ವಚನಭ್ರಷ್ಟ ಪಾಕ್ ಮೇಲೆ ಒತ್ತಡ ಹೆಚ್ಚಿಸಲು ಭಾರತಕ್ಕಿದು ಸಕಾಲ

ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ೨೬ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಬಳಿಕ ಭಾರತ ಮತ್ತು ಪಾಕಿಸ್ಥಾನ ನಡುವಣ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು. ಪಾಕ್ ಪ್ರೇರಿತ ಉಗ್ರರು ನಡೆಸಿದ ಈ ನರಮೇಧಕ್ಕೆ ಪ್ರತೀಕಾರವಾಗಿ ಭಾರತೀಯ ಸೇನಾಪಡೆಗಳು ಮೇ ೭ರಂದು ಪಾಕಿಸ್ಥಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಒಂಬತ್ತು ನೆಲೆಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಿ ಧ್ವಂಸಗೈದದಲ್ಲದೆ ಉಗ್ರರನ್ನು ಸದೆಬಡಿದಿದ್ದವು. ತನ್ನ ಹೋರಾಟ ಏನಿದ್ದರೂ ಉಗ್ರರ ವಿರುದ್ಧವಾಗಿದ್ದು ಪಾಕಿಸ್ಥಾನ ತನ್ನ ಗುರಿಯಲ್ಲ ಎಂದು ಭಾರತ ಸಾರಿ ಹೇಳಿದರೂ ಇದನ್ನೊಂದು ಒಣಪ್ರತಿಷ್ಠೆಯನ್ನಾಗಿಸಿಕೊಂಡ ಪಾಕಿಸ್ಥಾನ, ಭಾರತದ ಮೇಲೆ ಸೇನಾ ದಾಳಿ ನಡೆಸುವ ಮೂಲಕ ರಣಹೇಡಿ ವರ್ತನೆ ತೋರಿತು. ಇದು ಭಾರತದ ತಾಳ್ಮೆ ಸಂಯಮವನ್ನು ಕಟ್ಟೆಯೊಡೆಯುವಂತೆ ಮಾಡಿತು. ಭಾರತೀಯ ಪಡೆಗಳು ಪಾಕ್ ಸೇನಾ ನೆಲೆಗಳು ಮತ್ತು ಅಲ್ಲಿ ಅವಿತುಕೊಂಡಿದ್ದ ಉಗ್ರರನ್ನು ದಮನ ಮಾಡುವಲ್ಲಿ ಯಶಸ್ವಿಯಾಯಿತು. ಕೆಲವು ಕುತಂತ್ರಿ ರಾಷ್ಟ್ರಗಳ ಬೆಂಬಲದೊಂದಿಗೆ ಪಾಕಿಸ್ಥಾನ ಭಾರತದೊಂದಿಗಿನ ಸಂಘರ್ಷ ಮುಂದುವರಿಸಿತ್ತಾದರೂ ತನ್ನ ಸೇನಾನೆಲೆಗಳು, ರಕ್ಷಣ ವ್ಯವಸ್ಥೆ ಧ್ವಂಸವಾಗುತ್ತಿದ್ದಂತೆಯೇ ಕಂಗಾಲಾಗಿ ಕದನವಿರಾಮಕ್ಕಾಗಿ ಅಮೆರಿಕದ ಮುಂದೆ ಅಂಗಲಾಚಿ, ಅದರಲ್ಲಿ ಯಶಸ್ವಿಯೂ ಆಯಿತು.
ಈ ಕದನ ವಿರಾಮ ಕೇವಲ ಭಾರತ ಮತ್ತು ಪಾಕಿಸ್ಥಾನದ ಪಾಲಿಗೆ ಮಾತ್ರವಲ್ಲದೆ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ, ವಾಣಿಜ್ಯ, ವ್ಯವಹಾರದ ದೃಷ್ಟಿಯಿಂದಲೂ ಅನಿವಾರ್ಯವಾಗಿತ್ತು. ಪಾಕಿಸ್ಥಾನದ ನರಿಬುದ್ದಿಯ ಸಂಪೂರ್ಣ ಅರಿವಿದ್ದಾಗ್ಯೂ ಭಾರತ ಸರ್ಕಾರ ಕದನವಿರಾಮಕ್ಕೆ ಷರತ್ತುಬದ್ಧ ಒಪ್ಪಿಗೆ ನೀಡಿದೆ. ಜಮ್ಮು-ಕಾಶ್ಮೀರದಲ್ಲಿನ ಉಭಯ ದೇಶಗಳ ನಡುವಣ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಈ ಕದನ ವಿರಾಮ, ಉಲ್ಲಂಘನೆ ದಿನನಿತ್ಯದ ಸುದ್ದಿಯಾಗಿದೆ. ಆದರೆ ಕಳೆದೊಂದು ವಾರದಲ್ಲಿನ ಬೆಳವಣಿಗೆಗಳ ತೀವ್ರತೆ ಹೆಚ್ಚಿದ್ದರಿಂದ ಪಾಕಿಸ್ಥಾನ ಮತ್ತು ಭಾರತ ನಡುವೆ ಸೇನಾ ಆಕ್ರಮಣಗಳಿಗೆ ತಾತ್ಕಾಲಿಕ ತೆರೆ ಬಿದ್ದಿರುವುದು ಒಂದು ಧನಾತ್ಮಕ ಬೆಳವಣಿಗೆ ಮಾತ್ರವಲ್ಲದೆ ಜನರನ್ನೂ ನಿರಾಳರನ್ನಾಗಿಸಿದೆ.
ಇದೇ ವೇಳೆ ಮುಂದಿನ ದಿನಗಳಲ್ಲಿ ಯಾವುದೇ ಉಗ್ರ ದಾಳಿಯನ್ನು ಯುದ್ಧವೆಂದೇ ಪರಿಗಣಿಸುವುದಾಗಿ ಭಾರತ ಸ್ಪಷ್ಟ ಮಾತುಗಳಲ್ಲಿ ಪಾಕಿಸ್ಥಾನಕ್ಕೆ ತಿಳಿಸಿದೆ. ಉಗ್ರರ ದಮನ ಕಾರ್ಯದಲ್ಲಿ ಕೈಜೋಡಿಸದಿದ್ದಲ್ಲಿ ಈಗಾಗಲೇ ಪಾಕಿಸ್ಥಾನದಮೇಲೆವಿಧಿಸಲಾಗಿರುವ ಎಲ್ಲ ನಿರ್ಬಂಧಗಳು ಮುಂದುವರಿಯಲಿವೆ ಎಂದು ಹೇಳಿದೆ. ಈ ಹಿಂದಿನಿಂದಲೂ ಪಾಕಿಸ್ಥಾನ ತನ್ನ ಯಾವೊಂದೂ ಮಾತನ್ನೂ ಉಳಿಸಿಕೊಳ್ಳದ ಹಿನ್ನೆಲೆಯಲ್ಲಿ ಭಾರತ ಈ ಎಲ್ಲ ಷರತ್ತುಗಳನ್ನು ವಿಧಿಸಿಯೇ ಕದನವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ ಮಾತ್ರವಲ್ಲದೆ ಭವಿಷ್ಯದಲ್ಲಿ ಉಗ್ರರ ವಿರುದ್ಧದ ತನ್ನ ನಿಲುವನ್ನು ಇನ್ನಷ್ಟು ಕಠಿಣಗೊಳಿಸುವ ಸೂಚನೆಯನ್ನು ನೀಡಿದೆ.
ಇನ್ನಾದರೂ ಪಾಕಿಸ್ಥಾನ ತನ್ನ ನೆಲದಲ್ಲಿ ಆಶ್ರಯ ಪಡೆದಿರುವ ಉಗ್ರರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಪಾಕಿಸ್ಥಾನ ಈ ಬಾರಿಯಾದರೂ ತನ್ನ ಮಾತನ್ನು ಕಾರ್ಯಗತಗೊಳಿಸುವ ಅನಿವಾರ್ಯತೆಯನ್ನಂತೂ ಈಗ ಭಾರತ ಸೃಷ್ಟಿಸಿಯಾಗಿದೆ. ಆಗಾಗ ನಡೆಯಲಿರುವ ಉಭಯ ದೇಶಗಳ ಸೇನಾಧಿಕಾರಿಗಳ ಮಾತುಕತೆಯ ವೇಳೆ ಈ ಸಂಬಂಧ ಪಾಕಿಸ್ಥಾನದ ಮೇಲೆ ಭಾರತ ಬಲವಾದ ಒತ್ತಡ ಹೇರಲಿರುವುದು ನಿಶ್ಚಿತ. ಭಾರತದಲ್ಲಿ ವಿವಿಧ ಉಗ್ರ ದಾಳಿ ಮತ್ತು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಪಾಕ್‌ನಲ್ಲಿ ನೆಲೆಯಾಗಿರುವ ಎಲ್ಲ ಉಗ್ರರು ಮತ್ತು ಅಪರಾಧಿಗಳನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಒತ್ತಡ ಹೇರಬೇಕು. ಇವೆಲ್ಲದರ ಹೊರತಾಗಿಯೂ ಪಾಕಿಸ್ಥಾನ ತನ್ನ ಹಳೆ ಚಾಳಿಯನ್ನು ಮುಂದುವರಿಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಘನಘೋರ ಪರಿಣಾಮ ಎದುರಿಸಬೇಕಾಗಿ ಬರುವುದು ನಿಶ್ಚಿತ.
ಕೃಪೆ: ಉದಯವಾಣಿ, ಸಂಪಾದಕೀಯ
ಚಿತ್ರ ಕೃಪೆ: ಅಂತರ್ಜಾಲ ತಾಣ