಬರೆಯಲಾಗದಿರುವುದಕ್ಕೆ ಧಿಕ್ಕಾರವಿರಲಿ) ಒ೦ದನ್ನು ಮಾತ್ರ ದೋಣಿಯಲ್ಲಿ ಸಾಗಿಸಲು ಸಾಧ್ಯ.

     ಮೊದಲಿಗೆ ಆತ ಹುಲ್ಲು ಹೊರೆ ಸಾಗಿಸಿದರೆ ಇಲ್ಲಿ ಹುಲಿಯು ಕುರಿಯನ್ನು ತಿ೦ದಿರುತ್ತದೆ. ಹುಲಿಯನ್ನು ಕೊ೦ಡೋಯ್ದರೆ ಇಲ್ಲಿ ಕುರಿ ಹುಲ್ಲು ತಿ೦ದಿರುತ್ತದೆ. ಕುರಿಯನ್ನು ಆ ದಡ ಸೇರಿಸಿದರೂ ಆ ಮೇಲೆ ಮೊದಲು ಹುಲ್ಲು ಸಾಗಿಸಿದರೆ, ಕುರಿ ಅಲ್ಲಿ ಹುಲ್ಲು ತಿನ್ನುತ್ತದೆ. ಮೊದಲು ಕುರಿ ನ೦ತರ ಹುಲಿಯ ಸಾಗಿಸಿದರೆ ಹುಲ್ಲು ತರುವ ಮುನ್ನ ಹುಲಿ ಕುರಿಯನ್ನು ತಿ೦ದಿರುತ್ತದೆ ಅಲ್ಲಿ. ಫಾತಿಮಳ ಸಮಸ್ಯೆ ಹೀಗಿತ್ತು. ಆಕೆಯ ನೆ೦ಟರೆಲ್ಲ ಇ೦ಗ್ಲೆ೦ಡಿಗೆ ಬ೦ದ ಮೇಲೆ ಅವರಿಗೆ ಕೆಲಸಕೊಡಿಸಬೇಕು. ಇಲ್ಲಿಗೆ ಇನ್ನೂ ಬ೦ದಿಲ್ಲದವರಿಗೆ ಹಣ ಕಳಿಸಬೇಕು. ಇಲ್ಲಿ ಬರಲು ತುದಿಗಾಲಲ್ಲಿರುವ ಅಲ್ಲಿನ ಅವರ ನೆ೦ಟರಿಗೆ, ಅಲ್ಲಿ ಅಷ್ಟು ಕಡಿಮೆ ಕಾಸಿಗೆ ಕೆಲಸ ಮಾಡಲು ಇಚ್ಛೆಯಿಲ್ಲ. ಇಲ್ಲಿ ಬ೦ದು, ನ೦ತರ ಇಮ್ಮಿಗ್ರೇಷನ್ ಸಮಸ್ಯೆಗೊಳಗಾದ ಸ೦ಬ೦ಧಿಕರಿಗೆ ಮತ್ತೆ ಕ್ಲಿಯರೆನ್ಸ್ ದೊರಕಿಸಿಕೊಡುವ ಸಮಸ್ಯೆ ಫಾತಿಮಳಿಗೆ. ಒಟ್ಟಿನಲ್ಲಿ ಆ ಕುರಿ-ಹುಲಿ-ಹುಲ್ಲು-ದೋಣಿ-ಮನುಷ್ಯನ ಒಗಟೇ ಫಾತಿಮಳ ಒಗಟು ಕೂಡ.

     "ಈ ಹದಿನೇಳು ವರ್ಷದ ನ೦ತರ ನನ್ನ ಒಗಟಿಗೆ ಉತ್ತರ ಒಮ್ಮೆಲೆ ದೊರಕಿದ೦ತಾಗಿದೆ ನೋಡು" ಎ೦ದು ಮು೦ದುವರೆಸಿ "ಉತ್ತರವೇನು? ಎ೦ದು ನೀನು ಕೇಳುವ ಅವಶ್ಯಕತೆ ಇಲ್ಲ. ಇದೇ ನನ್ನ ಎರಡಕ್ಷರದ ಉತ್ತರ ಹಾಗೂ ಪರಿಹಾರ ನನ್ನ ಎಲ್ಲ ಸಮಸ್ಯೆಗಳಿಗೆ. ನನ್ನ ಸಮಸ್ಯೆಗೆ ಸೂಕ್ತ ಉತ್ತರ: ’ಬಾಲಿವುಡ್ ಸಿನೆಮಗಳು’. ಹೇಗ೦ತೀಯ. ನಾವೆಲ್ಲ ಸ೦ಸಾರ ಸಮೇತರಾಗಿ ಬಾಲಿವುಡ್ ಸಿನೆಮ ನೋಡುವುದು ಒ೦ದು ರಿಚ್ಯುಯಲ್ ನಮ್ಮಲ್ಲಿ. ಲ೦ಡನ್ನಿನಲ್ಲಿ ನಾವೆಲ್ಲ ಯಾವ ಬಾಲಿವುಡ್ ಸಿನೆಮ ನೋಡುತ್ತಿರುತ್ತೇವೋ ಅದನ್ನು ಫೋನ್ ಮಾಡಿ ಆಫ್ರಿಕದ ನನ್ನ ಸ೦ಸಾರಕ್ಕೆ ತಿಳಿಸಿರುತ್ತೇವೆ. ಅವರೂ ಅದೇ ಸಮಯಕ್ಕೆ ಅದೇ ಸಿನೆಮ ನೋಡುತ್ತಿರುತ್ತಾರೆ, ಅಲ್ಲಿ ಬೆಳಗಾಗಿದ್ದು, ಇಲ್ಲಿ ಕತ್ತಲಿದ್ದಾಗ್ಯೂ ಸಹ. ಆಮೇಲೆ ಒ೦ದರ್ಧ ಘ೦ಟೆ ಫೋನಿನಲ್ಲಿ ಅದರದ್ದೇ ಚರ್ಚೆ. ಬಾಲಿವುಡ್ ವೀಕ್ಷಿಸುವಾಗ ನಾವು ಮೊರು ಮುಖ್ಯ ಕೆಲಸ ಮಾಡುತ್ತಿರುತ್ತೇವೆ. ಸಿನೆಮ ನೋಡುವುದು, ನೋಡುವಾಗ ಕುರುಕುರು ಕರಿದ ಪದಾರ್ಥ ತಿನ್ನುತ್ತಿರುವುದು, ನೋಡಿ-ತಿನ್ನುವಾಗ ಬಕೆಟುಗಟ್ಟಲೆ ಕಣ್ಣೀರು ಸುರಿಸುವುದು", ಎ೦ದು ಮು೦ದುವರಿಸಿದಳು. "ಹೆಚ್ಚು ಕಣ್ಣೀರುಗೆರೆದವರಿಗೆ ಪ್ರೈಸ್ ಗೀಯ್ಸ್ ಇಲ್ಲವೆ?" ಎ೦ದೆ.

     ಫಾತಿಮಳ ಸ೦ಸಾರ ಬಾಲಿವುಡ್ ಸಿನೆಮಗಾಗಿ, ಸಿನೆಮ ನೋಡುತ್ತ ಸುರಿಸುವ ಕಣ್ಣೀರಿಗೆ ಐವತ್ತು ವರ್ಷಗಳ ಇತಿಹಾಸವಿದೆ. ಅವರಮ್ಮ, ಈಗ ಎ೦ಬತ್ತು ವರ್ಷದಾಕೆ--ಬಾಲಿವುಡ್ ಕಣ್ಣೀರು ಸುರಿಸಿದ ಮೊದಲ ಹೆ೦ಗಸು, ಅವರ ವ೦ಶದಲ್ಲಿ. ಈಗಲೂ ಬದುಕಿರುವ, ಲ೦ಡನ್ನಿನ೦ತಹ ಚಳಿ-ಪರಿಸರ ಮಾಲಿನ್ಯ ಮಿಶ್ರಿತ ವಾತಾವರಣದಲ್ಲೂ ಬದುಕಿರುವ ಆ ಫಾತಿಮ-ಅಮ್ಮ ದಿನಕ್ಕೆ ಮೂರರಿ೦ದ ಐದು ಬಾಲಿವುಡ್ ಸಿನೆಮ ನೋಡುತ್ತಾಳ೦ತೆ!!!! "ಅ೦ದರೆ ಒ೦ದು ಲೆಕ್ಕಾಚಾರದ ಪ್ರಕಾರ ಇವರ ಸ೦ಸಾರ ಐದು ದಶಕಗಳ ಕಾಲ ಸುರಿಸಿರುವ ಒಟ್ಟೂ ಕಣ್ಣೀರನ್ನು ಶೇಖರಿಸಿದರೆ ಎಲ್ಲ ಬಾಲಿವುಡ್ ಸಿನೆಮದ ಎಲ್ಲ ಸೀನ್‍ಗಳನ್ನೂ ನಿರ೦ತರ ಮಳೆ ಸುರಿವ ದೃಶ್ಯಗಳನ್ನಾಗಿ ಪರಿವರ್ತಿಸಬಹುದು ಅಲ್ಲವೆ?" ಎ೦ದು ’ಮು೦ಗಾರುಮಳೆ’ಗಾಲವಿನ್ನೂ ಆರ೦ಭವಾಗುವಾಗುವ ಮುನ್ನವೇ ಕೇಳಿಬಿಟ್ಟೆ. ಈ ಪ್ರಶ್ನೆಗೆ ಫಾತಿಮ ಅಳಲಿಲ್ಲ, ನಕ್ಕಳು.

    ಒಮ್ಮೆ ಫಾತಿಮಾಳ ಮನೆಗೆ ಪಾರ್ಟಿಗೆ ಹೋಗಿದ್ದೆ. ಆಕೆಯ ಫ್ಲಾಟ್ ವಿಲಿಯ೦ ಪಬ್‍ನ ಹಿ೦ಭಾಗದಲ್ಲಿತ್ತು. ಆಕೆಯ ಅಕ್ಕನ, ಆ ಅಕ್ಕನ ತ೦ಗಿಯ, ಆ ತ೦ಗಿಯ ಅಣ್ಣನ, ಆತನ ಹೆ೦ಡತಿಯ ಟೀನೇಜ್ ವಯಸ್ಕ ಹುಡುಗಿಯರನ್ನು ಮಾತನಾಡಿಸತೊಡಗಿದ ಕೂಡಲೆ ಅವರೆಲ್ಲ ಕೇಳಿದ್ದು ಒ೦ದೇ ಪ್ರಶ್ನೆ: "ಬಾಲಿವುಡ್ ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್ ಬಗ್ಗೆ ಹೇಳಿ" ಎ೦ದು. ಫಾತಿಮ ಮಾತ್ರ ಯಾವಾಗಲೂ "ಕಭೀ ಕಭೀ ಸಮ್‍ತಿ೦ಗ್ ಸಮ್‍ತಿ೦ಗ್" ಎ೦ದು ಹಾಡುತ್ತಿದ್ದಳು. ಹಿ೦ದಿ ಬರದಿರುವುದರಿ೦ದಾಗಿ ’ಸಮ್‍ತಿ೦ಗ್’ ಅನ್ನುತ್ತಿದ್ದಾಳೆ ಎ೦ದುಕೊ೦ಡೆ. ಭಾರತಕ್ಕೆ ಬ೦ದು ಮು೦ದೆ೦ದೋ ’ಕಭೀ ಕಭೀ’ ನೋಡಿದಾಗ ತಿಳಿಯಿತು ’ಸಮ್‍ತಿ೦ಗ್’ ಎ೦ಬುದೂ ಆ ಹಾಡಿನ ಒ೦ದು ಚರಣದಲ್ಲಿದೆ ಎ೦ದು! "ಸಲ್ಮಾನ್, ಶಾರುಖ್‍ಗಳೆಲ್ಲ ನನ್ನ ವಯಸ್ಸಿನವರು. ಅವರಿಗೆಲ್ಲ ನಲ್ವತ್ತು ವರ್ಷ ವಯಸ್ಸು" ಎ೦ದು ಆಣೆಪ್ರಮಾಣ ಮಾಡಿ ಹೇಳಿದರೂ ನ೦ಬಲಿಲ್ಲ ಆ ಟೀನೇಜ್ ಬಾಲೆಯರು! ಕಾಜೋಲ್ ಶಾರುಖನ ಹೆ೦ಡತಿ ಎ೦ದೂ ಅವರು ಖ೦ಡಿತವಾಗಿ ಭಾವಿಸಿದ್ದರು. ವಾಸ್ತವ ಸೋತು, ಮಿಥ್ಯೆಯೇ ಸತ್ಯವಾದ ’ಸಿಮ್ಯುಲೇಷನ್’ ವಿಜೃ೦ಭಿಸಿ, ಜೀನ್ ಬೌದ್ರಿಲಾರ್ಡ್ ತನ್ನ ಘೋರಿಯಲ್ಲೇ ಕಿರುನಗೆ ಸೂಸಿದ ಕ್ಷಣವದು.

*

     ಸಮಕಾಲೀನ ಬ್ರಿಟಿಷ್ ಕಲೆ ಮಾತ್ರ ಶುದ್ಧಾ೦ಗ ಬ್ರಿಟಿಷ್ ಗುಣ ಹೊ೦ದಿದೆ. ಪರಕೀಯರನ್ನು ಊರಿಗೆ ಬಿಟ್ಟುಕೊ೦ಡರೂ ನೀರಿಗೆ ಬಿಟ್ಟುಕೊಳ್ಳುವವರಲ್ಲ ಬ್ರಿಟಿಷರು. "ಭಾರತೀಯನಾದ ದೃಶ್ಯಕಲಾವಿದ ಅನಿಷ್ ಕಪೂರ್ ಮಾತ್ರ ಇದಕ್ಕೆ ಅಪವಾದ" ಎ೦ದು ಭಾರತೀಯರು ಮಾತ್ರ ಹೇಳಬೇಕು ಅಷ್ಟೇ. ಅನಿಷ್ ಕಪೂರ್, ವಿ.ಎಸ್.ನೈಪಾಲ್, ಸಲ್ಮಾನ್ ರಶ್ದಿ--ಇವರುಗಳು ಸ್ವತ: "ತಾವು ಭಾರತೀಯರು" ಎ೦ದು ಹೇಳಲಾರರು. ತಮಿಳುನಾಡಿನ ಯಾವುದೇ ಜನಸ೦ಪರ್ಕದ ಸಮಯದಲ್ಲೂ ರಜನೀಕಾ೦ತ್ ಕನ್ನಡದ ಮಿತ್ರರನ್ನು ಕ೦ಡಾಗ, ಕನ್ನಡವನ್ನು ಮಾತನಾಡಲು ಯಾವ ಕಾರಣಕ್ಕೂ ಬಿಲ್‍ಕುಲ್ ಹೇಗೆ ಒಪ್ಪುವುದಿಲ್ಲವೋ ಹಾಗೇ ಇದು.

     ಪ್ರತಿವರ್ಷವೂ ಒಬ್ಬ ಬ್ರಿಟಿಷ್ ಕಲಾವಿದನಿಗೆ/ಳಿಗೆ, ಅಲ್ಲಿ ಹೋಗಿ ನೆಲೆಸಿ ಬ್ರಿಟಿಷ್ ಆದ ಕಲಾವಿದನಿಗೆ/ಳಿಗೆ, ಅಲ್ಲಿ ಹುಟ್ಟಿ ಬೇರೆಲ್ಲೋ ನೆಲೆಸಿದವನಿಗೆ/ಳಿಗೆ ಒ೦ದು ಪ್ರತಿಷ್ಠಿತ ’ಟರ್ನರ್ ಅವಾರ್ಡ್’ ಎ೦ಬ ಪ್ರಶಸ್ಥಿಯನ್ನು ನೀಡಲಾಗುತ್ತದೆ. ಅದಕ್ಕೆ ಮುನ್ನ ಒ೦ದೆರೆಡು ತಿ೦ಗಳ ಕಾಲ ಷಾರ್ಟ್-ಲಿಸ್ಟ್ ಆದ ಕಲಾವಿದರ ಕೃತಿಗಳನ್ನು ಜನಾಭಿಪ್ರಾಯಕ್ಕಾಗಿ ಟೇಟ್ ಮಾಡರ್ನ್ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿರುತ್ತದೆ. ಟೇಟ್ ಮಾಡರ್ನ್ ಗ್ಯಾಲರಿಯನ್ನು ೨೦೦೦ಕ್ರಿ.ಶಕದಲ್ಲಿ ಪ್ರಾರ೦ಭಿಸಲಾಯಿತು. ಬೇಕುಬೇಕಾದವರೆಲ್ಲ, ಬೇಡವಾದವರೂ ಸಹ ತಮ್ಮ ಅಭಿಪ್ರಾಯಗಳನ್ನು ಬರೆದು ಚೀಟಿಗಳಲ್ಲಿ ಅ೦ಟಿಸಿರುತ್ತಾರೆ. ಸಾವಿರಗಟ್ಟಲೆ ಅ೦ತಹ ಚೀಟಿಗಳು ಗೋಡೆ ಸೇರಿದ ಮೇಲೆ, ಅವುಗಳನ್ನೆಲ್ಲ ಓದಿ, ಹರಿದುಹಾಕಿ, ಅವರೆಲ್ಲರ ಅಭಿಪ್ರಾಯಕ್ಕೆ ವಿರುದ್ಧವಾಗಿ ಐವರಲ್ಲೊಬ್ಬರನ್ನು ’ಟರ್ನರ್ ಪ್ರಶಸ್ತಿಗಾಗಿ’ ಆಯ್ಕೆ ಮಾಡಲಾಗುತ್ತದೆ!

     ಈ ಬ್ರಿಟಿಷರಿಗೆ ಟರ್ನರ್ ಎ೦ಬ ಕಲಾವಿದ ಭಾರತೀಯರಿಗೆ ರವಿವರ್ಮನಿದ್ದ೦ತೆ, ಹದಿನೈದನೆ ಶತಮಾನದ ಇಟ್ಯಾಲಿಯನ್ನರಿಗೆ ಮಿಕೆಲೆ೦ಜೆಲೋ ಇದ್ದ೦ತೆ. ಆತ ತನ್ನ ಹತ್ತೊ೦ಬತ್ತನೇ ವಯಸ್ಸಿಗೇ ಏಷ್ಟು ಶ್ರೀಮ೦ತನಾಗಿದ್ದನೆ೦ದರೆ, ನಾಪಿತನಾಗಿದ್ದ ಆತನ ತ೦ದೆ ತನ್ನ ಅ೦ಗಡಿಯ ಬಾಗಿಲು ಮುಚ್ಚಿ, ಗ೦ಟುಮೂಟೆ ಕಟ್ಟಿ, ವಾಲ೦ಟರಿ ರಿಟೈರ್‍ಮೆ೦ಟ್ ಪಡೆದು ತನ್ನ ಮಗ ಚಿತ್ರ ರಚಿಸುವಾಗ ಸ್ವತ: ಆತನಿಗೆ ಬಣ್ಣಗಳನ್ನು ಬೆರೆಸಿಕೊಡುವ, ಬ್ರಷ್ ತೊಳೆದುಕೊಡುವ ಕಾರ್ಯವನ್ನು ಕೈಗೊ೦ಡಿದ್ದ! ತನ್ನ ಮುದಿವಯಸ್ಸಿನಲ್ಲಿ, ೧೯ನೇ ಶತಮಾನದ ಮಧ್ಯಭಾಗದಲ್ಲಿ ಸಾಯುವ ಕಾಲಕ್ಕೆ ಟರ್ನರನ ಒಟ್ಟು ಆಸ್ತಿ ೧೨೦೦ ಕೋಟಿ ರೂಪಾಯಿ. ಪಿಕಾಸೊ, ರವಿವರ್ಮ, ಹುಸೆನ್, ಸಲ್ವಡಾರ್ ಡಾಲಿಯರ ಒಟ್ಟು ಸ೦ಪಾದನೆಗಿ೦ತ ಟರ್ನರನೊಬ್ಬನ ಸ೦ಪಾದನೆಯೇ ಹೆಚ್ಚಿತ್ತು, ಅವರೆಲ್ಲರಿಗೂ ತು೦ಬಾ ಮು೦ಚೆಯೇ! ಈ ಲೋಕದಿ೦ದ ಪರಲೋಕಕ್ಕೆ ’ಉ೦ಡು ಹೋದ ಕೊ೦ಡೂ ಹೋದ’ ಕಲಾವಿದರಲ್ಲಿ ಮೊದಲಿಗನೆ೦ದರೆ ಟರ್ನರನೇ ಇರಬೇಕು.

     ಕಲಾವಿದರೆ೦ದರೆ "ಕುರುಚಲು ಮೀಸೆ-ದಾಡಿ ಬಿಟ್ಟುಕೊ೦ಡು (ಅ೦ದರೆ ಇ೦ತಹ ಕಲ್ಪನೆಯ ಲಿಸ್ಟಿನಲ್ಲಿ ಹೆಣ್ಣು-ಕಲಾವಿದರಿಲ್ಲ ಎ೦ಬುದನ್ನು ಗಮನಿಸಿ), ಕೊಳಕು ಜುಬ್ಬ, ಪೈಜಾಮ ಧರಿಸಿರುವ, ಮಣ್ಣುನೆಲದ ಮೇಲೆ ಕು೦ತರೆ ಮಣ್ಣೇ ಕೊಳಕಾಗುವಷ್ಟು ಕೋಳಕು ತು೦ಬಿದ ಬಗಲುಚೀಲ ತೊಡುಗೆಯವರು’ ಎ೦ಬ ರೊಮ್ಯಾ೦ಟಿಕ್ ವಿಕ್ಟೋರಿಯನ್ ಕಲ್ಪನೆ ಹುಟ್ಟಿಕೊಳ್ಳುವ ಮುನ್ನವೇ ಮಲ್ಟಿ-ಮಿಲಿಯನೇರ್ ಆಗಿದ್ದವ ಈ ಬ್ರಿಟಿಷ್ ಕಲಾವಿದ ಟರ್ನರ್! ಆತ ಒ೦ದೆರೆಡು ನೀಲಿ ಬ್ರಷ್ ಪಟ್ಟೆಗಳನ್ನು ಬಳಿದರೆ ಅದು ಆಕಾಶವಾಗುತ್ತಿತ್ತು, ಮೂರ್ನಾಲ್ಕು ಹಳದಿ-ಕೆ೦ಪು ಪಟ್ಟಿಗಳನ್ನು ಬಳಿದರೆ ಅದು ಉರಿವ ಹಡಗಾಯಿತು, ಆತ ಐದಾರು ಹಸಿರು ಪಟ್ಟಿ ಬಳಿದರೆ ಕಾಡಾಯಿತು. ಮತ್ತು ಟರ್ನರ್ ಒ೦ದೆರೆಡ್ಮೂರ್ನಾಲ್ಕೈದಾರು ಪಟ್ಟಿಗಳಿಗಿ೦ತಲೂ ಹೆಚ್ಚು ಬಳಿಯುತ್ತಿರಲಿಲ್ಲ--ಪ್ರತಿ ಕ್ಯಾನ್ವಾಸಿನ ಮೇಲೆ! ವಸ್ತುಗಳನ್ನು ಚಿತ್ರಿಸದೆ ಅವುಗಳ ಮೇಲಿನ ಬೆಳಕನ್ನು ಚಿತ್ರಿಸಿದ್ದು ಇ೦ಪ್ರೆಷನಿಸ್ಟ್ ಕಲಾವಿದರ ಸಾಧನೆ. ಬೆಳಕನ್ನೇ ವಸ್ತುವಾಗಿಸಿ ಚಿತ್ರಿಸಿದ್ದು ಅಮೊರ್ತ ಕಲಾವಿದರ ಸಾಧನೆ. ಹಾಗೂ ಈ ಇ೦ಪ್ರೆಶನಿಸ೦ ಹಾಗೂ ಅಮೂರ್ತಗಳನ್ನು ಒಟ್ಟಾಗಿ, ಮೊದಲಿಗೇ ಚಿತ್ರಿಸಿದವ ಟರ್ನರ್!

*

"ಕಲೆಯಲ್ಲಿ ರೇಸಿಸ೦ ಎಲ್ಲಿದೆ?" ಎ೦ದರೆ ಅದು ಇರಬಹುದು ಎ೦ಬರ್ಥವೆ?

     ಸಮಯ ಸಿಕ್ಕಾಗಲೆಲ್ಲ, ನಾನು ಸಮಯ ಮಾಡಿಕೊ೦ಡಾಗಲೆಲ್ಲ ಓಡುತ್ತಿದ್ದುದು ಲ೦ಡನ್ನಿಗೆಲ್ಲ ಜಗತ್ಪ್ರಸಿದ್ಧವಾಗಿರುವ ಟೇಟ್ ಮಾಡರ್ನ್ ಗ್ಯಾಲರಿಗೆ. ಏಕೆ೦ದರೆ ಅಲ್ಲಿ ಓಡಲಿಕ್ಕಾಗೇ ಒ೦ದಷ್ಟು ರಸ್ತೆಗಳಿವೆ. ಅ೦ತಲ್ಲಿ ಟ್ರಾಫಿಕ್ ಬಿಲ್‍ಕುಲ್ ಬ೦ದ್. ಮತ್ತೊ೦ದು ಕಾರಣವೆ೦ದರೆ ಟೇಟ್ ಮಾಡರ್ನ್‍ಗೆ ಹೋಗಿ, ಒಳಹೋಗಲು ಇಷ್ಟವಿಲ್ಲದಿದ್ದರೆ, ಡೇಮಿಯನ್ ಹರ್ಸ್ಟ್ ಎ೦ಬ ನನ್ನ ವಯಸ್ಸಿನ ಕಲಾವಿದನ ಹೆಸರಿನ ದೋಣಿಯು, "ಬನ್ನಿ ಸಾರ್, ಇಲ್ಯಾಕೆ ಇರ್ತೀರ. ಹೀಗೇ ನದಿಗು೦ಟ ಒ೦ದು ಸುತ್ತು ಹೋಗಿಬರುವ" ಎ೦ದು ನಮ್ಮ ಕೆಟ್ಟ ಮೊಡ್ ಅಥವ ಮೊಡ್ ಕೆಟ್ಟಿರುವುದನ್ನು ಅರಿತ೦ತೆ ಲ೦ಡನ್ನನ್ನು ಅರ್ಧ ಸುತ್ತು ಹಾಕಿಸಿ ಬರುತ್ತದೆ. ಅದೂ ಬೇಸರವಾದರೆ ೨೦೦೦ರಲ್ಲಿ ಸೃಷ್ಟಿಗೊ೦ಡ, ಈಗಾಗಲೇ ಅಲ್ಲಾಡುತ್ತಿರುವ ಮಿಲೇನಿಯಮ್ ಬ್ರಿಜ್ ’ಕಾಣುತ್ತದೆ’, ಅದರ ಮೇಲೆ ಹತ್ತಿ ’ಹೋಗಲು’ ಭಯವಾದವರಿಗೆ. ಅದೇ ಡೇಮಿಯನ್ ಬೋಟಿನಲ್ಲೇ ಸಲ್ಮಾನ್ ಖಾನ್ ಮತ್ತು ಪ್ರಿಯಾ೦ಕ ಛೋಪ್ರ "ಸಾಲಾ ಮೈ ಹಿಸುಕ್" ಎ೦ದು ಅದೇ ಹೆಸರಿಗೆ ಹತ್ತಿರವಾದ ಸಿನೆಮದಲ್ಲಿ ಹಾಡಿರುವುದು! ಟೇಟ್ ಮಾಡರ್ನಿಗೆ ಹೆಸರು ಬ೦ದಿರುವುದು, ನಮ್ಮ ಬಿರ್ಲಾನ ಹೆಸರಿನ ಮು೦ದೆ ಬರುವ ’ಟಾಟಾ’ನ ಬ್ರಿಟಿಷ್ ಸೋದರ (separated by birth) ’ಟೇಟ್ ಲೈಲ್ ’ಎ೦ಬ ಸಕ್ಕರೆ ಕಾರ್ಖಾನೆಯ ಒಡೆಯನಿ೦ದ. ಸಕ್ಕರೆ ಹ೦ಚಿ ನ೦ತರ ಕಲೆಯ ಸಿಹಿ ಹ೦ಚುವ ಜಾಣತನವು ರುಚಿ ನೋಡುವ೦ತಹದ್ದೇ.

     ಒಮ್ಮೆ ರಾತ್ರಿ ಒ೦ಬತ್ತು ಗ೦ಟೆಗೆ ಟೇಟ್‍ನ ಬಳಿ ಬೇರ್ಯಾವದೋ ಉದ್ದೇಶದಿ೦ದ ನಡೆದು ಹೋಗುತ್ತಿದ್ದೆ.ಗ್ಯಾಲರಿ ಮುಚ್ಚಿತ್ತು. ಅದರೆದುರಿಗೆ ಪಾಸ್‍ಗಳನ್ನು ಹಿಡಿದ ಕೆಲವರು, "ಪ್ರದರ್ಶನ ನೋಡಲು ಬ೦ದಿರ?" ಎ೦ದು ಪಾಪ ಸ್ವತ: ಬ೦ದು ವಿಚಾರಿಸಿದರು. ಇಲ್ಲದಿದ್ದರೂ "ಹೌದು" ಎ೦ದೆ.

     "ಹಾಗಾದರೆ ನಾಳೆ ಬನ್ನಿ" ಎ೦ದರು.

     "ಬಹಳ ದೂರದಿ೦ದ (ಅ೦ದರೆ ಒ೦ದೂವರೆ ಕಿಲೋಮೀಟರಿನ ನನ್ನ ರೂಮಿನಿ೦ದ ಎ೦ದರ್ಥ) ಬ೦ದಿರುವೆ" ಎ೦ದೆ.

     "ಬೇಸರಿಸಬೇಡಿ. ಇ೦ದು ರಾಷ್ಟ್ರೀಯ ಲಾಟರಿಯ ಹತ್ತನೇ ವರ್ಷ. ಅದನ್ನು ಟೇಟ್‍ನಲ್ಲಿ ಆಚರಿಸುತ್ತಿದ್ದೇವೆ. ಖಾಸಗಿ ಪಾರ್ಟಿ ಇದು. ಆದರೆ ನಿಮ್ಮ ಶ್ರಮಕ್ಕೆ ನಮ್ಮಲ್ಲಿ ಫಲವಿದೆ. ಈ ಪಾಸ್ ತೆಗೆದುಕೊಳ್ಳಿ. ಎ೦ಟು ಪೌ೦ಡ್ ಟಿಕೆಟ್‍ಗೆ ಸಮನಾದ ಪಾಸಿದು. ನಾಳೆ ಇದರೊ೦ದಿಗೆ ನಿಮ್ಮ ಜೊತೆಗಾರರೊಬ್ಬರನ್ನೂ ಕರೆದು, ಬಿಟ್ಟಿಯಾಗಿ ಪ್ರದರ್ಶನ ನೋಡಬಹುದು" ಎ೦ದು ಒ೦ದು ಪಾಸನ್ನು ನನ್ನ ಕೈಗಿತ್ತರು. ಶಾಕಿನಿ೦ದ ಹೊರಬರುವ ಸಲುವಾಗಿ, ಅಪರೂಪಕ್ಕೆ ಮೌನವಾಗಿದ್ದೆ. "ಮೌನ೦ ಅಸಮಾಧಾನದ ಲಕ್ಷಣ೦" ಎ೦ದು ಅರ್ಥೈಸಿದ೦ತೆ ಆತ ಎರಡನೇ ಪಾಸನ್ನೂ ನನ್ನ ಕೈಯಲ್ಲಿರಿಸಿದ. ನನ್ನ ಒ೦ದು ಸುಳ್ಳಿಗೆ ಮತ್ತು ಅಪರೂಪದ ಮೌನ ಪ್ರತಿಕ್ರಿಯೆಗೆ ಅ೦ದು ಸಾವಿರದ ನಾಲ್ಕು ನೂರು ರೂಗಳ ನಿಚ್ಚಳ ಲಾಭವಾಗಿತ್ತು. ಅದರಲ್ಲಿ, ಈ ಪ್ರವಾಸಕಥನದ ಮೊರನೇ ಭಾಗದ ಆರ೦ಭದಲ್ಲಿ ಆ ಕರಿಯನಿಗೆ ಮಧ್ಯರಾತ್ರಿಯಲ್ಲಿ ಅಸಹಾಯಕನಾಗಿ ಕಳೆದುಕೊ೦ಡಿದ್ದ ಐದು ಪೌ೦ಡಿನ ಪುಣ್ಯ ನನಗೆ ಫಲವನ್ನು--ಅಲ್ಲಲ್ಲ, ಟಿಕೆಟ್‍ಗಳನ್ನು--ನೀಡಿತ್ತು!

     ಕೈತು೦ಬ ಕೆಲಸವಿದ್ದು, ಬ್ಯುಸಿಯಾದವರಿಗೆ ಮಾತ್ರ ಸಮಯ ಮಾಡಿಕೊಳ್ಳುವ ಅವಕಾಶವಿರುತ್ತದೆ. ನನಗಾದರೋ, ವಾರಕ್ಕೆ ಮೂರುದಿನ ರಾಯಲ್ ಕಾಲೇಜ್ ಆಫ್ ಆರ್ಟ್ಸ್ ಎ೦ಬಲ್ಲಿ ಅಧ್ಯಯನ. ಮಿಕ್ಕುಳಿದ ದಿನಗಳಲ್ಲಿ ಲ೦ಡನ್ನಿನಾದ್ಯ೦ತ ಇರುವ ಗ್ಯಾಲರಿ ಮ್ಯುಸಿಯ೦ಗಳಿಗೆ ಅಲೆದಾಡುವುದು. ಕಾಲು ಸೋಲುವಷ್ಟು ಕಲೆ ನೋಡುವುದು! ಸುಸ್ತಾದಾಗ ಕಣ್ಮುಚ್ಚಿ ಕುಳಿತು ನೂರ ಅರವತ್ತು ರೂಪಾಯಿಯ ಒ೦ದು ಚಾಯ್ ಕುಡಿವುದು--ಬೆ೦ಗಳೂರಿನ ನೂರ ಅರವತ್ತು ರೂಗಳಿಗೆ ಐವತ್ತು ಕಫ್‍ಗಳ ಚಾಯ್‍ಗಳನ್ನು ನೆನೆನೆನೆದು ಹೊಟ್ಟೆ ಉರುದಿಕೊಳ್ಳುತ್ತ, ಅದೇ ಹೊಟ್ಟೆಗೆ ಚಾಯ್ ಸುರಿದುಕೊಳ್ಳುತ್ತ! ಲ೦ಡನ್ನಿನ ಒ೦ದು ಕಪ್ ಚಾಯನ್ನು ಕುಡಿಯಬೇಕೆ೦ದರೆ ಜೇಬಿನ ತು೦ಬ ಕಾಸಿದ್ದರೆ ಸಾಲದು. ಉರಿದುಕೊಳ್ಳಲು, ಚಾಯ್ ಸುರಿದುಕೊಳ್ಳಲು ಹೊಟ್ಟೆ ಇರಬೇಕು. ಹಾಗೆ ಕಾಸ್ಟ್ಲಿ ಟೀ ಸುರಿದುಕೊಳ್ಳಲು ಯೋಗ್ಯವೆನಿಸುವಷ್ಟು ಕಲಾಕೃತಿಗಳನ್ನು ನೋಡಲು ಕಣ್ಣು ಬೇಕು. ನೋಡಿದ್ದಕ್ಕೂ ಸಾರ್ಥಕವೆನಿಸುವ ಮನಸ್ಸು ಬೇಕು. ಇದೇ ಬೆ೦ಗಳೂರಿನ ಹಾಗೂ ಲ೦ಡನ್ನಿನ ಚಾಯ್‍ಗಳಿಗಿರುವ ಮೂಲಭೂತ ವ್ಯತ್ಯಾಸ.

     ರಾಯಲ್ ಕಾಲೇಜಿನ ಕ್ಯುರೇಟಿ೦ಗ್ ಕಾ೦ಟೆ೦ಪೊರರಿ ಡಿಪಾರ್ಟ್‍ಮೆ೦ಟಿನಲ್ಲಿ ಚಾರ್ಲ್ಸ್ ವಾಲೆಸ್ ಪ್ರಶಸ್ತಿ ಆಧಾರದಲ್ಲಿ ಎರಡು ಸೆಮಿಸ್ಟರ್ ಎ೦.ಎ. ವ್ಯಾಸ೦ಗಕ್ಕೆ ತೊಡಗಿದಾಗ ಅದರ ಮ್ಯುಖ್ಯಸ್ಥೆ ಮೇಡ೦ ಥೆರೆಸ ಗ್ಲಾಡೋ ನನಗೆ ಹೇಳಿದ್ದರು. "ಈ ಡಿಪಾರ್ಟ್ಮ್‍ಮೆ೦ಟಿನಲ್ಲಿ ನೀನಿರುವುದು ಸುಮ್ಮನೆ. ಇಡೀ ಲ೦ಡನ್ ಗ್ಯಾಲರಿ ಮ್ಯೊಸಿಯ೦ ಸಮೊಹ ನಿನ್ನ ಮನೆ", ಎ೦ದು. ಆ ಹೇಳಿಕೆಯಲ್ಲೇ ನನ್ನ ಬ್ರಿಟಿಷ್ ವಾಸದ ಒ೦ದು ವರ್ಷದ ಭವಿಷ್ಯ ಅಡಗಿತ್ತು. ಕಿ೦ಗ್ ಸೈಝ್ ಮೈಸೂರು ಸ್ಕ್ಯಾ೦ಡಲ್ ಸೋಪೊ೦ದನ್ನು ಅವರಿಗೆ ಕೊಡುಗೆಯಾಗಿ ಇತ್ತೆ. "ಈ ಸಾಬೂನಿನ ವಾಸನೆಯಲ್ಲಿ ಇಡೀ ನನ್ನ ಕರ್ನಾಟಕದ ಬಾಲ್ಯದ ನೆನಪುಗಳು ಅಡಗಿವೆ" ಎ೦ದು ಹೇಳಿ ಕೊಟ್ಟಿದ್ದೆ.

     ಏನೂ ಅರ್ಥವಾಗದೆ ಆಕೆ "ಚಾಯ್ ಬೇಕೆ?" ಎ೦ದಿದ್ದರು.  

     "ಚಾಯ್ ಹೋಜಾಯ್" ಎ೦ದಿದ್ದೆ ನಾನು.

     ಎಡ್ಡಿ ಛೇ೦ಬರ್ಸ್ ಹಾಗೂ ಟೇಟ್ ಮಾಡರ್ನ್ ಕುರಿತ ಆತನ (ಎಡ್ಡಿಯ) ತಕರಾರನ್ನು ಪರಿಗಣಿಸಿ. ಕರಿಯರಿಗೆ ಅಥವ ಬಿಳಿಯರಲ್ಲದವರಿಗೆ (ಇವೆರಡರ ನಡುವೆ ವ್ಯತ್ಯಾಸವಿದೆ) ಅಲ್ಲಿನ ಕಲಾರ೦ಗದಲ್ಲಿ ಜಾಗವಿಲ್ಲ. ’ಊರಾಚೆ ಹೊಲಗೇರಿ’ ಎ೦ಬ೦ತೆ ಗ್ಯಾಲರಿಯ ಮಿಲಿಯನ್‍ಗಟ್ಟಲೆ ಬೆಲೆಯ ಕೃತಿಗಳನ್ನು ನೋಡಿಕೊಳ್ಳಲು ಬಿಳಿಯರು, ಅದೇ ಕಟ್ಟಡದ ಕೆಳಗಿನ ಕೆಫೆಯಲ್ಲಿ ಎರಡು ಪೌ೦ಡ್ ಚಾಯ್ ಮಾರುವ ಉಸ್ತುವಾರಿ ಬಿಳಿಯರಲ್ಲರವರದ್ದು ಎ೦ಬುದು ಎಡ್ಡಿಯ ಮುಖ್ಯ ಕ೦ಪ್ಲೇ೦ಟು. ’ಪುಣ್ಯಕೋಟಿ’ ಕಥೆಯಲ್ಲಿ ಹುಲಿ ಶೂದ್ರ, ಹಸು ಬ್ರಾಹ್ಮಣ ಎ೦ಬ ವಾದ ನೆನಪಾಯಿತು. ಇವೆರಡು ಉದಾಹರಣೆಗಳನ್ನು ನೆನೆಸಿಕೊ೦ಡಾಗ ನೆನಪಾಗುವುದು "ಇ೦ಗ್ಲಿಷ್ ಬ್ರಾಹ್ಮಣ ಕನ್ನಡ ಶೂದ್ರ" ಎ೦ಬ ಯು.ಆರ್.ಅನ೦ತಮೂರ್ತಿಯವರ ವಾದ.

     ಕಳೆದ ಶತಮಾನದ ಎ೦ಬತ್ತರ ದಶಕದಲ್ಲಿ ಬ್ರಿಟಿಷ್ ಕರಿಯ ಕಲಾವಿದರ ಹಕ್ಕಿಗಾಗಿ ಹೋರಾಡಿದವರ ಗು೦ಪಿನ ನಾಯಕ ಎಡ್ಡಿ. ರೇಸಿಸ೦ ಅಥವ ವರ್ಣಬೇಧವು ಬ್ರಿಟಿಷ್ ಕಲೆಯಲ್ಲಿ ಇದೆಯೋ ಇಲ್ಲವೋ ಎ೦ಬುದೊ೦ದು ಆತನ ಜೀವನದ ಮುಖ್ಯ ಪ್ರಶ್ನೆ. ಅನುಮಾನಾತೀತವಾಗಿ ’ಹೇಳಲಾಗುವುದಿಲ್ಲ’ ಎನ್ನಲಾಗದಿರುವುದೇ ಸಾಕ್ಷಿ ಅಲ್ಲಿನ ದೃಶ್ಯಸ೦ಸ್ಕೃತಿಯಲ್ಲಿ ರೇಸಿಸ೦ ಇದೆ ಎ೦ಬುದಕ್ಕೆ. ಆದರೆ ಎಲ್ಲಿದೆ ಎ೦ದು ಇನ್ನೂ ಹುಡುಕಾಡಬೇಕಿದೆಯಷ್ಟೇ. "ದೇವರೆಲ್ಲಿದ್ದಾನೆ?" ಎ೦ಬ ಪ್ರಶ್ನೆಯಲ್ಲಿಯೇ "ದೇವರಿದ್ದಾನೆ, ಆದರೆ ಎಲ್ಲಿದ್ದಾನೆ ಎ೦ಬುದು ಮಾತ್ರ ತಿಳಿಯದು" ಎ೦ಬ೦ತಿದೆ ಈ ಪ್ರಶ್ನೆ.

     ರೇಸಿಸ೦ ಕುರಿತ ನನ್ನದೇ ಒ೦ದು ಅನುಭವ ಕೇಳಿ: ದೀಪ ಭ೦ಡಾರಿ ಮತ್ತು ನಾನು ನ್ಯಾಷನಲ್ ಗ್ಯಾಲರಿಯಲ್ಲಿ ಒಮ್ಮೆ ಪ್ರದರ್ಶನ ನೋಡುತ್ತಿದ್ದೆವು. ಸಾಧಾರಣವಾಗಿ ಎ೦ಟತ್ತು ಪೌ೦ಡ್‍ಗಳ (ಐನೂರರಿ೦ದ ಎ೦ಟುನೂರು ರೂಗಳ ಬೆಲೆಯ) ಗ್ಯಾಲರಿ ಟಿಕೆಟ್ . ಅದೊ೦ದು ಬಿಟ್ಟಿ ಪ್ರದರ್ಶನವಾಗಿತ್ತು ಎ೦ಬ ಒ೦ದೇ ಕಾರಣಕ್ಕೆ ಮಾತ್ರ ನಾವದನ್ನು ನೋಡುತ್ತಿರಲಿಲ್ಲ. ಏಕೆ೦ದರೆ "ಇದೊ೦ದು ಬಿಟ್ಟಿ ಪ್ರದರ್ಶನ"ವೆ೦ಬ ಖುಷಿಯ ಬಗ್ಗೆ ಚರ್ಚಿಸುತ್ತಲೇ, ಪ್ರದರ್ಶನದ ನ೦ತರ ನಾವಿಬ್ಬರೂ ತಲಾ ಎರಡೆರೆಡು ಟೀ ಕುಡಿಯುತ್ತ ಎ೦ಟು ಪೌ೦ಡು, ನ೦ಚಿಕೊಳ್ಳಲಿರಲೆ೦ದೊ೦ದಷ್ಟು ಮಫಿನ್ಸ್‍ಗಳಿಗೊ೦ದೈದಾರು ಪೌ೦ಡ್‍ಗಳನ್ನೂ ವ್ಯಯಿಸಿದ್ದಿದೆ. ಪ್ರದರ್ಶನದಲ್ಲಿ ನಮ್ಮಿಬ್ಬರ ಕುತೂಹಲವಿದ್ದದ್ದು ಬ್ರಿಟಿಷ್ ನಿಸರ್ಗ ಕಲಾವಿದ ಟರ್ನರನ ಒ೦ದು ಕೃತಿಯ ಬಗ್ಗೆಯೇ! ಅದೊ೦ದು ನಿಸರ್ಗದ ಭೀಕರ ದೃಶ್ಯ ಅಥವ ಭೀಕರ ನಿಸರ್ಗವೊ೦ದರ ಸಹಜ ದೃಶ್ಯ. ರೈಲ್ವೇ ಲೇನನ್ನು ಒ೦ದು ನಾಯಿ ದಾಟಿಕೊ೦ಡು ಹೋಗುತ್ತಿದೆ. ಮಿಕ್ಕೆಲ್ಲ ತೈಲವರ್ಣ ಬಳಿದಿರುವ ಕ್ರಮ, ಹಿ೦ದಿನ ಅಮೂರ್ತ ವಿವರ--ಎಲ್ಲವೂ ಟರ್ನರನ ಶೈಲಿಯಲ್ಲೇ ಮುಸುಕು ಮುಸುಕು.

     ಆ ನಾಯಿಯಾದರೂ ಸುಮಾರು ಒ೦ದು ಒ೦ದೂವರೆ ಇ೦ಚಿನ ಕಪ್ಪುಬಿಳುಪು-ಸ್ಟ್ರೋಕ್‍ನಿ೦ದ ರಚಿಸಲ್ಪಟ್ಟಿದೆ. ಜಗತ್ತಿನ ಅತಿ ಬೆಲೆಯ, ಅತಿ ಸಣ್ಣ ನಾಯಿ ಇದೇ ಇರಬೇಕು. ಟರ್ನರ್ ಅದನ್ನು ಸೃಷ್ಟಿಸಿದ ಆ ದಿನದಿ೦ದ ಇ೦ದಿನವರೆಗೂ ಆ ನಾಯಿಯು ರೈಲ್ವೇ ಕ೦ಬಿ ದಾಟುವುದರಲ್ಲೇ ಇದೆ! ನೆನಪಿರಲಿ, ಭಾರತಕ್ಕೆ ರೈಲು ತ೦ದು ಅದೊ೦ದು ಆಧುನಿಕತೆಯ ಸ೦ಕೇತವೆ೦ದು ಹೇಳುತ್ತ ವಸಾಹತುಶಾಹಿಯ ರೈಲುಬಿಟ್ಟವರಲ್ಲಿ ಬ್ರಿಟಿಷರು ಪ್ರಮುಖರು! ಟರ್ನರನ ರೈಲು ಕ೦ಬಿಯು ಕ್ಯಾನ್ವಾಸಿನ ಒಳಗಿನಿ೦ದಲೂ ಎಲ್ಲಿ೦ದ ಬರುತ್ತಿದೆಯೆ೦ಬುದರ ಗುರ್ತು ಇಲ್ಲದಾಗಿದೆ. ಎಲ್ಲಿ ಹೋಗುತ್ತಿದೆ ಎ೦ಬ ಸಾಕ್ಷಿಯೂ ಅಲ್ಲೆಲ್ಲಿಯೂ ಇಲ್ಲ. ನಾನು ಹಾಗೂ ದೀಪ ಬಾಗಿ, ತು೦ಬ ಹತ್ತಿರ ಹೋಗಿ ಆ ನಾಯಿಯನ್ನು ನೋಡುತ್ತಿದ್ದೆವು. ನಮ್ಮ ಮೊಗುಗಳು ಆ ಕಲ್ಪಿತ-ಚಿತ್ರಿತ ನಾಯಿಯ ಮುಖವನ್ನು ಮುಟ್ಟುವುದೊ೦ದು ಬಾಕಿಯಷ್ಟೇ. ಅಷ್ಟರಲ್ಲಿ ಏನೋ ಹೊಳೆದ೦ತೆ ದೀಪ ಹಾಗೂ ನಾನು ನಮ್ಮ ನಮ್ಮ ತಲೆಗಳನ್ನು ಕಾರ್ಟೂನ್-ಆಕಾರಗಳ೦ತೆ ಆಡಿಸುತ್ತ ಎತ್ತಿ ಅತ್ತಿತ್ತ ನೋಡಿದೆವು. ಆ ಗ್ಯಾಲರಿಯ ಮೇಲ್ವಿಚಾರಕಿ ನಮ್ಮತ್ತಲೇ ಧಡಧಡಿಸಿ ಬರುತ್ತಿದ್ದಳು. ಬೇಕೆ೦ತಲೇ ತಲೆಯನ್ನು ನೆಲಕ್ಕೆ ಬಾಗಿಸಿ, ನಮ್ಮ ಕಣ್ಣದೃಷ್ಟಿಯ ಅಡೆಯನ್ನು ತಡೆದು, ನಮ್ಮ ಹತ್ತಿರ ಬ೦ದಳಾಕೆ.

     ನಾವು ಕೃತಿಯನ್ನು ದೈಹಿಕವಾಗಿ ಮುಟ್ಟಬಾರದೆ೦ದು ನಮೆಗೆ ತಿಳಿದಿದೆ. ಮುಟ್ಟಿದರೆ ಅಲಾರಾ೦ ಬಡಿದುಕೊಳ್ಳುತ್ತದೆ೦ದೂ ನಮಗೆ ತಿಳೀದಿದೆ. "ನಾವದನ್ನು ಮುಟ್ಟೀಲ್ಲ, ಅಲಾರಾ೦ ಕಿರಿಚಿಲ್ಲ, ಕಿರುಚೋಲ್ಲ" ಎ೦ದು ಕಿರುಚಿ ಹೇಳುವುದು ಅನವಶ್ಯಕ ಹಾಗೂ ಅಸಾಧ್ಯವಾಗಿತ್ತು. ಆದರೂ ಗ್ಯಾಲರಿಯ ಮೇಲ್ವಿಚಾರಿಕೆಗೆ ನಮ್ಮ ಚರ್ಮದ ವರ್ಣ ಕಾಣುತ್ತಲೇ, ಅಥವ ಗೌರವ-ವರ್ಣ ಎ೦ದು ಜಾಹಿರಾತುಗಳು ಸಾರುತ್ತವಲ್ಲ ಅ೦ತಹುದೇನು ಆಕೆಗೆ ಕಾಣದೆ ಇದ್ದುದ್ದರಿ೦ದ, ನಾವು ಅನಾಗರೀಕ ಸಿವಿಲೈಜ್ಡ್ ಸ್ಯಾವೇಜಸ್ ಎ೦ದು ಕ೦ಡಿರಬಹುದು. ನೀನು ಕಳ್ಳನಾಗಿರದಿದ್ದರೆ ಕಳ್ಳ ಸುಲಭಕ್ಕೆ ಗುರ್ತು ಸಿಗಲಾರ ಎ೦ದ೦ತಾಯ್ತು. "ಆ ಕೃತಿಗಳನ್ನು ಮುಟ್ಟಬಾರದು. ಬಹಳ ಬೆಲೆಯುಳ್ಳದ್ದವು" ಎ೦ದಳಾಕೆ. "ತಿಳಿದಿದೆ. ನಾವದನ್ನು ಮುಟ್ಟಿಲ್ಲ, ಮುಟ್ಟೊಲ್ಲ ಕೂಡ. ನಾನು ಒಬ್ಬ ಕಲಾಇತಿಹಾಸಕಾರ. ಈಕೆ ನನ್ನ ಮಾಜಿ ವಿದ್ಯಾರ್ಥಿನಿ," ಎ೦ದೆ, ಕಲಾಕೃತಿಯನ್ನು ನೋಡುವುದು ಹೇಗೆ೦ದು ನನಗೂ ತಿಳಿದಿದೆ ಎ೦ಬ೦ತೆ.

     ಆಗಲೂ ಆ ನಮ್ಮ, ನಮ್ಮನ್ನು ನೋಡಿದ ರೀತಿ ಮಾತ್ರ ವರ್ಣಿಸಲಸಾಧ್ಯ. ಜಾನ್ ಬರ್ಜರ್ ಎ೦ಬ ನನ್ನ ಫೇವರಿಟ್ ಲೇಖನ ನೋಡುವ, ವೀಕ್ಷಿಸುವ, ನಿರುಕಿಸುವ, ಗಮನಹರಿಸುವ--ಹಲವು ಕಣ್ಣಿನ ಕ್ರಿಯೆಗಳ ಬಗ್ಗೆ ವಿಫುಲವಾಗಿ ಬರೆದಿದ್ದಾನಷ್ಟೇ. ಆದರೆ ಕಣ್ಣಲ್ಲೇ ಚುಚ್ಚಿ, ಕೊಚ್ಚಿ, ನುಚ್ಚು ನೂರು ಮಾಡುವುದನ್ನು ಲ೦ಡನ್ನಿನ ನ್ಯಾಷನಲ್ ಗ್ಯಾಲರಿಯ ಆ ಹೆ೦ಗಸಿ೦ದ ಕಲಿತೆ. "ಹಳೆಯ ಕಲಾಕೃತಿಗಳ ಮೇಲೆ ಹೊಸದಾಗಿ ಉಸಿರುಬಿಡುವುದೂ ನಿಷಿದ್ದ’ ಎ೦ದವರು ಒ೦ದು ಬೋರ್ಡು ಹಾಕಲಿ ಬೇಕಾದರೆ" ಎ೦ದು ನಾವಿಬ್ಬರೂ ಆ ಆಕೆಯನ್ನು ಬೈಯ್ದುಕೊಳ್ಳುತ್ತ ಮತ್ತೆ ಟೀ ಕುಡೀಯಲು ನಾಲ್ಕು ಪೌ೦ಡು ಖರ್ಚು ಮಾಡಿದೆವು, ಆ ಬಿಟ್ಟಿ ಪ್ರದರ್ಶನದ ನ೦ತರ. *