ವಚನ ಚಿಂತನ: ೮: ಆಸೆ-ರೋಷ, ಮಗು-ತಾಯಿ

ವಚನ ಚಿಂತನ: ೮: ಆಸೆ-ರೋಷ, ಮಗು-ತಾಯಿ

ಬರಹ
ಆಸೆಯೆಂಬ ಕೂಸನೆತ್ತಲು ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ ಇಂತೆರಡಿಲ್ಲದೆ ಕೂಸನೆತ್ತಬಲ್ಲಡೆ ಆತನೆ ಲಿಂಗೈಕ್ಯನು ಗೊಹೇಶ್ವರ ಮನಸ್ಸಿನಲ್ಲಿ ಹುಟ್ಟುವ ಆಸೆ ಮತ್ತು ರೋಷಗಳಿಗೆ ಇರುವುದು ತಾಯಿ ಮಕ್ಕಳ ಸಂಬಂಧ. ಒಂದನ್ನು ಬಿಟ್ಟು ಒಂದಿರಲಾರವು. ಇವೆರಡೂ ಗುಣಗಳು ಇಲ್ಲವಾದಾಗ ಮನುಷ್ಯ ದೇವರಲ್ಲಿ ಒಂದಾಗಿರುತ್ತಾನೆ. ನಮ್ಮ ದಿನ ನಿತ್ಯದ ಬದುಕಿನಲ್ಲಿ ಮನಸ್ಸಿನ ಕಾರ್ಪಣ್ಯಗಳಿಗೆ ಕಾರಣವನ್ನು ಹುಡುಕುತ್ತ ಹೊದದರೆ ಅವಕ್ಕೆಲ್ಲ ಮೂಲವಾಗಿ ಆಸೆ ಅಥವ ರೋಷಗಳೆಂಬ ಭಾವ ಇರುವುದು ತಿಳಿಯುತ್ತದೆ. ಆಸೆ ಮತ್ತು ರೋಷಗಳೆರಡೂ ನಮ್ಮ ಅಹಂಕಾರವನ್ನು ಗಟ್ಟಿಗೊಳಿಸುವ ಗುಣಗಳು. ನಮ್ಮ ಎಲ್ಲ ಕೋಪಕ್ಕೆ ನಮ್ಮೊಳಗಿನ ಆಸೆಯೇ ಕಾರಣವಲ್ಲವೆ? ನಮ್ಮೊಳಗೆ ನಾವು ಬೆಳೆಸಿಕೊಂಡ ಆಸೆಗೆ ಧಕ್ಕೆ ಬಂದಾಗ ಕೋಪ, ರೋಷಗಳು ಮೂಡುತ್ತವೆ. ಹಾಗೆ ಹುಟ್ಟಿದ ರೋಷ ಅತೃಪ್ತವಾದ ಆಸೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಆಸೆಯಿಂದ ಕೋಪ, ಕೋಪದಿಂದ ಆಸೆ ಪರಸ್ಪರ ಬೆಳೆಯುತ್ತ ಹೋಗುತ್ತವೆ. ದೇವರನ್ನು ನಮ್ಮಿಂದ ಬೇರೆಯಾದ ಒಂದು ಶಕ್ತಿ ಎಂದು ಸಾಮಾನ್ಯವಾಗಿ ತಿಳಿಯುತ್ತೇವೆ. ಹಾಗೆ ನಾವು ಬೇರೆ ಎಂಬ ಪ್ರತ್ಯೇಕತೆಯ ಭಾವ ಇರುವುದರಿಂದಲೇ ನನಗೆ ಅದು “ಬೇಕು” ಎಂಬ ಆಸೆ ಮತ್ತು ಸಿಗಲಿಲ್ಲವೆಂಬ ರೋಷ ಹುಟ್ಟುತ್ತವೆ. ಆಸೆ ರೋಷಗಳಿಂದ ನಾವು ನಮ್ಮ ಸುತ್ತಲವರಿಂದಲೂ ನಮ್ಮ ಕಲ್ಪನೆಯ ದೇವರಿಂದಲೂ ಬೇರೆಯಾಗುತ್ತ ದೂರವಾಗುತ್ತ ಹೋಗುತ್ತೇವೆ. ಆಸೆಬುರುಕರನ್ನೂ ಕೋಪಿಷ್ಠರನ್ನೂ ನಾವು ದೂರವಿಡಲು ಬಯಸುವುದಿಲ್ಲವೇ? ಹಾಗೆಯೇ ದೇವರು ಕೂಡ ಆಸೆ ರೋಷಗಳು ಇರುವ ವ್ಯಕ್ತಿಗಳನ್ನು ದೂರವಿಡುತ್ತಾನೆ. ಆಸೆ ರೋಷಗಳನ್ನು ನೀಗಿಕೊಂಡಾಗ ವಿಶ್ವದ ಶಕ್ತಿಯೊಡನೆ ಐಕ್ಯ ಸಾಧ್ಯವಾಗುತ್ತದೆ ಎಂಬುದು ಅಲ್ಲಮನ ಮಾತು. ದೇವರನ್ನು ನಿರ್ಗುಣ ಅನ್ನುವುದುಂಟಲ್ಲವೆ? ಯಾಕೆಂದರೆ ದೇವರಿಗೆ ಆಸೆಯೂ ಇರಲಾರದು, ರೋಷವೂ ಇರಲಾರದು. ಇವೆರಡೂ ಗುಣಗಳನ್ನು ಇಲ್ಲವಾಗಿಸಿಕೊಂಡು ನಮ್ಮನ್ನು ನಾವು ಮಗುಗೊಳಿಸಿಕೊಂಡರೆ ಅದೇ ದೈವತ್ವ.