ವಡಾಪಾವ್ ಕಟಿಂಗ್ ಚಾಯ್

ವಡಾಪಾವ್ ಕಟಿಂಗ್ ಚಾಯ್

ಪುಸ್ತಕದ ಲೇಖಕ/ಕವಿಯ ಹೆಸರು
ಕುಮಾರಸ್ವಾಮಿ ತೆಕ್ಕುಂಜ
ಪ್ರಕಾಶಕರು
ಜಾಗೃತಿ ಪ್ರಿಂಟರ್ಸ್, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೬೦.೦೦, ಮುದ್ರಣ ೨೦೨೨

ಮುಂಬಯಿ ಬದುಕಿನ ಒಳಜಗತ್ತನ್ನು ಮಾರ್ಮಿಕವಾಗಿ ಚಿತ್ರಿಸುವ "ವಡಪಾವ್ ಕಟಿಂಗ್ ಚಾಯ್", "ಅನಾಥನಾಥ" ಹಾಗೂ "ಮುಂಬಯಿ ನಮ್ದೇ" ಕಥೆಗಳಿಗೆ ಮುಖಾಮುಖಿಯಾಗುವ ಊರಿನ "ಸೌದಾಮಿನಿ ಪ್ರಸಂಗ", "ಬದುಕು ಜಟಕಾ ಬಂಡಿ", "ಅವಲಂಬ", "ಭ್ರಾಂತ", "ಅಪರಾಧಿ" ಮೊದಲಾದ ಕಥೆಗಳು ಒಟ್ಟೂ ಬದುಕಿನ ಕಠೋರ ಸತ್ಯಗಳನ್ನು ಅನಾವರಣಗೊಳಿಸುವ ರೀತಿ ಅನನ್ಯವಾಗಿದೆ ಎನ್ನುತ್ತಾರೆ ಕವಿ ಸುಬ್ರಾಯ ಚೊಕ್ಕಾಡಿ. ಲೇಖಕ ಕುಮಾರಸ್ವಾಮಿ ತೆಕ್ಕುಂಜಯವರ ‘ವಡಾಪಾವ್ ಕಟಿಂಗ್ ಚಾಯ್’ ಕೃತಿಯಲ್ಲಿ ಅವರು ಬರೆದ ಬೆನ್ನುಡಿ ನಿಮ್ಮ ಓದಿಗಾಗಿ..

“ಕಾದಂಬರಿಕಾರರೆಂದೇ ಪರಿಚಿತರಾಗಿರುವ ಕುಮಾರಸ್ವಾಮಿ ತೆಕ್ಕುಂಜ ಅವರ ಮೊದಲ ಕಥಾ ಸಂಕಲನವಿದು. ಉದ್ಯೋಗ ನಿಮಿತ್ತ ದೀರ್ಘಕಾಲ ಮುಂಬಯಿಯೆನ್ನುವ ಜನಾರಣ್ಯದಲ್ಲಿದ್ದವರು. ಜತೆಗೇ ತನ್ನೂರಿನ ಬಾಲ್ಯಕಾಲದ ಬದುಕಿನ ನೆನೆಪುಗಳನ್ನು ತನ್ನೊಳಗೆ ಜತನವಾಗಿಟ್ಟುಕೊಂಡಿರುವ ಕುಮಾರಸ್ವಾಮಿಯವರು ಆ ಎರಡೂ ಜಗತ್ತುಗಳ - ಮುಖ್ಯವಾಗಿ ಅಲ್ಲಿನ ಕೆಳಮಧ್ಯಮ ಹಾಗೂ ಕೆಳವರ್ಗದ ಜನರ ಬದುಕಿನ ಒಳಸುಳಿಗಳನ್ನು, ತಲ್ಲಣಗಳನ್ನು, ಸಣ್ಣಪುಟ್ಟ ಖುಷಿಗಳನ್ನು ಈ ಕಥೆಗಳಲ್ಲಿ ದಾಖಲಿಸಿದ್ದಾರೆ.

ಈ ಕಥೆಗಳಲ್ಲಿ ಕಾಣಿಸಿಕೊಳ್ಳುವ ವಡಪಾವ್ ಮಾರುವವ, ಚಪ್ಪಾಳೆ ತಟ್ಟಿ ಹಣಕೀಳುವ ತೃತೀಯ ಲಿಂಗಿಗಳು, ಬಳೆಗಾರ್ತಿ ಸೌದಾಮಿನಿ, ರಿಕ್ಷಾ ಡ್ರೈವರ್ ಪ್ರಕಾಶ, ಕುಡುಕ ಗುಂಡಣ್ಣ, ಬೆಳ್ಳಿ, ಮೊಯ್ದು, ಸೀತಾಲಕ್ಷ್ಮಿ, ಗಣೇಶಭವನದ ಗಣೇಶಣ್ಣ, ಹಸ್ಮುಖ್ ಭಾಯ್, ಮೊದಲಾದ ಪಾತ್ರಗಳ ಚಿತ್ರಣಗಳು ಎಷ್ಟು ಜೀವಂತವಾಗಿವೆಯೆಂದರೆ ಅವು ಹಠಾತ್ ಜೀವ ತಳೆದು ಅನೂಹ್ಯ ತಿರುವುಗಳಲ್ಲಿ ನಮ್ಮೆದುರು ಪ್ರತ್ಯಕ್ಷವಾಗಿ ನಮಗೆ ಡಿಕ್ಕಿ ಹೊಡೆಯಬಹುದೇನೋ ಅಂತ ಅನಿಸುತ್ತದೆ. ಈ ಕಥೆಗಳ ಮೂಲಕ ಕನ್ನಡ ಕಥಾಲೋಕದೊಳಗೆ ಕುಮಾರಸ್ವಾಮಿಯವರು ಮಹತ್ವದ ಹೆಜ್ಜೆಯನ್ನು ಇರಿಸಿದ್ದಾರೆ.”

ಕಥೆಗಾರ ಕುಮಾರ ಸ್ವಾಮಿ ಅವರು ‘ಸಣ್ಣಕತೆಯ ಮೊದಲು ನನ್ನ ಕತೆ’ ಕೇಳಿ ಎಂದು ಹೀಗೆ ಬರೆದಿದ್ದಾರೆ. “ಇದು ನನ್ನ ಮೊದಲ ಕಥಾ ಸಂಕಲನ. ಕಳೆದ ಮೂರು ವರ್ಷಗಳಲ್ಲಿ ಬರೆದ ಹನ್ನೆರಡು ಕತೆಗಳು ಇದರಲ್ಲಿವೆ. ಕಾದಂಬರಿಗಳನ್ನೇ ಓದುತ್ತಿದ್ದ ನನಗೆ ಯಶವಂತ ಚಿತ್ತಾಲರ ಕತೆಗಳನ್ನು ಓದಿದ ಮೇಲೆ ಸಣ್ಣಕತೆಗಳ ಬಗ್ಗೆ ಆಸಕ್ತಿ, ಕುತೂಹಲ ಮೂಡಿತು. ಚಿತ್ತಾಲರನ್ನು ಓದಿದ ನಂತರ ವೈದೇಹಿ, ರಾಘವೇಂದ್ರ ಖಾಸನೀಸ, ತೇಜಸ್ವಿ, ಜಯಂತ ಕಾಯ್ಕಿಣಿ ಮುಂತಾದವರ ಓದು ನನ್ನಲ್ಲಿ ಸಣ್ಣಕತೆಗಳ ಬಗ್ಗೆ ಆಕರ್ಷಣೆ ಹೆಚ್ಚಾಗಲು ಕಾರಣವಾಯಿತು. ಎಮ್.ಎಸ್.ಕೆ. ಪ್ರಭು ಅವರ ಕತೆಗಳು ವಿಭಿನ್ನ ಅನುಭವವನ್ನು ಕೊಟ್ಟರೆ ವಿವೇಕ ಶಾನುಭಾಗ, ಅಬ್ದುಲ್ ರಶೀದರ ಕತೆಗಳು ಹೊಸತೇ ಅನುಭವವನ್ನು ಕೊಟ್ಟಿತು.

ವೃತ್ತಿ ಜೀವನದ ಬಹುಪಾಲು ವರ್ಷಗಳನ್ನು ನಾನು ಮುಂಬಯಿಯಲ್ಲಿ ಕಳೆದೆ. ಅಲ್ಲಿಯ ಜನ, ಅಲ್ಲಿಯ ಜೀವನ ಎಲ್ಲವೂ ಅಪರಿಚಿತ ಆದರೂ ಪರಿಚಿತ. ಮನೆಯ ಸುತ್ತ ಏನು ನಡೆಯುತ್ತಿದೆ ಎಂದು ತಿಳಿಯದೆ ಹೋಗುವುದಿದೆ. ಜೀವನ ಯಾಂತ್ರಿಕ ಎಂದು ಕಾಣುವ ವೇಳೆ ನಿತ್ಯ ಸಂಚರಿಸುವ ಲೋಕಲ್ಲಿನಲ್ಲಿ ಲವಲವಿಕೆ ಹುಟ್ಟಿಕೊಳ್ಳುತ್ತದೆ. ಲೋಕಲ್ಲಿನಲ್ಲಿ ಕಾಣುವ ಯಾವನೋ ಒಬ್ಬ ಅವನ ವೈಯಕ್ತಿಕ ವಿವರ ಅಸ್ಪಷ್ಟವಾದರೂ ನಮ್ಮ ಹತ್ತಿರದವನಾಗಿ ಬಿಡುತ್ತಾನೆ. ಒಬ್ಬೊಬ್ಬ ಯಾವುದೋ ಒಂದೊಂದು ಮೂಲೆಯಿಂದ ಬಂದು ಲೋಕಲ್ಲಿನಲ್ಲಿ ಸೇರಿ ಜೀವಂತಿಕೆಯನ್ನು ಕಂಡುಕೊಳ್ಳುವ ಪರಿ ಮುಂಬಯಿಯಲ್ಲೇ ಕಾಣಸಿಗುವುದು. ಲೋಕಲ್ಲಿನ ಯಾವುದೋ ಕಂಪಾರ್ಟ್ ಮೆಂಟಿನಲ್ಲಿ ನಡೆಯುವ ಭಜನೆ, ಇನ್ಯಾವುದೋ ಕಂಪಾರ್ಟ್ ಮೆಂಟಿನ ಶೇರು ವಹಿವಾಟಿನ ಚರ್ಚೆ, ಫಸ್ಟ್ ಕ್ಲಾಸ್ ಕಂಪಾರ್ಟ್ ಮೆಂಟಿನ ಗಂಭೀರ ಹರಟೆ ಹಾಸ್ಯಗಳಲ್ಲಿ ಯಾಂತ್ರಿಕತೆಯೂ ಚಿಗುರಿ ಸಜೀವವಾಗುತ್ತದೆ. ಅಲ್ಲಿಯ ಅನುಭವಗಳು ನನಗೆ ಕತೆಯಾಗಿ ಕಾಡುವುದುಂಟು. ಜೊತೆಗೆ ನನ್ನ ಬಾಲ್ಯದ ದಿನಗಳು ಇನ್ನೂ ನೆನಪಿನಲ್ಲಿ ಉಳಿದು ಕಾಡುತ್ತಲೇ ಇರುತ್ತವೆ. ಇವೆಲ್ಲವೂ ನನಗೆ ಕತೆ ಬರೆಯಲು ಪೂರಕವಾಗಿ ಒದಗಿ ನಾನೂ ಕತೆ ಬರೆಯಲು ತೊಡಗಿದೆ.

ಆರಂಭದಲ್ಲಿ ಬರೆದ ಕತೆಗಳು ಯಾವುವೂ ಹಾಗೆಯೇ ಉಳಿದಿಲ್ಲ. ಹಲವು ಪರಿಷ್ಕರಣೆಗಳನ್ನು ಕಂಡು ಈಗಿನ ರೂಪ ಪಡೆದಿವೆ. ಅದಕ್ಕೆ ಕಾರಣ ನಮ್ಮೂರಿನ ಹಿರಿಯ ಕವಿ, ವಿಮರ್ಶಶ ಸುಬ್ರಾಯ ಚೊಕ್ಕಾಡಿಯವರು ಕೊಟ್ಟ ಸಲಹೆಗಳು. ನನ್ನ ಕತೆಗಳ ಮೊದಲ ಓದುಗರೂ ಅವರೇ. ಅವರ ವಿಮರ್ಶೆ ನನಗೆ ಸಣ್ಣಕತೆಗಳ ಸ್ವರೂಪದ ಬಗ್ಗೆ ವಿವರವಾಗಿ ತಿಳಿಯಲು ಸಹಕಾರಿಯಾಯಿತು. ನನ್ನ ಕತೆಗಳನ್ನು ಓದಿ ಅವರು ಸೂಚಿಸಿದ ಸಲಹೆಗಳನ್ನು ನಾನು ಸ್ವೀಕರಿಸಿದ್ದೇನೆ. ನಾನು ಕತೆಗಾರನಾಗಿ ರೂಪುಗೊಳ್ಳುವಲ್ಲಿ ಅವರ ಸಂಪರ್ಕವೂ ಕಾರಣ ಎಂಬುದು ನನಗೆ ಅರಿವಿದೆ. ಚೊಕ್ಕಾಡಿಯವರಿಗೆ ನಾನು ಋಣಿ.”