ವಟೇಶ್ವರ ಸಿದ್ಧಾಂತ

ವಟೇಶ್ವರ ಸಿದ್ಧಾಂತ

ಬರಹ

ಸುಪ್ರೀತ್ ಅವರು ಚರ್ಚೆಯೊಂದರಲ್ಲಿ ವಟೇಶ್ವರನ  ಹೆಸರು ಪ್ರಸ್ತಾಪಿಸಿದ್ದಾಗ ನಾನು ಆ ಹೆಸರನ್ನು  ಈ ಮುಂಚೆ ಕೇಳಿಯೇ ಇರಲಿಲ್ಲ.

(ಅಸಲಿಗೆ ನನಗೆ ಗಣಿತ ಎಂದರೇ ಅಲರ್ಜಿ ಮತ್ತು ಕಷ್ಟದ ವಿಷಯ.)  ವಟೇಶ್ವರ ಯಾರು ಎಂದೂ ಮತ್ತು ಅವರು ಉಲ್ಲೇಖಿಸಿದ ವಟೇಶ್ವರ ಸಿದ್ಧಾಂತದ ಬಗ್ಗೆ ಎಲ್ಲಿ ಹುಡುಕಿದರೂ ಯಾರಲ್ಲಿ ಕೇಳಿದರೂ ಯಾವ ವಿವರವೂ ದೊರೆಯಲಿಲ್ಲ.(ಅಕಸ್ಮಾತ್ ಸಿಕ್ಕಿದ್ದರೂ ಅದನ್ನು ಅರ್ಥಮಾಡಿಕೊಳ್ಳುವಷ್ಟು ಸಂಸ್ಕೃತ ಪ್ರೌಢಿಮೆ ನನ್ನಲ್ಲಿಲ್ಲ :))  ಇಲ್ಲಿ ನನ್ನ ಒಂದು ಅಭಿಪ್ರಾಯ ಹೇಳಿಬಿಡುತ್ತೇನೆ. ಭಾರತೀಯ ಪುರಾತನ ಸಂಸ್ಕೃತ ಗ್ರಂಥಗಳಲ್ಲಿ ಗಣಿತ ಖಗೋಳ  ಭಾಷಾ ಶಾಸ್ತ್ರ ಮತ್ತು ಧ್ವನಿವಿಜ್ಞಾನ(ಪ್ರಾತಿಶಾಖ್ಯಗಳಲ್ಲಿ) ಮತ್ತು ಬಹಳಷ್ಟು ಅಧ್ಯಯನ ಯೋಗ್ಯವಿಷಯಗಳಿವೆ, ಇವುಗಳ ತಲಸ್ಪರ್ಶಿ ಅಧ್ಯಯನ ಮಾಡಿರುವವರು ಇಡೀ ಭಾರತದಲ್ಲಿ ಬೆರಳೆಣಿಕೆಯಷ್ಟು ಜನರಿರಬಹುದು, ಈ ವಿಷಯಗಳ ಅಧ್ಯಯನಕ್ಕೆ ಮತ್ತು ಸ್ಥಳೀಯ ಭಾಷೆಗಳಲ್ಲಿ ಭಾಷಾಂತರ ಮಾಡಲು ಸರಕಾರದ ಸಹಾಯ ಏನೇನೂ ಸಾಲದು. ಇಂತಹ ವಿಷಯದ ಅಧ್ಯಯನಕ್ಕಾಗಿ  ವಿಶ್ವವಿದ್ಯಾಲಯವೊಂದು ಆವಶ್ಯಕವಲ್ಲವೇ. ಎಡಪಂಥೀಯರಿಂದ ವಿರೋಧವೇಕೆ ಎನ್ನುವುದು ಅರ್ಥವಾಗದ ಸಂಗತಿ. ಸರಕಾರ ಕೂಡಲೇ ಕ್ರಮಕೈಗೊಳ್ಳಲಿ ಎನ್ನುವುದು ನನ್ನ ಆಶಯ. ಹೆಚ್ಚಿನ ಸಂಸ್ಕೃತ ವಿದ್ಯಾರ್ಥಿಗಳು ಕೈಬರಹದ ಅಥವಾ xerox  ಪ್ರತಿಯನ್ನಿಟ್ಟುಕೊಂಡು ಅಧ್ಯಯನ ಮಾಡುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ವಿಪರ್ಯಾಸವೆಂದರೆ ಫಲ ಜ್ಯೋತಿಷದ ಕುರಿತಾಗಿ ಸಾವಿರ- ಲಕ್ಷಗ್ರಂಥಗಳು ಲಭ್ಯವಿದ್ದರೆ ಇಂತಹ ಗ್ರಂಥಗಳು ಒಂದೂ ಸಿಗುವುದಿಲ್ಲ.

ಇನ್ನು ವಿಷಯಕ್ಕೆ ಬರುತ್ತೇನೆ.  ಸ್ವಲ್ಪ ಹುಡುಕಾಟದ ನಂತರ ಭಾರತೀಯ ಗಣಿತ ಶಾಸ್ತ್ರಜ್ಞರನ್ನು ಸ್ಥೂಲವಾಗಿ ಪರಿಚಯಿಸುವ ಪುಸ್ತಕವೊಂದು ಸಿಕ್ಕಿತು. ಅದರಲ್ಲಿರುವ (ಸ್ವಲ್ಪ) ವಿಷಯವನ್ನು ಬರೆಯುವೆ.

ಕ್ರಿಸ್ತಶಕ ೮೮೦ರಲ್ಲಿ ವಟೇಶ್ವರನ ಜನ್ಮವಾಯಿತು.ತನ್ನ ವಟೇಶ್ವರ ಸಿದ್ಧಾಂತದಲ್ಲಿ ಇದನ್ನು ಅವನೇ ಹೇಳಿಕೊಂಡಿದ್ದಾನೆ. ತಂದೆಯ ಹೆಸರು ಮಹದತ್ತ.  ಊರು ಆನಂದಪುರಿ,ಇಂದಿನ ಉತ್ತರ ಗುಜರಾತ್ ನ ಸಿಧ್ ಪುರದ ಆಗ್ನೇಯಕ್ಕಿರುವ ವಡ್ನಗರ ಎಂದು ಗುರುತಿಸಲಾಗಿದೆ.

ವಟೇಶ್ವರನು ತನ್ನ ೧೯ನೆಯ( ಕ್ರಿಶ-೮೯೯) ವಯಸ್ಸಿನಲ್ಲೇ ಕರಣಸಾರ ವೆಂಬ ಗ್ರಂಥವನ್ನೂ  ೨೪ನೆಯ ವಯಸ್ಸಿನಲ್ಲಿ( ೯೦೪)

ವಟೇಶ್ವರ ಸಿದ್ಧಾಂತವನ್ನೂ  ಮತ್ತು ಗೋಲ ವೆಂಬಗ್ರಂಥವನ್ನೂ ರಚಿಸಿರುವನು.  ಕರಣಸಾರ ಲಭ್ಯವಿಲ್ಲವೆಂದೂ ಗೋಲದ ೫ ಅಧ್ಯಾಯಗಳೂ ಮತ್ತು ಸಿದ್ಧಾಂತವು ಲಭ್ಯವಿದೆ ಎಂದು  ಈ ಪುಸ್ತಕದಲ್ಲಿ  ಹೇಳಲಾಗಿದೆ. ವಟೇಶ್ವರ ಸಿದ್ಧಾಂತವು ೧೩೨೬ ಶ್ಲೋಕಗಳನ್ನೊಳಗೊಂಡ ಬೃಹತ್ ಕೃತಿಯಾಗಿದೆ.   

ವಟೇಶ್ವರ ಸಿದ್ಧಾಂತದಲ್ಲಿ ಪೂರ್ವಕೃತಿಗಳಲ್ಲಿಯ ಮಹತ್ತ್ವದ ಸಂಗತಿಗಳ ಸಾರವಿದ್ದು ಕ್ರಿಶ ಆರರಿಂದ ಒಂಬತ್ತನೆಯ ಶತಮಾನದವರೆಗಿನ ಭಾರತೀಯ ಖಗೋಲ ಶಾಸ್ತ್ರಜ್ಞರು ಗೈದ ಸಾಧನೆಗಳನ್ನು  ಬಿಂಬಿಸಲಾಗಿದೆ. ಹಾಗೂ ಅದು ಹತ್ತನೆಯ ಶತಮಾನದ ಭಾರತೀಯರ ಖಗೋಲ ಶಾಸ್ತ್ರದ ತಿಳುವಳಿಕೆಯ ಮಟ್ಟವನ್ನು ಸೂಚಿಸುವ ಅಧಿಕೃತ ದಾಖಲೆಯಾಗಿದೆ.ಬೇರೆ ಗ್ರಂಥಗಳಲ್ಲಿ ಕಾಣದ ಅನೇಕ ವಿಷಯಗಳೂ  ಅನೇಕ ನಿಯಮಗಳೂ ಇದರಲ್ಲಿದ್ದು ವಟೇಶ್ವರನ ಸತ್ತ್ವವೂ ಕಾಣುತ್ತದೆ. ಅಧ್ಯಾಯದ ಕೊನೆಗಳಲ್ಲಿ ಅಭ್ಯಾಸಕ್ಕಾಗಿ ಲೆಕ್ಕಗಳನ್ನೂ ಕೊಟ್ಟಿದ್ದಾನೆ.

ಅಯನ ಚಲನೆಯನ್ನು ಕಂಡುಕೊಳ್ಳುವುದಕ್ಕಾಗಿ ಸರಿಯಾದ ವಿಧಾನವನ್ನು ನಿರೂಪಿಸಿ ಗ್ರಹಗಳ ಸ್ಥಿತಿಗತಿಗಳ ಲೆಕ್ಕಾಚಾರಕ್ಕಾಗಿ ಅದನ್ನು ಬಳಸಿದ ಪ್ರಥಮ ಖಗೋಲಶಾಸ್ತ್ರಜ್ಞನಾಗಿದ್ದಾನೆ.

ಅನೇಕ ವಿಶೇಷಸಂಗತಿಗಳನ್ನೊಳಗೊಂಡ  ವಟೇಶ್ವರ ಸಿದ್ಧಾಂತವು ಖಗೋಲಶಾಸ್ತ್ರದ ದೃಷ್ಟಿಯಿಂದ ಮಹತ್ತ್ವದ ಕೃತಿಯಾಗಿರುವಂತೆ ಗಣಿತೀಯ ವಿಷಯಗಳನ್ನೂ ಒಳಗೊಂಡಿದ್ದು  ಆ ರೀತಿಯಿಂದಲೂ ಮಹತ್ತ್ವವುಳ್ಳದ್ದಾಗಿದೆ.