ವಚನ ಸಾಹಿತ್ಯದ ಮೇರುಗಿರಿ ಶರಣೆ ‘ಅಕ್ಕಮಹಾದೇವಿ’

ವಚನ ಸಾಹಿತ್ಯದ ಮೇರುಗಿರಿ ಶರಣೆ ‘ಅಕ್ಕಮಹಾದೇವಿ’

೧೨ನೆಯ ಶತಮಾನದಲ್ಲಿ ವಚನ ಸಾಹಿತ್ಯದ ಮೇರುಗಿರಿ ಶರಣೆ ‘ಅಕ್ಕಮಹಾದೇವಿ’. ವಚನವ ಉಣಬಡಿಸಿದ ಮಹಾದೇವಿ  ಮಹಿಳಾ ಲೋಕದ ಅನರ್ಘ್ಯ ರತ್ನ. ‘ಚೆನ್ನಮಲ್ಲಿಕಾರ್ಜುನ ದೇವನನ್ನು’ ಒಂದೆಡೆ ದೇವನೇ ನನ್ನ ಗಂಡನೆಂದು ಹೇಳಿಕೊಂಡಿದ್ದಾಳೆ. ಅವನನ್ನೇ ಅಂಕಿತನಾಮವಿರಿಸಿ ತನ್ನ ವಚನಗಳನ್ನು ಬರೆದಿದ್ದಾಳೆ.

ಚೈತ್ರ ಮಾಸದ ದವನದ ಹುಣ್ಣಿಮೆಯಂದು ಲೋಕದ ಬೆಳಕನ್ನು ಕಂಡ ಅಕ್ಕ, ಮುಂದೊಂದು ದಿವಸ ಲೋಕವನ್ನೇ ಬೆಳಗಿದವಳಾದಳು. ಅಕ್ಕ ಸಹಜ ಸೌಂದರ್ಯದ ಖನಿಯಂತೆ. ಆಕೆಯ ರೂಪಕ್ಕೆ ಮನಸೋತ ಕೌಶಿಕರಾಜ ಜೈನಧರ್ಮವ ತೊರೆದು ವೀರ ಶೈವನಾಗಿ ವಿವಾಹ ಪ್ರಸ್ತಾಪ ಮಾಡಿದನಂತೆ. ಹೊರನೋಟದ ಭಯಭಕ್ತಿ ಧರ್ಮಾಚರಣೆಗಳು ಬೇಡ, ಆಂತರ್ಯದಲ್ಲಿ ಕಾಯಾ ವಾಚಾ ಮನಸಾ ಶ್ರದ್ಧೆಯಿರಬೇಕೆಂದಳಂತೆ. ಏನು ಬಂದರೂ ಎದುರಿಸಿ ನಡೆವ ಎದೆಗಾರಿಕೆಯಿರಲಿ.

*ಬೆಟ್ಟದ ಮೇಲೊಂದು ಮನೆಯ ಮಾಡಿ*

*ಮೃಗಗಳಿಗಂಜಿದಡೆಂತಯ್ಯಾ*?

*ಸಮುದ್ರದ ತಡಿಯಲೊಂದು ಮನೆಯ ಮಾಡಿ*

*ನೊರೆತೆರೆಗಳಿಗಂಜಿದಡೆಂತಯ್ಯಾ?*

*ಸಂತೆಯೊಳಗೊಂದು ಮನೆಯ ಮಾಡಿ*

*ಶಬ್ದಕ್ಕೆ ನಾಚಿದಡೆಂತಯ್ಯಾ*?

*ಚನ್ನ ಮಲ್ಲಿಕಾರ್ಜುನದೇವ ಕೇಳಯ್ಯಾ*

*ಲೋಕದೊಳಗೆ ಹುಟ್ಟಿದ ಬಳಿಕ*

*ಸ್ತುತಿ ನಿಂದೆಗಳು ಬಂದಡೆ*

*ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು*

ಅಕ್ಕಮಹಾದೇವಿಯ ಸಾಧನೆ, ದೃಢನಿರ್ಧಾರ, ಹೇಳಿಕೆಗಳು ಅಸಾಧಾರಣವಾದುದು ಮತ್ತು ಯಾವುದಕ್ಕೂ ಹೆದರಬಾರದು ಎಂಬುದಕ್ಕೆ ಈ ವಚನವೇ ಜೀವಂತ ಸಾಕ್ಷಿ.

ಬೆಟ್ಟದ ಮೇಲೆ ಕಾಡು ಗುಡ್ಡೆಯಲ್ಲಿ ಕ್ರೂರ ಮೃಗಗಳು ಇರಬಹುದು. ನಾವಲ್ಲಿ ಮನೆಯನ್ನು ಮಾಡಿ ಆ ಪ್ರಾಣಿಗಳಿಗೆ ಹೆದರಿದರೆ ಹೇಗೆ? ಮನೆ ಮಾಡುವ ಮೊದಲೇ ಆ ಬಗ್ಗೆ ಯೋಚಿಸಿ ನಿರ್ಧಾರಕ್ಕೆ ಬರಬೇಕು. ಹೇಗೆ ನಾವು ಸಾಗುವ ದಾರಿಯಲ್ಲಿ ಅಡೆ-ತಡೆಗಳು, ಕಲ್ಲು-ಮುಳ್ಳುಗಳು ಸಿಕ್ಕಿದಾಗ, ಅದನ್ನು ಸರಿಸಿ ಮುಂದೆ ಹೋಗುತ್ತೇವೆಯೋ ಹಾಗೆ ಹಿಂದಿರುಗಿ ನೋಡದೆ, ಮುಂದೆ ಸಾಗಬೇಕು ಎಂಬ ದೃಢತೆಯಿರಬೇಕು. ಸಮುದ್ರದ ದಡದ (ದಂಡೆ)ಲ್ಲಿ ಮನೆ ಕಟ್ಟಿ ಕುಳಿತು, ಭೋರ್ಗರೆವ ಅಲೆಗಳಿಗೆ ಹೆದರಿದರೆ ಹೇಗೆ? ಅದು ಮೊದಲೇ ಗೊತ್ತಿದೆಯಲ್ಲವೇ? ಇಲ್ಲಿ ಅಲೆಗಳನ್ನ ಬದುಕಿನ ಹಾದಿಯಲ್ಲಿ ಎದುರಾಗುವ ಕಷ್ಟಗಳಿಗೆ, ವಿಘ್ನಗಳಿಗೆ ಹೋಲಿಸಲಾಗಿದೆ. ಸದಾ ಗಲಭೆಯಿರುವ ಸಂತೆಯೊಳಗೆ ಮನೆಯ ಮಾಡಿ ಶಬ್ದಕ್ಕೆ ನಾಚುವುದಾಗಲಿ, ಹೆದರುವುದಾಗಲಿ ಮಾಡಿದರೆ ಹೇಗೆ? ಹೆದರಲೇ ಬಾರದು. ಕಷ್ಟ-ನಷ್ಟಗಳಿಗೆ ಅಂಜಿ ಮುಂದಿಟ್ಟ ಕಾಲಿನ ಹೆಜ್ಜೆಯನ್ನು ಹಿಂದಕ್ಕೆ ಇಡಲೇಬಾರದು.

ಈ ಪ್ರಪಂಚದಲ್ಲಿ ಜನಿಸಿ ಬಂದ ಮೇಲೆ ಒಳ್ಳೆಯದು- ಕೆಟ್ಟದು, ಬೇಕು-ಬೇಡದ್ದು, ಹೊಗಳಿಕೆ-ತೆಗಳಿಕೆ ಇವೆಲ್ಲ ಬಂದಾಗ ಸಿಟ್ಟಾಗದೆ, ಕೋಪಿಸಿಕೊಳ್ಳದೆ, ಬೇಸರಮಾಡದೆ ಸಮಾಧಾನಿಯಾಗಿರಬೇಕು. ತಾಳ್ಮೆಯಿಂದ ಎಲ್ಲವನ್ನೂ ಸಹಿಸಿಕೊಂಡಿರಬೇಕು. ಸಮಚಿತ್ತ ಮುಖ್ಯ. ಸೋಲಿಗಂಜದೆ, ಗೆಲುವಿಗೆ ಅಹಂಕಾರ ಪಡದೆ ಇರಬೇಕು. ಮನಸ್ಸು ಚಂಚಲವಾಗಿರಬಾರದು. ಎಲ್ಲವನ್ನೂ ಕೆಚ್ಚೆದೆಯಿಂದ ಎದುರಿಸಬೇಕು. ಸಾಮಾಜಿಕ ಜೀವನದಲ್ಲಿ ಮಾನಾಪಮಾನ ಇದ್ದದ್ದೇ. ಎಲ್ಲವನ್ನೂ ದಾಟಿ, ಬೆನ್ನು ಹಾಕಿ ಹೋಗುವುದು ತರವಲ್ಲ. ತನ್ನ ದೇವ ಚೆನ್ನಮಲ್ಲಿಕಾರ್ಜುನನೇ ನೀನೇ ಆಲಿಸು ಎಂದು ಸಮಾಜದ ಓರೆಕೋರೆಗಳ ಬಗ್ಗೆ, ನಮ್ಮ ನಡೆಯ ಕುರಿತು ಸಂದೇಶ ಸಾರಿದ್ದಾಳೆ. ಇಂದಿಗೂ ಈ ಮಹಾತಾಯಿಯ ವಚನಗಳು ಪ್ರಸ್ತುತ.

ಮತ್ತೊಂದು ವಚನದಲ್ಲಿ ನಮ್ಮ ಶರೀರದ ಬಗ್ಗೆ ಹೇಳುತ್ತಾ,ಆಸೆಗಳಿಗೆ ಕಡಿವಾಣ ಹಾಕಿರೆಂದಳು.

*ಅಮೇಧ್ಯದ ಹಡಿಕೆ ಮೂತ್ರದ ಕುಡಿಕೆ*

*ಎಲುವಿನ ತಡಿಕೆ,ಕೀವಿನ ಹಡಿಕೆ;*

*ಸುಡಲೀದೇಹವ ಒಡಲು ವಿಡಿದು ಕೆಡದಿರು*

*ಚನ್ನ ಮಲ್ಲಿಕಾರ್ಜುನನರಿ ಮರುಳೆ*

ಗೆಳತಿಯರೊಂದಿಗೆ ವಿಹಾರಕ್ಕೆ ಹೋಗಿದ್ದ ಮಹಾದೇವಿಯಕ್ಕನ ಸೌಂದರ್ಯಕ್ಕೆ ಮಾರು ಹೋದ ಕೌಶಿಕರಾಜನು, ಸಂದೇಶ ಕಳುಹಿಸಿದಾಗ ವೀರಶೈವ ಧರ್ಮ ಸ್ವೀಕರಿಸಿದರೆ ಮಾತ್ರ ವಿಷಯ ಹೇಳಬಹುದೆಂದಳು. ಜೈನಧರ್ಮದವನಾದ ಅರಸ ಅವಳ ರೂಪಲಾವಣ್ಯಕ್ಕೆ ಸೋತು, ವೀರಶೈವ ಧರ್ಮ ಸ್ವೀಕರಿಸಿ ಬಂದು ವಸ್ತ್ರಾಭರಣ ನೀಡಿ ಅಲಂಕರಿಸಲು ಹೇಳುವನು. ಅಕ್ಕಮಹಾದೇವಿ ಆಭರಣಗಳನ್ನು ಕಳಚಿಟ್ಟು, 'ಇದೋ ನೋಡು ಈ ವಸ್ತ್ರಾಭರಣಗಳ ಒಳಗೆ ಮುಚ್ಚಿದ ಶರೀರ ನೋಡಿ ಮೋಹಿತನಾಗಿರುವೆ.ಒಳಗೆ ತೊಗಲು ಮಾಂಸಗಳಿರುವುದು. ಅಂದ -ಚಂದವಂತೂ ಇಲ್ಲವೇ ಇಲ್ಲ. ಮಲವೆಂಬ ಗಬ್ಬುವಾಸನೆ, ಮೂತ್ರ ತುಂಬಿದ ಕುಡಿಕೆ(ಮಣ್ಣಿನಪಾತ್ರೆ) ಈ ದೇಹ. ಎಲುಬಿನ ಹಂದರ.(ಬಿದಿರಿನಿಂದ ತಯಾರಿಸಿದ ಪರದೆಯಂಥ ತಟ್ಟಿ, ಹಾಸು) ಎಲ್ಲಿ ನೋಡಿದರೂ ಗಾಯದ ಹುಣ್ಣಿನಿಂದ ಸೋರುವ ಕೀವಿನ ಕೆಟ್ಟ ವಾಸನೆ ಬರಿಯ ಹೇಸಿಗೆ ಈ ಶರೀರ. ಇಂತಹ ದೇಹ ಸುಡಲಿ. ಈ ಶರೀರವನ್ನು ನಂಬಿ ಕೆಡಬೇಡ. ಮೊದಲು ಚೆನ್ನಮಲ್ಲಿಕಾರ್ಜುನ ದೇವನ ಬಗ್ಗೆ ತಿಳಿ, ಎಲೆ ಮರುಳೇ ಹಾಳಾಗದಿರು ಶರೀರವ ಬಯಸಿ. ಕೌಶಿಕನ ಕಣ್ಣು ತೆರೆಸಿದ ಮನು ಕುಲದ ಪುಣ್ಯವಂತೆ ಅಕ್ಕಮಹಾದೇವಿ. ತನ್ನ ನೀಳ ಕೇಶರಾಶಿಗಳಿಂದ ದೇಹವನ್ನು ಮುಚ್ಚಿಕೊಂಡವಳು. ಸಮಾಜದ ಅಂಕುಡೊಂಕುಗಳ ಎತ್ತಿಹಿಡಿದು, ತಿದ್ದಿ ಕೊಳ್ಳಿರೆಂದು ವಚನಗಳ ಮೂಲಕ ಸಂದೇಶ ನೀಡಿದಳು.

ಶಿವ ಸರ್ವೋತ್ತಮನು, ಶಿವನನ್ನು ಭಜಿಸಿ, ಧ್ಯಾನಿಸಿ ಪುನೀತರಾಗಿ ಎಂದು ತನ್ನ ವಚನಗಳಲ್ಲಿ ಸಾರಿದಳು. ಬಸವೇಶ್ವರ, ಅಲ್ಲಮಪ್ರಭು, ಸಿದ್ಧರಾಮ, ಮಾಚಿತಂದೆ, ಹಪ್ಪಣ್ಣ ಈ ಎಲ್ಲ ಶಿವಶರಣರೊಂದಿಗೆ ಅನುಭವಮಂಟಪದಲ್ಲಿದ್ದು ಜನರಿಗೆ ಮಾರ್ಗದರ್ಶನ ಮಾಡಿದ ಮಹಾಚೇತನ. ಪ್ರತಿಯೊಬ್ಬರೂ ಮೊದಲು ಮಾನವರಾಗಿ ಎಂದು ಕರೆಯಿತ್ತಳೆಂದು ಆಕೆಯ ಜೀವನ ಚರಿತ್ರೆಯಲ್ಲಿ ಓದಬಹುದು. ಧಾರ್ಮಿಕ, ಸಾಹಿತ್ಯ, ಕ್ಷೇತ್ರದಲ್ಲಿ ಶಿವಶರಣೆಯರ ಕ್ರಾಂತಿಯೇ ಆಯಿತು. ವಿಶ್ವಮಾದರಿಯಾಗಿ ವಿಜೃಂಭಿಸಿತು. ಮಹಿಳಾ ಲೋಕದ, ಶಿವಶರಣೆಯರ, ಆಧ್ಯಾತ್ಮ ನೆಲೆಗಟ್ಟಿನ ಅನರ್ಘ್ಯ ರತ್ನ ಶಿವಶರಣೆ ಅಕ್ಕಮಹಾದೇವಿ. ಪ್ರಾಪಂಚಿಕ ಸುಖ ಕ್ಷಣಿಕ, ಆಯುಷ್ಯ ಕಳೆಯದಿರಿ, ಹುಟ್ಟಿ ಬಂದ ಬಳಿಕ ಏನನ್ನಾದರೂ ಸಾಧಿಸಿರೆಂದು ಜನಮಾನಸಕ್ಕೆ ಕರೆಯಿತ್ತ ವೈರಾಗ್ಯನಿಧಿಯಾಕೆ. ಬಸವಕಲ್ಯಾಣದಲ್ಲಿದ್ದು ಶರಣರಿಗೆ ವಚನಗಳನ್ನು ಉಣಬಡಿಸುತ್ತಿದ್ದಳಂತೆ. ಅನುಭವ ಮಂಟಪದ ಮುಕ್ತ ಚರ್ಚೆಗಳಲ್ಲಿ ಭಾಗಿಯಾಗುತ್ತಿದ್ದಳಂತೆ. ಆಕೆಯ ಆತ್ಮವಿಶ್ವಾಸ, ಸರಳತೆ, ನಂಬಿಕೆಯೇ, ಆಕೆಯ ಹೆಸರನ್ನು ಉತ್ತುಂಗಕ್ಕೇರಿಸಿತೆಂದರೆ ತಪ್ಪಾಗಲಾರದು. ಆಕೆ ಕೊನೆಗಾಲದಲ್ಲಿ ಇದ್ದ ಗುಹೆ ಕೃಷ್ಣಾನದಿ ದಂಡೆಯಲ್ಲಿ ಇಂದಿಗೂ ಇದೆ. ಅಂದಾಜಿನಂತೆ ೪೩೪ ವಚನಗಳನ್ನು ನೀಡಿದ ಜ್ಞಾನನಿಧಿ ಶಿವಶರಣೆ ಅಕ್ಕಮಹಾದೇವಿ.

(ಆಧಾರ: ವಚನ ಸಾರ)

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ