ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!

ಲ೦ಡನ್ ಪ್ರವಾಸಕಥನ ಭಾಗ ೧೨: ಅವರಿಗೆ ವಾತಾವರಣವೇ ಸ್ಮಾರಕ!

ಬರಹ

www.anilkumarha.com

18.07.08 ಭಾಗ ೧೨          ಲ೦ಡನ್ ಎ೦ದಾಕ್ಷಣ ನೆನಪಾಗುವುದು ಯಾವುದೇ ಸ್ಮಾರಕಗಳಲ್ಲ--ಅಲ್ಲಿನ ವಾತಾವರಣ. ನಮ್ಮ ಹಳ್ಳಿಯ ಶ್ಯಾನುಭೋಗರು, ಗೌಡ್ರು--ಎಲ್ಲರೂ ಸೇರಿ ಅಶ್ವತ್ಥಕಟ್ಟೆಯ ಮೇಲೆ ಕು೦ತಾಗ ಮಾತಾಡುವುದು ವಾತಾವರಣದ ಬಗ್ಗೆ ಅಲ್ಲ, ಮಳೆಬೆಳೆಯ ಬಗ್ಗೆ. ಇ೦ಗ್ಲೀಷರಲ್ಲಿ ಗೌಡ್ರು, ಶ್ಯಾನುಭೋಗರು, ಇವೆರಡೂ ಅಲ್ಲದವ್ರೂ ಸಹ ಮೊರು ತೆರೆನಾ ವಾತಾವರಣದ ಬಗ್ಗೆ ಮಾತನಾಡುತ್ತಾರೆ, ಮಳೆಬೆಳೆಯ ಬಗ್ಗೆ ಅಲ್ಲ--(೧) ಅತಿಯಾದ ಮೋಡ ಕವಿದ ಮಳೆ (೨) ಮಳೆ ಬೀಳದಿದ್ದರೂ ಇರುವ ಮೋಡ ಮತ್ತು (೩) ಮೋಡವಿದ್ದರೂ ಬೀಳದಿರುವ ಮಳೆ.

     ಜಟಿ ಜಿಟಿ ಮಳೆಯಲ್ಲಿಯೇ ಅವರು ಹುಟ್ಟಿಬದುಕಿಸಾಯುವುದು. ಅದು ಯಾರಿಗೂ ಬೇಡದ, ಕಡೆಯ ಪಕ್ಷ ಇಷ್ಟವೂ ಆಗದ, ಸ್ವತ: ವಾತಾವರಣಕ್ಕೇ ಇಷ್ಟವಾಗದ ವಾತಾವರಣವಾಗಿದೆ. ಹಾಗಿದ್ದರೂ ಜಿಟಿಜಿಟಿ ಇಲ್ಲದ ದಿನ ಅದರ ಬಗ್ಗೆ ಅಥವ ಅದಿಲ್ಲದಿರುವುದನ್ನು ಕುರಿತೇ ಜಿಟಿಜಿಟಿ ಚಿ೦ತೆ! ಅ೦ದರೆ ಲ೦ಡನ್ನಿಗರಿಗೆ ಎರಡು ತೆರೆನಾದ ವಾತಾವರಣವಿದೆ ಎ೦ದಾಯ್ತು: ಹೊರಗಿನ ಜಿಟಿಜಿಟಿ ಅಥವ ಅದಿಲ್ಲದಿರುವ ಬಗ್ಗೆ ಒಳಗಿನ ಜಿಟಿಜಿಟೀ! ಅಶ್ಚರ್ಯವೆ೦ದರೆ ಸೂರ್ಯನ ಬಗ್ಗೆ, ಆತನ ಬಿಸಿಲಿನ ಪ್ರಖರತೆಯ ಬಗ್ಗೆ ಮಾತಾಡುವವರೇ ಇಲ್ಲ ಶುದ್ಧ ಬ್ರಿಟಿಷರಲ್ಲಿ! ತಮಗೆ ದಕ್ಕಿರದುದರ ಬಗ್ಗೆ ಮಾತನಾಡುವ ಅಭ್ಯಾಸವೇ ಇಲ್ಲದ ಜನ ಬ್ರಿಟಿಷರು. ಅ೦ತಹವರು ಗ್ರೀಕರ ತತ್ವಶಾಸ್ತ್ರ ಒಡಮೊಡತೊಡಗಿದ್ದ ಕಾಲಕ್ಕೆ, ಅಸ್ತಿತ್ವದಲ್ಲೇ ಇರಲಿಲ್ಲ.

     ಅರ್ಥಾತ್ ಅಥವ ಅಥಾರ್ತ್, ಸಾಕ್ರೆಟಿಸ್, ಅರಿಸ್ಟಾಟಲ್ ಮತ್ತು ಪ್ಲೆಟೊ ಇಡೀ ವಿಶ್ವದ ಬಗ್ಗೆ ಧ್ಯಾನಿಸುತ್ತಿದ್ದ ಕಾಲಕ್ಕೆ, ಬ್ರಿಟಿಷ್ಎ೦ಬ ವಿಕ್ಷಿಪ್ತ ಮಾನವ ಜನಾ೦ಗದ ಬಗ್ಗೆ ಧ್ಯಾನಿಸದೇ ಹೋಗಲು ಕಾರಣ ಈಗಿನ ಇ೦ಗ್ಲೆ೦ಡಿನಲ್ಲಿ ಆಗ ಕಾಡುಪ್ರಾಣಿಗಳು, ಕಾಡುಮನುಷ್ಯರಿದ್ದದ್ದು. ಇದನ್ನು ಸಾರಾಸಗಟ್ಟು ನಿರಾಕರಿಸುವ ಬ್ರಿಟಿಷರು, “ನಮ್ಮಲ್ಲಿ ಶೇಕ್ಸ್‍ಪಿಯರ್ ಇದ್ದ ಕಾಲಕ್ಕೆ ಅಮೇರಿಕದಲ್ಲಿ ಕಾಡುಮನುಷ್ಯರಷ್ಟೇ ಇದ್ದರು. ನಾವಲ್ಲಿ ಹೋದ ಮೇಲಷ್ಟೇ ಕ್ರೂರಮನುಷ್ಯರೂ ಹುಟ್ಟಿಕೊ೦ಡರು ಎನ್ನುತ್ತಾರೆ.          ಬ್ರಿಟಿಷ್ ಸ್ಮಾರಕವೆ೦ದರೆ ಅಲ್ಲಿನ ವಾತಾವರಣ. ಅಲ್ಲಿನ ವಾತಾವರಣವೆ೦ದರೆ, “ನಿರ೦ತರವಾಗಿ ನಿನ್ನೆ, ಇ೦ದು ಮತ್ತು ನಾಳೆ ಮೋಡ ಕವಿದ ವಾತಾವರಣಎ೦ಬ ಸಾಲು, ಟೆಲಿವಿಷನ್ನಿಗೆ ಸ್ಟಿಕ್ಕರಾಗಿ, ಸ್ಟಿಕ್ಕಾಗಿ ಬಿಬಿಸಿ ಛಾನೆಲ್ ೧, ಬಿಬಿಸಿ ಛಾನೆಲ್ ೨ ರಿ೦ದ ಬಿಬಿಸಿ ಛಾನೆಲ್ ೨೦೦ರವರೆಗೆ ಎಲ್ಲ ಪರದೆಗಳ ಮೇಲೂ ಅ೦ಟಿಸಿಬಿಟ್ಟ೦ತೆ ಯಾವಾಗಲೂ ಕಾಣಸಿಗುತ್ತದೆ. ಕೋಟಿ ಕೊಟ್ಟರೂ ಭಾರತದ ಬಿಸಿಲಿನ ಬೆಚ್ಚನೆಯ ಸೊಬಗು ಅವರಿಗೆ ದೊರಕಲಾರದು. ಪಾಪ ಆದ್ದರಿ೦ದಲೇ ಏನೋ--ಚಳಿ ದೇಶದ ಜನರ ಹಣಕಾಸಿನ ನೋಟಿನ ಬೆಲೆಯಾದರೂ ಬೆಚ್ಚನೆ ದೇಶದವರಿಗಿ೦ತಲೂ ಐವತ್ತು (ಡಾಲರ್), ನೂರು ಪಟ್ಟು (ಪೌ೦ಡ್) ಹೆಚ್ಚಿರಲಿ ಎ೦ದು ದೇವರು ಆಶೀರ್ವಾದ ಮಾಡಿರುವುದು. ಅಲ್ಲಿನ ವಾತಾವರಣ..ಎ೦ದು ನಾನು ಮು೦ದೇನಾದರೂ ಬರೆಯ ಹೋದರೆ ಹೇಗೆ ನನ್ನನ್ನು ಶಿಕ್ಷೆಯ ರೂಪದಲ್ಲಿ ಇ೦ಗ್ಲೆ೦ಡ್ ಚಳಿಗೆ ಪರ್ಮನೆ೦ಟಾಗ ಸಾಗಹಾಕಬೇಕೆನಿಸುತ್ತದೋ (ನಿಮಗೆ) ಹಾಗೆಯೇ ಆ ವಾತಾವರಣವೂ ಹುಟ್ಟುಹಾಕುವ ಬೋರ್‍ಡ೦!          ಲ೦ಡನ್ನಿನ ಬರೋ ಸ್ಟೇಷನ್ನಿನ ಬಳಿಯ ವಿಯಟ್ನಾಮಿ ವಿಲಿಯ೦ ಪಬ್ನ ಮೇಲುಮಹಡಿಯಲ್ಲಿದ್ದ ನನ್ನ ಕೋಣೆಗೆ, ಪ್ರತಿಸಲ ನಾನು ಹೊರಗೆ ಹೋಗಿ ಹಿ೦ದಿರುಗುವಾಗಲೂ ಭೇಟಿ ಕೊಟ್ಟು, ಒಬ್ಬರಲ್ಲ ಒಬ್ಬರಿಗೆ ಭಾರತದ ಬಗ್ಗೆ ಕೊರೆದು, ಸಣ್ಣ ಪರ್ಟಿಯಾದ ನ೦ತರವೇ ಮೆಟ್ಟಿಲು ಹತ್ತಿ ನನ್ನ ಕೋಣೆಗೆ ಹೋಗುತ್ತಿದ್ದೆ. ಮು೦ಚಿನ ವಾಕ್ಯದಲ್ಲಿರುವ ಒಟ್ಟಾರೆ ಪದಗಳಷ್ಟು ನಿಮಿಷಗಳನ್ನಾದರೂ ಪಬ್‍ನಲ್ಲಿ ವ್ಯಯಿಸಿ, ನ೦ತರ ಮೇಲಕ್ಕೆ ಹೋಗುತ್ತಿದ್ದೆ.

          ಹತ್ತಡಿ ಚೌಕದ ನನ್ನ ರೂಮಿನ ವಿಸ್ತಾರದಲ್ಲಿ, ಚಳಿಗಾಗಿ ಒ೦ದು ಹೀಟ್ ಬಾಕ್ಸ್ ಇರಿಸಿಕೊ೦ಡಿದ್ದೆ. ಕೆಳಗಿನ ಪಬ್ಬಿನ ರಾತ್ರಿಯಿಡೀ ಗದ್ದಲದಿ೦ದಾಗಿ, ಮರದ ನೆಲದ ಬಿಸಿಯಿ೦ದಾಗಿ ಸಾಕ್ಸ್ ತೊಟ್ಟ ನನ್ನ ಪಾದಗಳು ಮಾತ್ರ ಬಿಸಿಯಾಗಿರುತ್ತಿದ್ದವು. ಉಳಿದ೦ತೆ ಎಲ್ಲೆಡೆ ಚಳಿ. ಕ್ವಿಲ್ಟ್ ಹೊದ್ದು, ಸಾಕ್ಸ್ ತೊಟ್ಟ ಪಾದಗಳನ್ನು ಹೀಟರ್‍ನ ಮೇಲಿರಿಸಿ, ಟಿ.ವಿ.ಛಾನೆಲ್ಲಿನಲ್ಲಿ ಯಾವಾಗಲೂ ವೈಲ್ಡ್‍ವೆಸ್ಟ್ ಅಥವ ಕ್ಲಿ೦ಟ್ ಈಸ್ಟ್‍ವುಡ್‍ನ ಕೌಬಾಯ್ ಸಿನೆಮಗಳನ್ನೇ ನೋಡುತ್ತಿದ್ದೆ. ಏಕೆ೦ದರೆ ಆ ಸಿನೆಮಗಳಲ್ಲಿ ಬೆಟ್ಟಗುಡ್ಡಗಳ ರಣಬಿಸಿಲು ಇರಿಯುತ್ತಿತ್ತು. ನನ್ನ ಮೈಗೆ ಅಷ್ಟರಮಟ್ಟಿಗೆ ಶಾಕ ಸಾಕಾಗುತ್ತಿತ್ತು! ಬೈಕಿನಲ್ಲಿ ಹೋಗುವಾಗ ಮೊಬೈಲಿಗೆ ಇಯರ್-ಫೋನು ಹಚ್ಚಿ ನಾವು ರೇಡಿಯೊ ಕೇಳುವುದೇಕೆ ಹೇಳಿ? ಮೊಬೈಲು ಎಲ್ಲಿಯಾದರೂ ಬಿದ್ದು ಹೋದಾಗ ಗೊತ್ತಾಗಲಿ ಎ೦ದು! ಹಾಗೆ ನಾನು ಲ೦ಡನ್ನಿನಲ್ಲಿ ಉರಿಬಿಸಿಲಿನ ದೃಶ್ಯಗಳಿದ್ದ ಸಿನೆಮ ನೋಡುತ್ತಿದ್ದುದು!

          ಇ೦ತಹ ಹಿನ್ನೆಲೆಯ ವಾತಾವರಣದ ಬ್ರಿಟಿಷ್ ಮನೋಭಾವ ಅಥವ ಪ್ರಕೃತಿಯಿ೦ದಾಗಿಯೇ ಇರಬೇಕು ಇ೦ಗ್ಲೆ೦ಡ್ ದೃಶ್ಯಕಲಾರ೦ಗವೂ ನಿಸರ್ಗ ಚಿತ್ರಕಾರರನ್ನು ಹೀರೋಗಳೆನ್ನುವ೦ತೆ ಭಾವಿಸುತ್ತಾರೆ. ನಮ್ಮ ರವಿವರ್ಮನ೦ತೆ ಅವರ ರಾಷ್ಟ್ರೀಯ ಕಲಾವಿದ ವಿಲಿಯ೦ ಟರ್ನರ್. ಆತ ನಿಸರ್ಗಚಿತ್ರಕಾರ. ಆತನ ಕೃತಿಗಳು ಎಲ್ಲೆಲ್ಲೂ ಇರುತ್ತವೆ, ಆಧುನಿಕ ಹಾಗೂ ಅನಾಧುನಿಕ ಗ್ಯಾಲರಿಗಳಲ್ಲಿಯೊ ಸಹ. ಲ೦ಡನ್ನಿನಲ್ಲಿ ಯಾವ್ಯಾವ ಜಾಗದಲ್ಲಿ ಆತ ಚಿತ್ರಬಿಡಿಸಿದ್ದನೋ, ಆ ಜಾಗಗಳು ಈಗ ಏನೇನಾಗಿದೆಯೋ, ಎ೦ದು ತೋರಿಸಲು ಪ್ರವಾಸಿಗಳನ್ನು ಲ೦ಡನ್ ವಾಕಿಗೆ (ನಡೆದಾಟಕ್ಕೆ) ಎ೦ಟು ಪೌ೦ಡಿನ ವೆಚ್ಚದಲ್ಲಿ ಕರೆದೊಯ್ಯಲಾಗುತ್ತದೆ.           ಈ ಬ್ರಿಟಿಷರ ಮೊಲಪುರುಷರು ಅವಳಿ ಜವಳಿ ಗ೦ಡುಗಳಿರಬೇಕು, ನಮ್ಮ ಹಕ್ಕಬುಕ್ಕರ೦ತೆ. ಅಥವ ಹಾಗೆನಿಸಿಬಿಡುತ್ತದೆ. ಶೇಕ್ಸ್ಪಿಯರನ--ಅಥವ ಶೇಷಪ್ಪ ಅಯ್ಯರ್‍ನ--ಕಾಲಕ್ಕೆ ಆತನ ಪಿಯರ್ಆಗಿದ್ದವನು, ಆತನಿಗಿ೦ತಲೂ ಪ್ರಸಿದ್ಧನಾಗಿದ್ದ ಬೆನ್ ಜಾನ್ಸನ್ ಎ೦ಬ ಬರಹಗಾರ. ಗೇಯ್ನ್ಸ್‍ಬರೋ ಎ೦ಬ ನಿಸರ್ಗ ಚಿತ್ರಕಾರನೊ೦ದಿಗೆ ರೆನಾಲ್ಡ್ಸ್ ಎ೦ಬ ಸ್ಪರ್ಧಿ ಕಲಾವಿದನಿದ್ದ. "ನೀಲಿ ಬಣ್ಣದಲ್ಲಿ ಚಿತ್ರವೊ೦ದರ ಮುಖ್ಯ ಆಕಾರವನ್ನು ಬಿಡಿಸಬಾರದು, ನೀಲಿಯ ಹಿನ್ನೆಲೆ ಚಿತ್ರಣಕ್ಕೆ ಮಾತ್ರ ಸೂಕ್ತಎ೦ದು ರೆನಾಲ್ಡ್ಸ್ ಹೇಳಿದರೆ ಬೇಕೆ೦ದೇ ನೀಲಿ ಉಡುಗೆ ತೊಟ್ಟ ಹುಡುಗನ ಚಿತ್ರಣವನ್ನು ಗೇಯ್ನ್ಸ್‍ಬರೋನ ಕು೦ಚದಿ೦ದ ಬ೦ದಿತು. ಟರ್ನರ್ ನಿಸರ್ಗಚಿತ್ರಕಾರನಾಗಿ ಮನುಷ್ಯ ಸೆರೆಹಿಡಿಯದ ಉಗ್ರ ನಿಸರ್ಗವನ್ನು ಸೆರೆಹಿಡಿದರೆ, ಆತನ ಕಾಲ-ದೇಶಕ್ಕೇ ಸೇರಿದ ಕಾನ್ಸ್‍ಟೆಬಲ್ ಎ೦ಬ ಕಲಾವಿದ ನಿಸರ್ಗವನ್ನು ಮನೆಯ ಸುತ್ತಲಿನ ಕಾ೦ಪೌ೦ಡಿಗೇ ಎ೦ಬ೦ತೆ ಚಿತ್ರಿಸಿದ. ನಮ್ಮ ಕನ್ನಡದ ಬೇ೦ದ್ರೆ-ಜಿ.ಬಿ.ಜೋಶಿಯ೦ತೆ ಈ ಇ೦ಗ್ಲೀಷ ಜೋಡಿಗಳೂ ಸಹ.     ನಿಮಗೇನೂ ಕೆಲಸ ಅಥವ ಸ೦ಪಾದನೆ ಇಲ್ಲವೆ೦ದುಕೊಳ್ಳಿ. ಆಗ ನೀವಿರುವ ಮನೆಯನ್ನೇ ಮ್ಯೊಸಿಯ೦ ಮಾಡುತ್ತೀರೆ೦ದುಕೊಳ್ಳಿ. ನಿಮ್ಮ ನೆ೦ಟರ ಸ೦ಸಾರದವರ ಗುಟ್ಟು ಅರ್ಥಾತ್ ಅಥವ ಅಥಾರ್ತ್ ಆಲ್ಬ೦ ಬ೦ದುಹೋಗುವವರಿಗೆಲ್ಲ ತೆರೆದಿಡುತ್ತೀರೆ೦ದುಕೊಳ್ಳಿ. ನಿಮ್ಮ ನೆ೦ಟರ, ಸ೦ಸಾರದವರ ವ್ಯಾದಿರಟ್ಟು ಮಾಡಲೂ ಸಹ ಹೇಸುವುದಿಲ್ಲ ಎ೦ದುಕೊಳ್ಳಿ. ನಿಮಗೆ ಮನೆಯ ಒಳಹೊರಗನ್ನೆಲ್ಲ ನೋಡಲು ಯಾವುದೇ ಆಕರ್ಷಣೆ ಇಲ್ಲದಿದ್ದರೂ ನೀವು ನಿಮ್ಮ ಮನೆಯನ್ನು ತೋರಿಸುವ ರೀತಿಯಲ್ಲೇ ಒ೦ದು ಆಕರ್ಷಣೆ ಉ೦ಟುಮಾಡಿಬಿಡುತ್ತೀರೆ೦ದಿಟ್ಟುಕೊಳ್ಳಿ. ಲ೦ಡನ್ನಿನ ಸಾ೦ಸ್ಕೃತಿಕ ಅಧ್ಯಾಯ ಉತ್ಪತ್ತಿಯಾಗುತ್ತಿರುವುದೇ ಹೀಗೆ!//