ವತ್ಸಲ
ಮುಂಜಾನೆಯ ಸೂರ್ಯ ಹಸಿರು ಬೆಟ್ಟಗಳ ಹಿಂದೆ ಅರೆ ಮೇಲೆ ಬಂದಿದ್ದ. ಅವನ ತಾಜಾ ಕಿರಣಗಳು "ಮಲಯಸಾಗರ" ನಗರದ ತುಂಬೆಲ್ಲ ಹಳದಿ ರಂಗು ಚೆಲ್ಲಿದ್ದವು. ಕಡಲು ಅಂಚಿನಲ್ಲಿ ಆಕಾಶವನ್ನು ಕಲೆತಂತೆ, ಮಲಯಸಾಗರದ ಹಸಿರು ಬೆಟ್ಟ ಗುಡ್ಡಗಳು ಕೊನೆಯೇ ಇಲ್ಲದ ಹಾಗೆ ಹರಡಿ, ಕೊನೆಯಲ್ಲಿ ಆಕಾಶವನ್ನು ಮುಟ್ಟಿದ್ದವು. ಈ ಸುಂದರ ದೃಶ್ಯ ವನದೇವಿ ಹಸಿರು ಸೀರೆಯನ್ನೇ ಧರಿಸಿದ್ದಾಳೆ ಎನ್ನುವಂತೆ ಕಾಣುತ್ತಿತ್ತು.ಹಕ್ಕಿಗಳೆಲ್ಲ ಜೊತೆಗೂಡಿ ಮುಂಜಾನೆಯ ಆಹಾರ ಬಯಸಿ ರವಿ ಉದಯಿಸಿದ್ದ ಕಡೆಗೆ ಹಾರಿ ಹೋರಟಿದ್ದವು, ನಗರದ ಮನೆಗಳ ಕಪ್ಪನೆಯ ಅಂಚುಗಳ ನಡುವೆ ಚಿಮಣಿಗಳಿಂದ ಏಳುತ್ತಿದ್ದ ಹೊಗೆಯು ಮೇಲೆ ಸಾಗಿ ಮೋಡಗಳನ್ನು ಸೇರುತ್ತಿತ್ತು. ನಗರದ ಬೀದಿಗಳು ಕಾಣದಂತೆ ಜನರೆಲ್ಲ ಬೀದಿಗಳ ತುಂಬಾ ಚಲಿಸತೊಡಗಿದ್ದರು. ಮೇಲ್ಮಹಡಿಯ ಕಿಟಕಿಯಿಂದ ನೋಡುತ್ತಿದ್ದ "ವತ್ಸಲ"ಳಿಗೆ ಅವರ ಕಪ್ಪು ತಲೆಗಳು ಗುಂಪು ಕಟ್ಟಿಕೊಂಡು ಸಾಲಾಗಿ ಹೋಗುವ ಇರುವೆಗಳಂತೆ ಕಾಣುತ್ತಿದ್ದವು. ನಗರದಿಂದಾಚೆ ಹರಿಯುತ್ತಿದ್ದ "ಕನ್ನಿಕೆ" ನದಿ ಸಣ್ಣ ಕಾಲುವೆಯಂತೆ ಗೋಚರಿಸುತ್ತಿತ್ತು. ಈ ಎಲ್ಲಾ ಸೌಂದರ್ಯವನ್ನು ವತ್ಸಲ ತನ್ನ ಕೋಣೆಯ ಕಿಟಕಿಯ ಬಳಿ ನೋಡತ್ತಾ ನಿಂತಿದ್ದಳು. ಇಡೀ "ಮಲಯಸಾಗರ" ನಗರದ ಸೌಂದರ್ಯವನ್ನೆಲ್ಲ ಅವಳ ಕೋಣೆಯ ಕಿಟಕಿಯಿಂದೆ ಬಂಧಿಸಿಟ್ಟಂತೆ ಕಾಣುತ್ತಿತ್ತು. ತಂಪಾದ ಗಾಳಿ ಒಮ್ಮೆಲೆ ಕಿಟಕಿಯಿಂದ ಒಳನುಗ್ಗಿದಾಗ ಅವಳ ಕೈಮೇಲಿನ ಕೂದಲು ಎದ್ದು ನಿಂತವು. ಸಡಿಲವಾಗಿ ಬಿಟ್ಟಿದ್ದ ಆಕೆಯ ತಲೆಯ ಕೂದಲು ಗಾಳಿಗೆ ಹಾರಿದವು. ಚಳಿಗೆ ಅವಳ ಮೈ ನಡುಗಲಾರಂಭಿಸಿತು. ತಕ್ಷಣ ರಪ್ಪನೆ ಕಿಟಕಿಯ ಬಾಗಿಲು ಮುಚ್ಚಿದಳು. ಕಿಟಕಿಯ ಮೂಲಕ ಸ್ವಲ್ಪ ಬೆಳಕು ಕಂಡಿದ್ದ ಕೊಠಡಿಯಲ್ಲಿ ಬೆಳಕು ಮಾಯವಾಗಿ ಕತ್ತಲೆ ಮತ್ತೆ ಆವರಿಸಿತು. ಅವಳ ಕಣ್ಣುಗಳಿಗೆ ಏನೂ ಕಾಣದಾಯಿತು.ಗೋಡೆಯ ಪಕ್ಕದಲ್ಲೇ ನಿಂತಿದ್ದವಳು ಬಲಗೈಯಲ್ಲಿ ಗೋಡೆ ಹಿಡಿದು ಎರಡು ಹೆಜ್ಜೆ ಹಿಂದೆ ಇಟ್ಟಳು. ಅವಳ ಕಾಲುಗಳು ಹಿಂದೆ ಇದ್ದ ಮಂಚ ಮುಟ್ಟಿದ್ದವು. ಮಂಚದ ಮೇಲೆ ಕೂತಳು. ಕಾಲುಗಳನ್ನು ಮೇಲೆತ್ತಿ ಹಿಂದೆ ಜರುಗಿದಳು ಅವಳ ಬೆನ್ನು ಗೋಡಯ ಚುಂಬಿಸಿತು ಅದಕ್ಕೆ ಒರಗಿ ಕಾಲು ಚಾಚಿ ಕೂತಳು. ಮಂಚದ ಮೇಲಿನ ಹಾಸಿಗೆ ಎಷ್ಟು ಮೆತ್ತನೆ ಇತ್ತೆಂದರೆ ತಾನು ಕುಳಿತೇ ಇಲ್ಲ ಎನ್ನುವಂತೆ ಅನುಭವವಾಗುತ್ತಿತ್ತು. ಸುತ್ತ ಮುತ್ತ ನೋಡಿದಳು. ಕತ್ತಲಲ್ಲಿ ಕೋಣೆಯಲ್ಲಿದ್ದ ಯಾವ ವಸ್ತುಗಳು ಕಾಣಲಾರದಾಗಿದ್ದವು. ಅವಳ ಬಲಗಡೆಗೆ ಹೊರಗಿನಿಂದ ಯಾರೋ ಇವಳ ಕೋಣೆಯೆಡೆಗೆ ಬರುವ ಹೆಜ್ಜೆ ಸದ್ದು ಕೇಳಿಬಂತು. ಆ ಶಬ್ದದ ಕಡೆ ತಲೆ ತಿರುಗಿಸದಳು. ಅಳುವ ಶಬ್ದ ಮಾಡುತ್ತ ಬಾಗಿಲು ನಿಧಾನವಾಗಿ ತೆರೆಯಿತು. ತೆರೆದ ಬಾಗಿಲ ಮೂಲಕ ಬೆಳಕು ಹಾದುಬಂದಾಗ ಕೋಣೆಯಲ್ಲಿ ಅಲ್ಪಸ್ವಲ್ಪ ಬೆಳಕು ಹರಡಿತು. ಬಾಗಿಲ ನಡುವೆ ಒಬ್ಬ ಹೆಂಗಸು ನಿಂತಿದ್ದಳು. ಆಕೆಯ ಮುಖ ಸರಿಯಾಗಿ ಕಾಣುತ್ತಿರಲಿಲ್ಲ, ಕೈಯಲ್ಲಿ ಹರಿವಾಣ ಹಿಡಿದಿದ್ದಳು, ಅದರ ಮೇಲಿದ್ದ ಸಣ್ಣ ಲೋಟದಿಂದ ಹೊಗೆಯಾಡುತ್ತಿತ್ತು.
ಆ ಹೆಂಗಸು ಬಾಗಿಲಲ್ಲೇ ನಿಂತು "ಯುವರಾಣಿ," ಎಂದು ಮೆಲ್ಲಗೆ ನುಡಿದಳು.
ಅವಳನ್ನೇ ನೋಡುತ್ತಿದ್ದ ವತ್ಸಲ ಒಳಗೆ ಬಾ ಎಂಬರ್ಥದಲ್ಲಿ ತಲೆಯಾಡಿಸಿದಳು.
ಅವಳು ನಿಧಾನವಾಗಿ ಮೆಲ್ಲಗೆ ಹೆಜ್ಜೆ ಇಡುತ್ತಾ ಒಳಬರುವಾಗ ನಿಶಬ್ಧವಾಗಿದ್ದ ಆ ಕೋಣೆಯಲ್ಲಿ ಆಕೆಯ ಹೆಜ್ಜೆಯ ಸಪ್ಪಳವೆ ಜೋರಾಗಿ ಕೇಳಿಸುತ್ತಿತ್ತು. ಅವಳು ವತ್ಸಳಿಗೆ ಸಮಯಕ್ಕೆ ಸರಿಯಾಗಿ ಊಟ, ಹಾಲು ತರುವ ದಾಸಿಯಾಗಿದ್ದಳು. ನಿಧಾನವಾಗಿ ಅವಳು ಕೂತಿದ್ದ ಮಂಚದ ಎಡಬದಿಗೆ ಬಂದಳು. ಅಲ್ಲಿ ಮೇಜು ಇರುವುದು ಆಕೆಗೆ ಮೊದಲೆ ತಿಳಿದಿತ್ತು. ಆ ಮೇಜಿನ ಮೇಲೆ ತಾನು ತಂದಿದ್ದ ಲೋಟವನ್ನು ಇಟ್ಟಳು. ವತ್ಸಲಳ ಕಣ್ಣುಗಳು ಲೋಟವನ್ನು ನೋಡಿದವು ಅದರ ತುಂಬಾ ಬಿಸಿಯಾದ ಹಾಲು ತುಂಬಿತ್ತು. ಅದರಿಂದ ಮೇಲೇಳುತ್ತಿದ್ದ ಹೊಗೆ ಇವಳ ಮುಖದ ಕಡೆ ಬಂತು, ಆದರೂ ಅವಳ ಕಣ್ಣುಗಳು ಅದನ್ನೇ ನೋಡುತ್ತಿದ್ದವು. ಆ ಹೆಂಗಸು ಅಲ್ಲಿಯೇ ನಿಂತಿದ್ದಳು. ವತ್ಸಲ ಅವಳನ್ನು ತಲೆಯೆತ್ತಿ ನೋಡಲೇಯಿಲ್ಲ.
ಹೆಂಗಸು ತಲೆಬಾಗಿ "ಯುವರಾಣಿ," ಎಂದು ಹೇಳಿ ನಿಧಾನವಾಗಿ ಹಿಂದೆ ಸರಿದು ಬಾಗಿಲ ಕಡೆ ತಿರುಗಿ ಹೊರಟಳು.
ಆಕೆಯ ಹೆಜ್ಜೆಯ ಸದ್ದು ಬಾಗಿಲಿನ ಸಮೀಪ ಹೋದಾಗ ವತ್ಸಲ ತಲೆಯೆತ್ತಿ ಬಾಗಿಲ ಕಡೆ ನೋಡಿದಳು. ದಾಸಿ ಮಾಯವಾಗಿದ್ದಳು. ಬಾಗಿಲು ತೆರದೇ ಇತ್ತು ಕೋಣೆಯಿಂದಾಚೆ ಕೇಳಿಸುತ್ತಿದ್ದ ಆಕೆಯ ನಡಿಗೆಯ ಶಬ್ಧ ದೂರವಾಗುತ್ತ ಹೋಗುವುದ ಗಮನಿಸಿದಳು. ಕೋಣೆಯಲ್ಲಿ ಬಾಗಿಲ ಮೂಲಕ ಬಂದ ಅರೆ ಬರೆ ಬೆಳಕಿಗೆ ಅವಳ ಎಡಬದಿಯಲ್ಲಿ ಮುಚ್ಚಿದ್ದ ಮುಖ್ಯ ಬಾಗಿಲು ಕಾಣಿಸಿತು. ತೆರೆದ ಬಾಗಿಲಿನಿಂದ ಬೆಳಕು ನೇರವಾಗಿ ಅದರ ಮೇಲೆ ಬಿದ್ದಿತ್ತು. ಹಾಗೆ ಅವಳ ಬಲಬದಿಯ ಕಿಟಕಿಯ ಪಕ್ಕದಲ್ಲಿದ್ದ ಇನ್ನೊಂದು ಮೇಜು ಕಾಣಿಸಿತು. ಅದರ ಮೇಲೆ ದ್ರಾಕ್ಷಿ,ಕಿತ್ತಳೆ ಹಣ್ಣುಗಳು ಮತ್ತು ಸಣ್ಣ ಎರಡು ನೀರು ಕುಡಿಯುವ ಗಿಣ್ಣಲುಗಳಿದ್ದವು, ಮೇಜಿನ ಸುತ್ತ ಮೂರು ಕೂರುವ ಆಸನಗಳಿದ್ದವು. ಅದರ ಪಕ್ಕದಲ್ಲೇ ದೀಪಸ್ತಂಬ ವಿತ್ತು, ಅದು ವತ್ಸಲಳನಷ್ಟೆ ಉದ್ಧವಿತ್ತು, ಅದರ ತುದಿಯಲ್ಲಿ ಅಗಲವಾದ ದೀಪವಿತ್ತು. ವತ್ಸಲ ರಾತ್ರಿ ಮಲಗುವಾಗ ಅದನ್ನು ನಂದಿಸಿದ್ದಳು. ಅದೇ ರೀತಿಯ ಮತ್ತೊಂದು ದೀಪ ಆಕೆಯ ಎಡಕ್ಕೆ ಹಾಲು ಇಟ್ಟಿದ್ದ ಮೇಜಿನ ಪಕ್ಕದಲ್ಲೇ ಇತ್ತು. ಸ್ವಲ್ಪ ಸಮಯ ಕಳೆದಂತೆ ಕೋಣೆಯಲ್ಲಿ ಬೆಳಕು ಹೆಚ್ಚುತ್ತಾ ಹೋಯಿತು. ದಾಸಿ ತೆರೆದು ಹೋಗಿದ್ದ ಬಾಗಿಲ ಬಳಿ, ಬಲಕ್ಕೆ ಸ್ವಲ್ಪ ಎತ್ತರದಲ್ಲಿ ಮೂರು ವರ್ಣಚಿತ್ರಗಳಿದ್ದವು. ಮೊದಲೆನೆಯದು "ಶ್ರೀ ಕೃಷ್ಣ"ನ "ದಶಾವತಾರ"ದ ರೂಪ ಅದು ಸರಿಯಾಗಿ ಕಾಣುತ್ತಿರಲಿಲ್ಲ. ಅದರ ನಂತರ ಕಾಡಿನಲ್ಲಿ "ಏಕಲವ್ಯ" "ದ್ರೋಣಾಚಾರ್ಯ" ಮುಂದೆ ಮಂಡಿಯೂರಿ ನಮಸ್ಕರಿಸುತ್ತಿದ್ದದ್ದು. ಅವನ ಪಕ್ಕದಲ್ಲಿ ನಾಯಿಯೊಂದು ಸತ್ತು ಬಿದ್ದಿತ್ತು. ಅದರ ಬಾಯಿತುಂಬ ಬಾಣಗಳು ನಾಟಿದ್ದವು. ಏಕಲವ್ಯನ "ಧನುರ್ಬಾಣ"ಗಳು ದ್ರೋಣಾಚಾರ್ಯರ ಪಾದದಲ್ಲಿ ಇದ್ದವು. ದ್ರೋಣಾಚಾರ್ಯರ ಪಕ್ಕದಲ್ಲಿ "ಅರ್ಜುನ" ಕೋಪದ ಮುಖಮಾಡಿಕೊಂಡು ನಿಂತಿದ್ದ. ಮೂರನೆಯದು ಶಾರದಾಮಾತೆಯು ವೀಣೆ ನುಡಿಸುತ್ತಿದ್ದ ಚಿತ್ರಕಲೆ ಯಾಗಿತ್ತು. ಅವಳು ಕೂತಿದ್ದ ಮಂಚದ ಎದುರಿಗೆ ದೊಡ್ಡದಾದ ಕಿಟಕಿಯೊಂದಿತ್ತು ಅದಕ್ಕೆ ಅಡ್ಡಲಾಗಿ ಕಟ್ಟಿದ್ದ ಕಪ್ಪು ಬಣ್ಣದ ಪರದೆ ಅದನ್ನು ಕಾಣದಂತೆ ಮಾಡಿತ್ತು. ಆ ಕಿಟಕಿಯ ಪಕ್ಕ ಬಲಗಡೆ ಇದ್ದುದ್ದೆ ಅವಳ ಅತ್ಯಂತ ನೆಚ್ಚಿನ ಚಿತ್ರ ಒಂದು ವರ್ಷದ ಹಿಂದೆ ಮಲಯಸಾಗರದಲ್ಲಿ ನೀಲಕಂಠೇಶ್ವರ ಉತ್ಸವ ನಡೆದಾಗ ಹಲವು ಸ್ಪರ್ಧೆಗಳು ನಡೆದಿದ್ದವು. ಅದರಲ್ಲಿ ಚಿತ್ರಕಲೆಯು ಒಂದಾಗಿತ್ತು ಆ ಸ್ಪರ್ಧೆಗೆ ಬಹುಮಾನ ವಿತರಿಸಲು ವತ್ಸಲ ಹೋಗಿದ್ದಳು. ಅದರಲ್ಲಿ "ಕುಮಾರಸೇನ" ಎಂಬ ಚಿತ್ರಕಾರನ ಚಿತ್ರಕ್ಕೆ ಈಕೆ ಮಾರುಹೋಗಿದ್ದಳು. ಆ ಸ್ಪರ್ಧೆಯಲ್ಲಿ ಅವನೇ ವಿಜೇತನಾಗಿದ್ದ. ನಂತರ ಅವನನ್ನು ಅರಮನೆಗೆ ಕರೆಸಿ ನನ್ನ ಮುಖವನ್ನು ನೋಡಿ ನನ್ನ ಮನಸ್ಸಿಗೆ ಇಷ್ಟವಾಗುವ ಚಿತ್ರವನ್ನು ಬರೆ ಎಂದು ಆಜ್ಞಾಪಿಸಿದ್ದಳು. ಆಗ ಆ ಚಿತ್ರಗಾರ ಬಿಡಿಸಿದ್ದೆ ಈ ಚಿತ್ರ. ಸುತ್ತಲೂ ಹಸಿರು ಕಾನನ, ಕಾನನದ ಮರಗಳಿಗೆಲ್ಲ ಬೆಂಕಿ ಹತ್ತಿ ಉರಿಯುತ್ತಿವೆ, ಅದರ ನಡುವೆ ಸ್ತ್ರೀ ಒಬ್ಬಳು ಮರಗಳಿಂದ ಒಣಗಿ ಬಿದ್ದಿದ್ದ ಎಲೆಗಳ ಮೇಲೆ ಕೂತು ಕಣ್ಣು ಮುಚ್ಚಿ ತಪಸ್ಸು ಮಾಡುತ್ತಿದ್ದಳು. ಬಿಚ್ಚಿದ್ದ ಅವಳ ತೆಲೆಯ ಕಪ್ಪನೆಯ ಕೂದಲು ನೆಲವನ್ನು ಮುಟ್ಟಿದ್ದವು. ಅವಳ ತೊಡೆಯ ಮೇಲೆ ಮಗುವೊಂದು ಮಲಗಿ ಆಕೆಯ ಎಡಸ್ತನದಿಂದ ಹಾಲು ಕುಡಿಯುತ್ತಿತ್ತು. ತನ್ನ ಎಡಗೈಯ್ಯಲ್ಲಿ ಅವಳ ಇನ್ನೊಂದು ಸ್ತನವನ್ನು ಹಿಡಿದುಕೊಂದಿತ್ತು. ಕಪ್ಪನೆಯ ಅವಳ ಸೀರೆಯ ಸೆರಗು ಕುತ್ತಿಗೆಯ ಪಕ್ಕ ಭುಜದ ಮೇಲಿಂದ ಅವಳ ಬೆನ್ನ ಹಿಂದೆ ಹೋಗಿತ್ತು. ವತ್ಸಲ ಪ್ರತಿದಿನವು ಈ ಚಿತ್ರವನ್ನು ನೋಡಿದಾಗ ಆ ಚಿತ್ರಗಾರ ಇದೇ ಚಿತ್ರವನ್ನು ಯಾಕೆ ಬಿಡಿಸಿದ ಎಂದು ಯೋಚಿಸುತ್ತಿದ್ದಳು.? ಆದರೆ ಈಗ ಅದೇ ಚಿತ್ರವನ್ನು ದಿಟ್ಟಿಸಿ ನೋಡುತ್ತಿದ್ದರೂ ಅವಳ ಯೋಚನೆಗಳು ಬೆರೆಯಾಗಿದ್ದವು, ಅವಳ ಅಜ್ಜಿ ಎರಡು ದಿನದಿಂದೆ ನೀನು ವೈಶಂಖನನ್ನು ವಿಹವಾದ ಬಳಿಕ ನಮ್ಮನ್ನು , ಈ ಅರಮನೆಯನ್ನು , ಮಲಯಸಾಗರವನ್ನು ಬಿಟ್ಟು ಹೋಗಬೇಕಾಗುತ್ತದೆ ಎಂದು ಹೇಳಿದ್ದಳು. ವತ್ಸಲ ವೈಶಂಕನನ್ನು ಮದುವೆಯಾಗವ ಹಂಬಲದಲ್ಲಿದ್ದಳೇ ಒರತು ಅದರ ನಂತರ ಅವಳು ಕಳೆದುಕೊಳ್ಳುವ ವಿಷಯಗಳ ಬಗ್ಗೆ ಯಾವತ್ತೂ ಯೋಚಿಸಿದ್ದಿಲ್ಲ . ಆದರೆ ಅಜ್ಜಿ ಹೇಳಿದ ಬಳಿಕ ಎರಡು ದಿನಗಳಿಂದ ಅವಳು ಅದೇ ಚಿಂತೆಯಲ್ಲಿ ಮುಳುಗಿ ಸ್ವಲ್ಪ ಮೌನವಾಗಿದ್ದಳು.
ಅವಳ ಎಡಬದಿಯಲ್ಲಿದ್ದ ಬಾಗಿಲಿನಿಂದ ಟಕ್ ಟಕ್ ಎನ್ನುವ ಶಬ್ಧ ಕೇಳಿಬಂತು, ಅವಳ ದೃಷ್ಟಿ,ಗಮನ ಆ ಚಿತ್ರವನ್ನ ಬಿಟ್ಟು ಬೇರೆ ಕಡೆ ಹರಿಯಲಿಲ್ಲ. ಟಕ್ ಟಕ್ ಎನ್ನುವ ಶಬ್ದ ಸ್ವಲ್ಪ ಜೋರಾಗಿ ಧಬ ಧಬ ಎಂದ ಕೇಳಿಸಿದಾಗ ಅವಳು ತನ್ನ ಯೋಚನಾಲೋಕದಿಂದ ಹೊರಬಂದಳು. ತಕ್ಷಣ ಅವಳ ಕಣ್ಣು ಶಬ್ದ ಬರುತ್ತಿದ್ದ ಬಾಗಿಲ ಕಡೆ ನೋಡಿದವು. ಮತ್ತೊಮ್ಮೆ ಟಕ್ ಎಂದಾಗ " ಸ್ವಲ್ಪ ತಾಳಿ," ಎಂದು ಬಾಗಿಲ ನೋಡುತ್ತ ಅದಕ್ಕೆ ಕೇಳಿಸುವಂತೆ ಹೇಳಿದಳು. ಶಬ್ದ ನಿಂತಿತು. ತನ್ನ ಎರಡು ಕಾಲುಗಳನ್ನು ಮಂಚದ ಕೆಳಗಿಳಿಸಿ ಅವುಗಳ ಮೇಲೆ ನಿಂತಳು. ಕೋಣೆಯ ತುಂಬೆಲ್ಲ ಬೆಳಕು ಹರಡಿತ್ತು. ಎಲ್ಲ ವಸ್ತುಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ನೇರವಾಗಿ ಶಬ್ಧ ಬರುತ್ತಿದ್ದ ಬಾಗಿಲ ಕಡೆ ನಡೆದಳು. ಬಾಗಿಲ ಬಳಿ ಬಂದು ಅಡ್ಡವಾಗಿ ಹಾಗಿದ್ದ ಕೊಂಡಿಯನ್ನ ತಗೆದಳು. ಹೊಸ್ತಿಲಿಗೆ ಅಪ್ಪಿಕೊಂಡಿದ್ದ ಬಾಗಿಲು ಸ್ವಲ್ಪ ಹಿಂದೆ ಬಂದಾಗ ಬಾಗಿಲ ಅಂಚಿನಿಂದ ಬೆಳಕು ಒಳಬಂತು. ಬಾಗಿಲನ್ನು ಪೂರ್ಣವಾಗಿ ತನ್ನೆಡೆಗೆ ಎಳೆದಾಗ, ಹೊಸ್ತಿಲ ಹೊರಗೆ ನಾಲ್ಕು ಜನ ತರುಣಿಯರು ನಿಂತಿದ್ದರು. ಓಬ್ಬಳು ಇವಳಿಗಿಂತ ಎತ್ತರವಾಗಿದ್ದಳು, ಕೆಂಪನೆಯ ಬಣ್ಣದ ಸೀರೆಯ ಧರಿಸಿ, ಹಣೆಯಲ್ಲಿ ಕೆಂಪನೆಯ ಬೊಟ್ಟನ್ನಿಟ್ಟಿದ್ದಳು. ಉದ್ದನೆಯ ಮುಖ, ಕೊರಳಲ್ಲಿ ಬಿಳಿ ಬಣ್ಣದ ಸರವನ್ನಾಕಿದ್ದಳು. ಕಪ್ಪು ಕೂದಲುಗಳನ್ನು ತಲೆಗೆ ಅಪ್ಪಿಕೊಳ್ಳುವಂತೆ ಬಾಚಿ ಹಿಂದೆ ತುರುಬನ್ನು ಕಟ್ಟಿದ್ದಳು. ಎರಡು ಕಿವಿಯಲ್ಲಿ ಚಿನ್ನದ ಓಲೆಗಳು ನೇತಾಡುತ್ತಿದ್ದವು ಇವಳೇ ಇಂದು, ಇನ್ನು ಅವಳ ಪಕ್ಕದಲ್ಲಿದ್ದವಳು ಇವಳಷ್ಟೇ ಎತ್ತರವಿದ್ದಳು, ದುಂಡನೆಯ ಮುಖ, ಬಿಳಿ ಬಣ್ಣದ ಉಡುಪಿನೊಟ್ಟಿಗೆ ಕತ್ತಿನಲ್ಲಿ ಕಪ್ಪು ಮಣಿಗಳ ಸರ ಸುಂದರವಾಗಿ ಕಾಣುತ್ತಿತ್ತು. ಎರಡು ಕಪ್ಪನೆಯ ಹುಬ್ಬುಗಳ ನಡುವೆ ಕಪ್ಪನೆಯ ಕುಂಕುಮ ಇಟ್ಟಿದ್ದಳು ಇವಳೆಸರು ಲವಣ, ಇವರಿಬ್ಬರಿಂದೇ ಇದ್ದ ಉಳಿದಿಬ್ಬರು ಒಬ್ಬಳು ಇವಳಿಗಿಂತ ಗಿಡ್ಡವಾಗಿದ್ದಳು, ಕಪ್ಪು ಬಣ್ಣದ ಸೀರೆ, ಧರಿಸಿದ್ದಳು ನೋಡಲು ಸಹ ಕಪ್ಪಾಗಿದ್ದಳು ಇವಳು ಧರಣಿ, ಇನ್ನೊಬ್ಬಳು ಸಹ ಕಪ್ಪು ಬಣ್ಣದ ಉಡುಪು ಧರಿಸಿದ್ದಳು, ನೋಡಲು ಉಳಿದ ಮೂವರಿಗಿಂತ ಲಕ್ಷಣವಾಗಿದ್ದಳು, ಅವಳು ವತ್ಸಲಳನಷ್ಟೆ ಉದ್ದ , ದಪ್ಪವಿದ್ದಳು ಇವಳು ವಾಮಿನಿ. ಎಲ್ಲರು ಸಹ ತಮ್ಮ ಎರಡು ಕೈಗಳಿಗೆ ಬೆಳ್ಳಿಯ ಬಳೆಗಳನ್ನು ತೊಟ್ಟಿದ್ದರು.
ವತ್ಸಲ ಇವರನ್ನು ನೋಡಿದ ಕೂಡಲೇ ಕುತೂಹಲಕರವಾಗಿ "ಇಂದು, ಲವಣ ಏನಿದು ಇಷ್ಟು ಬೇಗ ಅದು ಎಲ್ಲರೂ ಒಟ್ಟಿಗೆ?," ಎಂದು ಪ್ರಶ್ನಿಸಿದಳು.
ಯಾರು ಕೂಡ ಉತ್ತರಿಸಲಿಲ್ಲ. ಅವಳ ಕಣ್ಣುಗಳು ಎಲ್ಲರ ಮುಖವನ್ನು ಹುಡುಕಿದವು. ತಕ್ಷಣವೇ ತಾನು ಒಳಗೆ ಕರೆಯುವುದನ್ನೇ ನೀರೀಕ್ಷಿಸುತ್ತಿದ್ದಾರೆ ಎಂದು ತಿಳಿದು,
"ದಯಮಾಡಿ ಕ್ಷಮಿಸಿ," ಎನ್ನುತ್ತ ಪಕ್ಕಕ್ಕೆ ಸರಿದು ಎಲ್ಲರನ್ನು "ಒಳಬನ್ನಿ" ಎಂದಳು.
ಆ ನಾಲ್ಕು ಜನ ವತ್ಸಲಳ ಬಾಲ್ಯದ ಗೆಳತಿಯರು, ಸಣ್ಣವರಿದ್ದಾಗಿನಿಂದ ಋಷಿಗಳ ಆಶ್ರಮಕ್ಕೆ ವಿದ್ಯಾಭ್ಯಾಸಕ್ಕಾಗಿ ಒಟ್ಟಿಗೆ ಹೋದವರು, ಹಬ್ಬ ಹರಿದಿನಗಳಲ್ಲಿ ವತ್ಸಲಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಿದ್ದರು, ಎಷ್ಟೋ ಹಬ್ಬ, ಉತ್ಸವಗಳನ್ನು ವತ್ಸಲ ಅರಮನೆಯಲ್ಲಿ ಆಚರಿಸುತ್ತಲೇ ಇರುತ್ತಿರಲಿಲ್ಲ. ಅವರಿಗೆ ಅರಮನೆಗೆ ಯವಾಗಬೇಕಾದರು ಬರುವ ಸ್ವಾತಂತ್ರ್ಯ ಇತ್ತು.
ಮುಂದೆ ನಿಂತಿದ್ದ , ಎಲ್ಲರಿಗಿಂತ ಸ್ವಲ್ಪ ಎತ್ತರವಾಗಿದ್ದ ಇಂದು ಮೊದಲು ಒಳಬಂದಳು, ಉಳಿದವರು ಅವಳನ್ನೇ ಇಂಬಾಲಿಸಿದರು. ಬಾಗಿಲಲ್ಲೇ ನಿಂತಿದ್ದ ವತ್ಸಲ ಮುಂದೆ ನೋಡಿದಳು. ಬಾಗಿಲ ಎಡ ಬಲಕ್ಕೆ ಎತ್ತರವಾಗಿ ನಿಂತಿದ್ದ ಗೋಡೆಗಳು, ಇವಳ, ಕೋಣೆಗೆ ಬರುವ ದಾರಿಯನ್ನ ತೋರಿಸಿದ್ದವು. ನೆರವಾಗಿದ್ದ ದಾರಿ ಸ್ವಲ್ಪ ದೂರದಲ್ಲಿ ಎಡಕ್ಕೆ ತಿರುಗಿತ್ತು, ಅಲ್ಲಿ ಇಬ್ಬರು ಸೈನಿಕರು, ಅವರ ಕೈಯಲ್ಲಿ ಈಟಿ ಇಡಿದು ಕಲ್ಲಿನ ವಿಗ್ರಹಗಳಂತೆ ಅಲುಗಾಡದೆ ನಿಂತಿದ್ದರು. ಗೋಡೆಯ ಮೇಲ್ಗಡೆ ಸಣ್ಣ ಸಣ್ಣ ಕಿಂಡಿಗಳಿಂದ ಒಳಬಂದ ಬೆಳಕಿನಿಂದ ಇವಳ ಕೋಣೆಗೆ ಬರುವ ದಾರಿ ಸ್ಪಷ್ಟವಾಗಿ ಕಾಣುತ್ತಿತ್ತು. ದಾರಿಯ ಎರಡೂ ಬದಿಯಲ್ಲಿ ರಾತ್ರಿಯ ಸಮಯದ ಬೆಳಕಿಗೆಂದೇ ನಿಲ್ಲಿಸಿದ್ದ ದೀಪಸ್ತಂಬಗಳನ್ನು ಹಾರಿಸಲಾಗಿತ್ತು.
ಗೆಳತಿಯರು ಒಳಬಂದ ತಕ್ಷಣ ವತ್ಸಲ ಬಾಗಿಲು ಮುಚ್ಚುತ್ತಿದ್ದಳು, ಹಿಂದಿನಿಂದ ನಾಲ್ವರಲ್ಲಿ ಒಬ್ಬ ಗೆಳತಿ " ಶ್ವೇತಾಮೃತ ಅರಮನೆಯ ಸೊಸೆಯಾಗುವುದು ಸನಿಹವಾಗುತ್ತಿದ್ದಂತೆ, ಪೂಜೆ,ಪುನಸ್ಕಾರ ಎಲ್ಲವು ಮರೆತು ಹೋಗುತ್ತಿದ್ದಂತಿದೆ ಯುವರಾಣಿಯವರಿಗೆ," ಗೆಳತಿಯ ಮಾತು ಪೂಜೆ, ಪುನಸ್ಕಾರ ಅನ್ನುವಾಗಲೇ, ವತ್ಸಲ ಬಾಗಿಲು ಮುಚ್ಚಿ ಗೆಳತಿಯರ ಕಡೆ ತಿರುಗಿದ್ದಳು. ಈ ಮಾತು ಇಂದುವಿನಿಂದ ಹೊರಬಂದವು. ಅವರೆಲ್ಲರು ವತ್ಸಲ ಮೊದಲು ಕುಳಿತಿದ್ದ ಮಂಚದ ಮೇಲೆ ಕೂತಿದ್ದರು, ಧರಣಿ ಮೇಜಿನ ಮೇಲಿದ್ದ ಹಾಲಿನ ಲೋಟವನ್ನು ಎತ್ತಿ ತನ್ನ ತುಟಿಯಲ್ಲಿ ಕಚ್ಚಿಕೊಂಡು ಹಾಲು ಕುಡಿಯುತ್ತಿದ್ದಳು.
ಗೆಳತಿಯು ಪೂಜೆಯ ಬಗ್ಗೆ ಮಾತಡಿದ್ದು ಕೇಳಿದ ಕೂಡಲೇ ವತ್ಸಲಳಿಗೆ ಅಂದು ರವಿವಾರವೆಂದು ನೆನಪಿಗೆ ಬಂತು, "ಅಯ್ಯೋ ದಯವಿಟ್ಟು ಕ್ಷಮಿಸಿ," ಎಂದು ತನ್ನ ಗೆಳತಿಯರಿಗೊಮ್ಮೆ ಮತ್ತು ಅಲ್ಲಿಯೇ ನಿಂತು ಕೈಮುಗಿಯುತ್ತ, ತುಟಿಗಳಿಂದ ಹೊರಗೆ ಬರದಂತೆ ಪಿಟಿ ಪಿಟಿ ಎನ್ನುತ್ತಾ "ಅಪ್ಪ ನೀಲಕಂಠ ಸ್ವಾಮಿ ನನ್ನಿಂದ ತಪ್ಪಾಯಿತು" ಎಂದು ದೇವರಿಗೊಮ್ಮೆ ಕ್ಷಮೆಯಾಚಿಸಿದಳು.
ಕೂತಿದ್ದ ಎಲ್ಲಾ ಗೆಳತಿಯರಿಗೆ "ಕ್ಷಣಮಾತ್ರದಲ್ಲಿ ತಯಾರಾಗಿ ಬರುತ್ತೇನೆ ಇಲ್ಲಿಯೇ ಇರಿ." ಎನ್ನುತ್ತಾ.. ಅವಳ ಎದುರಿಗೆ ತೆರೆದಿದ್ದ ಬಾಗಿಲ ಕಡೆ ಅವಸರದಿ ಹೆಜ್ಜೆ ಹಾಕಿದಳು. ಬಾಗಿಲ ಹೊಸ್ತಿಲಿನ ಬಳಿ ಬಂದಾಗ ಒಮ್ಮೆ ತಿರುಗಿ ಗೆಳತಿಯರ ಕಡೆ ನೋಡಿದಳು. ಅವರು ಏನೋ ಮಾತಾಡುತ್ತ ಕಿಸಿ ಕಿಸಿ ಎಂದು ಹಲ್ಲು ಕಿಸಿಯುತ್ತಿದ್ದರು. ಮತ್ತೆ ಮುಂದೆ ನೋಡಿ ಇವಳು ಹೋಗಬೇಕಾದ ದಾರಿ ಹಿಡಿದಳು. ವತ್ಸಲ ಬಾಗಿಲಿನಿಂದ ಹೊರಕ್ಕೆ ಬಂದು, ಬಲಕ್ಕೆ ಸಾಗಿದ್ದ ದಾರಿಯಲ್ಲಿ ಮುಂದೆ ಚಲಿಸಿದಳು. ಎರಡು ಬದಿಯಲ್ಲಿ ಕಪ್ಪನೆಯ ಗೋಡೆಗಳು ಅದರ ನಡುವೆ ಸಾಗಿದ್ದ ದಾರಿಯಲ್ಲಿ ಇವಳು ನಡೆಯುತ್ತಿದ್ದಳು, ಬಾಗಿಲು ಬಿಟ್ಟು ಸ್ವಲ್ಪ ದೂರ ಮುಂದೆ ಬಂದರೂ ಸಹ ಅವಳ ಗೆಳತಿಯರ ಕಿಸಿ ಕಿಸಿ ನಗೆ ಇವಳ ಕಿವಿಗೆ ಕೇಳಿಸುತ್ತಿತ್ತು. ಇವಳು ಮುಂದೆ ನಡೆದಂತೆಲ್ಲ ಅವರ ನಗೆ ದೂರವಾಗುತ್ತಾ ಹೋಯಿತು. ನೇರವಾಗಿದ್ದ ದಾರಿ ಸ್ವಲ್ಪ ದೂರದಲ್ಲೇ ಎಡಗಡೆಗೆ ತಿರುವು ಪಡೆದಿತ್ತು. ಅಲ್ಲಿಗೆ ಬಂದು ಎಡಕ್ಕೆ ತಿರುಗಿದಾಗ, ದೂರದಲ್ಲಿ ಇಬ್ಬರು ಹೆಂಗಸರು ಇವಳಿಗೆ ಬೆನ್ನು ಕಾಣುವಂತೆ ನಿಂತು ಮಾತಿನ ಚಕಮಕಿ ನಡೆಸುತ್ತಿದ್ದದ್ದು ಕಣ್ಣಿಗೆ ಕಂಡಿತು ಅವರ ಪಕ್ಕದಲ್ಲೇ ಎಡಕ್ಕೆ, ಕೋಣೆಯೊಂದರ ಬಾಗಿಲು ಅರ್ಧವಾಗಿ ತೆರೆಯಲಾಗಿತ್ತು. ಅವರ ಕಡೆಗೆ ಹೆಜ್ಜೆ ಹಾಕಿದಳು. ಇವಳ ಬಲಬದಿಯಲ್ಲಿದ್ದ ಗೋಡೆಯ ನಡುವೆ ಅಲ್ಲಲ್ಲಿ ಸ್ವಲ್ಪ ದೂರಕ್ಕೊಂದೊಂದು ಕಿಟಕಿಗಳು ಸಿಕ್ಕಿ ಕೊಂಡಿದ್ದವು, ತೆರೆದಿದ್ದ ಆ ಕಿಟಕಿಗಳಿಂದ ಒಳಬಂದ ಸೂರ್ಯನ ಬೆಳಕಿನಿಂದ ದಾರಿ ಸ್ಪಷ್ಟವಾಗಿ ಕಾಣುತ್ತಿತ್ತು. ವತ್ಸಲ ಅವುಗಳ ಬಳಿ ಸಾಗುವಾಗ ತಣ್ಣನೆ ಗಾಳಿ ಬಂದು ಇವಳ ಮೈಗಪ್ಪುತ್ತಿತ್ತು. ಮತ್ತು ಅವುಗಳಿಂದ ಹೊರಗೆ ಕಣ್ಣಾಯಿಸಿದಾಗ ಹಸಿರು ಹುಲ್ಲಿನ ನೆಲ, ನೆಲದ ಮೇಲೆ ಎತ್ತರವಾಗಿ ನಿಂತಿದ್ದ ಮರಗಳೆಲ್ಲ, ಜೋರಾಗಿ ಹೆಜ್ಜೆ ಹಾಕಿತ್ತಿದ್ದ ಇವಳ ಕಣ್ಣಿಗೆ ಕಿಟಕಿ ನಡುವೆ ಕಂಡು ಮಾಯವಾಗುತ್ತಿದ್ದವು. ಮತ್ತು ಅವಳ ನೆರಳು ಸಹ ಕಿಟಕಿಯ ಬಳಿ ನಡೆದಾಗ ಅವಳ ಎಡಕ್ಕೆ ಕಂಡು ಕಾಣೆಯಾಗುತ್ತಿತ್ತು. ಅವಸರದಿ ಹೆಜ್ಜೆ ಹಾಕುತ್ತಿದ್ದ ಅವಳಿಗೆ ಝಲ್ ಝಲ್ ಎನ್ನುವ ಅವಳ ಕಾಲ್ಗೆಜ್ಜೆಯ ಶಬ್ದದ ಜೊತೆಗೆ ಅರಮನೆಯ ಹೊರಗೆ ಕೂಗುತ್ತಿದ್ದ ನಾನಾರೀತಿಯ ಹಕ್ಕಿಗಳ ಕೂಗು ಕೇಳಿಸುತ್ತಿತ್ತು. ದೂರದಲ್ಲಿ ನಿಂತಿದ್ದ ಆ ಹೆಂಗಸರು ಇನ್ನೂ ಹಾಗೆಯೇ ಮಾತನಾಡುತ್ತ ನಿಂತಿದ್ದರು, ವತ್ಸಲ ಅವರಿಗೆ ಸನಿಹವಾಗುತ್ತಿದ್ದಂತೆ ಇವಳ ಕಾಲ್ಗೆಜ್ಜೆಯ ಶಬ್ದಕ್ಕೋ ಅಥವ ಇನ್ನೇನಕ್ಕೋ ಒಮ್ಮೆಲೇ ಇವಳ ಕಡೆ ತಿರುಗಿದರು, ಇವಳು ಬರುತ್ತಿದ್ದನ್ನು ನೋಡಿ, ಗಾಬರಿಗೊಂಡು ಬಾಗಿಲ ಎಡ ಬಲಕ್ಕೆ ಕಾವಲು ಕಾಯುವರಂತೆ ತಲೆ ತಗ್ಗಿಸಿ ನಿಂತರು. ವತ್ಸಲ ಎದುರುರಿಗೆ ಕಾಣುತ್ತಿದ್ದ ಕೋಣೆಯೊಳಗೆ ಹೋಗಹೊರಟಿದ್ದಳು ಅವಳು ಅವರಿಬ್ಬರ ಮುಂದೆ ಸಾಗುವಾಗ ಇಬ್ಬರು ಶಿರಬಾಗಿ ಒಂದೇ ಧ್ವನಿಯಲ್ಲಿ "ಯುವರಾಣಿ" ಎಂದು ನುಡಿದರು. ವತ್ಸಲ ಅವರಿಗೆ ಗಮನ ಕೊಡದಂತೆ ಕೋಣೆಯ ಹೊಸ್ತಿಲಿನಾಚೆ ಕಾಲಿಡುತ್ತ , ಅರೆ ಮುಂದೆ ಬಂದಿದ್ದ ಬಾಗಿಲನ್ನ ಹಿಂದೆ ತಳ್ಳುತ್ತ ಒಳ ನಡೆದಳು. ಒಳ ಬಂದವಳೇ ಕೋಣೆಯ ಒಳಗೆ ಕಣ್ಣಾಡಿಸುತ್ತ, ತನ್ನ ಬಲಗೈಯ್ಯಲ್ಲಿ ಹಾಗೆಯೇ ಹಿಡಿದು ಕೊಂಡಿದ್ದ ಬಾಗಿಲನ್ನ ಹಿಂದಕ್ಕೆ ದೂಡಿದಳು. ಅದು ಅರಚುತ್ತ ಹೋಗಿ ಬಾಗಿಲ ತೋಳನ್ನ ಅಪ್ಪಿಕೊಂಡಿತು. ಕೋಣೆಯ ಒಳಗೆ ಅವಳ ಎದುರಿಗೆ ಸ್ವಲ್ಪ ಬಲಕಿದ್ದ ಸ್ನಾನದ ಕೊಳ ಸಂಪೂರ್ಣವಾಗಿ ಬಿಸಿಯಾದ ನೀರಿನಿಂದ ತುಂಬಿಕೊಂಡು ಇವಳಿಗಾಗಿ ಕಾಯುತ್ತಿತ್ತು. ಆಯತಾಕಾರವಾಗಿದ್ದ ಆ ಕೊಳದ ಒಂದು ಬದಿಯಲ್ಲಿ ಅದರ ಒಳಗಿಳಿಯಲು ಮೆಟ್ಟಿಲುಗಳಿದ್ದವು. ಅವಳ ಎದುರಿನ ಗೋಡೆಯ ನಡುವಿನಲ್ಲಿದ್ದ ತೆರೆದ ಕಿಟಕಿಯಿಂದ ಸೂರ್ಯನ ಕಿರಣಗಳು ಒಳಬಂದು ಆ ಸ್ನಾನದ ಕೊಳದಲ್ಲಿದ್ದ ಬಿಸಿಯಾದ ನೀರಿನ ಮೇಲೆ ಬಿದ್ದಿದ್ದವು. ನೀರಿನಿಂದ ಏಳುತ್ತಿದ್ದ ಹೊಗೆ ಆ ಬೆಳಕಿನ ಮಧ್ಯ ಹಾರಿ ಹೋಗುತ್ತಿದ್ದದ್ದು ಎದ್ದು ಕಾಣುತ್ತಿತ್ತು. ಅವಳ ಎಡಕ್ಕೆ ಗೋಡೆಗೆ ಅವಳಿಗಿಂತ ಎತ್ತರವಾದ ದೊಡ್ಡದಾದ ಕನ್ನಡಿವೊಂದನ್ನ ಕೂರಿಸಲಾಗಿತ್ತು. ಆ ಕನ್ನಡಿಯ ಎದುರಿಗೆ ಕೂರಲು ಚಿಕ್ಕದಾದ ಆಸನವೊಂದಿತ್ತು. ಅದರ ಎಡ ಬಾಗದಲ್ಲಿ ಸಣ್ಣ ಸಣ್ಣ ಮಣ್ಣಿನ ಬೋಗುಣಿಗಳಿದ್ದವು. ಅದರ ಒಳಗಿರುವ ವಸ್ತು ಕಾಣದಂತೆ ಅವನ್ನು ಮುಚ್ಚಲಾಗಿತ್ತು. ಮತ್ತು ಅವಳ ಬಲಕ್ಕೆ ಕೋಣೆಯ ಕೊನೆಯಲ್ಲಿ ಇನ್ನೊಂದು ಮುಚ್ಚಿದ ಬಾಗಿಲು ಕಾಣುತ್ತಿತ್ತು. ಅದರ ಮುಂದೆಯೇ ಇದ್ದ ಮೇಜಿನ ಮೇಲೆ ಮಡಚಿಟ್ಟ ಕಪ್ಪು, ಕೆಂಪು ಬಣ್ಣದ ಬಟ್ಟೆಗಳು ಕಾಣುತ್ತಿದ್ದವು. ಇದೇ ಅವಳ ಸ್ನಾನಗೃಹ.
ವತ್ಸಲ ಇವೆನ್ನೆಲ್ಲ ಗಮನಿಸುತ್ತಾ ತೊಟ್ಟಿದ್ದ ಸೀರೆ ಮತ್ತು ಕುಪ್ಪಸವನ್ನ ಕಳಚಿ ನಗ್ನಳಾಗಿ ನೇರವಾಗಿ ಕನ್ನಡಿಯ ಬಳಿ ನಡೆದಳು. ಪ್ರತಿಬಿಂಬಕದ ಎದುರು ಬಂದು ನಿಂತಾಗ ಅದರಲ್ಲಿ ಕಾಣುತ್ತಿದ್ದ ಅವಳ ಸೌಂದರ್ಯ ನೋಡಿ ಅವಳ ಕಣ್ಣುಗಳೇ ನಾಚಿದವು. ತುಟಿ ತೆರೆಯದ ಹಾಗೆ ಅವಳ ಮೊಖದಲ್ಲಿ ನಾಚಿಕೆಯ ನಗೆ ಹರಳಿತು. ಮುಂದೆ ಇದ್ದ ಪೀಠದ ಮೇಲೆ ಆಸೀನಳಾದಳು. ಪಕ್ಕದಲ್ಲಿದ್ದ ಬೋಗುಣಿಯ ಮುಚ್ಚಿಕೆ ತೆಗೆದಾಗ ಅದರಲ್ಲಿದ್ದ ತೈಲದಿಂದ ಮಲ್ಲಿಗೆಯ ಪರಿಮಳ ನೇರವಾಗಿ ಬಂದು ಇವಳ ಮೂಗಿಗೆ ತಾಕಿತು. ಆ ಕಂಪು ಅವಳ ಮೂಗಿಗೆ ಹಿತ ತಂದಿತು. ಅದರ ಪರಿಮಳ ಸ್ವಲ್ಪ ಸಮಯದಲ್ಲೇ ಕೊಠಡಿಯ ತುಂಬೆಲ್ಲಾ ಪಸರಿಸಿತು. ಆ ತೈಲವನ್ನು ತನ್ನ ಎರಡು ಕೈ ಬೆರಳುಗಳಿಂದ ತೆಗೆದುಕೊಂಡು ಕನ್ನಡಿಯಲ್ಲಿ ನೋಡಿಕ್ಕೊಳ್ಳುತ್ತಾ ಮೈಗೆಲ್ಲಾ ಲೇಪಿಸಿಕೊಂಡಳು. ನಂತರ ಇನ್ನೊಂದು ಬೋಗುಣಿಯ ಮುಚ್ಚಳ ತೆರೆದಳು. ಅದರಲ್ಲಿದ್ದ ಕೇಶಮರ್ದನವನ್ನು ತನ್ನ ನೀಳ ಕೂದಲುಗಳಿಗೆಲ್ಲಾ ಹಚ್ಚಿಕೊಂಡಳು. ಎಲ್ಲಾ ಮುಗಿಸಿ ಕನ್ನಡಿಯ ಎದುರು ಎದ್ದು ನಿಂತು ಒಮ್ಮೆ ನೋಡಿಕೊಂಡಳು. ಹೊರಗಿನಿಂದ ಕಿಟಕಿಯ ಮೂಲಕ ಒಳಬಂದ ಸೂರ್ಯನ ಕಿರಣಗಳು ತೈಲಲೇಪಿತವಾದ ಅವಳ ಮೈಮೇಲೆ ಬಿದ್ದಿದ್ದರಿಂದ ಅವಳ ಸೌಂದರ್ಯ ಇನ್ನುಷ್ಟು ಹೊಳೆಯುತ್ತಿತ್ತು. ಆಗ ಇಡೀ ಕೊಠಡಿ, ಅದರಲ್ಲಿದ್ದ ವಸ್ತುಗಳೆಲ್ಲ ಅವಳನ್ನೇ ದಿಟ್ಟಿಸಿ ನೋಡುತ್ತಿದ್ದವು. ಉಳಿದ ಬೋಗುಣಿಗಳಲ್ಲಿದ್ದ ತೈಲಕ್ಕೆ ನಿರಾಸೆ ಮೂಡಿಸಿ ವತ್ಸಲ ಸ್ನಾನದ ಕೊಳದ ಕಡೆ ನಡೆದಳು. ಕೊಳದ ಮೆಟ್ಟಿಲುಗಳ ಬಳಿ ಬಂದು ನಿಂತಾಗ ಬೆಳ್ಳನೆಯ ಬಿಸಿನೀರಿನಲ್ಲಿ ಅವಳ ಪ್ರತಿಬಿಂಬ ಕನ್ನಡಿಯಲ್ಲಿ ಕಂಡಂತೆ ಕಾಣುತ್ತಿತ್ತು. ಮೊದಲನೇ ಮೆಟ್ಟಿಲ ಮೇಲೆ ತನ್ನ ಬಲಗಾಲ ಪಾದವನಿಟ್ಟಾಗ ನೀರಿನಲ್ಲಿದ್ದ ವತ್ಸಲ ಕಂಪಿಸತೊಡಗಿದಳು. ವತ್ಸಲಳ ಪಾದ ನೀರನ್ನು ಸ್ಪರ್ಶಿಸಿದಾಗ ರೂಪುಗೊಂಡ ಸಣ್ಣ ಅಲೆಗಳು ನೋಡಲು ಆ ಕೊಳ ನಗುತ್ತಿದೆ ಎನ್ನುವಂತೆ ಕಾಣುತ್ತಿತ್ತು. ನಿಧಾನವಾಗಿ ಮೆಟ್ಟಿಲುಗಳ ಮೇಲೆ ಕೆಳಗಿಳಿಯುತ್ತ ತನ್ನ ದೇಹವನ್ನು ಆ ನೀರಿಗೆ ಅರ್ಪಿಸುತ್ತಾ ಹೋದಳು. ಮೊದಲು ಸ್ವಲ್ಪ ಚಳಿ ಎನಿಸಿದ್ದ ಅವಳ ಮೈಗೆ ಬಿಸಿಯಾದ ನೀರು ಕಾವು ಕೊಟ್ಟವು. ಬೇಗನೆ ನೀರಿನಲ್ಲಿ ಮಿಂದೆದ್ದು ಇಳಿದ ಮೆಟ್ಟಿಲುಗಳಿಂದಲೇ ಅತ್ತಿ ಕೊಳದಿಂದ ಮೇಲೆ ಬಂದಳು. ನಡುಗುತ್ತಾ ತನ್ನ ಗೆಳತಿಯರು ಇವಳಿಗಾಗಿ ಕಾಯುತ್ತಿರುವುದನ್ನು ನೆನಪಿಸಿಕೊಂಡು ನೇರವಾಗಿ ಅವಳ ಎಡಬದಿಗೆ ಕಾಣುತ್ತಿದ್ದ ಮೇಜಿನ ಬಳಿ ನಡೆದಳು. ಅದರ ಮೇಲೆ ಮಡಚಿಟ್ಟಿದ್ದ ಕಪ್ಪನೆಯ ಬಟ್ಟೆ ತೆಗೆದುಕೊಂಡು ಬಿಚ್ಚಿ ಅದರಿಂದ ದೇಹವನ್ನೆಲ್ಲಾ ಮರೆಮಾಚಿಕೊಂಡಳು. ಮೇಜಿನ ಹತ್ತಿರವೇ ಇದ್ದ ಬಾಗಿಲಿನ ಕೊಂಡಿಯನ್ನ ಮೇಲೆತ್ತಿ ಬಾಗಿಲು ತೆಗೆದು ಒಳ ನಡೆದಳು. ಕೋಣೆಯ ಗೋಡೆಗಳೆಲ್ಲ ಕೆಂಪು ಬಣ್ಣದಿಂದ ಕೂಡಿದ್ದವು. ಗೋಡೆಗಳ ತುಂಬೆಲ್ಲಾ ವರ್ಣಚಿತ್ರಗಳಿದ್ದವು. ಅವನ್ನು ಗಮನಿಸದೆ ಅವಳ ಎದುರಿಗೆ ಮುಚ್ಚಿದ್ದ ಇನ್ನೊಂದು ಕೋಣೆಯ ಬಾಗಿಲ ಕಡೆ ಕಣ್ಣಾಯಿಸಿದಳು. ಇವಳು ಬಾಗಿಲು ತಗಿದು ಒಳಬಂದಿದ್ದ ಶಬ್ಧ ಕೇಳಿ ಅವಳ ಎದುರಿಗೆ ಎಡಬದಿಯಲ್ಲಿ ಅಡ್ಡವಾಗಿ ನಿಂತಿದ್ದ ಗೋಡೆಯ ಹಿಂಬದಿಯಿಂದ ಇಬ್ಬರು ದಾಸಿಯರು ಹೊರಬಂದರು. ಇಬ್ಬರು ತಲೆಬಾಗಿ "ಯುವರಾಣಿ" ಎಂದು ವಂದಿಸಿ ತಲೆ ಎತ್ತಿದರು. ಅದರಲ್ಲಿ ವತ್ಸಲನ ಬಲಕ್ಕೆ ನಿಂತಿದ್ದವಳು ಸುಂದರವಾಗಿದ್ದಳು, ಅವಳ ಹೆಸರು ಸುಶೀಲ. ಇನ್ನೊಬ್ಬಳು ವಯಸ್ಸಿನಲ್ಲಿ ಸ್ವಲ್ಪ ಸಣ್ಣವಳು ಹೊಸದಾಗಿ ಕೆಲಸಕ್ಕೆ ಸೇರಿದ್ದಳು. ವತ್ಸಲನೋಡನೆ ಮಾತಾಡಲು ಸ್ವಲ್ಪ ಹೆದರುತ್ತಿದ್ದಳು ಅವಳ ಹೆಸರನ್ನು ವತ್ಸಲ ಇನ್ನೂ ನೆನಪಿನಲ್ಲಿಡಲಾಗಿದ್ದಿಲ್ಲ. ಇಬ್ಬರು ಎಲ್ಲಾ ದಾಸಿಯರು ಉಡುವ ಸಾಮಾನ್ಯ ವಸ್ತ್ರವಾದ ಬಿಳಿ ಸೀರೆಯನ್ನುಟ್ಟಿದ್ದರು.
ವತ್ಸಲಳು ಕೂಡ ಅವರನ್ನು ನೋಡುತ್ತಾ ಸಣ್ಣದಾದ ನಗೆಯಲ್ಲೇ ಪ್ರತಿನಮಸ್ಕರಿಸಿ ಎದುರುಗೆ ಕಾಣುತ್ತಿದ್ದ ಕೋಣೆಯ ಕಡೆ ಹೋಗುವುದಕ್ಕೆ ಮುಂದಾದಾಗ, ಇಬ್ಬರೂ ದಾಸಿಯರು ಅವಳಿಗಿಂತ ಮುಂದೆ ಹೋಗಿ ಬಾಗಿಲು ತೆರೆದರು. ವತ್ಸಲ ಅದರ ಮೂಲಕ ಕೋಣೆಯ ಒಳಬಂದವಳೇ ನೇರವಾಗಿ ಅವಳ ಬಲಕ್ಕೆ ಕಾಣುತ್ತಿದ್ದ ಕನ್ನಡಿಯ ಬಳಿ ನಡೆದಳು. ಕನ್ನಡಿಯ ಪಕ್ಕದಲ್ಲಿದ್ದ ಕಂದು ಬಣ್ಣದ ಅಗಲವಾದ ಪೆಟ್ಟಿಗೆಯನ್ನು ತೆರೆದಾಗ ಅದರಲ್ಲಿ ಬಣ್ಣ ಬಣ್ಣದ ಅವಳ ಉಡುಪುಗಳಿದ್ದವು. ಮೇಲೆ ಇದ್ದ ನೀಲಿ ಸೀರೆಯನ್ನೇ ಎತ್ತಿಕೊಂಡು ಸುತ್ತಿಕೊಂಡಿದ್ದ ಕಪ್ಪನೆಯ ಬಟ್ಟೆಯನ್ನ ಕಳಚಿ, ಕನ್ನಡಿ ನೋಡುತ್ತಾ ಸೀರೆಯನ್ನುಡಲಾರಂಭಿಸಿದಳು. ಹಿಂದಿನಿಂದ ದಾಸಿಯರು ಬರುತ್ತಿದ್ದದ್ದು ಕನ್ನಡಿಯಲ್ಲಿ ಕಂಡಿತು. ಇಬ್ಬರು ಅವಳ ಬಳಿ ಬಂದರು. ಸುಶೀಲ ಎನ್ನುವಳು ಅವಳ ಹಿಂದೆ ಬಂದು ತಲೆ ಬಾಚಲು ಪ್ರಾರಂಭಿಸಿದಳು, ಇನ್ನೊಬ್ಬಳು ಅವಳ ಮುಂದೆ ನಿಂತು ಉಡುತ್ತಿದ್ದ ಸೀರೆಯನ್ನ ಸರಿಪಡಿಸುತ್ತಿದ್ದಳು.
ವತ್ಸಲ ಕನ್ನಡಿ ನೋಡುತ್ತಾ ಕೇಳಿದಳು. "ಸುಶೀಲ, ಮದುವೆಯ ಬಗ್ಗೆ ಮತ್ತೇನಾದರು ಮಾಹಿತಿ ತಿಳಿಯಿತೆ?"
ಸುಶೀಲ, "ಮುಂದಿನ ಮಾಸದಲ್ಲಿ ಮಾಡಬೇಕೆಂದು ತೀರ್ಮಾನಿಸಿದ್ದಾರೆ ಯುವರಾಣಿಯವರೆ ಆದರೆ, ಯಾವ ದಿನವೆಂದು ನಿಗದಿ ಪಡಿಸಿಲ್ಲ" ಎಂದು ಉತ್ತರಿಸಿದಳು.
ವತ್ಸಲಳಿಗಾಗಿ ಕೆಲಸ ಮಾಡುತ್ತಿದ್ದ ಐದು ಜನ ದಾಸಿಯರಲ್ಲಿ ಅವಳಿಗೆ ಸುಶೀಲ ತುಂಬಾ ಆತ್ಮೀಯಳಾಗಿದ್ದಳು. ಅವಳು ಮಲಯ ಸಾಗರದ ಪಕ್ಕದ ಹಳ್ಳಿ ಶಿವತೀರ್ಥದಿಂದ ಬರುತ್ತಿದ್ದಳು. ಹಳ್ಳಿಗೆ ಹೋಗುವುದು ತಿಂಗಳಿಗೊಂದು ಬಾರಿ ಮಾತ್ರವಾಗಿತ್ತು. ಅವಳು ಅರಮನೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಅವಳ ತಂದೆ ತಾಯಿಗೆ ಊರಲ್ಲಿ ತುಂಬಾ ಗೌರವವಿತ್ತು. ಅವಳು ಒಬ್ಬ 'ಭೀರ" ಎಂಬ ಸೈನಿಕನನ್ನು ಪ್ರೇಮಿಸಿದ್ದಳು. ಇಬ್ಬರದು ಕಳ್ಳತನದ ಪ್ರೀತಿಯಾಗಿತ್ತು. ಅವನು ಸಹ ಇವಳಿಗೆ ಮದುವೆಯಾಗುವಂತೆ ಮಾತು ಕೊಟ್ಟಿದ್ದ. ನೋಡಲು ಸುಂದರನಾಗಿದ್ದ, ಸೈನ್ಯದಲ್ಲಿದ್ದ ವೀರ ಯೋಧ ಬೇರೆ, ಹೀಗೆ ಇಬ್ಬರು ಮೈಮರೆತು ಪ್ರೀತಿಸಿದ್ದ ಪರಿಣಾಮವಾಗಿ ಅವಳು ಗರ್ಭಿಣಿಯಾಗಿದ್ದಳು. ಅವಳು ಭೀರನಿಗಿಂತ ಕೆಳಜಾತಿಯಾಗಿದ್ದರಿಂದ ಮತ್ತು ಮದುವೆಗು ಮುನ್ನ ಬಸಿರಾಗಿದ್ದರಿಂದ ಅವನು ಮನೆಯಲ್ಲಿನ ತಂದೆ ತಾಯಿ, ಮರ್ಯಾದೆ, ಸಂಸ್ಕೃತಿ, ಆಚಾರ ವಿಚಾರಗಳಿಗೆ ಹೆದರಿ ನನ್ನಿಂದ ನಿನ್ನ ಮದುವೆಯಾಗಲು ಸಾಧ್ಯವಿಲ್ಲ , ನನಗು ನಿನಗು ಯಾವ ಸಂಭಂದವಿಲ್ಲವೆಂದು ಹೇಳಿದ್ದ. ಈ ವಿಷಯ ವತ್ಸಲಳಿಗೆ ಮುಟ್ಟಿದಾಗ ಅವಳು ತನ್ನ ತಂದೆಗೆ ಹೇಳಿದ್ದಳು. ಮಹಾರಾಜನಿಗೆ ಹೆದರಿ ಭೀರ ಮತ್ತು ಅವನ ಮನೆಯವರು ಮದುವೆಗೆ ಒಪ್ಪಿಗೆ ಕೊಟ್ಟಿದ್ದರು. ಆದರೆ ಸುಶೀಲಳ ತಂದೆ ರಾಜನ ಮುಂದೆ, ಈಗಾಗಲೇ ಇವರು ಸಾಂಪ್ರದಾಯಿಕಕ್ಕೆ ವಿರುದ್ಧವಾದ ಎರಡು ದೊಡ್ಡ ತಪ್ಪುಗಳನ್ನು ಮಾಡಿದ್ದಾರೆ, ಒಂದು ಅಂತರ್ಜಾತಿಯಾಗಿ ಪ್ರೀತಿಸಿರುವುದು ಮತ್ತು ಮದುವೆಗು ಮುನ್ನವೇ ನನ್ನ ಮಗಳು ಬಸಿರಾಗಿರುವುದು, ಈಗ ಮೂರನೆಯ ತಪ್ಪು ಮಾಡಲು ಹೊರಟಿದ್ದೇವೆ ಅದನ್ನಾದರು ಸಾಂಪ್ರದಾಯಿಕವಾಗಿ ಮಾಡಲು ಅಪ್ಪಣೆ ಕೊಡಿ ಪ್ರಭು ಎಂದು ಇಷ್ಟವಿಲ್ಲದ ಮನಸ್ಸಿನಿಂದ ಕೇಳಿಕೊಂಡಿದ್ದ, ಸ್ವಲ್ಪ ದಿನ ಕಳೆದ ಮೇಲೆ ಕೊಟ್ಟಿರುವ ಮಾತನ್ನು ಮರೆತು, ಊರಲ್ಲಿ ಜನರು ಅವನ ಮಗಳ ಬಗ್ಗೆ ಅಸಯ್ಯವಾಗಾಡುವ ಮಾತು ಕೇಳಿ ತನ್ನ ಮಗಳನ್ನೇ ಕೊಲ್ಲಬೇಕೆಂದು ಮುಂದಾಗಿದ್ದ. ಅವಳ ಊಟದಲ್ಲಿ ವಿಷ ಬೆರೆಸಿ ವಿಫಲಗೊಂಡಿದ್ದ. ಈ ವಿಷಯ ರಾಜನಿಗೆ ತಿಳಿದಾಗ ಅವನನ್ನು ಶಿವತೀರ್ಥ ಹಳ್ಳಿಯಿಂದ ಬಹಿಷ್ಕರಿಸಿದ್ದರು. ನಂತರ ಸುಶೀಲ ಬೇಡಿಕೆಯ ಮೇರೆಗೆ ಮಾತು ಹಿಂತೆಗೆದುಕೊಳ್ಳಲಾಗಿತ್ತು. ವತ್ಸಲಳ ತಂದೆ (ಮಹಾರಾಜ) "ಶೂಲಭದ್ರ" ಅವನಿಗೆ ಮಗಳ ಮದುವೆ ಮಾಡಲು ಒಂದು ಮಾಸ ಮಾತ್ರ ಸಮಯ ಕೊಟ್ಟಿದ್ದ. ಆ ಮಾತಿಗೆ ಅವನು ಇಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಟ್ಟಿದ್ದ.
"ಹಾಗೇನು ನಿನ್ನ ತಂದೆ ಏನಾದರೂ ಅದರ ವಿಚಾರವಾಗಿ ತೊಂದರೆ ಕೊಟ್ಟರೆ ತಪ್ಪದೆ ನಮಗೆ ವಿಷಯ ಗೋತ್ತಾಗಬೇಕು." ಸಣ್ಣ ಧ್ವನಿಯಲ್ಲಿ ಆಜ್ನಿಸಿದಳು ಯುವರಾಣಿ.
"ಖಂಡಿತ ಯುವರಾಣಿ" ಎಂದು ಕನ್ನಡಿಯಲ್ಲಿ ಕಾಣುತ್ತಿದ್ದ ವತ್ಸಲಳನ್ನು ನೋಡುತ್ತಾ ನುಡಿದಳು ಸುಶೀಲ.
ವತ್ಸಲಳ ಸೀರೆಯುಡುವುದು ಮುಗಿದಾಗ ಸುಶೀಲ ಅವಳ ಕೇಶವನ್ನ ಸಂಪೂರ್ಣವಾಗಿ ಬಾಚಿದ್ದಳು. ವತ್ಸಲ ವಾರೆಯಾಗಿ ನಿಂತು ಕನ್ನಡಿಯಲ್ಲಿ ತನ್ನ ತಲೆಯ ಹಿಂಬಾಗವನ್ನ ನೋಡಿಕೊಂಡಳು. ಸುಶೀಲ ಒಂದೂ ಕೂದಲನ್ನು ಸಹ ಹೊರಗೆ ಬರದಂತೆ ಬಾಚಿ ದುಂಡನೆಯ ತುರುಬು ಕಟ್ಟಿದ್ದಳು. ಆ ತುರುಬು ಕಪ್ಪು ಬಣ್ಣದ ಚಂದ್ರ ಅವಳ ತಲೆಯಿಂದೆಯೇ ಕೂತಿದ್ದಾನೆ ಎನ್ನುವಂತೆ ಕಾಣುತ್ತಿತ್ತು. ವತ್ಸಲ ತನ್ನ ಶೃಂಗಾರದ ಕೆಲಸವನ್ನು ಅಲ್ಲಿಗೆ ನಿಲ್ಲಿಸಿ ಶೃಂಗಾರಗೃಹದಿಂದ ಹೊರಗೆ ಬಂದಳು. ಕೆಂಪುಬಣ್ಣದ ಗೋಡೆಗಳಿಂದ ಆವೃತವಾದ ಆ ಕೋಣೆಯನ್ನು ವೀಕ್ಷಿಸಿದಳು. ಎಡಬದಿಯ ಗೋಡೆಯ ಕಿಟಕಿಗಳ ಹೊರಗೆ ಹಚ್ಚ ಹಸಿರಾದ ಬೆಟ್ಟ ಗುಡ್ಡಗಳು ಕಾಣುತ್ತಿದ್ದರೂ ಅದರ ಕಡೆ ಗಮನ ಹರಿಸದೆ ಗೋಡೆಯ ತುಂಬೆಲ್ಲ ಕೂತಿದ್ದ ಭಾವಚಿತ್ರಗಳನ್ನು ನೋಡುತ್ತಾ ಹೋದಳು. ಎಲ್ಲರೂ ಬಣ್ಣ ಬಣ್ಣದ ಸೀರೆ ಸ್ವರ್ಣಾಭರಣಗಳನ್ನುಟ್ಟು ದೇವತೆಗಳ ರೀತಿ ಪೀಠಗಳ ಮೇಲೆ ಆಸೀನರಾಗಿದ್ದರು. ಒಬ್ಬರಿಗಿಂತ ಒಬ್ಬರು ಚೆಂದವಾಗಿದ್ದರು. ಅವರ ಮುಖ, ಉಡುಪು, ಆಭರಣಗಳು ವಿಭಿನ್ನವಾಗಿದ್ದರೂ ಅವರ ತಲೆಯ ಮೇಲಿದ್ದ ಕಿರೀಟಗಳು ಮಾತ್ರ ಒಂದೇ ತರಹ ಕಾಣುತ್ತಿದ್ದವು. ಏಕೆಂದರೆ ಅವರೆಲ್ಲ ಧರಿಸಿದ್ದು ಒಂದೇ ಕಿರೀಟವನ್ನ. ಅದೇ ಮಲಯಸಾಗರದ ಮಹಾರಾಣಿಯರು ಧರಿಸುತ್ತಿದ್ದ ಕಿರೀಟ, ಸುಮಾರು ಸಾವಿರ ವರ್ಷಕ್ಕಿಂತ ಹಳೆಯದಾದ ಕೀರಿಟವದು. ಅವರೇಲ್ಲರೂ ಸಹ ಸಾವಿರ ವರ್ಷದಿಂದ ಮಲಯಸಾಗರವನ್ನಾಳಿದ ಮಹಾರಾಜರ ಪಟ್ಟದ ರಾಣಿಯರು. ಚಿತ್ರದಲ್ಲೂ ಸಹ ಆ ಕಿರೀಟದ ಮೇಲಿದ್ದ ಮುತ್ತುಗಳ ವಿನ್ಯಾಸ ಎದ್ದು ಕಾಣುತ್ತಿತ್ತು. ವತ್ಸಲ ಎಲ್ಲ ಭಾವಚಿತ್ರಗಳನ್ನು ಜೋರಾಗಿ ನೋಡುತ್ತಾ, ಅವಳು ನೋಡಬೇಕಿದ್ದ ಕೊನೆಯ ಚಿತ್ರದ ಬಳಿ ಹೋದಳು. ಆ ಚಿತ್ರದ ಎದುರು ಬಂದು ನಿಂತಳು. ತನ್ನ ಕಣ್ಣುಗಳ ತುಂಬಾ ಆ ಚಿತ್ರವನ್ನು ತುಂಬಿ ಕೊಂಡಳು. ಚಿತ್ರವು ಕೂಡ ಇವಳನ್ನೇ ನೋಡುತ್ತಿತ್ತು. ಆ ವರ್ಣಚಿತ್ರದಲ್ಲಿದ್ದಾಕೆ ನೋಡಲು ವತ್ಸಲಳನಂತೆ ಇದ್ದಳು. ದುಂಡಾದ ಮುಖ, ಕಮಲದ ದಳದಂತ ಕಣ್ಣುಗಳು, ಬಿಲ್ಲಿನಂತ ಹುಬ್ಬುಗಳು ಅವುಗಳ ನಡುವೆ ಕೆಂಪುಬಿಂದು, ಎಂತವರ ದೃಷ್ಟಿಯನ್ನು ಸಹ ತನ್ನೆರಡು ತುಟಿಗಳ ಮಧ್ಯದ ನಗುವಿನೊಳಗೆ ಹಿಡಿದಿಡುವಂತ ಆ ನೋಟ. ಕಣ್ಣು ಮಿಟುಕಿಸದೆ ನೋಡುತ್ತಿದ್ದ ವತ್ಸಲ ತನ್ನ ಕಣ್ಣುಗಳ ತುಂಬಾ ಕಣ್ಣೀರು ತುಂಬಿದಾಗ ಎದುರಿಗೆ ಇದ್ದ ಚಿತ್ರ ಮಬ್ಬಾಗಿ ಕಾಣುತ್ತಿತ್ತು. ಕಣ್ಣೀರು ಹೊರಗೆ ಬಂದು ಕೆನ್ನೆ ಮುಟ್ಟಿದಾಗ ಕಣ್ಣೀರು ವರೆಸಿಕೊಂಡಳು.
ವತ್ಸಲಳ ಮನಸ್ಸಿನಾಳದಲ್ಲಿ "ಮಾತೆ" ಎಂದ ಮಾತು ತನ್ನ ತುಟಿಗಳಿಂದ ಹೊರಬಂತು. ಆ ಧ್ವನಿ ಎದುರಿಗೆ ಕಾಣುತ್ತಿದ್ದ ಆ ಚಿತ್ರಕ್ಕೇ ಜೀವ ಬರಿಸುವಂತಿತ್ತು.
"ನಿನ್ನ ಜೀವತ್ಯಾಗದಿಂದಾಗಿಯೇ ಈ ಜನ್ಮವೋ ಅಥವಾ ಈ ಜನ್ಮದಿಂದಾಗಿಯೇ ನಿನ್ನ ಸಾವೋ ಒಂದೂ ಅರೆಯೇ ನಾ," ವತ್ಸಲ ಈ ಮಾತನ್ನು, ಚಿತ್ರದಲ್ಲಿದ್ದ ತನ್ನ ತಾಯಿಗೆ ಹೇಳುವಾಗ ಕಣ್ಣೀರು ಮತ್ತೆ ಅವಳ ತುಟಿ ಮೇಲೆ ಬಂದು ಹೇಳುತ್ತಿದ್ದ ಧ್ವನಿ ಸೇರಿದವು.
ಚಿತ್ರದಲ್ಲಿದ್ದವಳು ಅವಳ ತಾಯಿ "ಬ್ರಮಲ" ವತ್ಸಲಳಿಗೆ ಜನ್ಮ ನೀಡಿದ ಮರುಕ್ಷಣವೇ ತನ್ನ ಮಗಳ ಮೊಖವೂ ಕೂಡ ನೋಡಲಾಗದೆ ಪ್ರಾಣ ತ್ಯಜಿಸಿದ್ದಳು. ವತ್ಸಲಳಿಗೆ ಎದುರುಗೆ ಇದ್ದ ಆ ಚಿತ್ರ ಬಿಟ್ಟರೆ ಕೆಲವೊಮ್ಮೆ ತನ್ನ ತಂದೆ ಹೇಳಿದ ಒಂದೆರಡು ಕಥೆಗಳು, ಇವುಗಳನ್ನೊರೆತು ಇನ್ನಾವ ತನ್ನ ತಾಯಿಯ ನೆನಪುಗಳು ಆಕೆಗಿದ್ದಿಲ್ಲ.
ಮತ್ತೆ ಕಣ್ಣೀರು ವರೆಸಿಕೊಳ್ಳುತ್ತ ಮಾತು ಮುಂದುವರೆಸಿದಳು " ಯಾಕೋ ಏನೋ ಇವತ್ತು ನಿನ್ನನು ನೆನಪಿಸಿಕೊಂಡು ಕಣ್ಣೀರು ಬರುತ್ತಿವೆ, ನಿನ್ನ ಮಗಳು ಹೇಗಿದ್ದಾಳೆ, ಏನು ಮಾಡುತ್ತಿದ್ದಾಳೆ ಇವೆಲ್ಲವನ್ನು ನೀನು ಯಾವುದೋ ಕಾಣದ ಜಗತ್ತಿನಿಂದ ನೋಡುತ್ತಿರುವೆಯಂತೆ ಎಂದು ತಂದೆಯವರು ಹೇಳಿದ್ದಾರೆ, ನಾನು ಕೂಡ ಹಾಗೆ ಅಂದುಕೊಂಡಿದ್ದೇನೆ, ನನಗೆ ಆಶೀರ್ವದಿಸಮ್ಮ" ಎನ್ನುತ್ತಾ ತನ್ನ ತಾಯಿಯ ಚಿತ್ರವನ್ನು ಎರಡು ಕೈನಲ್ಲಿ ಮುಟ್ಟಿ ನಮಸ್ಕರಿಸಿದಳು.
ತನ್ನ ಗೆಳತಿಯರು ತನಗಾಗಿ ಕಾಯುತ್ತಿರುವುದನ್ನು ನೆನಪಿಸಿಕೊಂಡು "ಅಯ್ಯಯ್ಯೋ ಈಗಾಗಲೇ ತುಂಬಾ ತಡವಾಗಿದೆ." ಎಂದು ತನಗೆ ತಾನು ಹೇಳಿಕೊಳ್ಳುತ್ತ ಅವಸರದಿ ನಡೆದಳು ಮೊದಲು ಹೋಗಿದ್ದ ದಾರಿಯಲ್ಲೆ ಬಂದು ಮೊದಲಿದ್ದ ಕೋಣೆಯ ಬಾಗಿಲ ಬಳಿ ನಿಂತಳು. ಅವಳ ಗೆಳತಿಯರ ಹರಟೆ ಇನ್ನು ಮುಂದುವರದೇ ಇತ್ತು. ಕೋಣೆಯ ಒಳಗೆ ಹೆಜ್ಜೆ ಇಟ್ಟಳು ಇವಳು ಬಂದದ್ದನ್ನು ಗಮನಿಸಿಸಿ ಎಲ್ಲರು ಮಾತು ನಿಲ್ಲಿಸಿ ಇವಳ ಕಡೆ ನೋಡಿದರು.
ಎಲ್ಲರಿಗು "ಬೇಗ ಬೇಗ ಈಗಾಗಲೇ ತುಂಬಾ ತಡವಾಗಿದೆ, ಇನ್ನು ತಡವಾದರೆ ಸೂರ್ಯ ನೆತ್ತಿಯ ಮೇಲೆ ಬರುತ್ತಾನೆ, ನಡೆಯಿರಿ ಹೋಗೋಣ." ಎನ್ನುತ್ತ ಅವರು ಕೂತಿದ್ದ ಮಂಚದ ಬಳಿ ನಡೆದಳು.
" ದಯವಿಟ್ಟು ಕ್ಷಮಿಸಿ ರಾಜಕುಮಾರಿ ನಮ್ಮಿಂದ ತುಂಬಾ ತಡವಾಯಿತು " ಎಂದು ಧರಣಿ ವ್ಯಂಗ್ಯವಾಡಿದಾಗ, ಎಲ್ಲರು ನಗಲಾರಂಭಿಸಿದರು.
" ಹಾ ಸಾಕು ಸಾಕು ನಿಮ್ಮ ಚೇಷ್ಟೆ ನಡೆಯಿರಿ ಹೋಗೋಣ " ಎಂದು ಬಾಗಿಲ ಬಳಿ ಹೋದಳು. ಅವರೂ ಎದ್ದು ಇವಳ ಜೊತೆ ಹೊರಟರು. ಬಾಗಿಲು ತೆರೆದು ಕೋಣೆಯಿಂದ ಹೊರಗೆ ಬಂದರು. ಗರಿಷ್ಠ ವತ್ಸಲಳನಂತ ಮೂವರು ಅಗಲವಾಗಿ ಹೋಗಬಹುದಿತ್ತು ಆ ಎರಡು ಕಪ್ಪಾದ ಗೋಡೆಗಳ ನಡುವೆ. ವತ್ಸಲಳ ಪಕ್ಕದಲ್ಲಿ ವಾಮಿನಿ ನಡೆಯುತ್ತಿದ್ದಳು. ಉಳಿದ ಮೂವರು ಇವರಿಂದೆ ಹೆಜ್ಜೆ ಹಾಕುತ್ತಿದ್ದರು. ಅವರ ಅರ್ಥವಾಗದ ಗುನು ಗುನು ಮಾತುಗಳು ವತ್ಸಲ ಮತ್ತು ವಾಮಿನಿಗೆ ಕೇಳಿಸುತ್ತಿದ್ದವು.