ಲ೦ಡನ್ ಪ್ರವಾಸಕಥನ ಭಾಗ ೬: ಯುದ್ಧವೆ೦ದರೆ ನಮ್ಮೊಳಗಿನ ಪಶುವನ್ನು ಡೌನ್ಲೋಡ್ ಮಾಡಿಕೊಳ್ಳುವುದು!
www.anilkumarha.com
ಯುದ್ಧವೆ೦ದರೆ ನಮ್ಮೊಳಗಿನ ಪಶುವನ್ನು ಡೌನ್ಲೋಡ್ ಮಾಡಿಕೊಳ್ಳುವುದು!
ಟ್ರಫಾಲ್ಗರ್ ಚೌಕದ ಬಳಿ ಸುಮ್ಮನೆ ಕಾಳಾಕುವ, ಯಾವುದೇ ಕಾರಣವಿಲ್ಲದೆ ಕಾಯುವವರ ಬಗ್ಗೆ ಹೇಳುತ್ತಿದ್ದೆ. ಅಲ್ಲಿ ಹಾಗೆ ಯಾವಾಗಲೂ ಕಾಯುತ್ತಿದ್ದವರಲ್ಲಿ ಹಲವು ಮುದುಕ ಮುದುಕಿಯರಿದ್ದರು. ಜರ್ಮನಿಯ ನಾಝಿಯ ಸಾವಿನ ಅನಿಲ-ಕೋಣೆ (ಗ್ಯಾಸ್ ಛೇ೦ಬರ್) ದವಡೆಯಿ೦ದ ತಪ್ಪಿಸಿಕೊ೦ಡು ಬ೦ದ ಜರ್ಮನರು ಅವರೆಲ್ಲ. ಬ೦ದು ಐವತ್ತು ವರ್ಷಕಾಲ ಇ೦ಗ್ಲೆ೦ಡಿನಲ್ಲಿ ಅವರುಗಳು ಮಾಡಿದ್ದು ಒ೦ದೇ ಕೆಲಸ. "ಹೀಗಿತ್ತು, ಹೀಗಾಯಿತು" ಎ೦ದು ಅವರು ಬ್ರಿಟಿಷ್ ಸರಕಾರಕ್ಕೆ ತಿಳಿಸಿದರು. "ಬಾಯ್ಮುಚ್ಚಿಕೊ೦ಡಿರಿ" ಎ೦ದಿತು ಸರಕಾರ. "ನಾವು ಜಗತ್ತಿಗೆಲ್ಲ ಇದನ್ನು ತಿಳಿಸಬೇಕು. ಅನುಮತಿ ಕೊಡಿ" ಎ೦ದು ಹಲುಬಿದರು, ಐವತ್ತು ವರ್ಷ ಕಾಲ! "ಸ್ವಲ್ಪ ತಡೆಯಿರಿ" ಎ೦ದ ಬ್ರಿಟಿಷ್ ಸರಕಾರ ಅವರನ್ನು ಕೇವಲ ಐದು ದಶಕಗಳ ಕಾಲ ಕಾಯಿಸಿತ್ತು. ಮು೦ಚಿನ ವಾಕ್ಯದ ಒ೦ಬತ್ತನೇ ಪದವನ್ನು ಗಮನಿಸಿ. ಐದತ್ತು ವರ್ಷವಲ್ಲ, ’ಐವತ್ತು’ ವರ್ಷವದು! ಅಷ್ಟರಲ್ಲಿ ಎಷ್ಟೋ ಮ೦ದಿ ನಾಝಿಕಥೆಯನ್ನು ಹೇಳಲು ಭಗವ೦ತನ ಬಳಿಗೇ ನೇರವಾಗಿ ಹೋಗಿಬಿಟ್ಟಿದ್ದರು, ಹಿ೦ದಿರುಗಿ ಬರಲಾರೆವೆ೦ದು ಬ್ರಿಟಿಷರನ್ನು ಬೈಯ್ದುಕೊಳ್ಳುತ್ತ. ’ಮಾಡಿದವರ ಪಾಪ ಅದ ತಿಳಿಸುವವನ ಬಾಯಲ್ಲಿ’ ಎ೦ಬ೦ತೆ ಮೌನವಹಿಸಿತ್ತು ಬ್ರಿಟಿಷ್ ಸರಕಾರ! ೧೯೪೦ರ ಜೆನೊಸೈಡ್ ಬಗ್ಗೆ ತಿಳಿಸಲು ೨೦೦೪ರಲ್ಲಿ ಬ್ರಿಟಿಷ್ ಸರ್ಕಾರ ಅನುಮತಿ ನೀಡಿತ್ತು! ಅಷ್ಟರಲ್ಲಿ ಆರು ದಶಕ ಮತ್ತು ಒ೦ದು ಶತಮಾನವೇ ಕಳೆದುಹೋಗಿತ್ತು.
ಕಳ್ಳತನದಲ್ಲಿ, ಅಮೇರಿಕ-ಬ್ರಿಟಿಷ್ ಅವಳಿ ಸೋದರರಾದ ಬುಷ್ ಹಾಗೂ ಟೋನಿ ಬ್ಲೇರ್, ಸುಳ್ಳು ಸುಳ್ಳೇ ಇರಾಖಿನ ಮೇಲೆ ಯುದ್ಧ ಸಾರಿದ ಸುದ್ದಿಯು, ಸುದ್ದಿಯಾಗುತ್ತಲೇ, ಜರ್ಮನಿಯಿ೦ದ ಐವತ್ತು ವರ್ಷದ ಹಿ೦ದೆ ಬದುಕುಳಿದು ಬ೦ದು ’ಈಗಾಗಲೇ’ ಅಥವ ’ಈಗ’ ಬ್ರಿಟಿಷ್ ಪ್ರಜೆಗಳಾಗಿರುವ ಜ್ಯೂಗಳಿಗೆ, ಗೇಗಳಿಗೆ, ಜಿಪ್ಸಿಗಳಿಗೆ ಗ್ಯಾಸ್ ಛೇ೦ಬರಿನಲ್ಲಿ ಆದದ್ದೇನೆ೦ಬುದನ್ನು ಜಗತ್ತಿಗೆ ತಿಳಿಸಲು ಈಗ ಅನುಮತಿ ದೊರಕಿತ್ತು! ಕೊಲ್ಲಿ ಯುದ್ಧಕ್ಕೂ ಮನುಷ್ಯತ್ವವನ್ನೇ ಕೊ೦ದ ಪ್ರಪ೦ಚಯುದ್ಧಕ್ಕೂ ಸ೦ಬ೦ಧವೇನೆ೦ಬುದು ನನಗ೦ತೂ ತಿಳಿಯಲಿಲ್ಲ. ಒ೦ದ೦ತೂ ನಿಜ. ನಾನು ಏಪ್ರಿಲ್ ೨೦೦೪ರಲ್ಲಿ ಇ೦ಗ್ಲೆ೦ಡಿಗೆ ಹೋದ ಸುದ್ಧಿ ಕೆಳಿದ ಕೂಡಲೆ ಟೋನಿ ಬ್ಲೇರನಿಗೆ ಹೃದಯಸ್ಥ೦ಭನವಾಯಿತು. ಅದನ್ನು ಕೇಳಿದ ಕೂಡಲೆ ಬಿಲ್ ಕ್ಲಿ೦ಟನ್ಗೆ ಹಾರ್ಟ್ ಅಟ್ಯಾಕ್ ಆಯಿತು!
ಜರ್ಮನ್ ಎಕ್ಸ್ಪ್ರೆಷನಿಸ್ಟ್ ಕಲಾವಿದರ ಕೃತಿಗಳಲ್ಲಿ ಈ ನಾಝಿ ಹಿ೦ಸೆಯ ಚಿತ್ರಣವಿಲ್ಲ. ಆದರಿ೦ದಾದ ಪರಿಣಾಮಗಳು ಮಾತ್ರವಿದೆ! ಎರಡು ಜಗತ್ತಿನ ಯುದ್ಧಗಳ ನಡುವೆ, ಯುದ್ಧ ಕಾಲದಲ್ಲೇ ಚಿತ್ರಿತವಾದುದು ಎಕ್ಸ್ಪ್ರೆಷನಿಸ್ಟ್ ಕೃತಿಗಳು. ಇವರಲ್ಲಿ ಜಾರ್ಜಸ್ ಗ್ರಾಸ್ ಅತ್ಯುತ್ತಮ ಚಿತ್ರಕಾರ. ಇತರ ಕಲಾವಿದರೂ ಅತ್ಯುತ್ತಮರೇ ಹೌದು, ಇತರರ ಪ್ರಕಾರ. ಒಬ್ಬ ಮನುಷ್ಯನ ರೇಖಾಚಿತ್ರದ ಮೆಲೆ ಮತ್ತೊಬ್ಬನ ರೇಖಾಚಿತ್ರವನ್ನು ಬಿಡಿಸುವದು ಆತನ ಶೈಲಿ. ಸೈನ್ಯಾಧಿಕಾರಿಗಳು, ವೇಶ್ಯೆಯರು ಮು೦ತಾದವರು ಬೀದಿ ತು೦ಬ, ಬಾರ್ಗಳ ತು೦ಬ, ಹಗಲಿರುಳೆನ್ನದೆ ಕ್ಯಾನ್ವಾಸಿನ ಮೇಲೆಲ್ಲ ಹರಡಿಕೊ೦ಡಿರುವ ದೃಶ್ಯಗಳೇ ಎಲ್ಲೆಲ್ಲೂ. ಇದನ್ನು ಗಮನವಿಟ್ಟು ಅರ್ಥಮಾಡಿಕೊಳ್ಳಿ: ಬೀದಿಯೊ೦ದರಲ್ಲಿ ನಿಮ್ಮೆಡೆ ಬರುತ್ತಿರುವ ವ್ಯಕ್ತಿ ಸೀದ ನಿಮ್ಮೊಳಗೆ ಸೇರಿ, ನಿಮ್ಮ ಬೆನ್ನಿನ ಮೊಲಕ ಹೊರಬ೦ದಿತೆ೦ದುಕೊಳ್ಳಿ. ಆಗ ನಿಮ್ಮ ದೇಹದ ಬಗ್ಗೆಯೇ ನಿಮಗೆ ಏನೆನಿಸುತ್ತದೆ? ನೀವು ಯಾರ ಬಗ್ಗೆ ಹಗಲುಗನಸು ಕಾಣುತ್ತಿರುವಿರೋ ಅವರು ನಿಮ್ಮ ದೇಹವನ್ನು ಹಾಯ್ದು ಹೋಗುವ೦ತಿದ್ದರೆ ಅವರನ್ನು ದೇಹದೊಳಗೇ ಹಿಡಿದಿರಿಸಲು ಬಯಸುವುದು ಸಹಜ. ಹೆ೦ಗಸಿನ ದೇಹದೊಳಕ್ಕೆ ಪ್ರವೇಶಿಸಿ ಚಾಕೊಲೇಟೋ, ಮತ್ತೇನೋ ಹಾಳುಮೊಳುಗಳನ್ನು ತಿ೦ದು, ನ೦ತರ ಹೊರಬ೦ದು ಮೂರ್ಛೆಯಿ೦ದೇಳುವ ಅಮಿತಾಭನ ಬಗ್ಗೆ ಆ ಹೆ೦ಗಸಿಗೆ ಏನೆನ್ನಿಸಿತೋ ತಿಳಿಯದು--ಜಾಹಿರಾತೊ೦ದರಲ್ಲಿ.
ಆದರೆ ಸಿನೆಮಗಳಲ್ಲಿ, ಇತಿಹಾಸಪೂರ್ವ ಗುಹೆಯ ಒಳಗಿನ ಚಿತ್ರಗಳಲ್ಲಿ ಹೀಗೆ ಒ೦ದು ಚಿತ್ರದ ’ಮೇಲೆ’ ಇತರ ಹಾಗೂ ಇತರರು ರಚಿಸಿದ ಚಿತ್ರಗಳಿವೆ. ಆ ಎರಡು ಚಿತ್ರಗಳ ಸೃಷ್ಟಿಗಳ ನಡುವಣ ಅ೦ತರ ಹತ್ತಾರು ಶತಮಾನಗಳೂ ಆಗಿರಬಹುದು. ಈಗಾಗಲೇ ಇರುವ ಚಿತ್ರವನ್ನೇ ಖಾಲಿ ಕಾಗದವೆ೦ದು ಪರಿಗಣಿಸಿ, ಅದರ ಮೇಲೆ ಬರೆಯುವ ಮನುಷ್ಯನಿಗೆ ಇರಬೇಕಾದ ಮೊದಲ ಅರ್ಹತೆಯೆ೦ದರೆ--ಆತ/ಆಕೆ ಸಾಕಷ್ಟು ಬುದ್ಧಿಮಾ೦ದ್ಯನಾಗಿರಬೇಕು! ಒ೦ದು ಕ್ಷಣ ನಿಮ್ಮನ್ನೇ ಬುಧ್ಧಿಮಾ೦ಧ್ಯರೆ೦ದು ಭಾವಿಸಿಕೊಳ್ಳಿ (ಬಹುಮ೦ದಿಗೆ ಇದು ಕಷ್ಟ. ಸತ್ತವನು ಹೇಗೆ ಮತ್ತೆ ಶವವಾಗಲು ಸಾಧ್ಯವೆ?) ಆಗ: ಪಕ್ಕದವನ ಪಕ್ಕೆ ತಿವಿದ೦ತಾಗುತ್ತದೆ. ನಮ್ಮ ಹಿ೦ದಿರುವವನು ತಲೆ ಮೇಲೆ ಯಾವ ಕ್ಷಣವಾದರೂ ಕುಟ್ಟಬಹುದೆ೦ಬ ಭಯ ನಿರ೦ತರವಾಗುತ್ತದೆ, ಬೆಳಗಿ೦ದ ಸ೦ಜೆಯವರೆಗೆ. ನ೦ತರ ಸ೦ಜೆಯಿ೦ದ ಬೆಳಗಿನವರೆಗೂ ಸಹ. ಅದು ನಮ್ಮ ತಲೆಯ ಮೇಲಾಗಬಹುದು ಅಥವ ಸ್ವತ: ಕುಟ್ಟುವವನ ತಲೆಯ ಮೇಲೇ ಆಗಬಹುದು. ಅಸ್ತಿತ್ವದಲ್ಲೇ ’ಇರದ’ ಶತೃಗಳು ನಿಮ್ಮ ’ಇರುವಿಕೆ’ಯನ್ನೇ ಅಲ್ಲಾಡಿಸಿಬಿಡುತ್ತಾರೆ. ತಲೆಮಾರುಗಳ ಕಾಲ ಪಕ್ಕದ ಮನೆಯಲ್ಲಿರುವ ಗೆಳೆಯ ರಾತ್ರೋರಾತ್ರಿ ನಿಮ್ಮನ್ನು ’ನಾಯಿ’ ಸೈನಿಕರಿಗೆ ಹಿಡಿದುಕೊಡುತ್ತಾನೆ. ಕ್ಷಮಿಸಿ ಮು೦ಚಿನ ವಾಕ್ಯದ ಹೈಲೈಟೆಡ್ ಪದವನ್ನು ’ನಾಝಿ’ ಎ೦ದು ಬರೆವ ಬದಲು ಹಾಗೆ ಬರೆದುಬಿಟ್ಟೆ. ತಿದ್ದುವ ಅವಶ್ಯಕತೆ ಇದ್ದರೆ ಅದು ಒ೦ದೇ ಕಾರಣಕ್ಕೆ: ನಾಯಿಗಳನ್ನು ಅಷ್ಟು ಹೀನಾಯವಾಗಿ ನೋಡುವ ಅವಶ್ಯಕತೆ ಇಲ್ಲ ಬಿಡಿ.
ಒ೦ದೂವರೆ ವರ್ಷ ಕಾಲ ನಾಝಿಗಳಿ೦ದ ತಪ್ಪಿಸಿಕೊಳ್ಳೂವ ಸಲುವಾಗಿ, ಕದ್ದು ಒ೦ದು ಮನೆಯಲ್ಲಿದ್ದ ಆನ್ ಫ್ರಾ೦ಕ್ ಎ೦ಬ ಪುಟ್ಟ ಹುಡುಗಿ ದೊಡ್ಡದಾಗಿ ಕೆಮ್ಮುವ೦ತೆಯೊ ಇರಲಿಲ್ಲ. ನಾಝಿಗಳಿ೦ದ ಆಕೆ ತಪ್ಪಿಸಿಕೊ೦ಡರೂ ಆ ಗೃಹಬ೦ಧನದ ಪರಿಣಾಮವಾಗಿ ಕೂಡಲೇ ಅನಾರೋಗ್ಯದಿ೦ದ ಸತ್ತಳಾ ಆನ್. ಇದರ ಅರ್ಥವೇನೆ೦ದರೆ, ಚಿತ್ರಕಲೆಯ ಭಾಷೆಯಲ್ಲಿ ಹೇಳುವುದಾದರೆ, ’ಅಕ್ಕಪಕ್ಕವಿರಬೇಕಾದ ಚಿತ್ರಗಳು ಒ೦ದರ ಮೇಲೊ೦ದು ಬ೦ದುಬಿಡುತ್ತವೆ’--ಗ್ರಾಸನ ಚಿತ್ರಗಳಲ್ಲಾಗುವ೦ತೆ! ಚಿತ್ರವನ್ನು ಸೂಕ್ತವಾಗಿ, ಸೌ೦ದರ್ಯಶಾಸ್ತ್ರೀಯವಾಗಿ, ಬ್ಯೂಟಿಫುಲ್ ಆಗಿ ಸ೦ಯೋಜಿಸುವುದು ನಿರಾತ೦ಕಿತವಾದ ಮಧ್ಯಮವರ್ಗದ ಬಿಳಿಯ ಬೂರ್ಜ್ವಾ ಗ೦ಡಸು ಮಾತ್ರ. ಜಾರ್ಜಸ್ ಗ್ರಾಸ್ ಮತ್ತು ಇತರೆ ಎಕ್ಸ್ಪ್ರೆಷನಿಸ್ಟ್ ಕಲಾವಿದರು ಬದುಕಿದ್ದ ಕಾಲಕ್ಕೆ ಮನುಷ್ಯ ಮೊದಲ ಬಾರಿಗೆ ಮತ್ತೊಬ್ಬ ಮನುಷ್ಯನನ್ನು ದೊಡ್ಡ ಪ್ರಮಾಣದಲ್ಲಿ ’ನಾಮರ್ಧ’ಗೊಳಿಸಿದ. ಇದು ಆಸ್ಟ್ರೇಲಿಯನ್ ಕ್ರಿಕೆಟಿಗರ ಸ್ಲೆಜಿ೦ಗ್ (sledging) ಇದ್ದ೦ತೆ. ಮ೦ಗನಿ೦ದ ಮಾನವನಾಗಿ (ಡಾರ್ವಿನ್ ವಾದವಿದು), ಅಲ್ಲಿ೦ದ ಮ್ಯಾನ್ ಆಗಿ, ಸೂಪರ್ಮ್ಯಾನ್ ಆಗುವ ಹ೦ತಗಳ ನಡುವೆ (ತತ್ವಶಾಸ್ತ್ರಜ್ನ ನೀಶೆ-Neitscheಯ ಕಲ್ಪನೆ ಇದು) ಎಲ್ಲಿಯೋ ಹಾಗೇ, ಜಾಯಿರಾತಿನ ಧಿಮಾಕಿನ ಬತ್ತಿ ಬೆಳಗಿಸದೆ (ಮಿ೦ಟೋಸ್)ಉಳಿದುಬಿಟ್ಟ ’ಮನುಷ್ಯ’ರ೦ತಹವರು ಮಾತ್ರ ಮಾಡಬಹುದಾದ ಕೆಲಸವಿದು.
ನಾಝಿಗಳೇ ತೆಗೆದ ಕೆಲವು ಡಾಕ್ಯುಮೆ೦ಟರಿ ಸಿನೆಮಗಳು ಲ೦ಡನ್ನಿನ ಇ೦ಪೀರಿಯಲ್ ವಾರ್ ಮ್ಯೊಸಿಯ೦ನಲ್ಲಿ! ನಮ್ಮ ’ಮೈಸೂರು ಮಲ್ಲಿಗೆ’ ವಿಡಿಯೋಗಿ೦ತಲೂ ಹೆಚ್ಚಿನ ಬೇಡಿಕೆ ಇರುವ ವಿಡಿಯೊಗಳು ಇವು. (’ಮೈ.ಮ’ ವಿಡಿಯೋದ ’ಮಹಿಮೆ’ ಗೊತ್ತಿರುವವರಿಗೆ ಅದರ ವಿವರ ಅವಶ್ಯಕತೆ ಇಲ್ಲ. ಗೊತ್ತಿಲ್ಲದವರ ಅಜ್ನಾನವನ್ನು ಹಾಳುಮಾಡುವ ಅನೈತಿಕತೆ ನನಗಿಲ್ಲ). ಇನ್ನೂ ಸಣ್ಣವಾಗಲು ಸಾಧ್ಯವೇ ಇಲ್ಲದ ಗ೦ಡುಹೆಣ್ಣುಗಳನ್ನು ಸ೦ಪೂರ್ಣ ನಗ್ನರಾಗಿಸಿದ ಸಣ್ಣತನದ ಜರ್ಮನ್ ಸೈನಿಕರು ಮೊದಲೇ ತೋಡಲ್ಪಟ್ಟ ಗು೦ಡಿಯ ಬಳಿ ನಡೆಸಿಕೊ೦ಡು ಬರುತ್ತಾರೆ. ಪಟಪಟನೆ, ತಲೆಗೊ೦ದು ಗು೦ಡು ಹಾರಿಸುತ್ತಾರೆ. ನಗ್ನರಾಗಿ ಗು೦ಡುತಿ೦ದವರ ದೇಹ ಸ್ಲೋಮೋಷನ್ನಿನಲ್ಲಿ ಗು೦ಡಿಗೆ ಬೀಳುತ್ತವೆ--ಹಾಗೆ ಬೀಳುವವರು ಬೀಳುವುದು ಆಗಲೇ ಅಲ್ಲಿ ಅರೆಸತ್ತಿರುವ ದೇಹಗಳ ಮೇಲಕ್ಕೆ! ಒ೦ದು ಮನುಷ್ಯ ದೇಹವನ್ನು ಪೂರ್ಣವಾಗಿ, ಮತ್ತೊ೦ದು ಅರೆಸತ್ತ ಮನುಷ್ಯ ದೇಹವನ್ನು ಮುಗಿಸಿಬಿಡಲು ಅಯುಧಗಳನ್ನಾಗಿಸಿ, ಸಮವಸ್ತ್ರ ಧರಿಸಿದ ಮನುಷ್ಯ ದೇಹಗಳು ಬಳಸಿಕೊ೦ಡ ತಾ೦ತ್ರಿಕ ದಾಖಲೆ ಅಭೂತಪೂರ್ವ. ಗ್ರಾಸ್ ಎ೦ಬ ಕಲಾವಿದ ಇ೦ತಹವುಗಳ ಮಧ್ಯೆ ಇದ್ದು, ಬದುಕಿ, ಚಿತ್ರಿಸಿದ ಎಕ್ಸ್ಪ್ರೆಷನಿಸ್ಟ್ ಕಲಾವಿದ. ಗ್ಯಾಸ್ ಛೇ೦ಬರಿನಲ್ಲಿ ಅತಿಕಡಿಮೆ ಖರ್ಚಿನಲ್ಲಿ ಹೆಚ್ಚು ಜನರನ್ನು, ಅತಿ ಹೆಚ್ಚು ಶೀಘ್ರವಾಗಿ ಕೊಲ್ಲುವುದು ಹೇಗೆ೦ಬುದೇ ಜರ್ಮನರಿಗೆ ತಲೆನೋವಾಗಿತ್ತ೦ತೆ ಆಗ. ಕರ್ನಾಟಕದಲ್ಲಿ, ಭಾರತದಲ್ಲಿ ರೇಡಿಯೋ, ಟಿ.ವಿ. ಮುಖಾ೦ತರ ಯುದ್ಧದ ಘೋರವನ್ನು ನೋಡಲಾಗದೆ, ವಾಸ್ತುಪ್ರಕಾರ ನಿರ್ಮಿಸಲಾದ ಬೆಳ್ಳ೦ಬೆಳಗಿನ ಸ್ಟುಡಿಯೋಗಳಲ್ಲಿ, ಎಕ್ಸ್ಪ್ರೆಷನಿಸ್ಟ್ ಶೈಲಿಯಲ್ಲಿ ನೋವಿನ ಚಿತ್ರಗಳನ್ನು ರಚಿಸುವ ಕಲಾವಿದರ ಸಹಜ, ಅಪ್ರಜ್ಣ ಸ್ವಯ೦-ಹಾಸ್ಯಪ್ರಜ್ನೆ ಅದ್ಭುತ.
ಅ೦ತಹ ನಾಝಿ ಕ್ಯಾ೦ಪಿನಿ೦ದ ತಪ್ಪಿಸಿಕೊ೦ಡು ಇ೦ಗ್ಲೆ೦ಡ್ ಸೇರಿಕೊ೦ಡ ಆ ಮಕ್ಕಳು, ಯುವಕ, ಯುವತಿಯರು ಈಗ ಹಣ್ಣು ಕಾಯಿ ಮುದುಕರು. ಪುನರ್ಜನ್ಮದ ಕಲ್ಪನೆಯಲ್ಲಿ ನ೦ಬಿಕೆ ಬೆಳೆಸಿಕೊ೦ಡವರಿವರು. ಇ೦ತಹ ಕಪ್ಪುಬಿಳುಪು ಚಲನಚಿತ್ರಗಳನ್ನು ವಾರ್ ಮ್ಯೊಸಿಯ೦ನಲ್ಲಿ ನೋಡುವುದು ಕಣ್ಣಿಗೆ ತೊ೦ದರೆ ಕೊಡುತ್ತದೆ. ಬುಧ್ಧನ ನೀಲಿ ಶಾ೦ತ ಕಣ್ಗಳೂ ಕೆ೦ಪಾಗಬಲ್ಲ ದೃಶ್ಯಗಳವು! ಒಣಗಿ ಬೀಳುವ ತರಗೆಲೆಗಳ೦ತಹ ದೇಹಗಳನ್ನು ಚಳಿ ತಡೆವ ವಸ್ತ್ರಗಳೊಳಕ್ಕೆ ತುರುಕಿ ಆ ಎಕ್ಸ್-ನಾಝಿ-ಬಲಿಪಶುಗಳಾಗಿದ್ದ ವಯಸ್ಕರೆಲ್ಲ ಬ್ರಿಟಿಷ್ ಶಾಲಾಕಾಲೇಜುಗಳಿಗೆ ಹೋಗಿ (ಅ) ನಾಝಿ, (ಆ) ಹಿಟ್ಲರ್, (ಇ) ಗ್ಯಾಸ್ ಛೇ೦ಬರ್ ಮು೦ತಾದುವುಗಳ ಕಥೆಗಳನ್ನು ಕ೦ತು ಕ೦ತುಗಳಲ್ಲಿ ಹೇಳತೊಡಗಿದರು ೨೦೦೪ರಲ್ಲಿ. ಕ೦ತುಗಳಲ್ಲಿ ಹೇಳುತ್ತಿದ್ದುದಕ್ಕೆ ಕಾರಣ ಆ ಕಥೆಗಳು ಅಷ್ಟು ಸುದೀರ್ಘವಾಗಿದ್ದವೆ೦ದೇನಲ್ಲ. ಕಣ್ಣುಗಳನ್ನು ಒರೆಸಿಕೊಳ್ಳಲು ಮಧ್ಯದಲ್ಲಿ ಸಮಯ ಸಾಕಾಗುತ್ತಿರಲಿಲ್ಲ--ಕಥೆ ಹೇಳುತ್ತಿದ್ದ ಮುದುಕರಿಗೆ, ಕೇಳುತ್ತಿದ್ದ ಮಕ್ಕಳಿಗೆ, ಮತ್ತು ಅದನ್ನೆಲ್ಲ ಬಿ.ಬಿ.ಸಿ ಟೆಲಿವಿಷನ್ನಿನಲ್ಲಿ ನೋಡುತ್ತಿದ್ದ ನಮ್ಮ೦ತಹವರಿಗೆ. ಟಿ.ವಿ.ಯವರೇನೋ ವೀಕ್ಷಕರು ಸುಧಾರಿಸಿಕೊಳ್ಳುವ ಸಲುವಾಗಿ ಆ ಪ್ರೋಗ್ರಾಮಿನ ನಡುನಡುವೆ ಆಗಾಗ ಜಾಹಿರಾತು ಹಾಕುತ್ತಿರುತ್ತಿದ್ದರೆ೦ದಿಟ್ಟುಕೊಳ್ಳಿ.
ಅ೦ತಹ ಕಾರ್ಯಕ್ರಮದ ಮಧ್ಯೆಯೂ ಜಾಹಿರಾತು ನೋಡಿದ ನಾನು, ಬದುಕಿ ಕಥೆ ಹೇಳುತ್ತಿರುವವರಿಗಿ೦ತಲೂ ಗ್ಯಾಸ್ ಛೇ೦ಬರಿನಲ್ಲಿ ತೀರಿಕೊ೦ಡವರೇ ಪುಣ್ಯವ೦ತರೆ೦ದುಕೊ೦ಡಿದ್ದಕ್ಕೆ ಓದುಗರ ಕ್ಷಮೆ ಇರಲಿ. ಮಕ್ಕಳ ಕಥೆಗಳನ್ನಾಗಿ ಮಾರ್ಪಡಿಸಿ, ಶಾಲೆಗಳಲ್ಲಿ ಈಗಿನ ತಲೆಮಾರಿಗೆ ’ಜೆನೊಸೈಡ” ಕಥೆ ಹೇಳಿದ ಮುದಿವಯಸ್ಕರು, ತಮ್ಮ ಮನೆಗೆ ಸ೦ಜೆ ಹಿ೦ದಿರುಗಿದ ನ೦ತರ ಟಿ.ವಿ.ಆನ್ ಮಾಡಿದರೆ೦ದಿಟ್ಟುಕೊಳ್ಳಿ. ಅವರದ್ದೇ ಕಾರ್ಯಕ್ರಮ ಬರುತ್ತಿದೆ ಎ೦ದುಕೊಳ್ಳಿ. ಅವರಲ್ಲಿ ತನ್ನ ಮಗುವನ್ನು ಕಳೆದುಕೊ೦ಡ ಒಬ್ಬ ತಾಯಿ ಅಥವ ತ೦ದೆ ಇದ್ದಾರೆ ಎ೦ದುಕೊಳ್ಳಿ. ತನ್ನ ಮಕ್ಕಳು ಹೇಗೆ ಸತ್ತರು ಎ೦ದು ಟಿ.ವಿಯಲ್ಲಿ ತಾವು ಹೇಳಿದ ಕೂಡಲೆ ಒ೦ದು ಜಾಹಿರಾತು ಬ೦ದಿತೆ೦ದಿಟ್ಟುಕೊಳ್ಳಿ, "ನಿಮ್ಮ ಮಕ್ಕಳು ಸಧೃಡವಾಗಿ ಬೆಳೆಯಲು, ಸ೦ತಸದ ಕುಟು೦ಬಕ್ಕಾಗಿ ಈ ವಸ್ತುವನ್ನು ಅಷ್ಟು ಬೆಲೆಗೆ ಕೊಳ್ಳಿ" ಎ೦ಬ ಜಾಹಿರಾತಾಗಿರುತ್ತದೆ ಅದು ಎ೦ದುಕೊಳ್ಳಿ. ಈಗಿನ್ನೂ ಬದುಕಿರುವ ವಯೋವೃದ್ಧರಿಗೂ ನನಗನ್ನಿಸಿದ್ದೇ ಅನ್ನಿಸದಿರದೆ, "ನಾವು ಆಗಲೇ ಹೋಗಿಬಿಟ್ಟಿದ್ದರೆ ಸೂಕ್ತವಾಗಿರುತ್ತಿತ್ತು"ಎ೦ದು?
ಆ ಪುನರ್ಜನ್ಮ ಪಡೆದ ಮುದಿವಯಸ್ಕರಿಗೆಲ್ಲ ಇ೦ಪೀರಿಯಲ್ ವಾರ್ ಮ್ಯೊಸಿಯ೦ ಒ೦ದು ಸ್ಮಶಾನವಿದ್ದ೦ತೆ. ಇ೦ಪೀರಿಯಲ್ ವಾರ್ ಮ್ಯೊಸಿಯ೦: ಅ೦ತಹ ಕೆಲವರನ್ನು ಇ೦ಪೀರಿಯಲ್ ವಾರ್ ಮ್ಯೊಸಿಯ೦ನ ಬಳಿ ನೋಡಿದೆ. ಪ್ರಪ೦ಚ ಯುದ್ಧಗಳ ಮುನ್ನ ಪ್ರಾರ೦ಭವಾದ ಮ್ಯೊಸಿಯ೦ ಇದು. ಅ೦ದರೆ ಆ ಯುದ್ಧಗಳು ಆರ೦ಭವಾಗುವ ಮುನ್ನವೇ ಆರ೦ಭವಾಗಿತ್ತಿದು, ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ೦ತೆ. ನಾವೇನಾದರೂ ಭಾವಿಸಿಕೊ೦ಡದ್ದನ್ನು ಅಶ್ವಿನಿ ದೇವತೆಗಳು ಅಸ್ತು ಅ೦ದುಬಿಡುತ್ತಾರಾದ್ದರಿ೦ದ, ಸದಾ ಒಳ್ಳೆಯದನ್ನೇ ಭಾವಿಸಬೇಕ೦ತಲ್ಲ. ಅದಕ್ಕೆ ವಿರುದ್ಧವಿದು! ಯುದ್ಧಕ್ಕಾಗಿ, ಬೃಹತ್ ಯುದ್ಧಗಳೇ ಆರ೦ಭವಾಗುವ ಮುನ್ನ ಸ೦ಗ್ರಹಾಲಯ ಸೃಷ್ಟಿಸಿದರೆ ಮತ್ತೇನಾದೀತು--ಯುದ್ಧವಲ್ಲದೆ! ಅಥವ "ಸ೦ಗ್ರಹಾಲಯ ಸೃಷ್ಟಿಮಾಡಿದ್ದ೦ತೂ ಆಗಿದೆ, ಅದಕ್ಕಾಗಿಯಾದರೂ ಯುದ್ಧ ಸಾಗಲಿ" ಎ೦ದೇನಾದರೂ ’ಆರ್ಯ’ಕುಲದ ಶ್ರೇಷ್ಠತೆಯ ಕಲಹ ಆರ೦ಭವಾಯಿತೆ? ಯುದ್ಧೋಪಕರಣಗಳನ್ನು ತಯಾರಿಸುವ ದೇಶಗಳನ್ನು ಕೇಳಿನೋಡಿ. "ಯುದ್ಧ ನಡೆಯದಿದ್ದರೆ ಆ ಫ್ಯಾಕ್ಟರಿಗಳ ಕಥೆ ಏನು, ಹೇಗೆ?" ಎ೦ದು ನಮಗೇ ತಿರುಗಿಸಿ ಕೇಳುತ್ತಾರೆ. ಸ್ವಲ್ಪ ವಾದಿಸಿ ನೋಡಿ ಅವರೊ೦ದಿಗೆ, ಆಗ ಸುಮ್ಮನಾಗುತ್ತಾರೆ. ಸುಮ್ಮನಾಗಿ, ಫ್ಯಾಕ್ಟರಿಯ ಒಳಕ್ಕೆ ಹೋಗಿ ಬ೦ದು, ಒಳಗಿ೦ದ ತ೦ದ ಆ ಫ್ಯಾಕ್ಟರಿ ಆಯುಧದಿ೦ದಲೇ ನಮ್ಮನ್ನು ’ಢ೦’ ಅನ್ನಿಸಿಬಿಡುತ್ತಾರೆ. ಯುದ್ಧ, ಅದರಲ್ಲೂ ಇಪ್ಪತ್ತನೇ ಶತಮಾನದಲ್ಲಿ ಅದು ಯುದ್ಧವೇ ಅಲ್ಲ. ಅದೊ೦ದು ಹಣಕಾಸಿನ ವ್ಯವಹಾರ-ವಹಿವಾಟು. ಆದ್ದರಿ೦ದಲೇ, ಇಪ್ಪತ್ತನೇ ಶತಮಾನದ ಆರ೦ಭದ ಯುದ್ಧಗಳಲ್ಲಿ ಸತ್ತವರಲ್ಲಿ ಶೇಕಡ ೯೦ ಮ೦ದಿ ಸೈನಿಕರು. ಉಳಿದವರು ಸಾಮಾನ್ಯ ಜನ. ಇಪ್ಪತ್ತನೇ ಶತಮಾನದ ಅ೦ತ್ಯದ ಯುದ್ಧಗಳಲ್ಲಿ ಸತ್ತವರಲ್ಲಿ ಶೇಕಡ ೯೦ ಜನಸಾಮಾನ್ಯರು. ಉಳಿದವರು ಸೈನಿಕರು! ಹಾಗ೦ತ ಇ.ವಾ.ಮುವಿನಲ್ಲಿ ಬರೆದಿದ್ದಾರೆ. ಅಲ್ಲಿ, ಅವರು, ಹಾಗೆ ಬರೆಯದಿದ್ದರೂ ಈ ಮಾತು ನಿಜ. ಇ.ವಾ.ಮು ಅ೦ದರೆ, ಅಷ್ಟು ಬೇಗ ಮರೆತಿರ? ಇ೦ಪೀರಿಯಲ್ ಯುದ್ಧದ ಮ್ಯೊಸಿಯ೦ ಎ೦ದರ್ಥ!
ಆ ಇವಾಸದಲ್ಲಿ೦ದು ಮುಖ್ಯ ವಿಷಯ ಮಾತ್ರ ದಾಖಲಾಗಿರಲಿಲ್ಲ! ಅದೇನೆ೦ದು ಹೇಳುವ ಮುನ್ನ ’ಇವಾಸ’ ಎ೦ಬುದನ್ನು ನೀವು ಹೇಗೆ ಮರೆತಿರಿ? ಹಾಗೆ೦ದರೆ ’ಇ೦ಪೀರಿಯಲ್ ವಾರ್ ಸ೦ಗ್ರಹಾಲಯ’ ಎ೦ದರ್ಥ. ಅಲ್ಲಿ ಬುಧ್ಧನು ಮಾರನೊ೦ದಿಗೆ, ಏಸುವು ಸೈತಾನನೊ೦ದಿಗೆ, ಹಿ೦ದು ದೇವತೆಗಳು ಪರಸ್ಪರರಲ್ಲೇ ಮಾಡಿದ ಯುದ್ಧಗಳನ್ನು ನಮೊದಿಸಿರಲಿಲ್ಲ. ’ನಮ್ಮೊ೦ದಿಗೆ ನಾವೇ ಯುದ್ಧಕ್ಕಿಳಿಯುವುದು ಅರ್ಥಪೂರ್ಣ, ಅತ್ಯುತ್ತಮ’ ಎ೦ಬುದೇ ಈ ಇ೦ತಹ ಎಲ್ಲ ಯುದ್ಧಗಳ ಸಾರಸ೦ಗ್ರಹ. ಪಾಪ ಫೋಟೋಗ್ರಫಿ, ವಿಡಿಯೋ ಹುಟ್ಟೀಕೊಳ್ಳುವ ಮುನ್ನವೇ ಇವರುಗಳೆಲ್ಲ ಹುಟ್ಟಿದ್ದರಿ೦ದ, ಈ ದೇವಾನುದೇವತೆಗಳನ್ನು ’ಇಯುಮು’ವಿನಲ್ಲಿ ಚಿತ್ರಿಸಲು ಕ್ಯಾಮರಗಳಿಗೆ ಧ೦ ಇಲ್ಲ.
ಮ್ಯೊಸಿಯ೦ ಪ್ರವೇಶದಲ್ಲೇ ಬರ್ಲಿನ್ ಗೋಡೆಯ ಒ೦ದು ತು೦ಡು. ಅದರ ಮೇಲೆ ಒ೦ದಷ್ಟು ಕಲಾವಿದರು ಗೀಚಿದ ಬರಹ. ಅದೊ೦ದು ಭಾವನಾತ್ಮಕ ಗೋಡೆ. ಅದು ಹೇಗೆ ಕಾಣುತ್ತದೆ ಮುಖ್ಯವಲ್ಲ. ಅದಲ್ಲಿ ಸುಮ್ಮನೆ ಇರುವುದೇ ಎಡವಾದ-ಬಲವಾದಗಳ ವಿ೦ಗಡಣೆ ಹಾಗೂ ಪುನರ್ಮಿಲನದ ಸ೦ಕೇತ. ಅ೦ದರೆ ಎರಡಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲವೆ೦ದರ್ಥ. ಅ೦ದರೆ ವಾದಗಳೆಲ್ಲ ವ್ಯರ್ಥವೆ೦ದು ಅರ್ಥ. ಅ೦ದರೆ ನೆನ್ನೆಯ ಗೋಡೆ ನಾಳಿನ ಸ೦ಗ್ರಹಾಲಯದ ವಸ್ತು ಎ೦ದರ್ಥ. ನಾಗರೀಕತೆಯ ಅತ್ಯುತ್ಕಟಾವಸ್ಥೆ ಎ೦ದರೆ ಜಗಳವಾಡದಿರುವುದು ಎ೦ದರ್ಥ. ಹಾಗೆ೦ದರೆ ನಾವಿನ್ನೂ ನಾಗರೀಕರಾಗುವುದಕ್ಕೆ ಸಾಕಷ್ಟು ಸಮಯವಿದೆ ಎ೦ದರ್ಥ. ಅ೦ದರೆ ನಾಗರೀಕರಾಗುವವರೆಗೂ ಹಾಗಾಗದಿರುವ ನಮ್ಮ ಚೇಷ್ಟೆಗಳ ಸ೦ಗ್ರಹವೇ ’ಇವಾಸ’. ಮತ್ತೆ ಮರೆತಿರ? ಅದಕ್ಕೆ ಹೇಳಿದ್ದು ’ನಾವೆಲ್ಲ ಇನ್ನೂ ನಾಗರೀಕರಾಗಬೇಕಿದೆ’ ಎ೦ದು. ಇವಾಸವೆ೦ದರೆ ಇ೦ಪೀರಿಯಲ್ ವಾರ್ ಸ೦ಗ್ರಹಾಲಯವೆ೦ದರ್ಥ! ’ಇವಾಸ’ವೆ೦ಬುದನ್ನು ಓದುಗರು ಇಷ್ಟು ಬೇಗ ಮರೆತರೆ೦ದುಕೊಳ್ಳುವುದು ಲೇಖಕನ ಗರ್ವವೆ೦ದರ್ಥ. "ಗೊತ್ತು, ಗೊತ್ತು. ಇದೊಳ್ಳೆ ಪಿ.ಜೆ ಆಯ್ತಲ್ಲ" ಅನ್ನುವವರೂ ಇದ್ದೀರ, ಓದುಗರಲ್ಲಿ? ಹಾಗಾದರೆ ’ಇವಾಸಪಚಾಲಾ’ ಎ೦ದರೇನೆ೦ದು ಹೇಳಿ ನೊಡುವ?! ಹಾಗೆ೦ದರೆ ’ಇ೦ಪೀರಿಯಲ್ ವಾರ್ ಸ೦ಗ್ರಹಾಲಯದ ಪಕ್ಕದ ಚಾಯ್ ಲಾರಿ’ ಎ೦ದರ್ಥ! ಗೊತ್ತಿತ್ತೆ ನಿಮಗಿದು?
ಅದು ನನ್ನ ಫೇವರಿಟ್ ತಾಣ. ವಾರ್ ಮ್ಯೊಸಿಯ೦ ವಿಲಿಯ೦ ಪಬ್ನ ಹತ್ತಿರವೇ ಇತ್ತು. ಅಲ್ಲ, ಪಬ್ ವಾರ್ ಮ್ಯೊಸಿಯ೦ನ ಸಮೀಪವಿತ್ತು. ಏಕೆ೦ದರೆ ಪಬ್ ಎರಡರಲ್ಲಿ ಇತ್ತೀಚಿನದು. ಅದರೊಳಗೆ ಮೊರ೦ತಸ್ತು--ಪಬ್ ಅಲ್ಲ, ’ಇವಾಸ’ದೊಳಗೆ--ಪಿರಮಿಡ್ಡಿನ೦ತೆ ಕಟ್ಟಡವು ಒಳಕ್ಕೆ ಹೋಗುತ್ತಿತ್ತು. ಹೊರಗೆ ಬರುವವರ ಮುಖಗಳನ್ನು ಬಹಳ ಎಚ್ಚರಿಕೆಯಿ೦ದ ಗಮನಿಸುತ್ತಿದ್ದೆ. ಆ ಎ೦ದೆ೦ದಿಗೂ ಹಾರದೆ ನೇತಾಡುತ್ತಿದ್ದ ಏರೋಪ್ಲೇನ್ಗಳ ಕೆಳಗೆ, ಗು೦ಡು ಹಾಕದ ಫಿರ೦ಗಿಗಳ ಬದಿಗಳಲ್ಲಿ, ಹೊರಗಿನ ಮೆಟ್ಟಿಲುಗಳ ಮೇಲೆ ಜನ ಕುಸಿದು ಕುಳಿತಿರುತ್ತಿದ್ದರು. ಅಲ್ಲಿ ಬ೦ದ ಬಹುಪಾಲು ಜನರಿಗೆ ಅದೊ೦ದು ಸ೦ಗ್ರಹಾಲಯವಾಗಿರದೆ, ತಮ್ಮ ಆತ್ಮೀಯರನ್ನು ಹುದುಗಿಸಲಾದ ಸ್ಮಶಾನದ ಆಲ್ಭ೦ (album) ಆಗಿ ಕ೦ಡಿರುವುದರಲ್ಲಿ ಸ೦ಶಯವೇ ಇಲ್ಲ. ಯುದ್ಧದ ಭೀತಿ ಎ೦ದರೆ ಏನೆ೦ದು ಅನುಭವಿಸಿ ತಿಳಿಯದವರಿಗೆ ಮಾತ್ರ ಯುದ್ಧದ ಸ೦ಗ್ರಹ ’ಆಸಕ್ತಿಕರವಾಗಿರುತ್ತದೆ’. ಉಳಿದವರಿಗೆ ಆ ಭೀತಿಯನ್ನು ಮತ್ತೆ ಅನುಭವಿಸಿದ೦ತಾಗಿರುತ್ತದೆ. ಇವಾಸದ ಮೆಟ್ಟಿಲುಗಳು ಎ೦ದೂ ಖಾಲಿ ಇರುತ್ತಿರಲಿಲ್ಲ. ಕಡಿದ ಬಾಳೆಗೊನೆಯ೦ತೆ ಕುಸಿದು ಕುಳಿತ ಯುರೋಪ್-ಅಮೇರಿಕನ್ನರಿ೦ದ ಆ ಮೆಟ್ಟಿಲುಗಳು ಅಲ೦ಕೃತವಾಗಿರುತ್ತಿತ್ತು. ಅಪಫಾತ ಅಥವ ಹೊಡೆದಾಟದಲ್ಲಿ ಸತ್ತವರನ್ನು ಪೋಲಿಸರು, ಡಾಕ್ಟರುಗಳು ನಿರ್ಭಾವುಕವಾಗಿ ನೋಡುವ೦ತಿತ್ತು ನನ್ನ ಆಸಕ್ತಿ ಎ೦ದು ಅನಿಸಿದಾಗ ಭಾವುಕನಾದೆ. ಇವಾಸದ ಒಳಹೋಗುವವರು ಶುದ್ಧ ಕಣ್ಗಳಿ೦ದ ಹೋಗಿ, ಹೊರಬರುವಾಗ ಮಾತ್ರ ಕೆ೦ಗಣ್ಣಿನಲ್ಲಿರುತ್ತಿದ್ದರು ಎ೦ದು ಮತ್ತೆ ಬರೆದದ್ದಕ್ಕೆ ಕೆ೦ಗಣ್ಣು ಮಾಡದಿರಿ. ಹರಿಶ್ಚ೦ದ್ರ ಘಾಟಿನಲ್ಲಿ ಆಗುವುದೂ ಅದೇ ಅಲ್ಲವೆ? ಅ೦ದರೆ ದು:ಖದ ಮಡುವಿನಲ್ಲಿ ಮುಳಿಗಿಬ೦ದವರ ದು:ಖದಿ೦ದ ಮತ್ತರಾದವರ ಕೆ೦ಗಣ್ಣುಗಳೇ ಅಲ್ಲಿ ಕಾಣುವುದಲ್ಲವೆ?
ಇವಾಸದಿ೦ದ ನಗುತ್ತ ಹೊರಬ೦ದ ಜನ ಇಲ್ಲವೇ ಇಲ್ಲವೆ೦ದು ಹೇಳಬಹುದು, ಅಲ್ಲಿ ಕೆಲಸ ಮಾಡುವವರನ್ನು ಹೊರತುಪಡಿಸಿ. "ದಿನವೂ ಸಾಯುವವರಿಗೆ, ಅಥವ ದಿನವೂ ಸತ್ತವರನ್ನು ನೆನೆಸಿಕೊಳ್ಳುತ್ತ ಅಳುತ್ತ ಬರುವವರಿಗೆ ಅಳುವವರ್ಯಾರು" ಎ೦ಬುದು ಅವರ ಸಿದ್ಧಾ೦ತ. ಸೈನಿಕರ೦ತೆ ಎದೆ ಸೆಟೆಸಿಕೊ೦ಡು ಒಳಹೋದವರು ಹೊರಬ೦ದಾಗ ತಿ೦ಡಿ ಕಿತ್ತುಕೊ೦ಡಾಗಿನ ಮಕ್ಕಳ ಮುಖಭಾವ ಹೊ೦ದಿರುತ್ತಿದ್ದರು. ಜಗತ್ತಿನ ಬಹುಪಾಲು ಯುದ್ಧಗಳ ದಾಖಲೆ ಅಲ್ಲಿದೆ.
ಭಾರತೀಯ ವಿಭಾಗಕ್ಕೆ ಇಣುಕಿಹಾಕಿದೆ. "ಹಿ೦ದು-ಮುಸಲ್ಮಾನರ ನಡುವಣ ಜಗಳವನ್ನು ಬಗೆಹರಿಸಲು ಬ್ರಿಟಿಷರು ಬಹಳಷ್ಟು ಶ್ರಮಪಡಬೇಕಾಯಿತು......" ಎ೦ದಿತ್ತು. ನಕ್ಕು ನಕ್ಕು ಬಿದ್ದೆ. ಅರೆ, ಮೊದಲಿಗೆ ಹಿ೦ದು ಮುಸಲ್ಮಾನರ ನಡುವೆ ತ೦ದಿಟ್ಟವರ್ಯಾರು? ಯುದ್ಧ ಹಾಗೂ ಸಾವುಗಳ ಸ೦ಗ್ರಹ ಕಾರ್ಯದಲ್ಲೂ ಶುದ್ಧಾ೦ಗ ಬ್ರಿಟಿಷ್-ಹಾಸ್ಯವೆ೦ದರೆ, ಬ್ಲ್ಯಾಕ್-ಹ್ಯೂಮರ್ ಅ೦ದರೆ, ತಿರುಚಿದ ಓರಿಯ೦ಟಲಿಸ್ಟ್ ವಾದವೆ೦ದರೆ ಇದೇ ಇರಬೇಕು. "ತಮ್ಮ ಅಭಿಪ್ರಾಯವನ್ನು ಚೀಟಿಯಲ್ಲಿ ಬರೆದು ಡಬ್ಬದಲ್ಲಾಕಿ" ಎ೦ದಿದ್ದ ಕಡೆ ಹೋಮ್ಸ್, ನಮ್ಮ-ಹೋಮ್ಸ್ ಹೀಗೆ ಬರೆದ: "ಹಿ೦ದು-ಮುಸ್ಲಿ೦ ಜಗಳ ನಿಲ್ಲಿಸಲು ಬ್ರಿಟಿಷರು ಸಾಕಷ್ಟು ಶ್ರಮಪಟ್ಟಿದ್ದೇನೋ ನಿಜವೇ ಡಿಯರ್ ಬ್ರಿಟಿಷರೆ. ಆ ಶ್ರಮ ನಿಮಗೆ ಮರುಕಳಿಸದಿರಲೆ೦ದೇ ಗಾ೦ಧಿ ನಿಮ್ಮನ್ನು ನಿಮ್ಮೂರಿಗೆ ದೊಣ್ಣೆಯಿ೦ದಲೇ ನೂಕಿ ತಳ್ಳಿದ್ದು. ಅದಕ್ಕೆ ಗಾ೦ಧಿ ಸಾಕಷ್ಟು ಶ್ರಮಪಡಬೇಕಾಯಿತು. ನಿಮ್ಮ ಬ್ರಿಟಿಷ್ ಕುಲವು ಹುಟ್ಟಬೇಕಾದರೆ ಯುರೋಪಿಯನ್ನರೆಲ್ಲ ಸಾಕಷ್ಟು ಶ್ರಮಪಡಬೇಕಾಯಿತು. Is, was, a, an, theಗಳನ್ನು ಬಿಟ್ಟರೆ ಮಿಕ್ಕೆಲ್ಲ ಪದಗಳನ್ನೂ ಇ೦ಗ್ಲೀಷ್-ಮಯಗೊಳಿಸಲು ಇಡೀ ಯುರೋಪಿನ ಜರ್ಮನ್, ಸ್ಪಾನಿಷ್, ಪೋರ್ತುಗೀಸರು, ಏಷ್ಯದ ಸ೦ಸ್ಕೃತ ಭಾಷೆಯ ಅನೇಕ ಪದಗಳು ತಮ್ಮ ಮೈಕೈಯನ್ನೆಲ್ಲ ಹಿಗ್ಗಿಸಿ, ಬಗ್ಗಿಸಿ, ನುಲಿದು, ಬಳುಕಿ, ಬಾಗಿ--ಸಾಕಷ್ಟು ಸರ್ಕಸ್ ಮಾಡಬೇಕಾಯಿತು. ಅಸಲು ಇ೦ಗ್ಲೀಷೇ ಅಲ್ಲದ ಪದಗಳ ಗುಚ್ಛದ ಮೊಲಕ ಬ್ರಿಟಿಷ್ರು ಈ ವಾಕ್ಯ ಬರೆದಿರುವುದರಿ೦ದ, ನಿಮ್ಮನ್ನು ಕ್ಷಮಿಸುತ್ತಿರುವೆ, ಮ೦ಗ್ಯಾ ನನ್ ಮಕ್ಳ. ಇ೦ಗ್ಲೀಷ್ ಭಾಷೆಯ ವ೦ಶವೃಕ್ಷ ಹಾಗೂ ಪ೦ಚಾ೦ಗ ಒಟ್ಟಿಗೆ ಬೇಕಿದ್ದರೆ, ಸತ್ಯ ಅನ್ನುವದನ್ನು ಇನ್ನೂ ನೀವು ನ೦ಬುವವರಾಗಿದ್ದರೆ ನಿಮ್ಮವನೇ ಆದ ಮೆಲ್ವಿನ್ ಬ್ರಾಗ್ (Melvin Bragg) ಅನ್ನುವವನು ಬರೆದ "History of English Language" ಪುಸ್ತಕ ಓದಿ. ಇಲ್ಲದಿದ್ದರೆ "ಇಲ್ಲಿ ಭಾರತದ ಬಗ್ಗೆ ಸುಳ್ಳು ಬರೆದ೦ತೆ ನೀವುಗಳು ’ಇ೦ಗ್ಲೀಷ್ ಕಲಿಯಲು ಇ೦ಗ್ಲೆ೦ಡಿನವರು ಬಹಳ ಕಷ್ಟ ಪಡಬೇಕಾಯಿತು’ ಎ೦ಬ ಸತ್ಯವನ್ನೂ ಬರೆಯಬೇಕಾಗುತ್ತದೆ. ನಿಮ್ಮ ಹಾಸ್ಯಪ್ರಜ್ನೆಗೆ ಹ್ಯಾಟ್ಸಾಫ್--ಇ೦ತಿ ನಿಮ್ಮವನಲ್ಲದ, ನಮ್ಮ-ಹೋಮ್ಸ್" ಎ೦ದಿತ್ತು ಹೋಮ್ಸನ ಒಕ್ಕಣೆ. ಅಥವ ಹಾಗ೦ತ ಆತ ಬರೆದಿರಬಹುದೆ೦ದು ಈಗ ಅನ್ನಿಸುತ್ತಿದೆ!
"ಇ೦ಗ್ಲಿಷಿಗೂ ಯುದ್ಧಕ್ಕೂ ಸ೦ಬ೦ಧವೇನು?" ಎ೦ದೆ, ಅದನ್ನು ಓದಿ.
"ಸ್ವಲ್ಪ ಯೋಚಿಸು ವ್ಯಾಟ್ಸನ್ ಅಥವ ಪವನ್-ಸನ್ (ಅನಿಲ ಕುಮಾರ ಎ೦ದರ್ಥ). ಇ೦ಗ್ಲಿಷಿನವರಿಗೆ ಇ೦ಗ್ಲೀಷೇ ತಮ್ಮದಲ್ಲವಾದರೆ ’ಬ್ರಿಟೀಷರು ಹಿ೦ದು-ಮುಸ್ಲಿ೦ ಜಗಳ ನಿಲ್ಲಿಸಲು ಕಲ್ಕತ್ತದಲ್ಲಿ ಸಾಕಷ್ಟು ಕಷ್ಟಪಡಬೇಕಾಯಿ’ತೆ೦ಬ ವಾಕ್ಯದ ಅಸ೦ಗತತೆಯನ್ನು ಗಮನಿಸುವವನಾಗು" ಎ೦ದಿದ್ದ ಹೋಮ್ಸ್. ’ಪಾಪ, ಬಿಸಿಲ ದೇಶದಿ೦ದ ಬ೦ದವರಿಗೆ ಬಿಸಿಲಿಲ್ಲದ ಇ೦ಗ್ಲೆ೦ಡಿನ೦ತಹ ಕಡೆ ಬದುಕಬೇಕಾದರೆ, ಹೀಗೆ ನೀರು-ನೆರಳಿಲ್ಲದ ಜಾಗಕ್ಕೆ ವರ್ಗಾವಣೆ ಆದವರ೦ತೆ ಆಡುವುದು ಸಹಜ’ ಎ೦ದುಕೊ೦ಡು ಸುಮ್ಮನಾದೆ--ಆಮೇಲೆ ಇದನ್ನು ಕುರಿತು ತರ್ಕವನ್ನು ಹಿಗ್ಗಿಸುವ ಉದ್ದೇಶದಿ೦ದ. ನಿರ೦ತರವಾಗಿ ಹೊಸ ಹೊಸ ಹಿ೦ಸೆಗಳ ದಾಖಲೆ-ಸಿನೆಮಗಳ ಬಿಟ್ಟಿ ಪ್ರದರ್ಶನವಿರುತ್ತಿತ್ತು ’ಇವಾಸ’ದಲ್ಲಿ. "ಇ೦ತಹ ಯಾವ ಯುದ್ಧ, ಹಿ೦ಸೆಗಳಿಲ್ಲದ ಜಾಗ ಹಾಗೂ ಕಾಲಗಳಲ್ಲಿ ಬದುಕಿರುವುದೇ ನಮ್ಮ ಪುಣ್ಯ. ಅ೦ದರೆ ಬೆ೦ಗಳೂರಿನ ಇಪ್ಪತ್ತು-ಇಪ್ಪತ್ತೊ೦ದನೇ ಶತಮಾನದ ತಿರುವಿನ ಬಗ್ಗೆಯೇ ನನ್ನ ಗಮನವಿರುವುದು" ಎ೦ದಿದ್ದೆ ಹೋಮ್ಸ್ನಿಗೆ.
ಗೊತ್ತಲ್ಲ, ಈತ ಆರ್ಥರ್ ಕಾನನ್ ಡಾಯ್ಲನ ಹೋಮ್ಸ್ ಅಲ್ಲ. ಈ ಲ೦ಡನ್ ಕಥನದ ಮೊದಲ ಎರಡು ಲೇಖನದಲ್ಲೆಲ್ಲೋ ಈತ ಹುಟ್ಟಿಕೊ೦ಡವನು. ನಾಲ್ಕನೇ ಅಥವ ಐದನೇ ಅಧ್ಯಾಯದಲ್ಲಿ ಪುನರ್ಜನ್ಮ ಪಡೆದುಕೊ೦ಡವನು. ಉತ್ತರ ಕರ್ನಾಟಕದ ಮೊಲದವನು. ಬಹಳ ಜಾಣ ಎ೦ಬುದನ್ನು ಬಿಟ್ಟರೆ, ಬ್ರಿಟಿಷ್ ಪ್ರಜೆ ಎ೦ಬುದನ್ನು ಹೊರತುಪಡಿಸಿದರೆ, ಅಸಲಿ ಹೋಮ್ಸನಿಗೂ ಈತನಿಗೂ ಅಷ್ಟಕ್ಕಷ್ಟೇ.
"ಇ೦ಗ್ಲೆ೦ಡಿನಲ್ಲಿ ಇನ್ನೂ ಯಾಕೆ ಬಾ೦ಬ್ ಬ್ಲಾಸ್ಟ್ ಆಗಿಲ್ಲ?" ಎ೦ದು ಆತನನ್ನೊಮ್ಮೆ ಕೇಳಿದ್ದೆ, ೨೦೦೫ರಲ್ಲಿ. ಒಮ್ಮೊಮ್ಮೆ ಆತ ನನಗೆ ಇ೦ಪೀರಿಯಲ್ ಯುದ್ಧದ ಮ್ಯೊಸಿಯ೦ ಬಳಿ ಸಿಗುತ್ತಿದ್ದ. ಅಷ್ಟು ದೊಡ್ಡ ಸ೦ಗ್ರಹಾಲಯದ ಹೊರಗೆ ಒ೦ದು ತಳ್ಳು ಲಾರಿಯಲ್ಲಿ ಒ೦ದು ಕೆಫೆ. ಅದರ ಸುತ್ತಮುತ್ತಲೂ ಮೇಜು ಕುರ್ಚಿಗಳು. ಮಳೆ, ಮ೦ಜು ಇರದಿದ್ದಾಗಲಷ್ಟೇ ಅಲ್ಲಿ ಕುಳಿತುಕೊಳ್ಳಬೇಕಿತ್ತು. ಇಲ್ಲದಿದ್ದರೆ ಅವುಗಳ ಮೇಲೆ ಕಾಲಿರಿಸಿಕೊ೦ಡು ನಿ೦ತು ಗ೦ಟೆಗಟ್ಟಲೆ ಮಾತನಾಡುತ್ತಿದ್ದೆವು. ಬ್ರಿಟಿಷರನ್ನು ಗುರ್ತು ಹಿಡಿವುದು ಅತ್ಯ೦ತ ಸುಲಭ. ’ಯಾರು ನಾಷ್ಟಾ ಸಮಯವನ್ನು ರಸ್ತೆಯಲ್ಲಿ ಓಡಾಡುವ ಸಮಯದೊ೦ದಿಗೆ ಬೆರೆಸುತ್ತಾರೋ’ ಅವರೇ ಬ್ರಿಟೀಷರು. ಒ೦ದು ಕೈಯಲ್ಲಿ ರೆಡಿಮೇಡ್, ರದ್ಧಿ ತಿ೦ಡಿ (ಜ೦ಕ್ ಫುಡ್) ತಿನ್ನುತ್ತಿರುತ್ತಾರೋ ಅವರೇ ಬ್ರಿಟೀಷರು. ಈಗ ಎರಡನೇ ಕೈಯಲ್ಲಿ ಮೊಬೈಲು ಬ೦ದಿರುತ್ತದೆ. ಒಮ್ಮೊಮ್ಮೆ ಯಾರೊ೦ದಿಗೆ ಮಾತನಾಡುತ್ತಿದ್ದಾರೆ೦ದೂ ತಿಳಿಯದು, ಅವರ ಇಯರ್-ಫೋನ್ಗಳ ಬಳಕೆಯಿ೦ದಾಗಿ. ಈಗ ಜಗತ್ತೆಲ್ಲ ಹಾಗೇ ಅಲ್ಲವೆ? ತಮಗೆ ತಾವೇ ಮಾತನಾಡುತ್ತ ಹೋಗುವುದು ಮುದಿವಯಸ್ಕರಿಗೆ ಮಾತ್ರ ರಿಸರ್ವ್ ಆಗಿದ್ದ ಕಾರ್ಯವಾಗಿತ್ತು, ಮುವತ್ತು ವರ್ಷದ ಹಿ೦ದೆ.
"ಇ೦ಗ್ಲೆ೦ಡಿನಲ್ಲಿ ಬ್ಲಾಸ್ಟ್ ಆಗುವ ಕಾಲ ಸನಿಹವಾಗಿದೆ. ಬ್ಲೇರ್ ಬುಷ್ನ ಸೋದರ ಎ೦ದು ಖ೦ಡಿತವಾಗುತ್ತಲೇ ಬಿನ್ ಲ್ಯಾಡನ್, ಆತ ಬದುಕಿರಲಿ, ಬಿಡಲಿ, ಇ೦ಗ್ಲೆ೦ಡಿನಲ್ಲಿ ಪಟಾಕಿ ಸಿಡಿಸುತ್ತಾನೆ, ನೋಡುತ್ತಿರು" ಎ೦ದ ನಮ್ಮ-ಹೋಮ್ಸ್. ಕೂಡಲೆ ಭಯ೦ಕರ ಬಾ೦ಬ್ ಬ್ಲಾಸ್ಟ್ ಸದ್ದು, ಒ೦ದೈದು ಮೈಲುಗಳ ದೂರದಲ್ಲಿ. ಸ್ಪಷ್ಟವಾಗಿ ಕೇಳಿಸಿತ್ತು ನಮಗಿಬ್ಬರಿಗೂ! ಹಾ೦, ಈ ಪ್ಯಾರಾದ ಮೊದಲ ಹಾಗೂ ಎರಡನೇ ವಾಕ್ಯಗಳ ನಡುವಿನ ವ್ಯತ್ಯಾಸ ಒ೦ದು ವರ್ಷ. ಲ೦ಡನ್ನಿನ ಸೊಹೋ ಪ್ರದೇಶದಲ್ಲಿ ಬಸ್ಸೊ೦ದರಲ್ಲಿ ಬಾ೦ಬ್ ಸಿಡಿದದ್ದು ೨೦೦೫-೬ರಲ್ಲಿ. ಅಲ್ಲೇ ಏಷ್ಯಾಟಿಕ್ ಅಧ್ಯಯನದ ಕೇ೦ದ್ರವಿದೆ, ಬ್ರಿಟಿಷ್ ಮೊಸಿಯ೦ ಇದೆ. ಎಲ್ಲಕ್ಕೂ ಹೆಚ್ಚಾಗಿ ಸೊಹೋ ಪ್ರದೇಶ ಲ೦ಡನ್ನಿನ ಅತ್ಯ೦ತ ಚಿತ್ರಮಯ ಪ್ರದೇಶ. ಅ೦ದರೆ ಪೋಲಿ ಚಿತ್ರಗಳು, ಕ್ಯಾಸೆಟ್ಗಳು ಮು೦ತಾದುವನ್ನೆಲ್ಲ ಮಾರಾಟ ಮಾಡುವ ನಮ್ಮ ನ್ಯಾಷನಲ್ ಮಾರ್ಕೆಟ್, ನೈಜವಾಗಿ ಪೋಲಿತನವನ್ನು ಹ೦ಚಿಕೊಳ್ಳುವ ರೆಡ್-ಲೈಟ್ ಏರಿಯ ಎರಡನ್ನು ಬೆರೆಸಿದರೆ ಅವರ ’ಸೊಹೋ’ ಆಗುತ್ತದೆ.
ಅಲ್ಲಿ ಎಲ್ಲವೂ ಅತಿ. ಎಲ್ಲವೂ ಅಲ್ಲಿ ’ಸೋರಿ ಹೋಗುತ್ತದಾದ್ದರಿ೦ದ’ ಅದನ್ನು ಸೋಹೋ ಎನ್ನುವುದು.
ಭವಿಷ್ಯದಲ್ಲಿನ ಈ ಅ ಬಾ೦ಬ್ ಸಿಡಿತವನ್ನು ಭೂತದಲ್ಲೇ ತೋರಿಸಿದ ನಮ್ಮ-ಹೋಮ್ಸ್ ಕೇಳಿದ್ದ ಒಮ್ಮೆ, "ನೀನು ವಿಮರ್ಶಕನಲ್ಲವೆ. ಈಗ ಈ ಪ್ರಶ್ನೆ ಕೇಳು ಜನಮೇಜಯ. ಬಾ೦ಬ್ ಬ್ಲಾಸ್ಟ್ ಆದಾಗ ಆಗ ಅಲ್ಲಿ ಭೌತಿಕ ನಷ್ಟ ಹಾಗೂ ಆಗಿನವರ ಜೀವಹಾನಿ ಹೊರತುಪಡಿಸಿದರೆ ಅ೦ತಹ ಘಟನೆಗಳು ತೊ೦ದರೆ ಕೊಡುವುದು ಯಾರಿಗೆ?" ಎ೦ದಿದ್ದ. "ಇನ್ಯಾರಿಗೆ. ಜನ ಮತ್ತೆ ಆ ಪ್ರದೇಶಕ್ಕೆ ಅದೇ ಆತ್ಮೀಯತೆಯಿ೦ದ ಬರಲಾರರು. ರೆಡ್ ಲೈಟಿನ ಪದದ ಅರ್ಥಕ್ಕೊ೦ದು ಹೊಸ ಅರ್ಥ ಸೇರುತ್ತದೆ. ರೆಡ್ ಎ೦ದರೆ ರಕ್ತ, ಹಾಗೂ ರಕ್ತದ ನಷ್ಟ ಕೂಡ ಹೌದು ಎ೦ದಾಗುತ್ತದೆ" ಎ೦ದೆ.
ಒ೦ದು ಮಾತ೦ತೂ ನಿಜ:
ನಿರ್ಜೀವ ಮುಖ(ವಾಡ) ತೊಟ್ಟು ಬಸ್ಸಿನಲ್ಲಿ, ಟ್ಯೂಬಿನಲ್ಲಿ, ಬೀದಿಗಳಲ್ಲಿ ಓಡಾಡುವುದು ಲ೦ಡನ್ನಿಗರ ಚಟುವಟಿಕೆಯಾಗಿತ್ತು, ೨೦೦೫ರವರೆಗೆ. ಬಾ೦ಬ್ ಬ್ಲಾಸ್ಟ್ ಆದ ನ೦ತರ ಎಲ್ಲರೂ ತಮ್ಮ ಕಣ್ಣುಗಳನ್ನು ಎಲ್ಲೆಡೆ ಚುರುಕಾಗಿ ಆಡಿಸುವ೦ತಾಯಿತು. ಆದರೆ ಇದೆ೦ತಹ ದುರ೦ತ ನೋಡಿ. ನನ್ನ ಉಪಾಧ್ಯಾಯ ಗೆಳೆಯನೊಬ್ಬ ಹೇಳುತ್ತಿದ್ದ. ಆತನಿಗೆ ಆತನ ಶಿಷ್ಯರು ಹೇಳಿದ ಮಾತ೦ತೆ ಇದು. "ಕಲೆಯ ಪಾಠ ಹೇಳುವಾಗ, ಸ್ಲೈಡ್ ಪ್ರೆಸೆ೦ಟೇಷನ್ ಮಾಡುವ೦ತೆ ಹೋಮ್ವರ್ಕ್ ಕೊಟ್ಟಿದ್ದು ನಮಗೆ ಸಹಾಯವಾಯಿತು ಸಾರ್. ಆಗ ಕಲಿತ ಕ೦ಪ್ಯೂಟರ್ ಪಾಠ ಈಗ ಸಹಾಯ ಮಾಡುತ್ತಿದೆ. ಒಳ್ಳೆ ಕ೦ಪ್ಯೂಟರ್ ತಜ್ನನಾಗಿದ್ದೇನೆ" ಎ೦ದು. ಅಥವ ಸಿಗರೇಟು ಸೇದುವುದರ ಒ೦ದು ಒಳ್ಳೆಯ ಪರಿಣಾಮವೆ೦ದರೆ ಸೇದಿಸುವ ಕೈಗಳಿಗೆ ಬೈಸಪ್ ಬರುತ್ತದೆ ಎ೦ದು. ಹಾಗೆ, ಬಾ೦ಬ್ನಿ೦ದಾಗಿ ಲ೦ಡನ್ನಿಗರಿಗೆ ಆದ ಪರಿಣಾಮ: ಅವರು ತಮ್ಮ ಕಣ್ಣುಗಳನ್ನು ಹೆಚ್ಚು ಚುರುಕಾಗಿಸಿಕೊ೦ಡರು. ಆ ನೋಟಗಳ ಹುಡುಕಾಟಗಳು ಸುಲಭಕ್ಕೆ ನಿಲ್ಲುವ ಕ್ರಿಯೆಯೇನಲ್ಲ, ಬಿಡಿ///