ವಚನಕಾರರು - ೧

ವಚನಕಾರರು - ೧

ಬರಹ

ಅಕ್ಕಮಹಾದೇವಿಅಕ್ಕಮಹಾದೇವಿ (೧೧೩೦ - ೧೧೬೦): ಸಮಾಜಸಧಾರಣೆಯಲ್ಲಿ ಮಹಿಳೆಯ ಪಾತ್ರವು ಹಿರಿದಾದುದು. ಪುರಷಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲರೆಂಬ ಪ್ರಜ್ಞೆಯನ್ನು ಸುಮಾರು ಎಂಟುನೂರು ವರ್ಷಗಳ ಹಿಂದೆಯೇ ಮೂಡಿಸಿದ ಕರ್ನಾಟಕದ ಪ್ರಪ್ರಥಮ ಮಹಿಳೆಯೆಂದರೆ ಅಕ್ಕಮಹಾದೇವಿ.

ಹನ್ನೆರಡನೆಯ ಶತಮಾನದಲ್ಲೇ ಇಂತಹ ಮಹಿಳಾ ಜಾಗೃತಿಯನ್ನು ಮೂಡಿಸಿದರು. ಸಂಸಾರವನ್ನು ತ್ಯಜಿಸಿ, ಚೆನ್ನಮಲ್ಲಿಕಾರ್ಜುನ ದೇವರೇ ತನ್ನ ಪತಿಯೆಂಬುದಾಗಿ ನಂಬಿದರು. ತಮ್ಮ ವೈರಾಗ್ಯದ ಮೂಲಕವೇ ಪುರುಷರೊಡನೆ ಹೋರಾಡಿ ಸಮಾಜೋದ್ಧಾರದ ಕಾರ್ಯದಲ್ಲಿ ನೆರವಾದರು ಈ ಶಿವಶರಣೆ. ತಮ್ಮ ಭಾವನೆಗಳನ್ನು ವಚನಗಳ ಮೂಲಕ ತಿಳಿಗನ್ನಡದಲ್ಲಿ ತಿಳಿಸಿದರು. ಲಿಂಗಭೇದವಿಲ್ಲದೆ, ಜಾತಿಭೇದವಿಲ್ಲದೆ ಪ್ರತಿಯೊಬ್ಬರೂ ಲೋಕವಿಚಾರಗಳನ್ನು ಅರಿಯುವಂತೆ ಮಾಡಿದರು.

ಉಡುತಡಿ ಗ್ರಾಮವಾಸಿಗಳಾದ ಮಹಾದೇವಿ ಪರಮಶಿವಭಕ್ತೆಯಾಗಿದ್ದರು. ಶ್ರೀಶೈಲ ಚೆನ್ನಮಲ್ಲಿಕಾರ್ಜುನನೇ ಇವರ ಆರಾಧ್ಯದೈವವಾದನು. ಶಿವಭಕ್ತೆಯಾದ ಮಹಾದೇವಿಯು ಕೆಲವು ಷರತ್ತುಗಳನ್ನು ಹಾಕಿ ರಾಜ ಕೌಶಿಕನನ್ನು ಮದುವೆಯಾದರು. ಆಕೆಯ ಷರತ್ತುಗಳನ್ನು ರಾಜನು ಮುರಿಯಲು ಸಂಸಾರವನ್ನು ತ್ಯಜಿಸಿ ವಿರಾಗಿಯಾದರು. ಎಲ್ಲರಿಗೂ ಅಕ್ಕಳಾಗಿ ಅಕ್ಕಮಹಾದೇವಿ ಎನಿಸಿದರು. ಶಿವಶರಣರಾದ ಬಸವಣ್ಣನವರ ಸಮಕಾಲೀನರು ಇವರು.

ಸರ್ವಸಂಗ ಪರುತ್ಯಾಗಿಯಾಗಿ ಶಿವನನ್ನೇ ಪತಿಯೆಂದು ನಂಬಿ "ಚೆನ್ನಮಲ್ಲಿಕಾರ್ಜುನ" ಅಂಕಿತದೊಡನೆ ಅನೇಕ ವಚನಗಳನ್ನು ತಿಳಿಗನ್ನಡದಲ್ಲಿ ರಚಿಸಿ ಗಹನವಾದ ತತ್ವಗಳನ್ನು ಸಾಮಾನ್ಯ ಜನರಿಗೂ ತಲುಪಿಸಿದರು. ಶಿವಶರಣೆಯಾಗಿ ಅಕ್ಕನವರು ಅಂದಿನ ಸಮಾಜದಲ್ಲಿ ಸ್ತ್ರೀಯರಿಗೆ ಉನ್ನತಸ್ಥಾನವನ್ನು ಗಳಿಸಿಕೊಟ್ಟರು.

ವಚನ: ಲೋಕದ ಚೇಷ್ಟೆಗೆ.

||ಲೋಕದ ಚೇಷ್ಟೆಗೆ ರವಿ ಬೀಜವಾದಂತೆ||
||ಕರಣಂಗಳ ಚೇಷ್ಟೆಗೆ ಮನವೇ ಬೀಜ||
||ಎನಗುಳ್ಳದೊಂದು ಮನ||
||ಆ ಮನ ನಿಮ್ಮಲ್ಲಿ ಒಡೆವೆರೆದ ಬಳಿಕ||
||ಎನಗೆ ಭವವುಂಟೇ ಚೆನ್ನಮಲ್ಲಿಕಾರ್ಜುನ||

ಚೇಷ್ಟೆ: ಚಾಲನೆ; ಪ್ರೇರಣೆ.
ಬೀಜ: ಉತ್ಪತ್ತಿಸ್ಥಾನ; ಮೂಲ; ಕಾರಣ.
ಕರಣ: ಜ್ಞಾನೇಂದ್ರಿಯ.
ಒಡೆ: ಬಿಚ್ಚು; ತೆರೆ.
ಭವ: ಅಸ್ತಿತ್ವ; ಮರುಹುಟ್ಟು; ಪುನರ್ಜನ್ಮ.

ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್] ಪುಸ್ತಕ