ವಚನ ಮಾಲಿಕೆ 01

ವಚನ ಮಾಲಿಕೆ 01

ಬರಹ

ಚಿತ್ರ ನವಿಲೊಳು ವಿ|ಚಿತ್ರವನು ಗಗನದೊಳು |
ಪತ್ರ ಪುಷ್ಪಗಳ ವಿವಿಧ ವರ್ಣಗಳಿಂದ |
ಚಿತ್ರಿಸಿದರಾರು ? ಸರ್ವಜ್ಞ |

ಅಲ್ಲಿಪ್ಪನಿಲ್ಲಿಪ್ಪ | ನೆಲ್ಲಿಪ್ಪನೆನಬೇಡ |
ಕಲ್ಲಿನಂತಿಪ್ಪ ಮಾನವನ ಮನ ಕರಗೆ |
ಅಲ್ಲಿಪ್ಪ ನೋಡ! ಸರ್ವಜ್ಞ |

ಕಲ್ಲು ಕಲ್ಲೆಂಬುವಿರಿ | ಕಲ್ಲೊಳಿಪ್ಪುದೆ ದೈವ ? |
ಕಲ್ಲಲ್ಲಿ ಕಳೆಯನಿಲಿಸಿದ ಗುರುವಿನ |
ಸೊಲ್ಲಲ್ಲೆ ದೈವ ಸರ್ವಜ್ಞ |

ಹರ ತನ್ನೊಳಿರ್ದು ಗುರು | ತೋರದರೆ ತಿಳಿವುದೆ? |
ಮರದೊಳ್ಗೆ ಅಗ್ನಿ ಇರುತಿರ್ದು ತನ್ನ ತಾ |
ನರಿಯದೇಕೆಂದ ಸರ್ವಜ್ಞ ||

ಗುರುವಿಂಗೆ ದೈವಕ್ಕೆ | ಹಿರಿದು ಅಂತರವುಂಟು |
ಗುರುತೋರ್ವ ದೈವದೆಡೆಯನು, ದೈವ ತಾ |
ಗುರುವ ತೋರುವುದೆ ? ಸರ್ವಜ್ಞ ||

ಗುರುವಿನ ವಿಸ್ತರದ | ಪರಿಯ ನಾನೇನೆಂಬೆ ! |
ಮೆರೆವ ಬ್ರಹ್ಮಾಂಡದೊಳಹೊರಗನವಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಮೊಸರು ಕಡೆಯಲು ಬೆಣ್ಣೆ | ಯೊಸೆದು ತೋರುವ ತೆರದಿ |
ಹಸನಪ್ಪ ಗುರುವಿನುಪದೇಶದಿಂ ಮುಕ್ತಿ |
ವಶವಾಗದಿಹುದೆ ? ಸರ್ವಜ್ಞ |

ಗುರುವು ನರನೆಂದವಗೆ | ಹರನ ಶಿಲೆಯೆಂದವಗೆ |
ಕರುಣಪ್ರಸಾದ ಎಂಜಲೆಂದವನಿಗೆ |
ನರಕ ತಪ್ಪುವುದೆ ಸರ್ವಜ್ಞ ||

ಗುರುವಿಂದ ಬಂದುಗಳು | ಗುರುವಿಂದ ದೈವಗಳು |
ಗುರುವಿಂದಲಿಹುದು ಪುಣ್ಯವದು, ಜಗಕೆಲ್ಲ |
ಗುರುವಿಂದ ಮುಕ್ತಿ ಸರ್ವಜ್ಞ |

ಹಿರಿಯ ನಾನೆನಬೇಡ | ಗುರುವ ನಿಂದಿಸಬೇಡ |
ಬರೆವರ ಕೂಡ ಹಗೆ ಬೇಡ, ಬಂಗಾರ |
ದೆರವು ಬೇಡೆಂದ ಸರ್ವಜ್ಞ |

ಹಿರಿಯರಿಲ್ಲದ ಮನೆಯು | ಗುರುವು ಇಲ್ಲದ ಮಠವು |
ಅರಸುತನ ವಳಿದ ಅರಮನೆಯು ಹಣ ಹೋದ |
ಹರದನಂತಿಕ್ಕು ಸರ್ವಜ್ಞ |

ತಂದೆಗೂ ಗುರುವಿಗೂ | ಒಂದು ಅಂತರವುಂಟು |
ತಂದೆ ತೋರುವನು ಸದ್ಗುರುವ, ಗುರುರಾಯ |
ಬಂಧನವ ಕಳೆವ ಸರ್ವಜ್ಞ ||

ವಿದ್ಯೆ ಕಲಿಸದ ತಂದೆ | ಬುದ್ದಿ ಹೇಳದ ಗುರುವು
ಬಿದ್ದಿರಲು ಬಂದು ನೋಡದ ತಾಯಿಯು |
ಶುದ್ದ ವೈರಿಗಳು ಸರ್ವಜ್ಞ ||

ಜ್ಞಾನದಿಂದಲಿ ಇಹವು | ಜ್ಞಾನದಿಂದಲಿ ಪರವು |
ಜ್ಞಾನವಿಲ್ಲದಿರೆ ಸಕಲವೂ ತನಗಿದ್ದು |
ಹಾನಿ ಕಾಣಯ್ಯ ಸರ್ವಜ್ಞ |