ವಚನ ಚಿಂತನ: ೫: ಮನಸ್ಸು ಘನ
ಸಮುದ್ರ ಘನವೆಂಬೆನೆ ಧರೆಯ ಮೇಲಡಗಿತ್ತು ಧರೆ ಘನವೆಂಬೆನೆ ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು ನಾಗೇಂದ್ರನ ಘನವೆಂಬೆನೆ ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಯಿತ್ತು ಅಂತಹ ಪಾರ್ವತಿಯ ಘನವೆಂಬನೆ ಪರಮೇಶ್ವರನ ಅರ್ಧಾಂಗಿಯಾದಳು ಅಂತಹ ಪರಮೇಶ್ವರನ ಘನವೆಂಬೆನೆ ನಮ್ಮ ಕೂಡಲಸಂಗನ ಶರಣರ ಮನದ ಕೊನೆಯ ಮೊನೆಯ ಮೇಲಡಗಿದನು. ಮನುಷ್ಯನ ಮನಸ್ಸನ್ನು ಕುರಿತು ವಚನಕಾರರು ಬಹಳಷ್ಟು ಹೇಳಿದ್ದಾರೆ. ಸಮುದ್ರ ದೊಡ್ಡದು. ಆದರೆ ಅದು ಭೂಮಿಯಲ್ಲಿ ಅಡಗಿದೆ. ಭೂಮಿ ದೊಡ್ಡದು. ಆದರೆ ಅದು, ಪುರಾಣಗಳು ಹೇಳುವಂತೆ, ಆದಿಶೇಷನ ತಲೆಯ ಮೇಲೆ ಅಡಗಿದೆ. ಭೂಮಿಯನ್ನು ಹೊತ್ತ ಆದಿಶೇಷ ದೊಡ್ಡವನು. ಆದರೆ ಅವನು ಪಾರ್ವತಿಯ ಕಿರು ಬೆರಳ ಉಂಗುರದಲ್ಲಿರುವ ಡಿಸೈನು ಅಷ್ಟೆ. ಪಾರ್ವತಿ ದೊಡ್ಡವಳು. ಆದರೆ ಅವಳು ಪರಮೇಶ್ವರನ ಅರ್ಧಾಂಗಿ, ಅರ್ಧ ಶರೀರ ಅಷ್ಟೆ. ಪರಮೇಶ್ವರ ಎಲ್ಲರಿಗಿಂತ, ಎಲ್ಲಕ್ಕಿಂತ ದೊಡ್ಡವನು. ಆದರೆ ಅವನು ಶರಣರ ಮನಸ್ಸಿನ ಮೊನೆಯ ತುದಿಯಲ್ಲಿ ಅಡಗಿದ್ದಾನೆ. ಎಲ್ಲವನ್ನೂ ಕಾಣಬಲ್ಲ, ಗ್ರಹಿಸಬಲ್ಲ, ಅರ್ಥವನ್ನು ಕಲ್ಪಿಸಬಲ್ಲ ಮನುಷ್ಯನ ಮನಸ್ಸೇ ನಿಜವಾಗಿ ಎಲ್ಲಕ್ಕಿಂತ ಘನವಾದದ್ದು, ದೊಡ್ಡದಾದ್ದು. ದೊಡ್ಡದು, ಚಿಕ್ಕದು ಎಂಬ ಭೇದ ಕೂಡ ಮನಸ್ಸೇ ಕಲ್ಪಿಸಿಕೊಂಡದ್ದು, ಮನಸ್ಸಿನಲ್ಲಿ ಅಡಗಿರುವುದು ಅಲ್ಲವೇ! ಆದಿಶೇಷ, ಪಾರ್ವತಿ, ಅರ್ಧನಾರೀಶ್ವರ ಇಂಥ ಪುರಾಣದ ಕಲ್ಪನೆಗಳು ಕೂಡ ಮನಸ್ಸಿನದೇ ಸೃಷ್ಟಿ. ಪರಮಾತ್ಮ ಕೂಡ ಇದ್ದರೆ ಇರುವುದು ನಮ್ಮ ಮನಸ್ಸಿನ ಮೊನೆಯ ಕೊನೆಯಲ್ಲೇ! ಮನುಷ್ಯ ಜ್ಞಾನವನ್ನು ತನ್ನಿಂದ ಆಚೆಗೆ, ಹೊರಗೆ ಇರುವ ಜಗತ್ತಿನಲ್ಲಿ ಹುಡುಕತೊಡಗಿದ. ಭೂಮಿ, ಆಕಾಶ, ಮರಗಿಡಪ್ರಾಣಿಪಕ್ಷಿ, ಇತ್ಯಾದಿಗಳ ಬಗ್ಗೆ ತಿಳಿವಳಿಕೆ ಪಡೆದುಕೊಂಡ. ಅದೇ ಜ್ಞಾನ. ಅಲ್ಲ, ಇನ್ನೂ ಏನೋ ಇದೆ ಎಂದು ನಂತರದಲ್ಲಿ ತನ್ನ ದೇಹದ ಒಳಗಿನ ವಿವರಗಳು, ಸಂಭವಗಳ ಬಗ್ಗೆ ತಿಳಿದುಕೊಳ್ಳತೊಡಗಿದ. ಆಗ ಅದೇ ಜ್ಞಾನ. ಇಲ್ಲ, ದೇಹ ಕೂಡ ಮನಸ್ಸಿನ ನಿಯಂತ್ರಣಕ್ಕೆ ಒಳಪಟ್ಟದ್ದು ಎಂಬ ತಿಳಿವು ಮೂಡಿದಾಗ ಮನಸ್ಸನ್ನು ಅರಿಯುವುದೇ ಮುಖ್ಯ ಅನಿಸತೊಡಗಿತು. ಎಲ್ಲ ಜ್ಞಾನದ ಮೂಲ ಮನಸ್ಸೇ ಎಂದು ಮನಸ್ಸನ್ನು ತಿಳಿಯುವ ಕೆಲಸ ಶುರುವಾಯಿತು. ಮನಸ್ಸನ್ನು ತಿಳಿಯಲು ಬಯಸುವುದು ಕೂಡ ಮನಸ್ಸೇ! ಮನಸ್ಸನ್ನು ತಿಳಿಯುವ ಉಪಕರಣ ಕೂಡ ಮನಸ್ಸೇ! ಎಂಥ ವಿಚಿತ್ರ, ಮನಸ್ಸು ಎಷ್ಟು ಘನ. “ಮನ ಏವ ಕಾರಣಂ” ಎಂಬ ಭಗವದ್ಗೀತೆಯ ಮಾತು ನೆನಪಿಗೆ ಬರುತ್ತದೆ ಅಲ್ಲವೆ?