ವಚನ ಚಿಂತನ: ೭: ಮನಸ್ಸು – ಆಸೆ - ಮಾಯೆ

ವಚನ ಚಿಂತನ: ೭: ಮನಸ್ಸು – ಆಸೆ - ಮಾಯೆ

ಬರಹ
ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ ಮಣ್ಣು ಮಾಯೆಯಂಬರು ಮಣ್ಣು ಮಾಯೆಯಲ್ಲ ಮನದ ಮುಂದಣ ಆಶೆಯೇ ಮಾಯೆ ಗುಹೇಶ್ವರ ಮಾಯೆಯ ಬಗ್ಗೆ ಬಹಳ ಜನ ಮಾತಾಡುತ್ತಾರೆ. ಇಲ್ಲಿ ಅಲ್ಲಮ ಮಾಯೆಯನ್ನು ವಿವರಿಸುವ ರೀತಿ ಬೇರೆಯಾಗಿದೆ. ಮಾಯೆ ಹೊರಗೆ ಎಲ್ಲೋ ಇಲ್ಲ. ಈ ಲೋಕವೂ ಮಾಯೆ ಅಲ್ಲ. ಹೊನ್ನು, ಹೆಣ್ಣು, ಮಣ್ಣುಗಳು ಮಾಯೆಯಲ್ಲ. ಮಾಯೆ ಎಂಬುದು ಹಾಗೆ ಇಲ್ಲವೇ ಇಲ್ಲ. ಮಾಯೆ ಎಂಬುದು ಇದ್ದರೆ ಅದು ಮನಸ್ಸಿನಲ್ಲಿ ಮೂಡುವ ಆಸೆಗಳಲ್ಲದೆ ಬೇರೆ ಏನೂ ಅಲ್ಲ. ಕೊಂಚ ವಿವರವಾಗಿ ನೋಡೋಣ. ಹೆಣ್ಣನ್ನು ಕಂಡು ಮನಸ್ಸಿನಲ್ಲಿ ಆಸೆ ಮೂಡೀತು. ಅದಕ್ಕೆ ಆ ಹೆಣ್ಣೇ ಕಾರಣ ಅಂದುಬಿಡುವುದು ಸುಲಭದ, ಬೇಜವಾಬ್ದಾರಿಯ ಮಾತು. ಆಸೆ ಹುಟ್ಟಿದ್ದು ನನ್ನ ಮನಸ್ಸಿನಲ್ಲಿ ಎಂಬ ಅರಿವನ್ನು ಮರೆತಾಗ ಹೆಣ್ಣು ಮಾಯೆ ಎಂದು ಅದರಿಂದ ತಪ್ಪಿಸಿಕೊಳ್ಳಲು ಏನೆಲ್ಲ ಕಟ್ಟುಪಾಡು, ವಿಧಿ ವಿಧಾನಗಳು, ತಪಸ್ಸು ಕಠಿಣ ಶಿಕ್ಷೆಗಳು, ಧರ್ಮಶಾಸ್ತ್ರಗಳು ಹುಟ್ಟಿಕೊಳ್ಳುತ್ತವೆ. ಆಸೆ ಹುಟ್ಟಿದ್ದು ಮನಸ್ಸಿನೊಳಗೆ ಎಂದು ಅರಿತರೆ ಹೆಣ್ಣನ್ನು ಕುರಿತ ಧೋರಣೆಯೇ ಬದಲಾದೀತು. ಇದೇ ಮಾತು ಹೊನ್ನಿಗೂ ಸರಿಯೇ. ದುಡ್ಡು ಬೇಕು ಅನ್ನುವುದು ನನ್ನ ಮನಸ್ಸಿನ ಆಸೆ. ದುಡ್ಡೇನೂ ಹಾಗೆ ತನ್ನನ್ನು ಕೂಡಿಟ್ಟುಕೋ ಎನ್ನುವುದಿಲ್ಲವಲ್ಲ. ಭೂಮಿಯಂತೂ ಯಾರದೂ ಅಲ್ಲ, ಆದ್ದರಿಂದಲೇ ಎಲ್ಲರದೂ ಹೌದು. ಆದರೆ ಭೂಮಿ ನನ್ನದೇ ಆಗಬೇಕೆಂಬ ಆಸೆ ಮಾತ್ರ ಮನಸ್ಸಿನೊಳಗೇ ಹುಟ್ಟಿದ್ದು. ಆಸೆ ವಸ್ತುಗಳಲ್ಲಿ ಇಲ್ಲ, ಬಯಸುವ ಮನಸ್ಸಿನಲ್ಲಿ ಇದೆ. ಹಾಗೆ ಬಯಸುವುದು ಸಹಜ ಎಂದು ನಂಬಿಸುವ ನಮ್ಮ ಸಾಮಾಜಿಕ ಧೋರಣೆಗಳಲ್ಲಿ ಇವೆ. ನಾವೇ ಹುಟ್ಟಿಸಿಕೊಂಡ ಆಸೆಗಳ ಮೂಲವನ್ನು ನಮ್ಮಿಂದ ಆಚೆ ಹುಡುಕುತ್ತ, ಆ ಹೊರಗಿನ ಸಂಗತಿಗಳು ನಮ್ಮನ್ನು ಕಟ್ಟಿಹಾಕಿವೆ ಎಂದು ಗೊಣಗುತ್ತ, ಪಾರಾಗಲು ಪರಿತಪಿಸುತ್ತ ಇರುವುದೇ ಬಲು ದೊಡ್ಡ ಮಾಯೆ ಇದ್ದೀತು. ಮನದ ಮುಂದಣ ಆಸೆಯೇ ಮಾಯೆ ಎಂಬುದು ನಮ್ಮನ್ನು ನಾವು ನೋಡಿ ಅರಿಯಲು ಇರುವ ಬಲು ದೊಡ್ಡ ಮಂತ್ರ ಅನ್ನಿಸುತ್ತದೆ.