ವಂಶೀಸಂದೇಶಂ

ವಂಶೀಸಂದೇಶಂ

ಪುಸ್ತಕದ ಲೇಖಕ/ಕವಿಯ ಹೆಸರು
ಶತಾವಧಾನಿ ಡಾ. ಆರ್ ಗಣೇಶ್
ಪ್ರಕಾಶಕರು
ಅಭಿಜ್ಞಾನ ಪ್ರಕಾಶನ, ಬೆಂಗಳೂರು.
ಪುಸ್ತಕದ ಬೆಲೆ
ರೂ.೨೫.೦೦

"ವಂಶೀ ಸಂದೇಶ" ಎಂಬ ರಸಾನುಭೂತಿ - ಶತಾವಧಾನಿ ಡಾ. ಆರ್ ಗಣೇಶರ ಕಾವ್ಯಾನುಸಂಧಾನ(ಯಥಾಮತಿ)

ವಾಲ್ಮೀಕಿಯ ಶೋಕ ರಾಮಾಯಣ ಮಹಾಕಾವ್ಯಕ್ಕೆ ಕಾರಣವಾಯಿತು. ಆ ಶೋಕಭಾವ ವಿಶುದ್ದ ಕರುಣರಸಕ್ಕೇರಿ ಅತ್ಯಪೂರ್ವ ಆದಿಕಾವ್ಯವನ್ನು ಸೃಜಿಸುವಲ್ಲಿ ಆದಿಕವಿಯ ಕಲಾಶ್ರೀಮಂತಿಕೆ, ಅಭಿಜ್ಞತೆ ಕಾರಣವೆಂದು ಅರಿವಾಗುತ್ತದೆ. ಸತ್ಕವಿಯಲ್ಲಿ ಮೂಡಿದ ಯಾವುದೇ ಭಾವ ವ್ಯರ್ಥವಾಗದು; ಅವು ರಸದ ತುದಿಗೆ ತಲುಪಿ ಅಲ್ಲಿಂದ ಮತ್ತೊಂದು ಕಲಾಸೃಷ್ಟಿಯಾಗುತ್ತದೆ. ಅದೇ ರೀತಿಯ ಮನೋಹರ, ರಸಾರ್ದ್ರ ಕಾವ್ಯಸೃಷ್ಟಿ ಡಾ| ಶತಾವಧಾನಿ ಆರ್. ಗಣೇಶ ಅವರ  "ವಂಶೀ ಸಂದೇಶ" ಎಂಬ ಹಳಗನ್ನಡ ಕಾವ್ಯಗುಚ್ಛದಲ್ಲಿದೆ. ಗಣೇಶರ ಮೂವತ್ತರ ಹರೆಯದಲ್ಲಿ ಅವರಲ್ಲಿ ಹೆಡೆಯೆತ್ತಿದ ಅಪಾರ ಶೋಕಭಾವದ "ವಂಶೀ ಸಂದೇಶ" ಎಂಬ ದೂತಕಾವ್ಯದ ಪ್ರಕಾರಕ್ಕೆ ಕಾರಣವಾಯಿತು. ಕನ್ನಡದ ಕೆಲವಾರು ವೃತ್ತಗಳು, ಕಂದ ಇತ್ಯಾದಿ ಛಂದೋಬಂಧಗಳಲ್ಲಿ ರಚಿಸಿದ ನೂರಿಪ್ಪತ್ತು ಪದ್ಯಗಳು ಇಲ್ಲಿವೆ. ಒಂದೊಂದು ಪದ್ಯವೂ ರಸಗಟ್ಟಿ. ಮೆಲ್ಲಮೆಲ್ಲನೆ ಸವಿಯಬೇಕಾದದ್ದು. ಕಾವ್ಯದ ನಾಯಿಕೆ ತನ್ನ ಹೃದಯದಲ್ಲಿ ಹುದುಗಿದ ಅಪಾರ ಶೋಕಪರಿಹಾರಕ್ಕೆ ಕೃಷ್ಣನಿಗೆ ಶರಣಾಗುವ, ಮುಕ್ತಿಯನ್ನು ಬಯಸುತ್ತಾ ಓದುಗನನ್ನು ರಸಾವೇಶವಾಗುವಂತೆ ಮಾಡುವ ಸತ್ಕಾವ್ಯವಿದು.

ಮಧುರಭಕ್ತಿಯೇ ಮೂಲಧಾತುವಾಗಿದ್ದು ದೃಕ್ಕು ದೃಶ್ಯ ಮತ್ತು ದರ್ಶನ ಎಂಬ ಮೂರು ಭಾಗಗಳಲ್ಲಿ ಈ ಕಾವ್ಯ ಮೂಡಿದೆ. ಕಾವ್ಯದ ಅಂತರಂಗದ ಧಾತು ಜೀವನು ತನ್ನ ಅಪರಿಪೂರ್ಣತೆಯಿಂದ ಸಮಗ್ರ ವಿಕಾಸಕ್ಕೆ ಹೋಗುವ ತುಡಿತ ಕಾಣುತ್ತದೆ;ಮಾತ್ರವಲ್ಲ ಇದಕ್ಕಾಗಿ ಕೃಷ್ಣನ ಮೇಲಿನ ಪ್ರೇಮವನ್ನೇ ದಾರಿಯಾಗಿಸಿಕೊಂಡು ಸಾಗಿದೆ. 

ಇಪ್ಪತ್ತೇಳು ಶಾರ್ದೂಲವಿಕ್ಕೀಡಿತ, ಹದಿನೇಳು ಮತ್ತೇಭವಿಕ್ಕೀಡಿತ, ಮೂವತ್ತೈದು ಉತ್ಪಲಮಾಲೆ, ಹದಿನೇಳು ಚಂಪಕಮಾಲೆ, ಹದಿನಾರು ಕಂದ, ಒಂದೊಂದು ಸ್ರಗ್ಧರೆ, ಮಹಾಸ್ರಗ್ಧರೆ, ಪೃಥ್ವಿ, ಹರಿಣಿ, ಶಿಖರಿಣಿ, ದ್ರುತವಿಲಂಬಿತ, ಔಪಚ್ಛಂದಸಿಕ, ವಸಂತತಿಲಕ, ಮಂಜುಭಾಷಿಣಿ, ಮಲ್ಲಿಕಮಾಲೆ, ಪುಷ್ಪಿತಾಗ್ರ, ಮಂದಾಕ್ರಾಂತೆ ಮತ್ತು ಮಾಲಿನೀವೃತ್ತಗಳು ಇಲ್ಲಿ ಬಲಸಿದ್ದಾರೆ.

ಹೊಸಹೊಸ ಹಳಗನ್ನಡ ಕಾವ್ಯಗಳು ಕಡಮೆಯಾಗುತ್ತಿರುವ ಈ ಕಾಲದಲ್ಲಿ ತಾವು ಮಾತ್ರವಲ್ಲ ಇತರರನ್ನೂ ಆ ಪರಂಪರೆಗೆ ಸೆಳೆದು ಬೆಳೆಸುವ ಕಾರ್ಯದಲ್ಲೂ ತೊಡಗಿದ್ದಾರೆ. ಬೆಂಗಳೂರಿನ ವಿದ್ವಾಂಸ ಶ್ರೀ ಸೂರ್ಯಪ್ರಕಾಶ್ ಪಂಡಿತ್ ಅವರ ಅಭಿಜ್ಞಾನ ಪ್ರಕಾಶನದ ಹೆಮ್ಮೆಯ ಪ್ರಕಟಣೆಯಿದು.

ವಂಶೀಸಂದೇಶಂ ನ ಕೆಲವು ಹಾಡುಗಳನ್ನು  ನೋಡೋಣ-

ಬೆಡಂಗು ಬಡಬಾಳಿನೊಳ್ ಸುಳಿಯಬಾರದೇಂ? ಎಂದು ಶುರುವಾಗುವ ಕಾವ್ಯದಲ್ಲಿ ನಾಯಿಕೆಯ ಜೀವನದಲ್ಲಿ ಅಂದ ಸುಳಿಯಬಾರದೇ ಎಂಬ ಪ್ರಶ್ನೆ ಹುಟ್ಟುತ್ತದೆ. 

ಬೆಡಂಗು ಬಡಬಾಳಿನೊಳ್ ಸುಳಿಯಬಾರದೇಂ?

ಬಾಳ್ತೆಯೊಳ್ ಕಡಂಗಲೆಡೆಯಾಗದೇನೊಲುಮೆಗಂ; ಸೊಗಂ ಸೋಲುತುಂ ನಡುಂಗಿ ಪುಡಿಯಪ್ಪುದೇ ಪಣೆಯ ಬಂತಿಯೇಂ? ಕಾದಲಂ ಮಡಂಗಿ ಮೆರೆದಾಡುತುಂ ಮರೆವುದೇಂ ತೊಡಂಕೀಯುತುಂ? 

ಒಲುಮೆಯಂಕುರಿಸಲು ಜಾಗವೇ ತನ್ನ ಜೀವನದಲ್ಲಿ ಇಲ್ಲವಾಗಿದೆಯಲ್ಲಾ; ಸೌಖ್ಯ- ಕ್ಷೇಮಗಳು ಪುಡಿಗೊಳ್ಳುವುದೇ ನನ್ನ ಹಣೆಬರಹವೇ? ಎಂಬ ಶೋಕ ಹೊರಸೂಸುತ್ತಾ; ತನ್ನ ಇನಿಯ ( ಶ್ರೀ ಕೃಷ್ಣ) ಹೃದಯದಲ್ಲಿ ಮೆರೆದು, ತನ್ನನ್ನು ಮರೆತು, ನೋವಿತ್ತು ಹೋದನಲ್ಲ- ಎಂದು ಪ್ರೇಮ ಬೆರೆತ ವಿರಹದ ಸಂಮಿಶ್ರಣದ ಶೋಕ ಭಾವ ಇಲ್ಲಿದೆ. 

ಸೋಲುತ್ತಿರುವ ಸುಖವನ್ನು ಕವಿ ಕಂಡ ಪರಿ ಅನ್ಯಾದೃಶ. ಸುಖವು " ನಡುಂಗಿ ಪುಡಿಯಪ್ಪುದೇಂ" ಎಂಬಲ್ಲಿ ಕೃಷ್ಣನ  ಮೆರೆದಾಟದಿಂದಾಗಿ ತನ್ನೊಳಗೆ ಚಿಗುರುವಂತೆ ಆದ ಸೌಖ್ಯಲತೆಗೆ  ತನ್ನ ಕಾದಲನಾದ ಶ್ರೀಕೃಷ್ಣನ ತೊಲಗುವಿಕೆ ಮತ್ತು ಮರೆಯುವಿಕೆ ನೋವಿತ್ತಿತ್ತು ಮತ್ತು " ಬಾಳ್ತೆಯೊಳ್ ಕಡಂಗಲೆಡೆಯಾಗದೇನೊಲುಮೆಗಂ"  ಎಂಬ ಸೌಖ್ಯಲತೆಗೆ ಚಿಗುರಲು ಅವಕಾಶವೇ ಇಲ್ಲವಾಯ್ತಲ್ಲಾ ಎದು ಹೇಳುವ ಉಕ್ತಿ ವೈಚಿತ್ರ್ಯ ಅಪೂರ್ವವಾದದ್ದು. 

ಕೃಮಿಕೃತರಂಧ್ರದೊಳ್ ಸುಳಿಯೆ ಗಾಳಿ, ಕುಳಿಲ್ದನಿಗೆಯ್ದು ಟೊಳ್ಳಿನೊಳ್

ಗಮಕಿಸೆ ಕಾಡಿನೊಳ್ ಬಿದಿರ ಬಿಜ್ಜೆಯ ಕಜ್ಜದ ಕಷ್ಟಮಿಲ್ಲದೀ 

ಧಮನಿಗಳೆಲ್ಲ ನಾದರುಧಿರಾಮೃತವಾಹಿಗಳಪ್ಪವೇಂ ಸ್ವತಾಸ್ತಮರಸರಾಗದಿಂ ಬರ್ದುಕುಬಾಂದಳಪೊಂದಳೆಯಲ್ಕೆ ಶಂಕೆಯೇ? 

ಕವಿಗೆ ಜೀವನ ಸೌಂದರ್ಯದ ಸಾಧ್ಯತೆಯು ಕಂಡಬಗೆ ಇದು:  ನಮ್ಮ ನಮ್ಮ ವೈಯ್ಯಕ್ತಿಕತೆ/ ಸ್ವಾರ್ಥಪರತೆ ತೊಲಗಿದಾಗ ದೇಹದ ಎಲ್ಲ ಧಮನಿಗಳೂ ನಾದರುಧಿರದ ಅಮೃತವಾಹಿನಿಯಾಗುವವು. ಹೀಗಾದಾಗ ಆನಂದಸೂರ್ಯನು ನಮ್ಮ ಬಾಳಿನಲ್ಲಿ ಉದಯಿಸುತ್ತಾನೆ. ನಮ್ಮ ದೇಹವೇ ಕೊಳಲಾದರೆ ಅಲ್ಲಿ ನಿಸ್ವಾರ್ಥತೆ ಇದ್ದರೆ ಅದು ಮಧುರನಾದವನ್ನು ಹೊರಡಿಸಿತ್ತದೆ. ಅಂದರೆ ಭಾವವಿಕಾರವಿಲ್ಲದ ಅನುಭವ ಕೇವಲ ಸಾಕ್ಷಿಪ್ರಜ್ಞೆಯ ಕೇವಲಾನುಭವವಾಗಬಹುದೆಂಬ ಸೂಚನೆ ಇಲ್ಲಿದೆ.

ಪ್ರಕೃತಿಗೆ ನಮ್ಮನ್ನು ನಾವು ಬಿಟ್ಟುಕೊಟ್ಟಾಗ ನಮ್ಮ ಮನಸ್ಸು ದೇಹ ಬುದ್ಧಿಗಳನ್ನು ತನ್ನಧೀನಕ್ಕೆ ತೆಗೆದುಕೊಂಡು ಜೀವನವನ್ನು ಉಜ್ಜೀವನಗೊಳಿಸುತ್ತದೆ. ಕಾಡಲ್ಲಿರುವ ಬಿದಿರಿಗೆ ಯಾವ ಸ್ವಾರ್ಥವಿತ್ತು ; ಅದು ಗಾಳಿಯ ಸಂಚಾರಕ್ಕೆ ತನ್ನನ್ನು ತಾನು ತೆರೆದುಕೊಂಡಿತು; ಮಧುರನಾದ ಹೊಮ್ಮಿತು- ಕ್ರಿಮೀಕೃತರಂಧ್ರದಿಂದಾಗಿ. ಅಂತೆಯೇ ಮನುಷ್ಯ ಬಾಳೆಂಬ ಬಿದಿರನ್ನೂ ಕೊಳಲಾಗಿಸಬಹುದೆಂಬ ಆಶಯ- ನಾನು- ಅವನು ಎಂಬ ಭಿನ್ನತೆಯನ್ನು ತ್ಯಜಿಸುವಂತಾದಾಗ ಇದು ಸಾಧ್ಯವಾಗುತ್ತದೆ. ನಮಗೆ ಧೈರ್ಯ ಬೇಕಲ್ಲ!!.

ಧಮನಿಗಳೆಲ್ಲವನ್ನು ಬಿದಿರಿನ ಮೆಳೆಗೆ ಹೋಲಿಸಿದ ಕವಿಯ ದರ್ಶನಶಕ್ತಿಗೆ ಅಸಾಧಾರಣವಾದುದು. ನಾಡಲ್ಲಿರುವ ಜ್ಞಾನದಾಹದ ಪಂಡಿತನನ್ನು ಕರುಣೆಯಿಂದ ನೋಡುತ್ತದೆ ಈ ಹಾಡು. ಇಲ್ಲಿ "ನಾದರುಧಿರಾಮೃತವ"ನ್ನು ಹೊರಡಿಸುವ ಯಾರನ್ನೂ ಕಾಡದೇ ಬೇಡದೇ ಸ್ವಚ್ಛಂದವಾಗಿರುವ ಕಾಡಲ್ಲಿರುವ ಬಿದಿರನ್ನು ಕಾಂಕ್ರಿಟ್ ಕಾಡಿನಲ್ಲಿ ಬಂಧಿಯಾಗಿರುವ ಯಾವತ್ತೂ ಯಾವುದೋ ಒಂದು ಖಿನ್ನತೆಯಲ್ಲೋ ಜ್ಞಾನಸಂಬಂಧಿ ಒತ್ತಡದಲ್ಲೋ ಇರುವ ಪಂಡಿತವರ್ಗವನ್ನು ಜತೆಯಾಗಿಸಿ ಕವಿ ನೋಡಿದ್ದಾರೆ. 

**

ಕಾಡಿನ ಕೋಡಿಯೊಳ್ ಕೊರತೆಯಿಲ್ಲದೆ ಸ್ವಯಂ

ಮೋಡಿಗೆ ಸಿಲ್ಕಿ ರೂಢಿಸದೆ  ಬೇಡದೆ ಕಾಡದೆ ಸುಯ್ಲಿಡುತ್ತೆ ತುಳ್ಕಾಡುವ ವೇಣುಮಂತಿರಲುಮಾಗದೆ ಕೋರದೆ ತೂರಿ ತೃಪ್ತಿಯಂ

ನಾಡಿನ ಗೂಡಿನೊಳ್ ಮೊರೆವೆನಾವಗಮೀಪರಿ ಪಂಡಿತಾರ್ತಿಯಂ ||

ಪಂಡಿತಾರ್ತಿ ಎಂಬ ಮಾತು ಸೊಗಸಾಗಿದೆ. ಪಂಡಿತರು ಯಾವತ್ತೂ ಜ್ಞಾನಕ್ಕಾಗಿ ಹಪಹಪಿಸುವವರು. ಅಂದರೆ, ಅರ್ತಿಗಳಾಗಿರಬೇಕಾದವರು.

ರೂಪಾಜೀವೆಯೆನುತ್ತಮೆನ್ನ ಬಳಿಯೊಳ್ ಸಾರಲ್ಕೆ ಸಂದೇಹಮೇ ? 

ಈ ಹಾಡುಗಳನ್ನು ಎಲ್ಲರೂ ಆಗಾಗ ಅನುಸಂಧಾನ ಮಾಡಬೇಕಾದದ್ದು. ಅದೆಷ್ಟು ಸೂಕ್ಷ್ಮ ಮನೋ ಲಹರಿಗಳಿವೆ ಇಲ್ಲಿ! ಒಂದು ಪಾದ ತನ್ನನ್ನು ಕುರಿತು ಮತ್ತೊಂದರಲ್ಲಿ ಕೃಷ್ಣನನ್ನು ; ಮಗದೊಂದರಲ್ಲಿ ಮತ್ತೆ ತನ್ನ ಕಲ್ಕ ವ್ಯಾಪಾರವನ್ನು ( ನಮ್ಮದೂ  ಅಷ್ಟೆ! ಇಂಥದ್ದೇ ಜೀವನ ವ್ಯಾಪಾರ) ; ಇನ್ನೊಂದರಲ್ಲಿ ಉದ್ಧರಿಸೆಂದು ಪ್ರಾರ್ಥನೆ‌.

ಆಹಾ! "ಸಮಸ್ತವೃತ್ತಿವಿಭವಸ್ತೂಪಾಗ್ರದೀಪಧ್ವಜಾ!"! ಎಂಥಾ ರೂಪಕದಲ್ಲಿ ಕೃಷ್ಣನನ್ನು ಕವಿ ಕಟೆದಿದ್ದಾರೆ ಕವಿ. 

 ****

 ಸಾಧಾರಣೆಯೆಂದೆನ್ನೊಳ

ಸಾಧಾರಣಮಾಧುರೀಧುರೀಣ! ವಿರಸಮೇಂ?

ಭೂಧಾರಣ! ನೀನಲ್ಲದೆ

ಸಾಧಿಸಲಾರಿರ್ಪರೆನ್ನ ಧಾರಣೆಯಂ ಪೇಳ್!

ಧ ಕಾರಯುಕ್ತ ಶಬ್ದಾಲಂಕಾರದ ನಾದಗುಂಫನ ಗಮನಿಸಬೇಕಾದದ್ದು. " ನೀನಲ್ಲದೆ ಸಾಧಿಸಲಾರಿರ್ಪರೆನ್ನ ಧಾರಣೆಯ ಪೇಳ್!" ಎಂಬಲ್ಲಿ ಬರೀ ಹಿಡಿದರೆ ಸಾಲದು " ಎತ್ತಿ ಹಿಡಿಯಬೇಕು" ಎಂಬ ಈ ಸೊಲ್ಲು  ಪದ್ಯದ ರಚನಾಕಾಲದ ಕವಿಯ ಮನದ ಔನ್ನತ್ಯವನ್ನು ತೋರಿಸುತ್ತದೆ. " ನೀನಲ್ಲದೆಸಾಧಿಸಲಾರಿರ್ಪರೆನ್ನ " ಎಂಬಲ್ಲಿಗೆ ತಾರ್ಕಿಕ ನಿಲುಗಡೆ ಇದ್ದರೂ, ಧಾರಣೆ ಎಂಬುದು ಒಮ್ಮೆಗೇ ದೈವಿಕ ನೆಲೆಗೆ ವಾಚಕರನ್ನು ಎತ್ತೆಸೆಯುತ್ತದೆ.  ಅಸಾಧಾರಣ ಶಬ್ದ ವ್ಯುತ್ಪತ್ತಿ ಮತ್ತು, ಅವುಗಳ ವಿವೃತಿ ವಾಚಕನಿಗೆ ಸುಖಕೊಡುವಂಥದ್ದು.

****

ಪಣ್ಯಾಂಗನೆಯಾಂ ಸತ್ಯಂ

ಗಣ್ಯಮೇ ಲಕ್ಷ್ಮೀಶ! ನಿನಗಮೆನ್ನಯ ಮೌಲ್ಯಂ?

ನಾಣ್ಯಾಶಿನಿಯರ ಖಲನೈ-

ಪುಣ್ಯಂ ಮತ್ಪುಣ್ಯಮೆಂದು ಪರಿಕಿಸಿ ಬಾರಯ್!

ದೇವರನ್ನೆ ತನ್ನ ವಿಟನನ್ನಾಗಿ ಮಾಡಿಕೊಳ್ಳಲು ತವಕಿಸುವ ಈಕೆ ಸತ್ಯಕ್ಕೂ ಪುಣ್ಯವಂತೆಯೇ ಸರಿ! ಆಕೆಯ ನೈಪುಣ್ಯ ಆಕೆಯ ಸಹಜ- ಪ್ರಪತ್ತಿ. ತನ್ನನ್ನು ಕೊಂಡುಕೊಳ್ಳಲು ಆಕೆ ಎಷ್ಟೆಲ್ಲ ಯಾತನೆ ಪಡುತ್ತಾಳೆ! ಇಂತಹ ಸಾಧಾರಣೆಯ ಅಸಾಧಾರಣ ಮನಸ್ಸಿನ ಅನುಸಂಧಾನ ಅಪೂರ್ವ ಅನುಭೂತಿ ಕೊಡುವಂಥದ್ದು.

****

ವಿಟರನ್ನಟ್ಟಿದೆನೆಲ್ಲರಂ ಪೊರಗೆ ಮತ್ತೀಕುಟ್ಟಿನೀವ್ಯೂಹಮಂ

ಕುಟಿಲವ್ಯಾಪೃತಿಯಂ ತೊಲಂಗಿಸಿದೆನಾಂ ಮದ್ಗೇಹದಿಂದಿಂದಿನಿಂ-

ದಟವೀಪುಷ್ಪದವೊಲ್ ವಿಕಾಸಪರೆಯಾಂ ನಿಃಶ್ಶುಲ್ಕಮೆನ್ನಾತ್ಮಮಂ

ವಿಕಟಾನಂದನವೈಶಿಕಾ! ನಿನಗಮೊಲ್ದೊಲ್ದರ್ಪಿಸುತ್ತಿರ್ಪೆನ್!

ತನ್ನನ್ನು ಸುತ್ತಿದ ಪಾಶಗಳೆಲ್ಲವನ್ನು ಹೊರಗಟ್ಟಿ ಬಿಸುಟು ಪ್ರಪಂಚದ ಹಂಗಿಲ್ಲದೆ, ಯಾವ ಬೇಡಿಕೆಯನ್ನೂ ಇಡದೆ ಪರಮಾತ್ಮನ ಚರಣಕ್ಕೆ ತನ್ನನ್ನು ಅರ್ಪಿಸುವ ಆರ್ತ ಭಾವ ಇಲ್ಲಿದೆ. " ಕುಟಿಲಾವ್ಯಾಪೃತಿಯಂ ತೊಲಂಗಿಸಿದೆನಾಂ.." ಎಂಬಲ್ಲಿನ " ತೊಲಂಗಿಸಿ.." ಎಂಬಲ್ಲಿಯ "ಅಂ"ಕಾರದ ಬಳಕೆ  ಸೃಜಿಸುವ ಹೃದಯದಾಳದಿಂದ ತನ್ನಲ್ಲಿರುವ ಬಂಧಕಗಳನ್ನು ಮೂಲೋಚ್ಛಾಟನೆ ಮಾಡುವ ದೃಢ ನಿರ್ಧಾರವೋ ಕಾರ್ಯವೋ ಧ್ವನಿಸುತ್ತದೆ. ಈ ಅಕ್ಷರಪುಂಜ ಹೊರಡಿಸುವ ಭಾವಕ್ಕೆ ಸಮದಂಡಿಯಾಗಿ 

"ಮದ್ಗೇಹದಿಂದಿಂದಿನಿಂ.." ಎಂಬುವದೂ ದುಡಿದಿದೆ. ಶಬ್ದಗಳೂ ಪದ್ಯದ ಭಾವಕ್ಕೆ ಪೂರಕವಾಗಿ ದುಡಿಯುವುದು ಮಹಾಕವಿಪ್ರತಿಭೆಯಲ್ಲಿ ಮಾತ್ರವೇ ಕಾಣಬಹುದಾದದ್ದು.

ಇಲ್ಲಿ, ಅಡವಿಯಲ್ಲಿ ಬೆಳೆಯುವ ಪುಷ್ಪದ ಸಹಜವಿಕಾಸದ ರೀತಿ ಅತೀತದೆಡೆಗೆ ಸಾಗುವ ಸಂಕಲ್ಪ ಕಾಣುತ್ತದೆ. " ನಿಶ್ಶುಲ್ಕಮೆನ್ನಾತ್ಮಮಂ ಎಂಬಲ್ಲಿ ಬೇರೆಯಾವುದೇ ಉದ್ದೇಶವಿಲ್ಲದ ಒಲಿದು ಶರಣಾಗುವಂಥ ಭಾವತೀವ್ರತೆಯನ್ನೂ  ಕಾಣುತ್ತೇವೆ. ಪದ್ಯದ ಶಬ್ದವೂ ಅರ್ಥವೂ "ಪರಸ್ಪರಂ ಭಾವಯಂತಃ" ಎಂಬಂತೆ ಬಳಸಲ್ಪಟ್ಟಿರುವುದು ಇಲ್ಲಿ ಗಮನಿಸಬೇಕಾದದ್ದು.

ಒಟ್ಟಿನಲ್ಲಿ ವಂಶೀಸಂದೇಶಂ ಪ್ರತಿಯೊಬ್ಬ ಕಾವ್ಯಾಸಕ್ತ ಓದಬೇಕಾದದ್ದು. ಆಗಾಗ ಮನನಮಾಡಬೇಕಾದ ಸತ್ಕಾವ್ಯ. ಅಭಿಜ್ಞಾನ, ಬೆಂಗಳೂರು ಇವರು ಪ್ರಕಾಶಿಸಿದ ಪುಸ್ತಕದ ಬೆಲೆ ರೂಪಾಯಿ ಇಪ್ಪತ್ತೈದು ಮಾತ್ರ.

-ಕೃಷ್ಣಪ್ರಕಾಶ ಉಳಿತ್ತಾಯ, ಪೆರ್ಮಂಕಿ, ಮಂಗಳೂರು