ವಚನಬಿಂದು
ನಿವೃತ್ತ ಮುಖ್ಯ ಶಿಕ್ಷಕಿ, ಸಾಹಿತಿ ರತ್ನಾ ಕೆ ಭಟ್, ತಲಂಜೇರಿ ಇವರು ಬರೆದ ಆಧುನಿಕ ವಚನಗಳ ಸಂಗ್ರಹವು ‘ವಚನಬಿಂದು' ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಪ್ರಕಟವಾಗಿದೆ. “ರತ್ನಕ್ಕನೆಂದೇ ಜನರ ಮನಸ್ಸಿನಲ್ಲಿ ನೆಲೆ ನಿಂತವರು ಇವರು. ಇವರು ಮೂಲತಃ ಕವಿಗಳ ವಂಶದವರು. ಆದುದರಿಂದ ಹುಟ್ಟುತ್ತಲೇ ಕವಿತ್ವ ಇವರ ರಕ್ತದಲ್ಲಿ ಸಂಚರಿಸುತ್ತಲೆ ಇತ್ತು. ಅದು ಈ ಹಿರಿಯ ಪ್ರಾಯದಲ್ಲಿ ಹೊರಹೊಮ್ಮಿದೆ. ಇಂದು ನಾಡಿನಾದ್ಯಂತ ಕನ್ನಡ ನಾಡಿನ ಲೇಖಕಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಇಲ್ಲಿ ಇವರು ಬರೆದಿರುವ ಆಧುನಿಕ ವಚನ ಜನರ ಜೀವನದ ವಿವಿಧ ಸ್ತರಗಳನ್ನು ಪರಿಚಯಿಸುತ್ತದೆ. ಆ ಮೂಲಕ ತಿಳುವಳಿಕೆಯ ಪಾಠವನ್ನು ಜನರಿಗೆ ನೀಡಿದ್ದಾರೆ. ವೈವಿಧ್ಯಮಯವಾದ ಆಧುನಿಕ ವಚನ ಸಂಕಲನವನ್ನು ನಾಡಿನ ಜನ ಪಡೆದು ಓದಿ ಅದರಲ್ಲಿನ ಜ್ಞಾನವನ್ನು ಪಡಕೊಂಡರೆ ಅವರೂ ಬರೆದಿರುವುದಕ್ಕೆ ಸಾರ್ಥಕ. ನಾಡಿನ ಎಲ್ಲಾ ಕನ್ನಡಿಗರೂ ಈ ಹಿರಿಯರು ತಮಗಾಗಿ ಬರೆದಿರುವ ಆಧುನಿಕ ವಚನ ಸಂಕಲನವನ್ನು ಪ್ರೀತಿಯಿಂದ ಪಡೆದುಕೊಂಡಲ್ಲಿ, ಅವರ ಮುಂದಿನ ಬರವಣಿಗೆಗೆ ಉತ್ತೇಜನವನ್ನು ನೀಡಬೇಕೆಂದು ಕೇಳಿಕೊಳ್ಳುವೆ” ಎಂದಿದ್ದಾರೆ ಇವರ ಸಹೋದರ ಮತ್ತು ಸಾಹಿತಿ ಹಾ ಮ ಸತೀಶ ಇವರು.
ಸ್ವತಃ ಕವಿಯೂ ಆಗಿರುವ ಲತೀಶ್ ಎಂ ಸಂಕೊಳಿಗೆ ಇವರು ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ. ತಮ್ಮ ‘ಮುಮ್ಮಾತು'ವಿನಲ್ಲಿ ಅವರು ವ್ಯಕ್ತ ಪಡಿಸಿದ ಅಭಿಪ್ರಾಯಗಳ ಆಯ್ದ ಸಾಲುಗಳು ಹೀಗಿವೆ..." ಕ್ರಿ.ಶ. ೧೨ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನುಂಟು ಮಾಡಿದ ಶರಣರ ಕಾಲದ ವಚನ ಸಾಹಿತ್ಯ ಕನ್ನಡ ಸಾರಸ್ವತ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಮಾನವನ್ನು ಪಡೆದು ಆಮೂಲಾಗ್ರ ಬದಲಾವಣೆಗೆ ಕಾರಣವಾಯಿತು. ಕಾಲಕ್ರಮೇಣ ಇದರ ಹಾದಿಯಲ್ಲೇ ಮುಂದುವರಿದು, ಸಮಾಜದಲ್ಲಿನ ಅಂಕುಡೊಂಕುಗಳನ್ನು ನೇರವಾಗಿ ಜನರ ಮುಂದಿಡುವಲ್ಲಿ ಬೆಳೆದು ಬಂದಿರುವ ವಚನ ಸಾಹಿತ್ಯದ ಪರಿಷ್ಕೃತ ರೂಪ ಆಧುನಿಕ ವಚನ ಸಾಹಿತ್ಯವೆಂದು ಹೇಳಬಹುದು. ತನ್ನ ಸಾಹಿತ್ಯಾನುಭವದ ಮೂಸೆಯಿಂದ ಅತ್ಯಂತ ಪರಿಣಾಮಕಾರಿಯಾಗಿ ಧಾರೆಯೆರೆದು ‘ವಚನಬಿಂದು' ಎನ್ನುವ ೧೫೦ಕ್ಕೂ ಹೆಚ್ಚಿರುವ ಆಧುನಿಕ ವಚನಗಳ ಸಂಕಲನವನ್ನು ಲೋಕಾರ್ಪಣೆಗೆ ಸಿದ್ಧಗೊಳಿಸಿರುವ ಹಿರಿಯ ಕವಯತ್ರಿ ಶ್ರೀಮತಿ ರತ್ನಾ ಕೆ ಭಟ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಶ್ರೀ ದುರ್ಗೆ ಅಂಕಿತನಾಮದಲ್ಲಿ ಸುಮಾರು ನೂರೈವತ್ತಕ್ಕೂ ಮಿಗಿಲಾಗಿ ವಚನಗಳನ್ನು ಪೋಣಿಸಿಕೊಂಡು, ಆ ಮೂಲಕ ನಮ್ಮ ಸಮಾಜದಲ್ಲಿನ ಅನ್ಯಾಯ, ಅನಾಚಾರ, ಸಾಮಾಜಿಕ ಶೋಷಣೆಗಳು, ರಾಜಕೀಯ ಡಂಭಾಚಾರಗಳನ್ನು ಹಾಗೂ ಇನ್ನಿತರ ಮೌಢ್ಯದ ವಿಷಯಗಳನ್ನು ಹೆಕ್ಕಿ ಹೆಕ್ಕಿ ಓದುಗರಿಗೆ ತಲುಪುವಲ್ಲಿ ಕುಕ್ಕಿ ತಿವಿದ ರೀತಿ ಅರ್ಥಪೂರ್ಣವಾಗಿ ಔಚಿತ್ಯಪೂರ್ಣವಾಗಿ ಮೂಡಿಬಂದಿದೆ. ಕೆಲವೊಂದು ಅರ್ಥರಹಿತ ಸಾಮಾಜಿಕ ಮೌಢ್ಯಗಳನ್ನು ಬೆತ್ತಲೆಗೊಳಿಸುವುದರ ಜೊತೆಗೆ ಕನ್ನಡ ಭಾಷೆಯ ಮೇಲಿರುವ ತನ್ನ ಉತ್ಕಟ ಅಭಿಮಾನವನ್ನು ವಚನದ ಮೂಲಕ ಅಭಿವ್ಯಕ್ತಿ ಪಡಿಸಿದ ರೀತಿ ನಿಜಕ್ಕೂ ಸ್ತುತ್ಯರ್ಹ.
ತನ್ನ ಭಾಷೆಯನು ಮಾತ್ರ ಪೊಗಳದಿರು
ಅನ್ಯ ಭಾಷೆಯ ಅನವರತ ಗೌರವಿಸು
ತಾಯಿ ನಾಡು-ನುಡಿ ಮಿಗಿಲಹುದು
ಇತರರಬು ಸ್ಥಾನ - ಮಾನಗಳಿಗಾಗಿ ಓಲೈಸುವುದ ಬಿಡು
ಎಲ್ಲರನು ನಿಜ ಮನಸ್ಸಿನಿಂದ ಒಪ್ಪಿ ಅಪ್ಪಿಕೊಂಡರೆ ಮಾತ್ರ
ಚಕ್ಷುಗಳ ನಮ್ಮೆಡೆಗೆ ಹರಿಸುವಳು ಮಾತೆ ಶ್ರೀ ದುರ್ಗೆ
ಮಾತೃ ಭಾಷೆಯ ಮೇಲಿನ ಅಭಿಮಾನವನ್ನುಅನ್ಯ ಭಾಷೆಗೆ ಕಿಂಚಿತ್ತೂ ಧಕ್ಕೆಯಾಗದ ರೀತಿಯಲ್ಲಿ ಗಂಧಚಂದನದಲ್ಲಿ ಅದ್ದಿ ತೇಯ್ದಂತೆ, ಭಾಷೆಯ ಮೇಲಿರುವ ಮಮತೆಯನ್ನು ಮತ್ತಷ್ಟು ಇಮ್ಮಡಿಗೊಳಿಸುವಂತೆ, ನಮ್ಮ ಚಕ್ಷುವನ್ನು ತೆರೆಯುವಂತಹ ಮೇಲೆ ಉದಾಹರಿಸಿದ ವಚನ, ಭಾಷೆ ಯಾವುದಾದರೂ, ರಾಜ್ಯ ಯಾವುದಾದರೂ ನಾವೆಲ್ಲರೂ ಒಂದೇ ಎನ್ನುವ ರಾಷ್ಟ್ರ ಪ್ರೇಮವನ್ನು ಜಾಗೃತಗೊಳಿಸುತ್ತದೆ.”
ಆಧುನಿಕ ವಚನಗಳ ಲೇಖಕಿಯಾದ ರತ್ನಾ ಭಟ್ ಅವರು ತಮ್ಮ ಬರವಣಿಗೆ ಬಗ್ಗೆ ಹೇಳುವುದು ಹೀಗೆ..."ನನ್ನ ವೃತ್ತಿ ಬದುಕಿನ, ಕುಟುಂಬ ಜೀವನದ, ಪರಿಸರದ, ಕೇಳಿದ, ನೋಡಿದ ಘಟನೆಗಳ, ವಾಸ್ತವತೆಯನ್ನೇ ‘ಆಧುನಿಕ ವಚನ’ವಾಗಿಸಿದ್ದೇನೆ.” ಎಂದಿದ್ದಾರೆ. ಸುಮಾರು ೪೦ ಪುಟಗಳ ಈ ಪುಸ್ತಕವನ್ನು ತಮ್ಮ ತಂದೆ ಈಶ್ವರ್ ಭಟ್ ಮತ್ತು ತಾಯಿ ಶಂಕರಿ ಅಮ್ಮ ಹಾಲುಮಜಲು ಇವರಿಗೆ ಅರ್ಪಣೆ ಮಾಡಿದ್ದಾರೆ.